1927 ಡಿಸೆಂಬರ್ 18ಯ ದಿನಾಂಕ. ಗೋರಖಪುರದ ಸೆರಮನೆಯಲ್ಲಿ ಮಧ್ಯವಯಸ್ಕಳಾದ ತೇಜಸ್ವಿ ಹೆಂಗಸು ಮರುದಿನ ಸಾವನ್ನೆದುರಿಸಲು ಸಿದ್ದನಾಗಿದ್ದ ತನ್ನ ಮಗನಾದ ಸ್ವಾತಂತ್ರ್ಯ ವೀರನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಳು. ಸಂಕೋಲೆಯಿಂದ ಅಲಂಕೃತನಾಗಿ ಬಂದ ಸ್ವಾತಂತ್ರ್ಯ ವೀರ. ತನ್ನ ಜೀವನದಲ್ಲಿ ಆತ ತನ್ನ ತಾಯಿಯನ್ನು “ ಅಮ್ಮ “ ಎಂದು ಕರೆಯುವುದು ಅದೇ ಕೊನೆಯ ಸಲ. ಆ ಭಾವನೆ ಬಂದೊಡನೆ ದುಃಖ ಉಕ್ಕಿ ಬಂತು. ಅವನು ಮಾತನಾಡದೆ ಕಣ್ಣೀರು ಸುರಿಸಿದ. ಗಟ್ಟಿ ಧ್ವನಿಯಿಂದ ತಾಯಿ ಕೇಳಿದಳು. “ ಮಗೂ, ನನ್ನ ಮಗ ದೊಡ್ಡ ಶೂರನೆಂದು ನಾನು ಎಣಿಸಿದ್ದೆ. ಅವನ ಹೆಸರು ಕೇಳಿದರೆ ಬ್ರಿಟಿಷ್ ಸರ್ಕಾರ ನಡಗುತ್ತದೆ ಎಂದು ಭಾವಿಸಿದ್ದೆ. ಅವನು ಮರಣಕ್ಕೆ ಅಂಜುವನೆಂದು ನಾನು ಭಾವಿಸಿರಲಿಲ್ಲ. ಅಳುತ್ತಾ ಸಾಯುವುದಾದರೆ ಇಂತಹ ಕಾರ್ಯಗಳಿಗೆ ನೀನೇಕೆ ಕೈ ಹಾಕಿದೆ? “ ವೀರ ಪುತ್ರ ಹೇಳಿದ. “ ಅಮ್ಮಾ ಇದು ಸಾವಿಗೆ ಹೆದರಿ ಸುರಿಸುತ್ತಿರುವ ಕಣ್ಣೀರಲ್ಲ. ವೀರ ಮಾತೆಯ ಮೇಲಿನ ಪ್ರೇಮದಿಂದ ಉಕ್ಕಿಬರುತ್ತಿರುವ ಸಂತೋಷದ ಕಂಬನಿ.” ಆ ವೀರ ಮಾತೆಯ ವೀರ ಪುತ್ರನೇ ರಾಮಪ್ರಸಾದ್ ಬಿಸ್ಮಿಲ್. ಕಾಕೋರಿ ದರೋಡೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ ಗಂಡುಗಲಿ ಕ್ರಾಂತಿವೀರ.
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ, ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ ಎಂದರೆ ಶಿರವನ್ನರ್ಪಿಸುವ ಬಯಕೆ ಎನ್ನ ಮನದೊಳಿಹುದಿಂದು, ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು. ಈ ಮೇಲಿನ ಸಾಲುಗಳು ಬರೀ ಸಾಲುಗಳಲ್ಲ ಕ್ರಾಂತಿಯ ಮಂತ್ರಗಳು. ಈ ಕವಿತೆಯು ಭಗತ್ ಸಿಂಗ್’ರಿಗೆ ಬಹಳ ಇಷ್ಟವಾದ ನುಡಿಗಳಾಗಿದ್ದವು. ಜೈಲಿನಲ್ಲಿ ಕುಳಿತಾಗಲು ಅವರು ನುಡಿದ ಏಕೈಕ ಗೀತೆಯಿದು. ಇಂಥ ಬೆಂಕಿಯಂಥ ಸಾಲುಗಳ ಪದ್ಯವನ್ನು ಪ್ರಸಿದ್ದಗೊಳಿಸಿ ಬ್ರಿಟಿಷರ ಎದೆ ನಡುಗಿಸಿದ ಅಗ್ನಿಶಿಶುವೇ ರಾಮಪ್ರಸಾದ್ ಬಿಸ್ಮಿಲ್.
