ಕವಿತೆ

ಶುಭೋದಯ

ಶುಭೋದಯ

ತೊಳೆದು ಹಳೆದಿನದುಳಿದ ಬೇಸರ
ಕಳೆಯ ಕೀಳಲು ಬಂತು ರಾತ್ರಿಯು
ಕಳೆದು ಮರಳಿದ ಹೊಸತು ಸೂರ್ಯೋದಯವ ನೋಡಲ್ಲಿ |
ಛಳಿಯ ಹೆದರಿಸೆ ಬಾನಮಾರ್ಗದೊ
ಳೆಳೆದ ಗೆರೆಗಳು ಭುವಿಯ ಸೋಂಕಲು
ಹೊಳೆದ ರಶ್ಮಿಯ ನೋಡುತೆದ್ದವು ಸಕಲ ಜೀವಕುಲ ||

ಸೇರಿ ಹಿಮಮಣಿ ಹನಿಯ ಮಾಲೆಯ
ಸೀರೆ ಹಸುರಲಿ ಹೊದ್ದು ಸೆರಗನು
ತೂರಿ ಗಾಳಿಗೆ ಸಿರಿಯ ಹರಡುತ ಬಂದ ರವಿತೇಜ |
ಜಾರಿ ನಾಕದ ಬಣ್ಣ ಹಲವಿಧ
ಸೋರಿ ತೋರಣ ಬಂದು ಬಿದ್ದಿತೊ
ಭಾರಿಯೆನ್ನುವ ರೀತಿ ಬಾನಲಿ ರಕ್ತದೋಕುಳಿಯು ||

ನಕ್ಕು ಹರಿಯುವ ನೀರ ಜುಳುಜುಳು
ಹೆಕ್ಕಿ ಮೆಲ್ಲನೆ ಗಾಳಿ ತೂಗಲು
ಹಕ್ಕಿ ಚಿಲಿಪಿಲಿ ಕೂಡಿ ನುಡಿಸೆ ಪ್ರಕೃತಿ ಸಂಗೀತ |
ರೆಕ್ಕೆ ಬಂತಿದೊ ಜಡದ ಚೇತನ
ಮುಕ್ಕಿ ಮಣ್ಣಲಿನಿತ್ಯ ನೂತನ
ದಿಕ್ಕು ಕಾಲದ ತಿರುಗು ಚಕ್ರದಿ ಸತ್ಯದರ್ಶನವು ||

ಒಂದು ಚೆಂಡಿದುವೆಂದು ಹಿಡಿಯಲು
ಕಂದ ಹನುಮನೆ ಹಾರಿ ಸೋತಿಹ
ಚೆಂದದುಂಡೆಯ ತೀಕ್ಷ್ಣ ಕಿಚ್ಚಿನ ಭುವಿಯ ನಕ್ಷತ್ರ |
ಮುಂದುವರಿಯಿರಿ ಕರ್ಮವೆಸಗುತ
ಹಿಂದೆ ನೋಡುತ ಮೈಯ ಮರೆಯದಿ
ರೆಂದು ಸಾರುತ ಬಂದ ಭಾಸ್ಕರ ಲೋಕಕಿವ ಮಿತ್ರ || 🙂

ಭಾಮಿನೀ ಷಟ್ಪದಿ:

ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲಿಗಳಿರುತ್ತವೆಮೂರನೆಯಆರನೆಯ ಸಾಲುಗಳಲ್ಲಿ ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆಮಿಕ್ಕ ಸಾಲುಗಳಲ್ಲಿ 7ಮಾತ್ರೆಗಳ ಎರಡು ಗಣಗಳಿರುತ್ತವೆಮತ್ತೊಂದು ಪ್ರಮುಖ ನಿಯಮವೆಂದರೆ, 7 ಮಾತ್ರೆಗಳ ಗಣಗಳು ಕಡ್ಡಾಯವಾಗಿ 3+4ಮಾದರಿಯಲ್ಲಿರಬೇಕುಅಂದರೆ ಮಾತ್ರೆಯ ಗಣದ ನಂತರ 4ಮಾತ್ರೆಯ ಗಣವು ಬಂದುಒಟ್ಟು ಮಾತ್ರೆಗಳ ಗಣವಾಗಬೇಕುಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.

ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿ.

೩|೪|೩|೪
೩|೪|೩|೪
೩|೪|೩|೪|೩|೪|-
೩|೪|೩|೪
೩|೪|೩|೪
೩|೪|೩|೪|೩|೪|-

-Shylaja Kekanaje

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!