ಅಂಕಣ

ಫೋಬಿಯಾ..

          “ಇಡ್ಲಿ,ವಡಾ….” ಕಿವಿಯ ಹತ್ತಿರವೇ ಕೂಗಿದಂತಾಗಿ ಎದ್ದು ಕುಳಿತೆ. ಗಂಟೆ ಆಗಲೇ ಆರೂವರೆ. ಕಿಟಕಿ ತೆರೆಯುತ್ತಿದ್ದಂತೆ ಸುಷ್ಮಾ ಮಲಗಿದಲ್ಲಿಂದಲೇ ಕೇಳಿದಳು, “ಯಾವೂರು ಬಂತ್ರೀ?”. “ಗದಗ, ಏಳಿನ್ನು ಚಾ ಕುಡಿಯೋಣು”, ನಾನು ಹೆಳಿದೆ. “ಅಪ್ಪಾ, ನಂಗ ವಡಾ ಬೇಕು”, ಮಿಡಲ್ ಬರ್ಥ್’ನಲ್ಲಿ ಮಲಗಿದ್ದ ಮಗಳು ಸುಕನ್ಯಾ ಹೇಳಿದಳು. ನಾನು ಹೊದ್ದುಕೊಂಡಿದ್ದ ಚಾದರ ಮಡಿಸುತ್ತಾ, “ಎದ್ದು ಮೊದಲು ಮುಖ ತೊಳಕೊ, ಆಮೇಲೆ ನೋಡೋಣ”.

          ವಡಾ ತಿನ್ನುತ್ತ ಸುಷ್ಮಾ ಹೇಳಿದಳು, “ನಾಕು ದಿನ ಎಷ್ಟು ಲಗೂ ಕಳೆದು ಹೋತಲ್ಲ?..”. ಅವಳಿನ್ನೂ ಪ್ರವಾಸದ ಹ್ಯಾಂಗೋವರಿನಲ್ಲೇ ಇದ್ದಳು. ಸುಕನ್ಯಾ ಸಹ, ” ಅಪ್ಪಾ, ಹುಬ್ಬಳ್ಳಿ ಮುಟ್ಲಿಕ್ಕೆ ಇನ್ನೊಂದು ತಾಸು ಬೇಕಲ್ಲ? ನಾಳಿಂದ ಮತ್ತೆ ಅದೇ ರುಟೀನು ಸುರು, ಕಾಲೇಜು,ಲೆಕ್ಚರು, ಪ್ರಾಕ್ಟಿಕಲ್ಲು,ಇನ್ನೂ ನಾಕ್ದಿನ ಹೀಂಗ ಇನ್ನೆಲ್ಲರ ಹೋಗ್ಬೇಕಿತ್ತು.”

          “ನಾಕ್ದಿನ ಅಲ್ಲ, ತಿಂಗಳು ತಿರುಗಿದ್ರೂ ನೀ ಹಿಂಗ ಅನ್ನಾಕಿ”.

          ನಾವೆಲ್ಲರೂ ತಿರುಪತಿಗೆ ಹೋಗಿ ವಾಪಸ್ಸು ಬರುತ್ತಿದ್ದೆವು. ಪ್ರವಾಸದ ಕೊನೆಯ ಹಂತ. ಸುಕನ್ಯಾ ಅಂದಂತೆ ಇನ್ನೊಂದು ತಾಸಿನ ನಂತರ ನಮ್ಮ ದಿನಚರಿ ಎಂದಿನಂತೆ ಶುರು.

          ಗದಗದಿಂದ ಹೊರಟ ಹರಿಪ್ರಿಯಾ ಎಕ್ಸ್’ಪ್ರೆಸ್’ಎಲ್ಲೂ ನಿಲ್ಲದೇ ಒಂದು ಗಂಟೆಯೊಳಗೆ ಹುಬ್ಬಳ್ಳಿ ತಲುಪುತ್ತದೆ. ಚಹ ಕುಡಿದು ಫ಼್ರೆಶ್ ಆದ ನಾವು ಸಾಮಾನೆಲ್ಲಾ ಜೋಡಿಸಿಕೊಳ್ಳತೊಡಗಿದೆವು. ಒಮ್ಮಿಂದೊಮ್ಮಿಗೇ ರೈಲಿನ ಸಿಳ್ಳು ಜೋರಾಗಿ ಕೇಳಿತು. ಅದೂ ನಾಲ್ಕೈದು ಬಾರಿ. “ಹುಲಕೊಟ್ಯಾಗೇನೂ ನಿಂದರಂಗಿಲ್ಲಲ್ಲ? ಇಷ್ಟ್ಯಾಕ ಜೋರಾಗಿ ಆವಾಜ್ ಮಾಡ್ಲಿಕತ್ಯಾನ? ” ಸುಷ್ಮಾ ಕಿವಿ ಮುಚ್ಚಿಕೊಂಡು ಬಡಬಡಿಸಿದಳು. “ಯಾವ್ದರ ಪ್ರಾಣಿ ಟ್ರ್ಯಾಕಿನ ಮೇಲೆ ಮಲಕೊಂಡಿರಬಹುದು” ಸುಕನ್ಯಾ ಕಿಟಕಿಯಿಂದ ನೋಡುತ್ತಲೇ ಹೇಳಿದಳು.

