ಅಂಕಣ

ಪಗೋಡ/ ರಥ ಹೂವು

    ಮಳೆಗಾಲದಲ್ಲಿ ಜೋರಾಗಿ ಸುರಿದ ಮಳೆಗೆ ತಂಪಾದ ಇಳೆಯಲ್ಲಿ ನಾನಾ ತರಹದ ಹಸಿರು ಕಳೆರೂಪದ ಸಸ್ಯಗಳು ಹುಟ್ಟಿಕೊಂಡು ಬಲ್ಲೆಯಾಗಿ ಹಬ್ಬುತ್ತವೆ. ಹೆಚ್ಚಾಗಿ ಕರಾವಳಿಯ  ಹಾಗೂ ಮಲೆನಾಡ ಅಡಿಕೆ ತೋಟಗಳಲ್ಲಿ ಉಪದ್ರಕ್ಕೆ  ಬೆಳೆಯುವ ಸಸ್ಯಗಳಲ್ಲಿ  ರಥ ಹೂವಿನ ಗಿಡ ಕೂಡ ಒಂದು.ತೋಟಕ್ಕಿಳಿಯಲೂ ಹೆದರುವ೦ತೆ ನಾಲ್ಕರಿ೦ದ ಆರಡಿಯವರೆಗೆ ಬೆಳೆದು ಇಡೀ ತೋಟ ಹಬ್ಬುವ ಇದನ್ನು ಹಳಿಯದವರಿಲ್ಲ..!!

 ಮಲೆನಾಡಿನ ಜನರು ಇದಕ್ಕೆ ತೇರು ಹೂವೆ೦ದು ಕರೆಯುತ್ತಾರೆಈ ಕಾಡು ಸಸ್ಯದ ಹೂವಿನ ಪಿರಮಿಡ್ ರಚನಾ ವಿನ್ಯಾಸ ದೇವಸ್ಥಾನಗಳಲ್ಲಿ ಎಳೆಯುವ  ತೇರು ಯಾ ರಥವನ್ನು ಹೋಲುವುದರಿಂದ ಅದಕ್ಕೆ ಆ ಹೆಸರು ಬ೦ದಿರಬೇಕುರಾಜರ ಕಿರೀಟವನ್ನು ಹೋಲುವುದರಿಂದ ವಿದ್ವಾಂಸರು ಇದನ್ನು ಕೃಷ್ಣ ಕಿರೀಟ/ ಹನುಮಾನ್ ಕಿರೀಟವೆಂದು ಗುರುತಿಸುತ್ತಾರೆ.ಮಲೆಯಾಳಿಗರ ಬಾಯಿಯಲ್ಲಿ ಕೃಷ್ಣಕಿರೀಡ೦ (Krishna Kireedam) ಎನಿಸಿಕೊಳ್ಳುವವುದು. ಆಂಗ್ಲದಲ್ಲಿ ಪಗೋಡ ಫ್ಲವರ್ (Pagoda flower)  ಆಗಿ ಗುರುತಿಸಲ್ಪಡುವ ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ಲೆರೋಡೆಂಡ್ರಮ್ ಪೆನಿಕ್ಯುಲೇಟಮ್ (Clerodendrum paniculatum) ಎ೦ದು, ವರ್ಬಿನೆಸಿಯೆ(verbenacae ) ಕುಟು೦ಬಕ್ಕೆ ಸೇರಿದ್ದಾಗಿದೆಕ್ಲೆರೋಡೆಂಡ್ರಮ್ ಎಂದರೆ ಗ್ರೀಕ್  ಭಾಷೆಯಲ್ಲಿ ಲಾಟರಿ ಮರ, ಇದರಲ್ಲಿರುವ ನಂಬಲಸಾಧ್ಯವಾದ ಔಷಧೀಯ ಗುಣಗಳಿಗೆ ಈ ಹೆಸರು ಬ೦ದಿರಬಹುದು. 1767ರಲ್ಲಿ ಸ್ವೀಡಿಶ್  ಸಸ್ಯ ವಿಜ್ಞಾನಿ ಕಾರ್ಲ್ ಲೀನಿಯಸ್ (Carl Linnaeus)  ಮೊದಲು ಕ೦ಡು ಹಿಡಿದುಕ್ಲೆರೋಡೆಂಡ್ರಮ್ ಪೆನಿಕ್ಯುಲೇಟಮ್ ಎ೦ದು ಹೆಸರಿಸಿದನ೦ತೆ.ಕೆಲವು ಪ್ರದೇಶಗಳಲ್ಲಿ ಆರತಿ ಚ೦ಡು ಹೂವೆ೦ದೂ ಗುರುತಿಸುತ್ತಾರೆ. ಮು೦ಗಾರು ಮಳೆಯಿ೦ದ ನೆಲ ಹಸಿಯಾದಾಗ ನೆಲದಡಿಯ ಬೇರುಗಳಿ೦ದ ತನ್ನಿ೦ದ ತಾನೆ ಹುಟ್ಟಿಕೊಳ್ಳುವ ಪಗೋಡ ಸಸ್ಯಗಳು ಹುಲುಸಾಗಿ ಬೆಳೆದು ಕೆ೦ಪು ಬಣ್ಣದ ಹೂಗಳಿ೦ದ ರಸ್ತೆಯ ಇಕ್ಕೆಲಗಳಲ್ಲಿ ಶೋಭಿಸುವುದನ್ನು ಕಾಣಬಹುದು. ಸಂತಾನಾಭಿವೃದ್ಧಿಗಾಗಿ  ಗೆಲ್ಲು  ಯಾ ಬೇರುಗಳನ್ನು ಅವಲಂಬಿಸಿದ್ದು  ಬೀಜೋತ್ಪತ್ತಿ  ವಿರಳ.

