ಅಂಕಣ

ವಿರಾಟ್ ಕೊಹ್ಲಿಯವರಿಗೆ ಭಾರತರತ್ನ ಕೊಡುವ ಮುನ್ನ

               ಇತ್ತೀಚೆಗೆ ಒಂದು ಸುದ್ದಿ ಹರಿದಾಡುತ್ತಿದೆ. ಅದು ವಿರಾಟ್ ಕೊಹ್ಲಿಗೆ ಭಾರತರತ್ನ ಸಿಗಬೇಕು ಎಂಬ ಬೇಡಿಕೆ. ವಿರಾಟ ಕೊಹ್ಲಿ ಭಾರತದ ಮಾತ್ರವಲ್ಲ ಇಡೀ ವಿಶ್ವದ ಅತ್ತ್ಯುತ್ತಮ ಆಟಗಾರ ಅನ್ನುವುದರಲ್ಲಿ ನನ್ನ ಯಾವುದೇ ಆಕ್ಷೇಪಣೆ ಇಲ್ಲ. ಕೊಹ್ಲಿ ಕ್ರೀಡಾ ಜಗತ್ತಿಗೆ ಬಂದ ಕೆಲವೇ ದಿನಗಳಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ಅವರೊಂದಿಗೆ ಹೋಲಿಸುವ ಮಟ್ಟಿಗೆ ಬೆಳೆದಿದ್ದೂ ನಿಜ.ಆದರೆ ಕೊಹ್ಲಿ ಇನ್ನೂ ಸಾಧಿಸಲು ತುಂಬಾ ಇದೆ. ಭಾರತ ರತ್ನ ಜೀವಮಾನದ ಸಾಧನೆಗೆ ಕೊಡ ಮಾಡುವ ಪ್ರಶಸ್ತಿ. ಅದಕ್ಕೆ ನಾನು ಹೇಳಿದ್ದು ಕೊಹ್ಲಿ ಸಾಧನೆ ಇನ್ನೂ ಮುಂದುವರೆಯಬೇಕು.ದೇಶ ಅವರಿಂದ ಇನ್ನೂ ಹೆಚ್ಚಿನ ಸಾಧನೆ ನಿರೀಕ್ಷಿಸಿದೆ. ಭಾರತ ಕ್ರಿಕೆಟ್ ತಂಡದ ವ್ಯಕ್ತಿಗೇ ಕೊಡಬೇಕು ಎಂಬ ಇಚ್ಛೆ ಇದ್ದರೆ ತಮ್ಮ ಕ್ರೀಡಾ ಬದುಕಿನ ಅಷ್ಟೂ ಆಟಗಳನ್ನು ತಂಡಕ್ಕಾಗಿಯೇ ಆಡಿದ ರಾಹುಲ್ ದ್ರಾವಿಡ್ ಯೋಗ್ಯರು ಎಂಬುದು ನನ್ನ ಭಾವನೆ. ಪರಿಸ್ಥಿತಿ ಮತ್ತು ಪ್ರಭಾವಿ ವ್ಯಕ್ತಿಗಳ ಕಾರಣದಿಂದ ಇವರ ಪ್ರತಿಭೆ ಬೆಳಕಿಗೆ ಬರದೇ ಹೋಗಿದ್ದು ವಿಪರ್ಯಾಸ. ಇಲ್ಲಿ ನಾನು ಕೊಹ್ಲಿ ಯೋಗ್ಯರಲ್ಲ ಎಂದು ಹೇಳುತ್ತಿಲ್ಲ. ಬದಲಾಗಿ ಅದೇ ಕ್ಷೇತ್ರದ ಇನ್ನೊಬ್ಬ ಯೋಗ್ಯ, ಶ್ರೇಷ್ಟ, ಸರಳ, ಶಾಂತ,ನಿರುಪದ್ರವಿ, ನಿಷ್ಕಲ್ಮಶ,ನಿಷ್ಕಳಂಕ ,ನಿಸ್ವಾರ್ಥ ವ್ಯಕ್ತಿಯ ಬಗ್ಗೆ ಅಲ್ಲ ವ್ಯಕ್ತಿತ್ವದ ಬಗ್ಗೆ ಹೇಳುತ್ತಿದ್ದೇನೆ. ಕೋಹ್ಲಿ ಯೋಗ್ಯರೋ ಅಲ್ಲವೋ ಎಂಬ ಮಾತನ್ನು ಪಕ್ಕಕಿಟ್ಟು ಭಾರತರತ್ನ ಎಂಬ ಭಾರತದ ಶ್ರೇಷ್ಟ ಪ್ರಶಸ್ತಿಯ ಮತ್ತು ಆ ಪ್ರಶಸ್ತಿ ಪುರಸ್ಕೃತರ ಬಗ್ಗೆ ಇತಿಹಾಸವನ್ನೊಮ್ಮೆ ಕೆದಕೋಣ.ಬಹುಶಃ ಈ ಲೇಖನ ಓದಿ ಮುಗಿಸುವ ಹೊತ್ತಿಗೆ ಕೊಹ್ಲಿ ಅರ್ಹತೆಯ ವೃತ್ತದೊಳಗೇ ಬಂದರೂ ಬರಬಹುದು.

