ಅಂಕಣ

ಮುಂದಿನ ಪೀಳಿಗೆಗೆ ನಾವು ಉಳಿಸಿ ಹೋಗುತ್ತಿರುವ ತ್ರಿಶಂಕು ನರಕ

ಪ್ರಿಯ ರೋಹಿತ್,

ಊರಿನಿಂದ ಫೋನ್ ಬಂದಿತ್ತು. ನಮ್ಮ ಮನೆಯ ಕೊನೆ ಕೊಯ್ಲು ನಡೆಯುತ್ತಿರುವುದನ್ನು ಹೇಳಿದ ಅಪ್ಪ, ಈ ವರ್ಷ ಕೊನೆಗೌಡನನ್ನು ಕರೆದುಕೊಂಡು ಬರಲು ಪಟ್ಟ ಪಾಡನ್ನೂ, ಕೊನೆಗೌಡ ಬಂದರೂ ನೇಣು ಹಿಡಿಯಲು, ಉದುರಡಕೆ ಹೆಕ್ಕಲು, ಕೊನೆ ಹೊತ್ತು ತೋಟದಿಂದ ಮನೆವರೆಗೆ ಸಾಗಿಸಲು ಆಳುಗಳೇ ಸಿಗದೇ ಆದ ತೊಂದರೆಯನ್ನೂ, ತಾನು ಮತ್ತು ಅಮ್ಮನೇ ಹೇಗೋ ಒದ್ದಾಡಿ ಅಡಕೆಯನ್ನು ಮನೆ ಮುಟ್ಟಿಸಿದ ಕತೆಯನ್ನೂ ಹೇಳಿದ. “ಈಗ ಅಡಕೆ ಸುಲಿಯಲೂ ಜನಗಳಿಲ್ಲದೇ ಇರೋದ್ರಿಂದ ನಮ್ಮನೆ ಸುಗ್ಗಿ ಪೂರ್ತಿ ಮುಗಿಯೋದು ಯಾವಾಗ್ಲೇನೋ” ಅಂತ ಹೇಳಿ ನಿಟ್ಟುಸಿರು ಬಿಟ್ಟ. “ಅದೇನೋ ಈಗ ಅಡಕೆ ಸುಲಿಯೋ ಮಶಿನ್ ಬಂದಿದ್ಯಂತಲ್ಲಾ,ಅದನ್ನ ಟ್ರೈ ಮಾಡಬಹುದಿತ್ತು” ಅಂತ ನಾನು ಹೇಳಿದೆ. ಆದರೆ ಅಪ್ಪ, ಅದು ಸರಿಯಾಗಿ ಸುಲಿಯುವುದಿಲ್ಲ ಅಂತ ಕಂಪ್ಲೇಂಟ್ ಇದೆ,ಅಲ್ಲದೇ ಸಿಕ್ಕಾಪಟ್ಟೆ ದುಬಾರಿ ಬೇರೆ ಎಂದನಲ್ಲದೇ, “ಹಿಂಗೇ ಆದರೆ ಮುಂದಿನ ವರ್ಷದಿಂದ ಸುಗ್ಗಿ ಮಾಡೋ ಹಾಡೇ ಇಲ್ಲ, ಫಸಲು ಗುತ್ತಿಗೆ ಕೊಡೋದೇ ಸೈ” ಎಂದು ನಿಸ್ಸಹಾಯಕತೆ ವ್ಯಕ್ತಪಡಿಸಿದ.

