ಸರಿ ಸಮಾರು ಬೆಳಿಗ್ಗೆ ಹತ್ತು ಗಂಟೆಯಾಗಿರಬಹುದು. ನಾನು ಆಗಿನ ಬಾಂಬೆ ಅಂದರೆ ಈಗಿನ ಮುಂಬೈಗೆ ಹೋಗಲು ಹರಿಹರ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದೆ. ಆಗ ಬೇಸಿಗೆ ಕಾಲ. ಬೇಸಿಗೆ ಎಂದರೆ ಅದರಲ್ಲೂ ಬಯಲು ಸೀಮೆ ಬೇಸಿಗೆ, ಬೇರೆ ಪ್ರದೇಶಕ್ಕೆ ಹೋಲಿಸಿದಾಗ ತುಸು ಹೆಚ್ಚು ಆದ್ದರಿಂದ ಹತ್ತು ಗಂಟೆಗಾಗಲೇ ಮೈ ಬಿಸಿ ಏರಿ ಬೆವರು ದೇಹದ ಎಲ್ಲಾ ಭಾಗಗಳಲ್ಲಿಯೂ ಇಳಿಯುತಿತ್ತು. ಇಷ್ಟೆಲ್ಲಾ ಆಗುವುದರಲ್ಲಿ ರೈಲಿನ ಬರುವುಕೆಯ ಶಬ್ದ ಬಹಳ ನೆಮ್ಮದಿಯನ್ನು ಕೊಟ್ಟಿತು. ನನ್ನ ಹತ್ತಿರ ಇದ್ದುದು ಎರಡು ಲಗೇಜ್. ಒಂದರಲ್ಲಿ ನನ್ನ ಬಟ್ಟೆಬರೆಯಾದರೆ ಇನ್ನೋಂದರಲ್ಲಿ ನನ್ನ ತಾಯಿ ಮಾಡಿಕೊಟ್ಟ ತಿಂಡಿ ತಿನಿಸುಗಳು. ತಿಂಡಿ ತಿನಿಸುಗಳು ನನಗಾಗಿ ಕೊಟ್ಟವಾದರೂ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡು ತಿಂದಾಗ ಸಿಗುತ್ತಿದ್ದ ಆನಂದ ಅದು ಬೇರೆಯದೇ ಆಗಿತ್ತು. ಹಾಗಾಗಿ ತಿಂಡಿಯನ್ನು ಜೋಪಾನವಾಗಿ ನನ್ನ ಆಫೀಸಿಗೆ ತೆಗೆದು ಕೊಂಡು ಹೋಗುವುದು ಅಷ್ಟೇ ಮುಖ್ಯವಾಗಿತ್ತು.
ಅದೇನೇ ಇರಲಿ …ರೈಲು ಬಂದ ತಕ್ಷಣವೇ ನಾನೇನೋ ನನ್ನ ಲಗೇಜಿನ ಸಮೇತ ಒಳಬಂದೆ. ಆದರೆ ಸುಮಾರು ಏಳೆಂಟು ಬ್ಯಾಗ್ ಗಳನ್ನು ಹೊಂದಿದ್ದ ಒಂದು ಕುಟುಂಬ ಅದರಲ್ಲಿ ಇಪ್ಪತ್ತೈದರ ಹೆಂಗಸಿನ ಜೊತೆ ಒಂದು ಪುಟ್ಟ ಹೆಣ್ಣು ಮಗು ‘ಮಾನ್ಸಿ’( ಪರಿಚಯವಾದ ನಂತರ ಗೊತ್ತಾಗಿದ್ದು ಅವರ ಮಗಳೆಂದು..) ಮತ್ತು ಅರವತ್ತರ ಆಸುಪಾಸಿನ ‘ಅಜ್ಜಿ’ ಬಹುಶಃ ಅವರ ತಾಯಿ ಇರಬೇಕು, ಇವರುಗಳೇನೋ ರೈಲಿನ ಒಳಗೆ ಬಂದರು. ಆದರೆ ಲಗೇಜ್..? ಅದಕ್ಕಾಗಿ ಲಗೇಜ್ ಒಳ ತರುವುದರಲ್ಲಿ ನಾನೂ ಒಂದು ಕೈ ಹಾಕಿ ಸಹಾಯ ಮಾಡಿದೆ..