ಅಂಕಣ

ಧ್ವಜ ಹಾರಿಸಿ ಬರುವವರು ಇಲ್ಲವೇ ಧ್ವಜ ಹೊದ್ದು ಬರುವವರು

          ತಮಗೆಲ್ಲ ಗೊತ್ತಿರುವ ಒಂದು ಸಣ್ಣ ವಿಷಯದಿಂದ ಲೇಖನ ಶುರು ಮಾಡೋಣ.  ಫ್ರಿಜ್ನಲ್ಲಿ ಒಂದು ಬಲ್ಬ್ ಇರುತ್ತೆ. ಫ್ರಿಜ್ ತೆಗೆದಾಗ ಮಾತ್ರ ಅದು ಆನ್ ಆಗಿ ಮುಚ್ಚಿದ ತಕ್ಷಣ ಆಫ್ ಆಗುತ್ತೆ. ಅದರ ಅವಶ್ಯಕತೆ ಅಷ್ಟೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಜನರ ದೇಶಪ್ರೇಮವು ಹಾಗೇ ಆಗಿದೆ. ಸ್ವಾತಂತ್ರ್ಯ ದಿನ, ನಾಯಕರ ಭಾಷಣ,ಗಣರಾಜ್ಯೋತ್ಸವ ಇಂಥ ಸಂದರ್ಭಗಳಲ್ಲಿ  ತಾತ್ಕಾಲಿಕವಾಗಿ ಜಾಗೃತವಾಗಿ ಮರೆಯಾಗುತ್ತಿರುವುದು ವಿಪರ್ಯಾಸ. ಆದರೆ ತಮ್ಮ ಬದುಕಿನ ಅಷ್ಟೂ ದಿನಗಳಲ್ಲಿ ದೇಶಪ್ರೇಮವನ್ನು ನಂದಾದೀಪದಂತೆ ಕಾಪಿಟ್ಟುಕೊಂಡು ಬರುವವನು ಸೈನಿಕ ಮಾತ್ರ. ಒಮ್ಮೆ ಆ ನಂದಾದೀಪ ಬುಗಿಲೆದ್ದು ಜ್ವಾಲಾಮುಖಿಯಂತೆ ಆಸ್ಫೋಟಗೊಂಡಾಗ ಆ ಯಜ್ಞಕುಂಡದಲ್ಲಿ ಹವಿಸ್ಸಿನಂತೆ ಸುಟ್ಟು ಹೋಗಿ ದೇಶದ ಜನತೆಯನ್ನು ದಾಸ್ಯ ತಮಸ್ಸಿನಿಂದ ಮುಕ್ತಗೊಳಿಸುವ ಆ ಯೋಧರನ್ನು ಒಮ್ಮೆ ನೆನೆಯೋಣ ಬನ್ನಿ. 

          ಅದು 1999 ರ ಮೇ 3ನೇ ತಾರೀಖು  ಪಾಕಿಸ್ತಾನದ ಗಡಿಯಿಂದ ಕೆಲವು ಜನ ನುಸುಳುತ್ತಿರುವವರನ್ನು ಗಮನಿಸಿದ ಕುರಿಗಾಹಿ ಜನರಿಂದ ಸರ್ಕಾರದ ಗಮನಕ್ಕೆ ಬರುತ್ತೆ. ಮೇ 5 ಕ್ಕೆ ಪರೀಕ್ಷಿಸಲೆಂದು ಹೋದ 5 ಜನರು ಸೈನಿಕರನ್ನು ಬಂಧಿಸಿ ಸಾಯೋವರೆಗೆ ಚಿತ್ರಹಿಂಸೆ ಕೊಡುತ್ತಾರೆ. ಮೇ 9 ರಂದು ಆ ಪ್ರದೇಶಗಳ ಮೇಲೆ ಗುಂಡಿನ ದಾಳಿಯಾಗುತ್ತದೆ. ಮೇ10 ರ ಮಧ್ಯಾಹ್ನದ ಹೊತ್ತಿಗೆ ನಮ್ಮ ಸಶಸ್ತ್ರ ಸೈನಿಕರ ಪಡೆ ಕಾಶ್ಮೀರ ಕಣಿವೆ ದಾಟಿ ಕಾರ್ಗಿಲ್ ತಲುಪುತ್ತದೆ. ಹೀಗೆ ಶುರುವಾದದ್ದು ಕಾರ್ಗಿಲ್ ಯುದ್ಧ.ಪಾಕಿಸ್ತಾನವೆಂಬ ಶುನಕಬಾಲದ ತರಹ ಬದಲಾಗದ ದೇಶದ ಸೈನಿಕರನ್ನು  ಒಮ್ಮೆ ಮಣ್ಣಾಗಿಸಿ ಹಿಮಪರ್ವತದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಬಂದ ಸೈನಿಕರ ಬಗ್ಗೆ ತಿಳಿಯೋಣ.

