2006ನೇ ಇಸವಿ. ನನ್ನ ಬದುಕಿನ ಕರಾಳ ವಷ೯. ಬದುಕೆ ಬೇಡ ಸತ್ತು ಹೋಗೋಣ ಅನ್ನುವಷ್ಟು ಇಡೀ ದೇಹ ನೋವಿನಾಗರ. 1997ರಲ್ಲಿ ಎಸಿಡಿಟಿ ಹೆಚ್ಚಾಗಿ ಕುಡತೆ ನೀರು ಹೊಟ್ಟೆಯಲ್ಲಿ ಉಳಿಯಲಾರದಂತಾದಾಗ ಬಸವನಗುಡಿಯ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ರಕ್ತ ಪರೀಕ್ಷೆಯಲ್ಲಿ ಗೊತ್ತಾಯಿತು ರೊಮೆಟೈಡ್ ಅಥ೯ರೈಟೀಸ್ ಕಾಯಿಲೆ ಇದೆ. ನಾಲ್ಕು ದಿನ ಆಸ್ಪತ್ರೆಯ ವಾಸ. ಸ್ವಲ್ಪ ದಿನಗಳಲ್ಲಿ ಈ ಕಾಯಿಲೆ ಉಲ್ಬಣವಾಗಲು ಶುರುವಾಯಿತು. ಪ್ರಸಿದ್ದ ಹೋಮಿಯೋಪತಿ ವೈದ್ಯರಾದ ಡಾ॥ ಪಿ. ರುದ್ರೇಶ ರವರ ಹತ್ತಿರ ಔಷಧಿ ಮಾಡಿ. ಈ ಕಾಯಿಲೆ ವಾಸಿ ಆಗುತ್ತದೆ ಎಂಬ ಜನರ ಸಲಹೆಯ ಮೇರೆಗೆ 1997 ರಿಂದ 1999ರವರೆಗೂ ಅವರಿಂದ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗಲಿಲ್ಲ. ಎಸಿಡಿಟಿ ಜಾಸ್ತಿ ಆಗಿ ನೋವು ಶಮನವಾಗುವ ಲಕ್ಷಣ ಕಾಣಲಿಲ್ಲ. ಖ್ಯಾತ ಅಲೋಪತಿ ವೈದ್ಯರಾದ ಡಾ॥ ಚಂದ್ರಶೇಖರ ರವರ ಹತ್ತಿರ ಹೋದೆ. ವಾರ, ಹದಿನೈದು ದಿನ, ತಿಂಗಳು ಹೀಗೆ ಅವರೇಳಿದ ಸಮಯಕ್ಕೆ ಆಸ್ಪತ್ರೆಗೆ ಹೋಗೋದು ರಕ್ತ ಪರೀಕ್ಷೆ ಪ್ರತೀ ಸಾರಿ ಮಾಡಿಸೋದು ಗುಳಿಗೆ ನುಂಗುವುದು. ಅವರೇಳಿದ ವ್ಯಾಯಾಮ ಮಾಡುವುದು. ಮೊದ ಮೊದಲು ಸ್ವಲ್ಪ ವಾಸಿ ಕಂಡರೂ 2006ರ ಮೊದಲಲ್ಲಿ ಹೆಚ್ಚಾದ ಕಾಯಿಲೆ ಹೆಜ್ಜೆ ಎತ್ತಿ ಇಡಲಾರದ ಸ್ಥಿತಿಗೆ ಬಂದೆ. ಜೊತೆಗೆ ಚಿಕನ್ ಗುನ್ಯಾ ಧಾಳಿ ಇಟ್ಟಿತು. ಹೇಗೆ ಸಹಿಸಿರಬಹುದು ಊಹಿಸಿ. ಈ ಕಾಯಿಲೆ ಡಬಲ್ ನೋವು ನನಗೆ. ಆರು ತಿಂಗಳು ಮಲಗಿದಲ್ಲೆ. ತಿಂಗಳಿಗೆ ಎರಡರಿಂದ ಮೂರು ಸಾವಿರ ಔಷಧಿ ಖಚು೯.
