ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ವೀರ ಮಹಿಳೆ ರಾಣಿ ಲಕ್ಷ್ಮೀಬಾಯಿ. ರಾಣಿ ಲಕ್ಷ್ಮೀಬಾಯಿ 19 ನವೆಂಬರ್ 1835 ರಂದು ವಾರಣಾಸಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಲಕ್ಷ್ಮೀಬಾಯಿಯ ಬಾಲ್ಯದ ಹೆಸರು ಮನೂಬಾಯಿ. ಮನೂ ನಾಲ್ಕು ವರ್ಷದವಳಿದ್ದಾಗ ತಾಯಿ ಭಾಗೀರಥಿಬಾಯಿ ತೀರಿಹೋದರು. ಮಗಳ ಜವಾಬ್ದಾರಿಯನ್ನು ತಂದೆ ಮೋರೋಪಂತರು ವಹಿಸಿದರು. ಮೋರೋಪಂತರು ಕೊನೆಯ ಪೇಶ್ವೆ ಬಾಜಿರಾವ್ ಅವರ ಆಪ್ತ ವರ್ಗಕ್ಕೆ ಸೇರಿದ್ದರು. ಇದರಿಂದಾಗಿ ಮನೂ ವಿದ್ಯಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆಸವಾರಿ ಮತ್ತು ಬಂದೂಕು ಗುರಿಸಾಧನೆಯನ್ನು ಕಲಿತಳು. ಮುಂದೆ ಮನೂಬಾಯಿ ಝಾನ್ಸಿ ರಾಜ ಗಂಗಾಧರರಾಯರನ್ನು ಮುದುವೆಯಾಗಿ ರಾಣಿ ಲಕ್ಷ್ಮೀಬಾಯಿಯಾದಳು.
ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ಭಾರತಕ್ಕೆ ಬಂದ ಬ್ರಿಟಿಷರು ನಿಧಾನವಾಗಿ ಭಾರತದ ರಾಜ್ಯಗಳನ್ನು ವಶಪಡಿಸುಕೊಳ್ಳುತಿದ್ದರು. ರಾಜರಲ್ಲಿ ಹೊಂದಾಣಿಕೆ ಇರಲಿಲ್ಲ ಇದನ್ನು ಲಾಭ ಮಾಡಿಕೊಂಡ ಬ್ರಿಟಿಷರು ತಮ್ಮ ಪ್ರಾಬಲ್ಯ ಸ್ಥಾಪಿಸುತ್ತಿದ್ದರು. ಝಾನ್ಸಿಯ ರಾಜರಿಗೂ ಮತ್ತು ಬ್ರಿಟಿಷರಿಗೆ ಒಪ್ಪಂದವಾಯಿತು. ಒಪ್ಪಂದದ ಪ್ರಕಾರ ಝಾನ್ಸಿ ರಾಜರು ಅಗತ್ಯವಿದ್ದಾಗ ಬ್ರಿಟಿಷರಿಗೆ ನೆರವಾಗಬೇಕು ಮತ್ತು ಝಾನ್ಸಿಗೆ ಯಾರು ರಾಜನಾಗಬೇಕೆಂಬುದಕ್ಕೆ ಬ್ರಿಟಿಷರ ಒಪ್ಪಿಗೆಬೇಕು. 