 ರಚನೆ:

ಒದ್ದೆ ಮಣ್ಣಿನಲ್ಲಿ ತುಸು ಬಿಸಿಲನ್ನಾಧರಿಸಿ ಮೇಲೇಳುವ ಪಗೋಡ ಸಸ್ಯ  ನೇರವಾಗಿ ಉದ್ದಕ್ಕೆ 3ರಿಂದ 6 ಅಡಿ ಬೆಳೆಯುತ್ತದೆ.ನೆಲದಡಿ ಬೇರುಗಳು ಹರಡಿ ಪ್ರತಿ ಗಿಣ್ಣಿನಿ೦ದಲೂ ಸಸಿ ಮೊಳಕೆಯೊಡೆದು, ಪೊದೆ (shrub)ಯಾಗಿ ಹಬ್ಬುವ ಸಸ್ಯವಿದಾಗಿದ್ದು,   ಬೆಳೆದ೦ತೆ  ಸುತ್ತಲೂ ಗೆಲ್ಲುಗಳನ್ನು  2ರಿಂದ 3ಅಡಿಯವರೆಗೆ ಹಬ್ಬಿಸುವ ಸಾಮಾರ್ಥ್ಯ  ಪಡೆದಿವೆ. ಪೂರ್ತಿ ಬೆಳೆದ ಗಿಡದ ಎಲೆಗಳು ಹೃದಯಾಕಾರದಲ್ಲಿ, ಸುಮಾರು ಹತ್ತು ಇ೦ಚು ಉದ್ದಅಗಲಗಳನ್ನು ಹೊ೦ದಿ ಹಸಿರಾಗಿರುತ್ತವೆ. ಗಿಡದ ತುದಿಯಲ್ಲಿ ಬರುವ ಹೂಗುಚ್ಛ ವೃತ್ತಾಕಾರದ ಮೆಟ್ಟ್ಟಿಲುಗಳ೦ತೆ ಹ೦ತ ಹ೦ತವಾಗಿ ಮಧ್ಯದ ಕಾ೦ಡಕ್ಕೆ ಸುತ್ತುವರಿದಿದೆ. ಪ್ರತಿ ಗೆಲ್ಲಿನ ತುದಿಯಲ್ಲೂ ಸಾಲಾಗಿ ಸಣ್ಣ ಸಣ್ಣ ಹೂಗಳ ಕೆ೦ಪು ಮೊಗ್ಗುಗಳಿರುತ್ತವೆ. ಬಿರಿದಾಗ  ಕಿತ್ತಳೆ ಕೆಂಪು ಬಣ್ಣದ ಸಣ್ಣ ಸಣ್ಣ ಕೊಳವೆಯಾಕಾರದ ಅರ್ಧ ಇ೦ಚಿನಷ್ಟೇ ಉದ್ದದ ಹೂಗಳು,ಸುಮಾರು  ಒಂದು ಅಡಿ ಉದ್ದದ  ನೇರ ಕೋಲಿನಾಕಾರದ ಗೆಲ್ಲುಗಳಲ್ಲಿ  ರಥದ ಮಾದರಿಯಲ್ಲಿ  ಕೆಳಗೆ  ಅಗಲವಾಗಿ ಎತ್ತರಕ್ಕೆ ಹೋದಂತೆ  ಸಣ್ಣದಾಗಿ ವಿನ್ಯಾಸಗೊಂಡಿದ್ದು  ಸಸ್ಯಕ್ಕೆ ಕಿರೀಟವಿಟ್ಟಂತೆ ಶೋಭಾಯಮಾನವಾಗಿ  ಕಂಗೊಳಿಸುತ್ತವೆ.ಪ್ರತಿ ಹೂವಲ್ಲೂ 5 ದಳಗಳಿದ್ದು  4-6 ಕೇಸರಯುಕ್ತ ಶಲಾಕೆಗಳು ಉದ್ದಕ್ಕೆ ಚಾಚಿಕೊಂಡಿವೆ. ಹೂಗಳಲ್ಲಿ  ಮಕರಂದ ಯಥೇಚ್ಛವಾಗಿದ್ದು  ದುಂಬಿ  ಮತ್ತು ಚಿಟ್ಟೆಗಳ   ಹಾರಾಟ  ಇವುಗಳ ಸಮೀಪ ಬಹಳವಾಗಿ  ಕಂಡುಬರುತ್ತದೆ. ಆದ್ದರಿಂದ ಚಿಟ್ಟೆ ಉದ್ಯಾನವನ ನಿರ್ಮಿಸುವಲ್ಲಿ ಈ ಸಸ್ಯವನ್ನು ಹೆಚ್ಚು ಹೆಚ್ಚು ನೆಡುತ್ತಾರೆ.

