ಅಂಕಣ

ಮಳೆಗಾಲದ ದಿವ್ಯೌಷಧ ಕೊಡಗಸನ

ಮಾಡಿನಿಂದ ಮುತ್ತು ಪೋಣಿಸಿದಂತೆ ಇಡೀ ದಿನ ಸುರಿಯುವ ಮಳೆಗೆ ಮನೆಯೊಳಗೆ ಸುಮ್ಮನೆ ಬೆಚ್ಚಗೆ ಕೂರಲು ನಾಲಿಗೆ ಕೇಳುವುದೇ? ಇಲ್ಲವಲ್ಲಾ, ಏನಾದರೂ ಕುರು ಕುರು ಜೊತೆಗೆ ಬಿಸಿ ಬಿಸಿ ಕಾಫಿ/ಚಹಾ ಇದ್ದರೆ ಆಹಾ, ಅದೆಷ್ಟು ಸೊಗಸು!! ಹಿಂದಿನ ಕಾಲದಲ್ಲಿ ಇಂದಿನಂತೆ ಮೆಟ್ಟಿಗೊಂದು ಅಂಗಡಿ, ಅದರ ತುಂಬಾ ರೀತಿಯ ಚಿಪ್ಸ್’ಗಳಿಲ್ಲವಾಗಿದ್ದರೂ ನಮ್ಮ ಹಿರಿಯರು ಮಳೆಗಾಲದಲ್ಲಿ ನೈಸರ್ಗಿಕವಾಗಿ ದೊರೆಯುವ ಉಷ್ಣ ದೇಹಪ್ರಕೃತಿಯ ತರಕಾರಿ ಉಪಯೋಗಿಸಿ ವಿವಿಧ ಅಡುಗೆಗಳನ್ನು ಮಾಡಿ ಸವಿಯುತ್ತಿದ್ದರಂತೆ. ಇವು ಬಾಯಿಗೆ ರುಚಿಯೂ, ಆರೋಗ್ಯಕ್ಕೆ ಹಿತವೂ  ಆಗಿರುತ್ತಿದ್ದುವೆ೦ದು ಬೇರೆ ಹೇಳಬೇಕಿಲ್ಲ ತಾನೆ?? ಅವುಗಳಲ್ಲಿ ಒಂದು ಈ ಕೊಡಗಸನ.

ಕನ್ನಡದಲ್ಲಿ ಕೊಡಸ,ಕೊಡಸಿಗ, ಕೊಡಗಸನ,ಕೊಡಗಾಸನ, ಕುಟಜಾ ಎಂದು ಕರೆದರೆ ಆ೦ಗ್ಲ ಭಾಷೆಯಲ್ಲಿ ಈಸ್ಟರ್ ಟ್ರೀ ಎನ್ನುತ್ತಾರೆ. ಸ೦ಸ್ಕೃತದಲ್ಲಿ ಕುಟಜಾ, ಗಿರಿಮಲ್ಲಿಕಾ,ವಾತ್ಸಕ, ಇ೦ದ್ರವೃಕ್ಷ ಮತ್ತು ಹಿ೦ದಿಯಲ್ಲಿ ಇ೦ದ್ರಜು, ಕುರುಚಿ ಎಂದೆಲ್ಲ ಕರೆಯಲ್ಪಡುವ ಈ ಸಸ್ಯದ ವೈಜ್ಞಾನಿಕ ಹೆಸರು ಹೊಲೆರನಿ ಆಂಟಿಡೀಸೆಂಟ್ರಿಕಾ(holarrhena antidysenterica), ಇದು ಅಪೋಸೈನೇಸಿಯೇ(Apocynaceae) ಎನ್ನುವ ಕುಟುಂಬಕ್ಕೆ ಸೇರುತ್ತದೆ.

