ಅಂಕಣ

ಕನ್ನಡ ರತ್ನ, ಭಾರತ ರತ್ನ- ಡಾ| ಸಿ.ಎನ್. ಆರ್. ರಾವ್

2013ನೇ ವರ್ಷದ ಭಾರತ ರತ್ನ ಪ್ರಶಸ್ತಿ ಘೋಷಣೆ ಕನ್ನಡಿಗರ ಪಾಲಿಗೆ ಒಂದು ಪ್ರಮುಖದ ಸುದ್ದಿಯಾಯಿತು. ಚಿರಪರಿಚಿತರಾದ , ಲಕ್ಷಾಂತರ ಪ್ರೇಕ್ಷಕರ ನಡುವೆ ಶತಕ ಬಾರಿಸಿದ ಸಚಿನ್ ತೆ೦ಡೂಲ್ಕರ್ ಜೊತೆಗೆ, ಇನ್ನೊಬ್ಬರು ಸದ್ದು­ಗದ್ದಲವಿಲ್ಲದ ಲ್ಯಾಬೊರೇಟರಿಯಲ್ಲಿ ಶತಕಗಳ ಮೇಲೆ ಶತಕ ಸಾಧಿಸಿದರೂ ಪ್ರಚಾರ, ಪ್ರಸಿದ್ಧಿಗಳಿ೦ದ ದೂರವುಳಿದು ಅಪರಿಚಿತರಾಗಿದ್ದವರು. ರಾಜಧಾನಿ ಬೆಂಗಳೂರಿನಲ್ಲಿದ್ದುಕೊಂಡೇ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನಿತ್ತು ವಿದೇಶಗಳಲ್ಲಿ ಮನೆ ಮಾತಾಗಿದ್ದವರನ್ನು ನಾವು ಗುರುತಿಸುವ ಕಾಲ ಆಗ ಬಂದಿತ್ತು. ಯಾಕೆಂದರೆ ಅಷ್ಟರವರೆಗೆ ಎಲೆಮರೆಯ ಕಾಯಿಯಂತಿದ್ದ ಮಹಾನ್ ವಿಜ್ಞಾನಿ ಬೆಂಗಳೂರಿನ ಡಾಕ್ಟರ್ ಸಿ. ಎನ್. ಆರ್. ರಾವ್ ಗೆ ದೇಶದ ಅತ್ಯುನ್ನತ ಗೌರವ ತಾನಾಗಿ ಒಲಿಯಿತೆಂದರೆ ತಪ್ಪಾಗಲಾರದು. ಪ್ರೊ ರಾವ್ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಚಿ೦ತಾಮಣಿಯೆ೦ದರೆ ಬರಿ ಬ೦ಡೆಕಲ್ಲನ್ನೂ ಚಿನ್ನವನ್ನಾಗಿ ಪರಿವರ್ತಿಸಬಲ್ಲ ಒ೦ದು ಮಣಿ. ಹಾಗೆಯೆ ಪ್ರತಿಭೆಯ ಒಂದೊಂದೇ ಪರಮಾಣುವನ್ನು ಹೆಕ್ಕಿ ಹೆಕ್ಕಿ ಒಟ್ಟುಗೂಡಿಸಿ ಚಿನ್ನ ತಯಾರಿಸಬಲ್ಲ ಸ್ಪರ್ಶಮಣಿ , ಅತ್ಯಮೂಲ್ಯ ಕನ್ನಡರತ್ನ ಡಾ|ರಾವ್ ಎ೦ದರೆ ತಪ್ಪಾಗಲಾರದು. ದೇಶದ ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಅವರು ಸಲ್ಲಿಸುತ್ತಿದ್ದಾರೆ. ನಮಗೆಲ್ಲ ಮಾದರಿಯಾಗಿ ಇ೦ದು ತಮ್ಮ 82ನೆಯ ಹುಟ್ಟುಹಬ್ಬವನ್ನಾಚರಿಸುತ್ತಿರುವ ಸಾಧನೆಯ ಗಣಿ, ಅಪರೂಪದ ಸರಳ ಜೀವಿ ಡಾ| ಸಿ.ಎನ್. ರಾವ್ ಅವರ ಜೀವನ ಚರಿತ್ರೆಯ ಸ್ಥೂಲ ಚಿತ್ರಣಕ್ಕೊ೦ದು ನನ್ನ ಪ್ರಯತ್ನ……….

