ಕರ್ನಾಟಕದಲ್ಲಿ ಕೃಷಿಕರು ತಮ್ಮ ಸ್ವಂತ ಜಾಗದಲ್ಲಿ ತಮ್ಮ ವಾಸಕ್ಕೆ ತಮ್ಮದೇ ಹಣದಲ್ಲಿ ಮನೆ ಕಟ್ಟಿಸಬೇಕಾದರೆ ಎಷ್ಟೊಂದು ಸಲ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕು, ಅದಕ್ಕಾಗಿ ಎಷ್ಟೊಂದು ಸಮಯ ಕಾಯಬೇಕು ಎಂಬುದನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವೇ ಎಂಬ ಅನುಮಾನ ಮೂಡುತ್ತದೆ. ಇದನ್ನು ನೋಡಿದಾಗ ಎಲ್ಲಿಗೆ ಬಂತು, ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ..?? ಎಂದು ಕೇಳಬೇಕಾಗಿದೆ. ಕೃಷಿಕರು ಅವರ ಜಾಗದಲ್ಲಿ ವಾಸಕ್ಕೆ ಮನೆ ಕಟ್ಟಿಸಬೇಕಾದರೂ ಆ ಜಾಗವನ್ನು ಭೂಪರಿವರ್ತನೆ ಮಾಡಿಸಬೇಕು ಎಂಬ ಕೆಂಪು ಪಟ್ಟಿಯ ಅಧಿಕಾರಶಾಹೀ ನಿಯಮವಿದೆ. ಕೃಷಿಕರಲ್ಲದವರು ಕೃಷಿಯೇತರ ಉದ್ದೇಶಗಳಿಗೆ ಕಟ್ಟಡ ಕಟ್ಟಿಸುವಾಗ ಸಂಬಂಧಪಟ್ಟ ಭೂಮಿಯ ಭೂಪರಿವರ್ತನೆ ಮಾಡಿಸಬೇಕು ಎಂಬ ನಿಯಮದಲ್ಲಿ ಅರ್ಥವಿದೆ. ಆದರೆ ಕೃಷಿಕನು ತನ್ನದೇ ಜಾಗದಲ್ಲಿ ಮನೆ ಕಟ್ಟಿಸುವುದು ಹೇಗೆ ಕೃಷಿಯೇತರ ಉದ್ದೇಶ ಆಗುತ್ತದೆ? ಇದನ್ನು ಕೃಷಿಯೇತರ ಎಂದು ವರ್ಗೀಕರಿಸಿ ಕೃಷಿಕರಿಗೆ ತೊಂದರೆ ಕೊಡುವ ಭೂಪರಿವರ್ತನೆ ಮಾಡಿಸಬೇಕಾಗಿರುವುದು ಕಡ್ಡಾಯ ಎಂಬ ಕಾನೂನು ಕರ್ನಾಟಕದಲ್ಲಿ ಜಾರಿಯಲ್ಲಿರುವುದಕ್ಕೆ ಯಾವುದೇ ವೈಜ್ಞಾನಿಕ ಸಮರ್ಥನೆ ಇರುವಂತೆ ಕಾಣುವುದಿಲ್ಲ. ಇಂಥ ಜನಪೀಡಕ ಕಾನೂನುಗಳನ್ನು ಯಾಕಾಗಿ ಜಾರಿಗೆ ತಂದಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ವಿಚಾರ ಮಾಡಿ ನೋಡಿದರೆ ಇಂಥ ಕೃಷಿಕಪೀಡಕ ಕಾನೂನಿನ ಅಗತ್ಯ ಇಲ್ಲ. ಇಂಥ ಕಾನೂನುಗಳಿಂದ ವಿನಾಯತಿ ನೀಡಿದರೆ ಅನಾವಶ್ಯಕವಾಗಿ ಸರಕಾರಿ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಿದೆ.
