ಅಂಕಣ

ಮರೆತು ಬಿಟ್ಟೆವೆ ಗುರು ಪೂರ್ಣಿಮೆ ಕಲಿಸುವ ಪಾಠವನ್ನು…?

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆ ದಿನವನ್ನ ಗುರುಪೂರ್ಣಿಮೆಯಾಗಿ ಆಚರಿಸ್ತೀವಿ. ನಮ್ಮ ದೇಶದಲ್ಲಿ ಸುಮಾರು 240ಕ್ಕೂ ಹೆಚ್ಚು ಹಬ್ಬ ಹರಿದಿನಗಳನ್ನ ಆಚರಿಸುತ್ತೀವೆಂದು ಲಂಡನ್ನಿನ ಖಾಸಗಿ ಸಂಸ್ಥೆಯೊಂದು ವರದಿ ಮಾಡಿದೆ. ಅದಕ್ಕಿಂತ ಹೆಚ್ಚಿದ್ದರು ಏನು ಆಶ್ಚರ್ಯ ಇಲ್ಲ. ಆದರೆ ಪ್ರತಿಯೊಂದು ಆಚರನೆಯ ಹಿಂದೆಯೂ ಅದರದ್ದೇ ಆದಂತಹ ಹಿನ್ನಲೆ, ವಿಧಾನ ಹಾಗೂ ಉದ್ದೇಶ ಇದ್ದೇ ಇರುತ್ತೆ. ಅದರ ಕುರಿತು ತಿಳಿಯದೆ ಇರುವ ತಿಳಿಯಲಿಕ್ಕೆ ಪ್ರಯತ್ನ ಪಡದ ಅಜ್ಞಾನಿಗಳು,ಮೂಢರು ಅದನ್ನ ಮೂಢನಂಬಿಕೆ ಅಂತ ಹೇಳ್ತಾರೆ ಅಷ್ಟೆ. ಗುರು ಪೂರ್ಣಿಮೆಗೂ ತನ್ನದೇ ಆದಂತಹ ಹಿನ್ನಲೆ, ವಿಧಾನ ಹಾಗೂ ಉದ್ದೇಶವಿದೆ.

ನಮ್ಮ ಸಂಸ್ಕøತಿಯಲ್ಲಿ ಗುರುವಿಗೆ ಅತ್ಯಂತ ಮಹತ್ತರವಾದ ಸ್ಥಾನವನ್ನ ನೀಡಿದೀವಿ. ಕೇವಲ ಲೌಕಿಕ ಜ್ಞಾನ, ಅಂದರೆ ಹೊಟ್ಟೆಪಾಡಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಶಿಕ್ಷಣವನ್ನ ನೀಡುವವನೇ ಗುರು ಎಂಬುದು ನಮ್ಮ ಕಲ್ಪನೆಯಲ್ಲ. ತನ್ನ ಸಾಧನೆ ಮೂಲಕ ಜ್ಞಾನವನ್ನು ಪಡೆದು ಅದನ್ನು ತನ್ನ ಶಿಷ್ಯನಿಗೆ ಧಾರೆಯೆರೆದು ಆತನಿಗೆ ತನ್ನ ಜೀವನದ ಉದ್ದೇಶವನ್ನು ತಿಳಿಯುವಂತೆ ಮಾಡಿ ಅದರ ಈಡೇರಿಕೆಗೆ ಮಾರ್ಗದರ್ಶನ ಮಾಡುವವನೆ ನಿಜವಾದ ಗುರು. ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವವನೆ ಗುರು ಎಂಬುದು ನಮ್ಮ ಕಲ್ಪನೆ. ಹಾಗಾಗಿಯೆ ಗುರು ಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರ ಅಂತ ಗುರುವನ್ನ ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಹೋಲಿಸಿ ಸ್ತುತಿಸುತ್ತೀವಿ. ಆದರೆ ಇಂದು ಯಾವುದು ನಮ್ಮ ಕಲ್ಪನೆಯಲ್ಲವೋ ಅದೆ ಗಟ್ಟಿಯಾಗುತ್ತಾ ಬಂದಿದ್ದು ಇದರ ಪರಿಣಾಮ ಶಿಕ್ಷಕರನ್ನು ಸ್ನೇಹಿತನ ರೀತಿ ಏಕವಚನದಲ್ಲಿ ಸಂಭೋಧಿಸಿ ಮಾತಾಡುವಷ್ಟು ಹಗುರ ಭಾವನೆ ನಮ್ಮಲ್ಲಿ ಮೂಡಿ ಬಿಟ್ಟಿದೆ. ಅಲ್ಲದೆ ಸರಿಯಾದ ಮಾರ್ಗದರ್ಶನವಿಲ್ಲದೆ ಜೀವನದುದ್ದಕ್ಕೂ ಜೀವನದ ಉದ್ದೇಶವನ್ನು ಹುಡುಕುವುದರಲ್ಲೆ ಕಳೆದು ಮಣ್ಣಾಗಿಬಿಡುತ್ತಿದ್ದೇವೆ.