                   ಭಾರತರತ್ನ ಪ್ರಶಸ್ತಿ 2ನೇ ಜನವರಿ1954 ರಂದು ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ ಶುರು ಮಾಡಿದರು.  “ಭಾರತ ರತ್ನವನ್ನು ಒಬ್ಬ ವ್ಯಕ್ತಿಯ ಯಾವುದೇ ಕ್ಷೇತ್ರದ ಅಸಾಧಾರಣ ಸೇವೆ ಮತ್ತು ಅಪ್ರತಿಮ ಸಾಧನೆಯನ್ನು ಆಧರಿಸಿ ನೀಡಲಾಗುವುದು.”ನಿಯಮಾವಳಿಗಳ ಪ್ರಕಾರ ಪ್ರಧಾನಮಂತ್ರಿ ಕಛೇರಿಯಿಂದ  ರಾಷ್ಟ್ರಪತಿಗಳ ಮೇಜಿಗೆ ಶಿಫಾರಸು ಹೋಗುತ್ತೆ.ಅದರಲ್ಲಿನ ಯೋಗ್ಯರನ್ನು ಅವರು ಆಯ್ಕೆ ಮಾಡಬೇಕು. ಇದೇ ನಿಯಮಗಳ ಪರಿಧಿಯಲ್ಲಿ ಆದರೆ ಅರ್ಹತೆಯ ಚೌಕಟ್ಟಿನ ಹೊರಗೆ ನಿಂತು ಪ್ರಶಸ್ತಿ ಪಡೆದವರ ಬಗ್ಗೆ ತಿಳಿಯುತ್ತಾ ಹೋಗೋಣ.

                   ಇಲ್ಲಿಯವರೆಗೆ ಒಟ್ಟು  45  ಜನರಿಗೆ ಭಾರತರತ್ನ ಲಭಿಸಿದ್ದು ಅದರಲ್ಲಿ ಮೂರು ಜನ ಒಂದೇ ಕುಟುಂಬಕ್ಕೆ ಸೇರಿದವರೆಂಬ ವಿಷಯ ಎಲ್ಲರನ್ನೂ ಈ ಪ್ರಶಸ್ತಿಯತ್ತ ಕುತೂಹಲದಿಂದ ನೋಡುವ ಹಾಗೆ ಮಾಡಿದೆ. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಒಂದೇ ಕುಟುಂಬಕ್ಕೆ ಸೇರಿದ ಆ ಮೂವರು. ಇದರ ಬಗ್ಗೆ ತಿಳಿಯಲೇ ಬೇಕೆಂದು ಪಟ್ಟು ಹಿಡಿದು ಒಬ್ಬರು RTIಮೊರೆ ಹೋದರು. ಅದಕ್ಕೆ RTI ಉತ್ತರಿಸಿದ್ದು ಪ್ರಧಾನಿ ಕಛೇರಿಯಿಂದಲೇ ಈ ಶಿಫಾರಸು ಬಂದಿದ್ದು ಅವರ ಸಾಧನೆಗಳ ಆಧಾರದ ಮೇಲೆ ಆ ಪ್ರಶಸ್ತಿ ಪ್ರಧಾನ ಮಾಡಿದ್ದೇವೆ.ಸರಿ ಪ್ರಧಾನಿ ಕಛೇರಿಯಿಂದಲೇ ಶಿಫಾರಸು ಬಂದಿದ್ದೂ ನಿಜ. ಆದರೆ ನೆಹರೂ ಅವರಿಗೆ ಪ್ರಶಸ್ತಿ ಸಿಕ್ಕದ್ದು 1955ರಲ್ಲಿ ಆಗ ಪ್ರಧಾನಿ ಹುದ್ದೆಯಲ್ಲಿ ಇದ್ದವರೂ ಅವರೆ! . ಅಂದರೆ ಅವರೆ ಅವರ ಹೆಸರನ್ನು ಶಿಫಾರಸು ಮಾಡಿಕೊಂಡರೆ? ಇನ್ನು ಶ್ರೀಮತಿ ಇಂದಿರಾ ಗಾಂಧಿಯವರು ಈ ಅಪವಾದಕ್ಕೆ ಹೊರತಾಗಿಲ್ಲ.1971ರಲ್ಲಿ ಪ್ರಧಾನಿಯಾದ ಇಂದಿರಾ ಗಾಂಧಿಯವರು ಇಂದಿರಾ ಗಾಂಧಿಯವರಿಗೆ ಪ್ರಶಸ್ತಿ ನೀಡಬೇಕೆಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲಾಗಿ ಇಂದಿರಾಗಾಂಧಿಯವರ ಸಾಧನೆಯನ್ನು ಪರಿಶೀಲಿಸಿ ಪ್ರಧಾನಿಯವರಾದ ಶ್ರೀಮತಿ ಇಂದಿರಾಗಾಂಧಿಯವರ ಶಿಫಾರಸಿನ ತರುವಾಯ ಅವರಿಗೆ ಪ್ರಶಸ್ತಿ ನೀಡಲಾಯಿತು. ಇನ್ನು ಇಷ್ಟಕ್ಕೇ ಸುಮ್ಮನಿರದ ಆ ವ್ಯಕ್ತಿ ಯಾವ ಸಾಧನೆಗೆ ಮೆಚ್ಚಿ ಈ ಇಬ್ಬರಿಗೂ ಪ್ರಶಸ್ತಿ ಕೊಟ್ಟಿರಿ ಅಂಥ ಮತ್ತೊಮ್ಮೆ RTIಮೊರೆ ಹೋಗುತ್ತಾರೆ. ಆಗ RTI ಈ ಸಾಧಕಧ್ವಯರ ಸಾಧನೆಯನ್ನು  ಪಟ್ಟಿ ಮಾಡುತ್ತೆ. ನೆಹರು ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶಕ್ಕೆ ಕೊಟ್ಟಿರುವ ಕೊಡುಗೆ ಮತ್ತು ಪ್ರಧಾನಿಯಾಗಿ ದೇಶ ಸೇವೆ ಸಲ್ಲಿಸಿದ್ದಕ್ಕೆ ಈ ಪ್ರಶಸ್ತಿ ಕೊಟ್ಟಿದ್ದೇವೆ ಎಂದು ಹೇಳಿ ಬಿಟ್ಟಿತು.  ಅದನ್ನು ಒಪ್ಪಿಕೊಳ್ಳೋಣ ಆದರೆ ನೆಹರೂ ಅವರಿಗೆ ತಮ್ಮ ಸುತ್ತಲೂ ಇರುವ ಹಲವು ಸ್ವಾತಂತ್ರ್ಯ ಹೋರಾಟಗಾರರು ಕಾಣದೇ ಹೋದರೆ? ಅಥವಾ ಅವರೆಲ್ಲರಿಗಿಂತ ತಮಗೆ ತಾವೇ ಶ್ರೇಷ್ಟರಾಗಿ ಕಂಡರೆ?  ಇಂದಿರಾ ಅವರಿಗೆ 1971ರಲ್ಲಿ ಭಾರತ ಪಾಕಿಸ್ತಾನದ ಯುದ್ಧದಲ್ಲಿ ದೇಶಕ್ಕೆ ಜಯ ತಂದು ಕೊಟ್ಟ ಸಾಧನೆಯ ಮೇರೆಗೆ ಕೊಡುತ್ತಿದ್ದೇವೆ.ಅದಲ್ಲದೇ ಅವರೂ ಕೂಡಾ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು Wikipedia  ಹೇಳುತ್ತೆ. ಯುದ್ಧ ನಡೆದಿದ್ದು ಡಿಸೆಂಬರ್ 1971ರಲ್ಲಿ. ಇಂದಿರಾ ಅವರಿಗೆ ಪ್ರಶಸ್ತಿ ಸಿಕ್ಕದ್ದು ಅದೇ ವರ್ಷ ಅಂದರೆ ಯುದ್ಧ ನಡೆದು ಗೆದ್ದ ತಕ್ಷಣ ಪ್ರಶಸ್ತಿಗೆ ಶಿಫಾರಸು ಹೋಯಿತೆ?ಅಥವಾ ಮೊದಲೇ ಹೋಗಿದ್ದರೆ ಇಂದಿರಾ ಅವರಿಗೆ ಯುದ್ಧ ನಡೆಯುವುದು ಮತ್ತು ಯುದ್ಧದಲ್ಲಿ ಗೆಲ್ಲುವುದು ಮೊದಲೇ ಗೊತ್ತಿತ್ತೆ?   