ಅಂಕಣ

“ಅಭಿವೃದ್ಧಿ” ಮಾನವನ ಸ್ವಾರ್ಥದ ಬತ್ತಳಿಕೆಯ ಬಿಲ್ಲು!

ಪ್ರಕೃತಿಯಲ್ಲಿ ಪ್ರತಿ ಜೀವಿಯೂ ಸಮನಾಗಿ ಬಾಳಲು ಹಕ್ಕಿದೆ; ಕೇವಲ ಮಾನವನಿಗೇಕೆ ಉನ್ನತ ಸ್ಥಾನ?ಮಾನವ “ಬುದ್ಧಿಜೀವಿ” ಅಂತಲೇ ? ಪ್ರಾಣಿ ಪಕ್ಷಿ,ವನ್ಯ ಜೀವಿ ಸಂಕುಲಗಳು ಮಾನವನ ಸ್ವಾರ್ಥಕ್ಕೆ ಬಲಿಯಾದರೆ ದೊಡ್ಡ ನಷ್ಟವೇನು, ಅಲ್ಲವೇ? ಈ ಬುದ್ಧಿಜೀವಿ ಮಾನವನ ನಾಗರಿಕತೆಯ,ಅಭಿವೃದ್ಧಿಯ ವೇಗಕ್ಕೆ ಬಲಿಯಾಗುತ್ತಿರುವ,ಬಲಿಯಾದ, ಇನ್ನು ಹೆಚ್ಚು ಹೆಚ್ಚು ಬಲಿಯಾಗುವ”ಪರಿಸರ ಜೀವಿಗಳನ್ನು” ಕಂಡರೆ ಅಯ್ಯೋ ಎನಿಸುತ್ತದೆ.

ಹೆಚ್ಚುತ್ತಿರುವ ಜನಸಂಖ್ಯೆಯಿಂದ, ಬದಲಾಗುತ್ತಿರುವ ಜೀವನ ಶೈಲಿಯಿಂದ ಮಾನವನ ಜೀವನದ ಎಗ್ಗಿಲ್ಲದ, ಲಂಗು ಲಗಾಮಿಲ್ಲದ “ಸ್ವಾರ್ಥತೆಯೇ ಅಭಿವೃದ್ಧಿ” ಎಂಬ ದೃಷ್ಟಿಕೋನದ ಪರಿಣಾಮ ಅದೆಷ್ಟೋ ಮರಗಿಡಗಳು, ಅಪಾರ ವನ್ಯ ಸಂಪತ್ತು,ನೀರಿನ ಮೂಲಗಳು, ಅಂತರ್ಜಲ ಎಲ್ಲವೂ ನಶಿಸುತ್ತಿವೆ.

ಎಲ್ಲರನ್ನೂ, ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಮಗ್ರ ಅಭಿವೃದ್ಧಿ ಅಗತ್ಯವೇ ಹೊರತು, ತಾನು ಮಾತ್ರ ಬದುಕ ಬೇಕು, ಐಷಾರಾಮಿ ಜೀವನ ನೆಡಸಬೇಕು ಎಂಬುವುದು ಸ್ವಾರ್ಥವಲ್ಲದೆ ಮತ್ತೇನು?. ವಾಸಿಸಲು ಗಗನ ಚುಂಬಿ ಕಟ್ಟಡಗಳು ಬೇಕು, ದೇಹದ ನರನಾಡಿಯಲ್ಲಿ ರಕ್ತ ಸರಾಗವಾಗಿ ಚಲಿಸುವಂತೆ – ನಗರಗಳ ವಾಹನ ಸಂಚಾರಕ್ಕೆ ವಿಶಾಲ ಚತುಷ್ಪಥ, ಷಟ್ಪಥ, ರಸ್ತೆಗಳಿರಬೇಕು. ಈ ರೀತಿಯ ಆಧುನಿಕತೆಯ ಸೊಗಡಿನಲ್ಲಿ ಪರಿಸರ ಶತ್ರು ಭಾವನೆಗಳಿಗೆ ನೀರೆರೆದು ಪೋಷಿಸುವ ಅಭಿವೃದ್ಧಿ …ನಿಜವಾದ ಅಭಿವೃದ್ಧಿಯೆ?

