ಚಿಕ್ಕದೊಂದು ಆಟವಾಡಲು ತಯಾರಿದ್ದೀರಾ?ಕೇವಲ ಐದು ನಿಮಿಷದ್ದು.ಇದು ಅಂತಿಂತ ಆಟವಲ್ಲ.ನಿಮ್ಮ ಬಗ್ಗೆ ನಿಮಗೇ ಗೊತ್ತಿಲ್ಲದ ವಿವರಗಳನ್ನ ಹೊರಹಾಕುವ ಆಟ.”ದ್ ಕ್ಯೂಬ್” ಎನ್ನುವ ಪುಸ್ತಕದಲ್ಲಿ ಪ್ರಕಟವಾದ ಮನಶಾಸ್ತ್ರಕ್ಕೆ ಸಂಭಂಧಿಸಿದ ಆಟ.ಸರಿ ಮತ್ಯಾಕೆ ತಡ! ಆಟ ಶುರುವಾಗಲಿ.ಆದ್ರೆ ಒಂದು ಸೂಚನೆ.ಪ್ರಶ್ನೆಗಳನ್ನು ಮನಸ್ಸಿನಲ್ಲಿ ಕಲ್ಪನೆ ಮಾಡಿ ಸರಿಯಾಗಿ ಉತ್ತರಿಸಿಕೊಂಡ ನಂತರವೇ ಮುಂದಿನ ವಿವರಗಳನ್ನ ಓದಬೇಕು.
ಮೊದಲನೆಯದಾಗಿ,ನಿಮ್ಮ ಕಣ್ಣುಗಳಿಂದ ಎಷ್ಟು ದೂರ ನೋಡಲು ಸಾಧ್ಯವೋ ಅಷ್ಟು ವಿಸ್ತಾರಕ್ಕೆ ಒಂದು ಮರುಭೂಮಿಯನ್ನು ಊಹಿಸಿಕೊಳ್ಳಿ.ಈ ಮರುಭುಮಿಯಲ್ಲೊಂದು ಘನಾಕೃತಿ ಅಂದರೆ ಕ್ಯೂಬ್ ಇದೆ.
ಮುಂದಿನ ಕೆಲಸ.ಆ ಕ್ಯೂಬ್’ನ್ನು ವರ್ಣಿಸಿ. ಕ್ಯೂಬ್ ಯಾವ ರೀತಿ ಕಾಣುತ್ತದೆ?ಎಷ್ಟು ದೊಡ್ಡದಿದೆ? ಯಾವುದರಿಂದ ಮಾಡಲ್ಪಟ್ಟಿದೆ?ಮತ್ತು ಎಲ್ಲಿದೆ?
ನೆನಪಿರಲಿ.ಈ ಆಟದಲ್ಲಿ ಯಾವು ಉತ್ತರವೂ ತಪ್ಪಲ್ಲ.ಕೇವಲ ನಿಮ್ಮ ಉತ್ತರಗಳು ಮಾತ್ರ ಮುಖ್ಯವಾಗುತ್ತವೆ.
ಈಗ ಮರುಭೂಮಿ ಮತ್ತು ಕ್ಯೂಬನ್ನೊಮ್ಮೆ ನೋಡಿ.ಈ ದೃಶ್ಯದಲ್ಲಿ ಒಂದು ಏಣಿ ಕೂಡ ನಿಮಗೆ ಕಾಣುತ್ತಿದೆ. ಏಣಿಯನ್ನು ವರ್ಣಿಸಿ.ಯಾವುದರಿಂದ ಮಾಡಲ್ಪಟ್ಟಿದೆ?ಎಷ್ಟು ದೊಡ್ಡದಿದೆ?ಏಣಿ ಎಲ್ಲಿದೆ?
