ಅಂಕಣ

ಮಾಸದಿರಲಿ ಮಗುವಿನ ಮುಗ್ಧತೆ!

ಮಕ್ಕಳ ಮನಸ್ಸು ನೀರಿನಂತೆ ನಾವು ಯಾವ ಆಕಾರಕ್ಕೆ ಸುರಿದರೆ ಆ ರೀತಿ ನಿಲ್ಲುವುದು, ಇಲ್ಲವಾದಲ್ಲಿ ತನ್ನಿಚ್ಛೆಯಂತೆ ಹರಿದುಹೋಗಿ ಫೋಲಾಗುವುದು, ಮಕ್ಕಳ ಪೂರ್ಣ ಬೆಳವಣಿಗೆ ಅವರ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ, ಮಗುವಿನ ಮನಸ್ಸು ಮುಗ್ಧತೆಯ ಆಗರ, ಒಂದು ಹಂತದವರೆಗೂ ಅದೇ ಮಗುವಿನೊಳಗಿನ ಆಕರ್ಷಣೆ. ಈ ಮುಗ್ಧತೆ ಇಂದಿನ ಎಷ್ಟೋ ಮಕ್ಕಳಲ್ಲಿ ಮಾಯವಾಗಿ ಹೋಗಿದೆ, ಇತ್ತೀಚೆಗೆ ಮಕ್ಕಳು ಯಾವ ಹಂತದಲ್ಲಿಯೂ ಏನು ತಿಳಿಯದ ಮುಗ್ಧರು ಎನಿಸುವುದೇ ಇಲ್ಲ, ಇದಕ್ಕೆ ಕಾರಣ ಬದಲಾಗುತ್ತಿರುವ ಆಧುನಿಕತೆ ಹಾಗೂ ಮಗುವಿನ ಮೇಲೆ ಪ್ರಭಾವ ಬೀರುವ ವಾತಾವರಣ ಮುಖ್ಯವಾಗಿ ಕುಟುಂಬ, ಮಗುವಿನ ಬೆಳವಣಿಗೆ ಸಂಪೂರ್ಣ ಅನುಕರಣೀಯವಾದದ್ದು, ಅದು ಮೊದಲು ಅನುಸರಿಸುವುದು ತನ್ನ ಕುಟುಂಬವನ್ನು ಅಂದರೆ ತನ್ನ ತಂದೆ, ತಾಯಿ ಹಾಗೂ ಒಡಹುಟ್ಟಿದವರನ್ನು, ಮನೆಯಲ್ಲಿನವರ ನಡವಳಿಕೆಗಳು ಮಗುವಿನ ಮೇಲೆ ಹೇಗೆ ಪ್ರಭಾವ ಬೀರಬಲ್ಲದು ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಮಗು ಎಂದರೆ ಅದೊಂದು ದೊಡ್ಡ ಕುತೂಹಲಗಳ ಬೀಡು, ಅದರಲ್ಲೂ ಐದರಿಂದ ಹದಿಮೂರರವರೆಗಿನ ಮಕ್ಕಳಲ್ಲಿ ಈ ಕುತೂಹಲ ಅಪರಿಮಿತ, ಎಲ್ಲವೂ ಕಲಿಯಬೇಕು ಎಲ್ಲವೂ ತಿಳಿಯಬೇಕೆಂಬ ವಯಸ್ಸು, ಇನ್ನು ಚುರುಕಾಗಿರುವ ಮಕ್ಕಳಲ್ಲಿ ಈ ಕುತೂಹಲ ತುಸು ಅತಿ ಎನಿಸುವಷ್ಟೆ ಹೆಚ್ಚಾಗಿರುತ್ತದೆ, ತಂದೆ ತಾಯಿಗಳು ಇದನ್ನು ಪ್ರೋತ್ಸಾಹಿಸಬೇಕು ಮಕ್ಕಳ ಕುತೂಹಲ ತಣಿಸಬೇಕಾದದ್ದು ಅವರ ಕರ್ತವ್ಯ ಹಾಗೆಂದೂ ಅದನ್ನು ಇನ್ನು ಒಂದು ಹೆಜ್ಜೆ ಮುಂದು ಹೋಗಿ ನಮ್ಮ ಮಗು ಎಲ್ಲವನ್ನೂ ತಿಳಿಯಲಿ ಅದರ ಮನಸ್ಸಿನಲ್ಲಿ ಕುತೂಹಲಗಳೇ ಉಳಿಯಬಾರದೆಂದು ಆ ವಯಸ್ಸಿಗೆ ಎಲ್ಲಾ ಸಂಪನ್ಮೂಲಗಳನ್ನು ನೀಡುವುದು ತಪ್ಪು.

ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳಿಗೆ ತಮ್ಮ ಮಕ್ಕಳು ಎಲ್ಲವನ್ನೂ ಕಲಿಯಲಿ ಅವರಿಗೆ ಸೆಕ್ಸ್’ನಿಂದ ಸೈಕಾಲಜಿಯವರೆಗೂ ಎಲ್ಲ ವಿಷಯಗಳು  ತಿಳಿದಿರಲಿ ಎಂಬ ಆಸೆ, ಅದಕ್ಕಾಗಿ ಅವರಿಗೆ ಬೇಕಾದ ಎಲ್ಲಾ ಎನ್‍ಸೈಕ್ಲೋಪಿಡಿಯಾಗಳು, ವಿಕಿಪಿಡಿಯಾ ಇಂಟರ್ನೆಟ್ ಎಲ್ಲವನ್ನು ಒದಗಿಸಿಬಿಡುತ್ತಾರೆ, ಇದರಿಂದಾಗುವ ತೊಂದರೆಗಳು ಅವರ ಮನಸ್ಸಿಗೆ ಬಂದಿರುವುದಿಲ್ಲ, ಇಲ್ಲೊಂದು ಉದಾಹರಣೆ ಐದನೇ ತರಗತಿಯಲ್ಲಿನ ಹುಡುಗನೊಬ್ಬನಿಗೆ ಎಲ್ಲಾ ವಿಷಯಗಳಲ್ಲಿಯೂ ಅತಿಯಾದ ಆಸಕ್ತಿ, ಅವನು ಸದಾ ಚುರುಕು, ಅವನ ತಂದೆ ತಾಯಿ ಇಬ್ಬರು ವಿದ್ಯಾವಂತರಾಗಿದ್ದು ತಮ್ಮ ಮಗುವಿನ ಆಸಕ್ತಿ ಗುರುತಿಸಿ ಅವನಿಗೆ ಯಾವುದರಲ್ಲೂ ನಿರ್ಬಂಧ ಹೇರದೆ, ಅವನಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು  ನೀಡಿದರು, ಆ ವಯಸ್ಸಿಗೆ ಆ ಮಗುವಿಗೆ ಎಲ್ಲಾ ರೀತಿಯ ಎನ್‍ಸೈಕ್ಲೋಪಿಡಿಯಾ, ಹಾಗೂ ಇಂಟರ್ನೆಟ್ ಕೈಗೆ ಸಿಕ್ಕಿತು, ಕುತೂಹಲವಿರುವ ಮಗು ತನಗೆ ಬೇಕಾದ ವಿಷಯಗಳೊಂದಿಗೆ ಬೇಡಾವಾದ ವಿಷಯಗಳನ್ನು ತಿಳಿಯುವ ಪ್ರಯತ್ನ ಮಾಡಿತು, ಇದರಿಂದಾಗಿ ಅದರಲ್ಲಿನ ಮುಗ್ಧತೆ ಮಾಯವಾಗಿ ತನಗೆ ಎಲ್ಲಾ ಗೊತ್ತು ಎಂಬ ಭಾವನೆ ಬೆಳೆಯಿತು, ಅದಕ್ಕೀಗ ಸೆಕ್ಸ್ ಎಂಬ ವಿಷಯವಾಗಲಿ, ಸೈಕಾಲಜಿ ಎಂಬಂತಹ ತರ್ಕವಾಗಲಿ ಸಾಮಾನ್ಯವಾಗತೊಡಗಿತು, ಆ ಮಗುವಿಗೆ ಆ ವಿಷಯಗಳಲ್ಲಿನ ನಿಗೂಡತೆಯಾಗಲಿ, ಆಳವಾಗಲಿ ಅಚ್ಚರಿ ಎನಿಸಲಿಲ್ಲ, ಇದೇ ವಿಷಯವನ್ನು ತನ್ನ ಸಹಪಾಠಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡಿತು, ಒಮ್ಮೆ ತರಗತಿಯಲ್ಲಿ ಸೆಕ್ಸ್ ಎಂಬ ವಿಷಯದ ಬಗ್ಗೆ ಮಕ್ಕಳಲ್ಲಿ ಉಂಟಾದ ಚರ್ಚೆ ಶಿಕ್ಷಕಿಯವರೆಗೂ ಹೋಯಿತು, ಅದು ಆ ವಯಸ್ಸಿನ ಮಕ್ಕಳು ತಿಳಿಯುವಂತ ವಿಷಯವಾಗಿಲ್ಲದ್ದರಿಂದ ಆ ಶಿಕ್ಷಕಿ ಆ ಹುಡುಗನನ್ನು ಕರೆದು ಬೈದರು ಇಂಥ ವಿಷಯಗಳನ್ನು ಕ್ಲಾಸಿನಲ್ಲಿ ಚರ್ಚೆ ಮಾಡಬಾರದೆಂದು ತಿಳಿ ಹೇಳಲು ಪ್ರಯತ್ನಿಸಿದರು, ಇದರಿಂದ ಹುಡುಗನ ಮನಸ್ಸು ಇನ್ನು ಗೊಂದಲಕ್ಕೆ ಒಳಗಾಯಿತು ಇದರಲ್ಲಿ ತಪ್ಪೇನು ಇದನ್ನು ನಾನೇಕೆ ತಿಳಿಯಬಾರದು ಎಂಬ ಗೊಂದಲಕ್ಕೆ ಬಿದ್ದ ಹುಡುಗ ಅದೇ ವಿಷಯದ ಕಡೆ ಇನ್ನು ಹೆಚ್ಚು ಗಮನ ಕೊಡಲು ಶುರುಮಾಡಿದ, ಇದರೊಂದಿಗೆ ಅದೇ ತರಗತಿಯ ಬೇರೆ ಮಕ್ಕಳ ಮನಸ್ಸು ಇದರಲ್ಲೇನೋ ಕೌತುಕವಿದೆ ಎಂಬ ತರ್ಕಕ್ಕೆ ಇದರಿಂದಾಗಿ ಇಡೀ ತರಗತಿಯ ಮಕ್ಕಳ ಮನಸ್ಸು ಆ ವಯಸ್ಸಿಗೆ ಬೇಡದ ವಿಷಯದ ಬಗ್ಗೆ ತರ್ಕಿಸಲು ಶುರು ಮಾಡಿದವು, ಇಲ್ಲಿ ತಪ್ಪು ಯಾರದ್ದು ? ಖಂಡಿತ ಆ ಮಗುವಿನ ತಪ್ಪಲ್ಲ, ಅದಕ್ಕೆ ಯಾವ ವಯಸ್ಸಿಗೆ ಏನು ನೀಡಬೇಕು ಎಂದು ತಿಳಿಯದ ಪೋಷಕರದು. ಮಕ್ಕಳ ಮನಸ್ಸಿಗೆ ಯಾವ ವಯಸ್ಸಿಗೆ ಎಷ್ಟೆಷ್ಟು ವಿಷಯಗಳನ್ನು ತುಂಬಬೇಕು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು, ಅಲ್ಲದೆ ತಮ್ಮ ಮಗು ಏನು ಕಲಿಯುತ್ತಿದೆ, ಅದರ ಕಲಿಕೆಗೆ ನಾವು ನೀಡಬೇಕಾದ ಅಗತ್ಯಗಳೆಷ್ಟು ಅದರ ಉಪಯೋಗವನ್ನು ಮಗು ಹೇಗೆ ಪಡೆಯುತ್ತಿದೆ ಎಂಬುದನ್ನು ಪೋಷಕರು ಅರ್ಥೈಸಿಕೊಳ್ಳಬೇಕು. ಯಾವುದೇ ಮಗುವು ತಾಯಿ ಗರ್ಭದಲ್ಲಿಯೇ ಎಲ್ಲವನ್ನು ಕಲಿತು ಬಂದಿರಲಾರದು ಅದು ಕಲಿಯುವುದೆಲ್ಲವೂ ಇತರರ ಮೂಲಕವೇ ಹಾಗಾಗಿ ಮಕ್ಕಳ ಬೆಳವಣಿಗೆಯ ಕಡೆಗೆ ಅದರಲ್ಲೂ ಅವರಲ್ಲಿನ ಮುಗ್ಧತೆ ಕಾಪಾಡುವಲ್ಲಿ ಪೋಷಕರು ಹೆಚ್ಚು ಗಮನ ಕೊಡಬೇಕು, ಮಗುವಿಗೆ ಅದರ ವಯಸ್ಸಿಗೆ ಅನುಗುಣವಾಗಿ ಎಷ್ಟು ತಿಳಿಸಬೇಕೋ ಅಷ್ಟನ್ನು