ಪ್ರತಿ ವರ್ಷ ಸುಗ್ಗಿಯ ಸಮಯದಲ್ಲಿ ನಾನು ಊರಿಗೆ ಹೋಗಿ ಅಪ್ಪ-ಅಮ್ಮರಿಗೆ ಸಹಾಯ ಮಾಡಬೇಕು ಎಂದುಕೊಳ್ಳುವುದು, ಆದರೆ ಅಷ್ಟೊತ್ತಿಗೆ ಮತ್ತೇನೋ ಆಗಿ ಅದು ಸಾಧ್ಯವಾಗದೇ ಹೋಗುವುದು. ಹಾಗಂದ ಮಾತ್ರಕ್ಕೆ ನಾನೇನು ಊರಿಗೆ ಹೋದಾಗ ಭಯಂಕರ ಕೆಲಸ ಮಾಡಿ ಕಡಿದು ಗುಡ್ಡೆ ಹಾಕ್ತೇನೆ ಅಂತಲ್ಲ. ವ್ಯಾಯಾಮವೇ ಇಲ್ಲದೆ ಮೊದ್ದಾಗಿರುವ ದೇಹ ಮತ್ತು ಕೀಲಿ ಮಣೆ ಕುಟ್ಟಿ ಕುಟ್ಟಿಯೇ ಕೈಯೆಲ್ಲಾ ಸವೆದು ಹೋಗಿರೋ ನಾನು ಊರಿಗೆ ಹೋಗಿ ಗುದ್ಲಿ, ಪಿಕಾಸಿ, ಬುಟ್ಟಿ ಹಿಡಿದರೆ ಹತ್ತು ನಿಮಿಷಕ್ಕೆ ಸುಸ್ತಾಗುತ್ತೇನೆ! ಆದರೆ ಅಪ್ಪ-ಅಮ್ಮ ಹೀಗೆ ಕಷ್ಟ ಪಡುವುದನ್ನು ನೆನೆಸಿಕೊಂಡಾಗ ಹಾಗೂ ನನಗೇ ಆಗಾಗ ಆಗುವ ನಗರ ಜೀವನದ ಬಗೆಗಿನ ಜಿಗುಪ್ಸೆ ಉಲ್ಬಣಗೊಂಡಾಗ, “ಥೂ, ಆದಷ್ಟ್ ಬೇಗ ಈ ಸಿಟಿ ಬಿಟ್ಟು ಊರಿಗೆ ಹೋಗ್ಬಿಡ್ಬೇಕು” ಎಂದು ಪ್ರತಿಜ್ಞೆಗೈಯುವುದೂ, ಆದರೆ ಅದನ್ನು ಸಾಕಾರಗೊಳಿಸಲು ಸರಿಯಾದ ದಾರಿಯೇ ತಿಳಿಯದೇ ಒದ್ದಾಡುವುದೂ ನಡೆದಿದೆ. ನಿಮ್ಮ ಕೃತಿಯ ಹೆಸರು ನೋಡುತ್ತಿದ್ದಂತೆಯೇ ನನಗೆ ನೆನಪಾದದ್ದು ನನ್ನ ಈ ತ್ರಿಶಂಕು ನರಕ!