ಇವರ ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಆಗಿದ್ದು 1934 ಜೂನ್ 30 ರಂದು. ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದಇವರ ತಂದೆ ಶ್ರೀ ಹನುಮಂತ ನಾಗೇಶ ರಾವ್ ಹಾಗೂ ತಾಯಿ ಶ್ರೀಮತಿ ನಾಗಮ್ಮ. ಚಿಕ್ಕಂದಿನಿಂದಲೇ ತಾಯಿಯಿಂದ ಹಿಂದೂ ಪರಂಪರೆ ಹಾಗೂ ಸಂಸ್ಕೃತಿ ಬಗ್ಗೆ ಅಪಾರ ತಿಳುವಳಿಕೆ ಪಡೆದಿದ್ದ ರಾಮಚಂದ್ರ ರಾವ್ ಗೆ ಚಿಕ್ಕಂದಿನಿಂದ ಅವರು ಹೇಳುತ್ತಿದ್ದ ರಾಮಾಯಣ, ಮಹಾಭಾರತ ಹಾಗೂ ಭಾಗವತದ ಕಥೆಗಳು ತುಂಬಾ ಪ್ರಭಾವ ಬೀರಿದ್ದವು. ಆಂಗ್ಲ ಭಾಷೆಯ ಹಿಡಿತ ಹೊಂದಿದ ತಂದೆಯವರಿಂದ ಇಂಗ್ಲೀಷ್ ಪಾಠಗಳನ್ನು ಮನೆಯಲ್ಲೆ ಕರಗತ ಮಾಡಿಕೊಂಡ ರಾಮಚಂದ್ರರು “ಮನೆಯೆ ಮೊದಲ ಪಾಠಶಾಲೆ, ಜನನಿ ಮೊದಲ ಗುರು” ಎಂಬಂತೆ ತನ್ನ ತಾಯಿಯಿಂದ ಆರನೆಯ ವಯಸ್ಸಿಗೆ ಪ್ರಾಥಮಿಕ ಪಾಠಗಳನ್ನೆಲ್ಲ ಮನೆಯಲ್ಲಿಯೇ ಕಲಿತರು. ನಂತರ 1940ರಲ್ಲಿ ನೇರವಾಗಿ ಮಾಧ್ಯಮಿಕ ತರಗತಿಗೆ ಸೇರ್ಪಡೆಗೊಂಡರು. ಆದ್ದರಿಂದ ಇವರು 7ನೆಯ ತರಗತಿಯನ್ನು1944ರಲ್ಲಿ ತಮ್ಮ ಹತ್ತನೆ ವಯಸ್ಸಿಗೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಇವರ ತಂದೆ ಆ ಕಾಲದಲ್ಲಿ ಪಾಸಾದ ಮಗನಿಗೆ 25 ಪೈಸೆಯನ್ನು ಉಡುಗೊರೆಯಾಗಿ ನೀಡಿದ್ದರಂತೆ!.