ಹೆಸರೇ ಸೂಚಿಸುವಂತೆ ಇದು ಬೇಧಿಗೆ ರಾಮಬಾಣ. ಬೇವಿನಂತೆ ಕಹಿಯಾಗಿದ್ದರೂ ಅತ್ಯಮೂಲ್ಯ ಔಷಧೀಯ ಗುಣಗಳನ್ನು ಹೊಂದಿರುವ ಇದರ ಹೂವು, ಎಲೆ, ಬೀಜ, ಎಳೆಕೋಡು, ತೊಗಟೆ ಮತ್ತು ಬೇರಗಳನ್ನು ಬಳಸುತ್ತಾರೆ. ಇದು ವಿವಿಧ ಚರ್ಮರೋಗಗಳು ಹಾಗೂ ರಕ್ತದಲ್ಲಿನ ನಂಜಿನ ನಿವಾರಣೆಗೆ ಸಿದ್ಧೌಷಧ. ವೈದ್ಯರು ಜೀರ್ಣದ ಸಮಸ್ಯೆ ಇರುವವರಿಗೆ ಕೊಡುವ ಆಯುರ್ವೇದೀಯ ಕುಟಜಾರಿಷ್ಟದ ತಯಾರಿಕೆಗೆ ಇದೇ ಮುಖ್ಯ ವಸ್ತುವಂತೆ. ಕಫ ಹಾಗೂ ಪಿತ್ತನಿವಾರಕ ಗುಣವಿರುವ ಇದನ್ನು ಕರಾವಳಿ ಮತ್ತು ಮಲೆನಾಡಿನ ಜನತೆ ಹೆಚ್ಚಾಗಿ ಬಳಸುತ್ತಾರೆ. ಜಠರದ ಎಲ್ಲಾ ಕಾಯಿಲೆಗಳನ್ನು ಹೋಗಲಾಡಿಸುವ ಇದನ್ನು ಮಲೆನಾಡಿಗರು ಇದರ ಅಡುಗೆಯನ್ನು ವರ್ಷದಲ್ಲೊಂದು ಸಲ ಚಪ್ಪರಿಸದೆ ಇರಲಾರರು.  ಭಾರತದ ಕಾಡುಗಳಲ್ಲಿ ಧಾರಾಳವಾಗಿ ಕಾಣಸಿಗುವ ಇದರ ಮೂಲ ಹಿಮಾಲಯದ ತಪ್ಪಲು ಪ್ರದೇಶ.

ರಚನೆ
5-6 ಅಡಿ ಪೊದರಾಗಿ ಬೆಳೆದು ಮರವಾಗುವ ಈ ಸಸ್ಯ ಸಂಕುಲ ಸಾಮಾನ್ಯವಾಗಿ ಮೇ ತಿಂಗಳ ಕೊನೆಯಲ್ಲಿ ಹೂ ಬಿಡಲಾರಂಭಿಸುತ್ತದೆ. ಕಾಡುಗಳಲ್ಲಿ, ಬೇಲಿಗಳಲ್ಲಿ ಕಾಣಸಿಗುವ ಕೊಡಸಿಗೆ ಹೂ ತನ್ನ ವಿಶಿಷ್ಟ ಪರಿಮಳದಿಂದ ಗಮನ ಸೆಳೆಯುತ್ತದೆ. ಬಿಳಿಗೊಂಚಲಾಗಿ ಬಿರಿವ ಹೂವು ನೋಡಲು ಆಕರ್ಷಕವಾಗಿದ್ದು, ಇದನ್ನು ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗ ತುಪ್ಪದಲ್ಲಿ ಒಗ್ಗರಿಸಿ ಪಲ್ಯ ಇಲ್ಲವೆ ಮಜ್ಜಿಗೆ, ತೆಂಗಿನ ತುರಿ, ಮೆಣಸಿನೊಂದಿಗೆ ರುಬ್ಬಿ ರುಚಿಕಟ್ಟಾದ ತಂಬುಳಿ ಮಾಡಬಹುದು. ಮಳೆಗಾಲದ ಶೀತ, ಅಜೀರ್ಣದ ಬೇಧಿಗಳಿಗೆ ಇದು ದಿವ್ಯೌಷಧಿಯಾಗಿದೆ. ಎಲೆ ಹಸಿರಾಗಿದ್ದು, ಇದನ್ನು ನೆನೆಹಾಕಿ ಎಣ್ಣೆ ತಯಾರಿಸಿದರೆ ಅದು ಚರ್ಮದ ತುರಿಕಜ್ಜಿ, ಇಸಬು, ವ್ರಣಗಳನ್ನು ನಿವಾರಿಸುತ್ತದೆ. ಎಲೆ ತೊಟ್ಟಿನಿಂದ ಒಸರುವ ಬಿಳಿದ್ರವ ಮೇಣ ನಂಜಿನ ಹುಣ್ಣಿಗೆ ರಾಮಬಾಣ. ಇದರ ತೊಗಟೆ ಮತ್ತು ಬೇರುಗಳೂ ಔಷಧೀಯ ಗುಣಗಳನ್ನು ಹೊಂದಿದ್ದು ಮಜ್ಜಿಗೆಯಲ್ಲಿ ತೇಯ್ದು ಸೇವಿಸಿದರೆ ಅಜೀರ್ಣದಿಂದಾಗುವ ಹೊಟ್ಟೆನೋವು, ಆಮಶಂಕೆ, ಬೇಧಿಯಂಥ ಕಾಯಿಲೆಗಳನ್ನು ನಿವಾರಿಸುತ್ತದೆ. ಬೀನ್ಸ್ ನಂತಿರುವ ಎಳೆಕೋಡುಗಳು ಗೊಂಚಲಾಗಿ ಬೆಳೆದು ನೋಡಗರನ್ನು ಸೆಳೆಯುತ್ತವೆ. ಇದನ್ನು ಹಾಗಲಕಾಯಿಯಂತೆ ಎಲ್ಲಾ ತರದ ಅಡುಗೆಗಳಲ್ಲೂ ಬಳಸಬಹುದಾಗಿದೆ.

