ಅಂಕಣ

ಎನ್. ಡಿ. ಟಿ. ವಿ. ನಡೆದು ಬಂದ ದಾರಿ –ಒಂದು ಅವಲೋಕನ

ನ್ಯೂಡೆಲ್ಲಿ ಟೆಲಿವಿಷನ್ ಅಂದರೆ ಎನ್‌.ಡಿ.‌ಟಿ.‌ವಿ. ಯನ್ನು ೧೯೮೮ರಲ್ಲಿ ರಾಧಿಕಾ ರೊಯ್ ಮತ್ತು ಪ್ರಣೋಯ್ ರೊಯ್ ದಂಪತಿಗಳು ಸ್ಥಾಪಿಸಿದರು. ದೂರದರ್ಶನದ ಏಕಚಕ್ರಾಧಿಪತ್ಯವಿದ್ದ ಟೆಲಿವಿಷನ್’ನ  ಸುವರ್ಣ ಯುಗ ಎನ್ನಬಹುದಾದ ೮೦ರ ದಶಕದ ಕೊನೆಯಲ್ಲಿ,  ಕೆಲ ಕಾರ್ಯಕ್ರಮಗಳನ್ನು ಪ್ರಣೋಯ್ ರೊಯ್  ಸಾರಥ್ಯದ ಎನ್‌.ಡಿ.‌ಟಿ.‌ವಿ. ದೂರ ದರ್ಶನ (ಡಿಡಿ-1) ದಲ್ಲಿ ನಡೆಸಿಕೊಡುತಿತ್ತು. ಅವುಗಳಲ್ಲಿ ಪ್ರತಿ ಶುಕ್ರವಾರ ರಾತ್ರಿ ೧೦.೩೦ ಕ್ಕೆ ಪ್ರಸಾರವಾಗುತ್ತಿದ್ದ  ‘ದ ವರ್ಲ್ಡ್ ದಿಸ್ ವೀಕ್’ ಅತ್ಯಂತ ಪ್ರಮುಖವಾದದ್ದು. ಆಗಿನ ಕಾಲದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳ ಆಗು ಹೋಗುಗಳ ವಿಸ್ತೃತ ಸುದ್ದಿ ನೋಡುಗರನ್ನು ತಲಪುತ್ತಿದ್ದುದು ‘ದ ವರ್ಲ್ಡ್ ದಿಸ್ ವೀಕ್’ ನ ಮೂಲಕ. ಇಲ್ಲವಾದಲ್ಲಿ ಜಗತ್ತಿನ  ಆಗು ಹೋಗುಗಳನ್ನು ತಿಳಿದುಕೊಳ್ಳಲು ಜನರು ಮೊರೆಹೋಗುತ್ತಿದ್ದುದು ಆಂಗ್ಲ ದಿನ ಪತ್ರಿಕೆಗಳಿಗೆ. ಸಣ್ಣ- ಪುಟ್ಟ ಸುದ್ದಿಗಳು  ಕನ್ನಡದ ಕೆಲ ದಿನ ಪತ್ರಿಕೆಗಳಲ್ಲಿ ಒಳಗಿನ ಪುಟಗಳಲ್ಲಿ ಮುದ್ರಿತವಾಗಿರುತ್ತಿದ್ದವು. ‘ದ ವರ್ಲ್ಡ್ ದಿಸ್ ವೀಕ್’ ನ ದಿವಂಗತ ಅಪ್ಪನ್ ಮೆನನ್ ರನ್ನು ಇಂದಿಗೂ ಮರೆಯಲಾಗುವದಿಲ್ಲ. ಆಗಿನ ಕಾಲದ ವಾರ್ತೆಗಳು ಪ್ರಸಾರಗೊಳ್ಳುವ ರೀತಿಗೆ ಹೊಸ ಭಾಷ್ಯ ಬರೆದಿತ್ತು ‘ದ ವರ್ಲ್ಡ್ ದಿಸ್ ವೀಕ್’.  ಈ ಕಾರ್ಯಕ್ರಮವು  ಸ್ವಾತಂತ್ರ್ಯ ನಂತರದ 5 ಅತ್ಯುತ್ತಮ ಟಿವಿ ಕಾರ್ಯಕ್ರಮಗಳಲ್ಲೊಂದಾಗಿ ನಾಮ ನಿರ್ದೇಶನಗೊಂಡಿತ್ತು. ಇಂದಿನ ಪೀಳಿಗೆಯ ಆಂಗ್ಲ ಮಾಧ್ಯಮದ ಅತಿರಥ ಮಹಾರಥ ಪ್ರೈಮ್ ಟೈಮ್ ಸುದ್ದಿ ನಿರೂಪಕರಿಗೆ ಜನ್ಮ ಕೊಟ್ಟಿದ್ದು ಎನ್‌.ಡಿ.‌ಟಿ.‌ವಿ. ಇಂಥವರಲ್ಲಿ ಈಗಿನ ಟೈಮ್ಸ್ ನೌ ನ ಅರ್ಣಬ್ ಗೋಸ್ವಾಮಿ, ಟಿ‌ವಿ ಟುಡೇಯ ರಾಜದೀಪ ಸರದೇಸಾಯಿ, ಎನ್‌.ಡಿ.‌ಟಿ.‌ವಿ.ಯ ಬರ್ಖಾ ದತ್ತ್ , ಶ್ರೀನಿವಾಸನ್ ಜೈನ್ ಪ್ರಮುಖರು.