ಇನ್ನು ಒಂದಕ್ಕಿಂತ ಒಂದು ವಿಶಿಷ್ಟ ಗುರು-ಶಿಷ್ಯ ಸಂಬಂಧಗಳಿಗೆ ನಮ್ಮ ದೇಶ ಸಾಕ್ಷಿಯಾಗಿರುವುದನ್ನು ನಾವು ಕಾಣಬಹುದು. ಇಂದು ನಾವು ಯಾರನ್ನು ಮಹಾನ್ ಪುರುಷರೆಂದು ಸ್ಮರಿಸುತ್ತೇವೋ ಅವರೆಲ್ಲರ ಹಿಂದೆ ಗುರುವಿನ ಅನುಗ್ರಹ ಇದ್ದೆ ಇದೆ. ಯಾರ ಮಾತನ್ನು ಕೇಳಿದರೆ ದೇಹದಲ್ಲಿ ವಿದ್ಯುತ್ ಸಂಚಾರವಾಗುತ್ತೋ, ಯಾರನ್ನು ಇಂದು ಯುವಕರ ರೋಲ್ ಮಾಡೆಲ್ ಎಂದು ಕರೆಯಲಾಗುತ್ತಿದೆಯೋ ಅಂತಹ ಸ್ವಾಮಿ ವಿವೇಕಾನಂದರ ಹಿಂದೆ ಗುರು ಶ್ರೀ ರಾಮಕೃಷ್ಣ ಪರಮಹಂಸರಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ವೀರತ್ವ ಹಾಗೂ ಧ್ಯೇಯದ ಹಿಂದೆ ಗುರು ದಾದಾಜಿ ಕೊಂಡದೇವ ಮತ್ತು ಸಮರ್ಥ ರಾಮದಾಸರ ಆಶಿರ್ವಾದವಿದೆ. ಭಾತರದ ಇತಿಹಾಸದಲ್ಲೇ ಅತ್ಯಂತ ವೈಭವೋಪೇತಸಾಮ್ರಾಜ್ಯವಾಗಿ ಮೆರೆದಂತಹ ವಿಜಯನಗರ ಸಾಮ್ರಾಜದ ಹಿಂದೆ ಗುರು ವಿದ್ಯಾರಣ್ಯರ ಅನುಗ್ರಹವಿದೆ. ಇನ್ನು ಈ ಪರಂಪರೆಯನ್ನ ಕೇವಲ ನಮ್ಮ ಧರ್ಮಕ್ಕೇ ಮಾತ್ರ ಮೀಸಲಾಗಿಡುವಷ್ಟು ಸಂಕುಚಿತರು ನಾವಲ್ಲ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಕಳಸದ ಗೋವಿಂದ ಭಟ್ಟರು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಶಿಶುನಾಳದ ಶರೀಫರನ್ನ ಶಿಷ್ಯನಾಗಿ ಸ್ವೀಕರಿಸಿ, ಸಂಸ್ಕಾರಗಳನ್ನು ಮಾಡಿ ತಮ್ಮ ಆಧ್ಯಾತ್ಮಿಕ ಜ್ಞಾನವನ್ನ ಧಾರೆಯೆರಿತಾರೆ. ನಂತರ ಸಮಾಜ ಸುಧಾರಕರಾಗಿ, ಕನ್ನಡದ ಮೊದಲ ಮುಸ್ಲಿಂ ಕವಿಯಾಗಿ ಸಂತ ಶಿಶುನಾಳ ಶರೀಫರು ಹೊರಹೊಮ್ಮತ್ತಾರೆ.

ಹೀಗೆ ಅನೇಕ ವಿಶಿಷ್ಟ, ವಿಚಿತ್ರ ಹಾಗೂ ಶ್ರೇಷ್ಠ ಗುರು-ಶಿಷ್ಯ ಪರಂಪರೆ ನಮ್ಮದು. ಇದಕ್ಕೆ ಸಾಂಕೇತಿಕ ರೂಪ ಸಿಕ್ಕಿದ್ದು ಭಗವಾನ್ ವೇದವ್ಯಾಸರ ಕಾಲದಲ್ಲಿ. ಅಖಂಡವಾಗಿದ್ದ ವೇದವನ್ನ ಋಗ್ವೇದ,ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳಾಗಿ ವಿಂಗಡಿಸಿ ತಮ್ಮ ನಾಲ್ವರು ಶಿಷ್ಯರಾದ ವೈಶಂಪಾಯನ, ಪೈಲ, ಸುಮಂತ ಹಾಗೂ ಜೈಮುನಿಯನ್ನ ಇದರ ರಚನೆಗಾಗಿ ನಿಯುಕ್ತಿಗೊಳಿಸ್ತಾರೆ. ಕೃತಜ್ಞತೆಯ ಕುರುಹಾಗಿ ಈ ನಾಲ್ವರು ಶಿಷ್ಯರು ಗುರು ಭಗವಾನ್ ವೇದವ್ಯಾಸರನ್ನು ಆಷಾಢ ಮಾಸದ ಹುಣ್ಣಿಮೆಯ ದಿನದಂದು ಪೂಜಿಸಿ, ಸತ್ಕರಿಸಿ, ಗುರು ಕಾಣಿಕೆಯನ್ನ ಸಮರ್ಪಿಸುತ್ತಾರೆ. ಅಂದಿನಿಂದ ಈ ಗುರುಪೂಜಾ ಪದ್ಧತಿ ಜಾರಿಗೆ ಬಂದಿತೆಂದು ಹೇಳಲಾಗುತ್ತೆ. ಆದುದರಿಂದ ಇದಕ್ಕೆ ವ್ಯಾಸ ಪೂರ್ಣಿಮೆ ಎಂಬ ಹೆಸರೂ ಇದೆ.