          ಅನಿರೀಕ್ಷಿತವಾಗಿ ಹುಲಕೋಟಿಯಲ್ಲಿ ಟ್ರೇನು ನಿಂತಿತು. ಜನರೆಲ್ಲಾ ಗುಂಪುಗುಂಪಾಗಿ ಕೆಳಗಿಳಿದು ಏನೋ ನೋಡುವವರಂತೆ ಹಿಂದಕ್ಕೆ ನಡೆಯುತ್ತಿದ್ದರು. ನಾನೂ ಸಹ ಕೆಳಗಿಳಿದೆ. ಸುಕನ್ಯಾ ಜೊತೆಗೂಡಿದಳು. ಜನರ ಮಾತಿನಿಂದ ತಿಳಿದಿದ್ದಿಷ್ಟು. ಯಾರೋ ಒಬ್ಬಾತ ಟ್ರ್ಯಾಕಿನ ಮೇಲೆ ನಡೆಯುತ್ತ ಬಂದು ಆತ್ಮಹತ್ಯೆ ಮಾಡಿಕೊಂಡನಂತೆ. ಸುಮಾರು ದೂರದಲ್ಲಿ ಛಿದ್ರಛಿದ್ರವಾಗಿ ಬಿದ್ದಿದ್ದ ಹೆಣ ರಕ್ತದ ಮಡುವಿನಲ್ಲಿತ್ತು. ಅಷ್ಟರಲ್ಲೇ ಇಂಜಿನ್ನಿನ ಕಡೆಯಿಂದ ಬಂದ ಒಬ್ಬ ರೇಲ್ವೆ ಕಾರ್ಮಿಕ, “ಯಾರರ ಡಾಕ್ಟರ್ ಅದಾರೇನ್ರೀ ಇಲ್ಲಿ?” ಎಂದು ಕೂಗಿದ. ಸ್ವಗತವೆಂಬಂತೆ ನಾನು ಹೇಳಿದೆ, ” ಏನೂ ಉಪಯೋಗಿಲ್ಲ, ಎಲ್ಲಾ ಮುಗದ್ ಹೋಗ್ಯದ”.

          “ಅಯ್ಯ ಅವಂಗಲ್ರೀ, ಇಂಜಿನ್ನಾಗ್ ನಮ್ಮ ಡ್ರೈವರ್ ಎಚ್ಚರ ತಪ್ಪಿ ಬಿದ್ದಾನ, ಯಾರರೇ ನೋಡ ಬರ್ರೀ” ಆತ ಅವಸರಿಸಿದ.

          “ಎಚ್ಚರ ತಪ್ಪಿ ಗಾಡಿ ನಡೆಸಿದ್ದಕ್ಕ ಆ ಮನಸಾ ಸತ್ನೋ ಏನೋ ಹಂಗರೆ?” ಯಾರದ್ದೋ ಪಿಸುಮಾತು ಕೇಳಿಸಿತು. ಇನ್ನೊಬ್ಬ ಜೋರಾಗಿ ” ಏ ಹೋಗ, ಅಂವಾ ಎಚ್ಚರ ತಪ್ಪಿದ್ದಾ ಅಂತಂದ್ರ ನಾವೆಲ್ಲಾರೂ ಇಷ್ಟೊತ್ತಿಗೆ ಸತ್ತಿರ್ತಿದ್ವಿ” ಅದೊಂದು ಜೋಕೆಂಬಂತೆ ಎಲ್ಲರೂ ನಕ್ಕರು.

          ನಾನು ಗಡಿಬಿಡಿಯಿಂದ ನಮ್ಮ ಬೋಗಿಯೊಳಗೆ ಹೋದೆನು. “ಏನಾಗೇದ್ರೀ” ಸುಷ್ಮಾ ಕೇಳುತ್ತಿದ್ದರೂ ಏನೂ ಹೇಳದೇ ಸುಕನ್ಯಾಳಿಗೆ ಅಲ್ಲೇ ಇರಹೇಳಿ ನನ್ನ ಕಿಟ್ ಎತ್ತಿಕೊಂಡು ಇಂಜಿನ್ನಿನತ್ತ ಧಾವಿಸಿದೆ.

