ಅಂಕಣ

”ಮೊದಲು ನೀನಾಗು”

ನನಗೆ ಚೆನ್ನಾಗಿ ನೆನಪಿದೆ. ಅಂದು ನರಕ ಚತುರ್ದಶಿ.ರೂಮಿನಲ್ಲಿ ಫ್ಯಾನು ಹಾಕುವ ಅವಶ್ಯಕತೆಯೆ ಇಲ್ಲದಂಥ ತಂಪಾದ ರಾತ್ರಿ.ಮನೆಯಲ್ಲಿ ಮಾಡಿದ್ದ ಕಜ್ಜಾಯಗಳನ್ನೆಲ್ಲ ತಿಂದು ಮುಗಿಸಿ ಪ್ರತಿದಿನವೂ ಹೀಗೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಒಳಗೊಳಗೇ ಮರುಗುತ್ತಿದ್ದೆ.ಊಟ ಮುಗಿಸಿ ಗಾಳಿಯಾಡಲೆಂದು ಹೊರಗೆ ಬಂದೆ.ಗಡಿಯಾರ ಹನ್ನೆರಡಾಯಿತೆಂದು ಗುಟುರು ಹಾಕಿದರೂ ಪಟಾಕಿಗಳು ಮೌನವಹಿಸಲಿಲ್ಲ. ಬಟ್ಟೆಗೆ ಕೋಲು ಸಿಕ್ಕಿಸುವ ಆರಾಮ ಕುರ್ಚಿಯಲ್ಲಿ ಕುಳಿತು ಆಗಸವನ್ನೇ ದಿಟ್ಟಿಸಿ ನೋಡುತ್ತಿದ್ದೆ.ಆಕಾಶದ ತಾರೆಗಳೊಡನೆ ರಂಗಿನ ಸಿಡಿಮದ್ದುಗಳು ರಾತ್ರಿಯ ಮೆರಗು ಹೆಚ್ಚಿಸಿದ್ದವು.ಅದು ಯಾವಾಗ ಅಲ್ಲಿಯೇ ನಾನು ಮಲಗಿಬಿಟ್ಟೆನೋ,ತಿಳಿಯಲೇ ಇಲ್ಲ.ಥಟ್ಟನೆ ಎಚ್ಚರವಾಯಿತು..! ಕನಸು ಅತ್ಯಂತ ಭೀಕರವಾದುದಾಗಿತ್ತು. ಏಕೆಂದರೆ ಅದು ಭೂತದ್ದಲ್ಲ. ಭವಿಷ್ಯದ್ದಾಗಿತ್ತು.

ಕನಸಿನಲ್ಲಿ ನಾನೋರ್ವ ಹಣ್ಣಾದ ಮುದುಕ.ಏಳಲು ಕೂರಲೂ ಆಗದ ಕೀರಲು ಧ್ವನಿಯುಳ್ಳ ವ್ಯಕ್ತಿ. ಕನ್ನಡಿಯನ್ನು ನೋಡಲೂ ಕೂಡ ಭಯವೆನಿಸುವ ರೀತಿಯ ಜಡವಾದ ದೇಹ.ಹಾಗೆಯೆ ಕಷ್ಟಪಟ್ಟು ಎದ್ದು ನನ್ನ ಮನೆಯ ಅಲಮಾರಿಯಲ್ಲಿಟ್ಟಿದ್ದ ಭಾವಚಿತ್ರಗಳ ಆಲ್ಬಮ್ಮನ್ನು ತೆಗೆದೆ.ಎಲ್ಲವೂ ಖಾಲಿ ಖಾಲಿ.ಅಚ್ಚರಿಯಾಯ್ತು..!ಹೊರಗೆ ಬಂದೆ.ಮನೆಯ ಕೋಣೆ ಕೋಣೆಗಳಲ್ಲಿ ಯಾವುದಾದರೂ ಜೀವವಿದೆಯೆ ಎಂದು  ಹುಡುಕಿದೆ.ನನ್ನವರಾರೂ ಕಾಣಲಿಲ್ಲ. ಎಲ್ಲ ಇತಿಹಾಸದ ಅಧ್ಯಾಯಗಳಂತೆ ಮಾಯವಾಗಿ ಹೋದಂತ ಭಾವನೆ.ಕೈಲಿಡಿದ ಕೋಲೊಂದನು ಬಿಟ್ಟು ಅಲ್ಲಿದ್ದುದು ನಾನೊಬ್ಬನೇ;ಒಬ್ಬನೇ.ಇಷ್ಟು ದಿನ ನಾನು ಜೀವಿಸಿದ್ದಾದರೂ ಹೇಗೆ? ಯಾವುದಕ್ಕಾಗಿ?ಈಗೇನು ಮಾಡುವುದು?ಅಂತಹ ಅಸಹಾಯಕತೆಯನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ.

ಥಟ್ಟನೆ ಎಚ್ಚರವಾದುದು ಆಗಲೇ..!ಕೈ ಭಯದಲ್ಲಿ ಆರಾಮ ಕುರ್ಚಿಯ ಕೋಲನ್ನು ಭದ್ರವಾಗಿ ಹಿಡಿದಿತ್ತು.ಕಣ್ತೆರೆದು ನೋಡಿದೆ.ಎಲ್ಲವೂ ನನ್ನದು ನನ್ನದು ಎಂದು ಖುಷಿಯಿಂದ ಬೀಗಿದೆ.ಆಗಲೆ ಈ ಸಂಭ್ರಮವೆಲ್ಲ ಕ್ಷಣಿಕ ಎಂದು ನೆನಪಾಯಿತು.ನಾಳೆ ನಾನು‌ ಇಲ್ಲಿಂದ ಮತ್ತೆ ಬೆಂಗಳೂರಿಗೆ ಹೋಗಲೇ ಬೇಕು.ಆಮೇಲೆ ಮತ್ತದೇ ಏಕಾಂತ,ಮತ್ತೆ ಅದೇ ದಣಿವು.ಕಣ್ಣಿಗೊಂದು ಕನ್ನಡಕ ಧರಿಸಿ ಕಂಪ್ಯೂಟರಿನೊಡನೆ ದಿನವಿಡೀ ಮಾತನಾಡಬೇಕು.ಬೆಳಿಗ್ಗೆ ಒಂಭತ್ತಕ್ಕೆ ಆಫೀಸಿಗೆ ಬಂದರೆ ರಾತ್ರಿ ಏಳಾಗುವವರೆಗೂ ಗಡಿಯಾರವನ್ನು ನೋಡುತ್ತ ಉಳಿಯುವುದನ್ನು ನೆನೆದು ಏನನ್ನೋ ಕಳೆದುಕೊಂಡಂಥ ಭಾವ.ಸುಸ್ತಾಗಿ ರೂಮಿಗೆ ಬಂದರೆ ಸ್ವಾಗತಿಸಲು ಬಿಳಿಗೋಡೆಗಳನ್ನು ಬಿಟ್ಟರೆ ಮತ್ತಿನ್ಯಾರೂ ಇಲ್ಲ.ಕಣ್ಣಿಗೆ ಸರಿಯಾದ ನಿದ್ರೆ ಇಲ್ಲ,ತಿನ್ನಲು ರುಚಿಯಾದ ಊಟವಿಲ್ಲ.ಮನಸ್ಸಿನ ಬಿಸಿಲಿಗೆ ಬಿಸಿಯಾದ ಉಸಿರು ಒಂದೇ ನನ್ನ ಅಂತರಾಳವನ್ನರಿತಿತ್ತು.

****

ಮರುದಿನ ಬೆಳಿಗ್ಗೆ ಬೆಂಗಳೂರಿಗೆ ನಾನು ಹೊರಟು ನಿಂತೆ. ಎಂದಿನಂತೆ ಅತ್ತ ಮಲಗಲೂ ಇತ್ತ ಕೂರಲು ಆಗದ ಬಸ್ಸೊಂದರಲ್ಲಿ ಹತ್ತಿ ಕುಳಿತು ಕೊನೆಗೂ ನನ್ನ ಕರ್ಮಭೂಮಿಗೆ ಬಂದಿಳಿದೆ.ರೂಮಿಗೆ ತಲುಪಿ ಅಮ್ಮ ನೀಡಿದ್ದ ತಿಂಡಿಯ ಡಬ್ಬಿಯು,ಅದನ್ನು ತೆರೆದಕೂಡಲೇ ಪ್ರೀತಿಯ ಸುಗಂಧವನ್ನು ಬೀರಿತು.ಅದನ್ನು ನೋಡಿ ನಾನು ಈ ಜೀವನದಿಂದ ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಅರಿವು ನನಗಾಯಿತು.ಜತೆಗೆ ತಂದ ಹಳೆಯ ಫೋಟೋಗಳು ತುಟಿಯಂಚಲ್ಲಿ ಮಂದನಗೆ ತರಿಸಿದವು. ಮುಂದೆ ದೊಡ್ಡವನಾದ ಮೇಲೆ ನಾನು ಏನಾಗಬೇಕೆಂದಿದ್ದೆ,ಕಾಲೇಜು ಮೆಟ್ಟಿಲು ಏರಿದ ನಂತರ ನನ್ನ ಕವನ ಕಥೆ ಬರೆಯುವ ಹುಚ್ಚು ಯಾವ ರೀತಿಯದ್ದಾಗಿತ್ತು ಎಲ್ಲವನ್ನೂ ನೆನೆದೆ.ಅವೆಲ್ಲವೂ ಒಮ್ಮೆ ನನ್ನ ಜೀವನದ ಅಂಗವಾಗಿದ್ದುವೇ ಎಂಬಷ್ಟು ಬದಲಾಗಿರುವುದನ್ನು ಕಂಡು ಅಚ್ಚರಿಗೊಂಡೆ.ನಿಜ! ಪ್ರತಿದಿನ ಬೆಳಗ್ಗೆ ನಾನು ಏಳುವಾಗ ಕಣ್ಣು ತುಂಬಾ ವಿಷಾದದೊಡನೆ ಏಳುತ್ತಿದ್ದೆ.

ಎಂದಿನಂತೆ ನನ್ನ ಜಿಕ್ಸರ್ ಬೈಕನ್ನೇರಿ ನಾನು ಎಂದಿಗೂ ತಿಂಡಿ ತಿನ್ನುವ ಕ್ಷೀರ ಸಾಗರ ಹೋಟೆಲಿಗೆ ಬಂದೆ.ಆಫೀಸಿಗೆ ತಡವಾಗಿ ಹೋಗುತ್ತದೇನೋ ಎಂಬ ಭರದಲ್ಲಿ ಗಬಗಬನೆ ‘ರೈಸ್ ಬಾತ್’ ತಿಂದು ಹೆಲ್ಮೆಟ್ಟು ಹಾಕಿಕೊಳ್ಳುವಷ್ಟರಲ್ಲಿ ಓರ್ವ ಮುದುಕ ನನ್ನನ್ನು ತಡೆದ.ಅವನನ್ನು ನೋಡಿ ಯಾರಿಗಾದರೂ ಕನಿಕರ ಬರುವಂತಿತ್ತು. ಮಣ್ಣು ಹಿಡಿದು ನೀರು ಕಾಣದ ಬಟ್ಟೆ,ಬಿಳಿಯಾದರೂ ದಟ್ಟವಾಗಿ ಸಲೂನಿನ ಮೆಟ್ಟಿಲು ಹತ್ತದ ಕೂದಲುಗಳು.ಅತ್ಯಂತ ಕೃಶವಾದ ದೇಹ,ಸುಕ್ಕುಗಟ್ಟಿದ ಮುಖ‌.”ಕೋಡಿಗೆಹಳ್ಳಿ ಗೇಟಿನವರ್ಗೂ ಬುಟ್ಬುಡಪ್ಪ” ಎಂದು ಅವನು ಕೇಳುತ್ತಲೇ ನನಗೆ ಇಲ್ಲವೆನ್ನಲಾಗಲಿಲ್ಲ.ಹೆಬ್ಬಾಳದ ತನಕ‌ ಮಾತ್ರ ಬರುವದಾಗಿ ನಾನು ಹೇಳಿದ ಬಳಿಕ ಮುದುಕು ಮರುಮಾತಿಲ್ಲದೇ ಒಪ್ಪಿಕೊಂಡ.ನಾನೂ ಗಾಡಿಯನ್ನು ಶುರುಮಾಡಿದೆ.

“ಗಟ್ಟಿಯಾಗಿ ಹಿಡ್ಕೊ ತಾತಾ,ತುಂಬಾ ಜೋರಾಗಿ ಹೋಗ್ತೀನಿ”ನಾನು ಹೇಳಿದೆ.

”ಅಯ್ಯೋ,ಏನಾದರೆ ಏನಂತೆ ನನಗೇನು ಹೆಂಡತಿನಾ ಮಕ್ಕಳಾ ಮರೀನಾ?”ಅಜ್ಜ ಲಘುವಾಗಿಯೇ ಹೇಳಿದ.

“ಓ,ಸಾರಿ ತಾತಾ’ ಅಜ್ಜ ತಮ್ಮವರನ್ನೆಲ್ಲ ಕಳೆದುಕೊಂಡರೂ ಗಟ್ಟಿಯಾಗಿ ಜೀವ ಹಿಡಿದಿಟ್ಟು‌ ಕೊಂಡಿರುವದನ್ನು ಕಂಡು ಅಚ್ಚರಿಯಾಯಿತು.

” ನೀನ್ಯಾಕಪ್ಪಾ ಸಾರಿ ಕೇಳ್ತೀಯಾ?ನೀನಂದಕೊಂಡಂಗೇನೂ ಆಗಿಲ್ಲ.ನನಗಿನ್ನೂ ಮದ್ವೆನೇ ಆಗಿಲ್ಲ ” ಅಜ್ಜ ನಗುತ್ತಾ ಹೇಳಿದ.