ದೂರದರ್ಶನದಲ್ಲಿ ಎನ್‌.ಡಿ.‌ಟಿ.‌ವಿ.ಯ ಅಂದಿನ ಇನ್ನೊಂದು ಆಕರ್ಷಕ ಕಾರ್ಯಕ್ರಮವೆಂದರೆ ಚುನಾವಣೆಯ ಸಮಯದ ಚರ್ಚೆ ಮತ್ತು  ವಿಮರ್ಶೆ. ಪ್ರಣೋಯ್ ರೊಯ್ ಇಂಗ್ಲೀಷನಲ್ಲಿ ಮತ್ತು ಪರಖ ಖ್ಯಾತಿಯ ವಿನೋದ ದುವಾ ಹಿಂದಿಯಲ್ಲಿ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ ಮೂರು ನಾಲ್ಕು ದಿನಗಳವರೆಗೆ ನಿರಂತರವಾಗಿ ನಡೆಯುತ್ತಿತ್ತು ಮಧ್ಯದಲ್ಲಿ ಕೆಲ ಸಮಯ ಚಲನಚಿತ್ರಗಳು ಹಾಗೂ ಹಾಡುಗಳು ಬಿತ್ತರಗೊಳ್ಳುತ್ತಿದ್ದವು. ಏಕೆಂದರೆ ಆ ಸಮಯದಲ್ಲಿ ಈಗಿನಂತೆ ವಿದ್ಯುನ್ಮಾನ ಮತ ಯಂತ್ರಗಳಿರಲಿಲ್ಲ (ಈ. ವಿ.ಎಮ್),  ಮತ ಎಣಿಕೆ ಪೂರ್ಣಗೊಳ್ಳಲು ಕನಿಷ್ಠ ಮೂರು ದಿನಗಳು ತಗಲುತಿದ್ದವು. ಮೂರು  ನಾಲ್ಕು ದಿನಗಳ ಮಟ್ಟಿಗೆ ಜನರಿಗೆ ಅತ್ಯಂತ ನಿಖರವಾಗಿ ಯಾವುದೇ ಪೂರ್ವಾಗ್ರಹ ಪೀಡಿತವಾಗದೇ ಸುದ್ದಿಯನ್ನು ಚರ್ಚೆ ಮತ್ತು ವಿಮರ್ಶೆಗಳ ಮುಖಾಂತರ  ತೋರಿಸಿ, ಜನರ ಮನ ಗೆದ್ದಿತ್ತು ಈ  ಎನ್‌.ಡಿ.‌ಟಿ.‌ವಿ.