          ಡ್ರೈವರ್ ಸುಮಾರು ೨೩-೨೪ರ ತರುಣ. ನಿಂತಲ್ಲೇ ಕುಸಿದಿದ್ದ. ಆತನ ಜೊತೆಗಿದ್ದವರು ಮುಖಕ್ಕೆ ನೀರು ತಟ್ಟಿ ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದರು. ಆತನ ಎದೆಬಡಿತ ಏರುಪೇರಾಗಿತ್ತು. ತುಟಿ, ಕೈ ಬೆರಳುಗಳು ಹೆದರಿಕೆಯಿಂದ ನಡುಗುತ್ತಿದ್ದವು. ಬೆವರಿನಿಂದಾಗಿ ಹಾಕಿದ ಶರಟು ಮೈಗಂಟಿಕೊಂಡಿತ್ತು. ನಾನು ನನ್ನ ಹತ್ತಿರವಿದ್ದ ಗುಳಿಗೆಯೊಂದನ್ನು ಕೊಟ್ಟೆ. ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡಂತೆ ಕಂಡರೂ ಆತ ಕೆಲಸ ಮಾಡಲು ಒಪ್ಪಲಿಲ್ಲ. ಅಷ್ಟು ಹೊತ್ತಿಗೆ ಕೆಲ ರೇಲ್ವೆ ಅಧಿಕಾರಿಗಳು ಬಂದರು. ಆಕಸ್ಮಿಕವಾಗಿ ಎದುರಾದ ಆಕ್ಸಿಡೆಂಟ್ನಿಂದಾಗಿ ಗಾಬರಿಗೊಂಡ ಆತನಿಗೆ ವಿಶ್ರಾಂತಿ ನೀಡಿ ಬೇರೆ ವ್ಯವಸ್ಥೆ ಮಾಡಿದರು. ಮೊದಲಿನ ಡ್ರೈವರ್ ಹೆಸರು ರಮೇಶನೆಂದೂ, ಆತ ಹುಬ್ಬಳ್ಳಿಯವನೇ ಆಗಿದ್ದು ತಾನವನನ್ನು ಮನೆಗೆ ತಲುಪಿಸುವುದಾಗಿ ಅಲ್ಲಿದ್ದ ಒಬ್ಬ ಹೇಳಿದ. ನಾನು ರಮೇಶನಿಗೆ ಸಮಾಧಾನದ ನಾಲ್ಕು ಮಾತು ಹೇಳಿ ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ.

          ಹುಬ್ಬಳ್ಳಿಗೆ ಬಂದಮೇಲೆ ಒಂದೆರಡು ದಿನ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಂಡವನ ಬಗ್ಗೆ ಮಾತಾಡಿಕೊಂಡರೂ, ನಂತರ ಎಲ್ಲವನ್ನೂ ಮರೆತುಬಿಟ್ಟೆವು. ಸುಮಾರು ೩ ತಿಂಗಳುಗಳೆ ಕಳೆದವು.

          ನಾನು ನನ್ನ ಮಿತ್ರರಾದ ಡಾ| ಕುಲಕರ್ಣಿಯವರ ನರ್ಸಿಂಗ್ ಹೋಮಿಗೆ ಕೆಲವು ವಿಷಯಗಳನ್ನು ಚರ್ಚಿಸುವುದಕ್ಕಾಗಿ ಹೋಗಿದ್ದೆ. ಅವರೊಬ್ಬ ಫೇಮಸ್ ಸೈಕಿಯಾಟ್ರಿಸ್ಟ್. ನಾವಿಬ್ಬರೂ ಮಾತಾಡುತ್ತಿದ್ದಂತೆಯೇ ಒಬ್ಬಾತ ಒಳಗೆ ಬಂದ, ಡಾ| ಕುಲಕರ್ಣಿಯವರ ಕೈ ಕುಲುಕಿ “ಡಾಕ್ಟರ್, ಎರಡ ದಿನಾ ಡ್ಯೂಟಿಗೆ ಹೋಗಿ ಬಂದೆನ್ರೀ, ಏನೂ ಪ್ರಾಬ್ಲಂ ಆಗಿಲ್ಲ, ನಿಮಗ ಹೇಳಿಬಿಟ್ಟು ಹೋಗೋಣಂತ ಬಂದೇರೀ”. ಆತ ಮತ್ತೊಮ್ಮೆ ಅವರ ಕೈ ಕುಲುಕಿ ನಗುತ್ತ ಹೊರನಡೆದ.

          “ಅಂವ ರಮೇಶ್ ಅಲ್ಲಾ, ಬಹುತೇಕ ನನ್ನ ಗುರುತು ಹಿಡೀಲಿಲ್ಲಾಂತ ಕಾಣ್ತದ”, ನಾನು ಕುಲಕರ್ಣಿಯವರಿಗೆ ಹೇಳಿದೆ.

          “ನಿಮಗ್ ಹ್ಯಾಂಗ್ ಗೊತ್ತಂವ”,

          ನಾನು ನಡೆದಿದ್ದೆಲ್ಲ ವಿವರಿಸಿದೆ.

          “ಇದ ನೋಡ್ರಿ ನಮಗೂ ನಿಮಗೂ ಇರೋ ಫರಕ” ನಗುತ್ತಾ ಡಾಕ್ಟರ್ ಹೇಳಿದರು.

          ನಾನು ಪ್ರಶ್ನಾರ್ಥಕವಾಗಿ ಅವರತ್ತ ನೋಡಿದೆ.

          ಅವರು ಮುಂದುವರೆಸಿದರು. “ಅಂದ್ರ, ಅವತ್ತು ನೀವು ಅವಗ ಏನೋ ಎರಡು ಗುಳಿಗಿ ಕೊಟ್ಟು ಕೈ ತೊಳಕೊಂಡ್ರಿ, ಆದ್ರ ಅವನ ಶರೀರ ಆರಾಮಾಗೇ ಇತ್ತು, ತ್ರಾಸಾಗಿದ್ದು ಅವನ ಮನಸಿಗೆ. ಒಂದ್ ವ್ಯಾಳೆ ನಾ ಏನರ ಅಲ್ಲಿದ್ದೇ ಅಂತಂದ್ರ, ಬ್ಯಾರೆ ಪದ್ಧತೀಂದ ಕೇಸ್ ಹ್ಯಾಂಡಲ್ ಮಾಡತಿದ್ದೆ. ಅವನ ಪರಿಸ್ಥಿತಿ ಇಷ್ಟು ಹದಗೆಡತಿರ್ಲಿಲ್ಲ.”