ಊರಲ್ಲಿದ್ದಾಗ, ನಾವೇನಾದರೂ ಕೊಟ್ಟಿಗೆಯಲ್ಲಿರುವ ಜಾನುವಾರುಗಳ ಬಗ್ಗೆ ಉಪೇಕ್ಷೆ ತೋರಿದರೆ, ನನ್ನ ಅಜ್ಜಿ ಒಂದು ಮಾತು ಹೇಳುತ್ತಿದ್ದಳು: “ನಾವು ತಿನ್ನೋದು ದನಕರದ್ ಸಗಣಿ! ಅವುನ್ನ ಸರಿಯಾಗಿ ನೋಡ್ಕೋಬೇಕು.”  ಅಂದರೆ, ಅವು ಹಾಕುವ ಸಗಣಿಯಿಂದ ಗೊಬ್ಬರ ತಯಾರಿಸಿ, ಅದನ್ನು ತೋಟಕ್ಕೆ ಹಾಕಿ, ಅದರಿಂದಾಗಿ ಬಂದ ಬೆಳೆ ಮಾರಿ ದೊರಕಿದ ಹಣದಿಂದ ನಮ್ಮ ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಂಡು ತರುವುದರಿಂದ, ಅಥವಾ ಜಾನುವಾರುಗಳ ಗೊಬ್ಬರದಿಂದ ಬೆಳೆದ ಅಕ್ಕಿಯನ್ನೇ ನಾವು ಉಣ್ಣುವುದರಿಂದ,ಅವು ಇಲ್ಲದಿದ್ದರೆ ನಮ್ಮ ಹೊಟ್ಟೆಗೂ ಏನೂ ಇರುವುದಿಲ್ಲ ಎಂಬುದು ನನ್ನ ಅಜ್ಜಿಯ ಮಾತಿನ ಹಿಂದಿನ ತರ್ಕವಾಗಿತ್ತು. ಜಾನುವಾರು-ತೋಟ-ನಾವು-ಊಟ ಎಲ್ಲವೂ ಬಿಟ್ಟಿರಲಾರದ-ಬಿಟ್ಟಿರಬಾರದ ಬಂಧವಾಗಿತ್ತು. ಆದರೀಗ ಊರಿನ ಅನೇಕ ಮನೆಗಳಲ್ಲಿ ಜನ ಕೊಟ್ಟಿಗೆಯನ್ನೇ ಬರಕಾಸ್ತು ಮಾಡುತ್ತಿದ್ದಾರೆ. ಒಬ್ಬರೋ ಇಬ್ಬರೋ ಇರುವ ಸಂಸಾರಗಳೇ ಎಲ್ಲರ ಮನೆಯ ಕತೆಯಾಗಿರುವಾಗ,ಕೊಟ್ಟಿಗೆಯಲ್ಲಿನ ಜಾನುವಾರುಗಳನ್ನು ನೋಡಿಕೊಳ್ಳಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ದಿನವೂ ಕೊಟ್ಟಿಗೆ ಸ್ವಚ್ಛಗೊಳಿಸುವುದಷ್ಟೇ ಅಲ್ಲದೇ ಸಮಯಕ್ಕೆ ಸರಿಯಾಗಿ ಜಾನುವಾರುಗಳಿಗೆ ತಿಂಡಿ, ಅಕ್ಕಚ್ಚು, ಹುಲ್ಲುಗಳನ್ನು ಒದಗಿಸುವುದು ಸಹ ಕಷ್ಟದ ವಿಷಯವೇ ಆಗಿದೆ. ಅಪ್ಪ-ಅಮ್ಮ ಕಷ್ಟ ಪಡುವುದು ನೋಡಲಾಗದೆ ನಮ್ಮನೆಯಲ್ಲೂ ಕೊಟ್ಟಿಗೆ ಮುಚ್ಚಿ  ಬಿಡಿ ಅಂತ ಹೇಳಿದೆ. ಆದರೆ ಅಮ್ಮ, ಕೊಂಡ ಹಾಲು ತುಂಬಾ ನೀರಾಗಿರುತ್ತೆ ಅಂತಲೂ, ಎಮ್ಮೆ ಹಾಲಿನಿಂದ ತಯಾರಿಸಿದ ಕಾಫಿ ಕುಡಿದೂ ಕುಡಿದು ತನಗೆ ಅಭ್ಯಾಸವಾಗಿರೋದರಿಂದ ಅದನ್ನು ಬಿಡಲು ಸಾಧ್ಯವೇ ಇಲ್ಲ ಅಂತಲೂ ಸಮಜಾಯಿಶಿ ಕೊಟ್ಟಳು!