ನಂತರದ ದಿನಗಳಲ್ಲಿ ತನ್ನದೇ ಆದ ಖಾಸಗಿ 24X7 ಸುದ್ದಿ ಚನಲ್ ಪ್ರಾರಂಭಿಸಿದ ಎನ್‌.ಡಿ.‌ಟಿ.‌ವಿ. ವಾಕ್ ದ ಟಾಕ್, ವತನ್ ಕೆ ರಖವಾಲೆ, ಜೈ ಜವಾನ್, ಫಾಲೋ ದ ಲೀಡರ್, ರಿಯಾಲಿಟಿ ಬೈಟ್ಸ್, ಕ್ರಿಕೆಟ್ ಮತ್ತು ಬೇರೆ ಆಟಗಳ ಕುರಿತಾದ ವಿಶ್ಲೇಷಣೆ, ಭಾರತದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಕುರಿತಾದ ಸೆವೆನ್ ವಂಡರ್ಸ್ ಆಫ್ ಇಂಡಿಯಾ, ಸೇವ್ ಅವರ್ ಟೈಗರ್  ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂತು. ಆದರೆ ರಾಜಕೀಯ ಸುದ್ದಿಗಳ ವಿಚಾರ ಬಂದಾಗ ಸಮತೋಲಿತ ಮತ್ತು ಪೂರ್ವಾಗ್ರಹ ಪೀಡಿತವಾಗದೇ ಸುದ್ದಿ ಮತ್ತು ವಿಶ್ಲೇಷಣೆಯನ್ನು ಮಾಡುವದನ್ನು ಬಿಟ್ಟು ಸಂಪೂರ್ಣವಾಗಿ ಎಡಪಂಥೀಯ ಧೋರಣೆಗಳನ್ನು ಎತ್ತಿಹಿಡಿಯುವ ಮತ್ತು ಕಾಂಗ್ರೆಸನ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜನೀತಿಯನ್ನು ಪುಷ್ಟೀಕರಿಸುವ ಪ್ರಯತ್ನಗಳನ್ನು ಮಾಡುತ್ತಿದೆಯೇನೋ ಎಂದು ಪ್ರೇಕ್ಷಕರಿಗೆ ಭಾಸವಾಗುತ್ತಿತ್ತು! ಮೊದ-ಮೊದಲು ಎಡಪಂಥೀಯ ರಾಜಕೀಯ ಪಕ್ಷಗಳ ನಾಯಕರ ಜೊತೆ  ನಂಟಿದ್ದರೂ, ಎನ್‌.ಡಿ.‌ಟಿ.‌ವಿ. ಬಿತ್ತರಿಸುವ ಸುದ್ದಿ ಮತ್ತು ಪ್ರಸಾರಿತ ಕಾರ್ಯಕ್ರಮಗಳ ಮೇಲೆ ಅದರ ಪರಿಣಾಮ ಅಷ್ಟಾಗಿ ಬಿರೀರಲಿಲ್ಲ. ಆದರೆ ಬಿ.ಜೆ.ಪಿ. ಯ ಬೆಳವಣಿಗೆ ಮತ್ತು ದೇಶದ ಉದ್ದಗಲಕ್ಕಾದ ವಿಸ್ತಾರವನ್ನು ಎನ್‌.ಡಿ.‌ಟಿ.‌ವಿ.ಗೆ ಪ್ರಾಯಶಃ ಅರಗಿಸಿಕೊಳ್ಳಲಾಗಲಿಲ್ಲ ಅನಿಸತ್ತೆ! ಇದರ ಫಲಶ್ರುತಿಯೇ ಅಂದಿನ ವಾಜಪೇಯಿ ಸರ್ಕಾರವನ್ನು  ಅನಗತ್ಯ ಕಾರಣಗಳಿಗೆ ಟೀಕಿಸುವ ಮತ್ತು ಭಯೋತ್ಪಾದನೆ ವಿರುದ್ಧ ಪೋಟಾ ಖಾಯಿದೆಯಲ್ಲಿ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳನ್ನು ವಿರೋಧಿಸುವ ಶಕ್ತಿಗಳಿಗೆ ನೈತಿಕ ಸ್ಥೈರ್ಯವನ್ನು ಕೊಟ್ಟು ವೇದಿಕೆಯನ್ನು ಒದಗಿಸಿ ಪೂರಕವಾಗಿ ನಿಂತಿತ್ತು ಈ ಎನ್‌.ಡಿ.‌ಟಿ.‌ವಿ.