          “ಏನಾಗೇದ ಅವಂಗ ಚಲೋನ ಕಂಡ್ನಲ್ಲ”, ನನಗೆ ಆಶ್ಚರ್ಯವಾಯಿತು.

          “ಈಗ ಚಲೋ ಆಗ್ಯಾನ. ಸುಮಾರು ಒಂದು ತಿಂಗಳ ಹಿಂದ ಅವನ್ನ ನೋಡಬೇಕಿತ್ತು ನೀವು. ಆ ದಿನ ಟ್ರೇನಿಗೆ ಸಿಕ್ಕು ಯಾರೋ ಆತ್ಮಹತ್ಯೆ ಮಾಡಿಕೊಂಡ್ನಂತಲ್ಲ, ಇಂವ ಆಗಷ್ಟ ನೌಕರೀಗೆ ಸೇರಿದಂವ. ಆಕ್ಸಿಡೆಂಟ್ ಎಂದೂ ಕಂಡಾಂವಲ್ಲ. ತನ್ನ ಎದುರೀಗೇ ಒಬ್ಬಾಂವ ಸಾಯಾಕತ್ತಿದ್ರೂ ತಾನು ಏನೂ ಮಾಡ್ದನ ಇರೋ ಹಂಗಾತಲ್ಲ ಅಂತ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ. ಅವನ ಮನೀ ಮಂದೀನೂ ಏನಂಥ ಶಾಣ್ಯಾರಲ್ಲ, ಯಾರ್ಯಾರೊ ಹೇಳಿದ್ರೂ ಅಂತ ಆ ಸತ್ತವನ ಗಾಳಿ ಇವಗ ತಾಕಿರ್ಬೇಕೂಂತ ಏನೇನೋ ಪೂಜೆ, ಮಾಟ, ಮಂತ್ರ ಮಾಡಿಸಿದ್ರು. ರಮೇಶ ಮತ್ತಷ್ಟು ಹೈರಾಣಾಗಿ ಹೋದ. ಖರೇವಂದ್ರು ಅವನಿಗೆ ಆವಾಗ ಆ ಘಟನೆ ಮರಿಯೂಹಂಗ ಮಾಡಬೇಕಾಗಿತ್ತು. ಏನೋ ಅವನ ನಸೀಬ ಚಲೋ ಇತ್ತು, ಅವನ ಗೆಳೆಯ ಒಬ್ಬಂವ ಅವನ್ನ ಇಲ್ಲಿಗೆ ಕರಕೊಂಡ್ ಬಂದ.

          “ಅಂವ ಹಂಗಾರ ಮೆಂಟಲ್ ಪೇಷಂಟೇನು?”, ನಾನು ಒಂಥರ ಸಹಾನುಭೂತಿಯಿಂದ ನುಡಿದೆ.

” ಛೆ ಛೆ”, ಕುಲಕರ್ಣಿಯವರು ತಲೆ ಅಲ್ಲಾಡಿಸಿದರು. “ಫೋಬಿಯಾ”

“ಅಂದ್ರ ಹೆದ್ರಿಕಿ ಹೌದಲ್ಲೊ, ಅಂತಾಪರಿ ಹೆದರಿದ್ನೇನ ಅಂವ?” ನಾನು ಬೆರಗಾದೆ.

“ಫೋಬಿಯಾ ಅಂದ್ರ ಬರೀ ಹೆದರಿಕಿ ಅಲ್ಲ. ಸಾಮಾನ್ಯ ಮನಷಾ ಯಾವ್ದಕ್ಕ ಹೆದರೂದಿಲ್ಲೋ ಅದರ ಬಗ್ಗೆ ಹುಟ್ಟೋ ಹೆದ್ರಿಕಿ ಅಂದ್ರ ಫೋಬಿಯಾ. ಕೆಲವು ಮಂದಿ ಮಳೀಗೆ ಹೆದರ್ತಾರ, ವಿಮಾನಕ್ಕ ಹೆದರ್ತಾರ, ಜೋರಾದ ಶಬ್ದಕ್ಕ ಹೆದರ್ತಾರ. ಅದರಾಗೂ ಬ್ಯಾರೆ ಬ್ಯಾರೆ ಪ್ರಕಾರವ. ರಮೇಶಗ ಆಗಿದ್ದು ಡಿಸ್ಟಿಚಿಫೋಬಿಯಾ, ಫಿಯರ್ ಆಫ್ ಅಕ್ಸಿಡೆಂಟ್ಸ್,  ಅಪಘಾತಗಳ ಭಯ”.