ಅಬ್ಬಾ.!!ನಾನು ಬದುಕುತ್ತಿರುವ ಒಂಟಿ ಜೀವನವೇ ಸಾಗಿಸಲು ಭಾರವಾಗಿ ಹೀಗಿರುವಾಗ ಈ ಜೀವ ಜೀವಮಾನವೆಲ್ಲ ಅದಿನ್ನೆಷ್ಟು ನೊಂದಿರಬಹುದು!!ನಾನು ಮನಸ್ಸಿನಲ್ಲಿಯೇ ಮರುಗಿದೆ.ನಾನು ದಿನವೂ ತಿನ್ನುವ ಹೋಟೆಲಿನಲ್ಲಿ ಕೆಲಸಕ್ಕೆ ಇದ್ದ ಅಜ್ಜನಿಗೆ ತಮ್ಮವರೆಂದು ಕರೆದುಕೊಳ್ಳಲೂ ಸಹ ಯಾರೂ ಇರಲಿಲ್ಲ. ಅವನಿಗೆ ಊಟ ಹಾಗೂ ಆಶ್ರಯವನ್ನು ಹೋಟೆಲಿನವರೆ ಕೊಡುತ್ತಾರೆಂದೂ ಜತೆಗೆ ಕೈಗೆ ೨೦೦೦ ರೂ ಹಣವನ್ನೂ ಕೊಡುತ್ತಾರೆಂದು ಅಜ್ಜ ಹೇಳಿದ.ಅವನ ಮಾತಿನಲ್ಲಿ ಆತ್ಮೀಯತೆ ಇತ್ತು;ತೂಕವಿತ್ತು.ಅವನು ಎಷ್ಟೋ ವರ್ಷಗಳಿಂದ ಪರಿಚಯ ಎನ್ನುವಂತಹ ಭಾವವಿತ್ತು.ಹಾಗೆಯೇ ಅವನೊಡನೆ ಮಾತನಾಡುತ್ತಾ ಮಾತನಾಡುತ್ತಾ ಹೆಬ್ಬಾಳ ದಾಟಿ ಕೋಡಿಗೆಹಳ್ಳಿಯ ಗೇಟು ಬಂದದ್ದೂ ತಿಳಿಯಲಿಲ್ಲ.”ತುಂಬಾ ಥ್ಯಾಂಕ್ಸ್ ಕಣಪ್ಪ”ಎನ್ನುತ್ತಾ ಇಳಿದ ಮುದುಕ ಸಾವಧಾನವಾಗಿ ಮುನ್ನಡೆದ.ನಾನು ಅವನನ್ನು ನೋಡುತ್ತ ಕುಳಿತೆ.ನಡೆಯಲು ಭಾರವಾಗಿದ್ದರೂ ನಗಲು ಭಾರವೆನಿಸದ ಆ ವ್ಯಕ್ತಿ ಈ ಸಮಾಜಕ್ಕಿಂತ ಅದೆಷ್ಟು ಭಿನ್ನವೆಂದೆನಿಸಿತು.

ನನಗೆ ತುಂಬಾ ಲೇಟಾಗುತ್ತಿತ್ತು.ಇನ್ನೇನು ಬೈಕನ್ನು ತಿರುಗಿಸಿ ನಾನು ಕಿಕ್ ಹೊಡೆಯಬೇಕೆನ್ನುವುದರಲ್ಲಿ ಮುದುಕ ಕುಸಿದು ಬಿದ್ದುಬಿಟ್ಟ.ನನಗೆ ಏಕೋ ಏನೋ,ಅವನ ಜೀವದ ಮುಂದೆ ಮತ್ತಿನ್ನೇನೂ ದೊಡ್ಡದಾಗಿ ಕಾಣಲಿಲ್ಲ.ಕೂಡಲೇ ಅವನನ್ನು ಹತ್ತಿರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಿದೆ.ಆಫೀಸಿಗೆ ನಾನು ಬರದಿದ್ದರೆ ಕಂಪನಿಯೇ ಮುಳುಗಿಹೋಗುತ್ತದೆ ಎನ್ನುವ ಮಟ್ಟಿಗೆ ಬೊಬ್ಬೆ ಹೊಡೆದ ಚೀಫ್ಗೆ ದುಂಬಾಲು ಬಿದ್ದು ಅದು ಹೇಗೋ ಒಪ್ಪಿಸಿ ರಜಾ ಹಾಕಿದೆ.ಮೈಲ್ಡ್ ಹಾರ್ಟ್ ಅಟ್ಯಾಕಿನಿಂದ ಕುಸಿದು ಬಿದ್ದ ಆ ಹಣ್ಣು ಜೀವ ಅದು ಹೇಗೆ ಚೇತರಿಸಿಕೊಂಡಿತೋ ಆ ಭಗವಂತನೇ ಬಲ್ಲ.ಮೊದಲು ಎಚ್ಚರಗೊಂಡು ಆ ಮುದುಕ ನಗುತ್ತಾ,”ಯಾಕಪ್ಪಾ ನನ್ನನ್ನು ಬದುಕಿಸಿದೆ?” ಎಂದು ಕೇಳಿದ.ಆ ವ್ಯಕ್ತಿಯಲ್ಲಿ ತಾನು ಬದುಕಿದೆನಲ್ಲಾ ಎಂಬ ಸಂತೋಷವಿರಲಿಲ್ಲ.ಏಕೆಂದರೆ ಬದುಕು ಸಾವಿನ ನಡುವೆ ಆತನ ಪಾಲಿಗೆ ಹೆಚ್ಚಿನ ವ್ಯತ್ಯಾಸವಿರಲಿಲ್ಲ.ಆತನ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ.ಇನ್ನು ಆ ಮುದುಕನನ್ನು ಎಲ್ಲಿ ಕರೆದೊಯ್ಯಲಿ? ಹೋಟೆಲಿಗೆ ಕಳುಹಿಸಲು ನನಗೆ ಅಷ್ಟಾಗಿ ಮನಸ್ಸಿರಲಿಲ್ಲ.ನನ್ನ ರೂಮಿಗೆ ಕರೆದೊಯ್ದೆ.ಬೆಂಗಳೂರಿನಲ್ಲಿರುವವರೆಲ್ಲ ಮೋಸಗಾರರೆಂದು ಭ್ರಾಂತಿಯಲ್ಲಿರುವ ಮನೆಯವರಿಗೆ ಈ ವಿಷಯ ಹೇಳಲು ನನಗೆ ಮನಸ್ಸಾಗಲಿಲ್ಲ.