ಆಯಿತು ಇವಳ ಕಥೆ ಇಷ್ಟೆ. ಇನ್ನು ಇವಳನ್ನು ಹೇಗೆ ನೋಡಿಕೊಳ್ಳುವುದು. ಕೈ ಕಾಲೆಲ್ಲ ಸೊಟ್ಟವಾಗಿ ನಡೆದಾಡದ ಪರಿಸ್ಥಿತಿ ಬರುತ್ತೊ ಏನೊ. ವಾಸಿಯಾಗುವುದಿಲ್ಲ. ಇವಳಮ್ಮ ಈ ರೊಮೈಟೆಡ್ ಅಥ೯ರೈಟೀಸಿನಲ್ಲೆ ಕೊನೆ ಉಸಿರೆಳೆದರು. ಹೀಗೆ ಮನೆ ಮಂದಿ ಬಾಯಲ್ಲಿ ಮಾತುಗಳು. ಮಲಗಿದಲ್ಲಿ ಎಲ್ಲ ಕಿವಿಗೆ ಬೀಳುತ್ತಿತ್ತು. ಕಣ್ಣೀರಿಡದ ದಿನಗಳಿಲ್ಲ. ಅವರೇಳಿದ ಮಾತಿಗಲ್ಲ; ನನ್ನ ಸ್ಥಿತಿ ಹೀಗಾಯಿತಲ್ಲ. ಬಹುಶಃ ಆ ಟೈಮಲ್ಲಿ ನನಗೆ ಸಾಯುವ ಸುಲಭವಾದ ಮಾಗ೯ ಎಟುಕಿದ್ದರೆ ಇವತ್ತು ನಾನು ಬದುಕಿರುತ್ತಿರಲಿಲ್ಲ. ಸಾಯಲು ಧೈರ್ಯ ಇಲ್ಲ. ಬದುಕಿನ ಆಸೆಗಳು ಸತ್ತಿರಲಿಲ್ಲ. ಆದರೆ ನೋವು ದಿನದ ಪ್ರತೀ ಕ್ಷಣ ಸಾಯಿಸುತ್ತಿತ್ತು.
ಕೆಲಸಕ್ಕೆ ರಾಜಿನಾಮೆ ಕಳಿಸಿದರೆ ಸ್ವೀಕರಿಸದೆ ವಾಪಸ್ಸಾಯಿತು ಎರಡು ಸಾರಿ. ಬ್ಯಾಂಕಿನಲ್ಲಿ ಆಗ ಪ್ರೆಸಿಡೆಂಟ್ ಆಗಿದ್ದ ಮಾಜಿ ಶಾಸಕರಾದ ಶ್ರೀ ಹೆಚ್. ಶಿವಪ್ಪ ರವರ ಸಮ್ಮುಖದಲ್ಲಿ ಸ್ವತಃ ನಾನೆ ಕಾಲೆಳೆದುಕೊಂಡು ಹೋದೆ. ನನ್ನ ಪರಿಸ್ಥಿತಿ ನೋಡಿ ಸ್ವಯಂ ನಿವೃತ್ತಿ ಮಂಜೂರು ಮಾಡಿದರು. ಇನ್ನೂ ಹನ್ನೊಂದು ವಷ೯ ಸವೀ೯ಸ್ ನನಗಿತ್ತು. ಪ್ರತಿ ದಿನ ಜುಂ ಎಂದು ಸ್ಕೂಟಿಯಲ್ಲಿ ಹೋಗುತ್ತಿದ್ದೆ. ಈ ನೋವಿನಿಂದಾಗಿ ಆಗಲೆ ಎರಡು ವಷ೯ವಾಗಿತ್ತು ಓಡಿಸುವುದು ಬಿಟ್ಟು. ಮನೆ ಹತ್ತಿರದ ಶಾಖೆಗೆ ವಗಾ೯ವಣೆ ಮಾಡಿದರೂ ಕೆಲಸಕ್ಕೆ ಹೋಗಲು ನನಗಾಗಲಿಲ್ಲ. ಎಲ್ಲವನ್ನೂ ಬಿಟ್ಟು ಹಾಸಿಗೆಯ ದಾಸಿಯಾದೆನಲ್ಲ. ಈ ಕೊರಗು, ಜನರಾಡಿದ ಮಾತುಗಳು, ನನ್ನ ಮುಂದಿರುವ ಕತ೯ವ್ಯ, ಹೃದಯದಲ್ಲಿ ಬತ್ತಿರದ ಹಂಬಲಗಳು ಒಂದು ದಿನ ನನ್ನ ಬಡಿದೆಬ್ಬಿಸಿತು. ಇಲ್ಲ ನನ್ನ ಸ್ಥಿತಿ ಹೀಗೆ ಕೊನೆಯಾಗಬಾರದು ಅನ್ನುವ ನಿದಾ೯ರ.
