ಅಂಕಣ

ಕಂಡೆ ಗುಡ್ಡದ ಗುಹೆಯೊಳಗೆ…………?

ನೀವು ಈ ಗುಡ್ಡ ನೋಡಿದಿರಾ?  ಇಲ್ಲ ತಾನೆ?  ಬನ್ನಿ ನನ್ನ ಜೊತೆ ಹೋಗೋಣ.  ಹೀಗಂತ ಇದುವರೆಗೂ ಎಲ್ಲಿಯೂ ಕಂಡರಿಯದ ಒಬ್ಬ ಸಾಧು ನನ್ನ ಕರೆದುಕೊಂಡು ಹೊರಟ.  ಗಡ್ಡದಾರಿ, ಕಟ್ಟು ಮಸ್ತಾದ ಶರೀರ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನುವಂತಿರುವ ಆಳೆತ್ತರದ ಅಜಾನುಬಾಹು.  ಅವನು ಹೆಜ್ಜೆ ಇಟ್ಟರೆ ಅಲ್ಲೊಂದು ಗುಳಿ ಬೀಳಬಹುದೇನೊ ಅನ್ನುವಂತಿರುತ್ತದೆ.  ಚಿಕ್ಕ ಮಕ್ಕಳು ಕಂಡರೆ ಕಿರುಚಿ ಓಡಬಹುದಾದ ರೂಪ ಅವನದು. ಮುಖದಲ್ಲಿ ಅದೇನು ತೇಜಸ್ಸು, ತೀಕ್ಷಣವಾದ ಕಣ್ಣು.

ಅವನೊಟ್ಟಿಗೆ ನನ್ನ ಸ್ನೇಹ ಅರಳಿದಂತೆ, ಅವನು ಹೇಳುತ್ತಿದ್ದ ಪುರಾಣಗಳ ಕಥೆ ಮತ್ತು ಕಥಾ ನಿರೂಪಣೆಯ ಶೈಲಿಗೆ ಮಾರುಹೋದಂತಿತ್ತು.  ದಟ್ಟಿರುಳು ಕಾನನದ ನಡುವೆ ಅವನನ್ನು ಹಿಂಬಾಲಿಸಿಕೊಂಡು ಹೋಗುವ ಧಾವಂತದ ನಡುವೆ ಆತ ಆಡುವ ಅವನ ಮಾತುಗಳನ್ನು ನನ್ನ ಕಿವಿ ಕೇಳಿಸಿಕೊಳ್ಳುತ್ತಲಿತ್ತು, ಹೆಜ್ಜೆ ದಾಪುಗಾಲು ಹಾಕಿ ಓಡುತ್ತಿತ್ತು.  ಅದು ಬೆಳದಿಂಗಳ ಹುಣ್ಣಿಮೆಯ ರಾತ್ರಿ.  ಮರಗಳ ಸಂಧಿಯಲ್ಲಿ ಚಂದ್ರನ ಬೆಳಕು ಸೀಳಿಕೊಂಡು ಒಳಬಂದ ಜಾಗ ಕಾಡಿಗೆ ಬ್ಯಾಟರಿ ಬಿಟ್ಟಂತೆ ಕಾಣುತ್ತಿತ್ತು. ನನ್ನ ಮತ್ತು ಸಾಧುವನ್ನು ಜೊತೆ ನೋಡಿ ಹುಣ್ಣಿಮೆಯ ಪೂರ್ಣ ಚಂದಿರ ಮುಸಿ ಮುಸಿ ನಗುತ್ತಿದ್ದ.  ನಾನೋ ಕೃಷವಾದ ಎತ್ತರದ ಮನುಷ್ಯ.  ಮೈಯ್ಯಲ್ಲಿ ಕಚ್ಚಿ ಹಿಡಿದಿರುವ ಶಕ್ತಿಯ ಪ್ರದರ್ಶನ ನೋಡುಗರ ಕಣ್ಣಿಗೆ ಗೋಚರಿಸದೇ ಇದ್ದರೂ, ಒಣಗಿದ ಮತ್ತೀ ಕಟ್ಟಿಗೆಗೆ ಹೋಲುವಂಥವನು ನಾನು..  ಕುತೂಹಲದ ಗೂಡು ನನ್ನ ಎದೆ ತುಂಬಿತ್ತು, ಜೊತೆಗೆ ಆ ಗುಡ್ಡದ ಒಳಹೋಗಿ ಬರುವ ಆತುರ.