ಔಷಧೀಯ ಗುಣ  ಮತ್ತು ಉಪಯೋಗ:

 ಪಗೋಡ ಸಸ್ಯದ ಹೂವು, ಎಲೆ ಹಾಗೂ ಬೇರುಗಳು ಮುಖ್ಯವಾಗಿ ಔಷಧೀಯ ಗುಣ ಹೊ೦ದಿದೆ. ಬೇರುಗಳನ್ನು ಒಣಗಿಸಿ ಹುಡಿ ಮಾಡಿ ಕೂಡಾ ಹಲವಾರು ಆಯುರ್ವೇದೀಯ ಸಿದ್ಧೌಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಸಸ್ಯದ ಭಾಗಗಳು ದೇಹದ ಜೀವಕೋಶಗಳನ್ನು ಉತ್ತೇಜಿಸುವ ಉತ್ಕರ್ಷಣ ನಿರೋಧಕ ಯಾ ಆ೦ಟಿ ಓಕ್ಸಿಡೆ೦ಟ್(Anti-oxidant) ಗುಣ ಹೊ೦ದಿವೆ

ಎಲೆ:

•  ಹೊಟ್ಟೆಗೆ ಸೇವಿಸಲು ಇದನ್ನು ಬಳಸುವುದಿಲ್ಲ (For external use only).

•   ಎಲೆಗಳನ್ನು ಕಿವುಚಿದ ರಸವನ್ನು ಕೀವು ತು೦ಬಿದ ಹುಣ್ಣಿಗೆ ಔಷಧಿಯಾಗಿ ಬಳಸುತ್ತಾರೆ.

•   ಎಲೆಗಳನ್ನು ಅರೆದು ರಕ್ತ ಸುರಿಯುವ ಗಾಯಗಳಿಗೂ ಶಮನಕಾರಕವಾಗಿ ಬಳಸುತ್ತಾರೆ.

•  ಕಣ್ಣಿನ ಊತಕ್ಕೆ ಎಲೆಗಳ ಕಷಾಯ ಪರಿಣಾಮಕಾರಿ.

ಹೂವು:

•  ಕಬ್ಬಿಣ ಸತ್ವವಿರುವ ಹೂಗಳನ್ನು ವೈದ್ಯರ ಸಲಹೆ ಮೆರೆಗೆ ರಕ್ತ ಹೀನತೆಯಿ೦ದ ಬಳಲುವವರು ಜ್ಯೂಸ್ ಮಾಡಿ ಸೇವಿಸುತ್ತಾರೆ.

•  ಹೂವಿನ ರಸ ನಿದ್ರಾಹೀನತೆಗೂ ರಾಮ ಬಾಣ.

ಬೇರು:

•  ಇದರ ಬೇರುಗಳನ್ನು ನಿರ್ದಿಷ್ಟ ಹಾವಿನ ವಿಷದ ಪ್ರತ್ಯೌಷಧ ತಯಾರಿಯಲ್ಲಿ ನಾಟಿ ವೈದ್ಯರು ಬಳಸುತ್ತಾರಂತೆ.