ಇನ್ನು ಹಿಂದಿನ ಗುರುಕುಲ ಶಿಕ್ಷಣ ಪದ್ದತಿಯಲ್ಲಿ 12ವರ್ಷಗಳ ಕಾಲ ಗುರುಕುಲದಲ್ಲಿದ್ದು ವಿದ್ಯಾಭ್ಯಾಸ ಮಾಡಿದ ಸಕಲ ವಿದ್ಯೆಯನ್ನೂ ಕಲಿತ ವಿದ್ಯಾರ್ಥಿಗಳು ಗುರುಕುಲದಿಂದ ತೆರಳಬೇಕಾದರೆ ಗುರುವಿಗೆ ಪೂಜೆ  ಸಲ್ಲಿಸಿ, ಸತ್ಕರಿಸಿ, ಗುರು ಕಾಣಿಕೆಯನ್ನು ಸಮರ್ಪಿಸುತ್ತಿದ್ದರು. ಇದರಿಂದಾಗಿ ಗುರುಗಳಿಂದ ತಾನು ಏನು ಶಿಕ್ಷಣವನ್ನು ಪಡೆದಿದ್ದೇನೆ ಅದಕ್ಕೆ ಸರಿಯಾಗಿ ಅರ್ಪಣೆಯನ್ನ ಸಲ್ಲಿಸಿಬೇಕಾದುದು ತನ್ನ ಕರ್ತವ್ಯ ಎಂಬ ಭಾವನೆ ಶಿಷ್ಯರಲ್ಲಿ ಮೂಡುತ್ತಿತ್ತು. ಕೇವಲ ಸಮಾಜದಿಂದ ಪಡೆಯುವುದು ಮಾತ್ರವಲ್ಲ,ಸಮಾಜಕ್ಕೆ ಸಮರ್ಪಣಾ ಮನೋಭಾವದಿಂದ ಸಮರ್ಪಿಸುವುದು ಪ್ರತಿಯೊಬ್ಬನ ಕರ್ತವ್ಯವೆಂಬುದು ಇದರ ಉದ್ದೇಶವಾಗಿತ್ತು. ಹಾಗಾಗಿ ಶಿಕ್ಷಣವನ್ನು ಪಡೆದ ಪ್ರತಿಯೊಬ್ಬನೂ ಮೊದಲು ರೂಢಿಸಿಕೊಳ್ಳುತ್ತಿದ್ದದೆ ಸಮರ್ಪಣಾ ಮನೋಭಾವ. ಈ ಸಮರ್ಪಣಾ ಮನೋಭಾವ ಭಾರತೀಯರಿಗೇನು ಹೊಸತಲ್ಲ ಬಿಡಿ. ಹಲವಾರು ಪರಕೀಯರ ಆಕ್ರಮಣಗಳ ನಂತರವು ನಮ್ಮ ದೇಶ, ಸಂಸ್ಕøತಿ ಗಟ್ಟಿಯಾಗಿ ನಿಂತು ಮುಂದುವರಿಯುತ್ತಿದೆ ಅಂತಾದರೆ ಅದಕ್ಕೆ ಕಾರಣ ಆಯಾ ಕಾಲಘಟ್ಟದಲ್ಲಿ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಸಮರ್ಪಿಸಿಕೊಂಡು ಅಮರರಾದವರಲ್ಲಿದ್ದಂತಹ ಸಮರ್ಪಣಾ ಮನೋಭಾವನೆಯೆ.