ಅದು ಸಾಧುನಂತವರು ನಡೆದೂ ನಡೆದು ಪೃಕೃತಿಯಲ್ಲಿ ಮಾನವ ನಿರ್ಮಿಸಿದ ಕಾಲುದಾರಿ.  ಅಲ್ಲಿ ರಾತ್ರಿಯ ನಿರವತೆಯಲ್ಲಿ ಜೀರುಂಡೆಗಳ ಸದ್ದು, ಅಲ್ಲೆಲ್ಲೊ ಊಳಿಡುವ ನರಿಯ ಕೂಗು ನನಗೆ ಹೊಸದು.  ಆದರೆ ಆ ಸಾಧುಗೆ ಎಲ್ಲವೂ ಮಾಮೂಲಿನಂತಿತ್ತು.  ಎಲ್ಲಿ ಏನಿದೆ, ಹೇಗೆ ಹೋದರೆ ಎಲ್ಲೆಲ್ಲಿ ಏನು ಸಿಗುತ್ತದೆ ಅನ್ನುವ ಪರಿಜ್ಞಾನ ಮತ್ತು ಮಾಹಿತಿ ಅವನಿಗಿದ್ದುದರಿಂದ ನಮ್ಮ ಪಯಣ ಆ ನಿರವ ರಾತ್ರಿಯಲ್ಲಿಯೂ ಸರಾಗವಾಗಿ ಮುಂದುವರೆದಿತ್ತು.  ಗುಡ್ಡ ಹತ್ತೋದು ಇಳಿಯೋದು.  ಹೀಗೆ ಅದೆಷ್ಟು ದೂರ ಬಂದೆವೊ ಗೊತ್ತಿಲ್ಲ-  ಆದರೆ ಆ ಗುಡ್ಡದ ಸಮೀಪ ಇನ್ನೂ ತಲುಪಿಲಿಲ್ಲ.

ಅಲ್ಲಾ ಇನ್ನೂ ಎಷ್ಟು ದೂರ ನಡೀಬೇಕು? ಎಂದು ಅವನನ್ನು ಒಮ್ಮೆ ಕೇಳಿ ಬಿಡಲೆ ಅನ್ನಿಸಿತು.  ಕಾಲು ಬಸವಳಿಯುತ್ತಿದೆ ಅನ್ನುವದಕ್ಕಿಂತ ಗುಡ್ಡದ ಒಳ ಹೋಗುವ  ಆತುರ ಮನಸ್ಸಿಗೆ.  ಅದು ಯಾವಾಗಲೂ ಮನಸ್ಸಿನ ತುಮುಲ.  ಸಿಗುವವರೆಗೆ ಕಾತುರ, ಸಿಕ್ಕ ಮೇಲೆ ಅನಾದರ.  ಬೇಡ ಬೇಡ ಕೇಳುವ ಹುನ್ನಾರ ಬಿಟ್ಟು ಬಿಡು ಮನಸೆ!  ನಡೀ ವಾಪಾಸು, ನಾಲಾಯಕ್ ಗುಡ್ಡ ಹತ್ತಲು ಅಂದುಬಿಟ್ಟರೆ?  ನೆವರ್, ಬಾಯಿಗೆ ಬೀಗ ಜಡಿದು ಅವನು ಹೇಳುವ ಮಾತನ್ನು ಕೇಳಿಸಿಕೊಳ್ಳುತ್ತ ಬರ ಬರ ಹೆಜ್ಜೆ ಇಡೋದೆ ವಾಸಿ. ಬೆನ್ನಿಗೆ ನೇತು ಹಾಕಿದ ಚೀಲ ಈಗ ಸ್ವಲ್ಪ ಭಾರ ಅನಿಸುತ್ತಿದೆ.  ಆದರೂ ಗುರಿ ಮುಟ್ಟಲು ಎಲ್ಲ ಸಂಭಾಳಿಸಿಕೊಂಡು ಹೋಗಬೇಕು.

