ಅಂಕಣ

‘ಮಾತು’ – ಒಂದು ಅನಿಸಿಕೆ

ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಸಕಾರಾತ್ಮಕ ಬದಲಾವಣೆಗಳು ಪೋಷಕರಿಗೆ ಸಹಜವಾಗಿಯೇ ಹಿಗ್ಗನ್ನುಂಟು ಮಾಡುತ್ತದೆ. ಅದರಲ್ಲೂ, ಕಂದನ ತೊದಲ ನುಡಿಗಳು ಕಿವಿಗಳ ಮೇಲೆ ಬಿದ್ದೊಡೆ, ಪರಮಾನಂದ – ಏನೋ ಒಂದು ಸಾರ್ಥಕತೆಯ ಅನುಭವ, ಆ ಹಂತದಲ್ಲಿ; ಅಂದರೆ ಮಗುವಿನ ಒಂದು – ಎರಡನೇ  ವಯಸ್ಸಿನ ಆಸುಪಾಸಿನಲ್ಲಿ ಅದು ಅಪಾರ.

ಇನ್ನು ಹಲವು ಸಂದರ್ಭಗಳಲ್ಲಿ, ಹೆಚ್ಚು ಮಾತನಾಡುವ : ಮಾನದಂಡವೇನೂ ಇಲ್ಲ ಹೆಚ್ಚು- ಕಮ್ಮಿಗಳ ಅಳೆಯಲು, ಆದರೂ ಪೋಷಕರಿಗೆ ಅಧಿಕವೆನಿಸುವ ಮಾತುಗಳು, ಮಕ್ಕಳಿಗೆ “ಅಧಿಕ ಪ್ರಸಂಗಿ” ಪಟ್ಟವನ್ನು ಕಟ್ಟಿ ಬಿಡುತ್ತವೆ; ಮತ್ತೆ ಹಲವು ಸಂದರ್ಭಗಳಲ್ಲಿ ಪೋಷಕರ, ಹಿರಿಯರ ಕ್ಷಮತೆಗೆ ನಿಲುಕದ ವಿಚಾರಗಳೂ / ಸಂದರ್ಭಗಳೂ ಕೂಡ ಮಕ್ಕಳನ್ನು ತೆಪ್ಪಗೆ ಇರುವಂತೆ ಮಾಡುತ್ತವೆ.

ಮಗು ಬೆಳೆಯುತ್ತ, ಓರಗೆಯವರೊಡನೆ, ಶಾಲೆಯಲ್ಲಿ ತನ್ನ ಸಹಪಾಠಿಗಳೊಡನೆ ಕಲೆಯುತ್ತಾ ಹೆಚ್ಚು ಹೆಚ್ಚು ಶಬ್ದಕೋಶವನ್ನು ತನ್ನದಾಗಿಸಿಕೊಳ್ಳುತ್ತದೆ, ಬಹಳಷ್ಟು ಸಮಯ ಕೆಟ್ಟ ಪದಗಳನ್ನ ಸಾಮಾನ್ಯವಾಗಿಯೇ ತನ್ನ ಪರಿಸರದಿಂದ (ಯಾರೋ ಜಗಳವಾಡುವದನ್ನ ನೋಡಿಯೋ, ಅವಾಚ್ಯ ಶಬ್ಧಗಳನ್ನ ಕೇಳಿಯೋ) ಸಹಜವಾಗಿಯೇ ಕಲಿತು, ಮನೆಯಲ್ಲಿ, ಕುತೂಹಲಕ್ಕಾಗಿಯೇ ಪ್ರಯೋಗ ಮಾಡಿ ಏಟು ತಿನ್ನುತ್ತದೆ; ಆ ಸಮಯದಲ್ಲಿ ಶಿಕ್ಷಿಸುವುದು ಸಮಂಜಸ; ಅದು ಶಿಷ್ಟಾಚಾರದ ಒಂದು ಅಂಗವೂ ಹೌದು.