ನರೇಂದ್ರ ಮೋದಿ ಗುಜರಾತ ಮುಖ್ಯಮಂತ್ರಿಯಾದಮೇಲೆ ಅದೇಕೋ ಎನ್‌.ಡಿ.‌ಟಿ.‌ವಿ.ಗೆ ಸಹಿಸಲಾಗಲಿಲ್ಲ. ಗೋಧ್ರಾ ಘಟನೆ ಮತ್ತು  ತದನಂತರ ನಡೆದ ದೊಂಬಿಗಳ ಕುರಿತು ತೀರಾ ಏಕ ಪಕ್ಷಿಯವಾದ ಆಧಾರರಹಿತ ವರದಿಗಳನ್ನು ಬಿತ್ತರಿಸಿ ನರೇಂದ್ರ ಮೋದಿ ಮತ್ತು ಅವರ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಮಾಡಿತು. ತಿಸ್ತಾ ಶೀತಲವಾಡರಂಥ ಢೋಂಗಿ ಎನ್.ಜಿ.ಓ ಗಳ ಪರ ವಕಾಲತ್ತು ವಹಿಸಿ ಗುಜರಾತ ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಮೋದಿಯವರ ವರ್ಚಸ್ಸಿಗೆ ಮಸಿ ಬಳಿಯುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂತು. ಅಸಹಿಷ್ಣುತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ವಿಧಾನಸಭೆಯ ಚುನಾವಣೆಯಲ್ಲಿ ಗುಜರಾತ್ ಜನತೆ  ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ  ಇಡೀ ದೇಶದ ಜನತೆ ಇದಕ್ಕೆ ತಕ್ಕ ಉತ್ತರವನ್ನು ನೀಡಿದರು. ಈಗ ಫೆರಾ ಮತ್ತು ಫೇಮಾ ಕಾಯದೆಗಳನ್ನು ಉಲ್ಲ೦ಘಿಸಿ ಎನ್.ಜಿ.ಓ ದ ಹಾಗೂ ಗೋಧ್ರೋತ್ತರ ಗಲಭೆ ಪೀಡಿತರ ಹಣದ ದುರ್ಬಳಕೆಯ ಆರೋಪವನ್ನು ಹೊತ್ತು ಸುಪ್ರೀಮ್ ಕೊರ್ಟ್’ನ ನಿರೀಕ್ಷಣಾ ಜಾಮೀನಿನಲ್ಲಿರುವ ತಿಸ್ತಾ ಶೀತಲವಾಡ ಮತ್ತು ಅವರ ಪತಿ ಜಾವೇದ ಆನಂದ ಲೈಮ್ ಲೈಟ್’ಗೆ ಬಂದದ್ದು  ಎನ್‌.ಡಿ.‌ಟಿ.‌ವಿ ಮತ್ತು ಕಾಂಗ್ರೆಸನ ಕೃಪೆಯಿಂದ. ಈ ಸಂಬಂಧದ ಕಡತಗಳು (ಫೆರಾ ಮತ್ತು ಫೇಮಾ ಉಲ್ಲಂಘನೆಯ) ಕೇಂದ್ರ ಗೃಹ ಇಲಾಖೆಯಿಂದ ನಾಪತ್ತೆಯಾಗಿದ್ದು ಆನಂದ ಜೋಷಿ ಎಂಬ ಗ್ರಹ ಇಲಾಖೆಯ ಅಧಿಕಾರಿಯನ್ನು ಸಿ. ಬಿ. ಐ. ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಎನ್‌.ಡಿ.‌ಟಿ.‌ವಿ.ಯ ಇಂತಹ ನಡವಳಿಕೆಗೆ ಇನ್ನೊಂದು ಉದಾಹರಣೆಯೆಂದರೆ ಲಷ್ಕರೆ ತೊಯ್ಬಾದ ಭಯೋತ್ಪಾದಕಿ ಇಶ್ರತ್ ಜಂಹಳ ಎನ್ಕೌಂಟರನ್ನು ನಕಲಿ ಎಂದು ಬಿಂಬಿಸಲು ಹೊರಟದ್ದು… ಆ ಸಮಯದ ಯು.