ರವಿ ಅಂದು ಸಂಜೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಬೆಂಗಳೂರಿನ ಟ್ರಾಫಿಕ್’ನಲ್ಲಿ ಸಿಲುಕಿಕೊಂಡಿದ್ದ. ಈ ದಿನವಾದರೂ ಮನೆಗೆ ಬೇಗ ಹೋಗಬೇಕೆಂದು ಬೆಳಗ್ಗೆ ಮನೆಯಿಂದ ಹೊರಡುವಾಗ ಅಂದುಕೊಂಡಿದ್ದ, ಇದು ಬರೀ ರವಿಯ ಕಥೆಯಲ್ಲ, ಬೆಂಗಳೂರಿಗರ ಪರಿಸ್ಥಿತಿ. ಬೆಳಗ್ಗೆ ಎಷ್ಟೇ ಬೇಗ ಹೊರಟರು ಸಂಜೆ ಬೇಗ ಮನೆ ತಲುಪುತ್ತೇನೆ ಅಂದುಕೊಳ್ಳೋದು ಹಗಲುಗನಸಷ್ಟೆ. ರವಿ ಎಂದಿಗಿಂತ ಸ್ವಲ್ಪ ಬೇಗನೇ ಆಫೀಸುಬಿಟ್ಟಿದ್ದ. ಕೆಲವೊಂದು ಆಲೋಚನೆಗಳೇ ಹಾಗೆ ಬೇಕೆಂದಾಗ ನಡೆಯೋದಿಲ್ಲ, ಅವಶ್ಯಕತೆ ಇಲ್ಲದಾಗ ನಮ್ಮನ್ನು ಬಿಡೋದಿಲ್ಲ.
ಕಷ್ಟ ಬಂದರೆ ಒಂದರ ಹಿಂದೆ ಒಂದರಂತೆ ಸಾಲಾಗಿ ಬಂದುಬಿಡುತ್ತವೆ. ರಸ್ತೆಯ ಮಧ್ಯೆ ಬೈಕು ಕೈಕೊಟ್ಟಿತು. ಛೇ ಇದೆಂತ ಅವಸ್ಥೆ ಅಯ್ತಲ್ಲ ಇವತ್ತು ಅಂತ ತಲೆ ಕೆರೆದುಕೊಳ್ಳುತ್ತ, ಹೇಗೂ ಮಳೆ ನಿಲ್ಲೋ ಹಾಗೆ ಕಾಣ್ತಾಯಿಲ್ಲ, ಛಳಿ ಬೇರೆ ಆಗ್ತಾ ಇದೆ. ಒಂದು ಛಹಾ ಕುಡಿದು ಹೊರಟರೆ ಸರಿ ಎಂದು ಅಲ್ಲೆ ಸ್ವಲ್ಪದೂರದಲ್ಲಿದ್ದ ಗೂಡಂಗಡಿಗೆ ಹೊರಟ.
‘ಅಣ್ಣ ಒಂದು ಟೀ, ಬಿಸಿ ಜಾಸ್ತಿ ಇರ್ಲಿ.’
‘ಸರಿ ಸಾರ್ ಒಂದೇ ನಿಮಿಷ, ಬಿಸಿ ಬಿಸಿ ಟೀ ರೆಡಿ.’
ಅಲ್ಲೆ ಇದ್ದ ಹಳೇ ಮುರುಕಲು ಕುರ್ಚಿಯ ಮೇಲೆ ಕುಳಿತ. ಈ ಮನಸ್ಸೇ ಹಾಗೆ ಸುಮ್ಮನೆ ಕುಳಿತಾಗಲೇ ಏನೆನೋ ಯೋಚನೆಗಳು. ಏನನ್ನಾದರೂ ಸ್ವಿಚ್ ಆಫ್ ಮಾಡಿಬಿಡಬಹುದು ಆದರೆ ಮನಸ್ಸನ್ನ ಸ್ವಿಚ್ ಆಫ್ ಮಾಡೋದು ಬಹಳ ಕಷ್ಟ.
