“ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು” ಎಂದು ಹಿಂದುತ್ವದ ಬಗ್ಗೆ ವ್ಯಾಖ್ಯಾನವಿತ್ತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಯದಿನ ಇಂದು. ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಸಾವರ್ಕರರ ಜೀವನ ಚರಿತ್ರೆಯನ್ನು ತಿಳಿದು, ಒಂದಿನಿತು ಆದರ್ಶಗಳ ಪಾಲನೆಯಾದರೆ 134ನೆಯ ಜನ್ಮದಿನೋತ್ಸವ ಸಾರ್ಥಕ ಏನ೦ತಿರಾ?
ಹಿನ್ನಲೆ
ನೆರೆಯ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಗೂರು ಎಂಬುದು ಒಂದು ಚಿಕ್ಕ ಹಳ್ಳಿ. 1883ರ ಮೇ ತಿಂಗಳ 28 ನೇ ತಾರೀಖಿನಂದು ಭಗೂರು ಗ್ರಾಮದಲ್ಲಿದ್ದ ದಾಮೋದರಪಂತ್ ಸಾವರ್ಕರರ ಮನೆಯಲ್ಲಿ ಅವರ ಧರ್ಮಪತ್ನಿ ರಾಧಾಬಾಯಿಯವರ ಒಡಲಲ್ಲಿ ಒಂದು ಗಂಡುಮಗುವಿನ ಜನನವಾಯಿತು. ದಾಮೋದರ ಪಂತರಿಗೆ ಈ ಮೊದಲೇ ಗಣೇಶನೆಂಬ ಮಗನಿದ್ದ. ಗಣೇಶನ ತರುವಾಯ ಹುಟ್ಟಿದ ಈ ಮಗುವಿಗೆ ವಿನಾಯಕ ಎಂಬ ಹೆಸರನ್ನಿಟ್ಟರು. ಗಣೇಶ, ವಿನಾಯಕ ಎರಡೂ ಒಂದೇ ದೇವರ ಹೆಸರುಗಳಷ್ಟೇ! ಸಮಾನ ಅರ್ಥದ ಹೆಸರುಗಳನ್ನು ಧರಿಸಿದ ಈ ಅಣ್ಣತಮ್ಮಂದಿರು ಮುಂದೆ ಸಮಸಮಾನವಾಗಿ ದೇಶಕಾರ್ಯದಲ್ಲಿ ತಮ್ಮ ದೇಹ ಸವೆಸಿದುದನ್ನು ಕಂಡಾಗ ಈ ನಾಮಕರಣ ಅರ್ಥಪೂರ್ಣವಾಗಿ ಹೊಮ್ಮಿದುದನ್ನು ಕಾಣುತ್ತೇವೆ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. 9ನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾದ. 1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ , ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್’ಗೆ ತೆರಳಬೇಕಾಯಿತು.
ಹೋರಾಟದ ಮುನ್ನುಡಿಗೊಂದು ಕಿಡಿ !!
ಭಾರತವು ಆಗ ಬ್ರಿಟಿಷರ ಆಳ್ವಿಕೆಯಲ್ಲಿತ್ತು. 1897ನೇ ಇಸ್ವಿಯಲ್ಲಿ ಭಾರತದಾದ್ಯಂತ ವಿಕ್ಟೋರಿಯ ಮಹಾರಾಣಿಯ ಸಿಂಹಾಸನಾರೋಹಣದ ವಜ್ರ ಮಹೋತ್ಸವ ಆಚರಿಸುವಂತೆ ಬ್ರಿಟಿಷ್ ಸರಕಾರ ಏರ್ಪಾಡು ಮಾಡಿತ್ತು. ಅದೇ ಸಮಯಕ್ಕೆ ಮಹಾರಾಷ್ಟ್ರದಲ್ಲೆಲ್ಲ ಪ್ಲೇಗಿನ ಪಿಡುಗು ಬೇರೆ! ಜನರು ನೊಣಗಳಂತೆ ಪಟಪಟನೇ ಸಾಯುತ್ತಿದ್ದರು. ಎತ್ತ ನೋಡಿದತ್ತ ಪ್ಲೇಗಿನ ಹಾವಳಿ. ಇಂಥ ಸಂದರ್ಭದಲ್ಲಿ ಆಳರಸಿಯ ಸಿಂಹಾಸನಾರೋಹಣದ ಉತ್ಸವ ಆಚರಿಸಬೇಕೆಂಬ ಒತ್ತಾಯವು ನೋವಿನ ಮೇಲೆ ಬರೆ ಎಳೆದಂತೆ ಆಗಿತ್ತು. ದೇಶಪ್ರೇಮಿ ತರುಣರಿಗೆ ಇಂಥ ಅಪಮಾನ ಸಹಿಸುವುದಾಗಲಿಲ್ಲ. ಚಾಪೇಕರ್ ಸಹೋದರರು ಎಂಬ ದೇಶಭಕ್ತರು ಆಳರಸರ ಈ ಧೋರಣೆಯನ್ನು ಪ್ರತಿಭಟಿಸುವುದಕ್ಕಾಗಿ ಇಬ್ಬರು ಆಂಗ್ಲ ಅಧಿಕಾರಿಗಳನ್ನು ಗುಂಡಿಟ್ಟು ಕೊಂದರು. ಚಾಪೇಕರ್ ಸಹೋದರರನ್ನು ಬಂಧಿಸಿ ಆಂಗ್ಲ ಸರಕಾರ ಅವರನ್ನು ಗಲ್ಲಿಗೇರಿಸಿತು. ಚಾಪೇಕರ್ ಸಹೋದರರ ಈ ಸಾಹಸ ಮತ್ತು ಬಲಿದಾನ ಸಾವರ್ಕರ್ ಸಹೋದರರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಮೂಡಿಸಿದವು. 1899ರಲ್ಲಿ ದೇಶವನ್ನು ಮುತ್ತಿದ ಪ್ಲೇಗ್ ಪಿಡುಗಿಗೆ ಅವನ ತಂದೆ ತುತ್ತಾದರು. ಬಾಲಕ ವಿನಾಯಕನಂತೂ ಚಾಪೇಕರ್ ಸಹೋದರರ ಸಾಹಸ ಮತ್ತು ಬಲಿದಾನದ ವೀರಕವನವನ್ನು ಬರೆದನು. ಆ ಕವನದ ಕೊನೆಯ ನುಡಿ ಹೀಗಿದೆ;
ನೀವು ಕೈಗೊಂಡ ಕಾರ್ಯ ಅರ್ಧಕ್ಕೆ ಉಳಿಯಿತು ಎಂಬ ನಿರಾಸೆ ಹೊಲ್ಲ!