ನಿಧಾನವಾಗಿ ಗೋಡೆ ಹಿಡಿದು ಎದ್ದು ನಿಲ್ಲುವ ಪ್ರಯತ್ನದೊಂದಿಗೆ ಶುರುವಾದ ನನ್ನ ಛಲ ರೋಡಿಗೆ ಬರುವಷ್ಟು ಚೇತರಿಸಿಕೊಂಡೆ. ಬರಬರುತ್ತಾ ಒಂದು ಕಿ.ಮೀ.ನಡೆಯುವಷ್ಟಾದೆ. ಕೆಲವು ಜನ ಹಿಂದಿನಿಂದ ಕುಂಟಿ ಎಂದು ಕರೆಯಲು ಶುರು ಮಾಡಿದರು. ಆದರೆ ದೇಹದ ಸಂದಿ ಸಂದಿ ನೋವಿನ ಆಗರ. ಪ್ರತಿಭಟಿಸುವ ಶಕ್ತಿ ಕಳೆದುಕೊಂಡಿದ್ದೆ.
23-4-2007 ಅದೊಂದು ಸುದಿನ. ಆ ದಿನ ಹತ್ತಿರದಲ್ಲೆ ಇರುವ “ಪತಂಜಲಿ ಯೋಗ” ಕ್ಲಾಸಿನ ಮೆಟ್ಟಿಲು ಕಷ್ಟ ಪಟ್ಟು ಹತ್ತಿದೆ. ಸುಮಾರು ಹತ್ತು ಮೆಟ್ಟಿಲು. “ಶ್ರೀ ರಘುಚಂದ್ರ ಗುರೂಜಿ” ಅವರಿದ್ದರು ಅಲ್ಲಿ. “ನಾಳೆಯಿಂದ ಕ್ಲಾಸಿಗೆ ಬಾ. ಒಂದು ವಾರದಲ್ಲಿ ಎಲ್ಲ ವಾಸಿ ಆಗುತ್ತದೆ ” ಅನ್ನುವ ಭರವಸೆ. ಮಾರನೆ ದಿನದಿಂದ ತಪ್ಪದೆ ಕುಂಟುತ್ತ ಹೋಗುತ್ತಿದ್ದೆ ಕ್ಲಾಸಿಗೆ. ನಿಧಾನವಾಗಿ ಮೊದಲಿನ ಸ್ಥಿತಿಗೆ ಬಂದೆ ಕೇವಲ ಹದಿನೈದು ದಿನಗಲ್ಲಿ. ಮನಸ್ಸು ಹಕ್ಕಿಯಂತೆ ಹಾರಾಡುತ್ತಿತ್ತು. ಎಲ್ಲರ ಮುಖದಲ್ಲಿ ಖುಷಿ. ಹಬ್ಬದ ವಾತಾವರಣ ಸೃಷ್ಟಿಯಾಯಿತು. ಮಾತ್ರೆಗಳೆಲ್ಲ ಮೂಲೆಗೆ ಬಿಸಾಕಿದೆ ತಿರಸ್ಕಾರದಿಂದ.