ದಿನಗಳು ಕಳೆದವು,ಈ ಅಜ್ಜ ಗಟ್ಟಿಯಾಗಿ ಚೇತರಿಸಿಕೊಂಡ.ಒಬ್ಬ ಒಳ್ಳೆಯ ಸ್ನೇಹಿತನಾದ‌.ಅವನನ್ನು ನಾನು ‘ಮಾದು’ ಎಂದು ಹೆಸರು ಹಿಡಿದೇ ಕರೆಯುತ್ತಿದ್ದೆ.ಬದುಕಲು ಆಸೆ ಇರದ ಆ ವ್ಯಕ್ತಿ ,ಈ ಹೊಸ ಜನುಮವನ್ನು ನನಗಾಗಿ ಮುಡಿಪಿಟ್ಟನೋ ಏನೋ.ನಾನು ಆಫೀಸಿನಿಂದ ಬರುವುದನ್ನೇ ಆ ಜೀವ ಕಾಯುತ್ತಲಿರುತ್ತಿತ್ತು.ಹೋಟೆಲಿನಲ್ಲಿ ಕೆಲಸ ಮಾಡುವವನು ಅಂದರೆ ಸುಮ್ಮನೆಯೆ? ಬರುವ ವೇಳೆಗೆ ರುಚಿರುಚಿಯಾದ ಅಡುಗೆ ಮಾಡಿ ಹಾಕುತ್ತಿದ್ದ.ಹೊರಗಡೆ ಸುತ್ತಾಡುವಾಗ ಕಂಡಕಂಡ ಹುಡುಗಿಯನ್ನು ತೋರಿಸಿ ಇವಳೇ ನಿನಗೆ ಸರಿಯಾದವಳು ಕಣೋ ಎನ್ನುತ್ತಾ ನಗು ತರಿಸುತ್ತಿದ್ದ.ಆರಾಮವಿಲ್ಲದೇ ಮಲಗಿದ್ದಾಗ ಕಾಳಜಿ ತೋರಿಸಿ ಅಮ್ಮನಾಗುತ್ತಿದ್ದ.ಅವನು ನನ್ನ ಸಿಗರೇಟಿನ ಚಟ ಬಿಡಿಸಲು ಪಟ್ಟಪಾಡು ಅಷ್ಟಿಷ್ಟಲ್ಲ.ಅವನು ಯಾವತ್ತೂ ತಾನಿರುವ ಸ್ಥಿತಿಯ ಬಗ್ಗೆ ಯೋಚಿಸಿ ಮರುಗುತ್ತ ಕೂತಿದ್ದನ್ನು ನಾನು‌ ನೋಡಿಯೇ ಇಲ್ಲ.ಏನಾದರೂ ಒಂದು ಮಾಡುತ್ತಲೇ ಇರುವ ಜಾಯಮಾನ ಅವನದು.ಇಳಿವಯಸ್ಸಿನಲ್ಲಿಯೇ ತುಂಟತನದ ಅರ್ಥ ಮರೆತ ನನಗೆ ಅವನನ್ನು ನೋಡಿ ಅಚ್ಚರಿಯಾಗುತ್ತಿತ್ತು.ಹೀಗೆಯೇ ಬಹಳಷ್ಟು ಹತ್ತಿರವಾದ ಮಾದು ಅಂದು ಕಣ್ಣೀರು ಹಾಕುತ್ತಾ ಮಗುವಾಗಿ ಹೋದ.

ಎಂದಿನಂತೆ ನಾನು ಫೋನಿನಲ್ಲಿ ನಂದಿತಾಳ ಜೊತೆ ಮಾತನಾಡುತ್ತಿದ್ದೆ.ನಂದಿತಾ ನನ್ನ ಸಹೋದ್ಯೋಗಿ.ಅವಳು ಪರಿಚಯವಾಗಿ ೬-೭ ತಿಂಗಳುಗಳೇ ಆದವು‌.ನನ್ನ ವರ್ತಮಾನದಲ್ಲಿ ಸ್ನೇಹಿತರು ಎಂದು ಕರೆಯಲು ಅವಳನ್ನು ಬಿಟ್ಟರೆ ಮತ್ತಿನ್ಯಾರೂ ಇರಲಿಲ್ಲ.ಅವಳನ್ನು ನಾನು ಹುಚ್ಚನಂತೆ ಹಚ್ಚಿಕೊಂಡಿದ್ದೆ.ಮನಸ್ಸಿನಲ್ಲಿ ನೂರು ಭಾವನೆಗಳಿದ್ದವು.ಹೇಗೆ ಹೇಳಿಕೊಳ್ಳಲಿ?ತುಂಬಾ ಪ್ರಾಕ್ಟಿಕಲ್ ಹುಡುಗಿ ಅವಳು.ತನ್ನ ಕೆರಿಯರ್’ನ ಕುರಿತು ಬಹಳಷ್ಟು ಕನಸುಗಳನ್ನು ಹೊಂದಿದವಳು.ಅವಳ ಒಡನಾಟವನ್ನು ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ.ಆಗಲೇ ಮಾದು ನನ್ನ ಬಳಿಗೆ ಬಂದು “ಅವಳು ಯಾರು?”ಎಂದು ಕೇಳಿದ. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ಫ್ರೆಂಡ್ ಎನ್ನುತ್ತಲೇ ಮಾದುವಿನ ಮುಖದಲ್ಲಿ ಮುಗುಳ್ನಗೆ ಕಂಡಿತು.ಚಿಕ್ಕ ಮಗುವಿನಂತೆ ಹಠ ಮಾಡುತ್ತಾ ಉಳಿದುದರಿಂದ ಅವನಿಗೆ ನಿಜವಾದ ವಿಷಯ ಹೇಳಲೇ ಬೇಕಾಯಿತು.”ಅವಳಿಗೆ ನಿನ್ನ ಮನಸ್ಸಿನ ವಿಷಯ ಹೇಳಿಬಿಡು” ಎಂದು ಮಾದು

ಒತ್ತಾಯಿಸಿದ್ದೇ ಒತ್ತಾಯಿಸಿದ್ದು.ಊಹೂಂ! ನಾನು ಸುತಾರಾಂ ಒಪ್ಪಲಿಲ್ಲ.ಆಗ ಮಾದು ಬೇಸರಗೊಳ್ಳುತ್ತಾ ಕೆಳಕ್ಕೆ ಕುಸಿದ.”ನಾನು ಮಾಡಿದ ತಪ್ಪನ್ನು ನೀನು ಮಾಡಬೇಡ ಕಣೋ “ಎನ್ನುತ್ತಾ ಕಣ್ಣೀರಿಟ್ಟ.