ಈ ’ಇಲ್ಲಿರಲಾರೆ  – ಅಲ್ಲಿಗೆ ಹೋಗಲಾರೆ’, ’ಇದನ್ನೂ ಬಿಡಲಾರೆ – ಅದನ್ನೂ ಬಿಡಲಾರೆ’ ರೀತಿಯ ಸಿಂಡ್ರೋಮು ನಮ್ಮ ಈ ಕಾಲದ ದುರಂತವೇನೋ ಅಂತ ನನಗನ್ನಿಸುತ್ತೆ. ಅವಕಾಶಗಳಿಗಾಗಿ ಹಳ್ಳಿಯಿಂದ ಸಿಟಿಗೆ ಬರುವ ಅನಿವಾರ್ಯ ಗುಳೆಯ ಪಾಳಯಕ್ಕೇ ಸೇರುವ ನಮಗೆಲ್ಲಾ ಧಾತು ಶಕ್ತಿಯಂತಿರುವ ಊರು, ಹೆಂಚಿನ ಮನೆ, ಕಳೆ ತುಂಬಿದ ಅಂಗಳ, ಸರಿಗೆ ದಣಪೆ, ಹುಲ್ಲಿನ ಹಿತ್ತಿಲು, ಜೊಂಡಾವೃತ ಕೆರೆ, ಹಸಿರು ಗದ್ದೆ, ಸೊಪ್ಪಿನ ಬೆಟ್ಟಗಳ ಸೆಳೆತ ಚಿರಂತನ ಕಾಡುವ ಪ್ರತಿಮೆಗಳಾಗಿಯೇ ಉಳಿದು ಬಿಡುತ್ತವೆಯೇನೋ ಎಂಬ ಭಯ ನನಗೆ. ಬೇಣದಲ್ಲಿ ಬುಕ್ಕೆ ಹಣ್ಣು ಹೆಕ್ಕುತ್ತಾ, ಕಾದಿಗೆಯಲ್ಲಿ ಮೀನು ಹಿಡಿಯುತ್ತಾ, ಮಣ್ಣಿನಲ್ಲಿ ಮನೆ ಕಟ್ಟುತ್ತಾ, ಗಣಪೆ ಮಟ್ಟಿಯಲ್ಲಿ ಅಡಗಿಕೊಳ್ಳುತ್ತಾ, ಬಿದಿರುಕಾನಲ್ಲಿ ಕಳೆದು ಹೋಗುತ್ತಾ ಪ್ರಕೃತಿಯೊಂದಿಗೇ ಆಡಿ ಬೆಳೆದು ಬಂದ ನಾವು ನಮ್ಮ ಮುಂದಿನ ಪೀಳಿಗೆಗೆ ತೋರಿಸಲು ಏನಿದೆ, ಇರುವುದನ್ನಾದರೂ ನಾವು ಕಂಡ ರೀತಿಯಲ್ಲಿ ತೋರಿಸಲಾದೀತಾ, ನಾವು ತೋರಿಸಲು ಹೊರಟರೂ ನೋಡುವ ಬಯಕೆ ಅವರಲ್ಲಿದೆಯಾ ಅಂತೆಲ್ಲಾ ಯೋಚಿಸಿದಾಗ ದೊರಕುವ ಉತ್ತರ ಶೂನ್ಯ. ಒಪ್ಪಿಕೊಳ್ಳುತ್ತೇನೆ, ’ಈಗಿನ ಮಕ್ಕಳಿಗೆ ನಾವು ಅನುಭವಿಸಿದ ಮಜಾಗಳೆಲ್ಲ ಎಲ್ಲಿ ಸಿಗತ್ತೆ?’ ಎಂದು ನನ್ನ ಅಜ್ಜನೂ ಗೊಣಗುತ್ತಿದ್ದ, ಅಪ್ಪನೂ ಹೇಳುತ್ತಿದ್ದ, ಈಗ ನಾನೂ ಹೇಳಿದರೆ ಅದು ಕ್ಲೀಷೆಯಾಗುತ್ತದೆ.  ಆದರೆ, ಹಳ್ಳಿಗಳಿಂದ ದೂರವಾಗುವುದರ ಮೂಲಕ, ಈಗಷ್ಟೆ ಬಾವಿಯಿಂದ ಸೇದಿದ ಸಿಹಿ ನೀರು ಕುಡಿಯುವುದರಿಂದ, ಅರಳೀ ಮರ ಬೀಸುವ ಶುದ್ಧ ಗಾಳಿ ಸೇವಿಸುವುದರಿಂದ, ಕೋಗಿಲೆ ಹಾಡುವುದನ್ನು ದಟ್ಟ ಮೌನದಲ್ಲಿ ಕೂತು ಕೇಳುವುದರಿಂದ, ತೊಂಡೆ ಚಪ್ಪರದಿಂದ ತಾಜಾ ಮಿಡಿ ಕೊಯ್ದು ತಿನ್ನುವುದರಿಂದ, ಕಾಡ ನಡುವಿನ ಗಾಢ ಹಸಿರಿನ ಸೊಬಗನ್ನು ಕಣ್ತುಂಬಿಕೊಳ್ಳುವುದರಿಂದ ಸಹ ನಾವೆಲ್ಲ ದೂರವಾಗುತ್ತಿದ್ದೇವೆ ಎಂಬ ಸತ್ಯವನ್ನಂತೂ ತಳ್ಳಿ ಹಾಕುವಂತಿಲ್ಲವಷ್ಟೇ?