      ಇಂಜನೀಯರಿಂಗ್ ಪದವಿ ಪಡೆದು ಯಾವುದೋ ಕಂಪನಿಯ ಮೂಲೆಯ ಕಂಪ್ಯೂಟರ್ಗೆ ಮೀಸಲಾಗದೇ ದೇಶಕ್ಕೆ ತನನ್ನು ಸಮರ್ಪಿಸಿಕೊಂಡು ಪರಮವೀರ ಚಕ್ರವೆಂಬ ವೀರೋಚಿತ ಪ್ರಶಸ್ತಿಯನ್ನು ಪಡೆಯಲು ಸೈನ್ಯಕ್ಕೆ ಸೇರಿದವ ಮನೋಜ್ ಕುಮಾರ್ ಪಾಂಡೆ. ಅವನ ಇಚ್ಛಾಶಕ್ತಿ ಎಷ್ಟು ಸ್ಪಷ್ಟವಾಗಿತ್ತೆಂದರೆ ಅವನ ಡೈರಿಯ ಸಾಲುಗಳಲ್ಲಿ ಬರೆದುಕೊಂಡಿರುತ್ತಾನೆ “ನನ್ನ ರಕ್ತದ ತಾಕತ್ತು ತೋರಿಸುವ ಮುನ್ನ ಮೃತ್ಯು ನನ್ನೆದುರಿಗೆ ಬಂದರೇ ಮೃತ್ಯುವನ್ನೇ ಕೊಂದು ಬಿಡ್ತೇನೆ.” ಪಾಕಿಸ್ತಾನದ ಬಂಕರ್ ಮೇಲೆ ತನ್ನ ಒಂದು ಗ್ರೈನೆಡ್ ಎಸೆಯುತ್ತಾನೆ. ಎರಡು ಬಂಕರ್ ಛಿದ್ರವಾಗುತ್ತದೆ. ಒಂದು ಗುಂಡು ಅವನ ಬಲಗೈಗೆ ತಾಕಿ ಕೈ ಅರ್ಧದಷ್ಟು ಭಾಗ ಜೋತಾಡುತ್ತಿರುತ್ತೆ. ಅಷ್ಟಕ್ಕೇ ಕುಸಿದು ಬೀಳದೇ ಕೈಯನ್ನು ಸ್ನೇಹಿತರ ಸಹಾಯದಿಂದ  ಕತ್ತರಿಸಿಕೊಂಡು ಸೊಂಟಕ್ಕೆ ಕಟ್ಟಿಸಿಕೊಳ್ಳುತ್ತಾನೆ. ಎಡಗೈಯಿಂದ ಗ್ರೈನೆಡ್ ಎಸೆದು ಉಳಿದ ಬಂಕರ್ ಸಂಹರಿಸುತ್ತಾನೆ. ಗುಂಡು ಬಂದು ಅವನ ಹಣೆ ಸೀಳಿದಾಗ ಈ ಗುಡ್ಡ ನಮ್ಮದಾಯಿತುಎನ್ನುತ್ತಲೇ ರಕ್ತದ ಮಡುವಿನಲ್ಲಿ ಬಿದ್ದು ಉಸಿರು ಚೆಲ್ಲುತ್ತಾನೆ.ಅವರ ತಾಯಿ ಅವನ ಪರಮವೀರ ಚಕ್ರ ಪಡೆಯುತ್ತಾ ಕಂಬನಿ ಮಿಡಿದಾಗ ಪುತ್ರವಿಯೋಗದ ದುಃಖಕ್ಕಿಂತ, ಮಗನ ಬದುಕಿನ ಸಾರ್ಥಕತೆ ಮಿಂಚುತ್ತಿತ್ತು.

       ಅಮನ್, ಅಮೋಲ್ ಎಂಬ ಇಬ್ಬರು ಸಹೋದರರು ಯುದ್ಧಕ್ಕೆಂದು ಹೋಗುತ್ತಾರೆ. ಅಮನ್ಗೆ ಮದುವೆಯಾಗಿದ್ದರೆ ಅಮೋಲ್ಗೆ ಯುದ್ಧದಿಂದ ಬಂದ ಮೇಲೆ ಮದುವೆಯಾಗುವುದಿರುತ್ತದೆ. ಆದರೆ ಅವನು ಮನೆಗೆ ಮರಳಿದ್ದು ಹೆಣವಾಗಿ. ಅದೇ ತರಹ ಇತ್ತೀಚೆಗೆ ತೀರಿ ಹೋದ ಸಹದೇವ್ ಮೋರೆ ಎಂಬ ಸೈನಿಕನಿಗೂ ಮದುವೆ ಗೊತ್ತಾಗಿರುತ್ತೆ. ಹೀಗೆ ಯುಗಳಗೀತೆ ಹಾಡಬೇಕಾದ ವಯಸ್ಸಿನಲ್ಲಿ ದೇಶಕ್ಕಾಗಿ ಸಮರ್ಪಿಸಿಕೊಂಡು ಚರಮ ಶ್ಲೋಕ ಪಠಿಸಿ ಹೋಗುವ ಹಲವು ಯೋಧರ ತ್ಯಾಗವಿದೆಯಲ್ಲ ಅದನ್ನು ವಿವರಿಸಲು ನನ್ನ ಲೇಖನಿ,ಪದಗಳು ತುಂಬಾ ಬಡವಾಗಿವೆ.

        ಮೇಜರ್ ಸರ್ವಣನ್ ಎಂಬ ತಿರ್ಚಿಯ 26ರ ಯುವಕ ಮೇ28ರ ಹೊತ್ತಿಗೆ ತಿರ್ಚಿಗೆ ಮರಳಬೇಕಿರುತ್ತದೆ.  ನಿಶ್ಚಿತಾರ್ಥದ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ.ಆದರೆ ಅನಿಶ್ಚಿತವಾಗಿ ಬಂದ ಸೈನ್ಯದ ಕರೆಗೆ ಓಗೊಟ್ಟು ಹೋಗುತ್ತಾನೆ. 10 ಜನ ಶತ್ರು ಸೈನಿಕರನ್ನು ಕೊಲ್ಲುತ್ತಾನೆ. 2ಬಂಕರ್ ವಶಕ್ಕೆ ತೆಗೆದುಕೊಳ್ಳುತ್ತಾನೆ. ಮೇ28 ರ ರಾತ್ರಿ ಅವನು ಮಾರಣಾಂತಿಕವಾಗಿ ಪೆಟ್ಟು ತಿಂದು ಧರೆಗುರುಳಿದ್ದು ನೋಡಿದವರಿರುತ್ತಾರೆ. ಆದರೆ ಹೆಣವನ್ನು ತರಲು ಅನುಕೂಲಕರ ವಾತಾವರಣ ಇರುವುದಿಲ್ಲ.ಅದರೆ ಮನೆಗೆ ಸುದ್ದಿ ತಲುಪಿರುತ್ತದೆ. ಅವನ ಶವ ಪತ್ತೆಯಾಗಿದ್ದು ಜುಲೈ3ಕ್ಕೆ. ಅವನ ಜೊತೆಗಿದ್ದ ನಾಯಕ್ ಶತ್ರುಘ್ನನ್ ಕಾಲಿಗೆ ಪೆಟ್ಟು ಬಿದ್ದಿರುತ್ತದೆ.ಮುಂದೆ ಅದೇ ಗಾಯ ಗ್ಯಾಂಗ್ರಿನ್ ಆಗಿ ಅವನು ಮರಣವನ್ನಪ್ಪುತ್ತಾನೆ.ಇದೇ ತರಹ ಇತ್ತೀಚೆಗೆ ತೀರಿ ಹೋದ H.D.ಕೋಟೆಯ ಮಹೇಶ್ವರ ಹಾಸನದ ನಾಗೇಶ್ ಅವರ ಶವಗಳು ಮನೆಯನ್ನು ತಲುಪಿದ್ದು 3-4 ದಿನದ ನಂತರ. ಆ ಮಧ್ಯದ ದಿನಗಳಲ್ಲಿನ ಕುಟುಂಬದವರ ತಹತಹಿಕೆ ಬೆರೆತ ದುಃಖ ಮಾತ್ರ ಹೇಳತೀರದು.

       ಮೇಜರ್ ರಾಜೇಶ್ ಅಧಿಕಾರಿ ಎಂಬ ಯೋಧನ ಕೈಗೆ ಹೆಂಡತಿ ಬರೆದ ಪತ್ರ ರಾತ್ರಿ ತಲುಪುತ್ತದೆ. ಕತ್ತಲೆ ಮತ್ತು ಹಿಮ ಬೀಳುತ್ತಿದ್ದ ಕಾರಣ ಮರುದಿನದ ಆಫರೇಶನ್ ಯಶಸ್ಸಿನ ನಂತರ ನಿಧಾನವಾಗಿ ಓದಿದರಾಯಿತು ಎಂದುಕೊಳ್ಳುತ್ತಾನೆ. 16000 ಅಡಿ ಎತ್ತರದ ಬೆಟ್ಟದ ವಶಕ್ಕಾಗಿ 10 ಜನರ ಪಡೆ ಹೋಗುತ್ತದೆ.ಅದರಲ್ಲಿ ಶತ್ರುವಿನ ಶಕ್ತಿ ಅಧಿಕವಾದ ಕಾರಣ ಆಫರೇಶನ್ ಯಶಸ್ವಿಯಾಗೊಲ್ಲ.ಮರುದಿನ ಹತ್ತು ಜನರ 3 ಪಡೆಗಳು ಅಧಿಕಾರಿಯವರ ಸಾರಥ್ಯದಲ್ಲಿ ಪಾಯಿಂಟ್ ವಶಪಡಿಸಿಕೊಳ್ಳುತ್ತದೆ. ಆದರೆ ಆ ಪಾಯಿಂಟ್ ಇನ್ನೂ 10 ಮೀಟರ್ ದೂರವಿರುವಾಗಲೇ ಅಧಿಕಾರಿಗುಂಡಿಗೆ ಬಲಿಯಾಗುತ್ತಾರೆ. ಅವರಿಂದ ಓದಿಸಿಕೊಳ್ಳುವ ಹುಸಿನಿರೀಕ್ಷೆಯಲ್ಲಿ ಹೆಂಡತಿಯ ಪತ್ರ ಜೇಬಿನಲ್ಲೆ ಮಲಗಿರುತ್ತದೆ.