ಹೂವು
ಅರಳಿದ ಕೊಡಸಿಗೆ ಹೂಗಳನ್ನು ಕಿತ್ತು (ಮೊಗ್ಗುಗಳನ್ನೂ ಸೇರಿಸಬಹುದು), ತೊಳೆದು, ಬಿಸಿಲಿನಲ್ಲಿ ಒಣಗಿಸಿಟ್ಟುಕೊಂಡರೆ ಬೇಕಾದಾಗ ರುಚಿಕರವಾದ ತಂಬುಳಿ ಮಾಡಿ ಉಣ್ಣಬಹುದು. ತಂಬುಳಿ ಮಾಡುವುದು ಬಲು ಸುಲಭ. ಅರ್ಧ ಹಿಡಿಯಷ್ಟು ಒಣಗಿದ ಹೂಗಳನ್ನು ತುಪ್ಪದಲ್ಲಿ ಹುರಿದು, ತುರಿದ ತೆಂಗಿನಕಾಯಿ ಒಂದು ಹಿಡಿ, ಒಂದು ಚಮಚ ಜೀರಿಗೆ, ಬೇಕಿದ್ದರೆ ಹಸಿರುಮೆಣಸು ಅಥವಾ ಕಾಳುಮೆಣಸು ಸೇರಿಸಿ ರುಬ್ಬಬೇಕು. ಇದಕ್ಕೆ 4 ಸೌಟು ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಾಸಿವೆ-ಕರಿಬೇವಿನ ಒಗ್ಗರಣೆ ಕೊಟ್ಟರಾಯಿತು. ಕೊಡಸಿಗೆ ತಂಬುಳಿಗೆ ಸ್ವಲ್ಪ ಒಗರು/ಕಹಿ ರುಚಿಯಿರುತ್ತದೆ. ಇದು ಬೇಡವೆನಿಸಿದರೆ ಒಂದು ಚಿಕ್ಕ ಚೂರು ಬೆಲ್ಲವನ್ನು ಸೇರಿಸಬಹುದು. ‘ಕೊಡಸಿಗೆ ಹೂವಿನ ತಂಬುಳಿ’ ಯು ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ.   ಹೆಚ್ಚು ಪ್ರಮಾಣದಲ್ಲಿ ಕೊಡಗಾಸನ ಹೂಗಳು ಲಭ್ಯವಿದ್ದರೆ, ಅವುಗಳನ್ನು ಉಪ್ಪು ಸೇರಿಸಿ ಒಣಗಿಸಿ ಶೇಖರಿಸಿಟ್ಟುಕೊಂಡು, ಬೇಕೆನಿಸಿದಾಗ, ಎಣ್ಣೆ ಅಥವಾ ತುಪ್ಪದಲ್ಲಿ ಕರಿದು, ಊಟಕ್ಕೆ ಸಂಡಿಗೆಯಂತೆಯೂ ಬಳಸಬಹುದು.

ಎಳೆಯ ಕೋಡುಗಳು
ಕೋಡುಗಳನ್ನು ತುಂಡರಿಸಿ, ನೀರಿನಲ್ಲಿ ಒಂದು ಕುದಿ ಕುದಿಸಿ ಸೋಸಿದರೆ ಮೇಣದ ಅಂಶವನ್ನು ಹೋಗಲಾಡಿಸಬಹುದು. ಇದರಿಂದ  ಪಲ್ಯ, ಮೆಣಸ್ಕಾಯಿ, ಸಾಂಬಾರು, ಗೊಜ್ಜು ಮತ್ತು ಕಾಯಿರಸಗಳಂಥವುಗಳನ್ನು ಮಾಡಿ ಸವಿಯಬಹುದು.  ಹಾಗಲ ಕಾಯಿಯಂತೆ ಉಪ್ಪು-ಹುಳಿ-ಬೆಲ್ಲ- ಖಾರಗಳು ಸಮಕಟ್ಟಾದರೆ ಬಾಯಲ್ಲಿ ನೀರೂರಿಸುವ ಮಳೆಗಾಲದ ಸವಿ ಸವಿಯಾದ ಅಡುಗೆಗಳು ಆರೋಗ್ಯಕ್ಕೂ ಹಿತಕಾರಿ.

