ಹಸಿ ಹಸಿ ಹಸಿವಿನ ಗಂಟೆ ನಾದದಂತೆ.
ಮನದ ಮೂಲೆಯ ಬಯಕೆ ಮೈಮುರಿದು ಎದ್ದು
ಕಾನನದ ಕತ್ತಲೆಗೂ ಭವ್ಯ ಕಿರಣ ಸೂಸುವ
ಸೂರ್ಯ ಶಾಖದ ತೇಜ ಒಳಾಂತರಂಗದಲಿ.
ಕಾಣಿಸಲು ಮೊಗವು ಮಂದಾನಿಲ ಎದೆಯಲಿ ಹರಡಿ
ಅಗುಳು ನುಂಗುವ ತವಕವು, ಮನಸಲಿ ಪ್ರಣಯಿ ಕಾತರವು.!ಸಾಗಿ ಬಂದಿಹ ನಡೆಯು ವಿಪುಲ ಸುಂದರ ಹೂಗಳ-
ಘಮ! ಗಾಢ ಮೌನವ ಮುರಿಯೆ ಮನ ಬೆಚ್ಚಗೆ.
ಚರಣದಲಿ ಕೋಟಿ ದೇವತೆಗಳು ಹರಸಿ ಮಾಯವಾಗೆ
ಕಣ್ಣ ಕೋಮಲತೆಗಳು ತುಂಟತನ ಚಿಮ್ಮಿಸಲು
ಗುಳಿಕೆನ್ನೆ ಕೆಂಪಾಗಿ, ಧನ್ಯತಾ ಭಾವ ಬೆಸೆದು ಮೆಲ್ಲಗೆ
ಮುಗಿಯದ ಬಂಧಕೆ ನಾಂದಿ ಹಾಡುವ ಸಾಮಗಾನ ಮೊಳಗಲು.
ಕರೆದು ಕೂರಿಸಿ ಬಳಿಯಲಿ, ಹೆಸರು ಕರೆಯಲು ಕಿವಿಯಲಿ
ಝಾಲ್ಲೆಂದ ಮನದಲ್ಲಿ ಹೊಸ ಕಾಮ ಕೇಳಿ !
ಬೊಗಸೆ ಕಂಗಳ ನೆರಳ ಅಡಿಯಲಿ ಸಿಹಿ ಮುತ್ತು ಮನೆಮಾಡಿ
ಆದಿಯೆನ್ನುವುದಕೆ ಸಾಕ್ಷಿ, ಹೊಸ ಬಣ್ಣಗಳು ಇನ್ನೂ ರಂಗೇರಲು.
ಕಾಲ ಸ್ತಂಭಿಸಿತು ಅಲ್ಲೆ; ಪ್ರತಿ ಹೊರಳಲ್ಲೂ ತರಂಗಗಳೆದ್ದೆದ್ದು
ಬಿಸಿ ಉಸಿರುಗಳು ಮೇಳೈಸಿ ಮಾತಾಗಲು, ಬಾಹು ಬಂಧನವು ಸ್ನೇಹಿಸಲು
ಪರಿಪರಿಯಾಗಿ ಪರಿಚಿತವಾಗಿ ಮೌನದಲ್ಲಿಯೇ ಮನ ಒಂದಾಗಿ
ಹೂಗಂಧ ಪಸರಿಸಿತು! ಪ್ರತಿ ಎಸಳೂ ಅರಳರಲಿ ಬಳಲಿತು.
ಗೆಲುವು ಸಿಕ್ಕಿದ ಕ್ಷಣಕೆ ಸಂತಸದ ಸ್ವರ್ಗ-ಚರಮ ಸುಖ
ಮತ್ತೆ ಮತ್ತೆ ಕರೆದಂತೆ, ಬಾ ಎಂದು ಬರಸೆಳೆದು ಕೂಡಿಕೊಂಡಂತೆ.!
ಹೊಸ ಬದುಕು ತಂಗಾಳಿ ಬೀಸಿ ಅದು ಹಗುರ, ಹರ್ಷಿತ
ಕೊಟ್ಟು ಬರಿದಾಗಿದೆ ಜೀವ, ಪಡೆದು ಗೆದ್ದಿದೆ ಅಪಾರ
ನಾ ನಿನಗೆ-ನೀ ಎನಗೆ ಜೀವನದುದ್ದಕ್ಕೂ ಜೊತೆ ನಡೆವೆ
ಕ್ಷಣಗಳಲಿ ಆಣೆ ಪ್ರಮಾಣಗಳು ಕಣ್ಣಲ್ಲೆ ದಾಖಲಾಗಿ
ಪ್ರೀತಿ ಪ್ರೇಮಕೆ ಸೇತು ಇರುಳ ಪಯಣದ ಹಾದಿ
ದೇವ-ಮಾನವ ಬರೆದ ಲಗ್ನ ಯಾಗದ ಯೋಗವು.
ಕತ್ತಲು ಕರಗಲು ಜೊತೆಗೆ ಮೂಡಣ ಎರಗಲು ಮಧು ಮಂಚಕೆ
ಮಡಿಲು ಬೆಚ್ಚಗಾಗಿ ಜೀವದೊಡಲೊಳಗೆ ಹೊಸ ಕುಡಿ ಉಸಿರಾಡೆ – ಅದು ಶೋಭನ!!