ಮಡಿಕೇರಿ ನನ್ನವರ ಊರು. ಪ್ರವಾಸ ಹೊರಟೆವು. ಎಲ್ಲ ಸುತ್ತಾಡಿ ತಲಕಾವೇರಿ “ಭೃಹ್ಮಗಿರಿ ಬೆಟ್ಟ” ಮುನ್ನೂರು ಮೆಟ್ಟಿಲು ಸರಾಗವಾಗಿ ಹತ್ತಿ ಇಳಿದೆ. ಆಗ ಆದ ಸಂತೋಷ ವಣಿ೯ಸಲಾಧ್ಯ. ಕ್ಲಾಸಲ್ಲಿ ಈ ವಿಷಯ ದೊಡ್ಡ ಸುದ್ದಿಯಾಯಿತು. ಈ ಕಾಯಿಲೆ ಇರುವವರು ಅನೇಕ ಜನ ಸುದ್ದಿ ತಿಳಿದು ನನ್ನಿಂದ ಯೋಗದ ಕುರಿತು ಮಾಹಿತಿ ಪಡೆದರು. ಇವತ್ತಿಗೂ ಯೋಗದ ಕುರಿತು ಪ್ರಚಾರ ನನ್ನದು.
ನೋಡಿ ಮತ್ತೆ ಕಾಡುವ ಕಾಯಿಲೆ ಬಿಡಲಿಲ್ಲ. 2008 ನವೆಂಬರನಲ್ಲಿ ಸ್ಪೈನಲ್ ಕಾಡ್೯ ತೊಂದರೆ. ಸಯಾಟಿಕ ಆಘಾತ. ಸೊಂಟದಿಂದ ಎರಡೂ ಕಾಲಿನ ಪಾದದವರೆಗು ಇಪ್ಪತ್ನಾಲ್ಕು ಗಂಟೆ ಸೆಳೆತ. ನೋವು. ಆಥೋ೯ಪೆಡಿಕ್ ಡಾಕ್ಟರ್ ಸಿಟಿ ಸ್ಕ್ಯಾನ್ ಮಾಡಿಸಿದ ರಿಪೋರ್ಟ ನೋಡಿ “ಹುಷಾರಾಗಿರಬೇಕು, ಸ್ವಲ್ಪದರಲ್ಲಿ ಉಳ್ಕೊಂಡಿದೀರಾ. ಇಲ್ಲ ಅಂದರೆ ಆಪರೇಷನ್ ಮಾಡಬೇಕಿತ್ತು. ಬಗ್ಗ ಬೇಡಿ. ಭಾರ ಎತ್ತಬೇಡಿ. ಹತ್ತಬೇಡಿ”. ಮಾತ್ರೆಗಳು ಕೈಗೆ ಬಂದವು ಮತ್ತೆ. ಈ ಸುದ್ದಿ ಯೋಗ ಗುರುಗಳಿಗೆ ಗೊತ್ತಾಗಿ “ಇದಕ್ಕೆಲ್ಲ ಯೋಗದಲ್ಲಿ ವ್ಯಾಯಾಮಗಳಿವೆ ನಾನು ಹೇಳಿಕೊಡುತ್ತೇನೆ.” ಸರಿ ಅವರು ಹೇಳಿದಂತೆ ಎಲ್ಲ ವ್ಯಾಯಾಮ ಮಾಡುತ್ತ ಬಂದೆ. ಮಾತ್ರೆ ಬಿಸಾಕಿದೆ. ಯೋಗ ಯೋಗ ಯೋಗ ಇದೊಂದು ಮಂತ್ರ ಸುಮಾರು ನಾಲ್ಕಾರು ತಿಂಗಳಲ್ಲಿ ಇದೂ ಕೂಡ ಕಡಿಮೆ ಆಯಿತು. ಎರಡು ವಷ೯ ಬೆಲ್ಟ ಹಾಕುತ್ತಿದ್ದೆ. ಮನೆಗೆಲಸ, ಕೈತೋಟದ ಕೆಲಸ, ಬಟ್ಟೆ ಹೊಲಿಯುವುದು ಎಲ್ಲ ಕೆಲಸ ಮತ್ತೆ ಶುರು ಮಾಡಿದೆ.