ಈಗ ನಿಮ್ಮ ಮೂರನೆಯ ಕೆಲಸ,ಈ ದೃಶ್ಯದಲ್ಲೊಂದು ಕುದುರೆಯನ್ನು ಊಹಿಸಿಕೊಳ್ಳಿ. (ಮರುಭೂಮಿಯಲ್ಲಿ ಕುದುರೆಯೇ? ಅಂದುಕೊಳ್ಳಬೇಡಿ.ಕಲ್ಪನೆಗೆ ಮಿತಿಗಳಿಲ್ಲ.)ಈಗ ಕುದುರೆಯ ಬಗ್ಗೆ ಬಣ್ಣಿಸಿ. ಕುದುರೆ ಎಲ್ಲಿದೆ? ಏನು ಮಾಡುತ್ತಿದೆ?ಎಲ್ಲಾದರೂ ಹೋಗುತ್ತಿದ್ದರೆ ಯಾವ ಕಡೆ ಹೋಗುತ್ತಿದೆ?
ಇನ್ನೇನು ಆಟದಲ್ಲಿನ ಪ್ರಶ್ನೆಗಳು ಮುಗಿಯುವ ಹಂತಕ್ಕೆ ಬಂದಿದ್ದೇವೆ.ನಿಮ್ಮ ಕಲ್ಪನೆಯ ದೃಶ್ಯದಲ್ಲೀಗ ನೀವು ಹೂಗಳನ್ನು ನೋಡುತ್ತಿದ್ದಿರಿ.ಯಾವ ರೀತಿಯ ಹೂಗಳಿವೆ? ಎಷ್ಟು ಹೂಗಳಿವೆ? ಎಲ್ಲಿವೆ?ಏಣಿ,ಕ್ಯೂಬ್,ಕುದುರೆ,ಮರಭೂಮಿಯ ಮರಳುಗಳಿಗೆ ಸಂಬಂಧ ಪಟ್ಟಂತೆ ಹೂಗಳು ಎಲ್ಲಿವೆ?
ಈಗ ಕೊನೆಯ ಪ್ರಶ್ನೆ.ಈ ದೃಶ್ಯದಲ್ಲಿ ಬಿರುಗಾಳಿಯಿದೆ.ಅದನ್ನು ಬಣ್ಣಿಸಿ.ಯಾವ ರೀತಿಯ ಬಿರುಗಾಳಿ? ಹತ್ತಿರವಿದೆಯೇ ಅಥವಾ ದೂರದಲ್ಲಿದೆಯೇ?ಯಾವ ದಿಕ್ಕಿಗಿದೆ?ಬಿರುಗಾಳಿಯು ಕುದುರೆ,ಏಣಿ,ಕ್ಯೂಬ್,ಅಥವಾ ಹೂಗಳು ಇವುಗಳ ಮೇಲೆನಾದರೂ ಪರಿಣಾಮ ಬೀರುತ್ತಿದೆಯೆ?
.
.
ಸರಿ.ಈಗ ಈ ವಿವರಣೆಯನ್ನು ಓದಿಕೊಳ್ಳಿ.
ಇದೊಂದು ಅಚ್ಚರಿಯ ಅನುಭೂತಿಯನ್ನು ನೀಡುತ್ತದೆ.