ಭೂಪರಿವರ್ತನೆ ಮಾಡಿಸಬೇಕಾದರೆ ಹಲವು ದಾಖಲೆಗಳನ್ನು ಸರ್ಕಾರಿ ಕಛೇರಿಗಳಿಂದ ಪಡೆಯಬೇಕಾಗುತ್ತದೆ. ಇವುಗಳಲ್ಲಿ ಮೊದಲನೆಯದು ಭೂಮಾಪನ ಇಲಾಖೆಯಿಂದ ಭೂಪರಿವರ್ತನೆ ಮಾಡಿಸಬೇಕಾದ ಜಾಗದ ಅಳತೆ ಮಾಡಿಸಿ ನಕ್ಷೆ ಪಡೆಯುವುದು. ಇದಕ್ಕಾಗಿ ಭೂಮಾಪನ ಇಲಾಖೆಗೆ ಭೂಮಿಯ ಪಹಣಿಪತ್ರ ಇಟ್ಟು, ಅರ್ಜಿ ಕೊಟ್ಟು ನಿಗದಿಪಡಿಸಿದ ಹಣ ಕಟ್ಟಬೇಕು. ಭೂಮಾಪಕರು ಕೂಡಲೇ ಬರುವುದಿಲ್ಲ. ಬರಲು ಹತ್ತಿಪ್ಪತ್ತು ದಿವಸ ಕಾಯಿಸುತ್ತಾರೆ. ಇದಕ್ಕಾಗಿ ಅವರನ್ನು ಪುನಃ ಹೋಗಿ ಕಾಣಬೇಕು. ವಿಚಾರಿಸದಿದ್ದರೆ ಅವರು ಬರುವುದಿಲ್ಲ. ಭೂಮಾಪಕರು ಜಾಗಕ್ಕೆ ಬಂದು ಅಳತೆ ಮಾಡಿದ ನಂತರ ನಕ್ಷೆ ಮಾಡಿಕೊಡಲು ಮತ್ತೆ ಕೆಲವು ದಿನ ಬಿಟ್ಟು ಬರಲು ಹೇಳುತ್ತಾರೆ. ಹೀಗೆ ನಕ್ಷೆ ಸಿಗುವಾಗ ಅರ್ಜಿ ಕೊಟ್ಟು 15-20 ದಿನವಾದರೂ ಆಗುತ್ತದೆ. ಭೂಪರಿವರ್ತನೆಗೆ ಬೇಕಾದ ಎರಡನೇ ದಾಖಲೆ ಎಂದರೆ ಟೆನೆನ್ಸಿ ಸರ್ಟಿಫಿಕೇಟ್ (ಗೇಣಿರಹಿತ ದೃಢಪತ್ರ). ಇದಕ್ಕೆ ತಾಲೂಕು ಆಫೀಸಿನಲ್ಲಿ ಅರ್ಜಿ ಕೊಡಬೇಕು. ಅಲ್ಲಿ ಅವರು ಒಂದು ವಾರದ ನಂತರ ವಿಚಾರಿಸಲು ಹೇಳುತ್ತಾರೆ. ಒಂದು ವಾರ ಬಿಟ್ಟು ಹೋದರೆ ಇದು ಆಗಿರುವುದಿಲ್ಲ. ಮತ್ತೆ ಕೆಲವು ದಿನ ಬಿಟ್ಟು ಹೋಗಿ ವಿಚಾರಿಸಬೇಕು. ಹೀಗೆ ಇದು ಸಿಗಲು 10-15 ದಿವಸ ಆಗುತ್ತದೆ. ಭೂಪರಿವರ್ತನೆಗೆ ಬೇಕಾದ ಮೂರನೇ ದಾಖಲೆ ನೋ ಪಿ.ಟಿ.ಸಿ.ಎಲ್ ಸರ್ಟಿಫಿಕೇಟ್ (ಪ್ರೋಹಿಬಿಶನ್ ಆಫ್ ಟ್ರಾನ್ಸ್ಫರ್ ಆಫ್ ಸರ್ಟನ್ ಲ್ಯಾಂಡ್ಸ್). ಇದಕ್ಕಾಗಿ ತಾಲೂಕು ಆಫೀಸಿನಲ್ಲಿ ಅರ್ಜಿ ಕೊಡಬೇಕು. ಅಲ್ಲಿ ಕೊಟ್ಟ ಅರ್ಜಿ ಕಂದಾಯ ನಿರೀಕ್ಷಕರ ಕಛೇರಿಗೆ ರವಾನೆಯಾಗುತ್ತದೆ. ಈ ಅರ್ಜಿ ಕೊಟ್ಟು ಸರ್ಟಿಫಿಕೇಟ್ ಕೊಡಲು ಅವರಿಗೆ 21 ದಿನದ ಗಡುವು ಇದೆ ಎಂದು ತಾಲೂಕು ಆಫೀಸಿನಲ್ಲಿ ಹೇಳುತ್ತಾರೆ. ಇದು ಯಾವಾಗ ಸಿಗುತ್ತದೆ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ನಾಲ್ಕು ದಿನ ಬಿಟ್ಟು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಿ ಎಂದು ಹೇಳುತ್ತಾರೆ. ಇದಕ್ಕಾಗಿ ಪುನಃ ಕಂದಾಯ ಇಲಾಖೆ ಕಛೇರಿಗೆ ಅಲೆದು ವಿಚಾರಿಸಬೇಕು. ಅಲ್ಲಿ ಹೋಗಿ ಒಂದೆರಡು ಸಲ ವಿಚಾರಿಸಿದ ನಂತರ ಕಂದಾಯ ನಿರೀಕ್ಷಕರು ಸಂಬಂಧಪಟ್ಟ ದಾಖಲೆಗಳನ್ನು ನೋಡಿ ಟಿಪ್ಪಣಿ ಬರೆದು ಅರ್ಜಿಯನ್ನು ತಾಲೂಕು ಕಛೇರಿಗೆ ಕಳುಹಿಸುತ್ತಾರೆ. ಪುನಃ ಈ ಅರ್ಜಿಯ ಗತಿ ಏನಾಯಿತು ಎಂದು ತಾಲೂಕು ಆಫೀಸಿನಲ್ಲಿ ವಿಚಾರಿಸಬೇಕು. ಹೀಗೆ ತಾಲೂಕು ಆಫೀಸಿಗೆ ಒಂದೆರಡು ಸಲ ಅಲೆಸಿ ಸಂಬಂಧಪಟ್ಟ ಗುಮಾಸ್ತರು ನೋ ಪಿ.ಟಿ.ಸಿ.ಎಲ್ ಸರ್ಟಿಫಿಕೇಟ್ ಕೊಡುತ್ತಾರೆ.