ರಾಜೀವ್ ಗಾಂಧಿ ವಿಷಯಕ್ಕೆ ಬರೋಣ 1991ರಲ್ಲಿ ರಾಜೀವ್ ಗಾಂಧಿಗೆ ಮರಣೋತ್ತರವಾಗಿ ಪ್ರಶಸ್ತಿ ಸಿಕ್ಕಾಗಲೂ ದೇಶದಲ್ಲಿ ವಿವಾದಗಳು ಎದ್ದವು. ಆಗ ಜನರ ಬಾಯಿ ಮುಚ್ಚಿಸಲು ಮತ್ತೊಬ್ಬರು ಶ್ರೇಷ್ಟ ವ್ಯಕ್ತಿಗೆ ಮರಣೋತ್ತರ ಪ್ರಶಸ್ತಿ ಕೊಟ್ಟರು. ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬ್ ಬಾಯಿ ಪಟೇಲ್ (1991). ನೀವೇ ಹೇಳಿ ರಾಜೀವ್ ಗಾಂಧಿ ಮತ್ತು ಪಟೇಲ್ ಅವರ ಸಾಧನೆಯನ್ನು ಮತ್ತು ದೇಶಸೇವೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿದರೆ ಯಾರ ಸಾಧನೆ ಹಿರಿದು? ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಪಟೇಲ್ ನೆಹರೂ ಆದಿಯಾಗಿ ರಾಜೀವ್ ಗಾಂಧಿಯವರೆಗೆ ಎಲ್ಲರೂ ಕಾಂಗ್ರೆಸ್ಸಿಗರೇ.  ನೆಹರು ತಾವು ಪ್ರಶಸ್ತಿ ಪಡೆಯುವಾಗ ಅವರಿಗೆ ಪ್ರಧಾನಿ ಹುದ್ದೆಯನ್ನು ಸರಿಸಿಟ್ಟ ಪಟೇಲ್ ಅವರು ನೆನಪಾಗಲಿಲ್ಲವೇ?  ಅದಲ್ಲದೆ ರಾಜೀವ್ ಮರಣ ಹೊಂದಿದ ಕೆಲವೇ ತಿಂಗಳಲ್ಲಿ ಅವರಿಗೆ ಪ್ರಶಸ್ತಿ ಘೋಷಿಸಿದ ಸರ್ಕಾರ ಪಟೇಲ್ ತೀರಿ ಹೋಗಿ ಹಲವು ದಶಕಗಳಾದರೂ ಅವರಿಗೆ ಗೌರವಿಸದೇ ಇದ್ದದ್ದು  ಕೃತಘ್ನತೆಗೆ ಸಾಕ್ಷಿಯಾಗಿದೆ.  ರಾಜೀವ್ ಗಾಂಧಿ 5 ವರ್ಷ ಪ್ರಧಾನಿಯಾಗಿದ್ದೇ ಸಾಧನೆಯಾದರೆ ಪ್ರಧಾನಿಯಾದ ಎಲ್ಲರಿಗೂ ಕೊಡಬಹುದಿತ್ತಲ್ಲವೇ? ರಾಜೀವ್ ತಮ್ಮ ಹೆಸರನ್ನು ತಾವೇ ಘೋಷಿಸಿಕೊಳ್ಳದಿರುವುದು ಒಂದು ಸಾಧನೆಯೆಂದು ಪರಿಗಣಿಸಬಹುದು ಅಷ್ಟೆ.1989 ರಲ್ಲಿ ತಮಿಳುನಾಡಿನ MGR, 1991 ರಲ್ಲಿ ಅಂಬೇಡ್ಕರ್ ಅವರಿಗೆ ಪ್ರಶಸ್ತಿ ದಕ್ಕಿತ್ತು ಮತ್ತು1977ರಲ್ಲಿ ಕಿಂಗ್ ಮೇಕರ್ ಎಂದೆ ಪ್ರಖ್ಯಾತರಾದ ಕೆ.ಕಾಮರಾಜ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂವರು ಮಹಾನ್ ಸಾಧಕರೆ ಆದರೆ ಅವರ ಸಾಧನೆ ಚುನಾವಣೆ ಇದ್ದ ಸಂದರ್ಭದಲ್ಲಿ ನೆನಪಾಗಿದ್ದು ಕಾಕತಾಳೀಯವೋ ರಾಜಕೀಯ ಹುನ್ನಾರವೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