ಅದನ್ನು ಮುಂದುವರಿಸಲು ನಾವಿದ್ದೇವೆ; ಇದಕ್ಕೆ ಸಂದೇಹವಿಲ್ಲ!!
ಬರಿ ಬಾಯಿಮಾತಿನ ಕವಿತೆ ಹೊಸೆದು ಸುಮ್ಮನುಳಿಯಲಿಲ್ಲ ವಿನಾಯಕ. ತಮ್ಮ ಕುಲದೇವಿಯಾಗಿದ್ದ ಅಷ್ಟಭುಜೆ ದುರ್ಗಾಮಾತೆಯ ಎದುರು ವಿನಾಯಕ ಪ್ರತಿಜ್ಞೆ ಮಾಡಿದ.
“ದೇಶಕ್ಕೆ ಸ್ವಾತಂತ್ರ್ಯ ಗಳಿಸಲೋಸುಗ ಸಶಸ್ತ್ರಕ್ರಾಂತಿಯ ಗುಡಿನೆಟ್ಟು ಪ್ರಾಣದ ಹಂಗುದೊರೆದು ಹೋರಾಡುವೆನು ನಾನು!”
ಕ್ರಾಂತಿಕಾರಿ ಹೊತ್ತಿಗೆ
ಮ್ಯಾಝಿನಿ (1805-72) ಸಾವರ್ಕರರ ಅತ್ಯಂತ ಹೆಮ್ಮೆಯ ಸ್ವಾತಂತ್ರ್ಯವೀರ. ಇಟಲಿ ದೇಶದ ಈ ದೇಶಭಕ್ತ ಸಾವರ್ಕರರ ಆದರ್ಶ ನಾಯಕ. 1906ರ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ತಲುಪುವುದೊಂದೆ ತಡ ಮ್ಯಾಝಿನಿಯ ಬಗೆಗೆ ಇದ್ದ ಪುಸ್ತಕಗಳನ್ನೆಲ್ಲ ಓದಿ ಮುಗಿಸಿದರು. ಸ್ವಾತಂತ್ರ್ಯವೀರ ಮ್ಯಾಝಿನಿಯ ಚರಿತ್ರೆಯನ್ನು ಭಾರತೀಯರಿಗಾಗಿ ಅಂದರೆ ಭಾರತೀಯರು ತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಪ್ರೇರೇಪಿಸುವಂತೆ, ಪ್ರಚೋದಿಸುವಂತೆ ಅತ್ಯಂತ ವೀರಾವೇಶಯುಕ್ತವಾದ ಭಾಷೆಯಲ್ಲಿ ಬರೆದು ಪ್ರಕಟಣೆಗಾಗಿ ಭಾರತಕ್ಕೆ ಕಳುಹಿಸಿದರು. ಲೋಕಮಾನ್ಯ ತಿಲಕರು ಆ ಪುಸ್ತಕದ ಕೈಬರಹದ ಪ್ರತಿಯನ್ನು ಓದಿದರು. ಮೂಲಚರಿತ್ರೆಯಂತೂ ಸ್ಫೂರ್ತಿಪ್ರದವಾದುದು ಹೌದೇ ಹೌದು; ಆದರೆ ಭಾಷೆ ಮತ್ತು ಬರವಣಿಗೆಯ ಶೈಲಿಯು ಅತ್ಯಂತ ಓಜಸ್ಸು ಮತ್ತು ತೇಜಸ್ಸುಗಳಿಂದ ಕೂಡಿ ಎಂಥ ಉತ್ತರಕುಮಾರರನ್ನೂ ಉತ್ತಮ ಸ್ವಾತಂತ್ರ್ಯ ವೀರರನ್ನಾಗಿಸುವಷ್ಟು ಮೊನಚಾಗಿತ್ತು. ತಿಲಕರೆಂದರು, “ಈ ಗ್ರಂಥ ಪ್ರಕಟವಾದರೆ ಬ್ರಿಟಿಷ್ ಸರಕಾರ ಖಂಡಿತವಾಗಿಯೂ ಅದಕ್ಕೆ ಮುಟ್ಟುಗೋಲು ಹಾಕುತ್ತದೆ.” ತಿಲಕರು ನುಡಿದ ಭವಿಷ್ಯವು ಸತ್ಯವಾಯಿತು. ಸಾವರ್ಕರ್ ಬರೆದ ‘ಮ್ಯಾಝಿನಿ’ ಪುಸ್ತಕ ಮುಟ್ಟುಗೋಲು ಹಾಕಲ್ಪಟ್ಟಿತು.
ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ – 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು. ಸಾವರ್ಕರರು ಬರೆದ ಮೊದಲನೇ ಸ್ವಾತಂತ್ರ್ಯಸಮರದ ಪುಸ್ತಕದ ಕೈಬರಹದ ಪ್ರತಿ ಭಾರತಕ್ಕೆ ಬಂದಿತು. ಅವರ ಅಣ್ಣ ಗಣೇಶ(ಬಾಬಾ) ಸಾವರ್ಕರರು ಆ ಪುಸ್ತಕವನ್ನು ಅಚ್ಚು ಹಾಕಿಸುವ ಸಕಲ ಪ್ರಯತ್ನ ನಡೆಸಿದರು. ಸರಕಾರಕ್ಕೆ ಇದರ ಸುಳಿವು ಸಿಕ್ಕಿತು. ಸಾವರ್ಕರರ ಪುಸ್ತಕ ಎಂದರೆ ದೇಶದ್ರೋಹದ ಹೊತ್ತಿಗೆ ಎಂಬುದೇ ಸರಕಾರದ ಧೋರಣೆಯಾಗಿತ್ತು. ಪುಸ್ತಕದ ಹಸ್ತ ಪ್ರತಿಯನ್ನೂ ಮುಟ್ಟುಗೋಲು ಹಾಕುವುದಕ್ಕಾಗಿ ಮುದ್ರಣಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆದವು. ಹೀಗಾದರೆ ಒಮ್ಮಿಲ್ಲೊಮ್ಮೆ ಹಸ್ತಪ್ರತಿಯು ಸರಕಾರದ ಕೈಗೆ ಬೀಳಬಹುದು ಎಂಬ ಸಂದೇಹ ಉಂಟಾದುದರಿಂದ ಆ ಹಸ್ತಪ್ರತಿಯನ್ನು ಫ್ರಾನ್ಸಿಗೆ ರವಾನಿಸಲಾಯಿತು. ಭಾರತೀಯ ಭಾಷೆಯಲ್ಲಿಯ ಪುಸ್ತಕದ ಮುದ್ರಣಕಾರ್ಯ ಫ್ರಾನ್ಸ್’ಲ್ಲಿ ನೆರವೇರುವುದು ಸಾಧ್ಯವಿರಲಿಲ್ಲ. ಆದುದರಿಂದ ಪುಸ್ತಕವನ್ನು ಆಂಗ್ಲಭಾಷೆಗೆ ಪರಿವರ್ತಿಸಿ ಮುದ್ರಿಸಲಾಯಿತು. ಪುಸ್ತಕದ ಪ್ರತಿಗಳು ರಹಸ್ಯವಾಗಿ ಭಾರತಕ್ಕೆ ಬಂದವು. ಸರಕಾರಕ್ಕೆ ಸ್ವಲ್ಪ ಸಮಯದಲ್ಲಿಯೇ ಪ್ರಕಟಿತ ಪುಸ್ತಕದ ಬಗ್ಗೆ ಮಾಹಿತಿ ದೊರಕಿತು. ಪುಸ್ತಕಕ್ಕೆ ಮುಟ್ಟುಗೋಲು ಹಾಕಲಾಯಿತು. ಈ ಸಂಬಂಧದಲ್ಲಿ ಬಾಬಾ ಸಾವರ್ಕರ್ರನ್ನು ಬಂಧಿಸಿ ರಾಜದ್ರೋಹದ ಆಪಾದನೆ ಹೊರಿಸಲಾಯಿತು. ಬಾಬಾ ಸಾವರ್ಕರರಿಗೆ ಅಜನ್ಮ ಕಾರಾವಾಸದ ಶಿಕ್ಷೆ ವಿಧಿಸಲ್ಪಟ್ಟಿತು.ಇಂಥ ಸನ್ನಿವೇಶದಲ್ಲಿ ಸಾವರ್ಕರರಿಗೆ ಲಂಡನ್ನಿನಲ್ಲಿ ಉಳಿದುಕೊಳ್ಳಲು ಮನಸ್ಸಾಗಲಿಲ್ಲ. ಆಂಗ್ಲ ಸರಕಾರ ರಾಜದ್ರೋಹದ ಆರೋಪದಿಂದ ಸಾವರ್ಕರರನ್ನು ಬಂಧಿಸಿ ಮೊರಿಯಾ ಎಂಬ ಹೆಸರಿನ ಉಗಿಹಡಗದಲ್ಲಿ ಭಾರತಕ್ಕೆ ರವಾನಿಸಿತು.
ಈಸಬೇಕು ಇದ್ದು ಜೈಸಬೇಕು
1910ರ ಜುಲೈ 10 ರಂದು ಬೆಳಗಿನ ಜಾವ. ಫ್ರಾನ್ಸ್ ದೇಶದ ಮಾರ್ಸೇಲ್ಸ್ ಬಂದರು ಕಟ್ಟೆಯ ಹತ್ತಿರ ಮೊರಿಯಾ ಎಂಬ ಹೆಸರಿನ ಉಗಿಹಡಗು ಲಂಗರುಹಾಕಿ ನಿಂತಿತ್ತು. ಆ ಉಗಿಹಡಗಿನಲ್ಲಿ ಯಾವುದೋ ಯಾಂತ್ರಿಕ ತೊಂದರೆ ಉಂಟಾಗಿದ್ದುದರಿಂದ ಅದನ್ನು ಸರಿಪಡಿಸುವುದರಲ್ಲಿ ಕೆಲಸಗಾರರು ಸರಿಯಾಗುವುದನ್ನು ಕಾಯುತ್ತಿದ್ದರು. ಸಮುದ್ರ ಪ್ರಶಾಂತವಾಗಿತ್ತು. ಪ್ರಯಾಣಿಕರೂ ನಿಶ್ಚಿಂತರಾಗಿದ್ದರು, ನಿರಾಳವಾಗಿದ್ದರು. ಒಬ್ಬ ತರುಣ ಪಯಣಿಗ ಮಾತ್ರ ಮನಸ್ಸಿನಲ್ಲಿಯೇ ಏನೋ ಲೆಕ್ಕ ಹಾಕುತ್ತಿದ್ದ. ಆತ ನಿಶ್ಚಿಂತನಾಗಿರುವುದು ಶಕ್ಯವಿರಲಿಲ್ಲ. ಯಾಕೆಂದರೆ ಆತ ಸೆರೆಹಿಡಿಯಲ್ಪಟ್ಟಿದ್ದ. ಆತ ಆಂಗ್ಲರ ಸೆರೆಯಾಳಾಗಿದ್ದ. ಆತನ ಮೇಲೆ ರಾಜದ್ರೋಹದ ಆಪಾದನೆ ಇತ್ತು. ಆತನನ್ನು ಕಾಯಲೆಂದು ಇಬ್ಬರು ಕಾವಲುಗಾರರು ಕಣ್ಣಲ್ಲಿ ಕಣ್ಣಿಟ್ಟು ಕಾದುಕೊಂಡಿದ್ದರು.
