ಅದೋ ನೋಡಿ ಹಾರುತಿದೆ ಬಿಳಿ ಬಾನಾಡಿ
ಶಾಂತಿಯ ರೆಕ್ಕೆಗಳ ಹರಡಿ
ಬಾನಗಲ.. ಮನಸುಗಳ ಮನೆಯೊಳಗೆ ಹಾರಾಡಿ
ನವೋಲ್ಲಾಸದ ಗಾನವ ಹಾಡಿ
ಹಾರುತಿದೆ.. ಹಾರುತಿದೆ.. ಹಾರುತಿದೆ..!
ಯಾರಿದನು ಹಾರಿ ಬಿಟ್ಟಿರಬಹುದು
ಬುದ್ಧನೋ.. ಮಹಾವೀರನೋ..
ಯಾರಿದಕೆ ಕನಸುಗಳ ತುಂಬಿರಬಹುದು
ಗಾಂಧಿಯೋ.. ಮಂಡೇಲನೋ..!
ಹೋದ ದಾರಿಯಲೆಲ್ಲ ಚೆಲ್ಲುತಿದೆ
ವಿಶ್ವಶಾಂತಿಯ ಬೆಳದಿಂಗಳು
ಮನವು ಬಯಸಿತು ಇನ್ನಾದರು ಮುಗಿಯಲಿ
ಹಿಂಸೆಯ ಇರುಳು..!
ಕಣ್ಣೀರು ಇಂಗಿರುವ ಸಹಸ್ರಾರು ಕಂಗಳಲಿ
ಮೂಡಲಿ ಹೊಸ ಕನಸುಗಳು
ನಿರ್ನಾಮವಾಗಲಿ ಹಿಂಸಾ ರಾಜ್ಯ
ಅರಳಲಿ ಅಹಿಂಸೆಯ ಹೂಗಳು!
ಆದರೆ.. ಮತ್ತೆ ಆರ್ಭಟಿಸುತಿವೆ ಮಿಂಚು ಸಿಡಿಲು
ಚದುರುತಿವೆ ಬೆಳ್ಳಿ ಮೋಡಗಳು
ಮುತ್ತಿಕೊಳ್ಳುತ್ತಿವೆ ದಟ್ಟ ಕಾರ್ಮೋಡಗಳು
ಅಯ್ಯೋ… ಮತ್ತೆ ಕ್ರೌರ್ಯದ ಪ್ರಳಯವೇ..!
ಎಲ್ಲಿ ಹೋಯಿತು ಆ ಬಿಳಿ ಪಾರಿವಾಳ
ರಾಮ ರಾಜ್ಯದ ಕನಸ ಹೊತ್ತು ತಂದು
ರಾವಣ ರಾಜ್ಯಕ್ಕೆ ಹೆದರಿ ಓಡಿತೇ
ದೂರ.. ದೂರದವರೆಗೂ ಕಾಣುತ್ತಿಲ್ಲವೇಕೆ..?!
ಅದೋ ಅಲ್ಲಿದೆ..! ಕಾರ್ಮುಗಿಲೆಡೆಯಲಿ ನರಳುತಿದೆ
ಹಿಂಸೆಯ ರಕ್ತ ಮೈಯೆಲ್ಲ ಹರಡಿದೆ
ನಿಂತಿದೆ ಶಾಂತಿ ಸಂದೇಶದ ಹಾರಾಟ
ಮತ್ತೆ ವಿಜ್ರಂಭಿಸಿದೆ ಕ್ರೌರ್ಯದ ಆರ್ಭಟ
ಮುಗಿಯುವುದೆಂದು ಹಿಂಸೆಯ ಈ ಹೊಸ ಆಟ!