ಅರೆ, ಸಾಧುಗೆ ಸುಸ್ತಾಯಿತಾ?  ಅದ್ಯಾಕೆ ಹಾಗೆ ಕುಳಿತಿದ್ದು?  ಅದೂ ಇಲ್ಲಿ. ಏನಿದೆ ಅಲ್ಲಿ.  ಕಾಣ್ತಿಲ್ಲ.  ಚಂದ್ರನ ಬೆಳಕೂ ಬಡೀತಿಲ್ಲ.  ಬ್ಯಾಗಲ್ಲಿರೊ ಚಿಕ್ಕ ಬ್ಯಾಟರಿ ತೆಗೆದು ಬಿಟ್ಟೆ.  ಅರೆ ಇಲ್ಲೊಂದು ದೊಡ್ಡದಲ್ಲದಿದ್ದರೂ ಪೂತಿ೯ ಚಿಕ್ಕದೂ ಅಲ್ಲ.ಗುಹೆಯ ದ್ವಾರ.  ವಾವ್! “ನೋಡು ನಾನು ಹೇಗೆ ಮಲಗಿ ತೆವಳುತ್ತೇನೊ ಹಾಗೆ ನೀನೂ ನನ್ನ ಹಿಂದೆ ತೆವಳುತ್ತ ಬಾ.” ಎಂದ ಸಾಧು  ನನ್ನ ಉತ್ತರಕ್ಕೂ ಕಾಯದೆ ತೆವಳುವ ಕಾರ್ಯಕ್ಕೆ ಅಣಿಯಾದ.  ನಾನೂ ಬೆನ್ನಿನಿಂದ ಬ್ಯಾಗ್ ಬಿಚ್ಚಿ ಅವನಂತೆ ಮಲಗಿದೆ.  ಏನೊಂದೂ ಕಾಣದು.  ಮೈ ಮನವೆಲ್ಲ ಶುದ್ಧ ತಂಪು.  ಎಂದೂ ಕಂಡರಿಯದ ಸೊಗಸಾದ ಅನುಭವ. ಕೈ ಕಾಲುಗಳಿಗೆ ಸ್ವಲ್ಪ ತರಚುವ ನೋವು. ಆದರೆ ಈ ದೊಡ್ಡ ಶರೀರಕ್ಕೆ ತರಚುಗಾಯಗಳೆಲ್ಲ ಯಾವ ಲೆಕ್ಕ ಮುನ್ನುಗ್ಗು ಎನ್ನುತ್ತಿತ್ತು ಮನಸ್ಸು.  ಎದೆಗವಚಿದ ಬ್ಯಾಗಲ್ಲಿಯ ನೀರಿನ ಬಾಟ್ಲಿ, ಬ್ಯಾಟರಿ ಮೈಯನ್ನು ಒತ್ತುತ್ತಿದೆ.  ಆದರೆ ತೆವಳುವುದು ಅನಿವಾರ್ಯ, ಒಂದು ರೀತಿಯಲ್ಲಿ ಕಗ್ಗತ್ತಲ ಗುಹೆಯೊಳಗೆ ಅವರ್ಣನೀಯ ಅನುಭವ.  ಈ ಪರಿಸ್ಥಿತಿಯಲ್ಲೂ ಕಣ್ಣಿಗೆ ಸುತ್ತ ಬ್ಯಾಟರಿ ಬಿಟ್ಟು ನೋಡುವ ಆಸೆ ಹುಚ್ಚಮುಂಡೇದಕ್ಕೆ. ಆದರೇನು ಮಾಡೋದು, ಆಗ್ತಿಲ್ವೆ..