       ತನ್ನ ಸೈನ್ಯದ ಬಳಗದಿಂದ ಶೇರ್ ಶಹಾಎಂದು ಕರೆಸಿಕೊಳ್ಳುತ್ತಿದ್ದ ಇನ್ನೊಬ್ಬ ಸೈನಿಕ ವಿಕ್ರಮ್ ಬಾತ್ರಾ. ಪಾಯಿಂಟ್ 5140 ಎಂಬ 17000 ಅಡಿ ಎತ್ತರದಲ್ಲಿರುವ ತುಂಬಾ ಮಹತ್ವದ ಕ್ಷೇತ್ರದ ಪಣತೊಟ್ಟು ಗುಡ್ಡ ಏರುತ್ತಿರುತ್ತಾನೆ. ಅತ್ತಲಿಂದ ಪಾಕಿಸ್ತಾನಿ ಕಮಾಂಡರ್ “ಏಕೆ ಬಂದೆ ಶೇರ್ ಶಹಾ ನೀನು ವಾಪಸ್ ಹೋಗಲಾರೆ.” ಎಂದು ಸಂದೇಶ ಕಳುಹಿಸುತ್ತಾನೆ. “ಇನ್ನು ಒಂದೇ ಗಂಟೆಯಲ್ಲಿ ಬೆಟ್ಟದ ಮೇಲೆ ಯಾರು ಉಳಿಯುತ್ತಾರೋ ನೋಡುವಿಯಂತೆ. ” ಅನ್ನುತ್ತಾ ಮೇಲೆ ಹತ್ತಿದ್ದ ಗುಂಪು 8 ಜನ ಸೈನಿಕರನ್ನು ಕೊಂದು ಪಾಯಿಂಟ್ ವಶಪಡಿಸಿಕೊಂಡು ಬಿಡುತ್ತೆ. ಬಾತ್ರಾ ರೇಡಿಯೋ ಸಂದೇಶವನ್ನು ತನ್ನ ಕಮಾಂಡಿಂಗ್ ಆಫಿಸರ್ ಅವರಿಗೆ ಕಳುಹಿಸುತ್ತಾನೆ. “5140 ಪಾಯಿಂಟ್ ನಮ್ಮದಾಯಿತು ಯೆ ದಿಲ್ ಮಾಂಗೆ ಮೋರ್” . ಅಷ್ಟಕ್ಕೇ ಮುಗಿಯದ ಅವನ ಪರಾಕ್ರಮ ಮತ್ತೆ ಪಾಯಿಂಟ್ 4750 ವಶಕ್ಕೆ ಮುಂದಾಗುತ್ತಾರೆ. ಆಗಲು ಪಾಕಿ ” ನಿಮ್ಮ ಹೆಣ ಹೊರಲು ಯಾರೂ ಉಳಿಯುವುದಿಲ್ಲ ಶೇರ್ ಶಹಾ” ಎಂಬ ಸಂದೇಶ ರವಾನಿಸುತ್ತಾನೆ. ಆಗ “ನಮ್ಮ ಬಗ್ಗೆ ಬಿಡು ನಿಮ್ಮ ಕ್ಷೇಮದ ಬಗ್ಗೆ ದೇವರಲ್ಲಿ ಪ್ರಾರ್ಥಿಸಿ” ಎಂದು ಉತ್ತರಿಸುತ್ತಾನೆ. ಆ ಪಾಯಿಂಟ್ ಭಾರತದ ತೆಕ್ಕೆಗೆ ಸಿಗುತ್ತದೆ. ಅಂತೆಯೆ ಜುಲೈ 5ಕ್ಕೆ ಪಾಯಿಂಟ್ 4875ವಶಕ್ಕೆ ಬರುತ್ತೆ. ಜುಲೈ 7ರಂದು ನಡೆದ ಗುಂಡಿನ ಚಕಮಕಿಯಲ್ಲಿ ಬಾತ್ರಾ ಅವರ ಗುಂಪಿನ ಲೆಫ್ಟಿನೆಂಟ್ ನಾರಾಯಣ ಗುಂಡಿನೇಟಿಗೆ ನೆಲಕ್ಕುರುಳುತ್ತಾನೆ. ಅವನ ಸಹಾಯಕ್ಕೆ ಬಂದ ಬಾತ್ರಾನ ಎದೆಯನ್ನು ಗುಂಡೊಂದು ಸೀಳಿ ಹೋಗುತ್ತದೆ.

