ಮಂಜಿನ ನಗರಿ ಮಡಿಕೇರಿಯನ್ನು ಇಷ್ಟ ಪಡದವರಾರು ಹೇಳಿ? ಮಡಿಕೇರಿಯೆಂದರೆ ಅದು ಪ್ರವಾಸಿಗರ ಸ್ವರ್ಗ. ಮಡಿಕೇರಿ ಎಂದಾಕ್ಷಣ ಅಬ್ಬಿ ಜಲಪಾತ, ಮುಗಿಲು ಪೇಟೆ, ದುಬಾರೆ, ಭಾಗ ಮಂಡಲ, ತಲಕಾವೇರಿ ಮುಂತಾದ ಪ್ರೇಕ್ಷಣೀಯ ತಾಣಗಳು ಗೂಗಲಿಗಿಂತಲೂ ವೇಗವಾಗಿ ನಮ್ಮ ತಲೆಗೆ ಹೊಳೆಯುತ್ತವೆ. ಅಲ್ಲಿ ಜಲಪಾತ ಯಾವುದಿದೆ ಎಂಬ ಪ್ರಶ್ನೆಗೆ ಅಬ್ಬಿ ಜಲಪಾತ, ಇರ್ಪು ಫಾಲ್ಸ್, ಮಲ್ಲಳ್ಳಿ ಫಾಲ್ಸ್’ಗಳಷ್ಟೇ ಉತ್ತರವಾಗಿ ಬರುತ್ತದೆ. ಅಲ್ಲಿ ಚಾರಣ ಮಾಡಬಹುದಾದ ಸ್ಥಳಗಳಾವುದಿದೆ ಎಂದು ಯಾರಾದರೂ ಕೇಳಿದರೆ ತಡಿಯಾಂಡಮೋಲ್ ಎಂಬ ಒಂದೇ ಉತ್ತರ ಸಿಗುತ್ತದೆ. ಆದರೆ ಮಂಜಿನ ನಗರಿಯಲ್ಲಿ ಅವಷ್ಟೇ ಇರುವುದಲ್ಲ. ಇನ್ನೂ ಹತ್ತು ಹಲವಾರು ಅಪರೂಪದ ಪ್ರವಾಸೀ ತಾಣಗಳಿವೆ ಎಂಬ ಸಂಗತಿ ಹಲವರಿಗೆ ಗೊತ್ತಿಲ್ಲ. ಉಳಿದ ತಾಣಗಳಂತೆ ಇವುಗಳು ತೀವ್ರ ಜನ ಜಂಗುಳಿಯಿಂದ ಕೂಡಿರದೇ ಇರುವುದರಿಂದ ಅಷ್ಟೇನೂ ಜನಪ್ರಿಯತೆಯನ್ನು ಗಳಿಸಿಲ್ಲ. ಆ ಕಾರಣದಿಂದಾಗಿ ಜನಪ್ರಿಯ ಗೂಗಲ್ಲೂ ಸಹ ಹೆಚ್ಚಿನ ವಿವರಗಳನ್ನು ನೀಡುವುದಿಲ್ಲ. ಅಂತಹ ಒಂದು ಅಪರೂಪದ ತಾಣದ ಕುರಿತಾಗಿ ಬರೆಯುವ ಪ್ರಯತ್ನ ನನ್ನದು. ಈ ಮಳೆಗಾಲ ಮುಗಿಯುವ ಮೊದಲೇ ಬಿಡುವು ಮಾಡಿಕೊಂಡು ಪ್ರವಾಸ ಹೊರಡುವ ಹೊಣೆಗಾರಿಕೆ ನಿಮ್ಮದು,
ವರ್ಷದಲ್ಲಿ ಕಡಿಮೆಯೆಂದರೂ ನಾಲ್ಕೈದು ಪ್ರವಾಸ ಹೋಗುವ ಖಯಾಲಿ ನನ್ನದು. ಅದರಲ್ಲೂ ಒಂದಾದರೂ ಪ್ರವಾಸವಿಲ್ಲದೆ ನನ್ನ ಮಳೆಗಾಲ ಮುಗಿಯದು. ಕಳೆದ ಮಳೆಗಾಲದಲ್ಲಿ ಇರ್ಪು ಜಲಪಾತ ಮತ್ತು ನಾಗರಹೊಳೆಗೆ ಭೇಟಿ ಕೊಟ್ಟಿದ್ದೆವು, ಈ ಭಾರಿ ಎಲ್ಲಿಗೆ ಹೋಗುವುದು ಎಂದಾಲೋಚಿಸುತ್ತಿರುವಾಗಲೇ ಸ್ನೇಹಿತನೊಬ್ಬ ಸೂಚಿಸಿದ್ದು ಕೋಟೆ ಬೆಟ್ಟಕ್ಕೆ ಹೋಗೋಣವೆಂದು. ಮೊದಲೇ ಹುಟ್ಟಾ ಚಾರಣ ಪ್ರಿಯರಾದ ನಾವು ಸ್ನೇಹಿತನ ಸೂಚನೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆವು. ಭಾನುವಾರ ಬೆಳಗ್ಗೆ ಹೊರಟು ರಾತ್ರಿಯ ಹೊತ್ತಿಗೆ ಗೂಡು ಸೇರಿಕೊಳ್ಳುವುದೆಂದು ವಾಟ್ಸಾಪಿನಲ್ಲಿ ಕರೆದ ತುರ್ತು ಸಂಪುಟ ಸಭೆಯಲ್ಲಿ ನಿರ್ಧರಿಸಿದೆವು. ಅ ವಾಟ್ಸಾಪ್ ಗ್ರೂಪಿನಲ್ಲಿ ತುಂಬಾ ಜನರಿದ್ದು, ಕೆಲವರು ಬರಲಾಗುದಿಲ್ಲವೆಂದು ಹೇಳಿದ ಕಾರಣ, ಚಾರಣಕ್ಕೆ ಬರುವವರನ್ನು ಮಾತ್ರ ಒಳಗೊಂಡ ಸಂಪುಟ ಉಪ ಸಮಿತಿಯನ್ನೂ ರಚಿಸಿಕೊಂಡೆವು.
ಬೆಳಗ್ಗೆ ೬.೩೦ಕ್ಕೆ ನಮ್ಮ ಸವಾರಿ ಪುತ್ತೂರಿನಿಂದ ಹೊರಟಿತು. ಖಾಲಿ ಹೊಟ್ಟೆಯಲ್ಲಿ ಹೊರಟಿದ್ದರಿಂದ ಸಂಪಾಜೆ ಎತ್ತುವಾಗ ನಮ್ಮ ಹೊಟ್ಟೆ ಚುರುಗುಟ್ಟಲು ಶುರು ಮಾಡಿತು. ಅಲ್ಲೇ ಇದ್ದ “ಹೋಟೆಲ್ ಪ್ರಕಾಶ”ದೊಳಗೆ ಹೊಕ್ಕ ನಾವು ಬಿಸಿ ಬಿಸಿ ತುಪ್ಪ ದೋಸೆ, ಮಸಾಲ ದೋಸೆ, ಚಪಾತಿಗಳನ್ನು ತಿಂದು ತೇಗುತ್ತಾ ಹೊರ ಬಂದೆವು. ಬಳಿಕ ನಮ್ಮ ಗಾಡಿ ಘಾಟಿ ಹತ್ತಲು ಶುರು ಮಾಡಿತು. ಮಡಿಕೇರಿ ಪೇಟೆಯನ್ನು ದಾಟಿ ಸೋಮವಾರಪೇಟೆ ದಾರಿಯಲ್ಲಿ ಸಾಗಿದೆವು. ಆದಿತ್ಯವಾರ ಅಂತಾನೋ, ಅಲ್ಲಾ ಡಿ.ವೈ.ಎಸ್.ಪಿ ಗಣಪತಿಯವರ ಆತ್ಮಹತ್ಯೆಯ ನಂತರದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾನೋ ಏನೋ, ಪೇಟೆ ಸಂಪೂರ್ಣ ಭಣಗುಡುತ್ತಿತ್ತು.
ಪೇಟೆ ಹೇಗಿದ್ದರೆ ನಮಗೇನು? ನಮ್ಮ ಮನಸ್ಸು ಹೋಗು ಅನ್ನುತ್ತಿತ್ತು, ಕೋಟೆ ಬೆಟ್ಟ ಬಾ ಅಂತ ಕರೀತಿತ್ತು. ಸೋಮವಾರ ಪೇಟೆಯ ದಾರಿಯಲ್ಲಿ ಸುಮಾರು ಇಪ್ಪತ್ತು ಕಿಲೋ ಮೀಟರ್ ಕ್ರಮಿಸಿದಾಗ ಸಿಗುವ ಎಡಗಡೆಯ ದಾರಿಯೊಂದು ನಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿತ್ತು. ಆ ದಾರಿಯಲ್ಲಿ ಮತ್ತೈದು ಕಿ.ಮಿ ಸಾಗಿದಾಗ ನಮ್ಮ ಕಾರು ಸಣ್ಣ ಕಾಡಿನ ದಾರಿಯೊಂದನ್ನು ಹೊಕ್ಕಿತ್ತು. ತಿರುವು ಮುರುವಾದ ರಸ್ತೆ, ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳು, ಆ ಮರಗಳ ಮಧ್ಯದಿಂದ ಇಣುಕಿ ನಮ್ಮನ್ನೇ ದುರುಗುಟ್ಟಿ ನೋಡುತ್ತಿದ್ದ ಆಕಾಶ.. ಹಿಂದಿನ ದಿನದ ಮಳೆಯಿಂದಾಗಿ ಆ ರಸ್ತೆ ಕೆಸರುಮಯವಾಗಿತ್ತು ಮತ್ತು ನಮ್ಮ ಕಾರುಗಳ ಚಕ್ರವನ್ನೂ ಸಹ ಕೆಸರುಮಯವಾಗಿಸಿದ್ದವು. ಆ ಕೆಸರಿನಲ್ಲಿ ನಿಧಾನವಾಗಿ ಮೈ ಹಂದಾಡಿಸಿಕೊಂಡು ಸಾಗುವುದೆಂದರೆ ವಾಹನಗಳಿಗೂ ಖುಷಿ ಅಲ್ವಾ? ಹಂಗೋ ಹಿಂಗೋ ಪ್ರಯಾಣ ಸಾಗಿತ್ತು. ಅಷ್ಟರಲ್ಲೇ ಕೋಟೆ ಬೆಟ್ಟದ ತಪ್ಪಲನ್ನು ತಲುಪಿದೆವು. ದಟ್ಟವಾದ ಪೊದೆಗಳ ನಡುವೆ ಪಾರ್ಕಿಂಗ್’ಗಾಗಿಯೇ ಮೀಸಲಾದ ಸ್ಥಳ ಎಂಬಂತಿದ್ದ ಜಾಗವೊಂದರಲ್ಲಿ ಕಾರನ್ನು ನಿಲ್ಲಿಸಿ ನಮ್ಮ ಚಾರಣವನ್ನು ಶುರು ಮಾಡಿದೆವು.
ಕೋಟೆ ಬೆಟ್ಟ ಚಾರಣದ ಕುರಿತಾದ ವಿವರವಾದ ಮಾಹಿತಿ ಇಂಟರ್ನೆಟ್ಟಿನಲ್ಲಿ ಸಿಗುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಆ ಹೆಸರನ್ನು ಕೇಳಿದ್ದೂ ಅದೇ ಮೊದಲು. ಆದ್ದರಿಂದ ಚಾರಣದ ದಾರಿಯ ಕುರಿತಾಗಿ ನಮಗೂ ಅನುಮಾನಗಳಿದ್ದವು. ಒಂದು ಮನೆ ಬಿಟ್ಟರೆ ಬೇರೆ ನರ ಮಾನವರ ಹೆಜ್ಜೆ ಗುರುತೂ ಸಹ ಅಲ್ಲಿ ಸಿಗುವುದಿಲ್ಲ. ಅದರೆ, ನಮ್ಮ ಅನುಮಾನಗಳನ್ನು ಬಗೆಹರಿಸಲೆಂದೇ ಬಂದವನಂತೆ ಅಜ್ಜನೊಬ್ಬ ಪ್ರತ್ಯಕ್ಷನಾದ. “ಅಜ್ಜ, ಕೋಟೆ ಬೆಟ್ಟಕ್ಕೆ ಹೋಗುವ ದಾರಿ ಹೇಗೆ?” ಎನ್ನುವ ನಮ್ಮ ಪ್ರಶ್ನೆಗೆ ಅತ ವಿವರವಾದ ಉತ್ತರವನ್ನು ನೀಡಿದ. ಅಲ್ಲಿಗೆ ದಾರಿಯ ಕುರಿತಾಗಿ ನಮ್ಮ ಸುತ್ತ ಬೆಳೆದಿದ್ದ ಅನುಮಾನದ ಹುತ್ತ ನೆಲಸಮವಾಗಿ ಹೋಯ್ತು. ಅಲ್ಲಿಂದ ಮುಂದೆ ಆನೆ ನಡೆದದ್ದೇ ದಾರಿ ಎನ್ನುವಂತೆ ಸಾಗಿತು ನಮ್ಮ ಚಾರಣ.