ಏನೊ ಘಾಟು ವಾಸನೆ ಮೂಗಿಗೆ ಬಡೀತಿದೆ. ಯಾವುದೋ ಸತ್ತ ಪ್ರಾಣಿಯ ಸಹಿಸಲಾರದ ವಾಸನೆ ಅದು.  ಆದರೆ ಸಾಧುಗೆ ಇದಾವುದರ ಪರಿವೆಯೇ ಇಲ್ಲ.  ಇಲ್ಲೇ ಪಕ್ಕದಲ್ಲಿ ಇರುವಂತಿದೆ.  ಏನು ಮಾಡಲಿ.  ವಾಂತಿ ಬರುವ ಹಾಗಾಗುತ್ತಿದೆ.  ವ್ಯಾ…ವ್ಯಾ… ಜೋರಾಗಿ ತೆವಳಿ ದಾಟಿ ಬಿಟ್ಟೆ.  ಅಬ್ಬಾ ಸಾಕಪ್ಪಾ. ಅಲ್ಲೆ ಕ್ಷಣ ಮಲಗಿದೆ.  ಸಂಧಿಯಲ್ಲೆ ತಡಕಾಡಿ ನೀರಿನ ಬಾಟಲಿ ತೆಗೆದೆ. ನೀರು ಕುಡಿಯುವ ಆತುರ ತಲೆ, ಆದರೆ ತಲೆ ಎತ್ತಿದರೆ ಬಂಡೆ ಬಡಿಯುತ್ತದೆ.  ಹಾಗೆ ಬಾಟಲಿ ಅಡ್ಡ ಹಿಡಿದು ಕರು ಮೊಲೆ ಚೀಪುವಂತೆ ನೀರನ್ನು ಚೀಪಿದೆ, ಸ್ವಲ್ಪ ನೀರು ತಳ ಕಂಡಿತು.  ಮತ್ತೆ ಬ್ಯಾಗಲ್ಲಿ ತೂರಿಸಿ ತೆವಳುವ ವೇಗ ಹೆಚ್ಚಿಸಿದೆ.

ಮುಂದೆ ಮುಂದೆ ಹೋದಂತೆ ತೂತಿನ ಆಕಾರ ದೊಡ್ಡದಾಗುತ್ತ ಎದ್ದು ಕೂರುವಷ್ಟು ಜಾಗವಾಯಿತು.  ಆಶ್ಚರ್ಯ.  ಅಲ್ಲೊಂದು ನೀರಿನ ತೊರೆ.  ನೀರೆಲ್ಲ ಸ್ವಚ್ಛ ತಿಳಿಯಾಗಿದೆ.  ಇಬ್ಬರೂ ಇಳಿದು ಭಗವಂತನ ನೆನೆದು ಬೊಗಸೆಯಲ್ಲಿ ಹೊಟ್ಟೆ ತುಂಬ ನೀರು ಕುಡಿದೆವು.  ಬಾವಲಿ ಹಕ್ಕಿಗಳ ತಟಪಟ ಸದ್ದಿನ ಜೊತೆ  ಕಪ್ಪೆಗಳ ವಟ ವಟ ಗದ್ದಲ.  ಕಣ್ಣಿಗೆ ಏನೂ ಕಾಣದು.  ಕಿವಿ ಇಲ್ಲಿ ಜಾಣ ಮರಿಯಾಗಿ ಮೆರೆಯುತ್ತಿದೆ. ಆದರೆ ಈ ಸಾಧುವಿಗೆ ಅತೀಂದ್ರ ಶಕ್ತಿ ಏನಾದರೂ ಇದೆಯಾ?  ಅಲ್ಲಾ ಈ ಕಗ್ಗತ್ತಲಲ್ಲಿ  ನನ್ನ ಎಲ್ಲಿ ಹೇಗೆ ಗುಡ್ಡದ ಹತ್ತಿರ…? ಇಷ್ಟು ಯೋಚನೆ ನನ್ನ ತಲೆಗೆ ಬಂದಿದ್ದೇ ತಡ. “ಮಗೂ….ಹೆದರ ಬೇಡ.  ಇದೇ ಆ ಗುಡ್ಡ.  ಒಳಗಡೆ ಬಂದಾಗಿದೆ.  ಆದರೆ ನಿನಗೆ ಏನೂ ಕಾಣುತ್ತಿಲ್ಲ ಅಲ್ಲವೆ.?   ನಾನು ಹೇಳಿದಂತೆ ಮಾಡಬೇಕು.  ನೀನು ಕುಳಿತಿರುವ ಜಾಗದಲ್ಲಿ ವಜ್ರಾಸನ ಭಂಗಿಯಲ್ಲಿ ಬೆನ್ನು ನೇರವಾಗಿ ಮಾಡಿ ಕುಳಿತುಕೊ.  ಕಣ್ಣು ಮುಚ್ಚಿರಲಿ.  ಕೈ ಎರಡೂ ಕಿಪ್ಪೊಟ್ಟೆಯ ಕೆಳಕೆ ಊರ್ದ್ವ ಮುಖವಾಗಿ ಒಂದರ ಮೇಲೊಂದು ಹಸ್ತ ಬಿಡಿಸಿಡು.  ಹೆಬ್ಬೆರಳು ಒಂದನ್ನೊಂದು ಒತ್ತಿಕೊಂಡಿರಲಿ.  ದೀರ್ಘ ಉಸಿರು ಎಳೆದುಕೊ.  ಮನಸ್ಸನ್ನು ಪ್ರಶಾಂತಗೊಳಿಸು.  ಮುಖದಲ್ಲಿ ನಗುವಿನ ಭಾವವನ್ನು ತುಂಬಿಕೊ.  ದೇಹವನ್ನು ಸಡಿಲವಾಗಿರಿಸು.  ಯೋಚನಾ ರಹಿತನಾಗಿ ತದೇಕ ಚಿತ್ತದಿಂದ ಹುಬ್ಬಿನ ಎರಡೂ ಮಧ್ಯ ಜಾಗದಲ್ಲಿ ನಿನ್ನ ಮನಸ್ಸನ್ನು ಕೇಂದ್ರೀಕರಿಸು.  ಧ್ಯಾನದಲ್ಲಿ ತಲ್ಲೀನನಾಗು.  ಬಾಯಲ್ಲಿ ದೀರ್ಘವಾಗಿ ಓಂ ಕಾರ ಉಚ್ಛರಿಸು.  ಭಗವಂತನಲ್ಲಿ ಲೀನವಾಗು ಲೀನವಾಗು ಲೀನವಾಗು……” ಎಂದ ಸಾಧು

