ಮನೆಯ ತಾರಸಿಯ ಪುಟ್ಟ ಕೈದೋಟದಿ
ಸ್ಥಿತವಾಗಿಹದೊಂದು ಖಾಲಿ ಹೂ ಕುಂಡ ;
ಒಂದು ತಳಿಯನೂ ಪಲ್ಲವಿಸಲಾಗದೆ
ನೀರು,ಬೆಳಕು,ಮಣ್ಣು- ಎಲ್ಲವೂ ದಂಡ .
ಅತ್ತ ಕಡೆ ಗುಲಾಬಿ, ಇತ್ತ ಕಡೆ ತುಳಸಿ
ಸುತ್ತ ಕೆಲವು ಅಲಂಕಾರದ ಗಿಡಗಳು
ಕಾಲಕಾಲಕೆ ಬೆಳೆದು ನಳನಳಿಸಿ
ಹಂಗಿಸಿದರೂ ಬಂಜೆತನ ತೊರೆಯಲ್ಲಿಲ್ಲ
ಮನೆಯೊಡತಿಯ ನಿರ್ಲಕ್ಷ್ಯದ ನೋಟಕೂ
ಹೆದರದೇ ಬಂಡಾಯ ಬಿಡಲಿಲ್ಲ !!
ಒಂದು ತಿಳಿ ಮುಂಜಾವಿನ ಘಳಿಗೆಯಲಿ
ಮೂಡಣದ ದಿಶೆಯಿಂದ ಅರುಣರೇಖೆಗಳೊಡನೆ
ಹಾರಿ ಬಂತೊಂದು ಹಕ್ಕಿ- ಪಾರಿವಾಳ
ಆರಿಸಿ ಅಕ್ಕಿ ಕಾಳುಗಳ, ಹೆಕ್ಕಿ,ನಿಧಾನದಲಿ
ಆಶ್ರಯಿಸಿತು ಖಾಲಿ ಕುಂಡದಿ ಸ್ಥಳ!
ಮೊದ ಮೊದಲು ನೀರುಣಿಸುವಾಗೆ ಗಿಡಗಳಿಗೆ
ತುಸು ಹೆದರಿ ಹೋಗುತ್ತಿತ್ತು ಹೊರಗೆ
ಮರುಚಣದಿ ಬಂದು ಸೇರುತ್ತಿತ್ತು ತನ್ನ ಮನೆಗೆ
ಕಡೆಕಡೆಗೆ ಬೆಳೆದು ಗೆಳೆತನವು ನಮ್ಮೊಂದಿಗೆ
ನಿರುಮ್ಮಳದಿ ಇರುತಲಿತ್ತು ಗರ್ಭದೊಡನೆ
ಖಾಲಿ ಹೂದಾನಿಯ ಹಾಗೆ ಮೂಕವಾಗಿ ಸುಮ್ಮನೆ!
ಮೈಯ ಮುದ್ದೆಯ ಮಾಡಿ ರೆಕ್ಕೆಗಳ ಮುಚ್ಚಿ
ದೇಹದ ಬಿಸಿಯೆಲ್ಲವನು ಧಾರೆಯಿತ್ತು;
ನವಜೀವಗಳೆರಡು ಬರಲು ಹೊರಗೆ ಕಳಚಿ
ಕವಚವ -ತಪದ ಫಲಕೆ ಸಂಭ್ರಮಿಸಿತ್ತು!
ಬರಡು ಕುಂಡಲದಲೀಗ ಜೀವದಾವಿರ್ಭಾವ
ಹಕ್ಕಿಯ ಮರಿಗಳೆರಡು ನೀಗಿದವು ನೋವ !!
ಚುಂಚಿಗೆ ಚುಂಚನಿಟ್ಟು ತಾಯಿ -ಗುಟುಕು ಪೊರೆದು
ಚಿವ್ ಗುಡುವಿಕೆಗೆ ಹಾತೊರೆಯುತ್ತಿತ್ತು
ಚರ್ಮ ಶೋಧಿಸಿ,ಸಡಿಲಿಸಿ, ರೆಕ್ಕೆ ಬಡಿದು
ಲೋಕಕೆ ಒಗ್ಗಿಕೊಳ್ಳುವುದನು ಕಲಿಸುತಿತ್ತು!
ಒಂಟಿ ಕಾಲಲಿ ನಿಂದು,ಜಿಗಿದು, ರೆಕ್ಕೆ-
ತೆರೆದು ಹಾರಿದವು ಹಕ್ಕಿಗಳು ಹೊರಕ್ಕೆ
ಬಿಟ್ಟು ಖಾಲಿ ಕುಂಡಲವ ಮತ್ತೆ ತನ್ನೆಷ್ಟಕೆಮರುದಿನ
ಬೆಳಗಿನಲಿ ಕಂಡವು ಹೂದಾನಿಯಲಿ ಮೊಳಕೆ !!