ರೈಲು ಮುಂಬೈನತ್ತ ಮುಖ ಮಾಡಿತು, ನನಗೆ ಅಭಿನಂದನೆಯ ಮಾತು ಆ ಮರಾಠಿ ಕುಟುಂಬದವರಿಂದ ಬಂದು ತಲುಪಿತು. ಒಂದು ಮುಗುಳ್ನಗೆಯೊಂದಿಗೆ ‘ಇಟ್ಸ್ ಓಕೆ’ ಎಂದು ಹೇಳಿ ಒಂದಡೆ ಕುಳಿತು ಕೊಂಡೆ. ಸ್ವಲ್ಪ ಹೊತ್ತಿನ ನಂತರ ಮಾನ್ಸಿ ನನ್ನ ಹತ್ತಿರ ಬರತೊಡಗಿದಳು. ಅವಳ ತೊದಲು ನುಡಿಯಿಂದ ಬರುತ್ತಿದ್ದ ಹಿಂದಿ ಮಿಶ್ರಿತ ಮರಾಠಿ ನನಗೆ ಇಷ್ಟವಾಯಿತು. ಹಾಗಿಯೇ ಅಜ್ಜಿಯ ಹತ್ತಿರ ಹಾಗೂ ಸಾಂಘವಿ ಶಿರೋಡ್ಕರ್ (ಪರಿಚರವಾದ ನಂತರ ಹೇಳಿದ ಹೆಸರು) ಜೊತೆಯೂ ಮಾತುಗಳು ಪ್ರಾಂರಂಭವಾದವು.
ನಾನು ಕೆಲಸ ಮಾಡುತ್ತಿದ್ದುದು ಗುಜರಾತ್ ರಾಜ್ಯದಲ್ಲಿರುವ ಏಕೈಕ ‘ಕಕ್ರಾಪಾರ್’ ಅಣು ವಿಧ್ಯುತ್ ಸ್ಥಾವರ. ವರುಷಕೊಮ್ಮೆ ನನ್ನೂರಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ ನನ್ನ ಕುಟುಂಬದವರನ್ನು ನೋಡಲು ಹೋಗುತ್ತಿದ್ದೆ. ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲನೇ ವಾರ ನನ್ನೂರ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವವು ಬಲು ವಿಜೃಂಬ್ರಣೆಯಿಂದ ನೆರವೇರುತ್ತದೆ. ಸುತ್ತಮುತ್ತಲಿನ ಸಾವಿರಾರು ಜನರು ದೇವರ ದರ್ಶನ ಪಡೆಯಲು ಬರುತ್ತಾರೆ. ಹಾಗೆಯೇ ನಾನು ಗುಜರಾತ್ ರಾಜ್ಯದಲ್ಲಿದ್ದುದರಿಂದ (ನಾಲ್ಕು ವರ್ಷ)ಪ್ರತೀ ವರ್ಷವೂ ರಥೋತ್ಸವಕ್ಕೆ ಹೋಗುವುದನ್ನ ರೂಡಿಸಿಕೊಂಡಿದ್ದೆ. ಒಂದು ನನ್ನ ಕುಟುಂಬದವರೊಡನೆ ಒಟ್ಟಾಗಿ ಕುಳಿತು ಮಾತನಾಡುವ ಖುಷಿ.. ಇನ್ನೊಂದಡೆ ರಥೋತ್ಸವವನ್ನು ಕಣ್ಣಾರೆ ನೋಡುವ ಸಂಭ್ರಮ, ಜೊತೆಗೆ ಬೇರೆ ಎಲ್ಲೋ ಕೆಲಸ ಮಾಡುತಿದ್ದ ಸ್ನೇಹಿತರನ್ನ ಭೇಟಿಯಾಗುವ ಸಂತಸ. ಇದೆಲ್ಲದರ ಜೊತೆಗೆ ಹವ್ಯಾಸಿ ನಾಟಕಗಳನ್ನು ನೋಡುವ ಬಲುಗೀಳು. ಒಂದಕ್ಕೊಂದು ಸೇರಿಕೊಂಡು ಊರು ಕೈಬೀಸಿ ಕರೆಯುತಿತ್ತು. ಇಷ್ಟೆಲ್ಲಾ ಮುಗಿಯುತ್ತಿದ್ದುದು ಒಂದುವಾರದ ಅವಧಿಯಲ್ಲಿ ನಂತರ ನಾನು ಹಿಂತಿರುಗಿ ಕೆಲಸಕ್ಕೆ ಗುಜರಾತಿಗೆ ಹೊಗುತ್ತಿದ್ದೆ..