       ಇದಂತು ಬಿಡಿ ನಮ್ಮ ಪುಣ್ಯಕ್ಕೆ ವಾಜಪೇಯಿ ಅವರು ಪ್ರಧಾನಿ ಹುದ್ದೆಯಲ್ಲಿದ್ದರು ಸೈನಿಕರ ಕಷ್ಟಕ್ಕೆ ಸ್ಪಂದಿಸಿದರು. ಅದೇ ಚೀನಾ ಯುದ್ಧವಾಗಿ ಟಿಬೆಟ್ ಸುತ್ತಮುತ್ತಲಿನ ಕೆಲವು ಪ್ರದೇಶಗಳು ಭಾರತದ ಕೈತಪ್ಪಿ ಹೊಗಿದ್ದವು.”ಹೋದರೆ ಹೋಯಿತು ಅದು ಹುಲ್ಲುಕಡ್ಡಿಯೂ ಬೆಳೆಯದ ಬಂಜರು ಭೂಮಿ” ಎಂಬ ಉಢಾಪೆಯ ಹೇಳಿಕೆ ಕೊಟ್ಟ ಪಂಡಿತರಿದ್ದರೆ ಭಾರತ ವಿಜಯ ದಿವಸದ ಬದಲು ಕರಾಳ ದಿನಾಚರಣೆ ಆಚರಿಸಬೇಕಾಗುತ್ತಿತ್ತು.ಬರೀ ಕಾರ್ಗಿಲ್ ಯುದ್ಧ ಮಾತ್ರವಲ್ಲದೇ ಭಾರತದ ಮೇಲೆ ದಾಳಿಯಾದಾಗಲೆಲ್ಲ ಭಾರತ ಇಂಥ ಒಂದು ವೀರೋಚಿತ ಹೋರಾಟವನ್ನು ಸಂಘಟಿಸಿತ್ತು. ಚೀನಾ ದಾಳಿಯಾದಾಗ ಭಾರತಕ್ಕಿಂತ ಮೂರು ಪಟ್ಟು ಉತ್ಕೃಷ್ಟವಾದ ಗುಂಡು ಮದ್ದುಗಳು ಚೈನಿಯರ ಬಳಿ ಇದ್ದವಂತೆ ಆದರೂ ಅವರು ನಮ್ಮ ಇಬ್ಬರನ್ನು ಕೊಂದಾಗ ನಮ್ಮವರು ಅವರ ಒಬ್ಬನನ್ನಾದರೂ ಕೊಲ್ಲುತ್ತಿದ್ದರಂತೆ. ಜಾನ್ ಪಿ ದಳವಿಯವರ ಹಿಮಾಲಯನ್ ಬ್ಲಂಡರ್ ಪುಸ್ತಕದಲ್ಲಿ ಇದು ಉಲ್ಲೇಖವಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯುದ್ಧದಲ್ಲಿ ಗಾಯಗೊಂಡವರನ್ನು ನೋಡಲು ಹೋಗಿರುತ್ತಾರೆ. ಆಗ ಅಂಗ್ರೇಜ್ ಸಿಂಗ್ ಎಂಬ ಯೋಧ “ಸರ್ ಇಲ್ಲಿರುವ ಎಲ್ಲ ಯೋಧರನ್ನೊಮ್ಮೆ ನೋಡಿ ಎಲ್ಲರಿಗೂ ಎದೆಗೆ ಗುಂಡು ಬಿದ್ದಿದೆ. ನೀವು ನಮ್ಮ ಪ್ರತಿನಿಧಿ ಜನ ನಮ್ಮನ್ನು ನೋಡ್ತಾ ಇಲ್ಲ.ನಿಮ್ಮನ್ನ ನೋಡ್ತಾರೆ. ನೀವು ನಮ್ಮ ಸೈನಿಕರು ಶತೃಗಳಿಗೆ ಎದೆಯನ್ನು ಕೊಟ್ಟು ಹೋರಾಡ್ತಿದ್ದಾರೆ ಬೆನ್ನನ್ನಲ್ಲ ಎಂದೊಮ್ಮೆ ದೇಶದ ಜನತೆಗೆ ತಿಳಿಸಿ” ಎಂದು ಹೇಳುತ್ತಾನೆ.