ಭೂಪರಿವರ್ತನೆಗೆ ಬೇಕಾದ ನಾಲ್ಕನೆಯ ದಾಖಲೆ ಭೂಪರಿವರ್ತನೆ ಮಾಡಿಸಬೇಕಾದ ಜಾಗದ ಸರ್ವೇ ನಂಬರ್ ಹೆಸರಿನಲ್ಲಿ ಯಾವುದಾದರೂ ಋಣ ಬಾಧೆ ಇದೆಯೇ ಎಂಬುದರ ಬಗ್ಗೆ ನೋಂದಣಿ ಇಲಾಖೆಯಿಂದ ದೃಢ ಪತ್ರ. ಇದಕ್ಕಾಗಿ ನೋಂದಣಿ ಇಲಾಖೆಗೆ ಜಾಗದ ಸರ್ವೇ ನಂಬರಿನ ಪಹಣಿ ಪತ್ರದ ಜೊತೆಗೆ ಅರ್ಜಿ ಕೊಟ್ಟು, ಹುಡುಕುವ ವೆಚ್ಚ ಎಂದು 150 ರೂಪಾಯಿ ಕಟ್ಟಬೇಕು. ಅರ್ಜಿ ಕೊಟ್ಟ ಒಂದು ವಾರದ ನಂತರ ಇದು ಸಿಗುತ್ತದೆ. ಭೂಪರಿವರ್ತನೆಗೆ ಬೇಕಾದ ಐದನೇ ದಾಖಲೆ ಗ್ರಾಮಪಂಚಾಯತಿಯಿಂದ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್. ಇದಕ್ಕಾಗಿ ಗ್ರಾಮಪಂಚಾಯತಿಗೆ ಜಾಗದ ಪಹಣಿ ಪತ್ರ ಹಾಗೂ ಗ್ರಾಮಕರಣಿಕರ ವರದಿ ಲಗತ್ತಿಸಿ ಅರ್ಜಿ ಕೊಡಬೇಕು. ಗ್ರಾಮಕರಣಿಕರ ವರದಿಯಲ್ಲಿ ಅರ್ಜಿಕೊಡುವ ವ್ಯಕ್ತಿ ಗ್ರಾಮಕರಣಿಕರ ಕಛೇರಿಗೆ ಯಾವುದೇ ಭೂಕಂದಾಯ ಇತ್ಯಾದಿ ಕೊಡಲು ಬಾಕಿ ಇಲ್ಲ ಎಂದು ಗ್ರಾಮಕರಣಿಕರು ಬರೆದು ಕೊಡಬೇಕು. ಗ್ರಾಮ ಪಂಚಾಯತಿಯಲ್ಲಿ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್ ಅರ್ಜಿ ಕೊಟ್ಟ ಕೂಡಲೇ ಕೊಡುವುದಿಲ್ಲ. ಮಾಮೂಲಿ ಸರ್ಕಾರೀ ಕಛೇರಿಗಳ ಜನಸಾಮಾನ್ಯರನ್ನು ಅಲೆದಾಡಿಸುವ ಅಲಿಖಿತ ನಿಯಮದ ಪ್ರಕಾರ ಎರಡು ದಿನ ಬಿಟ್ಟು ಬರಲು ಹೇಳುತ್ತಾರೆ. ಭೂಪರಿವರ್ತನೆಗೆ ಬೇಕಾದ ಐದನೆಯ ದಾಖಲೆ, ಗ್ರಾಮ ಕರಣಿಕರು, ಭೂಮಾಪಕರು ಮಾಡಿಕೊಟ್ಟ ನಕ್ಷೆಯ ಹಿಂಭಾಗದಲ್ಲಿ ಇಂಡೆಕ್ಸ್ ಹಾಕಿ ಕೊಡಬೇಕು. ಇಂಡೆಕ್ಸ್ ಎಂದರೆ ಭೂಪರಿವರ್ತನೆ ಆಗಬೇಕಾದ ಜಾಗದ ಸುತ್ತಮುತ್ತ ಯಾವೆಲ್ಲ ವ್ಯಕ್ತಿಗಳ ಜಮೀನು ಇದೆ ಅವುಗಳ ಸರ್ವೇ ನಂಬರ್ ಹಾಗೂ ವಿಸ್ತೀರ್ಣವನ್ನು ಒಂದು ಕಾಲಮ್ಮಿನಲ್ಲಿ ಪಟ್ಟಿ ಮಾಡಿ ಕೊಡುವುದು. ಭೂಪರಿವರ್ತನೆ ಮಾಡಿಸಲು ಬೇಕಾದ ಆರನೆಯ ದಾಖಲೆ ಜಾಗದ ಪಹಣಿ ಪತ್ರ ಹಾಗೂ ಏಳನೆಯ ದಾಖಲೆ ಮ್ಯುಟೇಶನ್. ಇವೆರಡೂ ತಾಲೂಕು ಆಫೀಸಿನ ಪಹಣಿ ಪತ್ರ ನೀಡುವ ಕೌಂಟರಿನಲ್ಲಿ ದೊರೆಯುತ್ತವೆ.