ಗಿಡಮರಗಳ ಬಗ್ಗೆ, ನೀರಿನ ಬಗ್ಗೆ, ಆಹಾರದ ಬಗ್ಗೆ, ಪ್ರಾಣಿ-ಪಕ್ಷಿಗಳ ಬಗ್ಗೆ, ಒಟ್ಟಾರೆ ಪರಿಸರದ ಬಗ್ಗೆ ಜನರಲ್ಲಿ ಪ್ರೀತಿ ಬೆಳೆಯಬೇಕಾದರೆ ಮೊದಲು ಅದನ್ನು ಅನುಭವಿಸಬೇಕಲ್ಲವೇ? ಅನುಭವಿಸಲು ನಮಗೆಲ್ಲಿ ಸಮಯವಿದೆ? ಹೀಗಾಗಿ, ಈಗ ಪ್ರೀತಿ ಬೆಳೆಸುವುದಂತೂ ಸಾಧ್ಯವಿಲ್ಲ, ಅರಿವು-ಕಾಳಜಿಗಳನ್ನಾದರೂ ಬೆಳೆಸೋಣ ಎಂಬುದು ಬಹುಶಃ ಈಗಿನ ಅಭಿಯಾನಗಳ ಹಿಂದಿನ ಮರ್ಮವಿರಬೇಕು! ಈಗಿನ ತುರ್ತೂ ಅದೇ ಆಗಿರುವುದು ನಿಜ.

ನಿಮ್ಮ ಈ ಪುಸ್ತಕ ಓದುತ್ತಿದ್ದರೆ ನನ್ನ ಆತಂಕ ಇನ್ನೂ ಜಾಸ್ತಿಯಾಗುತ್ತೆ ರೋಹಿತ್! ಭೂಮಿ ಬಿಡಿ, ಬಾಹ್ಯಾಕಾಶದಲ್ಲೂ ಮನುಷ್ಯ ಸೃಷ್ಟಿಸಿರುವ ತ್ಯಾಜ್ಯದ ರಾಶಿ, ಎಲ್ಲೋ ಎದ್ದರೂ ಇನ್ನೆಲ್ಲೋ ಪ್ರಭಾವ ಬೀರುವ ಭಾರೀ ಚಂಡಮಾರುತಗಳು, ಇಡೀ ದೇಶವೇ ಬಾಯ್ಬಡಿದುಕೊಳ್ಳುವಂಥ ತಾಪ ಹೊಮ್ಮಿಸುವ ಜ್ವಾಲಾಮುಖಿಗಳು, ಪ್ರಾಣಿ ಸಂಕುಲಗಳನ್ನೇ ಇಲ್ಲವಾಗಿಸುವ ಕಾಡುಗಳ ನಾಶ, ರುಚಿರುಚಿಯೆಂದು ನಾವು ಮೆಲ್ಲುವ ಆಹಾರಗಳಲ್ಲೇ ಅಡಗಿರುವ ವಿಷ, ಸಾಂಕ್ರಾಮಿಕ ರೋಗಗಳನ್ನು ಹರಡಬಲ್ಲ ವೈರಸ್ಸುಗಳು,ಉಸಿರಾಡುವ ಗಾಳಿಯಲ್ಲಿ ತುಂಬಿಕೊಂಡಿರುವ ವಿಷಾನಿಲಗಳು… ಓಹೋಹೋ! ಇವನ್ನೆಲ್ಲಾ ಓದುತ್ತಿದ್ದರೆ, ನಾವು ಈಗಾಗಲೇ ಸರಿಮಾಡಲಾಗದಷ್ಟು ಪರಿಸರವನ್ನು ಹಾಳು ಮಾಡಿಕೊಂಡು ಬಿಟ್ಟಿದ್ದೀವೇನೋ ಎಂದು ಭಯವಾಗುತ್ತದೆ.