ಬಹುಷಃ ಇತ್ತೀಚಿನ ದೇಶದ ಬೆಳವಣಿಗೆಯನ್ನು ನೋಡಿದರೆ ಆಂತರಿಕ ಶತೃಗಳೇ ದೇಶಕ್ಕೆ ಜಾಸ್ತಿಯಾಗಿದ್ದಾರೆ. ಸೈನಿಕರೊಮ್ಮೆ ತಿರುಗಿ ಅಂಥವರನ್ನು ಮೊದಲು ಸಂಹರಿಸಬೇಕಿದೆ. ಹೀಗೆ ಸೈನಿಕರು ಸಾಯುತ್ತಾ ಹೋದರು ಭಾರತದ ಕ್ಷಾತ್ರ ಶಕ್ತಿ ಇನ್ನೂ ಕುಂದಿಲ್ಲ. ಸತ್ತ ಗಂಡನ ಶವದ ಮುಂದೆ ಕುಳಿತು ನನ್ನ ಎರಡೂ ಮಕ್ಕಳು ಒಂದು ಗಂಡು ಒಂದು ಹೆಣ್ಣು ಸೈನ್ಯಕ್ಕೆ ಮೀಸಲು ಎನ್ನುವ ಸಂತೋಷ ಮೆಹ್ದಿಕ್ ಎಂಬ ಕಮಾಂಡಿಂಗ್ ಆಫಿಸರ್ ಅವರ ಪತ್ನಿ, ಮಗಳು ನೇತ್ರಾಳ ತಲೆ ಸವರುತ್ತಾ ತಂದೆಯ ದೇಶಪ್ರೇಮ ಮಗಳಲ್ಲಿ ತುಂಬುವೆ ಎನ್ನುವ ಹನುಮಂತಪ್ಪನವರ ಪತ್ನಿ ಮಾದೇವಿಯಂತವರು ಇನ್ನೂ ಇದ್ದಾರೆ.ಸೈನ್ಯ ಯುದ್ಧವೆಂದು ಬಂದಾಗ ನಮ್ಮನ್ನು ಜೋಡಿಸುವುದು ಭಾರತ ಎಂಬ ಮೂರಕ್ಷರದ ರಾಷ್ಟ್ರೀಯತೆಯ ಕೊಂಡಿ ಮಾತ್ರ. ನೀವೇ ಹೇಳಿ ಹನುಮಂತಪ್ಪನವರಿಗೆ ಕಿಡ್ನಿ ಕೊಡುವುದಾಗಿ ಹೇಳಿದ ಸೋದರಿಗೂ, ಅವರ ಸಾವಿಗೆ ಕಂಬನಿ ಮಿಡಿದ ದೇಶದ ಜನರಿಗೂ ಮತ್ತು ಹನುಮಂತಪ್ಪನವರಿಗೂ ಇರುವ ಸಂಬಂಧ ನಾವೆಲ್ಲರೂ ಭಾರತೀಯರೆಂಬುದಷ್ಟೆ ಅಲ್ಲವೇ. ಕಾರ್ಗಿಲ್ ಯುದ್ಧವಾದಾಗ ದೆಹಲಿಯ ರೆಡ್.ಲೈಟ್ ಏರಿಯಾದ ಹೆಂಗಳೆಯರು (ವೇಶ್ಯೆ ಎಂದು ಕರೆಯಲು ಮನಸ್ಸಿಲ್ಲ) ತಮ್ಮ ಒಂದು ದಿನದ ಆದಾಯವನ್ನು ಸೈನ್ಯಕ್ಕೆ ಕೊಟ್ಟ ಇತಿಹಾಸವಿದೆ. ಎಷ್ಟೇ ಆಗಲಿ ಶಾಸ್ತ್ರೀಯವರ ಒಂದೇ ಕರೆಗೆ ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿದ ಜನ ಹುಟ್ಟಿದ ನಾಡಿದು.