ಘನಾಕೃತಿ ಅಥವಾ ಕ್ಯೂಬ್ ,ಅದು ನಿಮ್ಮನ್ನೇ ಪ್ರತಿನಿಧಿಸುತ್ತದೆ.ಅದರ ಗಾತ್ರವು,ಮೇಲ್ನೋಟಕ್ಕೆ ನಿಮ್ಮ ಅಹಂ.ಅತಿ ದೊಡ್ಡ ಕ್ಯೂಬ್ ಎಂದರೆ ನಿಮ್ಮ ಬಗ್ಗೆ ನಿಮಗೆ ಅತಿಯೆನುವ ಖಚಿತತೆ ಇದೆ.ಅತಿ ಚಿಕ್ಕ ಕ್ಯೂಬ್ ಎಂದರೆ ನಿಮಗೆ ನಿಮ್ಮ ಬಗ್ಗೆ ಅಷ್ಟಾಗಿ ಖಚಿತತೆಯಿಲ್ಲ.ಕ್ಯೂಬ್ ಮರುಭೂಮಿಯ ಮರಳ ಮೇಲೆ ನಿಂತಿದೆ ಎಂದಾದರೆ ನೀವು ಸರಳ ಮತ್ತು ವಾಸ್ತವಿಕತೆಯಿಂದ ಕೂಡಿದ ವ್ಯಕ್ತಿ.ಕ್ಯೂಬ್ ಆಕಾಶದಲ್ಲಿ ಹಾರುತ್ತಿದೆಯೆಂದಾದರೆ ನಿಮಗೆ ಸುತ್ತಲಿನ ವಾಸ್ತವಿಕತೆಯ ಅರಿವಿಲ್ಲ.ನಿಮ್ಮದೇ ಕಲ್ಪಿತ ವಿಚಾರಗಳಿಗೆ ಹೆಚ್ಚು ಬದ್ದರಿದ್ದೀರಿ ಎಂದರ್ಥ.ಕ್ಯೂಬ್ ಪಾರದರ್ಶಕ ವಸ್ತುವಿನಿಂದ ಮಾಡಲ್ಪಟ್ಟಿದ್ದರೆ ನೀವು ಹೆಚ್ಚು ಪಾರದರ್ಶಕವಾಗಿದ್ದೀರಿ.ಅಪಾರದರ್ಶಕ ವಸ್ತುಗಳಿಂದ ಮಾಡಲ್ಪಟ್ಟಿದ್ದರೆ ಹೆಚ್ಚು ರಕ್ಷಣಾತ್ಮಕ ಮನಸ್ಸಿನವರು.ಹೊಳೆಯುವ ವಸ್ತುವಿನಿಂದ ಮಾಡಲ್ಪಟ್ಟಿದೆಯೇ? ಹಾಗಾದರೆ ನೀವು ಧನಾತ್ಮಕ ವ್ಯಕ್ತಿತ್ವ ಹೊಂದಿದ್ದೀರಿ.ಗ್ರಾನೈಟ್ನಿಂದ ಮಾಡಿದೆ ಎಂದಾದರೆ ನೀವು ರಕ್ಷಣಾತ್ಮಕ ಮತ್ತು ಏನೇ ಬಂದರೂ ಎದುರಿಸಿ ಚೇತರಿಸಿಕೊಳ್ಳುವ ಮನಸ್ಥಿತಿ ಹೊಂದಿರುವ ಸಾಧ್ಯತೆಯಿದೆ.
ಈ ಆಟದ ಹಿಂದಿನ ಟ್ರಿಕ್ ಅತ್ಯಂತ ಪುರತನವಾದದ್ದು ಮತ್ತು ಆಸಕ್ತಿದಾಯಕವಾದದ್ದು .ಒಂದು ಖಾಲಿ,ಏನು ವಿವರಗಳಿಲ್ಲದ ಸಂಗತಿಯನ್ನು ಕಲ್ಪಿಸಿಕೊಳ್ಳಲು ಹೇಳಿದಾಗ ನಿಮ್ಮ ಕಲ್ಪನೆಯು ಇದರ ಮೇಲೆ ತನ್ನದೇ ಆದ ಗುರುತನ್ನು ಅಭಿವ್ಯಕ್ತಗೊಳಿಸುತ್ತದೆ.ನಿಮ್ಮ ವ್ಯಕ್ತಿತ್ವದ ಛಾಪನ್ನಿಲ್ಲಿ ಮೂಡಿಸುತ್ತದೆ.
ಈಗ ಏಣಿಯು ನಿಮ್ಮ ಗೆಳೆಯರನ್ನು ಸೂಚಿಸುತ್ತದೆ.