ಮನಸ್ಸು ಪ್ರಶಾಂತವಾಗಿದೆ.  ನಿಶ್ಯಬ್ಧ ಭಂಡಾರ ಮೊಗೆದೂ ಮೊಗೆದೂ ತಂದಿಟ್ಟಂತಿದೆ ಸೃಷ್ಟಿ ನಿರ್ಮಿಸಿದ ಗುಡ್ಡವೆಂಬ ಗುಹೆ.  ಅದೆಷ್ಟೋ ಹೊತ್ತು ಹಾಗೆಯೇ ಕುಳಿತಿದ್ದೆ.  ನಿದ್ದೆಯಲ್ಲಿ ಈ ಪ್ರಪಂಚವನ್ನೇ ಮರೆತ ಈ ದೇಹ ಜಡವಾದಂಥ ಅನುಭವ. ಕುಳಿತ ಭಂಗಿ ಬದಲಾಗಲಿಲ್ಲ. ಇಹಲೋಕದ ಪರಿಜ್ಞಾನವಿಲ್ಲ. ದೇಹ ಜಡ, ಮನಸ್ಸು ಮುದ, ಹೃದಯ ತಂಪು ತಂಪು. ಯಾವುದೇ ಆಕಾರವಾಗಲಿ, ಇಲ್ಲವೇ ಇಲ್ಲ. ಜಗತ್ತೇ ಮರೆಯಾಗಿಬಿಟ್ಟಿದೆ.  ಎಲ್ಲವೂ ಸ್ಥಬ್ಧ, ನಿಶ್ಯಬ್ಧ, ನೀರವ.. ಒಂದರ್ಥದಲ್ಲಿ ಎಲ್ಲವೂ ನಿಮಿತ್ತ.

ಕಣ್ಣು ಬಿಟ್ಟು ನೋಡಿದೆ..  ಬೆಳಗಿನ ಕೋಗಿಲೆಯ ಗಾನ ಕಿವಿಗಿಂಪಾಗಿತ್ತು.  ನಾನಿನ್ನೂ ಮಲಗೇ ಇದ್ದೆ.  ಮನಸ್ಸು ಕಂಡ ಕನಸಿನ ಗುಂಗಿನಿಂದ ಹೊರ ಬರಲು ಹಠ ಮಾಡುತ್ತಿತ್ತು.  ಸಾಕಿದ ನಾಲ್ಕು ಕಾಲಿನ ನನ್ನ ಮರಿ ಎದ್ದೇಳು ಎದ್ದೇಳು ಅಂತ ಮೂತಿಯಿಂದ ನನ್ನ ತಿವೀತಿತ್ತು. ಅಬ್ಬಾ ಎಂತ ಅದ್ಭುತ ಕನಸು.

ಇಳಿ ವಯಸ್ಸಲ್ಲಿ ಕೈಲಾಗದ ಕೆಲಸವನ್ನು ಕನಸು ಪೂರ್ತಿಗೊಳಿಸಿತ್ತು!

Sangeetha kalmane

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!