ವೃಕ್ಷಕ್ಕಲ್ಲ ವೃಕ್ಷದ ಫಲವು

ನದಿಯ ನೀರು ನದಿಗಲ್ಲ

ಸಂತನ ಬದುಕು ಸಂತನಿಗಲ್ಲ

ಅದು ಲೋಕದ ಹಿತಕೆ-ಕಬೀರಾ||

ಮರ ತನ್ನ ಫಲವನ್ನು ತಾನು ಸೇವಿಸಲ್ಲ ಇತರರಿಗೆ ನೀಡುತ್ತೆ, ನದಿ ತನ್ನ ನೀರನ್ನು ತಾನೆಂದು ಉಪಯೋಗಿಸಲ್ಲ ಪಶು, ಪಕ್ಷಿ, ಮನುಷ್ಯರ ಉಪಯೋಗಕ್ಕಾಗಿ ನೀಡುತ್ತೆ. ಹೀಗೆ ಪರಿಸರದಲ್ಲಿಂದತಹ ಸಮರ್ಪಣಾ ಮನೋಭಾವನೆಯನ್ನ ಗುರುತಿಸಿ ಅದನ್ನ ಪಾಠವಾಗಿ ಕಲಿತವರು ನಾವು. ನಮ್ಮ ಪೂರ್ವಜರಾದ ಋಷಿ ಮುನಿಗಳು ಕಾಡಲ್ಲಿ ಕಠಿಣ ತಪಸ್ಸು ಹಾಗೂ ಅನುಷ್ಠಾನಗಳ ಮೂಲಕ ಪಡೆದಂತಹ ಜ್ಞಾನವನ್ನ ಎಂದೂ ಇದು ನಾನು ಕಂಡು ಹಿಡಿದಿದ್ದು ಇದು ನನಗೆ ಮಾತ್ರವೆಂದು ಮುಚ್ಚಿಡಲಿಲ್ಲ, ಪೇಟೆಂಟ್ ಪಡೆಲಿಲ್ಲ ಬದಲಾಗಿ ಲೋಕಕ್ಕೆ ಸಮರ್ಪಿಸಿಬಿಟ್ಟರು. ಯೋಗ ಪಿತಾಮಹ ಪತಂಜಲಿ ಮಹರ್ಷಿಗಳನ್ನ ಇಂದಿಗೂ ಅದೆಷ್ಟು ಮಂದಿ ನಿತ್ಯ ಸ್ಮರಿಸಲ್ಲ ಹೇಳಿ?.

ಇನ್ನು ಈ ಸಮರ್ಪಣಾ ಮನೋಭಾವಕ್ಕೆ ಉದಾಹರಣೆಗಳನ್ನು ಹುಡುಕುತ್ತಾ ಹೋದಾಗ ಮೊದಲು ನಮ್ಮ ಕಣ್ಣಿಗೆ ಕಾಣದೆ ಪ್ರಭು ಶ್ರೀರಾಮನ ಸೇವೆಯಲ್ಲಿ ತನ್ನನ್ನು ತಾನು ಸಂಪೂರ್ಣ ಸಮಿರ್ಪಿಸಿಕೊಂಡ ಹನುಮಂತ. ಡಿವಿಜಿಯವರು ತಮ್ಮ ಕಗ್ಗದಲ್ಲಿ ಹನುಮಂತನ ಉಪದೇಶವನ್ನ ಅರ್ಥಗರ್ಭಿತವಾಗಿ ವರ್ಣಿಸುತ್ತಾರೆ.