ತದನಂತರ ಬೆಂಗಳೂರಿನ ಬಸವನಗುಡಿಯ ಆಚಾರ್ಯ ಕನ್ನಡ ಪಾಠಶಾಲೆಯಲ್ಲಿ ಪ್ರೌಢ ಶಿಕ್ಷಣಕ್ಕೆ ಸೇರಿಕೊಂಡರು. ಇವರ ತಂದೆಗೆ ಮಗ ಮಾತೃಭಾಷೆಯಲ್ಲಿಯೆ ಮೊದಲು ಕಲಿಯಬೇಕೆಂಬ ಬಯಕೆಯಿತ್ತು. ಅಲ್ಲಿ ಓರಗೆಯವರೆಲ್ಲ ರಾಮಚಂದ್ರರಿಂದ ವಯಸ್ಸಿನಲ್ಲಿ ದೊಡ್ಡವರಾಗಿದ್ದರಲ್ಲದೆ ಸುಮಾರು ಪಾಠಗಳನ್ನು ಇವರಿಂದಲೆ ಹೇಳಿಸಿಕೊಂಡು ಕಲಿಯುತ್ತಿದ್ದರಂತೆ!. ಅಲ್ಲಿನ ವಿದ್ಯಾರ್ಥಿಯಾಗಿದ್ದಾಗ ಶಾಲೆಗೆ ಭೇಟಿ ನೀಡಿದ್ದ ನೋಬೆಲ್ ವಿಜೇತ ಖ್ಯಾತ ವಿಜ್ಞಾನಿ ಡಾಕ್ಟರ್ ಸಿ.ವಿ. ರಾಮನ್ ರು ಇವರ ಮೇಲೆ ತುಂಬಾ ಪ್ರಭಾವ ಬೀರಿದರು. ಪ್ರಯೋಗಾಲಯದಲ್ಲಿ ಮಾಡಿ ತೋರಿಸಿದ ವಿಜ್ಞಾನದ ಮಾದರಿ ಪ್ರಯೋಗಗಳು ಬಾಲಕ ರಾಮಚಂದ್ರ ರನ್ನು ಆ ಕ್ಷೇತ್ರದತ್ತ ಸೆಳೆಯಿತು ಎಂದರೆ ತಪ್ಪಾಗಲಾರದು. ತಂದೆಯ ಆಸೆಯಂತೆ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿಯೇ ಓದಿ1947 ರಲ್ಲಿ ಹತ್ತನೆಯ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದರು. ಆಗ ಅವರಿಗೆ ಕೇವಲ 13 ವರ್ಷ! ಮನೆಯಲ್ಲಿ ತಂದೆಯ ಇಂಗ್ಲಿಷ್ ತರಬೇತಿಯನ್ನು ಒಟ್ಟೊಟ್ಟಿಗೆ ಕಲಿತಿದ್ದರಿಂದ ಆಗಲೆ ವಿಜ್ಞಾನದ ಅದರಲ್ಲೂ ರಾಸಾಯನಿಕ ಶಾಸ್ತ್ರದಲ್ಲಿನ ಅವರ ಒಲವು ವಿವಿಧ ಪುಸ್ತಕಗಳನ್ನು ವಾಚನಾಲಯದಿಂದ ತಂದು ಓದುವಾಗ ಹೊಮ್ಮುತ್ತಿತ್ತು.

ಪದವಿ ಶಿಕ್ಷಣ ಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದ ರಾಮಚಂದ್ರರು ವಿದ್ಯಾಭ್ಯಾಸದ ಜೊತೆಗೆ ಆಂಗ್ಲ ಹಾಗೂ ಸಂಸ್ಕೃತ ಭಾಷಾ ಪಾಂಡಿತ್ಯವನ್ನು ಗಳಿಸಿಕೊಂಡರು. ಕನ್ನಡ ಸಾಹಿತ್ಯ ದಲ್ಲಿ ಅಪಾರ ಒಲವಿದ್ದ ಇವರು ಬಾಲ್ಯದಿಂದಲೇ ಮಾಸ್ತಿಯಂತಹ ಅನೇಕ ಸಾಹಿತಿಗಳ ಒಡನಾಟ ಹೊಂದಿದ್ದರು ಹಾಗೂ ಚಿಕ್ಕಪುಟ್ಟ ಲೇಖನಗಳನ್ನು ಬರೆದಿದ್ದರಲ್ಲದೆ ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದರು. ಡಿಗ್ರಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮುಖಾಂತರ 1951ರಲ್ಲಿ ತಮ್ಮ 17ನೆಯ ವಯಸ್ಸಿಗೇ ಪ್ರಥಮ ದರ್ಜೆಯಲ್ಲಿ ಪಾಸಾದರೆಂದರೆ ಅವರ ಪ್ರತಿಭೆ ಎಂತಹುದೆಂದು ಅರಿವಾದೀತು. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕಂದಿನಿಂದಲೂ ಶಿಸ್ತು ಹಾಗೂ ಸಮಯದ ಸದುಪಯೋಗವನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡಿದ್ದರು. ಆನಂತರ ಸ್ನಾತಕೋತ್ತರ ಪದವಿಗಾಗಿ ಭಾರತ ವಿಜ್ಞಾನ ಕೇಂದ್ರ (ಇಂಡಿಯನ್ ಇನ್ಸ್ಟಿಟ್ಯೂಟ್ ಓಫ್ ಸೈನ್ಸ್ – ಐಐಎಸ್ ಸಿ(IISc))ದಲ್ಲಿ ರಾಸಾಯನ ಶಾಸ್ತ್ರ (chemical engineering) ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಅಲ್ಲಿಂದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ 2 ವರ್ಷ ಪೂರೈಸಿ ಸ್ನಾತಕೋತ್ತರ ಪದವಿ ಗಿಟ್ಟಿಸಿಕೊಂಡರು. ನಂತರ 1958 ರಲ್ಲಿ ಐಐಟಿ ಕಾನ್ಪುರ (IIT Kanpur)ದ ಮೂಲಕ ಪಿಹೆಚ್. ಡಿ. ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ದೊರೆಯಿತು. ಅಮೇರಿಕಾದ ಪೆರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಕೇವಲ ಎರಡು ವರ್ಷ ಒಂಭತ್ತು ತಿಂಗಳಲ್ಲಿ ಪಡೆದುಕೊಂಡರು. ಆಗ ಅವರಿಗೆ ಕೇವಲ 24 ವರ್ಷಗಳು!!