ಮೊತ್ತ ಮೊದಲಿಗೆ ತೀರಾ ಸಾಮಾನ್ಯದಂತಿದ್ದ ಸಣ್ನ ಗುಡ್ಡವೊಂದನ್ನು ಏರಿದೆವು. ಬಳಿಕ ಒಂದು ಬಯಲು ಪ್ರದೇಶ. ಅವೆರಡನ್ನೂ ದಾಟಿದ ಬಳಿಕ ಕಾಡೊಂದು ನಮ್ಮನ್ನು ಎದುರುಗೊಳ್ಳುತ್ತದೆ. ಸಾಗುವ ದಾರಿಯುದ್ದಕ್ಕೂ ತೋರಣ ಕಟ್ಟಿದಂತಿದ್ದ ಬಳ್ಳಿಯಂತಿರುವ ಮರಗಳು ನಮ್ಮ ಚಾರಣಕ್ಕೆ ಹೆಚ್ಚಿನ ಮೆರುಗನ್ನು ನೀಡಿತ್ತು. ಎಷ್ಟೊಂದು ಮೆರುಗೆಂದರೆ ನಿಂತ ನಿಂತಲ್ಲೆಲ್ಲಾ ಫೋಟೋ ಕ್ಲಿಕ್ಕಿಸಿಕೊಳ್ಳುವಷ್ಟು.
ಆದರೆ ಫೋಸು ಕೊಟ್ಟಷ್ಟು, ಫೋಟೋ ಕ್ಲಿಕ್ಕಿಸಿಕೊಂಡಷ್ಟು ಸುಲಭವಾಗಿರಲಿಲ್ಲ ಆ ಚಾರಣ. ಕಾಡಿನ ತರಗೆಲೆಗಳ ಮೇಲೆ ನಾವಿಟ್ಟ ಹೆಜ್ಜೆ ಹಿತಕರವಾಗಿದ್ದರೂ ಅಷ್ಟೊಂದು ಸೇಫ್ ಆಗಿರಲಿಲ್ಲ. ಯಾಕೆಂದರೆ ನಾವು ಹೆಜ್ಜೆ ಇಟ್ಟಲ್ಲೆಲ್ಲಾ ಉಂಬುಳಗಳು ರಕ್ತ ಬೀಜಾಸುರನಂತೆ ನಮ್ಮ ಮೇಲೆರಗುತ್ತಿದ್ದವು. ನಾವು ಸುಂದರವಾದ ಬ್ಯಾಕ್’ಗ್ರೌಂಡುಗಳ ಮುಂದೆ ನಿಂತು ಹೊಚ್ಚ ಹೊಸ “ಡಿ.ಪಿ”ಗಳಿಗಾಗಿ ಫೋಟೋ ಹೊಡೆಸಿಕೊಳ್ಳುವುದರಲ್ಲಿ ಮೈ ಮರೆತಿರುವಾಗ ಉಂಬುಳುಗಳು ಶ್ರದ್ಧೆಯಿಂದ ನಮ್ಮ ರಕ್ತ ಹೀರುವುದರಲ್ಲಿ ತಲ್ಲೀನವಾಗಿದ್ದವು. ನಮ್ಮ ಕಾಲ ಬುಡದಲ್ಲಿ ಕೆಂಪು ನೀರು ಬರುವವರೆಗೂ ಅದು ನಮ್ಮ ಅರಿವಿಗೇ ಬರುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ನಮ್ಮ ರಕ್ತದ ವಾಸನೆಯನ್ನು ದೂರದಿಂದಲೇ ಗ್ರಹಿಸಿ ಅದನ್ನು ಹೀರಲು ಎದ್ದು ಬಿದ್ದು ಬರುತ್ತಿದ್ದ ನೂರಾರು ಉಂಬುಳಗಳೇ ನಮ್ಮ ಕಣ್ಣಿಗೆ ಕಾಣುತ್ತಿದ್ದವು. ನಾವು ಬೇರೆ ಪಕ್ಕಾ ಲೋಕಲ್ ಹುಡುಗರು. ಶೂಗಳನ್ನು ಧರಿಸಿಕೊಂಡೋ ಅಥವಾ ಹೊಗೆ ಸೊಪ್ಪನ್ನ ತೆಗೆದುಕೊಂಡೋ ಹೋಗುವ ಜಾಯಮಾನದವರಲ್ಲ. ಅಂತೂ ಲೀಚುಗಳನ್ನು ನಿವಾಳಿಸಿಕೊಂಡು ಆ ಕಾಡನ್ನು ಕ್ರಮಿಸುವಾಗ ಉಸ್ಸಪ್ಪಾ ಅನಿಸಿತ್ತು. ಆ ಕಾಡನ್ನು ಕ್ರಮಿಸಿದೆವು, ಆವಾಗಲೇ ನೋಡಿ ನಿಜವಾದ ಕೋಟೆ ಬೆಟ್ಟ ನಮಗಾಗಿ ತೆರೆದುಕೊಳ್ಳುವುದು.