ಈ ಎಲ್ಲ ದಾಖಲೆಗಳು ಸಿಕ್ಕಿದ ನಂತರ ನೂರು ರೂಪಾಯಿಯ ಸ್ಟ್ಯಾಂಪ್ ಪೇಪರ್ ಹಾಗೂ ಅರ್ಜಿಯ ಜೊತೆ ಎಲ್ಲಾ ದಾಖಲೆಗಳನ್ನು ಜೊತೆಗಿರಿಸಿ ತಾಲೂಕು ಕಛೇರಿಯಲ್ಲಿ ಭೂಪರಿವರ್ತನೆಗಾಗಿ ಅರ್ಜಿ ಕೊಡಬೇಕು. ಈ ಅರ್ಜಿಯನ್ನು ಕಂದಾಯ ನಿರೀಕ್ಷಕರ (ರೆವೆನ್ಯೂ ಇನ್ಸ್ಪೆಕ್ಟರ್) ಕಛೇರಿಗೆ ತನಿಖೆಗಾಗಿ ಕಳುಹಿಸಿಕೊಡಲಾಗುತ್ತದೆ. ನಾಲ್ಕು ದಿನ ಬಿಟ್ಟು ಆ ಅರ್ಜಿಯ ಕುರಿತು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲು ಹೇಳುತ್ತಾರೆ. ಅಲ್ಲಿ ವಿಚಾರಿಸಿದರೆ ಅವರು ತಾನು ಭೂಪರಿವರ್ತನೆ ಮಾಡಬೇಕಾದ ಜಾಗಕ್ಕೆ ಬಂದು ತನಿಖೆ ಮಾಡಬೇಕೆಂದು ಕಾನೂನಿನಲ್ಲಿ ಇದೆ, ಹೀಗಾಗಿ ಮುಂದಿನ ಬಾರಿ ಗ್ರಾಮದ ಕಡೆ ಬರುವಾಗ ಜಾಗದ ತನಿಖೆ ಮಾಡುತ್ತೇನೆ ಎಂದು ಹೇಳುತ್ತಾರೆ ಅಥವಾ ನಿಮಗೆ ಕೆಲಸ ಬೇಗನೆ ಆಗಬೇಕಿದ್ದರೆ ಅವರನ್ನು ನಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ತಾಲೂಕು ಕೇಂದ್ರದಿಂದ ಕರೆದುಕೊಂಡು ಹೋಗಲು ಹೇಳುತ್ತಾರೆ. ಹೀಗೆ ಕಂದಾಯ ನಿರೀಕ್ಷಕರು ಅರ್ಜಿ ಕೊಟ್ಟ ಜಾಗದ ತನಿಖೆಗೆ ಬರಲು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ. ಇವರು ಜಾಗಕ್ಕೆ ಬಂದು ಮಾಡುವುದು ಏನೂ ಇಲ್ಲ, ಭೂಮಾಪನ ಇಲಾಖೆಯವರು ಕೊಟ್ಟ ಜಾಗದ ನಕ್ಷೆ ಸರಿಯಾಗಿದೆ ಎಂದು ಒಂದು ಟಿಪ್ಪಣಿ ಬರೆದು ಅದನ್ನು ಅವರು ತಾಲೂಕು ಆಫೀಸಿಗೆ ಕಳುಹಿಸಬೇಕು ಅಷ್ಟೇ. ಹೀಗೆ ತಾಲೂಕು ಆಫೀಸಿಗೆ ಬಂದ ಅರ್ಜಿ ಏನಾಯಿತು ಎಂದು ಮತ್ತೆ ವಿಚಾರಿಸಲು ತಾಲೂಕು ಆಫೀಸಿಗೆ ಅರ್ಜಿ ಕೊಟ್ಟ ವ್ಯಕ್ತಿ ಅಲೆಯಬೇಕು. ತಾಲೂಕು ಆಫೀಸಿನ ಗುಮಾಸ್ತರು ಅರ್ಜಿಗೆ ಸೆಂಟ್ಸ್ ಜಾಗಕ್ಕೆ ಇಂತಿಷ್ಟು ಎಂದು ಲೆಕ್ಕ ಹಾಕಿ ಹಣವನ್ನು ಚಲನ್ ತೆಗೆದು ಬ್ಯಾಂಕಿನಲ್ಲಿ ಕಟ್ಟಲು ಹೇಳುತ್ತಾರೆ. ಹೀಗೆ ಹಣ ಕಟ್ಟಿದ ನಂತರ ಭೂಪರಿವರ್ತನೆಗೆ ಕೊಟ್ಟ ಅರ್ಜಿಗೆ ತಹಶೀಲ್ದಾರರು ಸಹಿ ಹಾಕಬೇಕು. ಇದು ಯಾವಾಗ ಸಿಗುತ್ತದೆ ಎಂದು ವಿಚಾರಿಸಿದರೆ ಗುಮಾಸ್ತರು ಸರಿಯಾದ ಉತ್ತರ ಹೇಳುವುದಿಲ್ಲ. ಎರಡು ದಿವಸ ಬಿಟ್ಟು ಬರಲು ಹೇಳುತ್ತಾರೆ. ಜನಸಾಮಾನ್ಯರನ್ನು ಅಲೆಸದೆ ಕೆಲಸ ಶೀಘ್ರವಾಗಿ ಮಾಡಿಕೊಡುವ ವ್ಯವಸ್ಥೆ ತಾಲೂಕು ಆಫೀಸಿನಲ್ಲಿ ಇಲ್ಲ.