1959ರಿಂದ ಹುಟ್ಟೂರಾದ ಬೆಂಗಳೂರಿನ ಐಐಎಸ್’ಸಿನಲ್ಲಿ ಕೇವಲ 500 ರೂಪಾಯಿಗಳ ಮಾಸಿಕ ವೇತನದೊಂದಿಗೆ ವೃತ್ತಿ ಜೀವನ ಆರಂಭಿಸಿದರು. 1960 ಮೇ 15ರಂದು ರಾವ್ ಅವರ ಮದುವೆ ಬಾಪೂಜಿ ಕುಟುಂಬದವಳಾದ ಆಂಗ್ಲಭಾಷಾ ಪದವೀಧರೆ ಇಂದುಮತಿ ಎಂಬವರೊಂದಿಗೆ ಬೆಂಗಳೂರಿನಲ್ಲಿ ಹಿರಿಯರ ಸಮ್ಮುಖದಿಂದ ನೆರವೇರಿತು. ಅನುಭವಕ್ಕಾಗಿ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ 17 ವರ್ಷಗಳ ಕಾಲ ದುಡಿದು ಮತ್ತೆ ಬೆಂಗಳೂರಿನ ಐಐಎಸ್’ಸಿ ನಲ್ಲಿ ಮಾರ್ಗದರ್ಶಕರಾಗಿ ನೇಮಕಗೊಂಡರು. 1989 ರಲ್ಲಿ ಬೆಂಗಳೂರಿನ ಜಕ್ಕೂರಿನಲ್ಲಿ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ(Jawaharlal nehru advanced scientific research centre JNCASR)ವನ್ನು ಸ್ಥಾಪಿಸಿ ಯಶಸ್ವೀ ಗೌರವಾಧ್ಯಕ್ಷರಾಗಿ ಇಂದಿಗೂ ಕಾರ್ಯ ನಿರ್ವಹಿಸುವ ಅವರ ಸಾಧನೆ ಮತ್ತು ಛಲ ಅತ್ಯದ್ಭುತ. ಇವರು ಭಾರತದ ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಅಧ್ಯಕ್ಷರೂ ಆಗಿ ನೇಮಕಗೊಂಡಿದ್ದಾರೆ.

ರಾವ್ ಅವರ ಮುಖ್ಯ ಸಂಶೋಧನೆಗಳು ಅತಿವಾಹಕತೆ( super conductivity) ಹಾಗೂ ಅತಿ ಪರಮಾಣು(nano particle) ಕುರಿತಾಗಿದ್ದು 48ಕ್ಕೂ ಅಧಿಕ ವೈಜ್ಞಾನಿಕ ಪುಸ್ತಕಗಳನ್ನು ಬರೆದು ವಿಶ್ವ ವಿಖ್ಯಾತರಾಗಿದ್ದಾರೆ. ಇವರು ಮಂಡಿಸಿದ 1600ಕ್ಕೂ ಅಧಿಕ ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಿ ಅಂಶಗಳ ಪ್ರಕಾರ ಇವರು ಒಂದೊಂದು ಪುಸ್ತಕದಲ್ಲೂ 34 ಲಕ್ಷ ಶಬ್ದಗಳನ್ನು ಬರೆದಿದ್ದು ಒಟ್ಟು1 ಕೋಟಿ 30 ಲಕ್ಷ ಶಬ್ದ ಆಗುತ್ತವೆ. ಇವನ್ನು ಗಣಕಯಂತ್ರದಲ್ಲಿ ಮುದ್ರಿಸಿದ ಅವರ ಶ್ರಮ ಹಾಗೂ ಸಾಧನೆ ಅಸಾಮಾನ್ಯವೇ ಸರಿ. 140ಕ್ಕೂ ಅಧಿಕ ಜನ ವಿದ್ಯಾರ್ಥಿಗಳು ಡಾಕ್ಟರ್ ಸಿ. ಎನ್.ಆರ್.ರಾವ್ ವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಗಳಿಸಿ ಉನ್ನತ ಹುದ್ದೆಗಳನ್ನಲಂಕರಿಸಿದ್ದಾರೆ. ರಾವ್ ಅವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ ಅನೇಕ ರಾಷ್ಟ್ರಗಳು ತಮ್ಮ ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ ಅಲ್ಲದೆ ಇವರು ಅವುಗಳ ಸ್ವಾಮ್ಯ ಹಕ್ಕುಗಳನ್ನು ಪಡೆಯದೆ ಮುಕ್ತ ( open source )ವಾಗಿಸಿ ಬಿಟ್ಟಿದ್ದಾರೆ. ಇದರಿಂದ ವಿಜ್ಞಾನದ ಸಂಶೋಧನೆಗಳು ದೇಶ ವಿದೇಶಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಕಲಿಕೆಗೆ ಸುಲಭವಾಗಿ ಕೈಗೆಟುವಂತಿವೆ.