ಮುಂದೆ ಸಾಗಿದಷ್ಟೂ ಒಂದಕ್ಕಿಂತ ಮತ್ತೊಂದು ಸುಂದರವಾದ ಸೀನರಿಗಳು, ಮಂಜನ್ನೇ ಕಂಬಳಿಯಂತೆ ಹೊದ್ದು ಬೆಚ್ಚಗೆ ಮಲಗಿರುವ ಬೆಟ್ಟ ಗುಡ್ಡಗಳು, ಅಲ್ಲೊಮ್ಮೆ ಇಲ್ಲೊಮ್ಮೆ ದರ್ಶನ ಕೊಡುವ ಸೂರ್ಯ, ನಡುವೆ ಮೈದಳೆದು ನಿಂತ ಸುಂದರವಾದ ಕಾಡ ಹೂಗಳು, ಬಣ್ಣ ಬಣ್ಣದ ಬಲು ಅಪರೂಪದ ಕಂಬಳಿ ಹುಳಗಳು… ಕ್ರಮಿಸಿದಂತೆ ಬೆಟ್ಟ ಇನ್ನಷ್ಟು ದುರ್ಗಮವಾಗುತ್ತಿತ್ತು. ಕೊನೇಯ ಬೆಟ್ಟವಂತೂ ಸಂಪೂರ್ಣ ಬಂಡೆ ಕಲ್ಲಿನದ್ದೇ. ಆ ಕಲ್ಲಿನ ಮೇಲೆ ಮಲೆ ನೀರು ಬಿದ್ದು ಸಂಪೂರ್ಣ ಹಾವಸೆ ಹಿಡಿದಿತ್ತು. ಕಾಡಿನಲ್ಲಿ ಉಂಬುಳಗಳಿಂದಾಗಿ ಕಾಲಿನ ಕಡೆ ಗಮನ ಹರಿಸುವಂತಾಗಿದ್ದರೆ, ಇಲ್ಲಿ ಜಾರುವ ಕಲ್ಲುಗಳಿಂದಾಗಿ..
ಅಂತೂ ಕೋಟೆ ಬೆಟ್ಟದ ತುತ್ತ ತುದಿಯನ್ನು ತಲುಪಿದೆವು. ನಮ್ಮನ್ನೇ ಎತ್ತಿ ಬಿಸಾಕುವಂತಿದ್ದ ಆ ಗಾಳಿ, ಮೀಟರ್ ದೂರದಲ್ಲಿ ನಿಂತವರನ್ನೂ ಕಾಣದಂತೆ ಮಾಡಿದ್ದ ಆ ದಟ್ಟ ಮಂಜು, ಮಧ್ಯದಲ್ಲಿ ಆವರ್ಭವಿಸಿರುವ ಪುಟ್ಟ ಈಶ್ವರ ದೇವಾಲಯ.. ವಾಹ್.. ಎಂತಾ ಅದ್ಭುತ.. ಒಂದು ಸಣ್ಣ ಶಿವಲಿಂಗ, ಅದಕ್ಕಭಿಮುಖವಾಗಿ ನಂದಿ ಗುಡಿಯೊಳಗಿತ್ತು. ನಾವು ಅಲ್ಲಿದ್ದ ಸಮಯ ಮಧ್ಯಹ್ನ ಒಂದಾಗಿದ್ದರಿಂದ ದೇವಾಲಯದ ಬಾಗಿಲು ಮುಚ್ಚಿತ್ತು. ಅದರೂ ಬಾಗಿಲಲ್ಲಿದ್ದ ಸಣ್ಣ ಕಿಂಡಿಗಳಲ್ಲಿ ಒಳಗೇನಿದೆ ಎಂದು ನೋಡಬಹುದಿತ್ತು. ಸಮುದ್ರ ಮಟ್ಟದಿಂದ ಅಷ್ಟು ಎತ್ತರದಲ್ಲಿರುವ ಆ ದೇವಾಲಯದಲ್ಲಿ ನಿತ್ಯವೂ ಪೂಜೆ ನಡೆಯುತ್ತದೆಯೆಂದರೆ ನೀವು ನಂಬಲೇಬೇಕು. ಪೂಜೆಯ ನಂತರ ಚಂದವಾಗಿ ಜೋಡಿಸಿಟ್ಟಿದ್ದ ಪೂಜಾ ಪರಿಕರಗಳು, ನಾಗನ ಗುಡಿಯ ಮುಂದೆ ನೈವೇದ್ಯವಿಟ್ಟಿದ್ದ ಬಾಳೆ ಎಲೆಯು ಅದಕ್ಕೆ ಸಾಕ್ಷಿಯನ್ನು ಕೊಟ್ಟಿತ್ತು.