              ವಾಜಪೇಯಿಯವರು ಪ್ರಧಾನಿಯಾದಾಗ ಕಾರ್ಗಿಲ್ ಯುದ್ಧವನ್ನು ಎದುರಿಸಿ ಗೆದ್ದಾಗ ಬಿ ಜೆ ಪಿ ಅಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕರೂ ಕೂಡಾ ವಾಜಪೇಯಿಯವರಿಗೆ ಭಾರತರತ್ನ ಸಿಗಬೇಕೆಂದು ಒತ್ತಾಯಿಸಿತು. ಆಗ ವಾಜಪೇಯಿ ನಾನೇ ಪ್ರಧಾನಿಯಾಗಿ ನಾನೇ ಪ್ರಶಸ್ತಿ ಪಡೆಯುವುದು ಸಮಂಜಸಕರವಲ್ಲ.ಅಷ್ಟಕ್ಕೂ ನಾನು ಭಾರತದ ಪ್ರಧಾನಿಯಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಅಷ್ಟೆ ಎಂದು ಅವರು ಪ್ರತಿಕ್ರಿಯಿಸಿದರು. ಅದಲ್ಲದೆ ವಾಜಪೇಯಿ ಸರ್ಕಾರವಿದ್ದಾಗ ಶ್ಯಾಮ್ ಪ್ರಸಾದ್ ಮುಖರ್ಜಿ, ಸಾವರ್ಕರ್, ದೀನದಯಾಳ್ ಉಪಾಧ್ಯಾಯ ಅವರ ಹೆಸರುಗಳು ಪದೇ ಪದೇ ಕೇಳಿ ಬಂದರೂ ವಾಜಪೇಯಿ ತಮ್ಮ ಸ್ವಂತ ಪಕ್ಷದ ಹಿನ್ನಲ್ಲೆಯಿದ್ದವರನ್ನು ಹೆಸರಿಸದೆ ಇದ್ದದ್ದು ಅವರು ಪ್ರಶಸ್ತಿಗೆ ಕೊಟ್ಟ ಗೌರವವೇ ಸರಿ. ಎಲ್.ಕೆ. ಆಡ್ವಾಣಿ ವಾಜಪೇಯಿಯವರ ಹೆಸರನ್ನು ಮನಮೋಹನ ಸಿಂಗ್ ಅವರ ಮುಂದೊಮ್ಮೆ ಇಟ್ಟಿದ್ದರು.ಆದರೆ ಆ ಪ್ರಶಸ್ತಿ ಲಭಿಸಿದ್ದು ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆಯೇ. ವಾಜಪೇಯಿಯವರಿಗೆ ಪ್ರಶಸ್ತಿ ಬಂದ ತಕ್ಷಣ ಕಾಂಗ್ರೆಸ್ ಪಕ್ಷದ ಹಲವರು ವಾಜಪೇಯಿ ಯೋಗ್ಯ ವ್ಯಕ್ತಿ ಎಂದು ಹೇಳಿಕೆ ಕೊಡುತ್ತಿರುವಾಗ ಕರ್ನಾಟಕದ ಒಬ್ಬ ಕಾಂಗ್ರೆಸ್ಸಿಗ ಬಿ ಜೆ ಪಿ ಮನಸ್ಸು ಮಾಡಿದರೆ ಗೊಡ್ಸೆಗೂ ಕೊಡುತ್ತಾರೆ ಎಂದು ಹೇಳಿದ್ದ ಬಹುಷಃ ಅವರ ಹಿರಿಯರು ಪ್ರಶಸ್ತಿ ಪಡೆದ ದಾರಿ ಅವರಿಗೆ ಗೊತ್ತಿಲ್ಲ ಅನಿಸುತ್ತೆ. ವಾಜಪೇಯಿಯವರಿಗೆ ಅತ್ಯುತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿ ಸಿಕ್ಕದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆ ಎಂಬುದನ್ನು ಮರೆಯಬಾರದು.