•  ಹಲವಾರು ಚರ್ಮ ಸಂಬಂಧೀ ಕಾಯಿಲೆಗಳಿಗೆ ಬೇರಿನ ಕಷಾಯ ರಾಮ ಬಾಣ.

•  ಬೆನ್ನು ನೋವಿಗೆ, ತಾಗಿದ ಊತ, ಗ೦ಟು ನೋವಿಗೆ ಹಾಗೂ ನಿದ್ರಾ ಹೀನತೆಗೂ ಬೇರಿನ ಔಷಧಿಯಿ೦ದ ಮುಕ್ತಿ ಪಡೆಯಬಹುದು.

•  ರಕ್ತ ಕಫ, ವಾ೦ತಿ ಮತ್ತೆ ಭೇದಿಗೆ ಬೇರಿನ ಪುಡಿಯನ್ನು30-60 ಗ್ರಾ೦ ನಷ್ಟು ನೀರಿನಲ್ಲಿ ಕುದಿಸಿ ಸೋಸಿ ಕುಡಿದರೆ ಪರಿಣಾಮಕಾರಿ.

     ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದ್ದು ದಕ್ಷಿಣ ಏಷ್ಯಾದ ಹೆಚ್ಚಿನ ಕಡೆ ಕಾಣ ಸಿಗುತ್ತವೆ. ವಿದೇಶಗಳಲ್ಲಿ ಚಿಟ್ಟೆಗಳನ್ನು ಬಹಳವಾಗಿ ಆಕರ್ಷಿಸುವ ಪಗೋಡ ಹೂಗಳಿಗಾಗಿ ತ೦ದು ನೆಡುವವರಿದ್ದಾರ೦ತೆ.!! ಶ್ರೀಲಂಕಾ ಮತ್ತು ಮಲೇಶ್ಯಾಗಳಂತೂ  ಅಲಂಕಾರಿಕ ಸಸ್ಯವಾಗಿ ಮತ್ತು ಔಷಧೀಯ ಗುಣಗಳಿಗಾಗಿ ತೋಟಗಳಲ್ಲಿ ನೆಟ್ಟು ಬೆಳೆಸುತ್ತಾರೆ. ತಿಳಿ ಹಳದಿ ಬಣ್ಣದ ಹೂವಿರುವ ಜಾತಿಯನ್ನು ಕೆಲವು ಕಡೆ ಕಾಣಬಹುದು. ನಮ್ಮಲ್ಲಿ  ಸಾಧಾರಣವಾಗಿ ಕಳೆ ಸಸ್ಯವೆಂದು, ಬಲ್ಲೆಯ೦ತೆ ಬೆಳದು ಉಪದ್ರವಿ ಗಿಡವಾಗಿ ಪರಿಗಣಿಸಲ್ಪಡುವ  ಇದರಲ್ಲಿ ಇಷ್ಡು ಔಷಧೀಯ ಗುಣವಿದೆಯೆ೦ದರೆ ಅಚ್ಚರಿಯ ವಿಷಯವೇ ಅಲ್ಲವೇ? ನಮ್ಮೂರಿನಲ್ಲಿ  ಹೂವನ್ನು ದೀಪಾವಳಿಯ  ಸಮಯದಲ್ಲಿ ಬಲಿ ಚಕ್ರವರ್ತಿಯ ಅಲಂಕಾರ ಕಿರೀಟವಾಗಿ  ಬಳಸುತ್ತಾರಷ್ಟೆ, ಬೇರೇನೂ ಉಪಯೋಗಕ್ಕೆ ಬಳಸುವುದನ್ನು ನಾನು ನೋಡಿಲ್ಲ,ಕೇಳಿಲ್ಲ….ಕಳೆಯ೦ತೆ ಎಲ್ಲರ ಅನಾದರಣೆಯಲ್ಲಿ ತನ್ನಷ್ಡಕ್ಕೆ ಹುಟ್ಟಿ ಬರುವ ಈ ಸಸಿಯಲ್ಲಿ ಇಷ್ಟೊ೦ದು ಒಳ್ಳೆಯ ಗುಣವಿರುವುದು ವಿಸ್ಮಯವೇ ಸರಿ. ಉಪಯುಕ್ತ ಔಷಧ ಗುಣ ಹೇರಳವಾದ   ಇ೦ತಹ ಗಿಡಗಳು ಅಳಿದು ಹೋಗದ೦ತೆ  ನೋಡಿ ಅರಿತು ಉಳಿಸುವುದು ನಮ್ಮ ಪರಿಸರ ಕಾಳಜಿಯ ನಿಜರೂಪ ಏನ೦ತಿರಾ

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!