ತಾಲೂಕು ಆಫೀಸಿನಲ್ಲಿ ಯಾರಿಗೆ ಯಾವ ವಿಷಯಗಳಿಗೆ ಅರ್ಜಿ ಕೊಡಬೇಕು ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಲ್ಲಿ ಕೆಲಸ ಮಾಡುವ ಗುಮಾಸ್ತರು ಯಾವ ವಿಷಯಕ್ಕೆ ಸಂಬಂಧಪಟ್ಟವರು, ಅವರು ಹೆಸರು, ಪದನಾಮ ಇತ್ಯಾದಿ ಯಾವೊಂದು ಫಲಕಗಳೂ ತಾಲೂಕು ಆಫೀಸಿನಲ್ಲಿ ಇಲ್ಲ. ಅಲ್ಲಿ ಇಲ್ಲಿ ವಿಚಾರಿಸಿಯೇ ಜನ ತಿಳಿದುಕೊಳ್ಳುವಂಥ ಅವ್ಯವಸ್ಥೆ ತಾಲೂಕು ಕಚೇರಿಯಲ್ಲಿದೆ. ತಾಲೂಕು ಆಫೀಸಿನಲ್ಲಿ ಹತ್ತಿಪ್ಪತ್ತು ಜನ ಒಟ್ಟಿಗೆ ಒಂದೇ ಕಡೆ ಕುಳಿತು ಕೆಲಸ ಮಾಡುವಾಗ ಜನಸಾಮಾನ್ಯರು ತಮಗೆ ಸಂಬಂಧಪಟ್ಟ ವಿಷಯದ ಕೆಲಸಕ್ಕೆ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಲು ಸೂಕ್ತ ಫಲಕಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಸರಕಾರ ಜಾರಿಗೆ ತರಲು ಏನು ತೊಂದರೆ?
ಭೂಪರಿವರ್ತನೆಗಾಗಿ ನಾನು ಒಟ್ಟಿನಲ್ಲಿ 22 ಸಲ ನನ್ನ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ನನ್ನ ದೈನಂದಿನ ಕೆಲಸ ಬಿಟ್ಟು ಅಲೆಯಬೇಕಾಗಿ ಬಂತು. ಒಟ್ಟಿನಲ್ಲಿ ಇದಕ್ಕೆ ತಗಲಿದ ಸಮಯ ಎರಡೂವರೆ ತಿಂಗಳು. ಗ್ರಾಮೀಣ ಭಾಗಗಳಲ್ಲಿ ಮನೆ ಕಟ್ಟಿಸಲು ಕೂಡ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆಯುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿರುವ ಕಾರಣ ಗ್ರಾಮ ಪಂಚಾಯತಿಗೆ ಅಲೆಯಬೇಕಾದ ಪರಿಸ್ಥಿತಿಯನ್ನು ಕೂಡ ಕೃಷಿಕರು ಎದುರಿಸಬೇಕಾಗುತ್ತದೆ. ಹಿಂದೆ ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ 9/11 ಎಂಬ ಕಾನೂನನ್ನು ಜಾರಿಗೆ ತಂದಿದ್ದು ಇದರಿಂದಾಗಿ ಮನೆ ಕಟ್ಟಿಸಲು ಪರವಾನಗಿ ಪಡೆಯಬೇಕಾದರೆ ಕೃಷಿಕರು ಮನೆ ಕಟ್ಟಿಸುವ ಜಾಗದ 9/11 ಎಂಬ ದಾಖಲೆಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಗ್ರಾಮ ಪಂಚಾಯತಿಗೆ ಜಾಗದ ಪಹಣಿ ಪತ್ರ, ಭೂಪರಿವರ್ತನೆಯ ಆದೇಶದ ಪ್ರತಿ, ಜಾಗದ ಫೋಟೋ (ಮನೆ ಕಟ್ಟಿಸುವ ವ್ಯಕ್ತಿ ಜಾಗದಲ್ಲಿ ನಿಂತು ತೆಗೆಸಿದ ಫೋಟೋ), ಮನೆ ಕಟ್ಟಿಸುವ ವ್ಯಕ್ತಿಯ ಫೋಟೋ, ಜಾಗದ ದಾಖಲೆ ಪತ್ರದ ಪ್ರತಿ, ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತು ಪತ್ರದ ಪ್ರತಿ, 100 ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ನೋಟರಿಯವರಿಂದ ದೃಡೀಕೃತ ಅಫಿದವಿತ್, ಸಿವಿಲ್ ಇಂಜಿನಿಯರ್ ಮೊಹರು ಹಾಗೂ ಸಹಿ ಇರುವ ಅವರು ಮಾಡಿಕೊಟ್ಟ ಮನೆಯ ಪ್ಲಾನ್ ಹಾಗೂ ನಕ್ಷೆ, ಬಡಾವಣೆ ನಕ್ಷೆಗಳ ನಾಲ್ಕು ಪ್ರತಿಗಳನ್ನು ನೋಟರಿಯವರ ಸಹಿ ಹಾಗೂ ಮೊಹರು ಸಹಿತ ಇಟ್ಟು ಅರ್ಜಿ ಕೊಡಬೇಕು. ಅರ್ಜಿಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಸಂಬಂಧಪಟ್ಟ ವಾರ್ಡಿನ ಗ್ರಾಮಪಂಚಾಯತ್ ಸದಸ್ಯರ ಸಹಿ ಹಾಕಿಸಿಕೊಳ್ಳಬೇಕು. ಹೀಗೆ ಕೊಟ್ಟ ಅರ್ಜಿಯನ್ನು ತಿಂಗಳಿಗೊಮ್ಮೆ ನಡೆಯುವ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮೋದನೆ ಪಡೆಯಬೇಕು. 9/11 ದಾಖಲೆಗೆ ಪಂಚಾಯತಿಗೆ ಜಾಗದ ವಿಸ್ತೀರ್ಣದ ಆಧಾರದಲ್ಲಿ ಹಣ ಕಟ್ಟಬೇಕು. 5 ಸೆಂಟ್ಸ್ ಜಾಗಕ್ಕೆ 500 ರೂಪಾಯಿ ತೆಗೆದುಕೊಳ್ಳುತ್ತಾರೆ. ಒಬ್ಬ ಕೃಷಿಕ ತನ್ನ ಖಾಸಗಿ ಜಾಗದಲ್ಲಿ ಮನೆ ಕಟ್ಟಿಸಲು ಪಂಚಾಯತಿನ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯಬೇಕು ಎಂಬ ನಿಯಮದ ಅಗತ್ಯವೇ ಇಲ್ಲ. ಇಂಥ ಕೆಂಪು ಪಟ್ಟಿಯ ಅಸಂಬದ್ಧ ನಿಯಮವನ್ನು ಕಾನೂನು ನಿರ್ಮಾಪಕರು ಜಾರಿಗೆ ತಂದು ಕೃಷಿಕರಿಗೆ ಯಾಕೆ ತೊಂದರೆ ಕೊಡಬೇಕು? ಇದರಿಂದಾಗಿ ಹಲವಾರು ದಿವಸ ಕೃಷಿಕರು ಕಾಯಬೇಕಾಗುತ್ತದೆ. ನಾನು ಅರ್ಜಿ ಕೊಟ್ಟು 9/11 ದಾಖಲೆಯನ್ನು ಪಂಚಾಯತಿನಲ್ಲಿ ಮಾಡಿ ಕೊಡಲು ಎರಡೂವರೆ ತಿಂಗಳು ತೆಗೆದುಕೊಂಡರು. ಇದಕ್ಕಾಗಿ ವಿಚಾರಿಸಲು ಹತ್ತು ಸಲ ಗ್ರಾಮ ಪಂಚಾಯತಿಗೆ ಅಲೆಯಬೇಕಾಯಿತು. ಈ ಸಂಬಂಧ ನಾನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ, ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಸಚಿವರಿಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ, ಮುಖ್ಯಮಂತ್ರಿಗಳಿಗೆ ಮಿಂಚಂಚೆ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇವರ್ಯಾರೂ ಅದನ್ನು ನೋಡುವುದೇ ಇಲ್ಲ ಎಂದು ಕಾಣುತ್ತದೆ ಮತ್ತು ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಕರ್ನಾಟಕದ ಅಂತರ್ಜಾಲ ಆಧಾರಿತ ದೂರು ದಾಖಲೆ ವೆಬ್ ಸೈಟ್ ಇ-ಜನಸ್ಪಂದನದಲ್ಲಿ ದೂರು ದಾಖಲಿಸಿದರೂ ಪ್ರಯೋಜನ ಆಗುವುದಿಲ್ಲ. ಕೇಂದ್ರ ಸರ್ಕಾರದ ದೂರು ದಾಖಲೆ ವೆಬ್ ಸೈಟಿನಲ್ಲಿಯೂ ಇದೇ ಗತಿ. ಇವುಗಳು ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕರ್ನಾಟಕದ ಹಾಗೂ ಕೇಂದ್ರ ಸರ್ಕಾರದ ಅಧಿಕಾರಶಾಹೀ ವ್ಯವಸ್ಥೆ ಬ್ರಿಟಿಷರ ಸರಕಾರದಂತೆ ಕೃಷಿಕರ ಶೋಷಣೆ ಮಾಡುವ ಅನವಶ್ಯಕ ಕೆಂಪು ಪಟ್ಟಿಯ ಕಾನೂನುಗಳನ್ನು ಮಾಡಿ, ಕೃಷಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಯುವಂತೆ ಮಾಡುತ್ತಿವೆಯೇ ವಿನಃ ವೈಜ್ಞಾನಿಕವಾಗಿ ಚಿಂತಿಸಿ ಅನವಶ್ಯಕ ಕಾನೂನುಗಳನ್ನು ತೆಗೆದುಹಾಕುವ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಒಂದು ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ದೂರುಗಳಿಗೆ ಕೂಡಲೇ ಸ್ಪಂದಿಸುವ, ಉತ್ತರಿಸುವ ವ್ಯವಸ್ಥೆ ಇರಬೇಕು.