ರೈಲು ಹರಿಹರ ಬಿಟ್ಟು ಒಂದೆರೆಡು ತಾಸಾಗಿರಬಹುದು..ನನ್ನ ಮತ್ತು ಸಾಂಘವಿಯವರ ಮಧ್ಯೆ ಆತ್ಮಿಯವಾದ ಮಾತುಗಳು ಹೊರಬರುತ್ತಿದ್ದವು, ಅವರಿಗೆ ನಾನು ಎಷ್ಟು ಆತ್ಮೀಯವಾಗಿದ್ದೆನೆಂದರೆ ನಾನು ಸಹ ಅವರ ಕುಟುಂಬದ ಸದಸ್ಯನೇನೋ ಎಂಬಂತೆ ಮನಸ್ಸು ಬಿಚ್ಚಿ ಮಾತಾನಾಡುತ್ತಿದ್ದರು..ಆಗಾಗ ಅಜ್ಜಿಯ ಮಾತುಗಳು ನಮ್ಮಿರ ಮಾತಿನಲ್ಲಿ ಬಂದು ಹೋಗುತ್ತಿದ್ದವು. ಮಾನ್ಸಿಯ ನನ್ನೊಂದಿಗಿನ ಆಟ ಮಾನ್ಸಿಗಿಂತ ಅವರಮ್ಮನಿಗೆ ತುಂಬಾ ಇಷ್ಟವಾಗಿತ್ತು, ಕಾರಣ…? ಅವರು ತಂದಿದ್ದ ಮನೆ ಊಟವನ್ನು ರಾತ್ರಿ ನನ್ನೊಂದಿಗೆ ಹಂಚಿಕೊಂಡು ಊಟಮಾಡಿದರು. ರಾತ್ರಿ ಒಂಬತ್ತು ಆದಂತೆ ಮಾನ್ಸಿನಿದ್ದೆ ಹೊರಟಳು..ಜೊತೆಗೆ ಎಲ್ಲರೂ. ಆದರೆ ರೈಲು ಮಾತ್ರ ಓಡುತ್ತಿತ್ತು.
ಮರುದಿನ ಎಂಟು ಗಂಟೆಗೆ ಎದ್ದು ಮಾನ್ಸಿಯನ್ನು ನೋಡಿದೆ ಅವಳಿನ್ನೂ ಮಲಗಿಯೇ ಇದ್ದಳು. ಅಜ್ಜಿಯ ಮತ್ತು ಸಾಂಘವಿಯ ಮಂದನಗೆಯೊಂದಿಗೆ ನನ್ನ ಅಂದಿನ ದಿನ ಪ್ರಾರಂಭವಾಯಿತು. ರೈಲ್ವೆ ಸ್ಟೇಷನಿನ್ನಲ್ಲಿ ಬಂದ ತಿಂಡಿ ತಿಂದು ಮತ್ತೆ ಮಾತಿಗಿಳಿದೆವು. ಮಧ್ಯಾಹ್ನ ಹನ್ನೆರಡರ ಸುಮಾರಿಗೆ ವಿಕ್ರೋಲಿ ರೈಲ್ವೆ ನಿಲ್ದಾಣದಲ್ಲಿ ರೈಲು ಬಂದು ನಿಂತಿತು. ಮೂವರ ಮುಖದಲ್ಲಿ ಸಂತಸ ಅರಳಿತು. ಸಾಂಘವಿಯು ಮಾತ್ರ ಯಾರನ್ನೊ ಹುಡುಕುತ್ತಿರುವಂತೆ ನನಗೆ ಅನ್ನಿಸಿತು. ಸ್ವಲ್ಪ ಹೊತ್ತಿನ ನಂತರ ನಾನೇ ಎಲ್ಲಾ ಲಗೇಜನ್ನು ರೈಲಿನಿಂದ ಕೆಳಗಿಳಿಸಿದೆ. ಇನ್ನೇನು ರೈಲಿನಲ್ಲಿ ಹತ್ತಿ ’ಬಾಯ್’ ಹೇಳುವಷ್ಟರಲ್ಲಿ ‘ಆಪ್ ಭೀ ಆಜಾಯಿಯೆ ಹಮಾರ ಘರ್’(ನೀವೂ ಮನೆಗೆ ಬಂದು ಬಿಡಿ) ಎನ್ನುವ ಮಾತು ನನ್ನ ಕಿವಿಗೆ ಬಿತ್ತು. ಇದು ಸಾಂಘವಿಯವರ ಮನದಾಳದ ಮಾತಾಗಿತ್ತು. ನಾನು ‘ಅಭಿನಹಿ.. ಕಭಿ..’