          ಅಷ್ಟರಲ್ಲಿ ಅಟೆಂಡೆಂಟ್ ಒಬ್ಬ ಚಹಾ ತಂದಿಟ್ಟ. ನಾನು ಕಪ್ಪನ್ನೆತ್ತಿಕೊಂಡು ಹೇಳಿದೆ.” ಡಾಕ್ಟರ್, ನಿಮಗೀಗ ಟೈಮಿದ್ರ ಇದರ ಬಗ್ಗೆ ಒಂದೀಟ ಹೇಳ್ರೆಲಾ. ಸೈಕಾಲಾಜಿ ಬಗ್ಗೆ ಎಂಬಿಬಿಎಸ್ ಮಾಡೂವಾಗ ಒಂದು ಸಬ್ಜೆಕ್ಟ್ ಅಂತ ಓದಿದ್ದು ಬಿಟ್ರ ಆಮ್ಯಾಲ ಅದರ ಟಚ್ಚ ಇಲ್ಲ ನೋಡ್ರಿ. ಈಗೇನಿಲ್ಲಾಂದ್ರೂ ಪೇಷಂಟ್’ಗಳ ಲಕ್ಷಣದಿಂದ ಅದು ಮಾನಸಿಕ ಕಾಯಿಲೆ ಅಂತ ಗೊತ್ತಾತು ಅಂದ್ರ ನಿಮ್ಮ ಕಡೆ ಕಳಸ್ಲಿಕ್ಕಾರ ಬರ್ತದ. “

          ಡಾ| ಕುಲಕರ್ಣಿಯವರು ವಿವರಿಸುತ್ತಾ ಹೋದರು.” ನಮಗ ೨ ತರದ ಮನಸಿರ್ತಾವ. ಒಂದು ಜಾಗ್ರತ, ಇನ್ನೊಂದು ಸುಪ್ತ. ಕೆಲವೊಂದು ಘಟನೆಗಳು ಸುಪ್ತ ಮನಸ್ಸಿನ್ಯಾಗ ಕೂತು ಬಿಟ್ಟಿರ್ತಾವ. ನಮಗೂ ಗೊತ್ತಾಗದ ಹಂಗ. ಆ ಘಟನೆ ಮರೆತು ಹೋಗಿದ್ರೂ ಹೆದ್ರಿಕಿ ಮಾತ್ರ ಉಳಕೊಂಬಿಟ್ಟಿರ್ತದ. ಹೋದ್ವರ್ಷ ನನ್ನ ಹತ್ರ ಒಬ್ಬ ಪೇಷಂಟಿದ್ದ. ಅವಂಗ ಬೆಂಕಿ ಅಂದ್ರ ಹೆದ್ರಿಕಿ. ಅದಕ್ಕ ಆರ್ಸನ್ ಫೋಬಿಯಾ ಅಂತಾರ. ಎಷ್ಟು ಹೆದರ್ತಿದ್ದ ಅಂದ್ರ, ಅಡಗಿ ಮನ್ಯಾಗ ಗ್ಯಾಸ್ ಹತ್ರನೂ ನಿಲ್ತಿದ್ದಿಲ್ಲ. ಅವನ ಅಪ್ಪ, ಅವ್ವಗ ಇದು ಗೊತ್ತಿದ್ರೂ ಅದರಿಂದೇನಂಥಾ ತ್ರಾಸಿಲ್ಲಂತ ಸುಮ್ನಿದ್ರು. ಈಗ ಅವನ ಮದಿವಿ ನಿಶ್ಚೇ ಆಗಿತ್ತು. ಮದವ್ಯಾಗ ಹೋಮದ ಮುಂದ ಇಂವ ಹ್ಯಾಂಗ ಕೂಡ್ತಾನಂತ ಅವ್ರಿಗೆ ಚಿಂತಿ ಶುರು ಆತು. ನನ್ನ ಕಡೆ ಕರಕೊಂಡ್ ಬಂದ್ರು. ಕೌನ್ಸೆಲಿಂಗ್’ನಾಗ ಅವರ ಅವ್ವನ ಕಡೀಂದ ಗೊತ್ತಾತು, ಅಂವಾ ೨ ವರ್ಷದಾಂವ ಇದ್ದಾಗ ದೀಪಾವಳಿ ಹೊತ್ನ್ಯಾಗ ಪಣತಿ ತಾಗಿ ಅವರ ಸೀರಿ ಸುಟ್ಟಿತ್ತಂತ. ಮಗನ್ನ ಎತ್ತಿಕೊಂಡು ಕೂತಿದ್ರು, ಅಂವ ಬೆಂಕಿ ನೋಡ್ಯಾನ, ಎಲ್ಲಾರೂ ಚೀರಾಡಿದ್ದು ಕೇಳ್ಯಾನ. ಏನಾತಂತ ಗೊತ್ತಾಗದಿದ್ರೂ ಹೆದರಿಕಿ ಮಾತ್ರ ಉಳಕೊಂಬಿಟ್ಟದ. ಈ ಸುಪ್ತ ಮನಸ್ಸು ಏನದಲ್ಲಾ, ಅದು ಇಂಥಾ ವಿಷಯದಾಗ ಆಪತ್ತದ ಅಂತ ನೆನಪು ಮಾಡಿ ಕೊಡ್ತಿರ್ತದ. ಜಾಗ್ರತ ಮನಸ್ಸಿಗೆ ಅದರ ಕಾರಣ ತಿಳಿಯಾಂಗಿಲ್ಲ. ಒಂಥರಾ ಮನಸ್ಸಿನ್ಯಾಗ ದ್ವಂದ್ವ ಶುರು ಆಗ್ತದ. ಆತಂಕ, ಉದ್ವೇಗ ಹೆಚ್ಚಾಗ್ತದ. ಮನಸ್ಸು ಚಂಚಲ ಆಗ್ತದ. ತಲಿ ತಿರಗಿಧಂಗ ಆಗ್ತದ. ಹಾರ್ಟ್ ಬೀಟ್ ಹೆಚ್ಚೂ ಕಡಿಮಿ ಆಗ್ತದ. ಇಂಥಾ ಹೊತ್ನಾಗ ಗುಳಿಗಿ, ಇಂಜೆಕ್ಶನ್ನಿಂದ ಏನೂ ಉಪಯೋಗ ಆಗೂದಿಲ್ಲ”.