1838ರಲ್ಲಿ ಬ್ರಿಟಿಷರು ಗಂಗಾಧರರಾಯರನ್ನು ಅಧಿಪತಿಯಾಗಿ ನೇಮಿಸಿದರು. ಗಂಗಾಧರರಾಯರು ಉತ್ತಮ ಆಡಳಿತ ಮಾಡಿದರು. ರಾಜ್ಯದ ಸ್ಥಿತಿ ಉತ್ತಮವಾಯಿತು. 1851ರಲ್ಲಿ ಲಕ್ಷ್ಮೀಬಾಯಿ ಗಂಡು ಮಗುವಿಗೆ ಜನ್ಮ ನೀಡಿದಳು. ಆದರೆ ಮೂರು ತಿಂಗಳಲ್ಲಿ ಮಗು ತೀರಿಕೊಂಡಿತು. ಗಂಗಾಧರರಾಯರು ಮನೋರೋಗಕ್ಕೆ ತುತ್ತಾಗಿ ನಿಧನಹೊಂದಿದರು. ಲಕ್ಷ್ಮೀಬಾಯಿ ಆನಂದರಾವ್ ಎಂಬ ಹುಡುಗನ್ನು ದತ್ತು ತೆಗೆದುಕೊಂಡರು. ಆನಂದರಾಯನಿಗೆ ದಾಮೋದರರಾವ್ ಎಂದು ನಾಮಕರಣ ಮಾಡಿದರು. ದತ್ತುಪುತ್ರರಿಗೆ ಅಧಿಕಾರವಿಲ್ಲ ಎಂಬ ಕಾನೂನು ತಂದಿದ್ದ ಬ್ರಿಟಿಷರು ದತ್ತು ಮಗನಿಗೆ ಅಧಿಕಾರ ನೀಡಲು ನಿರಾಕರಿಸಿ ಝಾನ್ಸಿಯನ್ನು ಇಂಗ್ಲೀಷ್ ರಾಜ್ಯಕ್ಕೆ ವಿಲೀನಗೊಳಿಸಬೇಕೆಂದು ಆದೇಶ ನೀಡಿದರು. ಲಕ್ಷ್ಮೀಬಾಯಿ ಇದಕ್ಕೆ ಒಪ್ಪಲಿಲ್ಲ. ಆದರೆ ಬ್ರಿಟಿಷರ ವಿರುದ್ದ ಸಿಡಿದೆದ್ದು ಬದುಕುವುದು ಅಸಾಧ್ಯವೆಂದು ಭಾವಿಸಿದ ರಾಣಿ ಲಕ್ಷ್ಮೀಬಾಯಿ ಪೂಜೆ, ಧ್ಯಾನಗಳಲ್ಲಿ ಮಗ್ನರಾದರು. ಇದರ ಜೊತೆಗೆ ಕುದುರೆ ಸವಾರಿ, ಕತ್ತಿವರಸೆ ಮತ್ತು ಬದುಕೂ ಸಾಧನೆಗಳನ್ನು ಅಭ್ಯಾಸ ಮಾಡಿದರು.
ಈ ಸಮಯದಲ್ಲಿ ಸ್ವಾತಂತ್ರ್ಯ ಕ್ರಾಂತಿ ದೇಶದಲ್ಲಿ ಪ್ರಜ್ವಲಿಸತೊಡಗಿತು. ನಾನಾಸಾಹೇಬ, ತಾತ್ಯಾಟೋಪಿ ಮುಂತಾದವರು ಬ್ರಿಟಿಷರ ವಿರುದ್ದ ಸಮರ ಸಾರಲು ನಿರ್ಧರಿಸಿದರು. ಸಿಪಾಯಿಗಳು