ಅಂಕಣ

ವರ್ನೆರ್ ಹೈಸೆನ್ಬರ್ಗ್

ವರ್ನೆರ್  ಹೈಸೆನ್ಬರ್ಗ್ ಬಹುತೇಕ ಭೌತ ವಿಜ್ಞಾನ ವಿದ್ಯಾರ್ಥಿಗಳಿಗೆ ಚಿರಪರಿಚಿತ ಹೆಸರು. ತನ್ನ ಮೂವತ್ತೊಂದರ ಹರೆಯದಲ್ಲಿಯೇ ನೊಬೆಲ್ ಪಾರಿತೋಷಕಕ್ಕೆ ಭಾಜನನಾದವ. ಹಾಗೆ ನೋಡಿದಲ್ಲಿ ನೊಬೆಲ್ ಪಡೆದವರಲ್ಲಿಯೇ ಮೂರನೇ ಕಿರಿಯವ. ಬರೀ ವಿಜ್ಞಾನವನ್ನೇ  ಪರಿಗಣಿಸಿದರೆ ಎರಡನೇ ಅತೀ ಕಿರಿಯವ (ಅತೀ ಕಿರಿಯ ವಿಜ್ಞಾನಿ ಲಾರೆನ್ಸ್ ಬ್ರಾಗ್, ತಮ್ಮ ೨೫ ನೇ ವಯಸ್ಸಿನಲ್ಲಿ). ಇನ್ನೊಂದು ವಿಷಯ, ನೊಬೆಲ್ ಪಡೆದ ಅತೀ ಕಿರಿಯರಲ್ಲಿ ಮೊದಲ ಆರು ಜನ ಭೌತ ವಿಜ್ಞಾನಿಗಳೇ ಆಗಿರುವುದು ವಿಶೇಷ (ಇದರಲ್ಲಿ ಕಳೆದ ಬಾರಿ ನೊಬೆಲ್ ಶಾಂತಿ ಪುರಸ್ಕಾರ ಗಳಿಸಿದ ಮಲಾಲ ಯೋಸುಫಾಜೈಳನ್ನು ಪರಿಗಣಿಸಿಲ್ಲ). ಇರಲಿ ಈಗ ಹೇಳ ಹೊರಟಿರುವ ವಿಚಾರಕ್ಕೆ ಬರೋಣ. ಇಂಥಹ ವಿಜ್ಞಾನಿಯಾಗಿದ್ದ ಹೈಸೆನ್’ಬರ್ಗ್ ತಮ್ಮ ಪಿಎಚ್ಡಿ ಮೌಖಿಕ ಪರೀಕ್ಷೆಯಲ್ಲಿ ನಪಾಸಗುವುದರಲ್ಲಿದ್ದರು  ಅಂದ್ರೆ ನಂಬಬಹುದೇ?. ಆಗಿದ್ದೇನು ಅಂದರೆ, ಹೈಸೆನ್’ಬರ್ಗ್ ರಿಗೆ ಸೈದ್ಧಾಂತಿಕ ಭೌತ ವಿಜ್ಞಾನವೆಂದರೆ ಎಷ್ಟು ಒಲವಿತ್ತೋ ಅಷ್ಟೇ ತಿರಸ್ಕಾರ ಭಾವ ಪ್ರಾಯೋಗಿಕ ಭೌತ ವಿಜ್ಞಾನದಲ್ಲಿತ್ತು. ಆಗ ಅದೇ ವಿವಿಯಲ್ಲಿ ಇದ್ದ ಪ್ರೊ. ವೀನ್ ರವರ ಪ್ರಕಾರ ಪ್ರತಿಯೊಬ್ಬ ಸೈದ್ಧಾಂತಿಕ ವಿಜಾನಿಯೂ ತಕ್ಕ ಮಟ್ಟಿಗೆ ಪ್ರಾಯೋಗಿಕ ಜ್ಞಾನವನ್ನೂ ಗಳಿಸಬೇಕು ಎಂಬುದಾಗಿತ್ತು. ಅದರಂತೆ ಹೈಸೆನ್’ಬರ್ಗ್ ಪ್ರಾಯೋಗಿಕ ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಒಂದನ್ನೂ ತೆಗೆದುಕೊಳ್ಳಬೇಕಾಗಿತ್ತು ಆ ಕೋರ್ಸ್ ಬಲವಂತದ ಮಾಘ ಸ್ನಾನವಾಗಿತ್ತೆಂದು ಹೇಳಬೇಕಿಲ್ಲ ತಾನೇ! ಮುಂದೆ ಇದೇ ಅವರ ಪಿಎಚ್ಡಿ ಮೌಖಿಕ ಪರೀಕ್ಷೆಯಲ್ಲಿ ಕಾಡಿತು.

