ನಾನು ಮತ್ತೆ ಮತ್ತೆ ನೋಡಿದ್ದೆ
ನಿನ್ನ ಕಣ್ಣುಗಳವು
ಕೊಳದ ಭಾವಗಳ ಬಂಧನಗಳು
ನಗುವು ನಲಿದರೂ,
ಮನದೊಳಗಿನ ಆತಂಕಕ್ಕೆ
ನಕ್ಕ ಜೀವದ ವೀಣೆಗೆ
ಹೆಸರು ಹುಡುಕಲು….
ಕನಸುಗಳು ಆಕಾಶದೆತ್ತರದಲಿ
ಗಾಳೀಪಟದಂತೆ ಗಿರಕಿ ಹೊಡೆದು
ನವಿಲುಗರಿಯ ಮಿಂಚು ಬಣ್ಣದಲಿ
ಹೊದ್ದ ಅಂಗಿಯ ವಸ್ತ್ರ,
ಆಟಗೆ ಸಾಮಾನು ಸದ್ದಾಗಲು
ಮಗ್ಗುಲು ಹೊರಳಿ
ನಿದ್ದೆ ಮುರಿಯಿತು ಕನಸು; ಆದರೂ ಮನಸು ಹೂಗನಸು..
ನಾನು ತಯಾರಿ ನಡೆಸಿದ್ದೇನೆ
ಪ್ರತಿ ಹೊರಳು, ಪ್ರತಿ ಕೂಗನು
ದಾಖಲಿಸಿ, ಬಿಳಿ ಹಾಳೆಯ ತುಂಬಿಸಿ
ಮನದ ಮಂಟಪ ಪಲ್ಲಕ್ಕಿಯಾಗಿ
ತಂಗಾಳಿಗೂ ಮಣೆ ಹಾಕಿ, ಹೂವ ಮುಡಿಸಿ
ಸಂತಸಕ್ಕೆ ಕಾರಣ ಎಲ್ಲ ನೀನೇ ಅನ್ನುವಂತೆ
ನನ್ನ-ನಿನ್ನ, ನಿನ್ನನ್ನೂ-ನನ್ನನ್ನೂ ಪ್ರೀತಿಸುತ್ತಿದ್ದೇನೆ…
ಹಾಯಾಗಿರು, ಬೆಚ್ಚನೆಯ ಚಿಪ್ಪಿನಲಿ
ಮಾತು, ನಗು, ಕೀಟಲೆ ಎಲ್ಲವೂ ಕೃಷ್ಣನಂತೆ
ಮನದ ಅಂಗಳದಲ್ಲಿ ಗದ್ದಲ
ಬಾ, ಬರಸೆಳೆದು ಮುದ್ದಾಡಲು ಇರುವೆ-
ಮಡಿಲ ಹೊಸ್ತಿಲಲ್ಲಿ ಕದ್ದು
ಹಾಲೂಡಿಸಿ ಮೈಮರೆದು
ತಾಯ ಕುಡಿಯಲಿ ಭಾವ ಹರಿಯಲು….
ನಾ ತಯಾರಿ ನಡೆಸಿದ್ದೇನೆ………..
(ಹೊಸ ಜೀವದ ಸೆಲೆಯನ್ನ ಹೊತ್ತು ಅದನ್ನ ಈ ಜಗತ್ತಿಗೆ ಪರಿಚಯಿಸಲು ತಯಾರಿ ನಡೆಸುವ ಪ್ರತಿ ತಾಯಿಗೆ ಈ ಕವನ ಅರ್ಪಣೆ..)
—– *****—–