ಗ್ರಾಮ ಪಂಚಾಯತಿಯಲ್ಲಿ 9/11 ದಾಖಲೆ ಮಾಡಿಕೊಡಲು ಏಕೆ ಇಷ್ಟು ವಿಳಂಬ ಎಂದು ಕೇಳಿದರೆ ಅಲ್ಲಿ ಅವರಿಗೆ ಕೆಲಸದ ಹೊರೆ ಇದೆ ಎಂದು ಹೇಳುತ್ತಾರೆ. ಪಂಚಾಯತಿಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲ. ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸರಕಾರ ನೇಮಕ ಮಾಡುವುದಿಲ್ಲ. ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಎರಡೆರಡು ಗ್ರಾಮ ಪಂಚಾಯತಿಗೆ ನೇಮಕ ಮಾಡಿದೆ ಎಂದು ಹೇಳುತ್ತಾರೆ. ಸರ್ಕಾರವು ಜನರಿಗೆ ತೊಂದರೆದಾಯಕವಾದ ಯಾವ ಘನ ಉದ್ದೇಶವನ್ನೂ ಸಾಧಿಸದ 9/11 ದಾಖಲೆಯನ್ನು ಕಡ್ಡಾಯ ಮಾಡುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ತಿಳಿಯುವುದಿಲ್ಲ. ಈ 9/11 ಎಂಬ ದಾಖಲೆ ಅಗತ್ಯವೇ ಇಲ್ಲ. ಹಿಂದೆ ನನ್ನ ತಂದೆಯವರು ಮನೆ ಕಟ್ಟಿಸಿದಾಗ 9/11 ಎಂಬ ದಾಖಲೆ ಆಗಬೇಕು ಎಂದು ಇರಲೇ ಇಲ್ಲ. ಆದರೂ ಅದು ಇಲ್ಲವೆಂದು ಯಾವುದೇ ತೊಂದರೆ ಆಗಿಲ್ಲ. ನೆರೆಯ ಕೇರಳ ರಾಜ್ಯದಲ್ಲಿ 9/11 ದಾಖಲೆ ಅಗತ್ಯ ಎಂಬ ಕಾನೂನು ಇಲ್ಲ. ಹಾಗೆಂದು ಅಲ್ಲಿ ಯಾವುದೇ ತೊಂದರೆ ಆಗಿಲ್ಲ. ಹೀಗಿರುವಾಗ ಕರ್ನಾಟಕವು ಯಾಕೆ ಜನರಿಗೆ ಅದರಲ್ಲೂ ಗ್ರಾಮೀಣ ಕೃಷಿಕರನ್ನು ಅನಾವಶ್ಯಕವಾಗಿ ಸರ್ಕಾರೀ ಕಛೇರಿಗಳಿಗೆ ಅಲೆದಾಡಿಸುವ ಕಾನೂನು ಮಾಡಿ ಜನಸಾಮಾನ್ಯರನ್ನು ಪೀಡಿಸುತ್ತಿದೆ? 9/11 ಕಾನೂನು ಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆಯೇ? ಅಂಥ ಕಾನೂನು ಬೇಕೆಂದು ಜನರು ಒತ್ತಾಯ ಮಾಡಿಲ್ಲ. ಹೀಗಿದ್ದರೂ ಜನರ ಮೇಲೆ ಅನವಶ್ಯಕ ಕಾನೂನುಗಳನ್ನು ಹೇರುವುದು ಹೇಗೆ ಪ್ರಜಾಪ್ರಭುತ್ವ ಆಗುತ್ತದೆ?