       ಸೈನಿಕರ ಬದುಕು ಕಷ್ಟ ಬಿಡಿ. ಪಾಠಕ್ಕಿಂತ ಪ್ರತಿಭಟನೆಯೇ ಜಾಸ್ತಿ ನಡೆಯುವ JNU ನ ಕ್ಯಾಂಪಸ್ ಒಳಗೆ ಕೂತು ದೇಶದ ವಿರುದ್ಧ ಬೊಬ್ಬೆ ಹಾಕಿದಂತಲ್ಲ. ಅದು ಕುಟುಂಬದ ಸಂಪರ್ಕವೇ ಇಲ್ಲದೇ ಉಸಿರು ಬಿಗಿ ಹಿಡಿದು ಬದುಕುವ ಬದುಕು. ಐಶಾರಾಮಿ ಬಂಗಲೆಯಲ್ಲಿ ಕುಳಿತು ಈ ದೇಶ ಅಸಹಿಷ್ಣು ಎಂದ ನಟನ ಬದುಕಲ್ಲ. ಸಿಯಾಚಿನ್.ನಲ್ಲಿ ಶತ್ರುಗಳ ಜೊತೆಗೆ ಪ್ರಕೃತಿಯ ವಿರೋಧವನ್ನು ಎದುರಿಸಿ ಬದುಕುವ ಪರಮ ಸಹಿಷ್ಣುಗಳ ಬದುಕು.ಅಪ್ಜಲ್ ಗುರುವನ್ನು ಹುತಾತ್ಮ ಎನ್ನುವವರ ಮಧ್ಯೆ, ತನ್ನ ಮನೆಯ ಕೂಗಳತೆ ದೂರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕನ ಭೇಟಿಗೇ ಬರದೆ 2000 ಕಿ.ಮೀ ದೂರದ ಹೈದ್ರಾಬಾದ್.ಗೆ ಬಂದು ವಿದ್ಯಾರ್ಥಿ ಸಾವಿಗೆ ಕಂಬನಿ ಮಿಡಿದ ಯುವರಾಜನ ಮಧ್ಯೆ, ಸೈನಿಕರು ಸತ್ತರೆ ನರಕಕ್ಕೆ ಹೋಗುತ್ತಾರೆ ಎಂದು ಹೇಳುವ ಬಿಡದಿಯ ಸೋಕಾಲ್ಡ್ ಪುಣ್ಯಪೀಠದಲ್ಲಿ ಕುಳಿತವರ ಮಧ್ಯೆ,ದೇಶಕ್ಕಿಂತ ಅಭಿವ್ಯಕ್ತಿ ಸ್ವಾತಂತ್ರ್ಯವೇ ಶ್ರೇಷ್ಟ ಎನ್ನುವ ಬುದ್ಧಿಜೀವಿಗಳ ಮಧ್ಯೆ ನಮ್ಮಂಥ ಶ್ರೀ ಸಾಮಾನ್ಯರಾದರು ಈ ಕಾರ್ಗಿಲ್ ವಿಜಯದ ದಿವಸ ಸೈನಿಕರನ್ನು ನೆನೆಯೋಣ. ” ಜೊ ಶಹೀದ್ ಹುವೆ ಹೈ ಉನಕಿ ಜರಾ ಯಾದ್ ಕರೊ ಕುರಬಾನಿ” ಜೈ ಹಿಂದ್ ……

ರಾಹುಲ್ ಹಜಾರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!