ಇವರ ಪತ್ನಿ ಇಂದುಮತಿ ರಾವ್ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಶಿಕ್ಷಕಿಯಾಗಿ ನಿವೃತ್ತಿಗೊಂಡ ಬಳಿಕ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಬಡಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ. ಮಕ್ಕಳು ಅರ್ಥೈಸುವ ಮಾದರಿಯಲ್ಲಿ ಕಬ್ಬಿಣದ ಕಡಲೆಯಂತಿರುವ ರಾಸಾಯನ ಶಾಸ್ತ್ರನ್ನು ಸರಳವಾದ ಸೂತ್ರಗಳಿಂದ ವಿವರಿಸುವ ಇವರು ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಪತಿಯ ಹಲವು ಪುಸ್ತಕಗಳನ್ನು ಹೊರ ತಂದಿದ್ದಾರೆ.

ಇವರ ಪುತ್ರ ಹಾಗೂ ಪುತ್ರಿಯರೂ ಅವರ ಸಾಧನೆಯ ಹಾದಿಯಲ್ಲಿಯೇ ಸಾಗುತ್ತ ಬೆಂಬಲವಾಗಿದ್ದಾರೆ. ಪುತ್ರ ಸಂಜಯ್ ರಾವ್ ಬೆಂಗಳೂರಿನ ಸಂಸ್ಥೆಯಲ್ಲಿ ತಂದೆಯೊಂದಿಗೆ ದುಡಿಯುತ್ತಿದ್ದರೆ ಮಗಳು ಸುಚಿತ್ರಾ ರಾವ್ ಪತಿಯೊಂದಿಗೆ ಪುಣೆಯಲ್ಲಿ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿಯಾದ ಮಾರ್ಗದರ್ಶನ, ಕಠಿಣ ಪರಿಶ್ರಮ, ಸಾಧಿಸುವ ಛಲಗಳಿದ್ದರೆ ಮನುಷ್ಯ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ರಾಮಚಂದ್ರ ರಾವ್ ಅವರೇ ಸಾಕ್ಷಿ. ಅಮೋಘ ಸಾಧನೆಯ 82ರ ಹರೆಯದ ಚೈತನ್ಯದ ಚಿಲುಮೆ ರಾವ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು……

ಸಂದ ಕೆಲವು ಮುಖ್ಯ ಪ್ರಶಸ್ತಿಗಳು

1. 60ಕ್ಕೂ ಅಧಿಕ ದೇಶ ವಿದೇಶ ಸಂಸ್ಥೆಗಳ ಗೌರವ ಡಾಕ್ಟರೇಟ್

2. ಪದ್ಮಶ್ರೀ (1974)

ಪದ್ಮವಿಭೂಷಣ (1985)

3. ಕರ್ನಾಟಕ ರತ್ನ (2001)

4. ಭಾರತೀಯ ವಿಜ್ಞಾನಿ ಪ್ರಶಸ್ತಿ (2004)

5. ಭಾರತ ರತ್ನ (2014)