ಘನತತ್ವವೊಂದಕ್ಕೆ ದಿನ ರಾತ್ರಿ ಮನಸೋತು

ನೆನೆಯದಿನ್ನೊಂದನ್ನೆಲ್ಲವ ನೀಡುತದರಾ

ಅನುಸಂಧಿಯಲಿ ಜೀವ ಭಾರವನು ಮರೆಯುವುದು

ಹನುಮಂತನುಪದೇಶ-ಮಂಕುತಿಮ್ಮ||

ಅವನ ಮನಸ್ಸಿನಲ್ಲಿದ್ದು ರಾಮ, ರಾಮ ಮತ್ತು ರಾಮ ಮಾತ್ರ ಅದರ ಹೊರತಾಗಿದ್ದೆಲ್ಲ ಅವನಿಗೆ ನಗಣ್ಯ. ತನ್ನ ಜೀವನದ ಉದ್ದೇಶವೆ ಪ್ರಭು ಶ್ರೀರಾಮನ ಸೇವೆಯಂತೆ ಕಂಡುಕೊಂಡ ಮತ್ತು ಅದರಲ್ಲೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡ. ಇದೆ ರೀತಿ ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸುವುದರ ಮೂಲಕ ಅದೆಷ್ಟು ಮಂದಿ ಹನುಮಂತನ ಉಪದೇಶವನ್ನು ಚಾಚೂ ತಪ್ಪದೆ ಪಾಲಿಸಿದರು!. ಬಿಜಾಪುರದ ಆದಿಲಶಾಹನ ಅಡಿಯಲ್ಲಿ ಸರದಾರನ ಮಗನಾಗಿದ್ದ ಶಿವಾಜಿ ಇತರ ಸ್ವದೇಶಿ ರಾಜರುಗಳಂತೆ ಭೋಗಕ್ಕೆ ಆಸೆ ಪಡದೆ ಪರಕೀಯರಿಗೆ ಸೆಡ್ಡು ಹೊಡೆದು ಅವರ ದುರಾಡಳಿತ ಕೊನೆಗೊಳಿಸಲು ಸ್ವರಾಜ್ಯದ ಸಂಕಲ್ಪ ತೊಟ್ಟ ಹಾಗೂ  ಈಡೇರಿಕೆಗಾಗೆ ತನ್ನ ಜೀವನವನ್ನು ಸಂಪೂರ್ಣ ಸಮರ್ಪಿಸಿಕೊಂಡ. ಇನ್ನು ವಾಸುದೇವ ಬಲವಂತ ಫಡಕೆಯಾದಿಯಾಗಿ ಅದೆಷ್ಟು ಮಂದಿ ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಭವಿಷ್ಯ,ಕುಟುಂಬ,ಕನಸು, ವಯಸ್ಸನ್ನೂ ಲೆಕ್ಕಿಸದೆ ಜೀವವನ್ನು ಸಂತೋಷದಿಂದ ಸ್ವಾತಂತ್ರ್ಯದ ಯಜ್ಞಕ್ಕೆ ಅರ್ಪಿಸಿದರು. ಕೆಲವರು ಬ್ರಿಟೀಷರಿಗೆ ಆಪ್ತರಾಗುತ್ತಾ ಉತ್ತಮ ವ್ಯವಸ್ಥೆಯಿರುವ ಸೆರೆಮನೆಗಳಲ್ಲಿ ಕಾಲವನ್ನು ಕಳೆದು ಮಹತ್ಮರಾದರೆ,ಇನ್ನು ಕೆಲವರು ಬ್ರಿಟೀಷರಿಗೆ ಸೆಡ್ಡು ಹೊಡೆದು ಕರಿನೀರಿನಂತಹ ಕಠಿಣ ಜೀವಾವಧಿ ಶಿಕ್ಷೆಯನ್ನು ಅನುಭವಿಸಿ ಸ್ವಾತಂತ್ರ್ಯ ವೀರರಾಗಿ ಅಮರರಾದರು. ಸ್ವಾತಂತ್ರ್ಯ ನಂತರ ರಾಜಕೀಯ, ಸಾಮಾಜಿಕ,ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರಗಳಲ್ಲಿ ಭಾರತದ ಏಳಿಗೆಗಾಗಿ ಹಲವಾರು ಮಂದಿ ತಮ್ಮನ್ನ ತಾವು ಸಮರ್ಪಿಸಿಕೊಂಡರು. ಭಾರತ ಕಂಡ ಶ್ರೇಷ್ಠ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಡಾ.ಅಬ್ದುಲ್ ಕಲಾಂಗೆ ತಮ್ಮ ಓದಿನ ನಂತರ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಗೆ ಹಾರಿ ಬಿಡಬಹುದಿತ್ತಲ್ಲ? ಆದರೆ ಇನ್ನು ಅಂಬೆಗಾಲಿಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಸೇರಿ, ಅದರ ಕಾರ್ಯಕದಲ್ಲೆ ಸಂಪೂರ್ಣ ಮಗ್ನರಾಗಿ ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿನೆದುರು ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದರು. ಹೀಗೆ ಪ್ರತಿಯೊಂದು ಕಾಲಘಟ್ಟದಲ್ಲೂ ತ್ಯಾಗದ ಅವಶ್ಯಕತೆಯಿದ್ದಾಗ ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಸ್ವಾರ್ಥ ಆಸೆಗಳನ್ನು ಬಿಟ್ಟು ತಮ್ಮನ್ನ ತಾವು ಸಮರ್ಪಿಸಿಕೊಂಡಂತಹ ಅನೇಕ ಪ್ರೇರಣಾದಾಯಕ ವ್ಯಕ್ತಿತ್ವಗಳು ನಮಗೆ ದೊರಕುತ್ತೆ.

ಹಿಂದೆ ಈ ಕೌಟುಂಬಿಕ ಮೌಲ್ಯಗಳು ಸಮರ್ಪಣಾ ಮನೋಭಾವ ಜಾಗೃತವಾಗಿರಿಸುತ್ತಿತ್ತು. ಕುಟುಂಬದಲ್ಲಿ ಅನೇಕ ಮಕ್ಕಳಿರುತ್ತಿದ್ದರು ಹಾಗಾಗಿ ಕೆಲವು ಮಂದಿ ಮನೆ ಜವಬಾýರಿಯನ್ನು ನೋಡಿಕೊಂಡರೆ ಇನ್ನುಳಿದವರು ಸಮಾಜದ ಜವಬಾýರಿಯನ್ನು ಹೊರುತ್ತಿದ್ದರು. ಹೀಗೆ ಪ್ರತಿ ಕುಟುಂಬವು ತನ್ನದೇ ಆದಂತಹ ಕೊಡುಗೆಯನ್ನು ಸಮಾಜಕ್ಕೆ ಸಲ್ಲಿಸುತ್ತಿತ್ತು. ಕೇವಲ ತಾನು ತನ್ನ ಕುಟುಂಬ ಮಾತ್ರವಲ್ಲ ಸಮಾಜವು ನಮ್ಮದೆ ಅದಕ್ಕೆ ಸಲ್ಲಿಸಬೇಕಾದುದು ನಮ್ಮ ಕರ್ತವ್ಯ ಎಂಬುದು ಮನೆಪಾಠವಾಗಿತ್ತು. ಸ್ವಾತಂತ್ರದ ಕಿಡಿ ಹೆಚ್ಚಾಗುತ್ತಾ ಹೋದಂತು ಮಹಿಳೆ ಮಕ್ಕಳೆನ್ನದೆ ಇಡಿ ಕುಟುಂಬವೆ ಸಂಪೂರ್ಣವಾಗಿ ಚಳುವಳಿಗಳಲ್ಲಿ ತೊಡಗಿಸಿಕೊಂಡಂತಹ ಕಥೆಗಳನ್ನ ನಾವು ಕೇಳಿದಿವಿ.

