ಅಂಕಣ

ಅನಾಥ ಪ್ರಜ್ಞೆಯ ಸ್ಥಿತಿ…

ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ.  ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುರ್ಬಲ ಮನಸ್ಸಿನ ಹಪಹಪಿಸುವ ಕ್ಷಣ.  ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ,  ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು.  ಹೀಗೆ ದುರ್ಬಲ ಮನಸ್ಸು ಹೇಳಿಕೊಳ್ಳುತ್ತದೆ.  ಯಾಕೆ ಹೀಗೆ ಮನಸ್ಸು.  ಇದಕ್ಕಿನ್ನೇನು ಬೇಕು.  ಸುತ್ತ ಎಲ್ಲರೂ ಇದ್ದಾರಲ್ಲ.  ಇನ್ನೂ ಯಾಕೆ ಈ ಕೊರಗು.  ಹೀಗೆ ಎಷ್ಟು ಬುದ್ಧಿ ಹೇಳಿದರೂ ಕೇಳಲಾರದ ಮನಸ್ಸು ಪದೆ ಪದೆ ಈ ಸ್ಥಿತಿಗೆ ಬರುತ್ತದೆ.  ಯೋಚಿಸಿ ಯೋಚಿಸಿ ಕಣ್ಣೀರು ಹೆಣ್ಣಾದರೆ, ಅದೇ ಗಂಡಾದರೆ ಸಾಮಾನ್ಯವಾಗಿ ದುಶ್ಚಟಕ್ಕೆ ದಾಸ.  ಯಾಕೆ ಹೀಗೆ?  ಯಾಕೆ? ಯಾಕೆ? ಯಾಕೆ?

ಕಾರಣ ಮನಸ್ಸು ಸದಾ ಪ್ರೀತಿಯನ್ನು ಬಯಸುತ್ತದೆ.  ಹೃದಯ ತಂಪಾಗಿರಲು ಈ ಪ್ರೀತಿ ಬೇಕು.  ಈ ಹೃದಯ ತಂಪಾಗಿದ್ದರೆ ಮನಸ್ಸು ಖುಷಿಯಿಂದ ಇರುತ್ತದೆ.  ಹಾಗಾದರೆ ಈ ಪ್ರೀತಿ ಹೇಗಿರಬೇಕು.  ನಿಷ್ಕಲ್ಮಶವಾಗಿರಬೇಕು.  ಜಡ ದೇಹವಾದರೂ ಸರಿ.  ಸಾಯುವ ಕೊನೆ ಗಳಿಗೆಯಲ್ಲೂ ಮನಸ್ಸು ಹೃದಯ ಈ ಪ್ರೀತಿಯೊಂದಲ್ಲದೆ ಮತ್ತೇನನ್ನೂ ಬಯಸೋದಿಲ್ಲ.  ನಿಜವಾದ ಪ್ರೀತಿಯಿಂದ ಅಗಾಧ ಶಕ್ತಿ ಉಂಟಾಗುತ್ತದೆ.  ಅದೆ ಮನಸ್ಸಿಗೆ ನಾಟಿದಾಗ.  ಐವತ್ತರ ವಯಸ್ಸಿನವನು ಮೂವತ್ತರ ತರುಣನಂತೆ ಮಾಡುವ ಕೆಲಸ ಕಾಯ೯ ಮಾತು, ನಡೆ  ಎಲ್ಲವೂ ಬದಲಾಗುತ್ತದೆ.

ಉತ್ಸಾಹಕ್ಕೆ ಮನಸ್ಸಿನ ಖುಷಿಗೆ ಇನ್ನೂ ಒಂದು ಕಾರಣ ಮನಸ್ಸಿನ ಆಸೆಗಳು ಈಡೇರಿದ ಸಂದರ್ಭಗಳಲ್ಲಿ.  ಆಗಲೂ ಮನುಷ್ಯನ ವಯಸ್ಸು ಕಡಿಮೆಯಾಗಬಿಡುತ್ತದೆ. ಲವಲವಿಕೆಯಿಂದ ಹೆಜ್ಜೆ ಇಡುವ ಗತ್ತು ಬದಲಾಗಿಬಿಡುತ್ತದೆ.  ಒಂದು ರೀತಿ ಗೆದ್ದೆ ಅನ್ನುವ ಅಹಂಕಾರ ಸಣ್ಣದಾಗಿ ಮನೆ ಮಾಡುತ್ತದೆ.  ಆದರೆ ಇದು ಕ್ಷಣಿಕ.