ಮನೆ ಕಟ್ಟಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯ ಮತ್ತು ಕಡ್ಡಾಯ. ಅದಕ್ಕಾಗಿ 9/11 ದಾಖಲೆ ಮಾಡಿಸಬೇಕಾಗಿರುವುದೂ ಕಡ್ಡಾಯ. ಕೃಷಿಕರು ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಸುವಾಗ ಗ್ರಾಮದ ಇತರರ ಒಪ್ಪಿಗೆ ಬೇಕೆಂಬ ಅನವಶ್ಯಕ ಕಾನೂನು ತಂದು ಪರವಾನಗಿ ನೀಡುವುದನ್ನು ತಿಂಗಳುಗಳ ಕಾಲ ವಿಳಂಬ ಮಾಡಿ ಜನರಿಗೆ ತೊಂದರೆ ಕೊಡುವ ಅಗತ್ಯವೇನು? ಇಂಥ ಅಂಧ ಕಾನೂನುಗಳ ಅಗತ್ಯ ಇದೆಯೇ? ಇಂಥ ಕಾನೂನು ಬೇಕು ಎಂದು ಜನ ಒತ್ತಾಯ ಮಾಡಿದ್ದಾರೆಯೇ? ಇಂಥ ಒತ್ತಾಯವನ್ನು ಜನರು ಮಾಡಿಲ್ಲ. ಹೀಗಿದ್ದರೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರಕಾರ ಇಂಥ ಕಾನೂನುಗಳನ್ನು ಯಾಕೆ ಹೇರುತ್ತಿದೆ ಎಂದರೆ, ನಾವು ಯಾವುದನ್ನೂ ಪ್ರಶ್ನಿಸುವ ಮನೋಭಾವ ಹೊಂದಿಲ್ಲ, ಕುರಿಗಳಂತೆ ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಜನರ ಮೇಲೆ ಅನವಶ್ಯಕ ಕಾನೂನುಗಳನ್ನು ಹಿಂದೆ ಬ್ರಿಟಿಷರು ಹೇರುತ್ತಿದ್ದಂತೆ ಇಂದು ನಮ್ಮದೇ ಸರ್ಕಾರ ಹೇರುತ್ತಿದೆ.
ನೆರೆಯ ಕೇರಳದಲ್ಲಿ ಇಂಥ ಪ್ರಜಾಪೀಡಕ ಕಾನೂನುಗಳು ಇಲ್ಲ. ಅಲ್ಲಿ 1000 ಚದರ ಅಡಿ ವಿಸ್ತೀರ್ಣಕ್ಕಿಂಥ ದೊಡ್ಡದಾದ ಮನೆ ಕಟ್ಟಿಸಬೇಕಾದರೆ ಮಾತ್ರ ಪಂಚಾಯತಿನಿಂದ ಪರವಾನಗಿ ಪಡೆಯಬೇಕು. ಇದಕ್ಕಿಂತ ಕಡಿಮೆ ವಿಸ್ತೀರ್ಣದ ಮನೆ ಕಟ್ಟಿಸಬೇಕಾದರೆ ಕೃಷಿಕರು ಯಾವುದೇ ಪರವಾನಗಿ ಪಡೆಯಬೇಕಾದ ಅಗತ್ಯವೂ ಅಲ್ಲಿ ಇಲ್ಲ. ಅಲ್ಲಿ ಇಂಥ ಕಾನೂನು ಇಲ್ಲವೆಂದು ಯಾವುದೇ ತೊಂದರೆ ಆಗಿಲ್ಲ. ಹೀಗಿರುವಾಗ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೆ ಜನರಿಗೆ ತೊಂದರೆದಾಯಕವಾದ ಕಾನೂನುಗಳನ್ನು ಹೇರಿ ಕಛೇರಿಯಿಂದ ಕಛೇರಿಗೆ ಅಲೆಸುವುದು ಏಕೆ? ಸರಕಾರ ಎಂಬುದು ಪ್ರಜೆಗಳಿಗೆ ತಾಯಿಯ ಸ್ಥಾನದಲ್ಲಿರಬೇಕು. ಪ್ರಜೆಗಳ ಬೇಕು-ಬೇಡಗಳಿಗೆ ಸರಕಾರ ಸ್ಪಂದಿಸಬೇಕು. ಹೀಗಾಗಬೇಕಾದರೆ ಪ್ರಜೆಗಳು ತನ್ನವರು ಎಂಬ ಕಾಳಜಿ ಆಡಳಿತ ವ್ಯವಸ್ಥೆಗೆ ಇರಬೇಕು. ಇಲ್ಲಿ ಇಡೀ ಆಡಳಿತ ವ್ಯವಸ್ಥೆ ಪ್ರಜೆಗಳನ್ನು ಪರಕೀಯರು ಎಂದು ತಿಳಿದು ಕಾನೂನುಗಳನ್ನು ರೂಪಿಸಿರುವುದು ಕಂಡುಬರುತ್ತದೆ. ಇಲ್ಲದಿದ್ದರೆ ಯಾವ ದೇಶದಲ್ಲಿಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಬೇಕಾದರೆ ಕರ್ನಾಟಕದಲ್ಲಿ ಇರುವಂಥ ಅನವಶ್ಯಕ, ಅವೈಜ್ಞಾನಿಕ, ಅರ್ಥವಿಲ್ಲದ ಕಾನೂನುಗಳು ಇರಲು ಸಾಧ್ಯವೇ ಇಲ್ಲ.