ದಂಗೆಯೆದ್ದರು. ಝಾನ್ಸಿಯಲ್ಲಿ ಇದು ಪ್ರತಿಧ್ವನಿಸಿತು. ಸಿಪಾಯಿಗಳು ಬ್ರಿಟಿಷರನ್ನು ಕೊಂದರು. ಝಾನ್ಸಿ ಲಕ್ಷ್ಮೀಬಾಯಿಯ ಪಾಲಾಯಿತು. ರಾಣಿ ಲಕ್ಷ್ಮೀಬಾಯಿ ಉತ್ತಮ ಆಡಳಿತ ನೀಡಿ ಸೈನ್ಯ ಬಲವರ್ಧನೆಗೆ ಆದ್ಯತೆ ನೀಡಿದಳು. ಪುರುಷರಿಗೆ ಸರಿಸಾಟಿಯಾಗಿ ನಿಲ್ಲುವ ಸ್ತ್ರಿ ಸೇನೆ ಸಜ್ಜುಗೊಂಡಿತು. ಇಂಗ್ಲೀಷ್ ದಳಪತಿ ಸರ್ ಹ್ಯೂ ರೋಸ್ ಸೇನೆಯೊಂದಿಗೆ ಝಾನ್ಸಿ ತಲುಪಿ ಲಕ್ಷ್ಮೀಬಾಯಿಯ ಮೇಲೆ ಯುದ್ದ ಮಾಡಿದ. ಯುದ್ದ 10-12 ದಿನಗಳ ಕಾಲ ನಡೆಯಿತು. ರಾಣಿ ಲಕ್ಷ್ಮೀಬಾಯಿಯ ಸೈನ್ಯಕ್ಕೆ ಒಮ್ಮೆ ಗೆಲುವಾದರೆ ಒಮ್ಮೆ ಸೋಲಾಯಿತು. ಪುರುಷ ವೇಷ ಧರಿಸಿದ ರಾಣಿ ಲಕ್ಷ್ಮೀಬಾಯಿ ರಣರಂಗದಲ್ಲಿ ರಣಚಂಡಿಯಂತೆ ಸೆಣಸಿದಳು. ರಾಣಿಯ ಪರಾಕ್ರಮ ಕಂಡ ಹ್ಯೂ ರೋಸ್ ಬೆರಗಾದ. ರಾಣಿಯ ಸೈನ್ಯದ ಬಲ ಕಡಿಮೆಯಾಗುತ್ತ ಬಂತು. ತಾತ್ಯಾಟೋಪಿಯ ಸಹಕಾರ ಕೇಳಿದ ಲಕ್ಷ್ಮೀಬಾಯಿ ಅವನೊಂದಿಗೆ ಪರಾರಿಯಾಗಿ ಕಾಲ್ಪಿಗೆ ತಲುಪಿದರು. ಅಲ್ಲಿ ಮತ್ತೆ ಸೇನೆಯನ್ನು ಸಜ್ಜುಗೊಳಿಸಿ ಯುದ್ದ ಮಾಡುವ ಬಯಕೆ ರಾಣಿಯದ್ದಾಗಿತ್ತು. ತಾತ್ಯಾಟೋಪಿ ಇದಕ್ಕೆ ಸಹಕರಿಸಿದರು. ಹ್ಯೂ ರೋಸ್ ಕಾಲ್ಪಿಗೆ ಬಂದು ಆಕ್ರಮಣ ಮಾಡಿದ. ಲಕ್ಷ್ಮೀಬಾಯಿ ಮತ್ತು ತಾತ್ಯಾಟೋಪಿ ಗ್ವಾಲಿಯರ್ ಗೆ ಪರಾರಿಯಾದರು. ಗ್ವಾಲಿಯರ್ ಕೋಟೆಯ ಬಳಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಮತ್ತು ಬ್ರಿಟಿಷರ ನಡುವೆ ಘನಘೋರ ಯುದ್ದ ನಡೆಯಿತು.