ಆದರೆ ದುರದೃಷ್ಟವಶಾತ್ ಇಂದು ಕುಟುಂಬಗಳು ಸಂಖ್ಯೆಯಲ್ಲಿ ಸಂಕುಚಿತವಾಗುವುದರ ಜತೆಗೆ ಕೌಟುಂಬಿಕ ಮೌಲ್ಯಗಳು ಕಡಿಮೆಯಾಗಿ ಸ್ವಾರ್ಥ ಹೆಚ್ಚಾಗುತ್ತಿದೆ. ಕೇವಲ ನಾನು, ನನ್ನ ಸಂಸಾರ, ನನ್ನ ಮಕ್ಕಳು ಎಂಬ ಭಾವನೆ ಹೆಚ್ಚಾಗಿ ಸಮಾಜಕಾರ್ಯ,ರಾಷ್ಟ್ರಕಾರ್ಯದ ಮನೋಭಾವನೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವ ಕೆಲಸ ನಡೆಯುತ್ತಿದೆ. ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಕುಟುಂಬಕ್ಕೊಬ್ಬ ದೇಶಕ್ಕೊಬ್ಬ ಎಂಬತಹ ಶ್ರೇಷ್ಠ ಚಿಂತನೆಯನ್ನು ಮರೆತು ನಾವಿಬ್ಬರ ನಮಗಿಬ್ಬರು ಅಲ್ಲ ನಮಗೇ ಇಬ್ಬರೂ ಎಂಬ ಸಂಕುಚಿತ ಮನೋಭಾವನೆ ನಮ್ಮಲ್ಲಿ ಬೆಳೆಯುತ್ತಿದೆ. ಇನ್ನು ಮನೆಯಲ್ಲಿ ಒಬ್ಬನೆ ಮಗನಿದ್ದರಂತೂ ಅವನ ಕಥೆ ಮುಗಿದಂತೆಯೆ ವಂಶೋದ್ಧಾರಕ ಪಟ್ಟ ಕಟ್ಟಿ ತಮ್ಮ ಆಸೆಗಳನ್ನೆಲ್ಲ ಅವನ ಮೇಲೆ ಹೇರಿ ಕೇವಲ ಓದು,ಕೆಲಸ, ಹುಡುಗಿ, ಮದುವೆ, ಮಕ್ಕಳು ಇವುಗಳನ್ನು ಪಡೆಯುವುದೆ ನಿನ್ನ ಜೀವನದ ಪರಮೋದ್ಧೆಶವಪ್ಪಾ ಎಂದು ತಲೆಯಲ್ಲಿ ತುಂಬಿ ಬಿಡುತ್ತಾರೆ. ಮಗನ್ನೆಲ್ಲಾದರೂ ಅಪ್ಪಿತಪ್ಪಿ ಸಮಾಜ,ಸಂಘಟನೆಯೆಂದು ಹೊರ ಹೋದರೆ ಮಗ ಎಲ್ಲಿ ಕೈ ತಪ್ಪಿ(?) ಹೋಗುವನೋ ಎಂಬ ಭಯದಲ್ಲಿ ಚಿಕ್ಕವಯಸ್ಸಿನಿಂದಲೇ ನಾಲ್ಕು ಗೋಡೆಗಳ ನಡುವೆ ಕಾರ್ಟೂನ್ ಚಾನೆಲ್‍ಗಳನ್ನು ತೋರಿಸುವುದರ ಮೂಲಕ ಕಾರ್ಟೂನುಗಳನ್ನಾಗಿ ಬೆಳೆಸುತ್ತಾರೆ. ಒಮ್ಮೆ ಯೋಚಿಸಿ ಭಗತ್ ಸಿಂಗ್, ಚಂದ್ರಶೇಖರ ಆಜಾದ್,ಖುದಿರಾಮ್ ಬೋಸ್, ಅಶ್ಫಾಕ್‍ಉಲ್ಲಾ ಖಾನ್ ಮೊದಲಾದ ಯುವ ಸ್ವಾತಂತ್ರ್ಯ ಹೋರಾಟಗಾರರು