ಬೆಟ್ಟದ ಮೇಲೆ ನಮ್ಮ ಫೋಟೊ ಸೆಷನ್ ನಡೆಯಿತು. ಹತ್ತಿದ ಮೇಲೆ ಇಳಿಯಲೇ ಬೇಕು ತಾನೆ? ಇಳಿಯಲು ಶುರು ಮಾಡಿದೆವು. ಹತ್ತುವಾಗ ಇದ್ದ ಉತ್ಸಾಹ ಇಳಿಯುವಾಗ ಇರಲಿಲ್ಲ. ಒಂದು ಹೆಜ್ಜೆ ಮುಂದಿಡಲೂ ಸಹ ಕಾಲುಗಳು ನಿರಾಕರಿಸುತ್ತಿದ್ದವು. ಆ ಸ್ಥಳವನ್ನು ಬಿಟ್ಟು ಬರಲು ಕಾಲುಗಳಿಗೂ ಮನಸಿರಲಿಲ್ಲ ಅಂತಲ್ಲ, ಅಷ್ಟು ದೊಡ್ದ ಬೆಟ್ಟವನ್ನು ಹತ್ತಿದ್ದರಿಂದ ಕಾಲುಗಳು ತೀರಾ ಆಯಾಸಗೊಂಡಿದ್ದರಿಂದ. “ಹೋಟೆಲ್ ಪ್ರಕಾಶ್”ದಿಂದ ತಂದಿದ್ದ ಗರಿ ಗರಿಯಾದ ಹಲಸಿನ ಕಾಯಿ ಚಿಪ್ಸ್ ತಿಂದು ಹೊಟ್ಟೆ ತುಂಬಿಸಿಕೊಂಡೆವು. ಹೋದವರು ಮತ್ತೆ ಇದೇ ದಾರಿಯಲ್ಲಿ ಬರುತ್ತಾರೆಂಬುದು ಉಂಬುಳಗಳಿಗೂ ತಿಳಿದಿತ್ತು ಅಂತ ಕಾಣುತ್ತದೆ, ಇಳಿಯುವ ದಾರಿಯಲ್ಲಿ ಮತ್ತೊಮ್ಮೆ ದಾಳಿಗೆ ಸಿದ್ದವಾಗಿದ್ದವು. ಹರಸಾಹಸ ಪಟ್ಟು ಉಂಬುಳುಗಳ ದಾಳಿಯಿಂದ ತಪ್ಪಿಸಿಕೊಂಡು ಮೂಲಸ್ಥಾನ ತಲುಪಿದೆವು.
ಇದು ನನ್ನ ಒಂದು ದಿನದ ಚಾರಣದ ಕಥೆ. ಪ್ರತೀ ಭಾರಿ ಪ್ರವಾಸ ಹೋಗುವಾಗಲೂ ಅಪರೂಪದ ತಾಣಗಳಿಗೆ ತಡಕಾಡುವ ಜಾತಿಯವರು ನೀವಾಗಿದ್ದರೆ ಕೋಟೆ ಬೆಟ್ಟವನ್ನೊಮ್ಮೆ ಹತ್ತಿ. ಅದು ನಿಮಗೆ ವರ್ತ್ ಅಂತನ್ನಿಸದಿದ್ದರೆ ಆಮೇಲೆ ಹೇಳಿ..
ಚಿತ್ರ ಕೃಪೆ: ಪ್ರತೀಕ್ ಪುಂಚತ್ತೋಡಿ
Facebook ಕಾಮೆಂಟ್ಸ್