ಪಿ.ಎ. ಸರಕಾರ ಏನೆಲ್ಲಾ ಅವಾಂತರಗಳನ್ನು ಮಾಡಿ ಒಬ್ಬ ಭಯೋತ್ಪಾದಕಿಯನ್ನು ಆಮಾಯಕಿ ಎಂದು ಬಿಂಬಿಸಲು ರಾಷ್ಟ್ರೀಯ ಸುರಕ್ಷತೆಯನ್ನು ಕಡೆಗಣಿಸಿ ಸಿ.ಬಿ.ಐ. ಮತ್ತು ಐ.ಬಿ. ಯನ್ನು ಪರಸ್ಪರ ವಿರೋಧಿಗಳನ್ನಾಗಿ ಮಾಡಿದ್ದು ಈಗ ಜಗಜ್ಜಾಹೀರಾಗಿದೆ. ಇಶ್ರತ್ ಕುರಿತಾದ ಡೇವಿಡ ಹೆಡ್ಲಿಯ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿಯೇ ಕೊರ್ಟ್ ಮುಂದೆ ಒದಗಿಸಲಾಗಿರಲಿಲ್ಲ ಆಗಲೂ ಎನ್‌.ಡಿ.‌ಟಿ.‌ವಿ ಈ ಸುದ್ದಿಯನ್ನು ಬಿತ್ತರಿಸದೆ ಮೋದಿಯ ಗುಜರಾತ್ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿತ್ತು.  ಇಶ್ರತ್ ಜಂಹಳ ಎನ್ಕೌಂಟರ ಸಂಬಂಧಿತ ಅನುಮಾನಗಳ ಕೊಂಡಿಗಳು ಒಂದೊಂದಾಗಿ ಕಳಚಿ ಬಿದ್ದಿವೆ. ಆಗಿನ ಯು.ಪಿ.ಎ. ಸರಕಾರದ ಕರಾಮತ್ತುಗಳು ಸಾರ್ವಜನಿಕವಾಗಿ ಆಗಿದ್ದರೂ  ಎನ್‌.ಡಿ.‌ಟಿ.‌ವಿ.ಯ ಧೋರಣೆ ಮಾತ್ರ ಎಲ್ಲರನ್ನು ಅಶ್ಚರ್ಯಚಕಿತಗೊಳಿಸುತ್ತದೆ.  ಕೇಸರಿ ಭಯೋತ್ಪಾದನೆ ಎಂಬ ಕಪೋಲ ಕಲ್ಪಿತ ಪದವನ್ನು ಹುಟ್ಟು ಹಾಕಿದ್ದು ಕಾಂಗ್ರೇಸ್.. ಅದರ ತಾಳಕ್ಕೆ ಕುಣಿದು ರಂಗು ರಂಗಾಗಿ ಸುದ್ದಿ ಬಿತ್ತರಿಸಿದ ಪ್ರಮುಖ ವಾಹಿನಿ  ಎನ್‌.ಡಿ.‌ಟಿ.‌ವಿ.  ಎಫ್.ಬಿ.ಐ. ಹಾಗೂ ಅಂದು ಕಾಂಗ್ರೇಸ್ ಆಳ್ವಿಕೆಯಲ್ಲಿದ್ದ ಮಹಾರಾಷ್ಟ್ರ ಎ.ಟಿ.ಎಸ್.ನ ತನಿಖೆಗಳಲ್ಲಿಯೂ ಪಾಕಿಸ್ತಾನದ ಹಾಗೂ ಸಿಮಿಯ ಕೈವಾಡ ಬಹಿರಂಗಗೊಂಡಿದ್ದ ಪರಕರಣಗಳಲ್ಲಿ, ಕೇವಲ ರಾಜಕೀಯ ಲಾಭಕ್ಕಾಗಿ ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳನ್ನು ಹುಟ್ಟು ಹಾಕಲಾಗಿತ್ತಾ?? ಭಯೋತ್ಪಾದನೆಗೆ ಧರ್ಮದ ಬಣ್ಣ ಬಳೆದು ನಿರ್ದಿಷ್ಟ ಸಮುದಾಯದೊಂದಿಗೆ ತಳುಕು ಹಾಕಿ ನೋಡುವದು ಎಷ್ಟು ಸರಿ? ಜ್ಯಾತ್ಯತೀತ ರಾಷ್ಟ್ರವಾದ ನಮ್ಮ ದೇಶದಲ್ಲಿ ಇಂತಹ ಆಲೋಚನೆ ಸರ್ವಥಾ ತಪ್ಪು. ತಪ್ಪಿತಸ್ತರು ಯಾರೆ ಆಗಿದ್ದರೂ, ಯಾವುದೇ ಧರ್ಮದವರಿದ್ದರೂ ಕಠಿಣ ಶಿಕ್ಷೆಯಾಗಲೇಬೇಕು.