ಇದ್ಯಾವುದೂ ದಕ್ಕದೆ ಬದುಕಿಗೆ ಯಾವ ಭರವಸೆಯ ದಾರಿ ಕಾಣದೆ ಇರುವಾಗ ನಾನು ಒಂಟಿ ಅನ್ನುವ ಭಾವನೆ ಕಾಡಲು ಶುರುವಾಗುತ್ತದೆ.  ಕಾಡುವ ಮನಸ್ಸಿನ ತುಡಿತ ಅದೆಷ್ಟು ತೀರ್ವವಾಗಿರುತ್ತದೆ  ಅಂದರೆ ಸಾಯುವ ಮಟ್ಟಕ್ಕೆ ತಲುಪಿಸುತ್ತದೆ.  ಆದರೆ ಯಾರ ಜೀವನವೂ ಹೀಗಾಗಬಾರದು.  ಎಲ್ಲರೂ ಸಂತೋಷವಾಗಿರಬೇಕು ಅಂತ ಬಯಸೋದೂ ಇಂಥ ಜನರೆ.  ಕಾರಣ ಅನುಭವ ಈ ರೀತಿ ಹಾರೈಸುತ್ತದೆ.

ಎಷ್ಟೋ ಅನಾಥಾಶ್ರಮ ನಡೆಸುವವರು, ಅಲ್ಲಿರುವವರು , ಸ್ವ ಇಚ್ಛೆಯಿಂದ ಆ ಒಂದು ದೇವ ಮಂದಿರದ ದೀಪ ಬೆಳಗುತ್ತಿರುತ್ತಾರೆ.  ಅವರೆಲ್ಲರ ಜೀವನದಲ್ಲಿ ಒಂದಲ್ಲಾ ಒಂದು ರೀತಿ ನಿರಾಶೆ, ದುಃಖ ಮನೆ ಮಾಡಿರುತ್ತದೆ.  ವಯಸ್ಸಾದಂತೆ ಅನುಭವಗಳು ಮನಸ್ಸನ್ನು ಒಂಟಿತನದತ್ತ  ದೂಡುತ್ತದೆ.   ಏಕೆಂದರೆ ಅನುಭವಕ್ಕೆ ಇವನು ನನ್ನ ತಮ್ಮ ಅಥವಾ ತಂಗಿ ಅನ್ನುವ ಬೇದ ಭಾವವಿಲ್ಲ.  ಮನಸ್ಸಿನ ಮಾತು ಹೃದಯ ಕೇಳುತ್ತದೆ.  ಮಿದುಳು ಗ್ರಹಿಸುತ್ತದೆ.

ಒಟ್ಟಿನಲ್ಲಿ ಎಲ್ಲದಕ್ಕೂ ಪ್ರೀತಿಯೇ ನಿಜವಾದ ಮೂಲ ಮಂತ್ರ.  ಅದಿಲ್ಲದೆ ಮನುಷ್ಯ ಖುಷಿಯಿಂದ ಬಾಳಲಾರ.  ಅನಾಥ ಪ್ರಜ್ಞೆ ನಿಧಾನವಾಗಿ ಮುಚ್ಚಿಕೊಳ್ಳುತ್ತ ಬರುತ್ತದೆ.  ಒಂಟಿ ಎಂಬ ಕೊರಗು ಕಾಡಲು ಶುರುವಾಗುತ್ತದೆ.   ಪ್ರೀತಿಯ ವ್ಯಕ್ತಿ ನನ್ನವನಾಗಿ/ಳಾಗಿ ಎಲ್ಲೊ ಒಂದು ಕಡೆ ಇದ್ದಾನೆ/ಳೆ.  ನನ್ನನ್ನು ಜ್ಞಾಪಿಸಿಕೊಳ್ಳುತ್ತಿದ್ದಾನೆ/ಳೆ.  ನಾನು ಒಂಟಿಯಲ್ಲ.  ನನ್ನ ಕಷ್ಟ ಸುಃಖ ಹೇಳಿಕೊಳ್ಳಲು ನನಗೊಬ್ಬ/ಒಬ್ಬಳು ಇದ್ದಾನೆ/ಳೆ.  ನನ್ನೆಲ್ಲಾ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ  ಒಡನೆ ಇದ್ದಾನೆ/ಳೆ ಅನ್ನುವ ಭಾವವೇ ಮನಸ್ಸಿನ ನೆಮ್ಮದಿಗೆ ಕಾರಣ.  ಏಕೆಂದರೆ ಮನುಷ್ಯ ಒಂಟಿಯಾಗಿ ಬದುಕಲು ಇಷ್ಟ ಪಡುವುದಿಲ್ಲ.  ತನ್ನವರು ಅನ್ನುವವರು ಯಾರಾದರೂ ಬೇಕೆ ಬೇಕು.   ಹೆತ್ತವರು, ಒಡಹುಟ್ಟಿದವರು. ಸಂಗಾತಿ, ಗೆಳೆಯ ಗೆಳತಿ ಇತ್ಯಾದಿ ಯಾರೆ ಆಗಿರಬಹುದು.  ಒಬ್ಬರಿಗೊಬ್ಬರು ಇರಬೇಕು.