ಹೈಸೆನ್’ಬರ್ಗ್ ಆಗಾಗಲೇ ಕ್ವಾಂಟಮ್ ಮೆಕಾನಿಕ್ಸ್’ನಲ್ಲಿ ಕೆಲವೊಂದು ಸಮಸ್ಯೆಗಳಿಗೆ ವಿವಾದಾತ್ಮಕ ಪರಿಹಾರಗಳನ್ನು ನೀಡುವುದರ ಮುಖಾಂತರ ಕುಪ್ರಸಿದ್ಧಿಯನ್ನು ಗಳಿಸಿದ್ದರು. ಇದನ್ನು ಅರಿತಿದ್ದ ಅವರ ಮಾರ್ಗದರ್ಶಕರಾಗಿದ್ದ ಪ್ರೊ. ಸೊಮ್ಮರ್’ಫೀಲ್ಡ್ ತಮ್ಮ ಶಿಷ್ಯನಿಗೆ ಯಾವುದೇ ವಿಘ್ನಗಳು ಬರದಿರಲೆಂದು ಥೀಸಿಸ್’ನ್ನು ಥೆರ್ಮೋಡೈನಾಮಿಕ್ಸ್‘ನ್ನು ಆಧರಿಸಿ ಬರೆಯುವಂತೆ ಸೂಚಿಸಿದ್ದರು. ಕೊನೆಗೆ ಹೈಸೆನ್’ಬರ್ಗ್ ತಮ್ಮ ಥೀಸಿಸ್ ಅನ್ನು ಅದರಂತೆಯೇ ಬರೆದು ಸಲ್ಲಿಸಿದ್ದು ಆಯಿತು, ಹಾಗೆಯೇ ಸ್ವೀಕೃತವೂ ಆಯಿತು, ನಂತರ  ಬಂದಿದ್ದು ಮೌಖಿಕ ಪರೀಕ್ಷೆ! ಇವನ ದುರಾದೃಷ್ಟಕ್ಕೆ ನಾಲ್ಕು ಪ್ರೊಫೆಸರ್’ಗಳಿದ್ದ  ಪರೀಕ್ಷಾ ಸಮಿತಿಯಲ್ಲಿ ಪ್ರೊಫ್. ವಿಲ್ಲಿ ವೀನ್ ಕೂಡ ಇದ್ದರು. ಪರೀಕ್ಷೆ ಶುರುವಾಯಿತು, ೨೧ರ ಹರೆಯದ ಹೈಸೆನ್’ಬರ್ಗ್ ಸೋಮ್ಮೆರ್ ಫೀಲ್ಡ್‘ರು ಕೇಳಿದ ಪ್ರಶ್ನೆಗಳಿಗೆ ಹಾಗೂ ಇನ್ನಿತರೇ ಪ್ರೊಫ್ ಗಳು ಕೇಳಿದ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಭದಲ್ಲೇ ಉತ್ತರಗಳನ್ನು ಕೊಟ್ಟ. ಆದರೆ ಖಗೋಳ ವಿಜ್ಞಾನ ಆದಾರಿತ ಪ್ರಶ್ನೆಗಳು ತೂರಿ ಬರುತ್ತಿದ್ದಂತೆ ತಡವರಿಸಲಾರಂಭಿಸಿದ ಹೈಸೆನ್’ಬರ್ಗ್ ಪ್ರಾಯೋಗಿಕ ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಬಂದಾಗ ಮಖಾಡೆ ಮಲಗಿಬಿಟ್ಟ!! ಪ್ರಶ್ನೆಯು ಇಂಟರ್’ಫೆರೋಮೀಟರ್ ನ ರೆಸಾಲ್ವಿಂಗ್ ಪವರ್’ನ ಬಗ್ಗೆ ಯಾಗಿತ್ತು. ಇದು ಬಿಡಿ, ಅವನಿಗೆ ಸಾಮಾನ್ಯ ಸೂಕ್ಷ್ಮದರ್ಶಕಗಳ ರೆಸೋಲ್ವಿಂಗ್ ಪವರ್ ಅನ್ನು ಹ್ಯಾಗೆ ಕಂಡು ಹಿಡಿಯುವುದು ಅನ್ನೋದೇ ಗೊತ್ತಿರಲಿಲ್ಲ. ಇದನ್ನು ಅರಿತ ವೀನ್ ಕೆಂಡಾಮಂಡಲವಾಗಿ ಹೋಗ್ಲಿ ಅತ್ಲಾಗೆ ವಿದ್ಯುತ್ ಕೋಶಗಳು ಹ್ಯಾಗೆ ಕಾರ್ಯ ನಿರ್ವಹಿಸುತ್ತವೆ ಹೇಳು ಅಂದಾಗ ಅದಕ್ಕೂ  ಉತ್ತರ ಬಲಿಲ್ಲ.  ಹೈಸೆನ್’ಬರ್ಗ್ ಬೇರೆ ವಿಭಾಗ ಗಳಲ್ಲಿ ಅದೆಷ್ಟೇ ಮೇಧಾವಿಯಾಗಿರಲಿ ಇಂತಹ ಸಣ್ಣ ಪ್ರಶ್ನೆಗೆ ಉತ್ತರಿಸದಿದ್ದ ಮೇಲೆ ಅವನನ್ನು ನಪಾಸು ಮಾಡುವುದೇ ಉತ್ತಮ ಅನ್ನೋ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು ಪ್ರೊ. ವೀನ್. ಕೊನೆಗೆ  ಸಹಾಯಕ್ಕೆ ಬಂದಿದ್ದು ಪ್ರೊ. ಸೊಮ್ಮರ್’ಫೀಲ್ಡ್, ಅವರು ಪ್ರೊ. ವೀನ್ ಜೊತೆ ಸೈದ್ಧಾಂತಿಕ ಹಾಗು ಪ್ರಾಯೋಗಿಕ ವಿಜ್ಞಾನಗಳ ತುಲನಾತ್ಮಕ ಪ್ರಾಮುಖ್ಯತೆ ಮೇಲೆ ವಾಗ್ವಾದಕ್ಕೇ ಇಳಿದರು. ಕೊನೆಗೆ ವೀನ್ ಸೋಲೊಪ್ಪಿ ಕನಿಷ್ಠ ಅಂಕಗಳನ್ನ ಕೊಟ್ಟು ಪಾಸು ಮಾಡಿದ್ದಾಯಿತು! ತನ್ನ ತರಗತಿಯ ಎಲ್ಲಾ ಪರೀಕ್ಷೆಗಳಲ್ಲಿ ಮೊದಲಿಗನಾಗಿರುತ್ತಿದ್ದ ಅವನಿಗೆ ಇದು ಆಘಾತಕಾರಿ ವಿಚಾರವೇ ಆಗಿತ್ತು.ಇದರಿಂದಾಗಿ ಸಂಜೆ ಏರ್ಪಡಿಸಿದ್ದ ಔತಣಕೂಟದಲ್ಲಿಯೂ ಭಾಗವಹಿಸದೇ ಮೌಖಿಕ ಪರೀಕ್ಷೆಯಾದ ದಿನವೇ ಗಂಟು ಮೂಟೆ ಕಟ್ಟಿದ್ದ ಆಸಾಮಿ ಹೈಸೆನ್‘ಬರ್ಗ್!!