ಬೆಂಗಳೂರು, ಮೈಸೂರಿನಂತ ನಗರಗಳ ಕಥೆ, ದಿನ ನಿತ್ಯದ ವ್ಯಥೆ ಎಂದರೆ ತಪ್ಪೇನು ಇಲ್ಲ. ನೀರಿನ ಮೂಲಗಳಾಗಿದ್ದ ಎಷ್ಟೋ ಕೆರೆಗಳು ಮಾಯವಾಗಿವೆ,ಕೆರೆಗಳೇ ಇಲ್ಲವೆಂದ ಮೇಲೆ ಸುತ್ತ ಮುತ್ತಲಿನ ಎಷ್ಟೋ ಕಿರು ಅರಣ್ಯಗಳು ಉಳಿವುದುಂಟೆ?, ರಸ್ತೆ ಬದಿಯ ಎಷ್ಟೋ ಸಣ್ಣ ಪುಟ್ಟ ಗಿಡಗಳು ವಾಹನ ನಿಲುಗಡೆಯ ಸ್ಥಳಗಳಾಗಿ ಮಾರ್ಪಟ್ಟಿವೆ, ಹತ್ತು ಹಲವು ವರ್ಷಗಳಿಂದ ಬೇರೂರಿ ನೆಲೆ ನಿಂತ ಮರಗಳನ್ನು ಉಳಿಸಿಕೊಳ್ಳಲು ಚಿಪ್ಕೋ ಮಾದರಿ ಕಾರ್ಯಕ್ರಮ ಹಮ್ಮಿಕೊಂಡು, ಜಾಗೃತ ಶಿಬಿರಗಳನ್ನು ಹಮ್ಮಿಕೊಳ್ಳಬೇಕೇ? ಎಂತಹಾ ದುಸ್ಥಿತಿ!. ಛೇ ನಮಗೆ ನಾವು ಧಿಕ್ಕಾರ ಹಾಕಿಕೊಳ್ಳಬೇಕು ಅಂತ ಅನ್ಸತ್ತೆ. ವರ್ಷದಲ್ಲಿ ವಿಶ್ವ ಪರಿಸರದ ಒಂದು ದಿನ ಒಂದು ಗಿಡ ನೆಟ್ಟು, ಸಾಮಾಜಿಕ ತಾಣಗಳಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸ್ಕೊಂಡು ಸೆಲ್ಫಿಗಳ ಹಾಕಿ, ಮತ್ತೆ ಆ ನೆಟ್ಟ ಗಿಡವನ್ನು ತಿರುಗಿ ನೋಡುವವರು ಎಷ್ಟು ಮಂದಿ?ಉದ್ದುದ್ದ ಸಾಲುಗಳನ್ನು ಬರೆಯುತ್ತಿರುವ ನನಗೂ ಎಷ್ಟೋ ಬಾರಿ ಪಾಪ ಪ್ರಜ್ಞೆ ಕಾಡಿದ್ದುಂಟು, ತಿಳಿದೋ ತಿಳಿಯದೆಯೋ ಈ ವಿನಾಶದ ಯಜ್ಞದಲ್ಲಿ ಭಾಗಿಯಾಗಿಬಿಟ್ಟೆನೆ? ಎಂದು.

ನಗರಗಳಿಗೇ ಮೀಸಲಾಗಿದ್ದ ಈ ಅಭಿವೃದ್ಧಿ ಮಂತ್ರ250-300 ಕಿ.ಮೀ ಪಕ್ಕದ ಊರುಗಳನ್ನು ಅತಿ ಕಡಿಮೆ ಸಮಯದಲ್ಲಿ, ವೇಗದಲ್ಲಿ ಮುಟ್ಟುವ ಸಲುವಾಗಿ ರಸ್ತೆ ಅಗಲೀಕರಣ, ಬಹುಪಥ ರಸ್ತೆ,ಕಂಡಲ್ಲಿ ಟೋಲ್ ಮಾರ್ಗ ಅದಕ್ಕೆ ಅಂಟಿಕೊಂಡಂತೆಯೇ ವ್ಯವಸಾಯ ಯೋಗ್ಯವಲ್ಲದ ಭೂಮಿಯ ಜೊತೆಗೆ,  ಯೋಗ್ಯ ಭೂಮಿಯೂ ಡಾಂಬರ್ ನೆಲವಾಗಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ನಮ್ಮ ಶಿರಡಿ ಘಾಟ್ ಸುರಂಗ ಮಾರ್ಗ ,ಒಂದೊಂದು ಸುದ್ಧಿ ವಾಹಿನಿಯಲ್ಲಿ ಒಂದು ಸುದ್ದಿ! (ಸತ್ಯ- ದೇವನೇ ಬಲ್ಲ) 11 ಕಿ. ಮೀ, ಮಾರ್ಗ ಎಂದು ಒಂದರಲ್ಲಿ ಉಲ್ಲೇಖಿಸಿದರೆ ಮತ್ತೊಂದರಲ್ಲಿ 23ಕಿ.ಮೀ ಮಾರ್ಗ, ಹೀಗೆ ಹಲವು ಸಂಖ್ಯೆಗಳು.

ಚೆನ್ನೈ- ಬೆಂಗಳೂರು- ಮಂಗಳೂರು ಇಂಧನ ಪೈಪ್ಲೈನ್ ಕಾರ್ಯಕ್ಕೆ ಇದಾಗಲೇ ಪ್ರಕೃತಿ ಸಂಪತ್ತು ಸಾಕಷ್ಟು ಅವನತಿಯನ್ನು ಕಂಡಿದೆ, ಇನ್ನು ಶಿರಾಡಿ ರಸ್ತೆಯ ಪುನುರುಜ್ಜೀವನ ಕಾರ್ಯದಲ್ಲಿ (ಪ್ರತಿ ವರ್ಷದ ನಿಲ್ಲದ ಕಾರ್ಯ) ಸಾಕಷ್ಟು ತೊಂದರೆ ವನ್ಯ ಸಂಪತ್ತಿಗೆ ಉಂಟಾಗಿದೆ, ಈಗ ಇದೆಲ್ಲದರ ನಡುವೆ ಈ ಅಭಿವೃದ್ಧಿ ಕಾರ್ಯದಲ್ಲಿ “ಒಂದು ಮರಕ್ಕೂ ಧಕ್ಕೆಯಾಗದ ರೀತಿ ಕಾರ್ಯ” ಎಂಬ ಘೋಷಣೆ.

ಅಭಿವೃದ್ಧಿ ಎಂಬ ಈ ಮಾಯೆಯ ಬೆನ್ನು ಹತ್ತಿ,ಪರಿಸರದ ಅವನತಿಯ ಜೊತೆಗೆ ತನ್ನ ಅವನತಿಯನ್ನು ತಾನಾಗಿ ಆಹ್ವಾನಿಸುತ್ತಿರುವ”ಮಾನವ ಸ್ವಾರ್ಥ” ಕೊನೆ ಕಾಣುವುದು ಎಂದು?ಎಂಬುದು ಮಾತ್ರ ಚಿದಂಬರ ರಹಸ್ಯವಾಗಿದೆ!

-ಪ್ರವೀಣ್ ಎಸ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!