ಪ್ರಪಂಚದಲ್ಲಿ ಮದುವೆ ಎಂಬ ಬಂಧನ ಹುಟ್ಟಿಕೊಳ್ಳಲು ಇದೂ ಒಂದು ಬಲವಾದ ಕಾರಣ.  ಸಂಗಾತಿಯ ಅಗಲಿಕೆಯ ಸಂದರ್ಭ ಹೆಚ್ಚಿನ ಜನ ಈ ಒಂಟಿತನದ ಅನಾಥ ಪ್ರಜ್ಞೆಯ ಭಾವನೆ ಅನುಭವಿಸುವುದು ಜಾಸ್ತಿ.  ಕಾರಣ ಅನೇಕ ವರ್ಷಗಳಿಂದ ಜೊತೆಯಾಗಿ ಬದುಕಿದವರು.  ಬದುಕಿನ ಎಲ್ಲ ಕ್ಷಣಗಳನ್ನೂ ಒಂದಾಗಿ ಅನುಭವಿಸಿದವರು.  ಅಗಲಿಕೆ ಅನುಭವಿಸಲಾಗದ ನರಕವಾಗಿ ಕಾಣುತ್ತದೆ.  ಅದಕ್ಕೆ ಎಷ್ಟೊ ಜನ ಡಿಪ್ರೆಷನ್’ಗೆ ಅಡಿಯಾಗುತ್ತಾರೆ.  ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ.  ಗಟ್ಟಿ ಮನಸಿನವರು ಕೊರಗುತ್ತ ಮುಖವಾಡ ಹೊತ್ತು ಬದುಕುತ್ತಾರೆ.

ಮನಸ್ಸಿನ ಗಟ್ಟಿತನಕ್ಕೆ ಹಲವಾರು ಹಾದಿಗಳಿವೆ.  ಧ್ಯಾನ, ಯೋಗ, ಸಮಾರಂಭದಲ್ಲಿ ಭಾಗಿಯಾಗುವುದು, ದೇಶ ಸುತ್ತುವುದು ಹೀಗೆ ಹಲವಾರು.  ಯಾವುದರಲ್ಲೆ ಭಾಗಿಯಾಗಿ ಎಲ್ಲವೂ ತಾತ್ಕಾಲಿಕ.  ಕೊನೆಯಲ್ಲಿ ಒಂದರಗಳಿಗೆ ಒಂಟಿತನ ಕಾಡದೆ ಇರದು.  ಮತ್ತೆ ಮನಸ್ಸು ನಾನು ಒಂಟಿ ಎಂದು ಕೊರಗುವುದು ತಪ್ಪುವುದಿಲ್ಲ.

ಆದುದರಿಂದ ಮನುಷ್ಯ ಸಂಘ ಜೀವಿ.  ಒಂಟಿಯಾಗಿರಲಾರ.  ತನ್ನವರೆನ್ನುವ ವ್ಯಕ್ತಿ ದೂರದಲ್ಲಿ ಇರಲಿ ಅಥವಾ ಹತ್ತಿರದಲ್ಲಿರಲಿ, ಯಾವತ್ತಾದರೂ ಒಮ್ಮೆ ಸಂಪರ್ಕಕ್ಕೆ ಸಿಕ್ಕರೂ ಸಾಕು, ಒಂದೆರಡು ಪ್ರೀತಿಯ ಸಾಂತ್ವನದ ಮಾತು ಆಡಿದರೆ ಸಾಕು ಅನ್ನುವ ಮನಸ್ಸು ಈ ಅನಾಥ ಪ್ರಜ್ಞಯಲ್ಲಿರುವವರ ಮನದಿಂಗಿತ.  ಅದೆಷ್ಟು ನಿಷ್ಕಲ್ಮಶ ಮನಸ್ಸಲ್ಲವೆ?  ಇಂಥವರಿಗೆ ಜಾತಿಯ ಹಂಗಿಲ್ಲ.  ವಯಸ್ಸಿನ ಹಂಗಿಲ್ಲ.  ಬಡವ ಶ್ರೀಮಂತ ಎಂಬ ಬೇದ ಭಾವವಿಲ್ಲ.  ಓದಿರುವನಾ/ಳಾ?  ಅದರ ಬಗ್ಗೆಯೂ ಗಮನ ಇಲ್ಲ.  ಅವನು/ಳು ಯಾರೆಂಬ ಆತಂಕವೂ ಇಲ್ಲ.  ನೋಡಬೇಕು , ಸುತ್ತಾಡಬೇಕು, ಏನಾದರೂ ಪಡೆಯಬೇಕು ಅಥವಾ ಇನ್ಯಾವುದೆ ಆಸೆ ಆಕಾಂಕ್ಷೆಯೂ ಇರುವುದಿಲ್ಲ.  ಕೇವಲ ಬಯಸೋದು  ಹೃದಯ ತಂಪಾಗಿಸುವ ಬದುಕಲು ಆಸರೆಯಾಗಬಲ್ಲ ಒಂದೆರಡು ಪ್ರೀತಿಯ ಮಾತುಗಳು. ಸಾಕು.  ಇರುವಷ್ಟು ದಿನ ನೆಮ್ಮದಿಯ ಬಾಳು ಕಾಣುವುದು ನಿಶ್ಚಿತ!

-ಸಂಗೀತಾ ಕಲ್ಮನೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!