ಮಾತ್ರ ತಿಳಿಸಿ, ಪ್ರತಿಯೊಂದು ಹಂತದಲ್ಲೂ ಅದರ ಕಲ್ಪನೆಗಳಿಗೆ, ಕುತೂಹಲಗಳಿಗೆ ಅದಕ್ಕೆ ಸಮಾಧಾನವೆನಿಸುವಂತಹ ಪರಿಕಲ್ಪನೆ ಮಾತ್ರವೇ ನೀಡಬೇಕು. ಮಗುವಿನ ಎದುರಿನಲ್ಲಿ ದೊಡ್ಡವರ ವರ್ತನೆ ಕೂಡ ಮಿತಿಯಲ್ಲಿರಬೇಕು, ಆ ಪುಟ್ಟ ಮನಸ್ಸು ಯಾವಾಗಲೂ ನಿಮ್ಮನ್ನು ಗಮನಿಸುತ್ತಿರುತ್ತದೆ ಎಂಬುದು ನಿಮ್ಮ ಗಮನದಲ್ಲಿರಬೇಕು, ಮನೆಯಲ್ಲಿ ಪತಿ ಪತ್ನಿ ಇಬ್ಬರೂ ವೃತ್ತಿಪರರಾದಲ್ಲಿ ದಿನವೂ ಇಬ್ಬರಲ್ಲಿ ಒಬ್ಬರಾದರೂ ಮಗುವಿನ ಜೊತೆ ಒಂದೆರಡು ಗಂಟೆಗಳನ್ನು ವ್ಯಯಿಸಿ ಅದರ ಮನಸ್ಸಲ್ಲಿರುವ ಗೊಂದಲಗಳನ್ನು ಅಂದಿನ ದಿನಚರಿಯನ್ನು ಸಮಾಧಾನವಾಗಿ ಕೇಳುವುದರ ಮೂಲಕ ಅದರಲ್ಲಿನ ಒಳಿತು ಕೆಡಕುಗಳನ್ನು ತಿಳಿಯುವ ಹಾಗೂ ಮಗುವಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಬೇಕು, ವಿಶೇಷವಾಗಿ  ಭಾರತೀಯ ಸಂಸ್ಕೃತಿಯ ಬಗ್ಗೆ ಮಗುವಿನಲ್ಲಿ ಒಲವು ಮೂಡಿಸಲು ಪ್ರಯತ್ನಿಸಿ, ಭಾರತೀಯರಲ್ಲಿ ಗಂಡು ಹೆಣ್ಣಿನ ಸಂಬಂಧಕ್ಕೆ ಸರಿಯಾದ ರೀತಿ ರಿವಾಜುಗಳಿವೆ, ಆರೋಗ್ಯಕರವಾದ ಪರಿಕಲ್ಪನೆಗಳಿವೆ. ಅವುಗಳನ್ನು ಮಕ್ಕಳಿಗೆ ಆದಷ್ಟು ಸರಳ ರೀತಿಯಲ್ಲಿ ವಿವರಿಸಿ ತಿಳಿಸಿ. ಯಾವುದೋ ಪಾಶ್ಚತ್ಯ ವೆಬ್ಸೈಟ್‍ಗಳಿಂದ ಅಥವಾ ಪಾಶ್ಚಾತ್ಯ ಜೀವನ ರೀತಿಗಳಿಂದ ಇಂಡಿಪೆಂಡೆಂಟ್ ಹಾಗೂ ಲೀವ್ ಇನ್ ರಿಲೇಶನ್ ಎಂಬ ಪದಗಳಿಗೆ ಮಕ್ಕಳು ಮಾರು ಹೋಗುವ ಮೊದಲೇ ಅವರನ್ನು ನಿಮ್ಮ ಪರಿಧಿಯೊಳಗಿರಿಸಿ, ಇದರಿಂದ ಸ್ವಲ್ಪ ಮಟ್ಟಿಗಾದರೂ ನಮ್ಮಲ್ಲಿರುವ ಕುಟುಂಬ ವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾದೀತು.

-ಲಾವಣ್ಯ ಸಿದ್ದೇಶ್ವರ್

ಬೆಂಗಳೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!