          ” ಹಂಗಾರ ಇದಕ್ಕ ಹಿಪ್ನೋಟೈಸ್ ಮಾಡಬೇಕೆನ್ರೀ”

          “ಎಲ್ಲಾ ಕೇಸ್ನಾಗೂ ಬೇಕಾಗೂದಿಲ್ಲ. ಫೋಬಿಯಾದ ಲೆವೆಲ್ ನೋಡಿ ನಾವದನ್ನ ಡಿಸೈಡ್ ಮಾಡ್ತೀವಿ. ಕಾಗ್ನಿಟಿವ್ ಬಿಹೇವಿಯರ್ ಟ್ರೀಟ್ ಮೆಂಟ್ ಅಂತದ. ಯಾವ ವಸ್ತುವಿನ ಬಗ್ಗೆ ಹೆದ್ರಿಕಿ ಅದನೋ ಅದನ್ನ ರೂಢಿ ಮಾಡಿಕೊಳ್ಳೋದು, ಎದುರಿಸೋದು ಕಲಸ್ತೀವಿ. ಈಗ ರಮೇಶನ್ನ ನೋಡ್ರಿ, ಅಂವ ಮೊದ್ಲಿಗೆ ಅಕ್ಸಿಡೆಂಟಿಗೆ ಹೆದ್ರಿದ. ಅದನ್ನು ಸಪ್ರೆಸ್ ಮಾಡಿ ಕೆಲಸಕ್ಕ ಹೋದ. ಅವಂಗ ಹಳೇದೆಲ್ಲ ನೆನಪಾತು. ಆಜೂಬಾಜೂ ಮಂದೀನೂ ಅದ ಮಾತಾಡ್ತಿದ್ರು. ಇಂಥಾ ಟೈಮಿನ್ಯಾಗ ಕೆಲೊ ಮಂದೀನೂ ದೀಡ ಶಾಣೇತನ ತೋರಸ್ತಾರ. ಯಾರೋ ಒಬ್ಬ ಅಂದ್ನಂತ ” ಏನೋ ರಮೇಶ, ಸುಮ್ನ ಹಾರ್ನ್ ಬಾರ್ಸೂಕಿಂತ ನೀ ಒಂದು ಬ್ರೇಕ್ ಹಾಕಿದ್ರೂ ಸಾಕಗಿತ್ತಲ್ಲೋ” , ಆತು, ಇಂವ , ಆ ಆಕ್ಸಿಡೆಂಟಿಗೆ ತಾನ ಕಾರಣಾಂತ ತಿಳಕೊಂಬಿಟ್ಟ. ಕೂತಲ್ಲಿ ನಿಂತಲ್ಲಿ ಅದ ವಿಚಾರ. ಇದು ಎಷ್ಟರಮಟ್ಟಿಗೆ ಹೋತು ಅಂತಂದ್ರ, ತಾ ಇಂಜಿನ್ನಾಗ ಕಾಲಿಟ್ರ ಯಾರರೇ ಸಾಯ್ತಾರಂತ ಅವಂಗ ಅನ್ನಿಸ್ಲಿಕ್ಕತ್ತು. ಸಾವಕಾಶ ಅದು ಸೈಡರೋಡ್ರೋಮೊ ಫೋಬಿಯಾಕ್ಕ ತಿರುಗ್ತು. ಅಂದ್ರ ಫಿಯರ್ ಆಫ್ ಟ್ರೇನ್ಸ್. ರೇಲ್ವೆ ನೋಡಿದ್ರೂನೂ ಹೆದರ್ಲಿಕ್ಕೆ ಹತ್ತಿದ. ನನ್ನ ಕಡಿ ಬಂದಮ್ಯಾಲೆ ಒಂದ್ನಾಕ್ದಿನ ನನ್ನ ಅಸಿಸ್ಟಂಟ್ ಜೋಡಿ ರೇಲ್ವೆ ಸ್ಟೇಷನ್ನಿನ ಹೊರಗಿನ ಹೊಟೇಲಿನ್ಯಾಗ ಊಟಕ್ಕ ಕಳಿಸಿದೆ, ಟ್ರೇನ್ ಬರೋ ಟೈಮಿನ್ಯಾಗ. ಆಮೇಲೆ ಸ್ವಲ್ಪ ದಿವಸ ಸ್ಟೇಷನ್ನಿನ್ಯಾಗ ಕೂಡಿಸಿದೆ. ಮುಂದೊಂದು ನಾಕ್ದಿನ ಬೋಗಿಯೊಳಗ ಕೂತು ಗದಗ ತನಕ ಒಮ್ಮೆ, ಬೆಳಗಾವಿ ತನಕ ಒಮ್ಮೆ ಹೋಗಿ ಬಂದು ಮಾಡಿದ. ಅವನ ಅಪ್ಪ, ಅವ್ವಗೂ ಒಂದಿಷ್ಟು ತಿಳವಳಕಿ ಹೇಳಿದೆ. ಅವರಿಗೂ ತಮ್ಮ ತಪ್ಪು ಗೊತ್ತಾತು. ನನ್ನ ಟ್ರೀಟ್’ಮೆಂಟಿಗೆ ಸಹಕಾರ ಕೊಟ್ರು, ಇಲ್ಲಂದ್ರ ಸ್ವಲ್ಪ ಕಠಿಣ ಆಗ್ತಿತ್ತು. ಒಂದ್ಸಲ ರೇಲ್ವೆದು ಹೆದ್ರಿಕಿ ಹೋದಮ್ಯಾಲೆ ಅವನ ಒಳಗಿರೊ ಪಾಪಪ್ರಜ್ಞೆ ಓಡಿಸಲಿಕ್ಕೆ ಮಾತ್ರ ಹಿಪ್ನೊಟೈಸ್ ಮಾಡಬೇಕಾತು.”