ತೀರಾ ಇತ್ತೀಚಿನ ಜೆ.ಎನ್.ಯು.ನ ಕನ್ಹಯ್ಯ, ಉಮರ್ ಖಾಲಿದ್ ಮತ್ತು ಸ೦ಗಡಿಗರ ದೇಶ ವಿರೋಧಿ ಚಟುವಟಿಕೆಗಳ ಕುರಿತಾದ ಪ್ರಸಂಗದಲ್ಲಿಯೂ ಎನ್‌.ಡಿ.‌ಟಿ.‌ವಿ. ಅತೀ ವಿಚಿತ್ರವಾಗಿ ನಡೆದುಕೊಂಡು ದೇಶ ವಿರೋಧಿಗಳನ್ನು ಮತ್ತು ದೇಶವನ್ನು ತುಂಡುಗೊಳಿಸುವ ಅವರ ಘೋಷಣೆಗಳನ್ನು ಸಮರ್ಥಿಸುವಂತೆ ವರ್ತಿಸಿತ್ತು. ದೇಶ ವಿರೋಧಿ ಘೋಷಣೆಗಳನ್ನೊಳಗೊಂಡ ಯಾವ ಒಂದು ವಿಡಿಯೋವನ್ನೂ ಎನ್‌.ಡಿ.‌ಟಿ.‌ವಿ. ತೋರಿಸಲಿಲ್ಲ. ಅವುಗಳಲ್ಲಿ ೫ ವಿಡಿಯೋಗಳು ಸತ್ಯಾಸತ್ಯತೆಯನ್ನು ಫೋರೆನ್ಸಿಕ್ ಪ್ರಯೋಗಾಲಯಗಳೂ ಕೂಡ ಧೃಢೀಕರಿಸಿದ್ದವು. ಆದರೆ ಎನ್‌.ಡಿ.‌ಟಿ.‌ವಿ.  ಕನ್ಹಯ್ಯ, ಉಮರ್ ಖಾಲಿದ್ ಮತ್ತು ಸ೦ಗಡಿಗರನ್ನು ದೇಶದ ಮುಂದಿನ ನಾಯಕರೆಂಬ ರೀತಿಯಲ್ಲಿ ಬಿಂಬಿಸಿತ್ತು. ಜೆ.ಎನ್.ಯು.  ರಾಷ್ಟ್ರ ವಿರೋಧಿಗಳ ತಾಣವಾದ ಬಗ್ಗೆ ಚಕಾರವೆತ್ತಲಿಲ್ಲ!! ಪಶ್ಚಿಮ ಬಂಗಾಲದ ಜಾದವಪುರ್ ವಿಶ್ವವಿದ್ಯಾಲಯದಲ್ಲಿನ ದೇಶವಿರೋಧಿ ಚಟುವಟಿಕೆಗಳ ಕುರಿತು ಜಾಣ ಮರೆವನ್ನು ತೋರಿತ್ತು ಎನ್‌.ಡಿ.‌ಟಿ.‌ವಿ… ಜೆ.ಎನ್.ಯು.ದಲ್ಲಿ ಅನುಪಮ್ ಖೇರ್ ಮಾಡಿದ ದೇಶಭಕ್ತಿಯ ಕುರಿತಾದ ಭಾಷಣವನ್ನು ಎನ್‌.ಡಿ.‌ಟಿ.‌ವಿ  ತೋರಿಸಲಿಲ್ಲ ಆದರೆ ಕನ್ಹಯ್ಯ ಜೈಲಿನಿಂದ  ಜಾಮೀನಿನ ಮೇಲೆ ಹೊರಬಂದಾಗ ಯುದ್ಧ ಗೆದ್ದುಬಂದ ಯೋಧನೆಂಬಂತೆ ಬಿಂಬಿಸಿತ್ತು. ಇದೇ ರೀತಿ ಬರ್ಖಾ ದತ್ತ್ ಒಂದು ಕಾರ್ಯಕ್ರಮದಲ್ಲಿ ದೇಶದ ಪ್ರಜೆಗಳಿಗೆ “ಭಾರತ ಮಾತಾ ಕಿ ಜೈ” ಹೇಳಬೇಕೋ ಬೇಡವೋ ಎನ್ನುವ ವಿಕಲ್ಪ ಇರಬೇಕು ಅಂತ ಪ್ರತಿಪಾದಿಸುತ್ತಾರೆ. ಸಮಲಿಂಗಿಗಳ ಮತ್ತು ಅವರ ಹಕ್ಕುಗಳ ಕುರಿತಾದ  ಇವರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬಹುದು ಆದರೆ ದೇಶದ ಕುರಿತು ಇಂತಹ ಧೋರಣೆಯನ್ನು ತಳೆಯುವರನ್ನು ನೋಡಿ ಅಳಬೇಕೋ ನಗಬೇಕೋ ತಿಳಿಯದು!  ಒಂದು ರಾಜಕೀಯ ಪಕ್ಷ ಮತ್ತು ಅದರ ವಿಚಾರಧಾರೆಯನ್ನು ವಿರೋಧಿಸುವ ಅವಕಾಶ ಮತ್ತು ತೋಚಿದ್ದನ್ನು ಹೇಳುವ ಹಾಗೂ ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ  ನಮಗೆ ನೀಡಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಸುರಕ್ಷತೆಯ ಕುರಿತು ಸ೦ವೇದನಾರಹಿತವಾಗಿ  ದೇಶವಿರೋಧಿ ಶಕ್ತಿಗಳನ್ನು ಪರೋಕ್ಷವಾಗಿ ಬಲಪಡಿಸುವಂತೆ ವರ್ತಿಸುವದು ಎಷ್ಟು ಸರಿ?? ಇದರಿಂದಲೇ ಎನ್‌.ಡಿ.‌ಟಿ.‌ವಿ.ಯ ವೀಕ್ಷಕರ ಸಂಖ್ಯೆ ಇಳಿಮುಖವಾಯಿತು ಮತ್ತು ಪ್ರರ್ತಿಸ್ಪರ್ಧಿ ಚನಲಗಳು ಇದರ ಲಾಭ ಪಡೆದುಕೊಂಡವು. ಆಂಗ್ಲ ಸುದ್ದಿ ಚಾನಲ್’ಗಳನ್ನು ನೋಡುವ  ದೇಶದ ಸುಶಿಕ್ಷಿತ ಎಲ್ಲಾ ಪ್ರಜೆಗಳು ಒಂದೇ ಪಕ್ಷದ ಸಮರ್ಥಕರೇನಲ್ಲ, ಆದರೆ ಭಯೋತ್ಪಾದನೆ ಮತ್ತು ದೇಶದ ಸುರಕ್ಷತೆ ವಿಷಯವಾಗಿ ಎನ್‌.ಡಿ.‌ಟಿ.‌ವಿ. ನಡೆದುಕೊಂಡ ರೀತಿ ಖಂಡಿತವಾಗಿಯೂ ಜನರನ್ನು ಅದರಿಂದ  ವಿಮುಖರಾಗುವಂತೆ ಮಾಡಿತ್ತು.