11 ಜೂನ್ 1897 ರಲ್ಲಿ ಉತ್ತರ ಪ್ರದೇಶದ ಷಹಜಾನಪುರ ದಲ್ಲಿ ರಾಮಪ್ರಸಾದ್ ಬಿಸ್ಮಿಲ್ ಜನಿಸಿದ. ರಾಮಪ್ರಸಾದನ ತಂದೆ ಮುರಳೀಧರ, ಮಗನಿಗೆ ತಾವೇ ಹಿಂದಿ ಕಲಿಸಿದರು. ಉರ್ದು ಕಲಿಯಲು ಮೌಲ್ವಿಯ ಬಳಿ ಕಳುಹಿಸಿದರು. ಅನಂತರ ಶಾಲೆಗೆ ಹಾಕಿದರು. 14 ವಯಸ್ಸಿನ ವೇಳೆಗೆ ರಾಮಪ್ರಸಾದನಿಗೆ ಉರ್ದು ಕಾದಂಬರಿಗಳನ್ನು ಓದುವ ಗೀಳು ಶುರುವಾಯಿತು. ಕಾದಂಬರಿಗಳನ್ನು ಕೊಳ್ಳಲು ಹಣವಿಲ್ಲವೇ ರಾಮಪ್ರಸಾದ್ ಕಳ್ಳತನ ಮಾಡತೊಡಗಿದ. ಸಿಗರೇಟು ಮತ್ತು ಭಂಗಿ ಸೇದುವ ಚಟವೂ ಆರಂಭವಾಯಿತು. ಈ ವೇಳೆಗೆ ರಾಮಪ್ರಸಾದ್ ಆರ್ಯಸಮಾಜದ ಸಂಪರ್ಕಕ್ಕೆ ಬಂದ. ತತ್ವಜ್ಞಾನಿ ದಯಾನಂದರ “ಸತ್ಯಾರ್ಥ ಪ್ರಕಾಶ” ಗ್ರಂಥವನ್ನು ಓದಿ ಅದರಿಂದ ಪ್ರಭಾವಿತನಾದ ರಾಮಪ್ರಸಾದ್ ಕೆಟ್ಟ ಚಟಗಳಿಂದ ದೂರವಾದ. ಆರ್ಯ ಸಮಾಜದ ಪ್ರಮುಖರಾದ ಸ್ವಾಮಿ ಸೋಮದೇವ್ ಜೀ ಅವರು ರಾಮಪ್ರಸಾದ್‘ಗೆ ಧಾರ್ಮಿಕ ಮತ್ತು ರಾಜಕೀಯ ವಿಷಯಗಳಲ್ಲಿ ಉಪದೇಶ ನೀಡಿದರು.
1916ರಲ್ಲಿ ಲಾಹೋರಿನ ಪಿತೂರಿ ಮೊಕದ್ದಮೆಯಲ್ಲಿ ಭಾಯಿ ಪರಮಾನಂದಜೀ ಅವರಿಗೆ ಮರಣದಂಡನೆ ವಿಧಿಸಲಾಯಿತು. ಅವರು “ತವಾರೀಖ್ ಹಿಂದ್” ಎಂಬ ಪುಸ್ತಕವನ್ನು ಬರೆದಿದ್ದರು. ರಾಮಪ್ರಸಾದ್ ಆ ಪುಸ್ತಕವನ್ನು ಓದಿ ಬಹಳ ಮೆಚ್ಚಿಕೊಂಡ. ಪರಮಾನಂದಜೀ ಅವರಿಗೆ ಮರಣದಂಡನೆಯಾಯಿತು ಎಂಬ ಸುದ್ದಿ ಕೇಳಿ ರಾಮಪ್ರಸಾದನ ರಕ್ತ ಕುದಿಯಿತು, ಬ್ರಿಟಿಷ್ ಸರ್ಕಾರದ ಅನ್ಯಾಯದ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಕೈಗೊಂಡ. ತನ್ನ ಪ್ರತಿಜ್ಞೆಯನ್ನು ರಾಮಪ್ರಸಾದ್ ತನ್ನ ಗುರು ಸೋಮದೇವ್ ಜೀ ಅವರಲ್ಲಿ ತಿಳಿಸಿದ. “ಪ್ರತಿಜ್ಞೆ ಮಾಡುವುದು ಸುಲಭ, ಅದನ್ನು ಪಾಲಿಸುವುದು ಕಷ್ಟ” ಎಂದರು. ರಾಮಪ್ರಸಾದ್ ಅವರ ಪಾದ ಮುಟ್ಟಿ “ಈ ಶ್ರೀಚರಣಗಳ ಕೃಪೆ ಇದ್ದಲ್ಲಿ ಪ್ರತಿಜ್ಞೆ ಖಂಡಿತ ನೆರವೇರುತ್ತದೆ. ಯಾವ ಅಡ್ಡಿಯೂ ಆಗದು” ಎಂದು ವಚನವಿತ್ತ.
