ಅಂಕಣ

ಇದ್ದರೂ ಚಿಂತೆ…ಇಲ್ಲದಿದ್ದರೂ ಚಿಂತೆ…

        ಶಿವರಾಮ ಕಾರಂತರ “ಇದ್ದರೂ ಚಿಂತೆಯಿಲ್ಲ” ಎಂಬ ಕಾದಂಬರಿಯನ್ನು ಇತ್ತೀಚೆಗಷ್ಟೇ ಓದಿದೆ.  ಕಾರಂತರ ದೂರದರ್ಶಿತ್ವದ ನಿಖರತೆಗೆ ಇದೇ ಸಾಕ್ಷಿ ಎನ್ನಿಸಿತು. ಅವರ ಕಾದಂಬರಿಯೆಂದರೆ ಅದು ಒಂದು ಕಾಲದ ಜನ ಜೀವನವನ್ನೇ ಪ್ರತಿನಿಧಿಸುವಂಥದ್ದು, ಸ್ಪಷ್ಟವಾಗಿ ನಿರೂಪಿಸಬಲ್ಲಂಥದ್ದು. ಸ್ವಾತಂತ್ರ್ಯದ ಆಸುಪಾಸಿನ ಕಾಲದಲ್ಲಿನ ಬಾರ್ಕೂರು, ಬ್ರಹ್ಮಾವರದ ಸುತ್ತಮುತ್ತಲ ಜನ ಜೀವನ, ಸ್ವಾತಂತ್ರ್ಯದ ನಶೆ ಇಲ್ಲಿನ ಜನರನ್ನು ತಟ್ಟಿದ ಬಗೆ, ಸ್ವಾತಂತ್ರ್ಯದ ಹೆಸರಿನಲ್ಲಿ ಓಡಾಡಿದ ಒಂದಷ್ಟು ಜನ, ಅದರಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಂಡ ಕೆಲವರ ಬಗೆ, ಈ ಎಲ್ಲವನ್ನೂ ಸಾದ್ಯಂತವಾಗಿ ವಿವರಿಸುತ್ತಾ ಕಥೆ ಹೆಣೆಯುತ್ತಾ ಹೋಗಿದ್ದಾರೆ. ಆ ಕೃತಿಯನ್ನು ವಿವರಿಸುವುದು ನನ್ನ ಉದ್ದೇಶವಲ್ಲ. ಆ ಕೃತಿಯಲ್ಲಿ ಬರುವ ಒಂದು ಮುಖ್ಯ ಪಾತ್ರ ಶೀನ ಭಟ್ಟರದ್ದು. ಪ್ರಾಮಾಣಿಕತೆ, ಸ್ವಾಭಿಮಾನಗಳನ್ನೇ ಉಸಿರಾಗಿಸಿಕೊಂಡು ಬದುಕಿದ ಶೀನ ಭಟ್ಟರು ಈ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಡೆಯುತ್ತಿದ್ದ ದಗಲ್ಬಾಜಿಗಳು,ಅನಾಚಾರಗಳನ್ನು ನೋಡಿಯೇ ಬ್ರಿಟಿಷರು ಇಲ್ಲಿ ಇದ್ದರೂ ಚಿಂತೆಯಿಲ್ಲ ಎಂಬ ಭಾವನೆ ತಾಳುತ್ತಾರೆ. ಅವರ ಎಣಿಕೆಯಂತೆಯೇ ಸ್ವಾತಂತ್ರ್ಯಾ ನಂತರ ದೇಶದಲ್ಲಿ ಅಪಾರ ಅರಾಜಕತೆ, ಗಲಭೆಗಳೊಂದಿಗೆ ಪ್ರಥಮ ಚುನಾವಣೆಯೂ ಸಂಪೂರ್ಣ ಭ್ರಷ್ಟಾಚಾರದೊಂದಿಗೆ ಕೊನೆಗೊಳ್ಳುತ್ತದೆ. ದುರದೃಷ್ಟವಶಾತ್ ಆ ಪಾತ್ರದ ಮೂಲಕ ಹೇಳಿದ ಕಾರಂತರ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಪ್ರಸ್ತುತ ಕರ್ನಾಟಕದ ರಾಜಕಾರಣವನ್ನೇನಾದರೂ ಅವರು ನೋಡಿದ್ದಿದ್ದರೆ ಬರೆಯಲೂ ಅಸಹ್ಯಿಸುತ್ತಿದ್ದರೇನೋ.

       ಕೆಲವು ಸಮಯದಿಂದ ಬರುತ್ತಿರುವ ಲೇಖನಗಳನ್ನು ಗಮನಿಸಿದಿರಾದರೆ, ಮುಖ್ಯಮಂತ್ರಿಗಳಿಗೆ, ಆಡಳಿತ ಪಕ್ಷದವರಿಗೆ, ಪ್ರತಿಪಕ್ಷಗಳಿಗೆ ಎಲ್ಲರೂ ಚುರುಕು ಮುಟ್ಟಿಸುವವರೇ, ತೆಗಳುವವರೇ. ಅನಾಚಾರಗಳ ಪಟ್ಟಿ ಬೆಳೆಯುತ್ತಿರುವಂತೆಯೇ, ಅದರಲ್ಲಿ ಸರಕಾರದ ಪಾತ್ರವಿರುವ ಪ್ರಕರಣಗಳನ್ನು ಲೆಕ್ಕ ಹಾಕಲು ಕೈ ಕಾಲಿನ ಬೆರಳುಗಳೇ ಸಾಕಾಗದಿರುವ ಸ್ಥಿತಿಗೆ ಬಂದು ಬೈದು, ತೆಗಳಿ, ಉಗುಳಿದರೂ ಸಂಬಂಧಿಸಿದವರಿಗೆ ಏನೂ ಅನ್ನಿಸದಿರುವಾಗ, ನಮ್ಮ ಆಕ್ರೋಶಗಳು,ಆಪಾದನೆಗಳೆಲ್ಲಾ ಮಾಮೂಲು ಎಂದುಕೊಂಡವರೇ ತುಂಬಿರುವಾಗ…. ಹೀಗಾದರೆ ಮುಂದಿನ ಚುನಾವಣೆಯಲ್ಲಿ ಯಾವ ಸರಕಾರ ಬಂದರೇನು ಎಂಬ ನಿರ್ಲಿಪ್ತಿ, ನಿರಾಸಕ್ತಿಯನ್ನು ಅನೇಕರು ತಾಳಿದ್ದೇವೆ. ಬಹುಶಃ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕಿಂತ ದುರದೃಷ್ಟಕರ ವಿಷಯ ಮತ್ತೊಂದಿಲ್ಲ ಎಂದುಕೊಳ್ಳುತ್ತೇನೆ.

         ಯಾವುದೇ ವಸ್ತು ಅಥವಾ ಅಂಗ ಇಲ್ಲದಾದಾಗ ಮಾತ್ರ ಅದರ ಮಹತ್ವ ಅರಿವಾಗುವುದಂತೆ. ಹಾಗೆಯೇ ನಾವೆಲ್ಲರೂ ನಾಲ್ಕನೆಯೋ ಐದನೆಯೋ ತರಗತಿಯಲ್ಲಿ ಓದಿದ, ನಾಯಕರೆನಿಸಿಕೊಂಡ ಬಹುಪಾಲು ಜನರು ಮರೆತು ಬಿಟ್ಟಿರುವ ಸಾಲು “ಪ್ರಜೆಗಳಿಂದ ,ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ….”. ಈಗ ಈ ಸಾಲುಗಳ ಅಸ್ತಿತ್ವ ಇಲ್ಲದ್ದರಿಂದಲೋ ಏನೋ ಶಬ್ದಶಃ ಅರ್ಥವಾಗುತ್ತಿದೆ. ಒಂದು ಸಮಾಜದಲ್ಲಿ ನಾವೆತ್ತ ಸಾಗುತ್ತಿದೇವೆ ಎಂಬುದು ಸಾಮಾನ್ಯ ಪ್ರಜೆಗಳಿಗಿರಬೇಕಾದ ಜವಾಬ್ದಾರಿಯಾದರೆ, ಎಲ್ಲರನ್ನೂ ಎತ್ತ ಸಾಗಿಸುತ್ತಿದ್ದೇವೆ ಎಂಬ ಜವಾಬ್ದಾರಿ ನಾಯಕರದ್ದು. ಜವಾಬ್ದಾರಿಯ ಮಾತು ಬಿಡಿ, ನಮ್ಮ ತಲೆಯ ಮೇಲೆ ಈಗ ಕುಳಿತಿದ್ದಾರಲ್ಲ ಅಥವಾ ನಾವು ಕೂರಿಸಿಕೊಂಡಿದ್ದೇವಲ್ಲ, ಇವರಿಗೆ ಆಡಳಿತ ಬಿಡಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಸಮಾಜದಲ್ಲಿ ಬದುಕಲು ಬೇಕಾದ ಕನಿಷ್ಠ ಅರ್ಹತೆಯಾದರೂ ಇದೆ ಎಂದು ನಿಮಗನಿಸುತ್ತದೆಯೇ? ಮೊದಲೆಲ್ಲಾ ಅರಾಜಕತೆ, ಭ್ರಷ್ಟಾಚಾರ, ಅನಾಚಾರ ಅಂದ ಕೂಡಲೇ ದೊಡ್ಡ ಸುಭಗರಂತೆ ಬಿಹಾರ ಅಂತ ನೆನಪು ಮಾಡಿಕೊಳ್ಳುತ್ತಿದ್ದೆವು. ಈಗ ಬಹುಶಃ ಅವರೇ ನಮ್ಮನ್ನು ಉಲ್ಲೇಖಿಸುತ್ತಾರೇನೋ. ಏಕೆಂದರೆ “ಅಲ್ಲಿನವರು ಹೇಗೆ ಬದುಕುತ್ತಾರೇನೋ!” ಎಂದು ಉದ್ಗಾರ ತೆಗೆಯುತ್ತಾ ಕಲ್ಪನೆ ಮಾಡಿಕೊಳ್ಳುವ ತೊಂದರೆ ತೆಗೆದುಕೊಳ್ಳುವ ಗೋಜಿಯೇ ಬೇಡ ಕಣ್ಣಾರೆ ನೋಡಿಕೊಳ್ಳಿರೆಂದು ಸರಕಾರ ಆ ಭಾಗ್ಯವನ್ನೂ ಕರುಣಿಸಿದೆ.

        ವೈಯಕ್ತಿಕವಾಗಿ ಶುಭ್ರವಾಗಿಲ್ಲದಿದ್ದರೆ ಇರಲಿ ಬಿಡಿ ನಮಗೆ ಒಳ್ಳೆಯ ಆಡಳಿತ ಮುಖ್ಯ ಅಂತ ಸುಮ್ಮನಾಗಬಹುದು. ಅಥವಾ ಆಡಳಿತ ಹೋಗಲಿ ಶುಭ್ರವಾದ ಅವರ ವೈಯಕ್ತಿಕ ಜೀವನ ನೋಡಿ ವೈಯಕ್ತಿಕವಾಗಿ ಒಳ್ಳೆಯವರೇ ಅಂತ ಕಣ್ಣು ತಂಪು ಮಾಡಿಕೊಳ್ಳುತ್ತಾ ತಣ್ಣಗಿರಬಹುದೇನೋ. ಇವೆರಡನ್ನೂ ನಮ್ಮಿಂದ ಅಪೇಕ್ಷಿಸಬೇಡಿ ಎಂದರೆ ಈ ಸರಕಾರವೆಂಬ ವ್ಯವಸ್ಥೆಯಾದರೂ ಏಕೆ? ಸರಕಾರದ ಬಗ್ಗೆ ಪ್ರಾಮಾಣಿಕವಾಗಿ ಒಂದೊಳ್ಳೆ ಮಾತು ಹೇಳಿ ಎಂದರೆ ಬಹುಶಃ ಆ ಪಕ್ಷದಲ್ಲೇ ಯಾರೂ ಸಿಗಲಿಕ್ಕಿಲ್ಲ. ಮುಂದೆ ವಿರೋಧ ಪಕ್ಷವಾದರೂ ಅಧಿಕಾರಕ್ಕೆ ಬಂದು ಬದಲಾವಣೆಯನ್ನು ನೀಡಬಹುದೆಂಬ ಭರವಸೆಯೂ ಇಲ್ಲದಿರುವಾಗ ನಾವಿಷ್ಟು ತೆರಿಗೆ ಕಟ್ಟಿ ಅಷ್ಟೊಂದು ಜನರನ್ನು ಸಾಕಬೇಕಾದ ದರ್ದಾದರೂ ಏನು? ನೆನಪಿಟ್ಟುಕೊಳ್ಳಿ, ನಾವವರನ್ನು ಸಾಕುತ್ತಿದ್ದೇವೆಯೇ ಹೊರತು ಅವರೇನು ದುಡಿದು ಉಣ್ಣುತ್ತಿಲ್ಲ .ಇದೊಂದು ಹುಚ್ಚಲ್ಲವೇ? ಒಂದು ನಾಯಿಗೆ ಮನೆಯವರನ್ನೇ  ಕಚ್ಚುವುದು ಅಭ್ಯಾಸ ಎಂದಿಟ್ಟುಕೊಳ್ಳಿ. ಅದು ಗೊತ್ತಿದ್ದೂ ಅದನ್ನು ಮನೆಯಲ್ಲಿಟ್ಟುಕೊಂಡು ದಿನಾ ಮೃಷ್ಟಾನ್ನ ಭೋಜನವುಣ್ಣಿಸಿದರೆ ಹೇಗಿರಬಹುದು? ನೆಟ್ಟಗೆ ನಿಮ್ಹಾನ್ಸ್’ಗೆ ಸೇರಿಸುವುದಿಲ್ಲವೇ? ರಾಜ್ಯದ ಪರಿಸ್ಥಿತಿ ಅದಕ್ಕಿಂತ ಭಿನ್ನ ಎಂದು ನಿಮಗನಿಸುತ್ತದೆಯೇ? ಕುಟ್ಟಪ್ಪ, ಅನುಪಮಾ.. ಎಂದು ಪ್ರಕರಣಗಳ ಪಟ್ಟಿ ಪುನಃ ಮಾಡುವ ಅವಶ್ಯಕತೆ ಇಲ್ಲವೆನಿಸುತ್ತದೆ. ಅದೆಲ್ಲದರ ಪಟ್ಟಿ ಮಾಡಿದರೆ ನೀವು ಈ ಲೇಖನವನ್ನು ತುಂಬ ಪುರುಸೊತ್ತಿನಲ್ಲಿ ಓದಬೇಕಾಗಬಹುದು. ’ಅನಂತ’ ಎನ್ನುವ ಪದದ ಅರ್ಥ ಗೊತ್ತಿಲ್ಲದಿದ್ದರೆ ಒಂದು ಸಾರಿ ಆ ಪಟ್ಟಿ ಮಾಡಲು ಶುರು ಮಾಡಿ ಬಿಡಿ, ಅರ್ಥ ತನ್ನಿಂತಾನೇ ಹೊಳೆಯುತ್ತದೆ.

     ಡಿವೈಎಸ್ಪಿ ಗಣಪತಿ  ಪ್ರಕರಣದ ಕುರಿತಾಗಿ ಪುನಃ ಪುನಃ ಜಗಿಯಲು ನನಗಿಷ್ಟವಿಲ್ಲ. ಅದರ ಬಗ್ಗೆ ಈಗಾಗಲೇ ಅನೇಕರು ಬರೆದಾಗಿದೆ, ಅದರ ಬಗ್ಗೆ ಎಲ್ಲರಿಗೂ ಆಕ್ರೋಶವಿರುವುದೂ ತಿಳಿದಿರುವುದೇ. ಆದರೆ ಈ ಪ್ರಕರಣದಲ್ಲಿ ಕೇವಲ ಮಂತ್ರಿಯೊಬ್ಬರ ರಾಜೀನಾಮೆಯನ್ನು ತಪ್ಪಿಸುವುದಕ್ಕಾಗಿ ವಿಧಾನಸಭಾ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತಲ್ಲ ಅಸಲಿಗೆ ವಿಧಾನಸಭಾ ಅಧಿವೇಶನವಿರುವುದಾದರೂ ಏತಕ್ಕೆ? ಆ ಕೆಲಸ ಬಿಟ್ಟು ಮತ್ತೆಲ್ಲವೂ ಅಲ್ಲಿ ನಡೆಯುತ್ತಿದೆ. ನಿಜ ಹೇಳಬೇಕೆಂದರೆ ಪ್ರತಿಪಕ್ಷಗಳು ಪ್ರತಿಭಟಿಸಬೇಕಾದ ಸ್ಥಳವೂ ಅದಲ್ಲ. ನಮ್ಮಲ್ಲೋ ಅದರಿಂದಲೂ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ರಾಜೀನಾಮೆ ತಪ್ಪಿಸುವುದಕ್ಕಾಗಿ ಅಧಿವೇಶನವನ್ನೇ ಮುಂದೂಡುವಂತಹ ನಾಚಿಕೆಗೇಡಿನ ಕೆಲಸ ಮಾಡಲಾಯಿತು. ಇಂತಹ ದೊಂಬರಾಟಗಳನ್ನಾಡುವುದೇ ಒಂದು ಸರಕಾರದ ಕೆಲಸವಾದರೆ ಅದಕ್ಕಿಂತ ಹೀನ ಸ್ಥಿತಿ ಮತ್ತೊಂದಿಲ್ಲ. ಅದಕ್ಕಿಂತಲೂ ದುಃಖದಾಯಕವಾದುದೆಂದರೆ ನಾವೆಲ್ಲಾ ಇಂತಹ ಘಟನೆಗಳಿಗೆ ಎಷ್ಟು ಒಗ್ಗಿಕೊಂಡಿದ್ದೇವೆಂದರೆ ಅದೊಂದು ದೊಡ್ಡ ವಿಷಯವೆಂದೂ ನಮಗನಿಸುತ್ತಿಲ್ಲ. ಈಗೇನಾಗುತ್ತಿದೆ ಗೊತ್ತೇ? ನಾವೆಲ್ಲಾ ಒಂದು ದುಷ್ಕೃತ್ಯವಾದ ಕೂಡಲೇ ಪ್ರತಿಪಕ್ಷಗಳಿಂದ ದೊಡ್ಡ ಮಟ್ಟದ ಪ್ರತಿಭಟನೆಯನ್ನೂ, ಅಧಿವೇಶನವನ್ನು ಬಹಿಷ್ಕರಿಸುವುದನ್ನೂ ನಿರೀಕ್ಷಿಸುತ್ತೇವೆಯೇ ಹೊರತು ಇಂತಹದೊಂದು ಘಟನೆ ನಡೆಯಲೇ ಕೂಡದೆಂದೂ, ನಡೆದ ನಂತರ ಕೂಡಲೇ ಕ್ರಮ ಕೈಗೊಂಡಿರಬೇಕೆಂಬ ಹಂತಗಳನ್ನು ನಿಧಾನವಾಗಿ ಮರೆಯುತ್ತಿದ್ದೇವೆ. ಪ್ರಕರಣಕ್ಕೊಂದಿಷ್ಟು ತೇಪೆ ಹಾಕಿ ಮುಚ್ಚಿ ಹಾಕಿದ ತಕ್ಷಣ ನ್ಯಾಯ ಸಿಕ್ಕಿತೆಂದು ಸುಮ್ಮನಾಗುತ್ತೇವೆ. ಪ್ರತಿಪಕ್ಷಗಳು ಇದು ನಮ್ಮದೇ ಜಯ ಎನ್ನುತ್ತಾ ಊರಿಡೀ ಹಾರಾಡುತ್ತವೆ.