           ಇನ್ನು ಪ್ರಶಸ್ತಿ ಪಡೆದು ಪ್ರಶಸ್ತಿಗೇ ಗೌರವ ತಂದುಕೊಟ್ಟವರೆಂದರೆ ಸಿ.ವ್ಹಿ.ರಾಮನ್, ಸರ್ವಪಲ್ಲಿ ರಾಧಾಕೃಷ್ಣನ್, ಸರ್ ಎಮ್.ವಿಶ್ವೇಶ್ವರಯ್ಯ, ಬಾಬು ರಾಜೇಂದ್ರ ಪ್ರಸಾದ್, ಲಾಲ್ ಬಹಾದ್ದೂರ್ ಶಾಸ್ತ್ರಿ (ಗಮನಿಸಿ ಮರಣೋತ್ತರ) , ಅಬ್ದುಲ್ ಕಲಾಮ್,ಜಯಪ್ರಕಾಶ ನಾರಾಯಣ್, ಬಿಸ್ಮಿಲ್ಲಾ ಖಾನ್,ಭೀಮಸೇನ್ ಜೋಷಿ, ಸಿ.ಎನ್.ಆರ್. ರಾವ್ . ಇನ್ನು ಮದರ್ ಥೆರೆಸಾ, ನೆಲ್ಸನ್ ಮಂಡೆಲಾ ಎಂಬ ಇಬ್ಬರು ವಿದೇಶಿಗರಿಗೂ ಪ್ರಶಸ್ತಿ ಕೊಟ್ಟು ಭಾರತ ಸಾಧನೆಯನ್ನು ಗುರುತಿಸುವಾಗ ಗಡಿಯ ಸಂಕುಚಿತತೆಯಲ್ಲಿ ಬಂಧಿತವಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತು. ಸಚಿನ್ ತೆಂಡುಲ್ಕರ್ ಕ್ರೀಡಾ ಸಾಧನೆಗೆ ಪುರಸ್ಕೃತರಾದ ಮೊದಲಿಗರು. ದ್ಯಾನ್.ಚಂದ್ ಅವರ ಹೆಸರು ಪದೇ ಪದೇ ಕೇಳಿಬರುತ್ತಿದೆ.

ವಾಜಪೇಯಿಯವರು ಪ್ರಶಸ್ತಿಗೆ ಯೋಗ್ಯರು ಎಂದು ಗುಣಗಾನ ಮಾಡಿ ನೆಹರು,ಇಂದಿರಾ,ರಾಜೀವ್ ಅವರನ್ನು ಅರ್ಹತೆಯ ಒರೆಗೆ ಹಚ್ಚಿದ್ದಕ್ಕೆ ನನ್ನನ್ನು ಆರೆಸ್ಸೆಸ್ಸಿಗ,ಚಡ್ಡಿ, ಬಿಜೆಪಿಯವ,ಕೇಸರಿ ಪಡೆಯವ ಅಂದರೆ ಅದು ನಿಮ್ಮ ವೈಚಾರಿಕ ದೃಷ್ಟಿಕೋನದ ಸಂಕುಚಿತತೆ ಅಷ್ಟೆ. ಯಾಕೆಂದರೆ ಕಾಂಗ್ರೆಸ್ ಪಕ್ಷಕ್ಕೇ ಸೇರಿದ ಪ್ರಸ್ತುತ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ತಮ್ಮ ಅಧಿಕಾರವಧಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದು ಹಲವು ಭಾಷೆಗಳನ್ನು ಸುಲಲಿತವಾಗಿ ಮಾತಾಡುತ್ತಿದ್ದ ಪಿ.ವ್ಹಿ ನರಸಿಂಹರಾವ್ ಅವರಿಗೆ ಈ ಪ್ರಶಸ್ತಿ ಸಿಕ್ಕರೆ ನನಗಷ್ಟೇ ಅಲ್ಲ ಇಡೀ ದೇಶಕ್ಕೆ ಹೆಮ್ಮೆಯ ವಿಚಾರ. ಇನ್ನೊಂದು ಒಗಟು ಹೇಳಲು ಬಯಸುತ್ತೇನೆ ಅದೇನೆಂದರೆ “ಪ್ರಣಬ್ ಮುಖರ್ಜಿ ರಾಜಕೀಯ ರಂಗದ ರಾಹುಲ್ ದ್ರಾವಿಡ್” ಒಗಟನ್ನು ನೀವೇ ಬಿಡಿಸಿಕೊಳ್ಳಿ. ಕೊನೆಯದಾಗಿ ಒಂದು ಹೆಸರಿದೆ ಆ ಹೆಸರು ಪದೇ ಪದೇ ಶಿಫಾರಸಾದರು ಪ್ರಶಸ್ತಿ ಪಡೆಯದೆ ಮರಳಿದೆ. ಆ ವ್ಯಕ್ತಿಯ ಹೆಸರನ್ನು ಪ್ರತಿ ಭಾಷಣದಲ್ಲೂ ಬಳಸದ ಪಕ್ಷಗಳಿಲ್ಲ. ಆದರೆ ಅವರಿಗೆ ಗೌರವ ಸಲ್ಲಿಸದ ಆರು ದಶಕಗಳ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಹಾಗೂ ಇತ್ತೀಚೆಗೆ ಆಡಳಿತಕ್ಕೆ ಬಂದ ಬಿ.ಜೆ.ಪಿ ಸರ್ಕಾರ ಎರಡೂ ಕೃತಘ್ನ ಸರ್ಕಾರಗಳೆ, ಅದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ.SMS ಪೋಲ್ ನಡೆಸಿ ಹಿಂದೂ ದೇವತೆಗಳ ಆದಿಯಾಗಿ ಭಾರತ ಮಾತೆಯವರೆಗೆ ನಗ್ನವಾಗಿ ಚಿತ್ರಿಸಿದ ಎಮ್.ಎಫ್.ಹುಸೇನ್ ಅವರನ್ನು ಭಾರತರತ್ನಕ್ಕೆ ಶಿಫಾರಸು ಮಾಡಿದ NDTV ಎಂಬ ಸ್ವಘೋಷಿತ ಶ್ರೇಷ್ಟ ಚಾನಲ್’ನವರಿಗೂ ಅದೇ ಭಾರತಾಂಬೆಯನ್ನು ಸಂಕೋಲೆಯಿಂದ ಮುಕ್ತಿಗೊಳಿಸಿದ ಗಾಂಧಿ ನೆನಪಾಗಲಿಲ್ಲ. ದೇಶದ ಸ್ವಾತಂತ್ರ್ಯಕ್ಕಿಂತ ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯ ಹೆಚ್ಚೇ? ಅದೆಲ್ಲ ಬಿಡಿ ಗಾಂಧಿ ಅವರ ಹೆಸರು ಅವರ ಮಾನಸಪುತ್ರ ನೆಹರೂ ಅವರಿಗೇ ನೆನಪಾಗಿಲ್ಲ.ಇನ್ನು ಈಗ ವಿರಾಟ್ ಪ್ರಶಸ್ತಿಗೆ ಅರ್ಹರೇ? ಎಂಬುದನ್ನು ನೀವೇ ನಿರ್ಧರಿಸಿ.

-ರಾಹುಲ್ ಹಜಾರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!