ನಮ್ಮ ಶಾಲೆಯ ವಿಜ್ಞಾನ ಪಠ್ಯಗಳು ನಮ್ಮ ಕಣ್ಣೆದುರಿದ್ದುದನ್ನೇ ಇನ್ನಷ್ಟು ಬಿಡಿಸಿ ಹೇಳುತ್ತಿದ್ದವು. ಕೊನೆಗೆ ಕಣ್ಣಿಗೆ ಕಾಣದ್ದನ್ನು ಸೂಕ್ಷ್ಮದರ್ಶಕದಲ್ಲೂ, ದೂರದರ್ಶಕದಲ್ಲೂ, ಭೂತಕನ್ನಡಿಯಲ್ಲೂ ತೋರಿಸಿದರು. ನಮಗೆ ತಿಳಿಯದಿದ್ದ ರಹಸ್ಯಗಳೂ ಬ್ರಹ್ಮಾಂಡದಲ್ಲಿವೆ ಅಂತ ಆಮೇಲಾಮೇಲೆ ಗೊತ್ತಾಯಿತು. ನಾವು ನೋಡುತ್ತಿದ್ದುದೆಲ್ಲ ಮತ್ತಷ್ಟು ನಿಗೂಢವೂ, ಆಸಕ್ತಿಕರವೂ ಆಗಿ ತೋರತೊಡಗಿದವು. ಆ ನಂತರ ನಾವು ಪತ್ರಿಕೆಗಳಲ್ಲಿ ಬರುತ್ತಿದ್ದ ವಿಜ್ಞಾನ ಬರಹಗಳಿಂದ, ತಜ್ಞರ ಪುಸ್ತಕಗಳಿಂದ ಸೃಷ್ಟಿಯ ಕುತೂಹಲಗಳನ್ನು ತಣಿಸಿಕೊಳ್ಳತೊಡಗಿದೆವು. ಈಗ ಇಂಟರ್ನೆಟ್ ನಮಗೆ ಏನು ಬೇಕೋ ಅದನ್ನು ಹುಡುಕಿ ಕೊಡುವ ಕೆಲಸ ಮಾಡುತ್ತಿದೆ.

ಕಂಡಿದ್ದನ್ನೆಲ್ಲಾ ಕೆದಕುತ್ತಾ, ತನ್ನಗತ್ಯಕ್ಕೆ ಬಳಸಿಕೊಳ್ಳುತ್ತಾ, ಹಾಳುಗೆಡವುತ್ತಾ ಹೊರಟಿರುವ ಮನುಷ್ಯನಿಗೆ ಈಗ ನಿಸರ್ಗದೆಡೆಗಿನ ಕಾಳಜಿ ಒಂದು ಆಯ್ಕೆಯಾಗಿ ಉಳಿದಿಲ್ಲ, ಕಡ್ಡಾಯವಾಗಬೇಕಿದೆ. ಆದರೆ ಇದನ್ನೆಲ್ಲಾ ಹೇಳುವವರು ಯಾರು? ಈ ವಿಶ್ವದ ನಿಜವಾದ ಸೌಂದರ್ಯ ಏನು, ಅದು ಹೇಗಿರಬೇಕಿತ್ತು-ಈಗ ಹೇಗಿದೆ, ಹೀಗೇ ಮುಂದುವರೆದರೆ ನಾಳೆಯ ಗತಿಯೇನು –ಎಂಬುದನ್ನೆಲ್ಲಾ ಸರಳವಾಗಿ, ಆದರೂ ಕರಾರುವಾಕ್ಕಾಗಿ, ವೈಜ್ಞಾನಿಕವಾಗಿ, ಅಂಕಿ-ಅಂಶಗಳ ಮೂಲಕ ತಿಳಿಹೇಳುವವರು ಯಾರು? ಜಗತ್ತಿನ ಅತಿ ಅಪಾಯಕಾರಿ ಪ್ರಾಣಿಯಾದ ಮನುಷ್ಯ ಮಾಡುತ್ತಿರುವ ಪರಿಸರ ಹಾನಿಗೆ ಪ್ರಾಯಶ್ಚಿತ್ತದ, ತಿದ್ದಿಕೊಳ್ಳುವ ಸಮಯ ಇದು ಎಂಬುದನ್ನು ಮನದಟ್ಟು ಮಾಡುವವರು ಯಾರು? ಬಹುಶಃ ನಿಮ್ಮ ಈ ಪುಸ್ತಕ ಆ ನಿಟ್ಟಿನ ಅತ್ಯುತ್ತಮ ಪ್ರಯತ್ನ ಅಂತ ನನಗನ್ನಿಸುತ್ತೆ.