ಲಕ್ನೋ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿ, ರಾಮಪ್ರಸಾದನಿಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುಪ್ತ ಸಮಿತಿಯ ಸದಸ್ಯರ ಸಂಪರ್ಕ ಬೆಳೆಯಿತು. ಕೆಲವೇ ದಿನಗಳಲ್ಲಿ ಅವನು ಕ್ರಾಂತಿಕಾರಿಗಳ ಕಾರ್ಯಕಾರಿ ಸಮಿತಿಗೂ ಸದಸ್ಯನಾದ. ಸಮಿತಿಯ ಬಳಿ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಣವಿರಲ್ಲ. ಆಗ ರಾಮಪ್ರಸಾದ್ ತನ್ನ ತಾಯಿಯಿಂದ ಸಾಲ ಪಡೆದು ‘ಅಮೇರಿಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಿತು?’ ಮತ್ತು ‘ದೇಶವಾಸಿಗಳಿಗೆ ಸಂದೇಶ’ ಎಂಬ ಪುಸ್ತಕಗಳನ್ನು ಪ್ರಕಟಿಸಿ, ಅವುಗಳನ್ನು ಮಾರಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಹಣವನ್ನು ಹೊಂದಿಸಿದ. ಆಗಿನ ಸಂಯುಕ್ತ ಪ್ರಾಂತಗಳ ಸರ್ಕಾರ ಈ ಕೃತಿಗಳಿಗೆ ನಿರ್ಬಂಧ ಹೇರಿತು, ಶಸ್ತ್ರ ಸಂಗ್ರಹದ ಆರೋಪ ಹೊರೆಸಿ ರಾಮಪ್ರಸಾದನ ಮೇಲೆ ಮೊಕದ್ದಮೆ ಹಾಕಿದರು. ರಾಮಪ್ರಸಾದ್ ಪೊಲೀಸರಿಗೆ ಸಿಗದೇ ಆಜ್ಞಾತನಾದ.
ಮೊದಲ ಮಹಾಯುದ್ದ ಮುಗಿದ ಮೇಲೆ 1919 ರಲ್ಲಿ ಬ್ರಿಟಿಷ್ ಸರ್ಕಾರ ದೇಶಭಕ್ತ ಚಳುವಳಿ ವಿಷಯದಲ್ಲಿ ನೀತಿಯನ್ನು ಬದಲಿಸಿತು. ಅನೇಕ ಕ್ರಾಂತಿಕಾರಿಗಳ ಮೊಕದ್ದಮೆ ಹಿಂದಕ್ಕೆ ತೆಗೆಯಲಾಯಿತು. ರಾಮಪ್ರಸಾದ್ ಮತ್ತೆ ಷಹಜಾನಪುರಕ್ಕೆ ಮರಳಿದ. 1921 ರಲ್ಲಿ ಅಸಹಕಾರ ಚಳುವಳಿ ನಿಂತ ಮೇಲೆ ಕ್ರಾಂತಿಕಾರಿ ಚಳುವಳಿ ಮತ್ತೆ ಆರಂಭವಾಯಿತು. ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಕ್ರಾಂತಿಕಾರಿ ಪಕ್ಷ ಜನ್ಮ ತಾಳಿತು. ರಾಮಪ್ರಸಾದ್ ಈ ಸಂಸ್ಥೆಯಲ್ಲಿ ಸಕ್ರಿಯನಾದ. ಕ್ರಾಂತಿಕಾರಿಗಳಿಗೆ ಹಣದ ಸಮಸ್ಯೆ ಉಂಟಾಯಿತು. ಆಗ ರಾಮಪ್ರಸಾದ್ ಒಂದು ಯೋಜನೆಯನ್ನು ರೂಪಿಸಿದ. ಷಹಜಾನಪುರದಿಂದ ಲಕ್ನೋಗೆ ಹೋಗುತ್ತಿದ್ದ ರೈಲಿನಲ್ಲಿ ಬ್ರಿಟಿಷ್ ಸರ್ಕಾರದ ಹಣವನ್ನು ಸಾಗಿಸಲಾಗುತ್ತಿತ್ತು. ಈ ಹಣವನ್ನು ದೋಚುವ ಯೋಜನೆ ಸಿದ್ದವಾಯಿತು. ಆಗಸ್ಟ್ 9, 1925 ರಂದು ರಾಮಪ್ರಸಾದ್ ಬಿಸ್ಮಿಲ್ ಮತ್ತು ಅವನ ಒಂಭತ್ತು ಮಂದಿ ತಂಡ ಕಾಕೋರಿ ಎಂಬಲ್ಲಿ ರೈಲನ್ನು ನಿಲ್ಲಿಸಿ ಆ ರೈಲುಗಾಡಿಯಲ್ಲಿ ಸಂಗ್ರಹವಾಗಿದ್ದ ಸರ್ಕಾರಿ ಹಣವನ್ನು ಲೂಟಿ ಮಾಡಿದರು. ಈ ದರೋಡೆ ‘ಕಾಕೋರಿ ದರೋಡೆ’ ಎಂದು ಲೋಕಪ್ರಸಿದ್ದವಾಯಿತು.