******

ಅದು ೧೯೭೧ ಇರಬೇಕು.ವಯಸ್ಸು ಇಪ್ಪತ್ತೈದಾಗಿದ್ದರೂ ನಾನು ಇನ್ನೂ ಮದುವೆಯಾಗಲಿಲ್ಲವೆಂದು ಬೆಳಿಗ್ಗೆ ಕಣ್ತೆರೆಯುತ್ತಲೇ ಬೊಬ್ಬೆ ಹೊಡೆಯುತ್ತಿದ್ದ ಅಜ್ಜಿಯ ಗೋಳು ಕೇಳಲಾರದೆ‌ ನನ್ನ ತಾಯಿ ಕೊನೆಗೂ ನನ್ನ ಜಾತಕ ಹೊರಹಾಕಿದರು.ನಮ್ಮದು ಅಡಿಕೆ ತೋಟದಿಂದ ಜೀವನ ನಡೆಸುತ್ತಿದ್ದ ಕುಟುಂಬ.ಆದ್ದರಿಂದ ಕೆಲಸ ಗೊತ್ತಿದ್ದವಳೇ ಆದರೆ ಚೆನ್ನಾಗಿರುತ್ತದೆಂದು ಅಮ್ಮನ ಆಲೋಚನೆಯಾಗಿತ್ತು.ಉಪಾಧ್ಯರ ಶಿಫಾರಸ್ಸಿನಂತೆ ನಮ್ಮೂರಿನಿಂದ ಸುಮಾರು ೫೦ ಮೈಲು ದೂರದ ಹಳ್ಳಿ ಹೊಳೆಗದ್ದೆಯ ಶಾಸ್ತ್ರಿಗಳ ಮನೆಯಲ್ಲಿ ಹೆಣ್ಣೊಬ್ಬಳಿದ್ದಾಳೆಂದು ತಿಳಿದು ನಾವು ಅಲ್ಲಿಗೆ ಹೊರಟು ನಿಂತೆವು.ಎಲ್ಲ ತಾವು ತಾವೇ ನಿರ್ಧಾರ ಮಾಡುವುದಾಗಿದ್ದರೆ ಹೆಣ್ಣು ನೋಡಲೆಂದು ನನ್ನನ್ನೇಕೆ ಕರೆದುಕೊಂಡು ಹೋದರೋ ಗೊತ್ತಿಲ್ಲ. ಅವಳು ಬಂದಳು,ಏನನ್ನೋ‌ ಕುಡಿಯೋಕೆ‌ ಕೊಟ್ಟಳು,ನನಗ್ಯಾವುದೂ ಕೂಡ ಸರಿಯಾಗಿ ನೆನಪಿಲ್ಲ.ಆದರೆ ಅವಳನ್ನು ನೋಡಿದಾಗ ನನಗೆ ಏರಿದ ನಶೆ ಮಾತ್ರ ಇನ್ನೂ ಇಳಿದಿಲ್ಲ.ನನ್ನಜ್ಜಿ ಚಿಕ್ಕವಯಸ್ಸಲ್ಲಿ ಹೇಳುತ್ತಿದ್ದ ಕಥೆಗಳಲ್ಲಿ ಬರುವ ರಾಣಿಯ ಥರ ಇದ್ದಳು ಅವಳು.ಅದೇನೋ‌ ಗೊತ್ತಿಲ್ಲ ಅವಳು ನನ್ನನ್ನು ನೋಡುತ್ತಲೇ ನಕ್ಕುಬಿಟ್ಟಳು;ನನ್ನವಳಾಗಿಬಿಟ್ಟಳು.ನನಗಿವೆಲ್ಲ ನಿಜವೋ ಸುಳ್ಳೋ ಒಂದೂ ಗೊತ್ತಾಗಲಿಲ್ಲ.

ಆಗ ಏನಾಯಿತೋ ಗೊತ್ತಿಲ್ಲ.”ಇವರ ಸಂಬಂಧ ಬೇಡ ಬಾರೋ” ಎಂದು ಕಿವಿಯಲ್ಲುಸುರುತ್ತ ನನ್ನ ತಾಯಿ ನನ್ನ ಕೈಹಿಡಿದು ಹೊರನಡೆದಳು.”ಏನಾಯಿತು ಅಮ್ಮ?” ಎಂದು ಉತ್ತರಕ್ಕಾಗಿ ಚಡಪಡಿಸುತ್ತಿದ್ದ ನನ್ನ ಮನಸ್ಸಿಗೆ ಅಮ್ಮನ‌ ಕಣ್ಣುಗಳ ಉತ್ತರ ಸಾಕಾಗಲಿಲ್ಲ.ಹೇಗೆ ಹೇಳಲಿ?ಅವಳ‌ ನಕ್ಷತ್ರ ಸರಿಯಿಲ್ಲವೇ ಅಥವಾ ವರದಕ್ಷಿಣೆಯ ಸಮಸ್ಯೆಯೇ? ಉಹೂಂ,ಒಂದೂ ತಿಳಿಯಲಿಲ್ಲ.ಮೊದಲಿನಿಂದಲೂ ತಂದೆಯಿಲ್ಲದೇ ಬೆಳೆದ ನನಗೆ ಅಮ್ಮನೇ ಎಲ್ಲಾ.ಅವಳ ನಿರ್ಧಾರಕ್ಕೆ ಎದುರಾಗಲು ಮನಸ್ಸು ಕೇಳಲಿಲ್ಲ.ಆದರೂ ಏನೋ ಒಂದನ್ನು ಕಳೆದುಕೊಂಡ ಭಾವ.ಅವಳು ನನ್ನನ್ನು ನೋಡಿ ನಕ್ಕಳು,ಅವಳಿಗೆ ನಾನು ಇಷ್ಟವೆಂದು ಪದೇ ಪದೇ ಮನಸ್ಸು ಒಳಗೊಳಗೆ ಕೂಗಿ ಹೇಳುತ್ತಲಿತ್ತು.ಆದರೆ‌‌ ಅಮ್ಮನ‌ ಮಾತಿಗೆ ಎದುರಾಡುವ‌ ಧೈರ್ಯ ನನಗಿರಲಿಲ್ಲ.ಹೇಗೋ ಧೈರ್ಯ ಮಾಡಿ ಕೂಡಲೇ ಹೊಳೆಗದ್ದೆಗೆ ಹೊರಟು ನಿಂತೆ.ಅವಳು ನೀರು ತುಂಬುವಾಗ ನೇರವಾಗಿ ಹೋಗಿ‌ ನಾನು ಬರೆದ ಪತ್ರವನ್ನು ಕೊಡುತ್ತಲೆ ಅವಳು ಮರುಮಾತಿಲ್ಲದೇ ಪತ್ರವನ್ನು ತೆಗೆದುಕೊಂಡು ಹೊರಟಳು.ಅವಳು ಆ ಪತ್ರದ ಮೇಲಿದ್ದ ಭಾವನೆಗಳಿಗೆ ಸಮ್ಮತಿಯ ಮುದ್ರೆ ಒತ್ತಿದಂತೆ ತಿರುಗಿ ಬರೆದ ಪತ್ರವನ್ನು ಕಂಡು ನನ್ನ ಖುಷಿಗೆ ಪಾರವಿರಲಿಲ್ಲ.ನಿಜ!ಅಂತಹ ಹೊಸದಾದ ಭಾವನೆಯನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿರಲಿಲ್ಲ.ಅವಳು ತನ್ನ ಜೀವನವನ್ನು ಅದು ಹೇಗೆಲ್ಲಾ ನನ್ನೊಡನೆ ಕಳೆಯಬೇಕೆಂದಿದ್ದಳು,ಅದನ್ನು ನೆನೆಸಿಕೊಂಡರೆ ಏನೋ‌ ರೋಮಾಂಚನವಾಗುತ್ತಿತ್ತು.ಆದರೆ‌ ಕಥೆಯಾಗಲಿ ಜೀವನವಾಗಲಿ ಇಷ್ಟು ಸರಾಗವಾಗಿ ನಡೆಯಲು ಸಾಧ್ಯವೇ ಇಲ‌್ಲ.

ಅಮ್ಮನಿಗೆ ಹೇಗೆಲ್ಲಾ ಮದುವೆಗೆ ಒಪ್ಪಿಸಲು ಪ್ರಯತ್ನಿಸಿ ನೋಡಿದೆ;ಸಾಧ್ಯವಾಗಲಿಲ್ಲ.ಅಮ್ಮ ನನಗೆ ಕೊಡುತ್ತಿದ್ದ‌ ಉತ್ತರಗಳೊ ನನಗೆ ಸಮಂಜಸವೆನಿಸಲಿಲ್ಲ.ಇನ್ನು ಬೇರೆ‌ ದಾರಿಯಿರಲಿಲ್ಲ.ಓಡಿಹೋಗೋಣವೆಂದು ತೀರ್ಮಾನಿಸಿ ವಾರದ ನಂತರದ ದಿನವೊಂದನ್ನು ಗೊತ್ತುಪಡಿಸಿದೆವು.ಎಲ್ಲವೂ ಸರಾಗವಾಗಿ ನಡೆದಿದ್ದರೆ ನನಗೂ ಒಂದು ಕುಟುಂಬವಿರುತ್ತಿತ್ತು.ಅದಕ್ಕೆ ಹೇಳುವುದು,ದೇವರ ಹಾವು ಏಣಿ ಆಟದಲ್ಲಿ ವಿಧಿಯೇ ಹಾವು,ವಿಧಿಯೇ ಏಣಿ.ನಾವಂದುಕೊಂಡಂತೆ ನಡೆಯಲು ಇಲ್ಲಿ ಸಾಧ್ಯವೇ ಇಲ್ಲ.

ಅಷ್ಟರಲ್ಲಿಯೇ ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದ ಅಜ್ಜಿ ತೀರಿಕೊಂಡಳು.ಅಜ್ಜಿಯ ಹೆಸರಿನಲ್ಲಿದ್ದ ಮನೆ ತೋಟದಲ್ಲಿಯೇ ನಾವು ಬದುಕು ಕಟ್ಟಿಕೊಂಡಿದ್ದಾಗಿತ್ತು.ಅವಳು ಸಾಯುತ್ತಲೇ ಹೆಸರಿಗೆ ಚಿಕ್ಕಪ್ಪ-ದೊಡ್ಡಪ್ಪ ಎಂದಿದ್ದವರು ಸಮಯ ಸಂದರ್ಭವನ್ನೂ ನೋಡದೆ ಜಮೀನಿಗಾಗಿ ತಕರಾರು ತೆಗೆದರು.ಹಣಕ್ಕಾಗಿ ಏನು ಮಾಡುವುದೋ ತಿಳಿಯಲಿಲ್ಲ.ಅಮ್ಮನಿಗೂ ನಾನಿಲ್ಲದೇ ಬೇರೇನೂ ತನ್ನದಾಗಿ ಉಳಿದಿರಲಿಲ್ಲ.ಬದುಕಿಗಾಗಿ ಹೋರಾಡಲೇ ಬೇಕಿತ್ತು.ಬೆಂಗಳೂರಿನಲ್ಲಿರುವ ಮಾವನ‌ ಬಳಿ ಸಹಾಯಕ್ಕಾಗಿ ಹಣ ತರಲು ನಾನು ಕೂಡಲೆ ಹೋಗಲೇ ಬೇಕಾಯಿತು.ಓಡಿಹೋಗಲೆಂದು ಗೊತ್ತು ಮಾಡಿದ ದಿನದಂದೇ ನಾನು ಬೆಂಗಳೂರಿಗೆ ಹೊರಡಬೇಕಾಗಿಬಂತು.ಅವಳಿಗೆ ಈ ವಿಷಯ ಹೇಗೆ ತಿಳಿಸಲಿ? ಪತ್ರದಿಂದ ತಿಳಿಸುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ.ನಾನು ಅಸಹಾಯಕನಾದೆ.

ದೇವರ ಆಟದ ನಿಯಮಗಳು ಯಾರಿಗೆ ತಾನೇ ತಿಳಿದಿದೆ?ಅವನು ಚಿಮ್ಮಿಸುವ ನಾಣ್ಯದಲ್ಲಿ ನಾವೆಲ್ಲರೂ ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡು ರೈಲು ಹತ್ತಿದೆ.ಆ ರೈಲು ನನ್ನ ಕನಸುಗಳೆಲ್ಲವನ್ನೂ ಸುಟ್ಟು ತನ್ನ ನೆತ್ತಿಯಿಂದ ಉಗಿಯುಗುಳುತ್ತಲೇ ನನ್ನ ಜೀವನದ ಬಹುಮುಖ್ಯವಾದ ಭಾಗವೊಂದು ಮರೆಯಾಗಿ ಹೋಯಿತು.ಬೆಂಗಳೂರಿಗೆ ತಲುಪಿದ ಬಳಿಕ ಅವಳಿಗೆ ಬಹಳಷ್ಟು ಪತ್ರಗಳನ್ನು ಬರೆದರೂ ಯಾವುದಕ್ಕೂ ಉತ್ತರ ಬರಲಿಲ್ಲ.ಮತ್ತೆ ಅವಳ ಬಳಿ ಹೋಗಿ ಎಲ್ಲವನ್ನೂ ಹೇಳಬೇಕೆನಿಸುತ್ತಿತ್ತು,ಕಾಲಿಗೆ ಬಿದ್ದಾದರೂ ಸರಿಯೆ ಅವಳನ್ನು ಒಪ್ಪಿಸಿ ನನ್ನ ಮಡಿಲಲ್ಲಿ ಎತ್ತಿಕೊಂಡು ಹೋಗಬೇಕೆನಿಸುತ್ತಿತ್ತು.ಆದರೆ ನಾನು ಅಲ್ಲಿಗೆ ಪುನಃ ಹೋಗುವ ವೇಳೆಗೆ ಅವಳ ಮದುವೆಯಾಗಿದೆಯೆಂದೂ ಎಲ್ಲವೂ ಬೇಗಬೇಗನೇ ಮುಗಿದುಹೋಯಿತೆಂದೂ ಹಳ್ಳಿಗರು ಹೇಳಿದರು.ಆಮೇಲೆ ಅವಳು ಮತ್ತಿನ್ಯಾವತ್ತೂ ನನಗೆ ಸಿಗಲಿಲ್ಲ.ಇನ್ನು ನಾನು ಬೆಂಗಳೂರಿನಲ್ಲಿಯೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ  ಜೀವನ ಕಟ್ಟಿಕೊಂಡೆ‌.ಆಗಲೇ ಅವಳ ನಂಬಿಕೆಗಳೊಂದಿಗೆ ಆಟವಾಡಿದ ನಾನು ಯಾರ ಪ್ರೀತಿಗೂ ಅರ್ಹನಲ್ಲ ಎಂದೆನಿಸಿತು.ಅದಕ್ಕೆ ಒಬ್ಬಂಟಿಯಾಗಿ ಜೀವಮಾನವನ್ನೆಲ್ಲ ಕಳೆದೆ.

******

ನಾನು ಮಾದುವಿನ ಕಥೆಯನ್ನು ಕೇಳುತ್ತಾ ಮೂಕನಾಗಿ ಹೋದೆ.ಒಂದು ಸಾರಿ ಆತನ ಜೀವನವನ್ನು ನೆನೆಸಿಕೊಂಡರೆ ನನಗೆ ಅಂದು ರಾತ್ರಿ ಬಿದ್ದ ಕನಸಿನ ವಾಸ್ತವತೆಯೇ ಎದುರಾದಂತಾಯಿತು.ಅಷ್ಟರಲ್ಲಿ ನಗುತ್ತಾ ನನ್ನ ಕೈಗೆ ಮಾದು ಫೋನನ್ನು ಕೊಟ್ಟ.”ನಾನು ಮಾಡಿದ ತಪ್ಪನ್ನು ನೀನು ಮಾಡಬೇಡ.ಜೀವನದಲ್ಲಿ ನಿನಗೆ ಏನು ಬೇಕು ಅಂತ ಸರಿಯಾಗಿ ಗೊತ್ತಿದ್ದಾಗ ಅದನ್ನು ಪಡೆಯೋಕೆ ಏನು ಬೇಕಾದರೂ ಮಾಡೋಕೆ ತಯಾರಾಗಿರ್ಬೇಕು.ಜವಾಬ್ದಾರಿಗಳಿಂದ,ಭಯಗಳಿಂದ ಓಡಿಹೋಗಬೇಡ.ಅವಳನ್ನು ಕಳೆದು ಕೊಳ್ಳುವ ಭಯದಲ್ಲಿ ನಿನ್ನೊಳಗಿರುವವನೊಬ್ಬನನ್ನು ಕಳೆದುಕೊಳ್ಳಬೇಡ” ಮಾದು ಹೀಗೆ ಹೇಳುತ್ತಲೆ ಅವಳಿಗಾಗಿ ಜಗತ್ತನ್ನೇ ಎದುರು ಹಾಕಿಕೊಳ್ಳುವ ಧೈರ್ಯ ಬಂದಿತು.ಆದರೇನು ಮಾಡುವುದು?ಫೋನನ್ನು ಮಾಡುತ್ತಲೇ ಅವಳು ಅತ್ತ ಸಂತಸವೂ ಇತ್ತ ದುಃಖವೂ ಇಲ್ಲದ ಸಮ್ಮಿಶ್ರಭಾವವೊಂದರಲ್ಲಿ ತನಗೆ ಅಮೆರಿಕಾಗೆ ಹಾರುವ ಅವಕಾಶವಿದೆಯೆಂದೂ ಇದೇ ವಾರದ ಅಂತ್ಯಕ್ಕೆ ಹೊರಡಬೇಕೆಂದೂ ಹೇಳಿದಾಗ ಫೋನನ್ನು ಕಟ್ ಮಾಡುವುದೊಂದೇ ನನ್ನ ಪಾಲಿಗಿದ್ದ ಆಯ್ಕೆಯಾಗಿತ್ತು.ಇವಳು ಅಮೆರಿಕಾಗೆ ಹಾರುತ್ತಲೇ ಅವಳ ಸಾಂಗತ್ಯವೂ ಇಲ್ಲವಾಗುತ್ತದೆ.ಇನ್ನು ಹೇಗೆ ತಾನೇ ನನ್ನೊಳಗಿನ ಪ್ರೀತಿಯನ್ನು ಹೇಳಿಕೊಳ್ಳಲಿ?ನಾನು ಕುಸಿದು ಕುಳಿತೆ.ಸರಿಯುವ ಮೋಡವು ಗಗನವ ಗೀರಿ‌ ನಡೆದಂಥ ಭಾವ ನನ್ನಲಿ.ಏನು ಮಾಡುವುದು?ಒಂದೂ ತಿಳಿಯದಾದೆ.

ಇತ್ತ  ಮರುದಿನ ಮಾದುವಿಗೆ ಆರೋಗ್ಯ ಹದಗೆಟ್ಟಿತು.ಮತ್ತದೇ ಮೈಲ್ಡ‌್ ಹಾರ್ಟ್ ಅಟ್ಯಾಕ್. ಐಸಿಯುನಲ್ಲಿ ಮಲಗಿದ್ದ ಆ ಮುದಿಜೀವದ ಪಕ್ಕದಲ್ಲಿ ಕುಳಿತುಕೊಂಡು ಪುಟ್ಟ ಮಗುವಾಗಿ ಹೋದೆ ನಾನು.ಎರಡು ದಿನಗಳ ಬಳಿಕ ಮಾದುವಿನ ಪುಟ್ಟ ಕೃಶವಾದ ದೇಹ ಅದು ಹೇಗೆ ಕೊಂಚ ಚೇತರಿಸಿಕೊಂಡಿತೋ ದೇವನೇ ಬಲ್ಲ.ಅದೊಂದು ಸಂಜೆ ಮಾದು ನನ್ನನ್ನು ಹತ್ತಿರ ಕರೆದ.ಅವನ ಕಣ್ಣಂಚಲಿ ನೀರಿತ್ತು.ನನಗೆ ಕೈಮುಗಿಯುತ್ತಲೇ”ನನಗೊಂದು ಕೊನೆಯ ಆಸೆ‌ ಇದೆಯಪ್ಪಾ.ಅದನ್ನ ಈಡೇರಿಸ್ತೀಯಾ?” ಎಂದು ಕೇಳಿದ‌.ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು “ದಯವಿಟ್ಟು ಅವಳನ್ನು ಬಿಟ್ಟಕೊಡಬೇಡ ” ಎನ್ನುತ್ತಲೇ ಅವನ ಕಣ್ಣೀರು ಇನ್ನೂ ರಭಸವಾಗಿ ಸುರಿಯಲಾರಂಭಿಸಿತು.ಆಗ ಅವನ ಬ್ಯಾಗಿನ ಕಡೆ ಸನ್ನೆ ಮಾಡುತ್ತಾ ಅದನ್ನು ತೆಗೆದುಕೊಂಡು ಬರಲು ಹೇಳಿದ.ಆ ಬ್ಯಾಗನ್ನು ಮಾದುವಿನ ಮುಂದೆ ತಂದಿಟ್ಟು ಅದನ್ನು ತೆರೆದೆ.ಅದರೊಳಗೊಂದು ಪುಸ್ತಕವಿತ್ತು.ನಿಜ!ಅದನ್ನು ನಾನೇ ಬರೆದದ್ದು.ಅದು ನಾ‌ ಗೀಚಿದ ಕವನಗಳ ಪುಸ್ತಕ. ಒಂದೊಂದೇ ಪುಟವನ್ನು ತೆರೆಯುತ್ತ ಹೋದಂತೆ ಇತಿಹಾಸವನ್ನೇ ತಿರುಗಿ ನೋಡಿದಂತಾಯಿತು.ಪುಸ್ತಕವನ್ನು ಎಲ್ಲಿಟ್ಟಿದ್ದೆ‌ ನಾನು? ತಿಳಿದಿರಲಿಲ್ಲ.ಅದರ ಹುಡುಕಾಟವಿರಲಿ ಅದರ ಬಗ್ಗೆ ಯೋಚಿಸಲೂ ಸಹ ಸಮಯವಿರಲಿಲ್ಲ.”ಇದು ನೀನು ಕಣಪ್ಪ.ಅದರೊಳಗಿರುವ ಪ್ರತಿ ಭಾವನೆಗಳೂ ನಿನ್ನದು” ಎಂದು ಮಾದು ಹೇಳುತ್ತಲೇ ನಾನೇ ಆಗಿದ್ದ,ಕಾಣೆಯಾಗಿದ್ದ ಆ ಒಬ್ಬ ರಸಿಕನನ್ನು ನಾನು ಮರಳಿ ಪಡೆದಿದ್ದೆ.ಆ ಪುಸ್ತಕದೊಡನೆ ಕಳೆದುಹೋಗಿದ್ದ ನನ್ನತನವನ್ನೂ ಮಾದು ಮರಳಿ ನೀಡಿದ್ದ.

ಇನ್ನು ನಾನು ತಡ ಮಾಡಲಿಲ್ಲ,ಒಂದು ಸಣ್ಣ ಆಟಿಕೆಗಾಗಿ ಹೇಗೆ ಅಪ್ಪನ ಹತ್ತಿರ ವಾರವಿಡೀ ಹಠಮಾಡುವ ಛಾತಿ ನನ್ನದಾಗಿತ್ತೋ ಅದೇ ಹಠವಾದಿ ವ್ಯಕ್ತಿಯಾಗಿ ಮರಳಿ ರೂಪುಗೊಂಡೆ‌ ನಾನು.ಕೂಡಲೇ ನಂದಿತಾಳ ರೂಮಿನೆಡೆಗೆ ಹೊರಟೆ.ರೂಮಿನೊಳಗೆ ಹೋಗುತ್ತಲೇ ನಗುತ್ತಾ ಸ್ವಾಗತಿಸಿದ ಅವಳು ಅಮೆರಿಕಾಗೆ ಹೋಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಳು.ನಂದಿತಾ ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ ಎನ್ನುತ್ತಲೇ ಅವಳು ಓಡಿಬಂದು ನನ್ನನ್ನು ತಬ್ಬಿ ಕೆನ್ನೆಗೆ ಎರಡು ಏಟು ಕೊಟ್ಟಳು.ನನ್ನೆದೆಯ ಮೇಲೆ ಒರಗಿ ಕಣ್ಣೀರಿಟ್ಟಳು.ಅಬ್ಬಾ!ಯಾವುದೋ ದೊಡ್ಡ ಪರ್ವತವನ್ನು ಎತ್ತಿ ಪಕ್ಕಕ್ಕಿಂಟಂತಾಯಿತು ನನಗೆ.ಬಹುಶಃ ಆ ಅಪ್ಪುಗೆಯೊಂದೇ ನನಗೂ ಅವಳಿಗೂ ನಮ್ಮ ಜೀವನದಲ್ಲಿ ಯಾವುದು ಬಹಳ ಮುಖ್ಯವಾದುದು ಎಂದು ತಿಳಿಸಿಕೊಟ್ಟಿತೋ ಏನೋ.ನಂದಿತಾ ಮೋಹದ ದೇಶಕ್ಕೆ ಹೋಗಲಿಲ್ಲ ಬದಲಾಗಿ ನನ್ನೊಡನೆಯೇ ಇದ್ದು ಎರಡು ವರ್ಷಗಳ ನಂತರ ನನ್ನನ್ನು ಮದುವೆಯಾದಳು.

ಮಾದು! ಅದಾವ ಊರಿ‌ನ ನೆಂಟನೋ ನನಗೆ?!ಅವನ ನೆನಪುಗಳೆಲ್ಲ ಇಂದಿಗೂ ಮುಖದಲ್ಲಿ ನಗು ತರಿಸುತ್ತವೆ.ಮಾದು ಎರಡನೇ ಬಾರಿ ಆದ ಹೃದಯಾಘಾತದ ನಂತರ ಬದುಕಿದ್ದು ಕೆಲವೇ ಕೆಲವು ವಾರಗಳಷ್ಟೇ.ಆದರೆ ಅನಾಥವಾಗಿ ಬದುಕಿದಂತೆ ಅನಾಥನಾಗಿ ಅವನು ಸಾಯಲಿಲ್ಲ.ಅನಂತ ನೆನಪುಗಳೊಡನೆ ಪ್ರೇಮ- ಒಡನಾಟಗಳೊಡನೆ ಮಾದು ನನ್ನನ್ನು ಅಗಲಿದ.ನಿಜ!ಯಾಂತ್ರಿಕ ಜೀವನದಲ್ಲಿ ಕೃತಕ ವ್ಯಕ್ತಿತ್ವವೊಂದನ್ನು ತಮ್ಮ ಮೇಲೆ ಆರೋಪಿಸಿಕೊಂಡು ವರುಷದ ಎಲ್ಲ ದಿನಗಳನ್ನೂ ಒಂದೇ ರೀತಿಯಲ್ಲಿ ಕಳೆಯುವ ಅದೆಷ್ಟೋ ಜನರ ನಡುವೆ ಒಬ್ಬನಾಗಿದ್ದೆ ನಾನು.ನನ್ನನ್ನು ಸೃಷ್ಟಿಸಿದ ಆ ದೇವರಿಗೂ ಗುರುತು ಸಿಗಲಾರದಷ್ಟು ಬದಲಾಗಿ ಹೋಗಿದ್ದ ನನಗೆ ಮಾದುವೇ ಮರಳಿ ನನ್ನನ್ನು ನೀಡಿದ್ದ.ನಾನೇ ಮರೆತು ಹೋಗಿದ್ದ ಬರಹದ ಗೀಳು‌ ಇನ್ನೂ ಹೆಚ್ಚಾಗಿ ಈಗ ನಾನು ಬರೆದ ಕಾದಂಬರಿ ಇಂದು ಎಲ್ಲೆಡೆ ಸದ್ದು ಮಾಡುತ್ತಿದೆ.ಎಲ್ಲ ಸರಾಗವಾಗಿ ಸಾಗುತ್ತಿದೆ.ಆಗಾಗ ಮಾದುವಿನ ನೆನಪು ನನಗಾದಾಗ ಅದೇ ಕ್ಷೀರಸಾಗರ ಹೋಟೇಲಿಗೆ ಹೋಗುತ್ತೇನೆ.ಕೋಡಿಗೆಹಳ್ಳಿಯ ಗೇಟಿನವರೆಗೂ ಒಬ್ಬನೇ ಬೈಕಿನ ಸವಾರಿ ಮಾಡಿ ಸಂತೋಷದಿಂದ ಮನೆಗೆ ಬರುತ್ತೇನೆ,ಮರಳಿ ನಾನಾಗುತ್ತೇನೆ.

-ಪ್ರಸಾದ್ ಸಿದ್ಧೇಶ್ವರ್

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!