ಮರದ ತೊಗಟೆ
8-12 ವರ್ಷ ಬೆಳೆದ ಮರದ ತೊಗಟೆಯನ್ನು ಜುಲೈಯಿ೦ದ ಸಪ್ಟಂಬರ್ ತಿ೦ಗಳ ಮಧ್ಯೆ ತೆಗೆದು ಒಣಗಿಸಿ ಪುಡಿ ಮಾಡಿ ಇಟ್ಟುಕೊ೦ಡರೆ ಹೊಟ್ಟೆಹುಳು, ಭೇದಿಯ೦ತಹ ಕಾಯಿಲೆಗಳಿಗೆ ಒ೦ದು ಚಮಚದಷ್ಟನ್ನು ಮಜ್ಜಿಗೆಯೊಂದಿಗೆ ಸೇರಿಸಿ ತೆಗೆದುಕೊಳ್ಳಬಹುದು. ಅಜೀರ್ಣದ೦ತಹ ರೋಗಗಳಿಗೆ ಇದು ರಾಮಬಾಣ. ಆಯುರ್ವೇದದ ಸಿದ್ಧೌಷಧಿ ಕುಟಜಾರಿಷ್ಟ ತಯಾರಿಕೆಯಲ್ಲಿ ತೊಗಟೆಯನ್ನು ಬಳಸುತ್ತಾರೆ.

ಕೊಡಸಿಗೆ ಬೀಜಗಳು
ಸಾಧಾರಣ 30 ಸೆ೦ಟಿಮೀಟರುಗಳಷ್ಟು ಉದ್ದಕ್ಕೆ ಬರುವ ಕೋಡುಗಳು ಬಲಿತು ಕ೦ದು ಬಣ್ಣದ ಬೀಜಗಳು ದೊರೆಯುತ್ತವೆ. ಒ೦ದು ಕೋಡಿನಲ್ಲಿ ಸಾಧಾರಣ 20-30 ಬೀಜಗಳಿರುತ್ತವೆ. ರಕ್ತಭೇದಿಗೆ ಚರಕ ಸ೦ಹಿತೆಯಲ್ಲಿ ಇದರ ಬೀಜ ಮತ್ತು ತೊಗಟೆಯನ್ನು ಶು೦ಠಿಯೊ೦ದಿಗೆ ಜಜ್ಜಿ ಬಳಸಬಹುದೆ೦ದು ಉಲ್ಲೆಖಿಸಲಾಗಿದೆಯ೦ತೆ. ಬೀಜವನ್ನು ಮೂಲವ್ಯಾಧಿ, ಹೊಟ್ಟೆಹುಳದ ಬಾಧೆ ಮತ್ತು ರಕ್ತಬೇಧಿಗಳ ಹತೋಟಿಗೆ ಬಳಸುತ್ತಾರೆ. ಒಣಗಿಸಿ ಕುಟ್ಟಿ ಪುಡಿಮಾಡಿಟ್ಟುಕೊಂಡರೆ ಬೇಕಾದಾಗ ಮಜ್ಜಿಗೆಯೊಂದಿಗೆ ಸೇವಿಸಬಹುದು.

ಬೇರುಗಳು
ಮುಖ್ಯವಾಗಿ ಬೇರುಗಳಿ೦ದ ತಯಾರಿಸಿದ ಕಷಾಯವನ್ನು ಗಾಯ, ಹುಣ್ಣು, ಕಜ್ಜಿಗಳನ್ನು ತೊಳೆಯಲು ಬಳಸುತ್ತಾರೆ.
ಸೆಪ್ಟಂಬರಿನ ನಂತರ ಕೋಡುಗಳು ಬಲಿಯುವುದರಿಂದ ಹೆಚ್ಚಾಗಿ  ಜುಲೈ-ಆಗಸ್ಟ್ ತಿಂಗಳಿಡೀ ಬಳಸಬಹುದಾಗಿದೆ. ಉರುವಲಿಯಾಗಿ, ಬೇಲಿಯಾಗಿ ಕಾಣಸಿಗುವ ಇದು ಇಂದಿನ ಯುವಪೀಳಿಗೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಅಳಿಯದಂತೆ ಕಾಪಾಡುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದು.

ಆಯುರ್ವೇದ ಸಿದ್ಧೌಷಧಿಗಳು

  • ಕುಟಜಾರಿಷ್ಟ (Kutajarista)

  • ಕುಟಜಾವಲೇಹ (Kutajavaleha)

  • ಕುಟಜಾಪರಪತಿ (Kutajaparpati)

  • ಕುಟಜಾಷ್ಟಕ ಕ್ವತ (Kutajastaka kvatha)

  • ಕುಟಜಾಘನ ವಟಿ (Kutajaghana vati)

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!