ಓದು, ಕಾಲೇಜು ಜೀವನ, ಕೆಲಸ, ಮದುವೆ, ಮಕ್ಕಳು ಎಂಬುದಾಗಿ ಕೇವಲ ಸ್ವಂತ ಜೀವನದ ಕುರಿತು ಆಲೋಚಿಸಿದ್ದರೆ ಇಂದು ದೇಶದ ವಿಶ್ವವಿದ್ಯಾಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ದುರುಪಯೋಗಪಡಿಸಿಕೊಳ್ಳುವಷ್ಟು ಸ್ವತಂತ್ರ ನಮಗೆ ದೊರಕುತ್ತಿತ್ತೇನು?. ಒಬ್ಬನೆ ಮಗ, ಮನೆಯಲ್ಲಿ ಬಡತನವಿದ್ದರೂ ಎರಡು ಬಾರಿ ದೇಶ ಪರ್ಯಟನೆ ಮಾಡಿ, ಸಮಾಜದ ದುಸ್ಥಿತಿಗೆ ಕಣ್ಣಿರಿಟ್ಟು,ವಿದೇಶದವರು ಭಾರತದ ಜ್ಞಾನಕ್ಕೆ ತಲೆ ಬಾಗುವಂತೆ ಮಾಡಿ, ಭಾರತೀಯರಲ್ಲಿ ಬತ್ತಿ ಹೋಗಿದ್ದ ಆತ್ಮವಿಶ್ವಾಸವನ್ನು ಬಡಿದೇಳಿಸುವ ಕೆಲಸ ಸ್ವಾಮಿ ವಿವೇಕಾನಂದರಿಗೇಕೆ ಬೇಕಿತ್ತು? ಪರಕೀಯ ರಾಜರುಗಳಿಗೆ ಸಲಾಂ ಹೊಡೆದು ಶಿವಾಜಿ ಸುಖ ಜೀವನವನ್ನು ನಡೆಸಬಹುದಿತ್ತಲ್ಲ?. ಎರಡು ಬಾರಿ ಜೀವಾವಧಿ ಶಿಕ್ಷೆ, ಒಂದು ಕರಿ ನೀರಿನ ಶಿಕ್ಷೆ ಅನುಭವಿಸಿದ್ದಲ್ಲದೆ ತನ್ನ ಅಣ್ಣ,ತಮ್ಮ ಹಾಗೂ ಸ್ವಂತ ಮಗನನ್ನೂ ದೇಶಕ್ಕೋಸ್ಕರ ಕಳೆದುಕೊಳ್ಳುವಂತಹ ಉಮೇದಾದರೂ ಸಾವರ್ಕರರಿಗೆ ಏನಿತ್ತು? ಚಿನ್ನದ ಕೋಳಿಯನ್ನರಸುತ್ತಾ ಡಾ.ಅಬ್ದುಲ್ ಕಲಾಂ ಅಮೇರಿಕಾಗೆ ಹಾರಿ ಬಿಡಬಹುದಿತ್ತಲ್ಲಾ?. ಹೌದು ಇಂದಿಗೂ ನಮ್ಮ ದೇಶದಲ್ಲಿ ಮತ್ತೊಬ್ಬ ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ ಹುಟ್ಟಲಿ ಎಂದು ಪ್ರತಿಯೊಬ್ಬ ಭಾರತೀಯನೂ ಆಶಿಸುತ್ತಾನೆ ಆದರೆ ನಮ್ಮ ಮನೆಯಲ್ಲಿ ಬೇಡ ಪಕ್ಕದ ಮನೆಯಲ್ಲಿರಲಿ ಎಂಬ ಸಣ್ಣ ಆಸೆ ಅಷ್ಟೆ. ಎಲ್ಲಿ ಹೋಯಿತು ಸಮರ್ಪಣೆಯ ಮನೋಭಾವ? ರಾಷ್ಟ್ರಕ್ಕಾಗಿ,ಸಮಾಜಕ್ಕಾಗಿ ಬದುಕುವಂತಹ ಸಂಸ್ಕಾರ?