ರವಿಗೆ ಏನೇನೋ ಆಲೋಚನೆಗಳು ಬರಲು ಆರಂಭಿಸಿದವು. ಬೆಳಗ್ಗಿಂದ ಬಿಡುವಿಲ್ಲದ ಕೆಲಸ. ಬೇರೆ ಯಾವುದರ ಬಗ್ಗೆ ಆಲೋಚಿಸಲು ಸಮಯವೇ ಇಲ್ಲ. ಇದೀಗ ಸ್ವಲ್ಪ ಬಿಡುವು ಸಿಕ್ಕಿದೆ. ಆದರೂ ಮನಸ್ಸು ಏನನ್ನೊ ಕಳೆದುಕೊಂಡು ಮರುಗುತ್ತಿದೆ. ಆಗಲೇ ರವಿಗೆ ಊರಿಗೆ ಹೋಗಿ 2 ವರ್ಷವಾಯಿತೆಂದು ನೆನಪಾಯಿತು. ಮನೆಯಲ್ಲಿ ಅಮ್ಮ ಮತ್ತೆ ತಮ್ಮ ಇಬ್ಬರೇ ಇರೋದು. ಅಪ್ಪ ತೀರಿಕೊಂಡು ಬಹಳ ವರ್ಷಗಳೇ ಆಗಿದ್ದವು. ಮನೆಯ ಜವಾಬ್ದಾರಿಯೆಲ್ಲ ಅಮ್ಮನ ಕೈಯಲ್ಲೆ ಇತ್ತು. ತಮ್ಮ ಸ್ವಲ್ಪ ದಡ್ಡ, ಅಷ್ಟೇನು ಓದಿರಲಿಲ್ಲ, ಹಾಗಾಗಿ ಊರಲ್ಲೇ ಗದ್ದೆ, ತೋಟ ನೋಡಿಕೊಂಡಿದ್ದ. ಅಮ್ಮ ಪ್ರೀತಿಯ ವಿಷಯದಲ್ಲಿ ಒಬ್ಬರಿಗೆ ಹೆಚ್ಚು ಇನ್ನೊಬ್ಬರಿಗೆ ಜಾಸ್ತಿ ಮಾಡಿದವಳಲ್ಲ. ರವಿ ಒಳ್ಳೆ ಓದಿಕೊಂಡಿದ್ದ. ಬೆಂಗಳೂರಿನಲ್ಲಿ ಒಂದೊಳ್ಳೆ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದ. ಅದೂ ಅಮ್ಮನ ವಿರೋಧ ಕಟ್ಟಿಕೊಂಡು ಗಿಟ್ಟಿಸಿಕೊಂಡಿದ್ದ ಕೆಲಸ. ರವಿ ಊರಲ್ಲೇ ಇದ್ದುಕೊಂಡು ಜಮೀನು ನೋಡಿಕೊಳ್ಳಬೇಕೆಂಬ ಆಸೆ ಅಮ್ಮನದು. ಮಗ ತನ್ನೊಟ್ಟಿಗೇ ಇರಬೇಕೆಂಬ ಆಸೆ ಒಂದೆಡೆಯಾದರೆ ಮಗ ಕೈತಪ್ಪಿಹೋದಾನು ಎಂಬ ಆತಂಕ ಇನ್ನೊಂದೆಡೆ.
ಸಾರ್ ಟೀ…….! ಏನನ್ನೋ ಯೋಚಿಸುತಿದ್ದ ರವಿಗೆ ಅಂಗಡಿ ಮಾಲೀಕನ ಕೂಗಿಗೆ ವಾಸ್ತವದ ಅರಿವಾಯಿತು.
ಛಹಾ ಕುಡಿಯಲು ಆರಂಭಿಸಿದ.
ಆವತ್ತು ಮುಂಗಾರು ಪ್ರಾರಂಭವಾಗಿತ್ತಷ್ಟೆ. ಗುಡುಗು ಸಿಡಿಲಿನ ಆರ್ಭಟ ಜೋರಾಗೆ ಇತ್ತು. ಮಳೆಗಾಲಕ್ಕೆ ಎಲ್ಲಾ ತಯಾರಿ ನಡೆದಿತ್ತು. ರವಿ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿದ್ದ. 1 ವಾರ ರಜೆ ಎಂದು ಮನೆಗೆ ಬಂದಿದ್ದ. ತಾಯಿಗೆ ಎಲ್ಲಿಲ್ಲದ ಸಂತೋಷ. ಮಗನಿಗೆ ದೊಡ್ಡ ಉಪಚಾರವೇ ನಡೆದಿತ್ತು. ಸಂತೋಷದ ಜೊತೆಗೆ ಮಗ ಕೈತಪ್ಪಿಹೋದಾನು ಎಂಬ ಆತಂಕ.
‘ರವೀ ನೀ ಓದು ಮುಗಿದ ಮೇಲೆ ಇಲ್ಲಿಗೇ ಬಂದು ಬಿಡೋ, ತೇಜು ಸ್ವಲ್ಪದಡ್ಡ ಏನೂ ತಿಳಿಯೋದಿಲ್ಲ. ನನಗೂ ವಯಸ್ಸಾಯಿತು. ಇದೆಲ್ಲ ಜವಾಬ್ದಾರಿ ಹೊರಲು ನನ್ನಿಂದ ಆಗ್ತಾ ಇಲ್ವೋ. ದಯವಿಟ್ಟುಇಲ್ಲಿಗೇ ಬಂದುಬಿಡೋ’ ಅಂತಾ ಗೋಗರೆಯುತ್ತಿದ್ದಳು.
ಈ ಮಾತು ಕೇಳಿದರೆ ಸಾಕು ರವಿಗೇ ಎಲ್ಲಿಲ್ಲದ ಕೋಪ ಬಂದು ಮನೆಯಿಂದಲೇ ಹೊರಟುಬಿಡುತ್ತಿದ್ದ. ನಾನು ಇಷ್ಟೆಲ್ಲಾ ಓದಿ ಇಲ್ಲಿ ಬಂದು ಏನು ಮಾಡಲಿ ಅಂತ ಅಮ್ಮನಿಗೆ ಸಿಟ್ಟಿನಿಂದ ಬೈದು ಹೊರಟುಹೋಗುತ್ತಿದ್ದ.
ರವಿ ಚಿಕ್ಕವನಿದ್ದಾಗ ಅಮ್ಮರವಿ ಕೇಳುತ್ತಿದ್ದಕ್ಕೆಲ್ಲ ಇಲ್ಲ ಎಂದವಳಲ್ಲ. ಇದಕ್ಕೆತಾಯಿ ಹೃದಯ ಅನ್ನೋದು. ಮಕ್ಕಳ ಸುಖದಲ್ಲೇ ತನ್ನ ನೋವನ್ನ ಮರೆತುಬಿಡುತ್ತಾಳೆ. ಅಂತಹ ತಾಯಿಗೆ ಮಗ ಕೈತಪ್ಪಿ ಹೋಗುತ್ತಿದ್ದಾನಲ್ಲ ಎಂಬ ಚಿಂತೆ.
ದೊಡ್ಡದೊಂದು ಆರ್ಭಟ ಎಲ್ಲಿಂದಲೋ ಬಂದು ತನ್ನ ಮೇಲೆಯೇ ಬಿದ್ದಂತಾಗಿ ರವಿಗೆ ಮತ್ತೆ ವಾಸ್ತವದ ಅರಿವಾಯಿತು. ಕೈಯಲ್ಲಿದ್ದ ಛಹಾ ಹಾಗೇ ಇದೆ. ತನಗೇ ಅರಿವಿಲ್ಲದಂತೆ ರವಿ ತನ್ನಊರಿಗೆ ತೆರಳಿದ್ದ. ಅಮ್ಮನ ಆ ಕಣ್ಣುಗಳು, ಕಣ್ಣಲ್ಲಿದ್ದ ಆತಂಕ, ಪ್ರೀತಿತುಂಬಿದ್ದ ಹೃದಯ ನೆನಪಾಗಿತ್ತು. ಛೇ ಅವಳೆಷ್ಟು ನೊಂದುಕೊಂಡಿದ್ದಾಳೋ ಅಂತ ರವಿಯ ಮನಸ್ಸು ಕೊರಗಲಾರಂಭಿಸಿತು. ಪ್ರತಿ ದಿನ ಪ್ರತೀಕ್ಷಣ ತನ್ನ ಮಕ್ಕಳನ್ನೇ ನೆನೆಯುತ್ತಿರುವ ಆ ತಾಯಿಯನ್ನುಒಂದು ಕ್ಷಣವೂ ನೆನಪಿಸಿಕೊಳ್ಳದೇ ಇರುವ ತನ್ನ ಮನಸಿನ ಮೇಲೆ ರವಿಗೆ ಕೆಟ್ಟ ಕೋಪ ಬರಲಾಂಭಿಸಿತು.
ರವಿಗೆ ಪ್ರೀತಿಯ ಅಮ್ಮ ನೆನಪಾದಳು……!