ನೋಡಿ ಬೆನ್ನು ಬಿಡದ ಮಾಮೂಲಿಯಾದ ಕಾಯಿಲೆ ಈ ಕಾಲದ್ದು ನನಗೂ ಬಂತು 2014 ಸೆಪ್ಟೆಂಬರನಲ್ಲಿ. ಫುಲ್ ಬಾಡಿ ಚೆಕ್ಕಪ್ ಸಾಗರ ಕ್ಲಿನಿಕ್ಗೆ ಹೋದಾಗ ಹೇಳಿದರು ಶುಗರ್ ಜಾಸ್ತಿ ಇದೆ 324. ಅಯ್ಯೋ ಶಿವನೆ. ಏನೇನು ಈ ಕಾಯಿಲೆ ಬಗ್ಗೆ ಚಿಕಿತ್ಸೆ ಪಡಿಬೇಕೊ ಎಲ್ಲ ಮಾಡಿದೆ. ಒಂದು ತಿಂಗಳು ಮಾತ್ರೆಗಳ ಬದಲಾವಣೆ ನನಗಿರೋದು ಲೋ ಶುಗರ್. ಕಷ್ಟ. ಮಾತ್ರೆ ತೆಗೆದುಕೊಂಡರೆ ಫುಲ್ ಲೋ ಶುಗರ್ ಗಿಡ್ಡಿನೆಸ್. ಇಲ್ಲೂ ಕೆಟ್ಟ ಧೈರ್ಯ ಮಾಡಿ ಮಾತ್ರೆ ಬಿಟ್ಟು ನನ್ನ ಯೋಗದಲ್ಲೆ ಮುಳುಗಿಬಿಟ್ಟೆ. ಸಿಹಿ ಪದಾರ್ಥ ಅತೀ ಇಷ್ಟ. ಆದರೆ ಈ ಕಾಯಿಲೆಗಾಗಿ ಅದೂ ಬಿಟ್ಟೆ. ನನ್ನ ಗುರುಗಳು ಆಗಲೆ ಎರಡು ವಷ೯ಗಳ ಹಿಂದೆ ಅಕಾಲ ಮರಣ ಹೊಂದಿದ್ದರು. ಅವರಾಡಿದ ಒಂದು ಮಾತು ಕಿವಿಯಲ್ಲಿ ಗುಣಗುಣಿಸುತ್ತದೆ. “ಕಾಯಿಲೆ ಇವತ್ತು ಬರುತ್ತೆ ನಾಳೆ ಹೋಗುತ್ತೆ. ಅದನ್ನು ಓಡಿಸುವ ಛಲ ನಮ್ಮಲ್ಲಿ ಬೆಳಿಬೇಕು.”
ಅದೆಷ್ಟು ನಿಜ. ಒಂದು ತಿಂಗಳು ಬಿಟ್ಟು ಪರೀಕ್ಷೆ ಮಾಡಸಿದರೆ ಎಲ್ಲ ನಾಮ೯ಲ್. ಯಾವ ಮಾತ್ರೆಗಳೂ ಇಲ್ಲದೆ ನನಗೆ ಬಂದ ಎಲ್ಲ ರೋಗ ಈ ಯೋಗವೆಂಬ ಮಹಾನ್ ಶಕ್ತಿಯಿಂದ ಗುಣವಾಗಿದೆ. ಇವತ್ತಿಗೂ ಪ್ರತಿನಿತ್ಯ ಯೋಗ, ವಾಕಿಂಗ್ ಮಾಡಿಕೊಂಡು ಆರೋಗ್ಯದಿಂದ ಇದ್ದೇನೆ. ಈಗ ಸ್ಕೂಟಿ ಮತ್ತೆ ನನ್ನ ಸಂಗಾತಿ. ಆ ಭಗವಂತ ಅದ್ಯಾಕೆ ಛಲ ಕೊಟ್ಟ ಅಂತ ಈಗೀಗ ನನಗೆ ಅಥ೯ವಾಗುತ್ತಿದೆ. ಬರವಣಿಗೆಯಲ್ಲಿ ನಿಮ್ಮೊಂದಿಗೆ ಬೆರೆಯಲು ನನಗೆ ಕೊಟ್ಟ ಭಿಕ್ಷೆ ಇದು.
-ಸಂಗೀತಾ ಕಲ್ಮನೆ