ನಿಮ್ಮ ಸ್ನೇಹಿತರು ಘನಾಕೃತಿ ಅಂದರೆ ಕ್ಯೂಬ್ ಮೇಲೆ ನಿಂತಿದ್ದಾರೆಯೆ? ಹಾಗಾದರೆ ನಿಮ್ಮ ಸ್ನೇಹಿತರು ನಿಮ್ಮ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ನಿಮಗೆ ತುಂಬ ಆಪ್ತರಾಗಿದ್ದಾರೆ.ಏಣಿಯು ಧೃಡವಾಗಿದೆಯೇ ? ಇಲ್ಲವೇ?ಏಣಿಯು ಕ್ಯೂಬಿನ ಒಳಭಾಗದಲ್ಲಿದೆಯೇ? ಅಥವಾ ಕ್ಯೂಬಿನ ಒಂದು ಭಾಗಕ್ಕಷ್ಟೇ ಒರಗಿಕೊಂಡಿದೆಯೇ?ಇಲ್ಲಾ ಮರಳಿನ ಮೇಲೆಲ್ಲೋ ಏಣಿ ಏಕಾಂಗಿಯಾಗಿ ಬಿದ್ದುಕೊಂಡಿದೆಯೇ.ಈಗ ನೀವು ನಿಮ್ಮ ಸ್ವಂತ ನಿರ್ಣಯಕ್ಕೆ ಬರಲು ಸಾಧ್ಯ.ನಿಮಗಿದು ಸುಲಭವಾಗಿ ಅರ್ಥವಾಗುತ್ತದೆ.
ಕುದುರೆಯು ನಿಮ್ಮ ಕನಸಿನ ಸಂಗಾತಿಯನ್ನು ಪ್ರತಿನಿಧಿಸುತ್ತದೆ.ಯಾವ ಬಗೆಯ ಕುದುರೆ ಎಂಬುದು ನೀವು ಯಾವ ರೀತಿಯ ಸಂಗಾತಿಯನ್ನು ಬಯಸುತ್ತೀರಿ ಎನ್ನುವುದರ ಸೂಚನೆ ನೀಡುತ್ತದೆ.ಕೆಲವರು ಒಂದು ಸ್ಥಿರವಾದ ಕಂದು ಕುದುರೆಯ ಕಲ್ಪನೆ ಮಾಡಿಕೊಳ್ಳುತ್ತಾರೆ.ಕೆಲವರು ಉಜ್ವಲವಾದ ಹಾರುವ ಕುದುರೆಯ ಕಲ್ಪನೆ ಮಾಡಿಕೊಳ್ಳುತ್ತಾರೆ.ಇನ್ನೂ ಕೆಲವರು ತಲೆಯ ಮೇಲೊoದು ಕೊಂಬುಳ್ಳ ಕಾಲ್ಪನಿಕ ಕುದುರೆಯ ಕಲ್ಪನೆ ಮಾಡಿಕೊಳ್ಳುತ್ತಾರೆ. ಕುದುರೆಯು ಘನಾಕೃತಿಗೆ ನಯವಾಗಿ ಮುಖ/ಬಾಯಿ/ಮೂಗು/ತಾಗಿಸುತ್ತಿದೆಯೇ?ಅಥವಾ ಘನಾಕೃತಿಯ ತುಣುಕನ್ನು ತಿನ್ನುತ್ತಿದೆಯೇ?ಕುದುರೆಯು ಘನಾಕೃತಿಯಿಂದ ದೂರದಲ್ಲಿದೆಯೇ ಅಥವಾ ದೂರಕ್ಕೆ ನಡೆದು ಹೋಗುತ್ತಿದೆಯೆ ಎಂಬುದು ನಿಮ್ಮ ಸಂಗಾತಿಯೊಡನೆಯ ನಿಮ್ಮ ಪ್ರಸ್ತುತ ಪರಿಸ್ಥಿತಿಯ ಚಿತ್ರಣವನ್ನು ಒದಗಿಸುತ್ತದೆ.
