ತನುವ ಕಾಂತಿ ಸೆಳೆಯುವಂತೆ
ಹೊಳೆಯುತಿವೆಯಾ ಕುಂಡಲಗಳು
ಕರ್ಣಗಳಲಿ ಮಿರುಗುತಿದೆ ತನುವ
ತಬ್ಬಿಹ ಕವಚ ಕಾಂತಿಗೆ
ಕರುಳ ಬಳ್ಳಿಯಲಡಗಿದ ನೋವು
ನರನರಗಳಲ್ಹರಡಿ ಇರಿದು ಬಂದಂತೆ
ತನ್ನೊಡಲ ಕಂದ ನಗುವ ತಂದಂತೆ
ಮರೆತೆಲ್ಲವನು ಬರೀ ನೆನಪಲ್ಲವವೆಲ್ಲ!
ಮೊದಲುದಿಸಿದ ಮಮತೆಯ ಹೊನಲೋ
ಭವಿತವ್ಯದ ದಿಗಿಲೋ ಕನ್ಯಾಮಣಿಗೆ
ಪೆಟ್ಟಿಗೆಯೊಳಗಣ ತೊಟ್ಟಿಲು ಹಸುಗೂಸಿಗೆ
ತೇಲಿ ಬಿಟ್ಟಳದನಂದು ಗಂಗಾ ಒಡಲಿಗೆ
ಕತ್ತೆತ್ತಿ ನೋಡಲು ಪ್ರಭೆ ಅವನದು
ನಗುತಿಹನೆ ಮರುಗುತಿಹನೆ ನಿರ್ಭಾವುಕನು
ಮಡಿಲು ಬರಿದು ಒಡಲು ಬರಿದು
ಬಿಕ್ಕಿದಳು ಬಿಕ್ಕುತಿಹಳು ಪೃಥೆ
ಕಾಲದೋಟದಲೂ ನೆನಪುಗಳು ಹಸಿಯೇ
ಕೆರಳಿ ನಿಂತಿದೆ ಅವನೆದುರು ನಿಂತಾಗ
ಕರ್ಣ ಕುಂಡಲಧಾರಿ ರಾಧೇಯನೆ?
ಇಲ್ಲ! ಅವನೆಂದಿಗೊ ಕುಂತಿಪುತ್ರನೆ
ನಗುತಿರುವರಲ್ಲಾ ಸೂತಪುತ್ರನೆಂದವನ
ಸೂರ್ಯಪುತ್ರನವನೆಂದುಸುರುವ ಬಯಕೆ
ತಕ್ಕುದಲ್ಲವದು ಪಾಂಡು ಪತ್ನಿಗೆ
ಬಲ್ಲಿದರೂ ಬಲ್ಲದವಳಂತಿರ್ಪ ಪಾಡು ಕುಂತಿಗೆ
ಕುವರಗೆ ಪ್ರೀತೀಲಿ ಸೋಕಲಿ
ಸೂರ್ಯನ ಕಿರಣ ಆಶೀರ್ವಚನ.
ದೂರದಿಂದಲೇ ನೋಡುತಿಹಳವನ
ಕಣ್ತುಂಬಾ ಮನದುಂಬಿ ಕಣ್ತುಂಬಿ