          ಒಂದೇ ಸಮನೆ ಮಾತಾಡಿ ಸುಸ್ತಾದವರಂತೆ ಕುಲಕರ್ಣಿಯವರು ಒಂದು ಗ್ಲಾಸ್ ನೀರು ಕುಡಿದು ಕಣ್ಣು ಮುಚ್ಚಿ ರಿವಾಲ್ವಿಂಗ್ ಚೇರಿಗೆ ಒರಗಿದರು.

          ಸ್ವಲ್ಪ ಹೊತ್ತಿನ ಮೇಲೆ ನಾನು ಹೇಳಿದೆ.” ಅಲ್ಲ, ಈ ಆತ್ಮಹತ್ಯೆ ಮಡ್ಕೊಳ್ಳೊ ಮಂದಿ ತಾವಂತೂ ಸಾಯ್ತಾರ, ಆಟ್’ಲೀಸ್ಟ್ ಇನ್ನೊಬ್ರಿಗಾದ್ರೂ ತ್ರಾಸು  ಕೊಡದಂಗ ಯಾರಿಗೂ ಕಾಣದಂಗರ ಸಾಯ್ಬೇಕು.”

          “ಹಂಗಲ್ಲದು, ಸಾಯ್ಬೇಕೂಂತ ಎಷ್ಟ ಮನಸ್ಸು ಗಟ್ಟಿ ಮಾಡಿದ್ರೂನೂ ಸುಪ್ತ ಮನಸ್ಸಿನ್ಯಾಗ ಬದುಕೋ ಆಸೆ ಇದ್ದ ಇರ್ತದ. ನಮ್ಮ ದೇಹಾನೂ ಸಾಯ್ಲಿಕ್ಕೆ ಒಪ್ಪೂದಿಲ್ಲ. ಫಾರ್ ಎಕ್ಸಾಂಪಲ್, ಈಜ್ಲಿಕ್ಕೆ ಬರಾಂವ ಸಾಯ್ಬೇಕಂತ ಕೆರೀಗ್ ಬಿದ್ರ ಸಾಯೂದಿಲ್ಲ. ಕೈ ಕಾಲು ತಂತಾನ ಅಲ್ಲಾಡ್ತಾವ. ಅಂವ ಮುಳಗೂದ ಇಲ್ಲ. ಈಗ ರೇಲ್ವೆ ಹಳಿ ಮ್ಯಾಲೆ ನಡಕೊಂಡು ಬಂದು ಸಾಯೋರ್ದೂ ಹಿಂಗ ಇರ್ತದ. ಸಿನಿಮಾದಾಗ ತೋರಸ್ತಾರಲ್ಲ ಹಂಗ ಕೊನೇ ಕ್ಷಣಕ್ಕ ಯಾರರ ಬಂದು ದೂಡಿ ಕಾಪಾಡ್ತಾರಂತ ಒಂದು ಆಶಾ ಸುಪ್ತ ಮನಸ್ಸಿನ ಮೂಲೆಯೊಳಗ ಇದ್ದ ಇರ್ತದ. ಏಷ್ಟೋ ಸಲ ಆತ್ಮಹತ್ಯೆಯ ಪ್ರಯತ್ನ ಅಂತ ಕೇಳ್ತೀವಿ. ಇವೆಲ್ಲಾ ಇನ್ನೊಬ್ಬರನ್ನು ಹೆದರಿಸಿಲಿಕ್ಕೆ ಅಥವಾ ತಮ್ಮ ತಪ್ಪು ಮುಚ್ಚಿಕೊಳ್ಳಿಕ್ಕೆ ಇರ್ತಾವ. ಮಂದೀನೂ ಹೆದರ್ತಾರಲ್ಲ, ಎಲ್ಲಿ ಏನರ ಅಂದ್ರ ಮತ್ತ ಸುಸೈಡ್ ಮಾಡ್ಕೋತಾನೋ ಅಂತ ಎಲ್ಲಾ ಫೇವರ್ ಆಗೆ ಇರ್ತಾರ. ಇದೊಂಥರ ಎಮೊಶನಲ್ ಬ್ಲಾಕ್ ಮೇಲಿಂಗ್ ಅಷ್ಟೆ “

          ” ಆದ್ರೂ ಆತ್ಮಹತ್ಯೆಯ ಪರಿಣಾಮಗಳು ಎಷ್ಟು ಘೋರ ಇರ್ತಾವಲ್ಲ. ತಾವು ಸತ್ತಮ್ಯಾಲ ಎಷ್ಟು ಮಂದೀಗೆ ತ್ರಾಸಾಗ್ತದಂತ ಒಂದ್ ಮಿನೀಟ್ ವಿಚಾರ ಮಾಡಿದ್ರೂ ಸಾಕು ಆತ್ಮಹತ್ಯೆ ಮಾಡಿಕೊಳ್ಳೋರು ಒಂದ್ ಹೆಜ್ಜೀ ಹಿಂದ ಸರೀಬೋದು. ಇಂಥ ಮಾನಸಿಕ ಸ್ಥೈರ್ಯ ಹೆಚ್ಚಿಸುವಂಥ ಆರ್ಟಿಕಲ್ಸ್ ಬರ್ಬೇಕು. ಹೈಸ್ಕೂಲ್ ಲೆವೆಲ್ಲಿನ ಹುಡುಗರಿಗೆ ಒಂದು ಚಾಪ್ಟರ್ ಇಡಬೇಕು ನೋಡ್ರಿ, ಒಂದಿಷ್ಟು ಅವೇರ್’ನೆಸ್ ಬರ್ತದ.”

” ಇದರ ಬಗ್ಗೆ ಅಷ್ಟೇನೂ ಸೀರಿಯಸ್ಸಾಗಿ ಚರ್ಚಾ ಆಗೂದ ಇಲ್ಲ. ಈಗ ಫೋಬಿಯಾನ್ನ ತಗೋರಿ. ಒಂದು ಸ್ಟಡಿ ಪ್ರಕಾರ ಗಂಡಸರೊಳಗ ನಾಕು ಪರ್ಸೆಂಟಿದ್ರ, ಹೆಂಗಸರೊಳಗ ಹದಿಮೂರು ಪರ್ಸೆಂಟ್ ಮಂದಿಗೆ ಫೋಬಿಯಾ ಇರ್ತದ. ಎಲ್ಲಿ ತನಕ ನಮ್ಮ ಸುತ್ತಮುತ್ತಲಿನೊಳಗಿನ ಯಾರಿಗರೆ ಆಗುದಿಲ್ಲೊ ಅಲ್ಲಿ ತನಕ ಯಾರಿಗೂ ಅದರ ಬಗ್ಗೆ ಗೊತ್ತಿರೂದ ಇಲ್ಲ.

ನಂತರ ಸ್ವಲ್ಪ ಹೊತ್ತು ಲೋಕಾಭಿರಾಮದ ಮಾತುಕತೆ ಆದಮೇಲೆ ನಾನು ಡಾ| ಕುಲಕರ್ಣಿಯವರಿಗೆ ಧನ್ಯವಾದಗಳನ್ನರ್ಪಿಸಿ ಕ್ಲಿನಿಕ್’ನಿಂದ ಹೊರ ಬಂದೆ.

          ಮನೆಗೆ ಬರ್ತಾ ದಾರಿಯಲ್ಲಿ ಒಂದೆ ವಿಚಾರ. ಸುಷ್ಮಾ ಟೂ ವ್ಹೀಲರ್ ಮೇಲೆ ಕೂಡದೇ ಇರುವುದಕ್ಕೂ ಇಂಥದ್ದೆ ಏನಾದ್ರೂ ಕಾರಣವಿರಬಹುದೇ. ಡಾಕ್ಟರಾಗಿಯೂ ನಾನು ಎಂದೂ ಅದರ ಬಗ್ಗೆ ವಿಚಾರಮಾಡೇ ಇರಲಿಲ್ಲ. ಬದಲಾಗಿ, ನಿನಗ ಮೊದ್ಲಿಂದೂ ಕಾರಿನ ರೂಢಿ ಆಗೇದ. ಸ್ಕೂಟರ್ ಮ್ಯಾಲೆ ಕೂಡಾಕ ಒಲ್ಲೆಂತಿ ಅಂತ ಛೇಡಿಸುತ್ತಲೇ ಇದ್ದೆ. ಒಮ್ಮೆ ಅವಳ ಹತ್ತಿರ ಚರ್ಚಿಸಿ ಡಾ| ಕುಲಕರ್ಣಿಯವರ ಹತ್ತಿರ ಕರಕೊಂಡು ಹೋಗಬೇಕು.

 ಉಷಾ ಜೋಗಳೇಕರ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!