ನಿಮ್ಮ ಪುಸ್ತಕವನ್ನು ಓದಿದಮೇಲೆ, ನಗರದ ಭಾಗವಾಗಿರುವ ನಾನು, ಇದನ್ನು ಇನ್ನಷ್ಟು ಕಲುಷಿತಗೊಳಿಸುವ ಕಾರ್ಯದಲ್ಲಿ ಮುಂದುವರೆಯದೇ, ಇಲ್ಲಿರುವಷ್ಟು ದಿನ ಆದಷ್ಟೂ ಪ್ರಾಮಾಣಿಕವಾಗಿ ನೈರ್ಮಲ್ಯ ಕಾಪಾಡಲು ನಿಶ್ಚಯಿಸಿದ್ದರೆ, ಸಾಧ್ಯವಾದಷ್ಟು ಬೇಗ ಹಳ್ಳಿಗೆ ಮರಳಿ ಅಪ್ಪ-ಅಮ್ಮರ ಒಡಗೂಡಿ ತೋಟದ ಕೆಲಸಗಳಲ್ಲಿ ತೊಡಗಬೇಕು, ಕೊಟ್ಟಿಗೆಯಲ್ಲಿ ಹುಟ್ಟಿದ ಹೊಸ ಪುಟ್ಟಿಕರಕ್ಕೆ ಹೆಸರಿಟ್ಟು ಮುದ್ದಿಸಬೇಕು ಅಂತ ತೀವ್ರವಾಗಿ ಅನ್ನಿಸುತ್ತಿದ್ದರೆ, ಈ ತ್ರಿಶಂಕು ನರಕದಿಂದ ಪಾರಾಗಲೇಬೇಕು ಅಂತ ನಾನು ನಿರ್ಧರಿಸಿದ್ದರೆ, ಅದು ನಿಮ್ಮ ಬರಹಗಳಿಗೆ ಸಿಕ್ಕ ಗೆಲುವು ಅಂತ ಭಾವಿಸುತ್ತೇನೆ. ಮುಂದೊಂದು ದಿನ ನಮ್ಮೂರ ಕೆರೆಯ ಜೌಗಿನಲ್ಲಿ ಹೊಸ ಚಿಗುರೊಡೆದರೆ,ಅದು ನಾನು ನೆಟ್ಟ ಬೀಜದ ಸೆಲೆಯಾಗಿದ್ದರೆ ನಿಮ್ಮನ್ನು ಕರೆದು ತೋರಿಸುತ್ತೇನೆ.

ಪ್ರೀತಿಯಿಂದ,

-ಸುಶ್ರುತ ದೊಡ್ಡೇರಿ

(ರೋಹಿತ್ ಚಕ್ರತೀರ್ಥ ಅವರ “ತ್ರಿಶಂಕು ನರಕ” ಕೃತಿಗೆ ಯುವ ಬರಹಗಾರ, ಕವಿ ಸುಶ್ರುತ ದೊಡ್ಡೇರಿ ಬರೆದಿರುವ ಮುನ್ನಡಿ. ಈ ಕೃತಿ,ಜೂನ್ 26, 2016ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಲೋಕಾರ್ಪಣೆಯಾಗಲಿದೆ. ಇದು ಪರಿಸರದ ಕುರಿತಾದ ಹಲವು ಲೇಖನಗಳ ಸಂಕಲನ.)

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!