(ಈಗ ಬೇಡ..ಮುಂದೆ ಯಾವಾಗಲೋ) ಎಂದು ಹಾರಿಕೆಯ ಉತ್ತರ ಕೊಟ್ಟೆ ಆದರೆ ಅಜ್ಜಿಯ ಮತ್ತು ಮಾನ್ಸಿಯ ಮಾತಿಗೆ ಮನಸೋತು ಅಲ್ಲಿಯೇ ಇಳಿದು ಅವರಿಂದೆಯೇ ಹೊರಟೆ..
ಒಂದು ಅರ್ಧ ಗಂಟೆಯಾಗಿರಬಹುದು..ಮೂರು ಅಂತಸ್ತಿನ ಅಪಾರ್ಟಮೆಂಟ್. ಬಾಗಿಲ ಬಳಿ ಬೆಲ್ ಒತ್ತಿದೊಡನೆ ಬಾಗಿಲು ತೆರೆದು ಶ್ರೀಮತಿ ಸಾಂಘವಿಯ ಪತಿ ಬಂದು ಮುಖದಲ್ಲಿ ಒಂದು ‘ಹೈ’ ಎನ್ನುವ ನಗೆಯೊಂದಿಗೆ ನನ್ನನ್ನು ಒಳಕರೆದರು. ಕೆಲಸದ ಒತ್ತಡದಿಂದಾಗಿ ರೈಲ್ವೆ ಸ್ಟೇಷನ್ನಿಗೆ ಬರಲಾಗಲ್ಲಿಲ್ಲವೆಂದೂ ಸಾಂಘವಿಗೆ ಮನದಟ್ಟು ಮಾಡಿದರು. ಅದಕ್ಕೆ ಸಾಂಘವಿಯೂ ಸಮ್ಮತಿಸಿದರು. ಅವರಿಬ್ಬರಲ್ಲಿದ್ದ ಹೊಂದಾಣಿಕೆ ಅನನ್ಯವಾದುದು. ನನ್ನ ಬಗ್ಗೆ ಎಲ್ಲವನ್ನೂ ಸಾಂಘವಿ ತನ್ನ ಪತಿಗೆ ತಿಳಿಸಿದರು..ಎಲ್ಲಾತಿಳಿದ ನಂತರ ‘ಅಪ್ ನಾಹ್ಲಿಜಿಯೇ..ಬಹೂತ್ ಘರ್ಮೀಹೈ;ಔರ್ ಖಾನ ಖಾಕೆ ಜಾಯೀಯೇ..’( ನೀವು ಸ್ನಾನಕ್ಕೆ ಹೋಗಿ..ತುಂಬಾ ಸೆಖೆ ಇದೆ..ಮತ್ತು ಊಟವನ್ನೂ ಮಾಡಿಕೊಂಡೇ ಹೋಗಬೇಕು) ಎಂದು ಹೇಳಿದ ಮಾತಿನಲ್ಲಿ ಯಾವುದೇ ಆಡಂಭರವಿರಲಿಲ್ಲ ಅದಕ್ಕಾಗಿ ‘ಒ.ಕೆ’ ಸಿಗ್ನಲ್ ತೋರಿಸಿದೆ. ಮಧ್ಯಾಹ್ನದ ಹೊತ್ತಾದುದರಿಂದ ಬೇಸಿಗೆ ಕಾಲವೂ ಇದ್ದುದರಿಂದ ಸಣ್ಣ ಸ್ನಾನ ಮಾಡಿದರೆ ಮುಂದಿನ ಪ್ರಯಣಕ್ಕೆ ನೆಮ್ಮದಿ ಸಿಗಬಹುದೆಂದು ಸ್ನಾನದ ಕೋಣೆಗೆ ತೆರಳಿದೆ.