6. ಯುನೆಸ್ಕೊ ಪ್ಯಾರಿಸ್ ನ ಆಲ್ಬರ್ಟ್‌ ಐನ್‌ಸ್ಟೈನ್ ಚಿನ್ನದ ಪದಕ

  1. 7.ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1968)

  2. 8. ಮೈಸೂರು (1961) ಹಾಗೂ ಕಲ್ಕತ್ತಾ (2004) ವಿಶ್ವವಿದ್ಯಾನಿಲಯಗಳ ಡಿ.ಎಸ್ ಸಿ ಪದವಿ

9. ಸೋಮಿಯಾ ಪ್ರಶಸ್ತಿ (2004)

ಅಲ್ಲದೇ ಹಲವಾರು ವಿದೇಶೀ ವಿಶ್ವವಿದ್ಯಾನಿಲಯದ ಉನ್ನತ ಪ್ರಶಸ್ತಿ, ಹಲವಾರು ಗೌರವಗಳು ಇವರ ಮುಡಿಗೇರಿವೆ.

ವಿಶೇಷ ಮಾಹಿತಿ

1953ರಲ್ಲಿ ರಾವ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗ ಮೊದಲ ಬಾರಿ ಲೀನಸ್ ಪೋಲಿಂಗ್ ಬರೆದ ರಾಸಾಯನಿಕ ಬಂಧಗಳ ಗುಣಸ್ವಭಾವ(The Nature of Chemical bond)ದ ಬಗ್ಗೆ ಬರೆದ ಸಂಶೋಧನಾ ಗ್ರಂಥವನ್ನು ಪ್ರಾಧ್ಯಾಪಕರೊಬ್ಬರಿಂದ ಎರವಲು ಪಡೆದು ಸುಮಾರು ಒಂದು ವರ್ಷ ಸತತ ಓದಿ ಅಣು ಪರಮಾಣುಗಳ ರಚನೆ, ಬಂಧಗಳ ತಿಳುವಳಿಕೆ ರಾಸಾಯನ ಶಾಸ್ತ್ರದ ಮನವರಿಕೆಗೆ ಹೇಗೆ ಸಹಕಾರಿಯಾಗಿಯೆಂದು ಪೂರ್ಣವಾಗಿ ಅರಿತುಕೊಂಡರು. ಬಳಿಕ ಲೀನಸ್ ಪೋಲಿಂಗ್ ಅವರ ಮಾದರಿ ವ್ಯಕ್ತಿಯಾಗಿ ಬಿಟ್ಟರು ಹಾಗೂ ಅವರನ್ನು ಮುಖತಃ ಭೇಟಿಯಾಗಬೇಕೆಂಬ ಬಯಕೆ ಮೊಳಕೆಯೊಡೆಯಿತು. 1956ರಲ್ಲಿ ಹೆಚ್ಚಿನ ಅಭ್ಯಾಸಕ್ಕಾಗಿ ಯುಎಸ್ ಎ (USA)ಯ ಪೆರ್ಡೂ ವಿಶ್ವವಿದ್ಯಾಲಯ (PURDUE University) ಕ್ಕೆ ಹೋಗಿದ್ದಾಗ ಈ ಬಯಕೆ ತೀರಿತೆಂದು ಖುಷಿಯಿಂದ ರಾವ್ ಅವರು ತಮ್ಮ ಜೀವನ ಚರಿತ್ರೆ ಪುಸ್ತಕವಾದ “ಕ್ಲೈಂಬಿಂಗ್ ದಿ ಲಿಮಿಟ್’ಲೆಸ್ ಲಾಡರ್”( Climbing the Limitless Ladder -A Life in Chemistry ) ನಲ್ಲಿ ಹೇಳಿಕೊಂಡಿದ್ದಾರೆ. ಬಳಿಕ ಲೀನಸ್ ತಮ್ಮ ಮುಂದಿನ ಪುಸ್ತಕಗಳಲ್ಲಿ ಇವರ ಸಂಶೋಧನೆಗಳನ್ನು ಪ್ರಸ್ತಾಪಿಸಿದ್ದು ತನ್ನ ಜೀವನದ ಮರೆಯಲಾಗದ ಅನುಭವವೆಂದೂ ಡಾ| ರಾವ್ ಹೇಳಿದ್ದಾರೆ !!

ಹೆಚ್ಚಿನ ಮಾಹಿತಿಗೆ http://www.jncasr.ac.in/cnrrao/index.html

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!