ಹೂಗಳು ಮಕ್ಕಳನ್ನು ಪ್ರತಿನಿಧಿಸುತ್ತವೆ.ನೀವು ಕಲ್ಪಿಸಿಕೊಂಡ ಹೂಗಳ ಸಂಖ್ಯೆಯು ನೀವೆಷ್ಟು
ಮಕ್ಕಳನ್ನು ಬಯಸುತ್ತೀರಿ ಎಂದು ಹೇಳುತ್ತದೆ.ಕೆಲವರು ಒಂದು ಚಿಕ್ಕ ಹೂವನ್ನು ಯೋಚಿಸುತ್ತಾರೆ ಇನ್ನು ಕೆಲವರು ಮರಳುಗಾಡಿಂದ ಸುತ್ತುವರಿದ ಚಿಕ್ಕದೊಂದು ಹೂದೋಟವನ್ನೇ ಕಲ್ಪಿಸಿಕೊಳ್ಳುತ್ತಾರೆ.ಹೂವಿನ ಬಣ್ಣ ಮತ್ತು ಜೀವಂತಿಕೆಯು ಆರೋಗ್ಯ ಮತ್ತು ಸಮೃದ್ಧಿಯ ಸಂಕೇತ.
ಕೊನೆಯದಾಗಿ ಬಿರುಗಾಳಿ,ಆಪತ್ತನ್ನು ಸೂಚಿಸುತ್ತದೆ.ಇದು ವ್ಯಕ್ತಿಯ ಪ್ರಸ್ತುತ ಸ್ಥಿತಿ ಮತ್ತು ಆಪತ್ತನ್ನು ಎದುರಿಸುವ ಕ್ಷಮತೆಯ ಬಗ್ಗೆ ತಿಳಿಸುತ್ತದೆ.ಕೆಲವರು ದೂರದಲ್ಲೆಲ್ಲೋ ಬಿರುಗಾಳಿಯನ್ನು ಕಲ್ಪಿಸಿಕೊಳ್ಳಬಹುದು.
ಕೆಲವರು ಬಿರುಗಾಳಿಯ ಮಧ್ಯದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳಬಹುದು.ಘನಾಕೃತಿ,ಕುದುರೆಯ ಮೇಲೆಲ್ಲ ಆಲಿಕಲ್ಲುಗಳು ಬಿದ್ದಂತೆಯೂ ಭಾಸವಾಗಬಹುದು ಘನಗೋರ ಆಪತ್ತಿನಲ್ಲಿರುವವರಿಗೆ.
ಇಲ್ಲಿ ಹೇಳಿರುವ ವಿವರಗಳೆಲ್ಲ ನೂರಕ್ಕೆ ನೂರರೆಷ್ಟು ಸತ್ಯವಾಗಿರಬೇಕೆಂದೇನಿಲ್ಲ.ಆದರೆ ನಿಮಗೇ ಗೊತ್ತಿಲ್ಲದ ನಿಮ್ಮ ಮನದಾಳದ ವಿಷಯಗಳು ನಿಮಗರಿವಾಗಬಹುದು.ನೀವು ಈ ಆಟವನ್ನು ನಿಮ್ಮ ಗೆಳೆಯರ ಮೇಲೆಯೂ ಪ್ರಯೋಗಿಸಬಹುದು.ಐದೇ ನಿಮಿಷಗಳಲ್ಲಿ ನಿಮ್ಮ ಎದುರಿನವರ ಮನಸ್ಥಿತಿ ಅಂದಾಜಿಸಲು ಈ ಆಟವೊಂದು ಅತ್ಯುತ್ತಮ ಮಾರ್ಗ.
—
ವಿನಯಾ ನಾಯಕ್
Facebook ಕಾಮೆಂಟ್ಸ್