ನನ್ನ ಬಿಲ್ಡಿಂಗ್ ಬ್ಲಾಕ್ ಸೊಟ್ಟಕ್ಕಿಟ್ರೇನೇ ನಿಲ್ಲಲ್ಲ ಅದು ಹೇಗೆ ಇಟಲಿಯಲ್ಲಿರುವ ಈ ಪೀಸಾ ಟವರ್ ಸೊಟ್ಟಕ್ಕಿದ್ದರೂ ಬೀಳದೆ ನಿಂತಿದೆ ಅಂತ ಸುಮಧ್ವ ಕೇಳಿದ, ಆ ಕ್ಷಣಕ್ಕೆ ಹೇಳಲಿಕ್ಕೆ ಏನು ತೋಚಲಿಲ್ಲವಾದರು ಪೀಸಾದ ಬಗ್ಗೆ ಸ್ವಲ್ಪ ಸಂಶೋಧನೆ ಕೆಳಗಿನ ಚಿಕ್ಕ ಮಾಹಿತಿಯಾಗಿ ಪರ್ಯವಸನಗೊಂಡಿದೆ.
ಇಟಲಿ ದೇಶದಲ್ಲಿ ಎಷ್ಟೋ ಯೇಸು ಮಂದಿರಗಳಿವೆ ಅದರಲ್ಲೂ ಆಶ್ಚರ್ಯಕರವಾದ ಕಾರಣಕ್ಕೆ, ಪೀಸಾ ಎಂಬ ನಗರದಲ್ಲಿ ಯೇಸು ಮಂದಿರದ ಬದಲಾಗಿ ಅದರ ಘಂಟೆ ಗೋಪುರ ಜಗದ್ವಿಖ್ಯಾತವಾಗಿದೆ, ಏಕೆ ಹೀಗೆ ಎನ್ನುವ ಬಗ್ಗೆ ಬನ್ನಿ ಇನ್ನಷ್ಟು ಮಾಹಿತಿ ಇದೆ ತಿಳಿಯೋಣ.
ಸಾಮಾನ್ಯವಾಗಿ ಪುರಾತನ ಯೇಸು ಮಂದಿರಗಳ ಜೊತೆಗೆ ಘಂಟೆ ಗೋಪುರಗಳ್ಳನ್ನು ಹಿಂದಿನಿಂದಲೂಕಟ್ಟುವ ವಾಡಿಕೆ ಇತ್ತು, ಕ್ರಿ.ಶ 1173 ಪೀಸಾದಲ್ಲಿ ಯೇಸು ಮಂದಿರ ಹಾಗು ಘಂಟೆ ಗೋಪುರ ನಿರ್ಮಿಸಲು ಶಂಖುಸ್ಥಾಪನೆ ಆಯಿತು, ಕಾಮಗಾರಿ ಮುಗಿಸಲು ಬರೋಬ್ಬರಿ 199 ವರ್ಷಗಳಾಗಿವೆ (ಕ್ರಿ.ಶ1372). ಅತಿ ವಿಶಿಷ್ಟವಾದ ಈ ಗೋಪುರದ ಪ್ರಮುಖ ಆಕರ್ಷಣೆಯೆಂದರೆ ಅನುದ್ದೇಶಿತ ವಾಲುವಿಕೆ, ಈಗಿನ ಸಂಶೋದನೆಗಳ ಪ್ರಕಾರ ನಿರ್ಮಾಣ ಮೊದಲನೆಯ ದಿನದಿಂದಲೆ ಈ ವಾಲುವಿಕೆ ಶುರುವಾಗಿದೆ, ಸರಿ ಹಾಗಾದರೆ ಇದಕ್ಕೆ ಕಾರಣವೇನು? ಗೋಪುರ ಕಟ್ಟುವ ಜಾಗದ ಆಯ್ಕೆಯಿಂದಾದ ಚಿಕ್ಕ ತಪ್ಪು ಲೆಕ್ಕಾಚಾರ, ಅತ್ಯಂತ ಮೃದುವಾದ ಮತ್ತು ದುರ್ಬಲ ಅಡಿಪಾಯ ಕಟ್ಟಡದ ಭಾರ ಹೊರಲು ಅಸಮರ್ಥವಾಗಿರುವುದೇ ಮುಖ್ಯಕಾರಣ! ದಶಕಗಳು ಉರುಳಿದಂತೆ ಕಾಮಗಾರಿ ಮುಗಿಯುವ ಮುನ್ನ ವಾಲುವಿಕೆ ಹೆಚ್ಚಾಗಿದೆ, 20ಮತ್ತು 21ನೆ ಶತಮಾನಗಳ್ಳಾದ ಪ್ರಯತ್ನದ ಫಲವಾಗಿ ಇಂದು ವಾಲುವಿಕೆಯನ್ನು ಭಾಗಶಃ ಸರಿಪಡಿಸಲಾಗಿದೆ.
ಗೋಪುರದ ಉದ್ದ 183 ಅಡಿ ವಾಲಿರುವ ಕಡೆಯಾದರೆ, 186 ಅಡಿಗಳು ಇನ್ನೊಂದು ಕಡೆ, 14,500 ಮೆಟ್ರಿಕ್ ಟನ್ ಇದರ ಅಂದಾಜು ತೂಕ. ಹಾಲುಗಲ್ಲು ಮತ್ತು ಬಂಡೆಗಳನ್ನು ಕಟ್ಟಡ ನಿರ್ಮಾಣದಲ್ಲಿ ಬಳಸಲಾಗಿದೆ. ಸೋಜಿಗದ ಸಂಗತಿಯೆಂದರೆ 1990 ಮತ್ತು 2001 ಇಸವಿಯ ಜೀರ್ಣೋದ್ದಾರ ಪರಿಣಾಮವಾಗಿ 5.5 ಡಿಗ್ರಿಯಷ್ಟು ವಾಲುತ್ತಿದ್ದ ಕಟ್ಟಡ ಇಂದು 3.99 ಡಿಗ್ರಿಯಷ್ಟು ಮಾತ್ರ ವಾಲಿದೆ. ದಾಖಲೆ, ಪ್ರಮಾಣ ಮತ್ತು ಆಧಾರಗಳ ಬಗ್ಗೆ ಗೊಂದಲಗಳಿರುವುದರಿಂದ ಈ ಕಟ್ಟಡದ ಮುಖ್ಯ ಶಿಲ್ಪಿಗಳು ಯಾರು, ಅವರ್ಯಾರು ಗಂಭೀರವಾದ ಈ ತಪ್ಪನ್ನು ಸರಿ ಪಡಿಸುವುದಕ್ಕೆ ಪ್ರಯತ್ನಿಸಲ್ಲಿಲ್ಲವೆ ಎಂದು ಪ್ರಸ್ತಾಪ ಮಾಡಿಲ್ಲ.
ಮೂರು ಹಂತದ 199 ವರ್ಷಗಳ ಕಾಲಾವಧಿಯಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು, 1173 ರಿಂದ1198ರ ವರೆಗೆ 3 ಅಂತಸ್ತುಗಳನ್ನು ಕಟ್ಟಲಾಯಿತು,ಎರಡನೆಯ ಅಂತಸ್ತು ಕಟ್ಟುವಹೊತ್ತಿಗೆ ದೋಷಪೂರಿತವಾದ ವಿನ್ಯಾಸ, ಅಸ್ಥಿರವಾದ ನೆಲ ಮತ್ತು ಕೇವಲ ಮೂರು ಮೀಟರ್ ಆಳದ ಅಡಿಪಾಯದ ಕಾರಣಗಳಿಂದ ಗೋಪುರವು ನಿಧಾನವಾಗಿ ಒಂದೆ ಕಡೆಗೆ ಕುಗ್ಗಲು ಶುರುವಾಯಿತು.1198ರ ಹೊತ್ತಿಗೆ ತಾತ್ಕಾಲಿಕವಾಗಿ ಮೂರನೆಯ ಅಂತಸ್ತಿನಲ್ಲಿ ಗಡಿಯಾರಗಳನ್ನು ಅಳವಡಿಸಲಾಯಿತು.ಪೀಸಾ ಗಣರಾಜ್ಯ ಎಡೆಬಿಡದೆ ಯುಧ್ದ ನಿರತವಾಗಿದ್ದರಿಂದ ಸುಮಾರು ನೂರು ವರ್ಷಗಳವರೆಗೆ ನಿರ್ಮಾಣ ಸ್ಥಗಿತಗೊಂಡಿತು, ಈ ಮಧ್ಯೆ ಕಟ್ಟಡ ವಾಲುತ್ತಿದ್ದರೂ ಮಣ್ಣು ಮತ್ತು ಅಡಿಪಾಯ ಗಟ್ಟಿಯಾಗಿ ಭದ್ರಗೊಂಡು ಉರುಳಿಬೀಳದಂತೆ ತಡೆ ಹಿಡಿಯಿತು.
ವಾಲುವಿಕೆಯನ್ನು ಸರಿಪಡಿಸಲೋಸುಗ ಕ್ರಿ.ಶ1272ರಲ್ಲಿ ಶಿಲ್ಪಿ ಜಿಯೊವನ್ನಿ ಡಿ ಸೈಮೋನ್ ನೇತೃತ್ವವಹಿಸಿ ಮೇಲಿನ ಅಂತಸ್ತುಗಳ ಒಂದು ಭಾಗವನ್ನು ಇನ್ನೊಂದು ಭಾಗಕ್ಕಿಂತ ತುಸು ಎತ್ತರಿಸಿ ಕಟ್ಟಿಸಿದನು,ಇದರ ಫಲವಾಗಿಯೇ ಕಟ್ಟಡ ಒಂದು ಭಾಗ ಸ್ವಲ್ಪ ಡೊಂಕಾಗಿದೆ (ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ).ಬರಿಯ 55.86 ಮೀಟರ್ ಉದ್ದವಿದ್ದರೂ ವಾಲಿರುವ ಕಾರಣಕ್ಕಾಗಿ ಐರೋಪ್ಯದ ಮಹೋನ್ನತ ಸ್ಮಾರಕವಾಗಿ ಮತ್ತು ವಿಶ್ವವಿಖ್ಯಾತಿಯ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನನ್ನಾಕೆ ಓರ್ವ ವೃತ್ತಿನಿರತ ಶಿಲ್ಪಿ ಹಾಗಾಗಿ ನಾನು ಅಸಂಬದ್ದ ಉತ್ತರ ಕೊಟ್ಟು ಅಪಹಾಸ್ಯಕ್ಕೆ ಒಳಗಾಗುವುದರ ಬದಲು ನಿಷ್ಟೆಯಿಂದ ಸಂಶೋದನೆ ಮಾಡಿ ಕೊನೆಗೂ ನನ್ನ ಮಗನಿಗೆ ತಾಂತ್ರಿಕವಾಗಿ ಉತ್ತರಿಸಿದೆ.ಇನ್ನಷ್ಟು ರೋಚಕ ವಿಷಯಗಳು ಪೀಸಾ ಟವರ್ ಬಗೆಗೆ ಇವೆ, ಆದರೆ ಅತಿಯಾದ ಮಾಹಿತಿ ಹೇರುವುದಕ್ಕೆ ನನ್ನ ಮನಸ್ಸು ಒಪ್ಪದ ಕಾರಣ ಗಾಡಿ ಇಲ್ಲಿಗೆ ನಿಂತಿದೆ.