ಘೋರ ಶೋಕದಿ ನೀನು ಜೊತೆಯಾಗಿ ನಿಂದೆ!
ಕಂಗೆಡದೆ ಜೀವಿಸುವ ಧೃತಿಯ ನೀ ತಂದೆ!
ಬದುಕ ವೀಣೆಯ ಭಾವ ತಂತಿಗಳ ಮೀಟುತಲಿ
ಒಲವ ವಾಣಿಯನುಲಿದೆ ಮೌನ ಶ್ರುತಿಯಲ್ಲೇ..
ಕಂಗಳಲಿ ಇಂಗದಾ ಕಂಬನಿಯು ತುಂಬಿರಲು
ಬೆಂಗಡೆಯೆ ನೀ ನಿಂದೆ ಸಂಗಡಿಗನಂತೆ.
ಮೌನ ತಾ ಧುಮ್ಮಿಕ್ಕಿ ಮಡುವಿನಿಂ ಬರುತಿರಲು
ತಂಪಿನಿಂ ಮೈದಡವಿ ಸಾವರಿಸಿ ನಿಂದೆ.
ತಾಯಿ ಕಂದನ ತೆರದಿ ಸಂತೈಸಿದೆ…
ಎನ್ನ ಕರಗಳ ಪಿಡಿದು ಮುನ್ನಡೆಸಿದೆ…
ತೆರೆಗಳಾ ಮೊರೆತವದು ಕಾಮನೆಯ ಕಡಲಿನಲಿ
ತುಮುಲವೆಬ್ಬಿಸುತ ತನು-ಮನವ ಕದಡಿರಲು..
ಮನಸಿನಂಬರದಿ ಉದ್ವೇಗದಾ ಮುಗಿಲುಗಳು
ಮತಿಯ ಮರೆ ಮಾಚುತಲಿ ಮುಂದೆ ಸಾಗಿರಲು..
ಗುರಿ ಸ್ಪಷ್ಟಗೊಳಿಸುತಲಿ ರವಿಯ ತೆರದಲಿ ನೀನು
ಕನಸಿನಾ ಕುಟೀರದಲಿ ಬೆಳಕ ಹೊತ್ತಿಸಿದೆ…
ತಂಪಿನಾ ಕಡಲು, ಸಿಹಿಗಂಪಿನಾ ಹೊನಲು
ಸೌಂದರ್ಯ ಸಿರಿಯು ನೀ ನೆಮ್ಮದಿಯ ಒಡಲು..
ರೋದನಕೆ ಕಿವಿಯಾದ ಶಾಂತಿ ದೇವತೆಯು
ಸಸ್ಯ ದೇವತೆಯು ನೀ ನಿತ್ಯ ಶ್ಯಾಮಲೆಯು.
ಗೌಣವಾಗಿಹುದೆಲ್ಲ ಪ್ರಾಣ ನೀನಾಗಿರಲು
ಕ್ಷಣಕೊಮ್ಮೆ ಕೇಳುವುದು ಸವಿ ಸ್ಮೃತಿಯ ಹಾಡು.
ಸೂರ್ಯತಾಪದಿ ಉರಿದ ಉರ್ವಿಯಂತಾ ಮನಕೆ
ವರ್ಷದಂದದಿ ಒಲಿದು ದರುಶನವ ನೀಡು..
ನಿನ್ನ ನೆನೆಪಿನ ಪುಟವನೆಂದು ಮಾಸಲು ಬಿಡದೆ
ಜತನದಲಿ ಕಾಯ್ದಿಹುದು ಸ್ಮೃತಿಯ ಹೊತ್ತಗೆಯು..
ಮನದಿ ನೆನೆದಾಕ್ಷಣದಿ ಮುದದಿ ಅರಳದೆ ಇಹುದೆ
ಭಾವ-ವಲ್ಲರಿಯಲ್ಲ ನಗೆಯ ಮಲ್ಲಿಗೆಯು… !