ತನ್ನ ಮಗನನ್ನು ಹೆಗಲಿಗೆ ಕಟ್ಟಿಕೊಂಡ ರಾಣಿ ಲಕ್ಷ್ಮೀಬಾಯಿ ದುರ್ಗೆಯಂತೆ ಯುದ್ದ ಭೂಮಿಯಲ್ಲಿ ಹೋರಾಡಿದಳು. ಆದರೆ ರೋಸ್ ಸೈನ್ಯದ ಮುಂದೆ ರಾಣಿಯ ಸೈನ್ಯ ಕುಸಿಯಿತು. ಸೈನಿಕರ ಪಿರಂಗಿಗಳು ಇಂಗ್ಲಿಷರ ವಶವಾದವು. ರಾಣಿಗೆ ಅಲ್ಲಿಂದ ಪರಾರಿಯಾಗದೆ ಬೇರೆ ಮಾರ್ಗವಿರಲಿಲ್ಲ. ರಾಣಿ ಕತ್ತಿ ಬೀಸುತ್ತಾ ಮುಂದುವರಿದಳು. ರಾಣಿಯ ಸಮೀಪಕ್ಕೆ ಬಂದ ಇಂಗ್ಲೀಷ್ ಸೈನಿಕ ಎದೆಗೆ ಗುರಿಯಿಟ್ಟು ಚೂರಿಯನ್ನೆಸೆದ. ಅದು ಸ್ವಲ್ಪ ಕೆಳಕ್ಕೆ ತಗುಲಿತು. ಚೂರಿ ಎಸೆದ ಸೈನಿಕನನ್ನು ರಾಣಿ ಯಮನ ಹತ್ತಿರ ಕಳುಹಿಸಿದಳು. ಆಕೆಯ ಶರೀರದಿಂದ ರಕ್ತ ಸುರಿಯುತ್ತಿತ್ತು. ಆದರೆ ವಿಶ್ರಮಿಸಲು ಸಮಯವಿರಲಿಲ್ಲ. ಇಂಗ್ಲೀಷ್ ಸೈನ್ಯದ ಸರದಾರನೊಬ್ಬ ಗುಂಡು ಹಾರಿಸಿದ. ಆ ಗುಂಡು ರಾಣಿಯ ಬಲತೊಡೆಗೆ ತಗುಲಿತು. ಎಡಗೈಯಿಂದ ಖಡ್ಗ ಪ್ರಯೋಗಿಸಿದ ರಾಣಿ ಅವನನ್ನು ಕೊಂದಳು. ರಾಣಿ ಏರಿದ ಕುದುರೆ ಕೈಕೊಟ್ಟಿತು. ವೇಗವಾಗಿ ಬಂದ ಇಂಗ್ಲೀಷ್ ಸೈನಿಕ ರಾಣಿಯ ಮೇಲೆ ಖಡ್ಗ ಪ್ರಹಾರ ಮಾಡಿದ. ರಾಣಿಯ ಬಲ ಕೆನ್ನೆ ಹರಿದು ಹೋಗಿ ಕಣ್ಣು ಗುಡ್ಡೆ ಕಿತ್ತುಬಂತು. ಆದರೂ ರಾಣಿ ಎಡಗೈಯಿಂದಲೇ ಆ ಸೈನಿಕನ ಭುಜವನ್ನು ಕತ್ತರಿಸಿದಳು. ಆಳುತ್ತಿದ್ದ ಮಗ ದಾಮೋದರನನ್ನು ರಾಣಿಯ ಸಹಾಯಕರು ರಕ್ಷಿಸಿ, ರಾಣಿಯನ್ನು ಗಂಗಾದಾಸರ ಕುಟೀರಕ್ಕೆ ಕರೆದುಕೊಂಡು ಹೋದರು. ಬಾಬಾ ಗಂಗಾದಾಸ್ ರಾಣಿಗೆ ಗಂಗಾಜಲ ಕೂಡಿಸಿದರು. ಸ್ವಲ್ಪ ಚೇತರಿಸಿಕೊಂಡ ರಾಣಿ ” ಹರಹರ ಮಹದೇವ್, ವಾಸುದೇವಾಯ ನಮಃ” ಎನ್ನುತ್ತಾ ಅಸುನೀಗಿದಳು. ರಾಣಿ ಲಕ್ಷ್ಮೀಬಾಯಿ ಮರಣಹೊಂದಿದಾಗ ಆಕೆಗೆ ಕೇವಲ 22 ವರ್ಷ ಏಳು ತಿಂಗಳು. ( 19 ನವೆಂಬರ್ 1835 – 18 ಜೂನ್ 1858). ರಾಣಿ ಲಕ್ಷ್ಮೀಬಾಯಿ ಯಂತ ವೀರ ವನಿತೆಯರು ನಮಗೆ ಎಂದಿಗೂ ಆದರ್ಶ. ದೇಶ ಹೆಮ್ಮೆಪಡುವಂತಹ ಅನುಪಮ ಧೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ.