ಗೆಳೆಯ ರೋಹಿತ್ ಚಕ್ರತೀರ್ಥರ ವೈವಿಧ್ಯಮಯ ಲೇಖನಗಳ ಈ ಸಂಗ್ರಹಕ್ಕೆ ಮುನ್ನುಡಿಯ ರೂಪದಲ್ಲಿ ತುಂಬ ಸಂತೋಷದಿಂದ ನಾಲ್ಕು ಮಾತುಗಳನ್ನು ಬರೆಯುತ್ತಿದ್ದೇನೆ. ರೋಹಿತರಿಗೆ ಸಾಹಿತ್ಯ, ಕಲೆ,ಪತ್ರಿಕೋದ್ಯಮ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಆಳವಾದ ಆಸಕ್ತಿಯಷ್ಟೇ ಅಲ್ಲ, ಸಾಕಷ್ಟು ಪರಿಶ್ರಮವೂ ಇದೆ. ಈ ಸಂಕಲನದಲ್ಲಿರುವ ಲೇಖನಗಳ ಮೇಲೆ ತುಸು ಕಣ್ಣಾಡಿಸಿದರೂ ಸಾಕು,ಅವರ ಆಸಕ್ತಿ ಎಷ್ಟು ವ್ಯಾಪಕವಾಗಿದೆಯೆಂದು ತಿಳಿಯುತ್ತದೆ. ಇಲ್ಲಿ ಕೆ.ಎಸ್.ನ., ನಿಸಾರ್ ಅಹಮದ್,ಸುಬ್ರಾಯ ಚೊಕ್ಕಾಡಿ ಮೊದಲಾದವರ ಕಾವ್ಯದ ಬಗ್ಗೆ ಮೆಚ್ಚುಗೆಯ ಜೊತೆಜೊತೆಗೇ ಸೂಕ್ಷ್ಮ ಒಳನೋಟಗಳೂ ಇವೆ. ಅಡಿಗರ’ಶ್ರೀರಾಮನವಮಿಯ ದಿವಸ’ ಎಂಬ ಬಹುಚರ್ಚಿತ ಕವನವನ್ನು ಕುರಿತು ಅವರು ಬರೆದಿರುವ ಸುದೀರ್ಘ ಲೇಖನ ಇದುವರೆಗೆ ಆ ಕವನದ ಬಗ್ಗೆ ನಮ್ಮಲ್ಲಿ ಬಂದಿರುವ ವಿಮರ್ಶೆಗೆ ಹೊಸ ವ್ಯಾಖ್ಯಾನವೊಂದನ್ನು ಸೇರಿಸುವಷ್ಟು ಸ್ವೋಪಜ್ಞವಾಗಿದೆ. ಶಿವರಾಮ ಕಾರಂತರನ್ನು ಕುರಿತ ಬರಹ ಅವರ ದೈತ್ಯ ಪ್ರತಿಭೆಯನ್ನು ಚಿತ್ರಿಸಿದರೆ ತ.ಸು. ಶಾಮರಾಯರನ್ನು ಕುರಿತ ಲೇಖನ ಅವರ ಮಾನವೀಯ ಮುಖವನ್ನು ಅತ್ಯಂತ ಆತ್ಮೀಯವಾಗಿ ಪರಿಚಯಿಸುತ್ತದೆ. ಪಾ.ವೆಂ. ಆಚಾರ್ಯರನ್ನು ಸ್ವತಃ ನೋಡಿರದ ರೋಹಿತರು ಅವರ ಜೊತೆ ನಡೆಸಿರುವ ಕಾಲ್ಪನಿಕ ಸಂದರ್ಶನವಂತೂ ತುಂಬ ಕುತೂಹಲಕರವಾಗಿದೆ. ಆಚಾರ್ಯರಂಥ ಪತ್ರಕರ್ತರನ್ನು ಆಳವಾಗಿ ಓದದೆ,ಅವರ ವಿಚಾರಸರಣಿಯನ್ನು ಅಧ್ಯಯನ ಮಾಡದೆ,ಅವರ ಮಾತಿನ ಧಾಟಿಯನ್ನು ಅನುಸರಿಸದೆ ಇಂಥ ಅರ್ಥಪೂರ್ಣ ಸಂದರ್ಶನ ಸಾಧ್ಯವಾಗದು. ಸಂತೋಷಕುಮಾರ ಗುಲ್ವಾಡಿಯವರನ್ನು ಕುರಿತ ಬರಹದಲ್ಲಿ “ನಮ್ಮ ಜೀವನದಲ್ಲಿ ಹಲವಾರು ವ್ಯಕ್ತಿತ್ವಗಳು ಪ್ಲಾಟ್‍ಫಾರ್ಮಿನ ಟ್ರೇನುಗಳಂತೆ ಬಂದುಹೋಗುತ್ತವೆ. ಆದರೆ ಎಲ್ಲೋ ಒಂದಷ್ಟು ಮಾತ್ರ ನಮ್ಮೆದುರು ನಿಲ್ಲುತ್ತವೆ, ನಮ್ಮನ್ನು ಹತ್ತಿಸಿಕೊಳ್ಳುತ್ತವೆ”ಎಂಬ ಸಾಲುಗಳಿದ್ದು ಅವು ಬರಹಗಾರರನ್ನು ಬೆಳೆಸಿದ ಗುಲ್ವಾಡಿಯವರ ವ್ಯಕ್ತಿತ್ವವನ್ನೇ ಸೂತ್ರರೂಪದಲ್ಲಿ ಕಟ್ಟಿಕೊಡುವಂತಿವೆ. ಜಿ.ಟಿ.ನಾರಾಯಣರಾಯರನ್ನು ಹಾಗೂ ಜಿ.ವೆಂಕಟಸುಬ್ಬಯ್ಯನವರನ್ನು ಕುರಿತ ಪ್ರಬಂಧಗಳು ಅನೇಕ ಕುತೂಹಲಕರ ಪ್ರಸಂಗಗಳನ್ನು ಚಿತ್ರಿಸುವುದರಿಂದ ಓದುಗರಿಗೆ ಆಪ್ತವಾಗುತ್ತವೆ. ವಿಲಿಯಂ ಬಕ್ ಬಗ್ಗೆ ಇರುವ ಲೇಖನದಲ್ಲಿ ರಾಮಾಯಣ, ಮಹಾಭಾರತಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಆ ಮಹಾಶಯನ ಬದುಕು ಒಂದು ಪತ್ತೆದಾರಿ ಕತೆಯಂತೆ ಅನಾವರಣಗೊಂಡಿದೆ. (ಗೋಪಾಲಕೃಷ್ಣ ಅಡಿಗರು ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿ ವಿಲಿಯಂ ಬಕ್ ಅವರನ್ನು ಭೇಟಿಯಾಗಿದ್ದುಂಟು.)
ಹಲವು ಪೀಳಿಗೆಗಳ ಮಕ್ಕಳನ್ನು ರಂಜಿಸಿದ’ಚಂದಮಾಮ’ ಮತ್ತು ‘ಸಂದೇಶ್’ ಪತ್ರಿಕೆಗಳ ಸಾಧನೆಗಳನ್ನು ವಿವರಿಸುವುದಕ್ಕಾಗಿ ರೋಹಿತರು ಎಷ್ಟೆಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದಾರೆಂದು ಆಶ್ಚರ್ಯವಾಗುತ್ತದೆ. ಈ ಮಾತು ಷೇಕ್ಸ್‍ಪಿಯರನನ್ನು, ಜಾನ್ ಹಿಗ್ಗಿನ್ಸ್‍ನನ್ನು ಕುರಿತ ಲೇಖನಗಳಿಗೂ ಸಲ್ಲುತ್ತದೆ. ಆದರೆ ‘ಸೆಕೆಂಡ್‍ಹ್ಯಾಂಡ್ ಪುಸ್ತಕ ಲೋಕ’ ರೋಹಿತರ ಸ್ವಾನುಭವವನ್ನು ಆಧರಿಸಿದ ಲೇಖನ. ಹಾಗಾಗಿ ಇಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಪ್ರಸಂಗಗಳಿಗೆ ಬದಲಾಗಿ ಅವರ ಸ್ವಾನುಭವವೇ ಭಾವಗೀತೆಯೊಂದರ ಲಾಲಿತ್ಯದಂತೆ ಮನ ಮೋಹಕವಾಗಿದೆಯೆನ್ನಬೇಕು. ಸೆಕೆಂಡ್ಡ್ ಹ್ಯಾಂಡ್ ಪುಸ್ತಕಗಳಲ್ಲಿ “ಯಾರೋ ಬರೆದ ಚೆಕ್ಕುಗಳು ಕೆಲವು ಸಲ ಸಿಗುವುದುಂಟು. ಬರೆದರೂ ಕೊಡಲು ಧೈರ್ಯ ಸಾಲದೆ ಪುಟಗಳ ನಡುವೆ ಮುಖ ಹುದುಗಿಸಿ ಅಡಗಿಸಿಟ್ಟ ಪ್ರೇಮ ಪತ್ರಗಳು ಸಿಗುವುದುಂಟು. ಯಾವುದೋ ಟೈಲರಂಗಡಿಯ ಬಿಲ್ಲು, ಕಮ್ತಿ ಅಂಗಡಿಯ ಅಕ್ಕಿ ಬೇಳೆ ಲೆಕ್ಕ, ಮರ್ಫಿ ರೇಡಿಯೋ ಕೊಂಡದ್ದಕ್ಕೆ ಅಂಗಡಿಯವನು ಕೊಟ್ಟ ಚಿತ್ತಾಕರ್ಷಕ ರಸೀತಿ…. ‘ಈ ಪತ್ರ ತಲುಪಿದೊಡನೆ ಶೀಘ್ರ ಬರುವುದು’ ಎಂಬ ದುರಂತದ ಛಾಯೆ ಇರುವ ತಂತಿ…. ಎಷ್ಟೆಲ್ಲ ಅಗಣಿತ ರತ್ನಗಳು ಸಿಗುತ್ತಿದ್ದವು ಅಲ್ಲಿ! ಒಮ್ಮೆ ಒಬ್ಬನಿಗೆ ಚತುರ್ದಳ ಅಳತೆಯ ಪುಸ್ತಕದಲ್ಲಿ ಯಾವುದೋ ಮನುಷ್ಯನ ತಲೆಯ ಎಕ್ಸ್ ರೇಸಿಕ್ಕಿತ್ತಂತೆ! ಅದರಲ್ಲಿ ಇನ್ನೂ ನೆಟ್ಟು ಕೂತ ಗುಂಡು ಚೆನ್ನಾಗಿ ಕಾಣಿಸುತ್ತಿತ್ತಂತೆ! ಅಂಥದೊಂದು ಪುಸ್ತಕ ಕೈಗೆ ಬಂದ ಮೇಲೆ, ಅದು ಎಲ್ಲಿಂದ ಬಂತು ಎಂದು ಕುತೂಹಲಗೊಂಡು ಪತ್ತೇದಾರಿಕೆ ಶುರು ಮಾಡಿ,ಎಂದೋ ಆಗಿ ಮುಚ್ಚಿ ಹೋಗಿದ್ದ ಕೊಲೆ ಕೇಸು ತೆರೆದು,ಕೊನೆಗೆ ತಪ್ಪಿತಸ್ಥನನ್ನು ಹುಡುಕಿ ಶಿಕ್ಷೆ ಕೊಡಿಸುವ ಕತೆ ಕಲ್ಪಿಸಿಕೊಳ್ಳಿ. ಪತ್ತೇದಾರಿ ಲೇಖಕರಿಗೊಂಡು ಅದ್ಭುತ ಸರಕು ಅದು!” ನುರಿತ ಲಲಿತ ಪ್ರಬಂಧಕಾರನಷ್ಟೆ ಹೀಗೆ ಬರೆಯಬಲ್ಲ.
ಈ ಸಂಕಲನದ ಬರಹಗಳೆಲ್ಲವೂ ಈ ಮೊದಲೇ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪತ್ರಿಕೆಗಳಲ್ಲಿ ಸಾಮಯಕ ವಿಷಯಗಳ ಬಗೆಗೆ ಪ್ರಕಟವಾಗುವ ಲೇಖನಗಳು ಇತರ ಸುದ್ದಿ ಬರಹಗಳಿಗಿಂತ ಭಿನ್ನವಾಗಿರುವುದರಿಂದಲೇ ಅವು ಓದುಗನೊಡನೆಯ ಸಂವಾದಕ್ಕೆ ಇಂಬು ಕೊಡುತ್ತವೆ. ಪತ್ರಿಕೆಗಳಿಗೆ ಬರೆಯುವವನು ತನಗೇ ಅರಿವಿಲ್ಲದಂತೆ ಬರೆಯುವುದನ್ನು ಒಂದು ಒಂದು ರೂಢಿಯನ್ನಾಗಿ ಮಾಡಿಕೊಳ್ಳುತ್ತಾನಷ್ಟೆ. ಹಾಗೆ ರೂಢಿ ಮಾಡಿಕೊಳ್ಳುತ್ತಲೇ ಓದುಗರೂ ಒಂದು ಜಾಡಿಗೆ ಬೀಳದ ಹಾಗೆ, ತನ್ನ ವಿಚಾರಗಳನ್ನು ಸುಲಭವಾಗಿ ಅಂಗೀಕರಿಸದ ಹಾಗೆ ತನ್ನ ಬರಹಗಳಲ್ಲಿ ಅಚ್ಚರಿಯನ್ನು ಹೇಗೋ ಹಾಗೆ ಒಂದು ಬಗೆಯ ಸವಾಲನ್ನೂ ಪಡಿಮೂಡಿಸಬೇಕಾಗುತ್ತದೆ. ಅದನ್ನು ಸಾಧಿಸಬಲ್ಲ ಒಂದು ಮಾರ್ಗವೆಂದರೆ ಅಪರೂಪದ, ಅಪರಿಚಿತವಾದ ವಿಷಯಗಳ ಸಂಕೀರ್ಣತೆಯನ್ನು ಸಹಪಾಠಿಗೆ ತಿಳಿಸುವ ಹಾಗೆ ನಿರೂಪಿಸುವುದು.
ಪತ್ರಿಕೆಗಳಿಗೆ ಬರೆಯುವವನು ತಾನು ಬರೆದ ಲೇಖನಗಳಿಗೆ ಎಷ್ಟು ಮಟ್ಟಿನ ತಾಳಿಕೆಯ ಗುಣವಿದೆ,ಎಷ್ಟು ಮಟ್ಟಿಗೆ ಅವು ಕಾಲಾತೀತವಾಗಿವೆ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯವಾಗಿ ಪತ್ರಿಕಾ ಬರಹಗಳಲ್ಲಿ ಮಾಹಿತಿಯೇ ಹೆಚ್ಚು, ವಿಚಾರ ಮಂಥನ ಕಡಿಮೆ. ಇಂದಿನ ಇಂಟರ್ನೆಟ್ ಯುಗದಲ್ಲಂತೂ ಮಾಹಿತಿಯನ್ನು ಕಲೆಹಾಕುವುದು ತೀರ ಸುಲಭ. ಆದರೆ ಕಲೆ ಹಾಕಿದ ಮಾಹಿತಿಯನ್ನು ಶೋಧಿಸಿ, ವಿಶ್ಲೇಷಿಸಿ, ಕಾಲಧರ್ಮಕ್ಕನುಗುಣವಾಗಿ ವ್ಯಾಖ್ಯಾನಿಸಿದಾಗ ಮಾತ್ರ ಮಾಹಿತಿ ಮಾಹಿತಿಯಾಗಿ ಉಳಿಯುವುದಿಲ್ಲ. ರೋಹಿತರ ಈ ಸಂಕಲನದ ಬರಹಗಳು ಸದಭಿರುಚಿಯನ್ನು ಹೇಗೋ ಹಾಗೆ ಅವರ ತರ್ಕ ಬದ್ಧ ವಿಚಾರ ಸರಣಿಯನ್ನೂ ಒಟ್ಟಿಗೆ ಪ್ರಕಾಶಪಡಿಸುತ್ತವೆ. ಇಲ್ಲಿ ಕವಿ, ಲೇಖಕರನ್ನು, ಸಾಹಿತ್ಯ ಕೃತಿಗಳನ್ನು ಮೆಚ್ಚಿಕೊಳ್ಳುವ ಉದಾರ ಮನಸ್ಸಿದೆ, ಆಳವಾದ ಓದಿನಿಂದ ಪಡೆದ ಒಳನೋಟಗಳಿವೆ, ಅಷ್ಟಾಗಿ ದಾಖಲೆಯಾಗದ ಕೆಲವು ಪ್ರಸಂಗಗಳಿವೆ, ಗ್ರಾಚೋನ ದಣಿವರಿಯದ ಹಾಸ್ಯ ಪ್ರಜ್ಞೆಯಂತೆ ಪುಸ್ತಕದುದ್ದಕ್ಕೂ ಓದುಗರನ್ನು ಪ್ರಸನ್ನಗೊಳಿಸಬಲ್ಲ ಭಾಷೆಯಿದೆ,ಸೊಗಸಾದ ಗದ್ಯ ಶೈಲಿಯಿದೆ.
ಪ್ರಸಿದ್ಧ ಬ್ರಿಟಿಷ್ ಲೇಖಕ ಜಾರ್ಜ್ ಆರ್‍ವೆಲ್ ಗದ್ಯ ಪರಿಶುದ್ಧವಾಗಿರಬೇಕೆಂದು ಪ್ರತಿಪಾದಿಸುತ್ತಿದ್ದವನು. 1946ರಷ್ಟು ಹಿಂದೆ ಅವನು ಬರೆದ ‘ಪಾಲಿಟಿಕ್ಸ್ ಅಂಡ್ ದಿ ಇಂಗ್ಲಿಷ್ ಲಾಂಗ್ವೇಜ್’ ಎಂಬ ಪ್ರಬಂಧದಲ್ಲಿ ಆ ಕಾಲದ ಇಂಗ್ಲಿಷ್ ಬರಹಗಳ ಕೆಲವು ತುಣುಕುಗಳನ್ನು ಚಿಂದಿಯೆಬ್ಬಿಸಿದ್ದಾನೆ. ಅವನ ದೃಷ್ಟಿಯಲ್ಲಿ ಗದ್ಯ ಕೊಳೆತರೆ ವಿಚಾರ ಕೊಳೆಯುತ್ತದೆ; ಸಂವಹನದ ಎಲ್ಲ ಸನ್ಮಾರ್ಗಗಳೂ ಮುಚ್ಚಿಕೊಳ್ಳುತ್ತವೆ. ಸ್ವಾತಂತ್ರ್ಯಕ್ಕೂ ಗದ್ಯಕ್ಕೂ ನೇರ ಸಂಬಂಧವಿದೆಯೆಂದು ಕೂಡ ಅವನು ವಾದಿಸಿದ್ದುಂಟು. ಸ್ವಾತಂತ್ರ್ಯವನ್ನು ಕಡೆಗಣಿಸುವ ಅಧಿಕಾರಶಾಹಿ ಕೆಟ್ಟದಾಗಿ ಬರೆಯುತ್ತದೆ; ಅದು ಬಳಸುವ ಆಡಂಬರದ, ಬಡಾಯಿಯ ಪದಪುಂಜಗಳಲ್ಲಿ ನಿಜವಾದ ಅರ್ಥವಾಗಲೀ ಅಥವಾ ಯಾವುದೇ ಅರ್ಥವಾಗಲೀ ಇರುವುದಿಲ್ಲ. ಒಳ್ಳೆಯ ಬರಹಗಾರರಲ್ಲಿ ಅಪ್ಪಿ ತಪ್ಪಿ ಕೂಡ ಅಂಥ ಶಬ್ದಗಳಾಗಲೀ ಪದ ಪುಂಜಗಳಾಗಲೀ ಕಾಣಿಸಿಕೊಳ್ಳುವುದಿಲ್ಲ. ಮುಖ್ಯವಾದ ಮಾತೆಂದರೆ ನಾವು ಸ್ಪಷ್ಟವಾಗಿ ಬರೆಯುವುದನ್ನು, ಸ್ಪಷ್ಟವಾಗಿ ಮಾತಾಡುವುದನ್ನು ಕಲಿತರೆ, ಬಹು ಮಟ್ಟಿಗೆ ಸ್ಪಷ್ಟವಾಗಿ ಚಿಂತಿಸುವುದನ್ನೂ ಕಲಿತಂತೆ; ಹಾಗೆ ಕಲಿತಾಗ ನಾವು ಹೆಚ್ಚು ಕಡಿಮೆ ಸ್ವತಂತ್ರರಾದಂತೆ.
ಬಳಸಿ ಬಳಸಿ ಸವಕಲಾದ ಸಿದ್ಧ ಮಾದರಿಯ ಪದಪುಂಜಗಳನ್ನು ಬಳಸುವರು ಶಬ್ದಗಳಿಗಾಗಿ ಪರದಾಡುವುದಿಲ್ಲ. ಅವರು ಬಳಸುವ ಹಳಸಲು ಶಬ್ದಗಳು ಅವರ ವಾಕ್ಯಗಳಲ್ಲಿ ಎಷ್ಟು ಚೆನ್ನಾಗಿ ಹೊಂದಿಕೊಂಡಿರುತ್ತವೆಯೆಂದರೆ ಆ ವಾಕ್ಯಗಳು ತೀರ ಸಹಜವಾಗಿರುವಂತೆ ತೋರುತ್ತವೆ. ಹಾಗೆ ನೋಡಿದರೆ ಹಳಸಲು ಉಪಮೆಗಳನ್ನು, ರೂಪಕಗಳನ್ನು,ಪದಪುಂಜಗಳನ್ನು ಬಳಸುವವರು ಹೆಚ್ಚು ಯೋಚಿಸುವುದೇ ಇಲ್ಲವೇನೊ. ಹಾಗಾಗಿ ಅವರ ವಾಕ್ಯಗಳು ಅವರಿಗಷ್ಟೇ ಅಲ್ಲ, ಓದುಗರಿಗೂ ಅಸ್ಪಷ್ಟವಾಗಿರುತ್ತದೆ.
ಒಂದು ವಿಷಯ ಓದುಗನ ಅನುಭವದ ಭಾಗವಾಗುವುದು ರೂಪಕದಿಂದಲೇ ಅಲ್ಲವೆ?ರೂಪಕದ ಮುಖ್ಯೋದ್ದೇಶ ಒಂದು ಪ್ರತಿಮೆಯ ದೃಶ್ಯೀಕರಣ. ಲೇಖಕರು ಸೃಷ್ಟಿಸುವ ಪ್ರತಿಮೆಗಳು ಪರಸ್ಪರ ಹೊಂದದಿದ್ದರೆ ಅವರು ಹೆಸರಿಸುತ್ತಿರುವ ವಸ್ತುಗಳನ್ನು ಅವರೇ, ಮನಸ್ಸಿನಲ್ಲಾದರೂ,ಕಲ್ಪಿಸಿಕೊಂಡಿಲ್ಲವೆಂದೇ ಅರ್ಥ.
ಸ್ಫಟಿಕ ಶುಭ್ರ ಭಾಷೆಯ ಪರಮ ಶತ್ರುವೇ ಅಪ್ರಾಮಾಣಿಕತೆ. ಲೇಖಕನ ನಿಜವಾದ ಹಾಗೂ ಆರೋಪಿಸಿಕೊಂಡ ಉದ್ದೇಶಗಳ ನಡುವೆ ಕಂದರವಿದ್ದಾಗ ಅವನು ದೊಡ್ಡ ದೊಡ್ಡ ಶಬ್ದಗಳನ್ನೂ,ಸವಕಲು ಪದ ಪುಂಜಗಳನ್ನೂ ಉಪಯೋಗಿಸುತ್ತಾನೆ. ಪದ ಅರ್ಥವನ್ನು ಹುಡುಕಿಕೊಳ್ಳಬೇಕೇ ಹೊರತು ಅರ್ಥ ಪದವನ್ನು ಹುಡುಕಿಕೊಳ್ಳುವಂತಿರಬಾರದು. ಒಳ್ಳೆಯ ಲೇಖಕ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಕಾಣಿಸಕೊಳ್ಳುವ ರೂಪಕವನ್ನಾಗಲೀ ಉಪಮೆಯನ್ನಾಗಲೀ ಉಪಯೋಗಿಸುವುದಿಲ್ಲ. ಅವನಿಗೆ ಸಣ್ಣದೊಂದು ಶಬ್ದ ಅಗತ್ಯವಾದ ಧ್ವನಿಯನ್ನು ಹೊರಡಿಸಬಲ್ಲುದಾದರೆ ದೊಡ್ಡದೆನಿಸುವ ಶಬ್ದ ಬೇಕಾಗುವುದಿಲ್ಲ. ಅವನು ತನ್ನ ಬರಹದಲ್ಲಿ ತೂರಿಕೊಂಡಿರಬಹುದಾದ ಅನಗತ್ಯ ಶಬ್ದಗಳನ್ನು ಹೊಡೆದು ಹಾಕುವವನು; ವಿಷಯವನ್ನು ಸುತ್ತಿ ಬಳಸಿ ವಿವರಿಸುವುದಕ್ಕಿಂತ ನೇರವಾಗಿ ಪ್ರವೇಶಿಸುಸುವವನು.
ಒಳ್ಳೆಯ ಲೇಖಕನಾದವನು ಪ್ರತಿಯೊಂದು ವಾಕ್ಯ ಬರೆಯುವಾಗಲೂ ಈ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನಂತೆ. ನಾನೇನು ಹೇಳಲು ಪ್ರಯತ್ನಿಸುತ್ತಿದ್ದೇನೆ? ನಾನು ಹೇಳಬೇಕಿರುವುದನ್ನು ಯಾವ ಶಬ್ದಗಳು ಅಭಿವ್ಯಕ್ತಿಗೊಳಿಸುತ್ತವೆ? ಯಾವ ನುಡಿಗಟ್ಟು ಅದನ್ನು ಸ್ಪಷ್ಟ ಪಡಿಸೀತು? ನಾನು ಬಳಸುವ ಪ್ರತಿಮೆ ಪರಿಣಾಮಕಾರಿಯಾಗುವಷ್ಟು ಹೊಸದಾಗಿದೆಯೆ? ರೋಹಿತರ ಈ ಸಂಕಲನವನ್ನು ಓದುವವರಿಗೆ ಅವರು ಮನ ಮುಟ್ಟುವಂತೆ ಎಷ್ಟೆಲ್ಲ ಪರಿಣಾಮಕಾರಿಯಾಗಿ ಬರೆಯುತ್ತಾರೆಂದು ಬೆರಗಾಗಬಹುದು. ಅವರದು ಒಳ್ಳೆಯ ಗದ್ಯದ ಲಕ್ಷಣಗಳೆಲ್ಲವನ್ನೂ ಒಳಗೊಂಡಿರುವ ಬರಹಗಳು. ಅವುಗಳಲ್ಲಿ ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿರುವ, ಚರ್ವಿತಚರ್ವಣವೆನ್ನಿಸುವ ಪ್ರಯೋಗಗಳೇ ಅಪರೂಪ. ನಿದರ್ಶನಕ್ಕಾಗಿ ಈ ಕೆಲವು ವಾಕ್ಯಗಳನ್ನು ನೋಡಬಹುದು: ‘ಪ್ರಶ್ನೆಗಳು ಸುಗ್ಗಿಯ ಗರಿಕೆಯಂತೆ ಚಿಗುರಿದವು’; ವಿಲಿಯಂ ಬಕ್‍ನನ್ನು ಕುರಿತು: ‘ದುರ್ಯೋದನನ ತೊಡೆ ಮುರಿಯಲು ಮುಂದಾಗುವ ಭೀಮನ ಹಣೆಯ ನೆರಿಗೆಗಳ ಲೆಕ್ಕವನ್ನೂ ಆತ ಕೊಡಬಲ್ಲ’; ಜಾನ್ ಹಿಗ್ಗಿನ್ಸ್ ಭಾಗವತರ ಬಗ್ಗೆ ಬರೆಯುತ್ತ ‘ಆ ಹೆಸರಿನ ಮೊದಲೆರಡು ಶಬ್ದಗಳು ಪಿತ್ರಾರ್ಜಿತ ಆಸ್ತಿಯಾದರೆ,ಕೊನೆಯ ಉಪಾಧಿ ಈ ಮಹಾಶಯನ ಸ್ವಯಾರ್ಜಿತ ಗಳಿಕೆ’; ‘ಗೋವರ್ದನ ಗಿರಿಧಾರಿ ಹಾಡಿದರೆ ಹುತ್ತಗಟ್ಟುವ ಚಿತ್ತ’; ನರಸಿಂಹಸ್ವಾಮಿಯವರ ಬರಹದಲ್ಲಿ ಒಂದೆಡೆ ‘ಅವರ ರೈಲು ನವೋದಯದ ಪೂರ್ವಕಾಲದ ಸ್ಟೇಷನ್ನಿನಿಂದ ಹೊರಟರೂ ನವ್ಯದ ಪ್ಲಾಟ್‍ಫಾರ್ಮಿನಲ್ಲೂ ಸ್ವಲ್ಪ ಕಾಲ ತಂಗಿತು’; ಕಾರಂತರ ಬಗ್ಗೆ ‘ಅವರನ್ನು ಸಮುದ್ರ ಎನ್ನುವುದಕ್ಕಿಂತ ಬೆಟ್ಟ ಕಾನನ ಬಯಲುಗಳಲ್ಲಿ ದಾರಿ ಮಾಡಿಕೊಳ್ಳುತ್ತ ಹರಿವ ನದಿಗೆ ಹೋಲಿಸಬಹುದೇನೋ’; ಗುಲ್ವಾಡಿಯವರ ಬಗ್ಗೆ ‘ಲೇಖಕನಿಗೆ ಅಪ್ರಿಯವಾದ ಸತ್ಯ ಹೇಳಬಾರದೆಂಬ ಭೂತದಯೆಯನ್ನು ಬದುಕಿನ ಧರ್ಮವೆನ್ನುವಂತೆ ಅವರು ಪಾಲಿಸುತ್ತಿದ್ದರು’;ಜಿ.ವೆಂಕಟಸುಬ್ಬಯ್ಯನವರ ವಿಜ್ಞಾನ ಬರಹಗಳನ್ನು ಕುರಿತು: ‘ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗಾಯಿತು’; ‘ಜೀವನಚರಿತ್ರೆಯನ್ನು ಹೇಳುವಾಗ – ಯಾವುದನ್ನು ಎಷ್ಟು, ಹೇಗೆ, ಎಲ್ಲಿ ಹೇಳಬೇಕು – ಎನ್ನುವುದರಲ್ಲಿ ಅವರ ಕೈ ಸೂಟು ಹೊಲಿಯುವ ದರ್ಜಿಯಷ್ಟೇ ನಿಖರ’; ಅನಂತಮೂರ್ತಿ ‘ಕೊನೆಯ 2-3 ವರ್ಷಗಳಲ್ಲಿ ಆಡುವವರ ಹಲ್ಲಿಗೆ ಕಡಲೆಯಂತೆ ಸಿಕ್ಕಿಕೊಂಡರು’.
ಇವು ಒಂದೊಂದೂ ನಮ್ಮ ಮನಸ್ಸಿನಲ್ಲಿ ಹೊಸ ಹೊಸ ಚಿತ್ರಗಳನ್ನು ಮೂಡಿಸುವ ಮೂಲಕ ಉದ್ದೇಶಿತ ವ್ಯಕ್ತಿಯ ವೈಶಿಷ್ಟ್ಯವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತವೆ.
ಹಾಗೆಂದು ಇವರಲ್ಲಿ ಚರ್ವಿತಚರ್ವಣದ ಅಥವಾ ಕ್ಲೀಶೆಯ ಸೋಂಕೇ ಇಲ್ಲವೆನ್ನಲಾರೆ. ನನ್ನ ಕಣ್ಣಿಗೆ ಬಿದ್ದ ಒಂದು ಕ್ಷೀಶೆ ‘ಸೇವ ನಮಿರಾಜ ಮಲ್ಲರಂತಹ ಕನ್ನಡದ ಕಟ್ಟಾಳು’. ಈ ಕಟ್ಟಾಳು ಎಂದರೇನು? ಎಷ್ಟು ಹಳಸಲಾಗಿದೆಯೆಂದರೆ ಇದನ್ನು ಓದಿದಾಗ ನಮಗೇನೂ ಅನ್ನಿಸುವುದಿಲ್ಲ.
ಸುಕುಮಾರ್ ರೇ ಅವರನ್ನು ‘ಅಸಂಗತ ಸಾಹಿತ್ಯ ಪ್ರವರ್ತಕ’ ಎಂದು ಕರೆದಿದ್ದಾರೆ ರೋಹಿತ್. ಅವರು’ಅಸಂಗತ’ ಎಂಬುದನ್ನು ಇಂಗ್ಲಿಷಿನ ‘ನಾನ್‍ಸೆನ್ಸ್’ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಆದರೆ ಕನ್ನಡದಲ್ಲಿ ಇಂಗ್ಲಿಷಿನ ‘ಥಿಯೇಟರ್ ಆಫ್ ದಿ ಅಬ್ಸರ್ಡ್’ ಎಂಬುದಕ್ಕೆ ಈಗಾಗಲೇ ‘ಅಸಂಗತ ನಾಟಕ’ಎಂದು ನಾಮಕರಣವಾಗಿಬಿಟ್ಟಿದೆ. ಇನ್ನು ಕೆ.ಎಸ್.ನ. ಬಗ್ಗೆ ಬರೆದಿರುವ ಲೇಖನದಲ್ಲಿ ಅಡಿಗರ ‘ಪುಷ್ಪಕವಿಯ ಪರಾಕು’ ಕವನವನ್ನು ಪ್ರಸ್ತಾಪಿಸುವ ರೋಹಿತರು ಅದಕ್ಕೆ ನಮ್ಮ ವಿಮರ್ಶಕರು ಲಾಗಾಯಿತಿನಿಂದ ಕೊಡುತ್ತಿರುವ ಕಾರಣವನ್ನೇ ಮುಂದೂಡುತ್ತಾರೆಂದು ಅನ್ನಿಸುತ್ತದೆ. ಅಡಿಗರು ನರಸಿಂಹಸ್ವಾಮಿಯವರ ಕಾವ್ಯವನ್ನು ಬೀಳುಗಳೆಯಲೆಂದೇ ‘ಪುಷ್ಪಕವಿಯ ಪರಾಕು’ ಎಂಬ ವ್ಯಂಗ್ಯವೇ ಪ್ರಧಾನವಾಗಿರುವ ಕವಿತೆಯನ್ನು ಬರೆದರೆಂದು ಯಾವತ್ತು, ಯಾವ ಪುಣ್ಯಾತ್ಮ ಕಂಡು ಹಿಡಿದನೋ ಗೊತ್ತಿಲ್ಲ. ಹಲವು ಸಂದರ್ಭಗಳಲ್ಲಿ ಅಡಿಗರೇ ಕೆ.ಎಸ್.ನ. ತುಂಬ ಒಳ್ಳೆಯ ಕವಿಯೆಂದು ಹೇಳಿದ್ದುಂಟು. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾನೊಮ್ಮೆ ಅವರನ್ನು ‘ಆ ಕವನವನ್ನೇಕೆ ಬರೆದಿರಿ?’ ಎಂದು ಕೇಳಿದ್ದುಂಟು. ಅದಕ್ಕೆ ಅವರು ಕೊಟ್ಟ ಉತ್ತರದ ಸಾರಾಂಶ ಇದು: ಮೈಸೂರಿನಲ್ಲಿ ಅಡಿಗರು ಪಿಲೋಮಿನಾಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಸಂಜೆಯ ಹೊತ್ತು ಬಹುಶಃ ಹೌಸಿಂಗ್ ಬೋರ್ಡಿನಲ್ಲಿದ್ದ ಕೆ.ಎಸ್.ನ. ಅಲ್ಲಿಗೆ ಹೋಗುತ್ತಿದ್ದರಂತೆ. ಇಬ್ಬರದೂ ಒಂದು ಹೋಟೆಲಿನತ್ತ ವಾಕಿಂಗ್. ಆ ಹೊತ್ತಿಗೇ ಕೆ.ಎಸ್.ನ. ತಮ್ಮ ‘ಮೈಸೂರ ಮಲ್ಲಿಗೆ’ಯಿಂದ ತುಂಬ ಪ್ರಸಿದ್ಧರಾಗಿದ್ದರಷ್ಟೆ. ದಾರಿಯಲ್ಲಿ ಕೆಲವರು ಅವರನ್ನು ಗುರುತಿಸುತ್ತಿದ್ದರು. ಹಾಗೆ ಗುರುತಿಸಿ ಮಾತಾಡಬಯಸಿದವರ ಪಾಲಿಗೆ ದೊರೆಯುತ್ತಿದ್ದದ್ದು ಕೆ.ಎಸ್.ನ. ಅವರ ದಿವ್ಯ ನಿರ್ಲಕ್ಷ್ಯ. “ಅಂಥ ಸಂದರ್ಭಗಳಲ್ಲಿ ನನಗೆ ತುಂಬ ಸಿಟ್ಟು ಬರುತ್ತಿತ್ತಯ್ಯ. ಹಾಗಾಗಿ ಕೊನೆಗೊಂದು ದಿನ ನಾನು ಆ ಕವನವನ್ನು ಬರೆಯಲೇಬೇಕಾಯಿತು” ಎಂದಿದ್ದರು ಅಡಿಗರು.’ಪುಷ್ಪಕವಿಯ ಪರಾಕು’ ಕವಿತೆಯನ್ನು ಸೂಕ್ಷ್ಮವಾಗಿ ಓದಿದವರಿಗೆ ಅದರಲ್ಲಿ ಕೆ.ಎಸ್.ನ. ಅವರ ಸುಕುಮಾರ ಕಾವ್ಯದ ವಿಡಂಬನೆಯೇನೂ ಕಾಣಲಾರದಷ್ಟೆ.
ಇವು ಯಾವುವೂ ದೋಷಗಳಲ್ಲ. ರೋಹಿತರಿಗೆ ಇವುಗಳ ಅರಿವಿಲ್ಲವೆಂದೂ ಹೇಳಲಾರೆ. ಯಾಕೆಂದರೆ ಭಾಷೆಗೆ ಹಾಗೂ ವಿಷಯ ವಿನ್ಯಾಸಕ್ಕೆ ಸಂಬಂಧಿಸಿದಂತೆ ಅವರದು ಸೂಕ್ಷ್ಮಗ್ರಾಹಿಯಾದ ಮನಸ್ಸು. ಅದು ಸರ್ವಧಾರಿಯೂ ಹೌದು. ಸಾಹಿತ್ಯ, ಕಲೆ, ವಿಜ್ಞಾನಗಳ ಬಗ್ಗೆ ಬರೆಯುವಂತೆಯೇ ಅವರು ರಾಜಕೀಯವನ್ನು ಕುರಿತು, ಆರ್ಥಿಕತೆಯನ್ನು ಕುರಿತು, ಸಮಕಾಲೀನ ವಿದ್ಯಮಾನಗಳನ್ನು ಕುರಿತು ಆಳವಾಗಿ ಯೋಚಿಸಬಲ್ಲರು. ಆ ಯೋಚನೆಗಳೂ ಬರಹಕ್ಕಿಳಿಯಲಿ, ಅವರ ವಿಮರ್ಶಾ ಪ್ರಜ್ಞೆ ಇನ್ನಷ್ಟು ಹರಿತವಾಗಲಿ ಎಂಬ ಹಾರೈಕೆಯೊಡನೆ ‘ಎಂದೆಂದೂ ಬಾಡದ’ ಈ ಮಲ್ಲಿಗೆಗಾಗಿ ಅವರನ್ನು ಅಭಿನಂದಿಸುತ್ತಿದ್ದೇನೆ.
– ಎಸ್. ದಿವಾಕರ್
(ರೋಹಿತ್ ಚಕ್ರತೀರ್ಥ ಬರೆದಿರುವ “ಎಂದೆಂದೂ ಬಾಡದ ಮಲ್ಲಿಗೆ” ಜೂನ್ ಇಪ್ಪತ್ತಾರರಂದು (June 26, 2016) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ಬಿಡುಗಡೆಯಾಗಲಿದೆ. ಈ ಕೃತಿಗೆ ಖ್ಯಾತ ವಿಮರ್ಶಕ ಶ್ರೀ ಎಸ್. ದಿವಾಕರ್ ಮುನ್ನುಡಿ ಬರೆದಿದ್ದರೆ, ಬೆನ್ನುಡಿ ಬರೆದವರು ಇನ್ನೋರ್ವ ಹೆಸರಾಂತ ವಿಮರ್ಶಕ,ಪ್ರಾಧ್ಯಾಪಕ ಶ್ರೀ ಮುರಳೀಧರ ಉಪಾಧ್ಯ ಹಿರಿಯಡಕ. ಕಾರ್ಯಕ್ರಮದಲ್ಲಿ ಮುಖ್ಯ ಆಮಂತ್ರಿತರಾಗಿ ಪಾಲ್ಗೊಳ್ಳುವ ನಾಡೋಜ ಶ್ರೀ ಎಸ್. ಆರ್. ರಾಮಸ್ವಾಮಿಯವರು ಕೃತಿಯ ಕುರಿತು ಮಾತಾಡಲಿದ್ದಾರೆ.)