“ನಾನು ಶೌಚವಿಸರ್ಜನೆಗೆ ಹೋಗಬೇಕಿದೆ,” ಆ ಸೆರೆಯಾಳು ಕಾವಲುಗಾರರಿಗೆ ಹೇಳಿದ.
“ಸರಿ, ನಡೆ” ಕಾವಲುಗಾರರು ಆತನನ್ನು ಉಗಿಹಡಗಿನ ಶೌಚಾಲಯಕ್ಕೆ ಕರೆದೊಯ್ದರು. ಸೆರೆಯಾಳು ಶೌಚಾಲಯದ ಬಾಗಿಲು ಹಾಕಿಕೊಂಡ. ಬಾಗಿಲಿನ ಹೊರಗೆ ಇಬ್ಬರೂ ಕಾವಲುಗಾರರು ಎದುರ ಬದುರಾಗಿ ಕಾಯುತ್ತಿದ್ದರು. ಬಾಗಿಲಿಗೆ ಗಾಜಿನ ಕಿಟಕಿ ಇದ್ದುದರಿಂದ ಶೌಚಾಲಯ ಸೇರಿದ ಸೆರೆಯಾಳುವಿನ ಮೇಲೆ ದೃಷ್ಟಿಯಿಡಲು ಅನುಕೂಲವಿತ್ತು. ಶೌಚಾಲಯ ಸೇರಿದ ತರುಣ ಒಳಗಿನಿಂದ ಬಾಗಿಲು ಭದ್ರಪಡಿಸಿಕೊಂಡು ಕಿಟಕಿಯ ಮೇಲೆ ತನ್ನ ಮೇಲಂಗಿಯನ್ನು ನೇತುಹಾಕಿದ. ಕಾವಲುಗಾರರ ಕಣ್’ನೋಟಕ್ಕೆ ಹೀಗೆ ತಡೆ ಹಾಕಿದವನೇ ಆ ತರುಣ ಉಗಿ ಹಡಗಿನ ಕಿಂಡಿಯಲ್ಲಿ ತೂರಿದ. ತಳ ಸೇರಿದ, ಸಮುದ್ರಕ್ಕೆ ಹಾರಿದ. ಸಮುದ್ರದ ಅಲೆಗಳೊಡನೆ ಹೋರಾಡಿದ. ಈಸಿ ದಡ ಸೇರಿದ, ಬಂದರುಕಟ್ಟೆಯ ಗೋಡೆ ಏರಿದ. ಬಿರಬಿರನೇ ಮುಂದೆ ಓಡಿದ.
ಶೌಚಾಲಯದ ಹೊರಗೆ ನಿಂತ ಕಾವಲುಗಾರರು ಸೆರೆಯಾಳು ಇನ್ನೂ ಹೊರಗೆ ಬಂದಿಲ್ಲವಲ್ಲ ಎಂದು ಗಾಬರಿಯಾದರು. ಒಳಗೆ ಏನೋ ಗಡಿಬಿಡಿ ನಡೆದ ಸದ್ದು ಅವರಿಗೆ ಕೇಳಿತ್ತು. ಹಡಗಿನ ಮೇಲ್ಭಾಗಕ್ಕೆ ಬಂದು ನೋಡಿದರು.
ಆ ಸೆರೆಯಾಳು ಸಮುದ್ರಕ್ಕೆ ಹಾರಿದ್ದು ಕಂಡಿತು. ಕಾವಲುಗಾರರು ಕೂಗಿಕೊಂಡರು, “ಸೆರೆಯಾಳು ತಪ್ಪಿಸಿಕೊಂಡಿದ್ದಾನೆ; ಹಿಡಿಯಿರಿ, ಹಿಡಿಯಿರಿ!”
ಇಷ್ಟು ಹೊತ್ತು ನಿರಾಳವಾಗಿ ನೆಲೆನಿಂತ ಉಗಿ ಹಡಗಿನಲ್ಲಿ ಗುಲ್ಲೋ ಗುಲ್ಲು!
“ತಪ್ಪಿಸಿಕೊಂಡ ಸೆರೆಯಾಳುವಿನ ಹೆಸರು ಸಾವರ್ಕರ್!” ಯಾರೋ ಹೇಳಿದರು.
ಈ ಸಾಹಸದ ಕಥೆ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾದಾಗ ಪ್ರಪಂಚವೆಲ್ಲ ಬೆಕ್ಕಸಬೆರಗಾಯಿತು.
ಸಾವರ್ಕರ್ ಸಮುದ್ರವನ್ನು ಈಜಿ ಫ್ರಾನ್ಸ್ ದೇಶದ ಭೂದಂಡೆಯನ್ನು ಸೇರಿ ಮಾರ್ಸೇಲ್ಸ್ ಬಂದರದ ಗೋಡೆ ಏರಿ ನಗರ ಪ್ರವೇಶಿಸುತ್ತಿದ್ದಂತೆಯೇ ಉಗಿಹಡಗಿನಲ್ಲಿದ್ದ ಕಾವಲುಗಾರರು ದೋಣಿಯ ಮೂಲಕ ಬಂದರು ಸೇರಿ ಸಾವರ್ಕರರ ಬೆನ್ನಟ್ಟಿ ಹಿಡಿದರು.
“ಫ್ರಾನ್ಸ್ ಭೂಪ್ರದೇಶದಲ್ಲಿ ನನ್ನನ್ನು ಹಿಡಿಯುವ ಅಧಿಕಾರ ನಿಮಗಿಲ್ಲ”ಎಂದು ಸಾವರ್ಕರ್ ಗರ್ಜಿಸಿದರು. ಆದರೆ ಕಾವಲುಗಾರರು ಕೇಳಲಿಲ್ಲ. ಸೆರೆಹಿಡಿದು ಉಗಿಹಡಗಿಗೆ ಮರಳಿ ತರಲಾಯ್ತು. ಕಾವಲನ್ನು ಭದ್ರಪಡಿಸಿ ಅವರನ್ನು ಭಾರತಕ್ಕೆ ಸಾಗಿಸಲಾಯಿತು.
ಜೀವಾವಧಿ ಶಿಕ್ಷೆ
ಕ್ರಾಂತಿ ಎಸಗಿ ರಾಜಸತ್ತೆಯನ್ನು ಉರುಳಿಸುವ ಸಂಚು ನಡೆಸಿದ್ದಕ್ಕಾಗಿ ಮತ್ತು ಆಂಗ್ಲ ಅಧಿಕಾರಿಗಳ ಕೊಲೆಗೆ ಪ್ರೇರೇಪಣೆ ನೀಡಿದ್ದಕ್ಕಾಗಿ ಎಂದು ಪ್ರತ್ಯೇಕವಾಗಿ ಎರಡು ಕರಿನೀರಿನ ಜೀವಾವಧಿ ಶಿಕ್ಷೆಗಳು ವಿಧಿಸಲ್ಪಟ್ಟವು.
ಆಂಗ್ಲ ನ್ಯಾಯಾಧೀಶರು ಎರಡು ಜೀವಾವಧಿ ಶಿಕ್ಷೆ ಕೊಟ್ಟಾಗ ಸಾವರ್ಕರ್ ಉದ್ಗರಿಸಿದರು. “ಹೋ, ಆಂಗ್ಲರಿಗೂ ಹಿಂದೂಗಳ ಪುನರ್ಜನ್ಮದಲ್ಲಿ ನಂಬಿಕೆ ಇದೆ ಎಂದಂತಾಯ್ತು. ಎರಡು ಜೀವಾಮಾನಗಳ ಅವಧಿಯ ಶಿಕ್ಷೆ ವಿಧಿಸಿದುದೇ ಅದಕ್ಕೆ ನಿದರ್ಶನ.”
ಅವರ ಆಸ್ತಿಪಾಸ್ತಿಗಳನ್ನೆಲ್ಲ ಸರಕಾರ ಮುಟ್ಟುಗೋಲು ಹಾಕಿತು. ಎರಡು ಜೀವಾವಧಿ ಶಿಕ್ಷೆ ಎಂದರೆ ಐವತ್ತು ವರ್ಷಗಳ ಕಾಲ ವಿನಾಯಕ ಸಾವರ್ಕರ್ ಅಂಡಮಾನಿನ ಕಾರಾಗೃಹದಿಂದ ಕೊಳೆಯಬೇಕಿತ್ತು. ಅಂಡಮಾನಿನ ಕಾರಾವಾಸ ಎಂದರೆ ಕರಿನೀರಿನ ಶಿಕ್ಷೆ ಎಂದು ಕುಪ್ರಸಿದ್ಧವಾಗಿತ್ತು. ಕರಿನೀರಿನ ಶಿಕ್ಷೆಗೆ ಪಾತ್ರರಾಗುವ ಅಪರಾಧಿಗಳನ್ನು ನಾನಾ ರೀತಿಯ ಕಠಿಣ ಕ್ರಮಗಳಿಗೆ ಈಡು ಮಾಡಲಾಗುತ್ತಿತ್ತು. ವಿನಾಯಕ ಸಾವರ್ಕರರನ್ನು ಎಣ್ಣೆ ಹಿಂಡುವ ಗಾಣಕ್ಕೆ ಹೂಡುತ್ತಿದ್ದರು. ಬೆಳಗಿನಿಂದ ಬೈಗಿನವರೆಗೆ ಗಾಣ ಸುತ್ತಿ ಸುತ್ತಿ ಬಳಲುತ್ತಿದ್ದರು. ಹಗ್ಗ ಹೊಸೆಯುವ ಕೆಲಸವನ್ನೂ ವಿಧಿಸಲಾಗುತ್ತಿತ್ತು. ಚರ್ಮ ಸುಲಿದು ನೆತ್ತರು ಬಸಿಯುತ್ತಿದ್ದರೂ ನಿಗದಿಯಾದ ಪ್ರಮಾಣದಲ್ಲಿ ಇಂಥ ಕೆಲಸಗಳನ್ನು ಪೂರೈಸಲೇಬೇಕಿತ್ತು. ತಪ್ಪಿದಲ್ಲಿ ಬೆತ್ತದ ಏಟು!
ಪರಸ್ಪರ ಮಾತನಾಡಲು, ವಿಚಾರವಿನಿಮಯ ನಡೆಸಲು ಕರಿನೀರಿನ ಕಾರಾವಾಸದಲ್ಲಿ ಶಕ್ಯವಿರಲಿಲ್ಲ. ಕಾವಲುಗಾರರ ಮನ ಒಲಿಸಿ ಚೀಟಿ ಬರೆದು ಕಳುಹಿಸುವುದು ಕೂಡ ಪ್ರತಿಯೊಂದು ಸಲ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಸಾವರ್ಕರ್ ಸಹೋದರರು ತಮ್ಮದೇ ಒಂದು ಉಪಾಯ ಹೂಡಿದರು. ಮುಂಗೈಗೆ ತೊಡಿಸಿದ ಸಂಕೋಲೆಗಳನ್ನು ಒಂದಕ್ಕೊಂಡು ತಟ್ಟಿ ಸಂಕೇತಭಾಷೆಯಲ್ಲಿ ಮಾತನಾಡಿಕೊಳ್ಳುವುದನ್ನು ಕಲಿತರು. ಬರಬರುತ್ತ ಸಂಕೋಲೆಯ ಸಂಕೇತವಾದ ಸಮಸ್ತ ಸೆರೆಯಾಳುಗಳಿಗೆ ಸಂಭಾಷಣೆಯ ಸಾಧನವಾಯಿತು!
ಸಂಕೋಲೆಯೊಳಗೂ ಸಮಾಜಸೇವೆ
ಸರೀಕರ ಸೆರೆಯಾಳುಗಳು ಕೊಲೆಗಾರರೋ, ಸುಲಿಗೆಗಾರರೋ ಆಗಿದ್ದರೂ ಸಾವರ್ಕರ್ ಅವರೊಡನೆ ಪ್ರೀತಿಯಿಂದ ವರ್ತಿಸಿ ಅವರ ಪ್ರೇಮ, ಅಭಿಮಾನ ಗಳಿಸಿಕೊಂಡಿದ್ದರು. ಜೊತೆಯ ಸೆರೆಯಾಳುಗಳಿಗೆ ಅಕ್ಷರ ಜ್ಞಾನ ಮಾಡಿಕೊಡುತ್ತಿದ್ದರು. ಭಾರತ ಇತಿಹಾಸದ, ಪರಂಪರೆಯ ಕಥೆಗಳನ್ನು ಹೇಳುತ್ತಿದ್ದರು. ಕಾರಾವಾಸದ ಕಾಲದಲ್ಲಿ ತಮ್ಮ ಮನವನ್ನು ಚಿಂತೆಯಲ್ಲಿ ಕೊಳೆಯಗೊಡದೆ ಚಿಂತನ ಮನನಗಳಿಂದ ಒಳ್ಳೊಳ್ಳೆಯ ಕಾವ್ಯವನ್ನು ರಚಿಸುವುದಕ್ಕಾಗಿ ಬಳಸಿದರು. ಅವರ ಶರೀರವನ್ನೋ ಸಂಕೋಲೆಯ ಕಾರಾಗೃಹದಲ್ಲಿ ಬಂಧಿಸಲ್ಪಟ್ಟಿತ್ತು ಆದರೆ ಅವರ ಬುದ್ಧಿ ಕಲ್ಪನಾಶಕ್ತಿಗಳಿಗೆ ಯಾವ ಅಡೆತಡೆ ಇರಲಿಲ್ಲ. ಕಾವ್ಯರಚನೆ ಮಾಡಿ ಕಾರಾಗೃಹದ ಗೋಡೆಗಳ ಮೇಲೆ ಮೊಳೆಯಿಂದ ಬರೆಯುತ್ತಿದ್ದರು. ರಚಿಸಿದ ಕಾವ್ಯಭಾಗವನ್ನು ಓದಿ ಓದಿ ಗಟ್ಟಿಮಾಡಿಕೊಳ್ಳುತ್ತಿದ್ದರು. ಅದು ತಮ್ಮ ನೆನಪಿನ ಪಟಲದ ಮೇಲೆ ಅಚ್ಚಳಿಯದಂತೆ ಒಡಮೂಡಿತೆಂದರೆ ಮುಂದಿನ ರಚನೆ ಕೈಗೊಳ್ಳುತ್ತಿದ್ದರು. ‘ಕಮಲಾ’, ‘ಗೋಮಾಂತಕ’, ‘ಮಹಾಸಾಗರ’ ಎಂಬ ಅನೇಕ ಕಾವ್ಯಗಳನ್ನು ವಿನಾಯಕ ಸಾವರ್ಕರ್ ಈ ರೀತಿಯಲ್ಲಿ ಅಂಡಮಾನದ ಕಾರಾಗೃಹವಾಸದಲ್ಲಿ ಸೃಷ್ಟಿಸಿದರು. ಮಣ್ಣಿನವಾಸನೆಯ ಕಾವ್ಯಗಳು ಅನೇಕರಿಂದ ರಚಿಸಲ್ಪಟ್ಟಿರಬಹುದು. ಆದರೆ ಅಂಡಮಾನದ ಗೋಡೆಗಳ ಕಲ್ಲಿನ ವಾಸನೆಯ ಈ ಕಾವ್ಯಗಳಿಗೆ ಇರುವ ವಿಶೇಷತೆ ಅಪೂರ್ವವೇ!
ಎಲ್ಲೆಡೆಯಿಂದಲೂ ಸಾವರ್ಕರರ ಬಿಡುಗಡೆಗಾಗಿ ಒತ್ತಾಯ ಬಂದಿತು. ಸಾವರ್ಕರ್ ಸಹೋದರರನ್ನು ಅಂಡಮಾನ ಕಾರಾಗೃಹದಿಂದ 1921ರಲ್ಲಿ ಭಾರತಕ್ಕೆ ತರಲಾಯಿತು. 1922 ರಲ್ಲಿ ಬಾಬಾ ಸಾವರ್ಕರರನ್ನು ಕಾರಾಗೃಹದಿಂದ ಬಿಡುಗಡೆ ಮಾಡಿದರು. 1924ರಲ್ಲಿ ವಿನಾಯಕರನ್ನು ಹೊರಬಿಟ್ಟರು; ಆದರೆ ಅವರು ರತ್ನಾಗಿರಿ ಜಿಲ್ಲೆಯನ್ನು ಬಿಟ್ಟು ಹೊರಗೆ ಹೋಗಕೂಡದು ಹಾಗೂ ಯಾವುದೇ ರಾಜಕೀಯ ಕಾರ್ಯವನ್ನು ಕೈಗೊಳ್ಳಕೂಡದು ಎಂಬ ನಿರ್ಬಂಧಗಳನ್ನು ಹೇರಲಾಯಿತು.
ಹಿಂದೂಗಳೆಲ್ಲ ಬಂಧುಗಳು
ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಶಾಪವಾಗಿ ಹರಡಿತ್ತು. ಸ್ಪೃಶ್ಯಾಸ್ಪೃಶ್ಯತೆ, ಮೇಲುಜಾತಿ-ಕೀಳುಜಾತಿ ಎಂಬ ಭೇದಭಾವಗಳಿಂದಾಗಿ ಹಿಂದೂಸಮಾಜ ಛಿನ್ನ ವಿಚ್ಛಿನ್ನವಾಗಿತ್ತು. ಹೀಗಾಗಿ ಅನೇಕ ಹಿಂದೂಗಳು ಪರಧರ್ಮಕ್ಕೆ ಮೊರೆಹೋಗುತ್ತಿದ್ದರು. ಸಾವರ್ಕರ್ ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿದರು. ಸತ್ಯಾಗ್ರಹ ಹೂಡಿ ರತ್ನಾಗಿರಿಯ ವಿಠ್ಠಲ ಮಂದಿರಲ್ಲಿ ಕೆಳಜಾತಿಯವರಿಗೂ ಮುಕ್ತಪ್ರವೇಶದ ಅಧಿಕಾರ ದೊರಕಿಸಿಕೊಟ್ಟರು. ರತ್ನಾಗಿರಿಯಲ್ಲಿ ಪತಿತಪಾವನ ಮಂದಿರದ ಸ್ಥಾಪನೆ ಮಾಡಿ ಅದನ್ನು ಶಂಕರಾಚಾರ್ಯರಿಂದ ಉದ್ಘಾಟಿಸಿದರು. ಸ್ಪೃಶ್ಯ-ಅಸ್ಪೃಶ್ಯ ಎಂಬ ಭೇದ ಭಾವನೆಯನ್ನು ತೊರೆದು ಸಮಸ್ತ ಹಿಂದೂಗಳು ಸಹಪಂಕ್ತಿ- ಸಹಭೋಜನದಲ್ಲಿ ಸಹಭಾಗಿಗಳಾಗುವಂತೆ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಶಾಲೆಗಳಿಗೆ ಹೋಗಿ ಜಾತಿ ಭೇದಭಾವವಿಲ್ಲದೇ ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಕೂಡಿಸುವಂತೆ ಶಾಲಾ ಅಧ್ಯಾಪಕರಿಗೆ ಪ್ರಾರ್ಥಿಸಿದರು. ನಮ್ಮ ಬಂಧುಗಳನ್ನು ನಾವು ಅಸ್ಪೃಶ್ಯರನ್ನಾಗಿ ಕಂಡರೆ ಅವರು ನಮ್ಮಿಂದ ಸಿಡಿದು ನಮಗೆ ಸಿಡಿಲಾಗಿ ಎರಗುತ್ತಾರೆ ಎಂಬುದನ್ನು ಮನಗಾಣಿಸಿಕೊಟ್ಟರು. ಅಷ್ಟೇ ಅಲ್ಲ; ಈಗಾಗಲೇ ಹಿಂದೂ ಧರ್ಮವನ್ನು ತೊರೆದು ಹೊರಹೋದವರನ್ನು ಪುನಃ ಹಿಂದೂಧರ್ಮಕ್ಕೆ ಈ ಶುದ್ಧೀಕರಣದಿಂದ ಮತ್ತೆ ಮಾತೃಧರ್ಮಕ್ಕೆ ಮರಳಿದರು.
ಸಮಾಜದಲ್ಲಿ ರೂಢವಾದ ಓರೆಕೋರೆಗಳನ್ನು ತಿದ್ದಲು ಮುಂದಾದಂತೇ ವಿನಾಯಕ ಸಾವರ್ಕರರು ಭಾರತೀಯರಲ್ಲಿ ಭಾಷೆಯ ಬಳಕೆಯಲ್ಲಿ ರೂಢವಾಗುತ್ತ ನಡೆದಿದ್ದ ಆಂಗ್ಲಪದಗಳ ವಿರುದ್ಧ ಹೋರಾಟ ಹೂಡಿ ಭಾಷಾಶುದ್ಧಿಯ ಕಾರ್ಯವನ್ನು ಕೈಕೊಂಡರು.
1937ರಲ್ಲಿ ಸಾವರ್ಕರರ ಮೇಲಿನ ಎರಡು ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಅನಂತರ ಸಾವರ್ಕರರು ಸಕ್ರಿಯ ರಾಜಕಾರಣದಲ್ಲಿ ಧುಮುಕಿದರು. ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು.
ಸ್ವಾತಂತ್ರ್ಯವೀರ ಸಾವರ್ಕರ್ ಸುವರ್ಣ ಪುಟ
1952ರಲ್ಲಿ ಸ್ವತಂತ್ರ ಭಾರತವು ಭಾರತೀಯ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಸ್ವಾತಂತ್ರ್ಯ ಹೋರಾಟದ ಅಗ್ರೇಸರ ನಾಯಕ, ವಿನಾಯಕ ಸಾವರ್ಕರರು ರಾಜಧಾನಿ ದಿಲ್ಲಿಯಲ್ಲಿ ನಡೆಸಿದ ಸಮಾರಂಭದಲ್ಲಿ ಹೆಮ್ಮೆಯಿಂದ ಭಾಗವಹಿಸಿ ಒಳ್ಳೇ ವೀರಾವೇಶದಿಂದ ಮೊದಲು ಸ್ವಾತಂತ್ರ್ಯ ಸಂಗ್ರಾಮದ ಇತಿವೃತ್ತವನ್ನು ಬಣ್ಣಿಸಿದರು. ಭಾರತದ ಸ್ವಾತಂತ್ರ್ಯವು ಶಾಶ್ವತವಾಗಿ ಉಳಿಯಬೇಕಿದ್ದರೆ ಸದಾಕಾಲ ನಾವು ಶಶ್ತ್ರಾಸ್ತ್ರಸಜ್ಜಿತರಾಗಿ ಇರಲೇಬೇಕೆಂದು ಪ್ರತಿಪಾದಿಸಿದರು.
ಅನುಯಾಯಿಗಳು 1960ರಲ್ಲಿ ‘ಮೃತ್ಯುಂಜಯ ದಿನ’ವನ್ನು ಆಚರಿಸಿ ವಿನಾಯಕ ಸಾವರ್ಕರರು ಮೃತ್ಯುವಿನ ವಿರುದ್ಧ ಜಯಗಳಿಸಿದ ವೀರರು ಎಂದು ಅಭಿನಂದಿಸಿದರು. ಭಾರತ ಸರಕಾರವು ಅಂಡಮಾನದ ಆ ಕಾರಾಗೃಹದಲ್ಲಿ ಅವರ ಬಗೆಗೆ ನೆನಪಿನ ಶಾಸನವನ್ನು ಗೋಡೆಯ ಮೇಲೆ ಕಟ್ಟಿಸಿ ಬರೆದಿಟ್ಟು ಆ ಕೋಣೆಯನ್ನು ರಾಷ್ಟ್ರೀಯ ಅಭಿಮಾನದ ಸ್ಮಾರಕವೆಂದು ಸಾರಿತು. 1965ರಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಭಾರತ ಸರಕಾರ ಅವರಿಗೆ ಗೌರವಧನವನ್ನು ಕೊಟ್ಟವು. ವಿನಾಯಕ ಸಾವರ್ಕರರನ್ನು ಅಪ್ರತಿಮ ಸ್ವಾತಂತ್ರ್ಯ ವೀರನೆಂದು ಗೌರವಿಸುವುದಾಗಿ ಸರಕಾರ ಹೇಳಿತು.
ಇಳಿವಯಸ್ಸಿನಲ್ಲಿ ಸಹ ಅವರು ರಚನಾತ್ಮಕ ಕಾರ್ಯಗಳಿಂದ ವಿಮುಖರಾಗಿರಲಿಲ್ಲ. ‘ಭಾರತೀಯ ಇತಿಹಾಸದಲ್ಲಿಯ ಆರು ಸುವರ್ಣ ಪುಟಗಳು’ ಎಂಬ ಬೃಹತ್ ಐತಿಹಾಸಿಕ ಗ್ರಂಥವನ್ನು ರಚಿಸಿದರು. ಭಾರತೀಯ ಇತಿಹಾಸದಲ್ಲಿಯ ಹೆಮ್ಮೆಯ ಘಟನೆಗಳನ್ನು ಗುರುತಿಸಿ ಭಾರತೀಯರಲ್ಲಿ ಅಭಿಮಾನವನ್ನು ಸ್ಫುರಿಸುವಂತೆ ಈ ಬರವಣಿಗೆ ನೀಡಿದರು. ವಿನಾಯಕ ಸಾವರ್ಕರರ ಸಹೋದರರಾದ ಗಣೇಶ (ಬಾಬಾ) ಸಾವರ್ಕರ್ 1945ರಲ್ಲಿ ಮತ್ತು ನಾರಾಯಣ ಸಾವರ್ಕರ್ 1950 ರಲ್ಲಿ ಮರಣ ಹೊಂದಿದರು. ಸಾವರ್ಕರರ ಪತ್ನಿ ಯಮುನಬಾಯಿ 1965 ರಲ್ಲಿ ಅಗಲಿದರು. ತಾತ್ಯಾರ ಮಗ ವಿಶ್ವಾಸನ ಮದುವೆಯಾಗಿತ್ತು. ಮಗಳು ಪ್ರಭಾತ್ಳ ಮದುವೆಯಾಗಿ ಅವಳೂ ಗಂಡನ ಮನೆಗೆ ಹೋಗಿದ್ದಳು. ಜೀವನದಲ್ಲಿಯ ಇತಿಕರ್ತವ್ಯಗಳೆಲ್ಲ ಕೈಗೂಡಿದ್ದವು. ಶರೀರ ಸವೆದಿತ್ತು, ಅನಾರೋಗ್ಯ ಮನೆಮಾಡಿತ್ತು. ಸ್ವಾತಂತ್ರ್ಯಾ ನಂತರ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಆಗಬೇಕಾಗಿದ್ದ ಆಸ್ತಿ ವಿಭಜನೆಯ ವಿಷಯದಲ್ಲಿ ಮಹಾತ್ಮಾ ಗಾಂಧಿಯವರು ತೆಗೆದುಕೊಂಡ ನಿಲುವಿನಿಂದ ಬಹಳ ಅಸಮಾಧಾನಗೊಂಡಿದ್ದ ಸಾವರ್ಕರರ ಹೆಸರು ಗಾಂಧಿ ಹತ್ಯೆಯ ಆರೋಪಿಪಟ್ಟಿಯಲ್ಲಿ ಸೇರಿದ್ದು ಮಾತ್ರ ವಿಪರ್ಯಾಸ !!!!
ಹಿಂದೂಗಳಿಗೆ ಹಿಂದೂ ಎಂಬ ಹೆಸರನ್ನು ನೀಡಿದ ಸಿಂಧು ನದಿ, ಹಿಂದೂಗಳಿಗೆ ವೇದಗಳನ್ನಿತ್ತ ಆರ್ಯಾವರ್ತ ಪ್ರದೇಶ ಭಾರತದ ಹೊರಗೆ ಉಳಿದು ಪಾಕಿಸ್ತಾನ ಎಂಬ ಬೇರೆಯೇ ರಾಷ್ಟ್ರ ನಿರ್ಮಾಣವಾದದ್ದು ಅವರಿಗೆ ಸಹ್ಯವಾಗಿರಲಿಲ್ಲ.
ಈ ಕೊರಗಿನ ಹೊರತು ಅವರಿಗೆ ಜೀವನದಲ್ಲಿ ಉಳಿದೆಲ್ಲ ವಿಷಯಗಳಲ್ಲಿ ಸಂತೃಪ್ತಿ ಲಭಿಸಿತ್ತು. ತಮ್ಮ ಜೀವನದ ಕೊನೆಗಾಲದಲ್ಲಿ ವಿನಾಯಕ ಸಾವರ್ಕರ್ ಅನ್ನವನ್ನು ವರ್ಜಿಸಿದರು. 1966ರ ಫೆಬ್ರುವರಿ 26 ರಂದು ಅಸುನೀಗಿದರು. ಆಗ ಅವರಿಗೆ 83 ವರ್ಷ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ಮತ್ತು ಸ್ವತಂತ್ರ್ಯಪ್ರಾಪ್ತಿಯ ನಂತರ ಅದರ ಉಳಿವಿಗಾಗಿ ಹೆಣಗಿದ ಅವರ ಹೆಸರು “ಸ್ವಾತಂತ್ರ್ಯವೀರ ಸಾವರ್ಕರ್ ” ಎಂದು ಅನ್ವರ್ಥಕವಾಗಿ ಅಜರಾಮರವಾಗಿ ಉಳಿದಿದೆ.
ಕೃತಿಗಳು
ಕಮಲಾ
ನನ್ನ ಜೀವಾವಧಿ ಶಿಕ್ಷೆ
1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಕಾಳಾ ಪಾಣಿ(ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ)
ಬಂಗಾರದ ಆರು ಪುಟಗಳು
ಹಿಂದೂ ಪದಪಾದಶಾಹಿ
ನನ್ನ ಅಜೀವ ಸಾಗಾಟ
ಮಾಪಿಳ್ಳೆಗಳ ಬಂದ್
ಗಾಂಧೀ ಗೊಂದಲ
(ಆಧಾರ)