ಕಥೆ ಇಲ್ಲಿಗೇ ಮುಗಿಯಲಿಲ್ಲ, ಮುಂದೆ ಹೈಸೆನ್’ಬರ್ಗ್ ತಮ್ಮ ಅನ್’ಸರ್ಟೈನಿಟಿ ಸಿದ್ಧಾಂತಕ್ಕೆ (Heisenberg Uncertainty Principle) ಸಂಬಂಧಿಸಿದ ಸಮೀಕರಣಗಳನ್ನು ಬಿಡಿಸುವಾಗ, ಆತ ಸೂಕ್ಷ್ಮ ದರ್ಶಕದ  ರೆಸಾಲ್ವಿಂಗ್ ಪವರ್’ಆನ್ನೇ ಬಳಸಬೇಕಾಗಿ ಬಂತು!! ಆಗಲೂ ಅದು ಅವನಿಗೆ ಕಷ್ಟವೇ ಆಗಿತ್ತು ಬಳಸಿದ್ದ. ಆಮೇಲೆ ನೀಲ್ಸ್ ಬೋರ್ ಆ ತಪ್ಪನ್ನು ಎತ್ತಿ ತೋರಿಸಿದಾಗ ಅವನಿಗೆ ತುಂಬಾ ಬೇಸರವಾಗಿತ್ತು. ಮುಂದೆ ಬೋರ್ ನ ಸಹಾಯದಿಂದಲೇ ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಕುರಿತಂತೆ ತನ್ನ ಸ್ವಂತ ಅಭಿಪ್ರಾಯಗಳನ್ನು ರೂಪಿಸಲು ಸಾಧ್ಯವಾಯಿತು. ಇದೇ ಸಹಯೋಗ ಮುಂದುವರೆದು ಕ್ವಾಂಟಮ್ ವಿಜ್ಞಾನದ ಕೋಪನ್’ಹೇಗನ್ ವ್ಯಾಖ್ಯಾನ ಎಂದೇ ಹೆಸರಾಯಿತು.

(ಅಮೆರಿಕನ್ ಫಿಸಿಕಲ್ ಸೊಸೈಟಿ ಯ ಜಾಲತಾಣದಲ್ಲಿ (www.aps.org) ಪ್ರಕಟಿತ ವಾದ ಲೇಖನವೊಂದರ ಪ್ರೇರಿತ)

-ನಾಗರಾಜ್ ಕೋಡಿಹಳ್ಳಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!