ಎಲ್ಲಾ ಸಂದರ್ಭಗಳಲ್ಲೂ ತಾಳ್ಮೆಯಿಂದ ವ್ಯವಹರಿಸಿ, ಸಮಯೋಚಿತವಾದ ಕಾರ್ಯ ದಕ್ಷತೆಯನ್ನು ತೋರುವುದು, ಗುರು ಹಿರಿಯರ ಜವಾಬ್ಧಾರಿ. ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಗುವಿನ ಮಾತಿನ ಕಡೆ ಗಮನ ನೀಡಿ, ಸೂಕ್ತ ಮಾರ್ಗದರ್ಶನ ನೀಡಿ, ಹೆಚ್ಚು ಮಾತನಾಡಿದಾಗ ಖಂಡಿಸಿ ನಿಜ, ಆದರೆ ಮಾತಿನ ಮೌಲ್ಯ ತಿಳಿ ಹೇಳಿ. ಮೂದಲಿಸಿ, ದಂಡಿಸಿ ಹತೋಟಿಗೆ ತರುವುದು ಒಂದು ಹಂತದವರೆಗಷ್ಟೇ ಸೂಕ್ತ. ಮನೆಯ ಹೊರಗೂ ಮಾತನಾಡುವ ಅವಕಾಶ ಬಹಳಷ್ಟು ದೊರಕುತ್ತದೆ ಮತ್ತು ಹೊರಗಿನವರೊಡನೆ ಮಾತನಾಡಲು ಒಂದು ವೇದಿಕೆ ಕಲ್ಪಿಸಿ ಕೊಟ್ಟಂತಾಗುತ್ತದೆ, ನಿಮ್ಮರಿವಿಗೆ ಬರದಂತೆ!.

ಗಮನಿಸಿ, ಮಗು ದೊಡ್ಡವನಾಗುತ್ತಾ ಸಮಾಜಕ್ಕೆ ಹೆಚ್ಚು ಹೆಚ್ಚು ಹತ್ತಿರವಾಗತೊಡಗಿದಂತೆ,  ಸಮಾಜದ ಉತ್ತಮ ಗುಣಮಟ್ಟದ ಮತ್ತು ಅಷ್ಟೇ ಸೂಕ್ತವಲ್ಲದ ವಿಷಯಗಳೂ ಕೂಡ ಹತ್ತಿರವಾಗುತ್ತದೆ, ಯಾವುದರ ಬಗ್ಗೆ ಯಾವ ಸಮಯದಲ್ಲಿ, ಎಷ್ಟು ಮಾತನಾಡಬೇಕೆಂದು “ತಿಳಿ”ಹೇಳುವುದು ಸೂಕ್ತ.

ಶರವೇಗದಲ್ಲಿ ಸಾಗುತ್ತಿರುವ ಇಂದಿನ ಯುಗದಲ್ಲಿ, ಅದರಲ್ಲೂ ರಾಜಕೀಯ, ಮಾಧ್ಯಮ ಜಗತ್ತಿನಲ್ಲಿ ಮಾತಿಗೆ ಕಡಿವಾಣವೇ ಇಲ್ಲದಂತಾಗಿದೆ ಮತ್ತು ವಿಷಾದಕಾರಿಯಾಗಿದೆ. ಹಿಂದೆ, ಮಾತು ಬೆಳ್ಳಿ ಮೌನ ಬಂಗಾರವೆನ್ನುತ್ತಿದ್ದರು; ಇಂದು, ಮಾತುಗಳು ಕೇವಲ ಬಳ್ಳಿಯ ಸರಪಳಿಯಂತಾಗಿವೆ, ಒಬ್ಬ ವ್ಯಕ್ತಿ ಆಡಿದ ಮಾತಿಗೆ ಮತ್ತೊಬ್ಬನ ಕೊರಳು (ಅವಶ್ಯಕತೆಗಿಂತ, ಅನಾವಶ್ಯವೆ ಜಾಸ್ತಿ), ಅದಕ್ಕೆ ಹಲವು ಬಣ್ಣ ಹೀಗೆ ಅನಾವಶ್ಯಕ ವೈವಿಧ್ಯತೆ….ಕಡೆಗೆ, ಅಸಲಿಗೆ, ಆಡಿದ ಮಾತು ಅದರ ಮೌಲ್ಯ ಏನು ಎಂಬುದೇ ಮರೆತುಹೋಗಿರುತ್ತದೆ!

ಸಮಾಜದ ಪ್ರತಿಯೊಬ್ಬ ಪ್ರಜೆಯೂ ಜವಾಬ್ಧಾರಿಯುತ, ಮೌಲ್ಯಾಧಾರಿತ ಮಾತುಗಳನ್ನಾಡುವುದು ಅವಶ್ಯಕ. ಮಾತನಾಡುವ ಶಕ್ತಿ ನಮಗೆ ಉಚಿತವಾಗಿ ದೊರಕಿರುವುದು ನಿಜ, ಆದರೆ ಯಥೇಚ್ಛವಾಗಿ ಬಳಸುವುದಕ್ಕಲ್ಲ. ಮಾತಿನ ಮೇಲಿನ ಹಿಡಿತ ಕರಗತ ಮಾಡಿಸಿ, ಸಮಾಜಕ್ಕೆ ಒಬ್ಬ ಸತ್ಪ್ರಜೆಯನ್ನು ಕರುಣಿಸಿ.

-ಪ್ರವೀಣ್ ಎಸ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!