ತಲೆಯ ಮೇಲೆ ನೀರು ಷವರಿನಿಂದ ಬೀಳುತ್ತಿದ್ದಂತೆ ಹಲವಾರು ಯೋಚನೆಗಳು ನನ್ನ ತಲೆಯಲ್ಲಿ ಬರತೊಡಗಿದವು. ಕೇವಲ ಇಪ್ಪತ್ನಾಕು ತಾಸುಗಳಲ್ಲಿ ಪರಿಚಯವಾದ ನನ್ನ ಮತ್ತು ಮರಾಠಿ ಕುಟುಂಬ ಇಷ್ಟೋಂದು ನನ್ನ ಮೇಲೆ ನಂಬಿಕೆ ಇಡಲು, ಆತ್ಮೀಯವಾಗಲು ಕಾರಣವೇನು..? ..ಅವರೊಂದಿಗೆ ಬೆರೆತುಕೊಂಡ ರೀತಿಯೇ..? ಲಗೇಜನ್ನು ಇಳಿಸಲು ಹತ್ತಿಸಲು ಸಹಾಯ ಮಾಡಿದ್ದಕ್ಕೆ..? ಮಗುವೊಂದಿಗೆ ಮಗುವಾಗಿ ಆಡಿದ್ದಕ್ಕೆ..? ಸಾಂಘವಿಯ ಜೊತೆ ಒಬ್ಬ ಸ್ನೇಹಿತನಂತೆಯೋ..ಅಥವ ಒಬ್ಬ ತಮ್ಮನಂತೆಯೋ ಇದ್ದುದಕ್ಕೋ..? ಗೊತ್ತಿಲ್ಲ…ಆದರೆ ನನಗರಿವಾದದ್ದು ಮಾತ್ರ ಮನಸಿನಲ್ಲಿ ಭಾವನೆಗಳು ಸ್ವಚ್ಛಂದವಾಗಿದ್ದರೆ ಅವುಗಳ ವ್ಯಕ್ತಪಡಿಸುವಿಕೆಯ ಅವಶ್ಯಕತೆ ಬೀಳುವುದಿಲ್ಲ..ಏಕೆಂದರೆ ಅವುಗಳು ತಾನಾಗಿಯೇ ಹೊರಹೊಮ್ಮುತ್ತವೆ ಮತ್ತು ಬೇರೆಯವರ ಮೇಲೆ ಪರಿಣಾಮ ಬೀರುತ್ತವೆ.
ಅದೇನೇ ಇರಲಿ ಹೆಚ್ಚು ನನ್ನ ಮೇಲೆ ನಂಬಿಕೆ ಇಟ್ಟು ತಮ್ಮ ಮನೆಗೂ ಮತ್ತು ಮನೆಯವರಿಗೂ ಪರಿಚಯಮಾಡಿಸಿ, ಊಟಕ್ಕೂ ಕೊಟ್ಟ ಮರಾಠಿ ಕುಟುಂಬವನ್ನು ನೆನೆದಾಗ ಅಕ್ಕಪಕ್ಕದ ಮನೆಯವರು ಎಷ್ಟೋ ವರ್ಷದಿಂದ ಜೊತೆಗಿದ್ದರೂ ಅತ್ಮೀಯವಾಗಿರದೇ..ನಂಬಿಕೆಯನ್ನಿಡದ ಈ ಕಾಲದಲ್ಲಿ ಪರಿಚಯವಿಲ್ಲದ ಅನಾಮಿಕನನ್ನು ಟ್ರೀಟ್ ಮಾಡಿದ ರೀತಿ ಮಾತ್ರ ಅದ್ಭುತ..ಅನನ್ಯವಾದುದು. ಆ ಕುಟುಂಬಕ್ಕೊಂದು ಸಲ್ಯೂಟ್..
-ಶ್ರೀ. ನಾಗರಾಜ್.ಮುಕಾರಿ (ಚಿರಾಭಿ)
ಕೈಗಾ, ಕಾರವಾರ.
nagu1315@gmail.com