        ಅಸಲಿಗೆ ಇದೆಲ್ಲಾ ಪ್ರತಿಪಕ್ಷಗಳ ಕೆಲಸವೇ ಅಲ್ಲ. ಪ್ರತೀ ಘಟನೆಯ ನಂತರ ಕ್ರಮ ಕೈಗೊಳ್ಳಲು ಪ್ರತಿಭಟಿಸಬೇಕೆಂದರೆ ನಮ್ಮ ಕಾನೂನು ವ್ಯವಸ್ಥೆ ಯಾವ ಪಾತಾಳದಲ್ಲಿದೆ? ಆ ಗಂಭೀರತೆಯೇ ಹೆಚ್ಚಿನವರಿಗೆ ಅರ್ಥವಾಗುತ್ತಿಲ್ಲ. ಆಡಳಿತ ಪಥದಲ್ಲಿ ತಪ್ಪು ಹೆಜ್ಜೆ ಇಟ್ಟಾಗ ಕಿವಿ ಹಿಂಡಬೇಕಾದ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಾದುದೇ ಹೊರತು ಪ್ರತಿಯೊಂದಕ್ಕೂ ಪ್ರತಿಭಟನೆಯನ್ನು ಸರಕಾರವೇ ನಿರೀಕ್ಷಿಸಿದರೆ..? ಆದರೆ ನಮಗಿದು ಎಷ್ಟು ಸಹಜವಾಗಿ ಬಿಟ್ಟಿದೆಯೆಂದರೆ ಒಂದು ಪ್ರಕರಣ, ಒಂದು ದಿನದ ಬಂದ್; ಸರಿ ನೆಕ್ಸ್ಟ್ ಎನ್ನುತ್ತದೆ ಮನಸ್ಸು.

       ರೋಗಿಯೊಬ್ಬನ ನರಳುವಿಕೆ ಸಾಮಾನ್ಯರಲ್ಲಿ ಕರುಣಾರಸ ಉಕ್ಕಿಸಬಹುದಾದರೂ ಪ್ರತಿದಿನವೂ ಅದನ್ನೇ ಕೇಳುವ ವೈದ್ಯನಲ್ಲಿ ಅದು ಅಂತಹ ಸಂವೇದನೆಯನ್ನೇನೂ ಹುಟ್ಟಿಸುವುದಿಲ್ಲ. ಏಕೆಂದರೆ ಆ ನರಳುವಿಕೆಗೆ ಅವರು ಒಗ್ಗಿಕೊಂಡು ಬಿಡುತ್ತಾರೆ. ವೈದ್ಯರ ವಿಷಯದಲ್ಲೇನೋ ಪರವಾಗಿಲ್ಲ. ಆದರೆ ದಿನವೂ ಅಪಘಾತಗಳ, ಬಾಂಬ್ ಸ್ಫೋಟಗಳ ಸುದ್ದಿಯನ್ನು ಓದಿ ನಾವೂ ಅದಕ್ಕೆ ಆಘಾತವನ್ನು ಸೂಚಿಸುವ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಿದ್ದೀರೇನು? ಒಂದು ಸಲ ನಮ್ಮಲ್ಲಿನ ಆ ಮಾನವೀಯ ಸಂವೇದನೆ ಸತ್ತಿತೋ ಮತ್ತೆ ನಮ್ಮ ಅಸ್ತಿತ್ವಕ್ಕೇ ಅರ್ಥವಿಲ್ಲ. ದುರಂತವೆಂದರೆ ನಾವೆಲ್ಲರೂ ಇಂತಹದೊಂದು ಸ್ಥಿತಿಗೆ ನಿಧಾನವಾಗಿ ಗೊತ್ತೇ ಆಗದಂತೆ ಜಾರುತ್ತಿರುವುದು. ಅಂತಹದ್ದೇನೂ ಅಗುವುದಿಲ್ಲ ಇವಳದ್ದು ಅತಿರೇಕವಾಯಿತು ಅಂದು ಬಿಡಬೇಡಿ. ಬಿಹಾರದಲ್ಲಿ ತಮಗೆ ಬೇಕಾದಲ್ಲಿ ರೈಲಿನ ಚೈನು ಎಳೆದು ಇಳಿದು ಬಿಡುತ್ತಾರೆಂದರೆ “ಹ್ಞಾಂ!” ಎನ್ನುತ್ತೇವೆ. ಆದರೆ ಅಲ್ಲಿನವರಿಗೆ ಅದೊಂದು ವಿಷಯವೇ ಅಲ್ಲ. ಹೀಗಾಗಿ ಇಂಥದ್ದೇ ಆಡಳಿತದಲ್ಲಿದ್ದು ಈ ವ್ಯವಸ್ಥೆಗೆ ಪಕ್ಕಾ ಆಗಿ ಬಿಟ್ಟಾಗ ಇನ್ನೊಂದೆರಡು ವರ್ಷದಲ್ಲಿ ನಾವೇ, “ಹೌದು ಅಂತಹದ್ದೆಲ್ಲಾ ನಡೆಯುತ್ತಲೇ ಇರುತ್ತದೆ ಅದರಲ್ಲೇನಿದೆ” ಅಂದು ಬಿಡುತ್ತೇವೆ. ಇನ್ನೊಂದು ಪ್ರಕರಣ ಎದ್ದು ಬಂದಾಗ ಅದರಲ್ಲಿ ಹೊಸತೇನಿದೆ, ಈ ಮೊದಲೂ ಇಂತಹದ್ದು ಆಗಿತ್ತಲ್ಲ ಅಂದು ಬಿಡುತ್ತೇವೆ ನಿರ್ವಿಕಾರವಾಗಿ ದೊಡ್ಡ ಸ್ಥಿತಪ್ರಜ್ಞರಂತೆ.  ಅಂತಹದೊಂದು ದಿನ ತುಂಬಾ ದೂರದ್ದೇನಲ್ಲ ಅನ್ನಿಸುತ್ತದೆ ಇಂದಿನ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿದಾಗ. ಹೇಗೆಂದರೆ ಸರಕಾರಿ ಕಛೇರಿಗಳಲ್ಲಿ ಐವತ್ತೋ ನೂರೋ ಕೊಟ್ಟು ಕೆಲಸ ಮಾಡಿಸುವುದು, ಕಡಿಮೆ ಆದಾಯ ಪ್ರಮಾಣ ಪತ್ರ ಮಾಡಿಸುವುದು ಇವತ್ತು ಮಾಮೂಲಲ್ಲವೇ? ಅದೊಂದು ಹೇಳಿಕೊಂಡು ತಿರುಗಾಡುವ ವಿಷಯ ಎಂದು ಎಷ್ಟು ಜನರಿಗೆ ಅನಿಸುತ್ತದೆ. ಉದಾಹರಣೆಗೆ ಹೇಳುತ್ತಿದ್ದೇನೆ, ಈಗಲೇ ಪ್ರಯೋಗ ಮಾಡಿ ನೋಡಿ, ಪಕ್ಕದಲ್ಲಿರುವವರ ಬಳಿ ಗಾಬರಿಯ ಧ್ವನಿಯಲ್ಲಿ “ಇನ್ನೊಂದು ಕೊಲೆಯಾಯಿತಂತೆ” ಅನ್ನಿ. ನೂರಕ್ಕೆ ತೊಂಭತ್ತರಷ್ಟು ಜನ ಅದೊಂದು ದೊಡ್ಡ ವಿಷಯವಾ ಎಂಬಂತೆ ನಿಮ್ಮನ್ನು ಕೆಕ್ಕರಿಸಿ ನೋಡದಿದ್ದರೆ ಕೇಳಿ. ಸಾಮಾಜಿಕ ಜಾಲತಾಣಗಳ ಈ ಸೂಪರ್ ಫಾಸ್ಟ್ ಯುಗದಲ್ಲಿ ಎಲ್ಲರೂ ಪ್ರತಿಕ್ಷಣವೂ ಹೊಸತೊಂದಕ್ಕಾಗಿ ಪರಿತಪಿಸುತ್ತಿರುವಾಗ ಮುಂದೆ ಒಳ್ಳೆಯ ಆಡಳಿತ ಬಂದರೂ “ಈ ಸರಕಾರದ ಅವಧಿಯಲ್ಲಿ ಪ್ರತಿಭಟನೆಗೆ ಅವಕಾಶವೇ ಇಲ್ಲ” ಅಂತಂದು ಪ್ರತಿಭಟಿಸಿದರೆ ಆಶ್ಚರ್ಯವೇನೂ ಇಲ್ಲ.

       ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿದೆಯೇನು? ಆದ್ದರಿಂದ ಇವತ್ತು ತಲೆಬಿಸಿ ಮಾಡಬೇಕಾದ ಜರೂರತ್ತಿರುವುದು ಕೇವಲ ನಡೆಯುತ್ತಿರುವ ಅತ್ಯಾಚಾರ, ಅನಾಚಾರಗಳ ಕುರಿತಾಗಿ ಮಾತ್ರವಲ್ಲ; ಅದರಿಂದಾಗಿ ಪಾತಾಳಕ್ಕಿಳಿಯುತ್ತಿರುವ ನಮ್ಮಲ್ಲಿನ ಸಂವೇದನೆಗಳ, ನೈತಿಕತೆಯ ಕುರಿತಾಗಿಯೂ. ಒಂದು ಸಲ ಈ ವಿಷಯದಲ್ಲಿ ಕೆಳಗಿಳಿದೆವೋ, ಮೇಲೆ ಬರಲು ಅದೆಷ್ಟು ವರ್ಷಗಳ ಪರಿಶ್ರಮ ಬೇಕೆಂದು ಊಹಿಸಲಾರಿರಿ. ಚಿಂತಕರ ಶ್ರೇಣಿಯ ಚಿಂತನೆಗಳೇನಿವೆಯೋ ನನಗೆ ತಿಳಿದಿಲ್ಲ. ಆದರೆ ಓರ್ವ ಸಾಮಾನ್ಯ ನಾಗರಿಕಳಾಗಿ, ಸುತ್ತಲಿನ ಸಾಮಾನ್ಯರ ಕುರಿತಾಗಿ ಅರಿತು ವಿಶ್ಲೇಷಿಸಿದಾಗ ಇದೊಂದು ಅತ್ಯಂತ ಗಂಭೀರ ಚಿಂತನಾರ್ಹ ವಿಷಯ ಎಂದನಿಸಿತು. ಉತ್ತರವಿಲ್ಲದ ಸಮಸ್ಯೆಯಲ್ಲ ಆದರೆ ಒಂದು ಕಠಿಣ ಸಮಸ್ಯೆಯಂತೂ ಹೌದು. ಒಟ್ಟಾರೆಯಾಗಿ ನೋಡಿದರೆ, ’ಇದ್ದರೂ ಚಿಂತೆ, ಇಲ್ಲದಿದ್ದರೂ ಚಿಂತೆ’ ಅಂತನಿಸಿತು.

-ಮಧು ಭಟ್ ಕೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!