ಎನ್‌.ಡಿ.‌ಟಿ.‌ವಿ ಮತ್ತು ವಿವಾದಗಳ ನಂಟು ಇಂದು ನಿನ್ನೆಯದಲ್ಲ.

  • 1998ರಲ್ಲಿ ದೂರದರ್ಶನದ ಮಾಜಿ ಮಹಾನಿರ್ದೇಶಕ ಆರ್.ಬಾಸು ಮತ್ತು ಪ್ರಣೋಯ್ ರಾಯ್ ವಿರುದ್ಧ ಉದ್ದೇಶ ಪೂರ್ವಕವಾಗಿ ಎನ್‌.ಡಿ.‌ಟಿ.‌ವಿಗೆ ಲಾಭ ಒದಗಿಸಿ ದೂರದರ್ಶನಕ್ಕೆ 32.6  ಕೋಟಿ ರೂಪಾಯಿಗಳ ನಷ್ಟವಾಗಿಸಿದ  ಕುರಿತು  ಕ್ರಿಮಿನಲ್ ಕೇಸೊಂದನ್ನು ಸಿ.ಬಿ.ಐ. ದಾಖಲಿಸಿತ್ತು.

  • ನೀರಾ ರಾಡಿಯಾ ಟೇಪಗಳ ಪ್ರಕರಣದಲ್ಲಿ,  ಎನ್‌.ಡಿ.‌ಟಿ.‌ವಿ. ಯ ಬರ್ಖಾ ದತ್ತ್, ಎ.ರಾಜಾರನ್ನು ಸಂಪರ್ಕ ಸಚಿವರನ್ನಾಗಿಸಲು ಲಾಬಿ ಮಾಡಿದ್ದು, ಮುಂದೆ ಇದೇ ಎ.ರಾಜಾ 2ಜಿ ಹಗರಣದ ರೂವಾರಿಯಾದದ್ದು ಯಾರೂ ಮರೆಯಲಾರರು.

  • ಎನ್‌.ಡಿ.‌ಟಿ.‌ವಿ  ತನ್ನ ವಿದೇಶಿ ಕಂಪನಿಗಳ ಮೂಲಕ ತೆರಿಗೆ ವಂಚನೆ ಮತ್ತು ಫೇಮಾ ಕಾಯ್ದೆಯ ಉಲ್ಲಂಘಿಸಿದ ಕುರಿತು ತನಿಖೆ ನಡೆಯುತ್ತಿದೆ.

  • 2-08-2011 ರ೦ದು ಸಂಸತ್ತನಲ್ಲಿ ಸಿ.ಎ.ಜಿ. ಮಂಡಿಸಿದ  ವರದಿಯ ಪ್ರಕಾರ ಕಾಮನ್ ವೆಲ್ತ್ ಗೇಮ್ಸ್ ಪ್ರಚಾರಕ್ಕೋಸ್ಕರ ಎನ್‌.ಡಿ.‌ಟಿ.‌ವಿ.  ಮತ್ತು ಸಿ.ಎನ್.ಎನ್.ಐ.ಬಿ.ಎನ್. ಚಾನಲ್’ಗಳಿಗೆ ನೀಡಲಾದ ಗುತ್ತಿಗೆ ದೋಷಪೂರಿತವಾಗಿತ್ತು ಮತ್ತು ಬಿಡ್ ನಲ್ಲಿ ನಮೂದಿಸಿದ  ದರಗಳು ಸ್ಪರ್ಧಾತ್ಮಕವಾಗಿರಲಿಲ್ಲ.

ತಮಾಷೆ ಅಂದರೆ ತೀರಾ ಇತ್ತೀಚಿಗೆ ಸ್ಮೃತಿ ಇರಾನಿಯವರು ಅಮೇಥಿಗೆ ಭೇಟಿ ಕೊಟ್ಟು ಮೋದಿ ಸರಕಾರದ ಎರಡು ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಕಾರ್ಯಕ್ರಮವನ್ನು  ಎನ್‌.ಡಿ.‌ಟಿ.‌ವಿ.ಯ ಬರ್ಖಾ ದತ್ತ ಕವರ್ ಮಾಡುತ್ತಿದ್ದರು. ಈ ವಿಡಿಯೋವನ್ನು ನಾನೂ ನೋಡಿದ್ದೇನೆ. ಈ ಕುರಿತು ಹಿರಿಯ ಪತ್ರಕರ್ತೆ ಮಧು ಕೀಶ್ವರ್ ಟ್ವೀಟ್ ಹೇಗಿದೆ ನೋಡಿ.

ಹೇಗೆ ಒಂದು ದೃಶ್ಯ ಮಾಧ್ಯಮ ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬುದನ್ನು ಬಹುಶಃ ಎನ್‌.ಡಿ.‌ಟಿ.‌ವಿ. ಯನ್ನು ನೋಡಿ ಕಲಿಯಬೇಕು!

ಲೇಖಕರು: ಶ್ರೀನಿವಾಸ.ನಾ.ಪಂಚಮುಖಿ

snpanchmukhi@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!