ಹೀಗೆ ಕಾಲ ಕಳೆದಂತೆ(ಸ್ವಾತಂತ್ರದ ನಂತರ) ಭಾರತೀಯರಲ್ಲಿ ಸಮಾಜದ ಕುರಿತು, ರಾಷ್ಟ್ರಕಾರ್ಯದ ಕುರಿತ ಚಿಂತನೆಗಳು ದೂರವಾಗುತ್ತದೆ ಎಂಬುದನ್ನು 90 ವರ್ಷಗಳ ಹಿಂದೆಯೇ ಈ ದೇಶದ ಒಬ್ಬ ಮಹಾನ್ ದಾರ್ಶನಿಕ ಕಂಡು ಕೊಂಡಿದ್ದ. ಹಾಗಾಗಿ ಸ್ವಾರ್ಥ ಬಿಟ್ಟು ದೇಶಕ್ಕಾಗಿ, ಸಮಾಜಕ್ಕಾಗಿ ಸ್ವತಃ ಮುಂದೆ ಬಂದು ಕೆಲಸ ಮಾಡುವ, ತನ್ನನ್ನ ತಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವಂತಹ ಸ್ವಯಂಸ್ವೇವಕರ ಪಡೆಯನ್ನು ಕಟ್ಟುವ ಕನಸ್ಸನ್ನು ಕಂಡರು ಕ್ಷಮಿಸಿ ಸಂಕಲ್ಪ ತೊಟ್ಟರು ಮತ್ತು ಇಂತಹ ಸಮರ್ಪಿತ ಕಾರ್ಯಕರ್ತರ ಭರವಸೆಯ ಮೇಲೆಯೇ ರಾಷ್ಟ್ರದ ಎಲ್ಲ ಕ್ಷೇತ್ರಗಳ ಏಳ್ಗೆ ಸಾಧ್ಯವೆಂಬುದನ್ನ ತಿಳಿಸಿದರು. ಅದರ ಫಲವಾಗಿಯೇ ಇಂದು ರಾಷ್ಟ್ರಕ್ಕಾಗಿ ಕುಟುಂಬವನ್ನು ತ್ಯಾಗ ಮಾಡಿ,ವಿಶ್ರಾಂತಿಯಿಲ್ಲದೆ ಸಾವಿರಾರು ಮೈಲಿ ಪ್ರಯಾಣ ಮಾಡಿ, ದಿವಸಕ್ಕೆ 18 ತಾಸುಗಳ ಕಾಲ ಕೆಲಸ ಮಾಡುವ ಸಮರ್ಪಣಾ ಮನೋಭಾವದ ವ್ಯಕ್ತಿತ್ವವನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತಿರುವುದು. ಈ ಸಮರ್ಪಣಾ ಮನೋಭಾವ ನಮ್ಮಲ್ಲಿ ಇನ್ನಷ್ಟು ಜಾಗೃತವಾಗಬೇಕಿದೆ ಹಾಗಾಗಿ ಈ ಸಮರ್ಪಣಾ ಮನೋಭಾವವನ್ನು ಉತ್ತೇಜಿಸುವಂತಹ ರಾಷ್ಟ್ರಕಾರ್ಯಕ್ಕೆ, ಸಮಾಜ ಕಾರ್ಯಕ್ಕೆ ಸದಾ ಪ್ರೇರಣೆ ನೀಡುವ ಸಂಕೇತವೆ ನಮ್ಮ ಗುರುವಾಗಬೇಕು ಮತ್ತು ಆ ಗುರುವನ್ನು ನಿತ್ಯ ಅರ್ಚಿಸುವಂತಹ, ಅದಕ್ಕಾಗಿ ತನು ಮನ ಧನವನ್ನು ಅರ್ಪಿಸುವಂತಹ ಕೆಲಸವಾಗಬೇಕು. “ಸಮಾಜಕ್ಕೆ ಏನು ನೀಡದೆ,ಕೇವಲ ಅದರಿಂದ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಹಾಗಾಗಿ ಸಮಾಜಕ್ಕೆ ಸಲ್ಲಿದಸಬೇಕಾದುದು ಪ್ರತಿಯೊಬ್ಬನ ಆದ್ಯ ಕರ್ತವ್ಯ”ಎಂದು ಹೇಳಿದ ಪಂಡಿತ ದೀನದಯಾಳ ಉಪಾಧ್ಯಾಯರ ಮಾತನ್ನು ನಿತ್ಯ ಸ್ಮರಿಸೋಣ. ಆ ಮೂಲಕ ಸಮಾಜದಿಂದ ಏನನ್ನು ಪಡೆದಿದ್ದೇವೆ ಅದಕ್ಕೆ ಸರಿ ಸಮಾನವಾಗಿ ಸಮಾಜಕ್ಕೆ ಸಲ್ಲಿಸುವಂತಹ ಸಂಕಲ್ಪವನ್ನು ಈ ಗುರು ಪೂರ್ಣಿಮೆ ದಿನ ಮಾಡೋಣ. ಗುರು ಪೂರ್ಣಿಮೆ ಹೇಳಿಕೊಡುವ ಪಾಠವನ್ನು ಕಲಿಯೋಣ. ಮುಗಿಸುವ ಮುನ್ನ ಮತ್ತೊಮ್ಮೆ ನೆನಪಿಸಿಕೊಳ್ಳಿ, ಇಂದು ಭಾರತ ಭಾರತವಾಗಿ ಉಳಿದಿರುವುದು ಈ ಸಮರ್ಪಣಾ ಮನೋಭಾವದಿಂದಲೆ ಮತ್ತು ಮುಂದೆ ಜಗದ್ಗುರುವಾಗುವುದೂ ಸಮರ್ಪಣಾ ಮನೋಭಾವದಿಂದಲೇ.

 

–   ಚೈತನ್ಯ ಕುಡಿನಲ್ಲಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!