ಕಾಕೋರಿ ದರೋಡೆ ಬ್ರಿಟಿಷ್ ಸರ್ಕಾರವನ್ನು ನಡುಗಿಸಿತು. ವಿಚಾರಣೆ ವೇಗವಾಗಿ ನಡೆದು ಚಂದ್ರಶೇಖರ್ ಅಜಾದ್ ಹೊರತುಪಡಿಸಿ ಎಲ್ಲ ಕ್ರಾಂತಿಕಾರಿಗಳು ಬಂಧಿತರಾದರು. ಒಂದೂವರೆ ವರ್ಷ ಕಾಲ ಮೊಕದ್ದಮೆಯ ವಿಚಾರಣೆ ನಡೆದು ರಾಮಪ್ರಸಾದ್, ಅಶ್ಫಾಕ್ ಉಲ್ಲಾ, ರೋಶನ್ ಸಿಂಹ ಮತ್ತು ರಾಜೇಂದ್ರ ಲಾಹಿರಿಗೆ ಮರಣದಂಡನೆ ಶಿಕ್ಷೆಯಾಯಿತು. 1927ರ ಡಿಸೆಂಬರ್ 18ರಂದು ರಾಜೇಂದ್ರ ಲಾಹಿರಿ, 19ರಂದು ರಾಮಪ್ರಸಾದ್ ಮತ್ತು ಅಶ್ಫಾಕ್ ಉಲ್ಲಾ, 20ರಂದು ರೋಶನ್ ಸಿಂಹ – ಹೀಗೆ ನಾಲ್ವರು ಕಾಕೋರಿ ಕ್ರಾಂತಿವೀರರು ನಗುನಗುತ್ತಾ ಪ್ರಾಣತ್ಯಾಗ ಮಾಡಿ ಅಮರರಾದರು.
ರಾಮಪ್ರಸಾದ್ ಬಿಸ್ಮಿಲ್ ಕೇವಲ ಕ್ರಾಂತಿಕಾರಿಯಾಗಿರಲಿಲ್ಲ ಅವನು ಕವಿ. ಲೇಖಕ ಮತ್ತು ಆದರ್ಶ ವ್ಯಕ್ತಿಯಾಗಿದ್ದ. ಅವನು ‘ಮನೋಲಹರಿ’, ‘ಕ್ಯಾಥರಿನ್’ ಮತ್ತು ಸ್ವದೇಶೀ ರಂಗು ಮುಂತಾದ ಕೃತಿಗಳನ್ನು ಬರೆದಿದ್ದ. ಜೈಲಿನಲ್ಲಿ ಕೂತು ತನ್ನ ಆತ್ಮಚರಿತ್ರೆಯನ್ನು ಅವನು ರಚಿಸಿದ. ರಾಮಪ್ರಸಾದ್ ಬಿಸ್ಮಿಲ್ ಬರೆದ ಅನೇಕ ಗೀತೆಗಳನ್ನು ಬಹಳಷ್ಟು ಕ್ರಾಂತಿಕಾರಿಗಳಿಗೆ ಸ್ಪೂರ್ತಿಯಾಯಿತು. ಕಾಕೋರಿ ದರೋಡೆ ದೇಶದ ಕ್ರಾಂತಿಕಾರಿ ಇತಿಹಾಸದಲ್ಲಿ ಮಹತ್ವದ ಘಟ್ಟ. ಅದನ್ನು ಯೋಜಿಸಿ ಕಾರ್ಯಗತಗೊಳಿಸಿದ ಮಹಾ ವೀರ ರಾಮಪ್ರಸಾದ್ ಬಿಸ್ಮಿಲ್. ಕ್ರಾಂತಿಕಾರಿಯಾಗಿ, ಕ್ರಾಂತಿ ಸಾಹಿತಿಯಾಗಿ ಲೇಖನಿಯಿಂದ ಸ್ವಾತಂತ್ರ್ಯದ ಕ್ರಾಂತಿ ಮೊಳಗಿಸಿದ ಬಿಸ್ಮಿಲ್ ಮರೆಯಲಾಗದ ಕ್ರಾಂತಿ ಶಿರೋಮಣಿ. ಇಂದು ಆತನ ಜನ್ಮ ದಿನ ರಾಮಪ್ರಸಾದ್ ಬಿಸ್ಮಿಲ್ ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಲಿ.