Featured ಅಂಕಣ

ನಿಮ್ಮ ಗೆಲುವಿಗೆ ಬೇಕಾಗಿರುವುದು – ಹತ್ತು ಸಾವಿರ ತಾಸುಗಳು.

‘ತಪಸ್ಸು’ ಎಂಬ ಪದವನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ,ಕೇಳಿದ್ದೇವೆ. ಕೆಲವು ಋಷಿ, ಮುನಿ, ರಾಜರು  ವರುಷಾನುವರುಷ ಚಳಿ,ಮಳೆ ಎನ್ನದೆ ತಪಸ್ಸು ಮಾಡಿ ಬೇಕಾದ ವರವನ್ನು ಪಡೆದುಕೊಂಡು ಶಕ್ತಿಶಾಲಿಯಾದ ಸಾಕಷ್ಟು ಕಥೆಯಿದೆ. ನನ್ನ ತಾಯಿಯೂ ಹೇಳುತ್ತಿದ್ದಳು, “ಮಗಾ ಓದು, ತಪಸ್ಸು ಮಾಡು ಮುಂದೆ ಸಿದ್ಧಿ ಪ್ರಾಪ್ತಿಯಾಗುತ್ತದೆ” ಎಂದು. ಈ ತಪಸ್ಸು ಎಂಬ ಪದ ಅರ್ಥ ನನಗೆ ಆಗಿದ್ದು ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವವರನ್ನು ನೋಡಿ. ಒಂದು ಪುಟ್ಟ ಕೋಣೆ, ಅದರಲ್ಲಿ ಆರು-ಏಳು ಮಂದಿ ಕೂತು ಓದುತ್ತಾರೆ. ಆ ಉತ್ತರ ಭಾರತದ ಚಳಿ, ಬಿಸಿಲು ಅಂತಹ ಪ್ರತಿಕೂಲ ಪರಿಸರದಲ್ಲೂ ಹಗಲು ರಾತ್ರಿ ಎನ್ನದೆ ತಪಸ್ಸನ್ನು ಮಾಡುತ್ತಾರೆ. ಆ ತಪಸ್ಸಿನ ಫಲವೇ ಐ.ಎ.ಎಸ್. ಅಧಿಕಾರಿಯಾಗಿ ಬರುವುದು. ಅಲ್ಲಿದ್ದಾಗ ಒಂದು ದಿನ ಪುಸ್ತಕ ಕೊಂಡುಕೊಳ್ಳಲು ನಾನು ಪುಸ್ತಕ ಭಂಡಾರಕ್ಕೆ ಹೋದೆ. ಎದುರಿಗೆ ನನ್ನ ವಯಸ್ಸಿನದೇ ಯುವಕ, ಅವನ ಗೆಳೆಯನಿಗೆ ಪುಸ್ತಕದ ಬಗ್ಗೆ ಸಲಹೆ ನೀಡುತ್ತಿದ್ದ. ಅವನ ಅಕ್ಕ ಪಕ್ಕ ರಿವಾಲ್ವರ್ ಸಿಕ್ಕಿಸಿಕೊಂಡ ಎರಡು ಸಬ್ ಇನಸ್ಪೆಕ್ಟರ್’ಗಳು. ಆ ಯುವಕ ಅಸಿಸ್ಟೆಂಟ್ ಕಮೀಷನರ್ ಆಗಿ ಆಗ ತಾನೇ ನೇಮಕಗೊಂಡಿದ್ದ! ಎರಡು ಸಬ್ ಇನ್ಸ್‌ಪೆಕ್ಟರಿಂದರು ಅವನಿಗೆ ಭದ್ರತೆ. ಇದನ್ನು ನೋಡುತ್ತಿದ್ದ ಒಬ್ಬನ್ನನ್ನು ಕಂಡು ಪುಸ್ತಕದ ಅಂಗಡಿಯವನು ಹೇಳಿದ ” ಭಯ್ಯಾ, ಕೆಲವು ದಿನಗಳ ಹಿಂದೆ ಅವನೂ ನಿನ್ನ ತರಹ ಇಲ್ಲೇ ಓದಿಕೊಂಡು ಇರುತ್ತಿದ್ದ …ನೋಡು ಈಗ ಆತ ಅಸಿಸ್ಟೆಂಟ್ ಕಮೀಷನರ್ …ಮೆಹನತ್ ಕಾ ಫಲ್ ಹೇ”. ಕೆಲದಿನಗಳ ಹಿಂದಷ್ಟೇ ಸಣ್ಣ ಕೋಣೆಯೊಳಗೆ ಓದುತ್ತಿದ್ದ ಆ ಯುವಕನಿಗೆ ಈಗ ಬಂಗಲೆ, ಕಾರು ಹಾಗೂ ವೈಕಕ್ತಿಕ ಭದ್ರತೆ. ಇದು ಒಂದು ಉದಾಹರಣೆ ಅಷ್ಟೇ, ನಾವು ಜೀವನದಲ್ಲಿ ಎಷ್ಟೋ ಜನರನ್ನು ನೋಡುತ್ತೇವೆ. ಎಷ್ಟೋ ಮಂದಿ ಹೇಳುವುದನ್ನು ಕೇಳಿದ್ದೇನೆ, ” ನಾನು ಅವನು ಕ್ಲಾಸ್ ಮೇಟ್, ಈಗ ನೋಡು ಅವನು ಎಲ್ಲಿ ಇದ್ದಾನೆ!”. ಹೀಗೆ ಕೆಲವರು ಕೆಲಕಾಲದ ಮೇಲೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ,ಬೇಕಾದದ್ದು ಸಿಗುತ್ತದೆ, ಹೇಗೆ? ಆ ಕಾಲ ಪ್ರತಿಯೊಬ್ಬನ ಜೀವನದಲ್ಲೂ ಯಾವಾಗ ಬರುತ್ತದೆ ? ಎಷ್ಟು ದಿನ ತಪಸ್ಸು ಮಾಡಬೇಕು? ನನ್ನ ಬಹುಕಾಲದ ಪ್ರಶ್ನೆ. ಇದಕ್ಕೆ ಉತ್ತರ ಒಮ್ಮೆ ಮಾಲ್ಕಮ್ ಗೋಡವೆಲ್ ಅವರ ‘ಔಟಲೈಯರ್ಸ’ ಎಂಬ ಪುಸ್ತಕದಲ್ಲಿ ಸಿಕ್ಕಿತು. ಅವರ ಸಂಶೋಧನೆಯ ಪ್ರಕಾರ ಯಾವುದೇ ವಿಷಯದಲ್ಲಿ ಯಾವುದೇ ರಂಗದಲ್ಲಿ ಪ್ರಾವೀಣ್ಯತೆ ಪಡೆದು ಸಿದ್ಧಿ ಪ್ರಾಪ್ತಿ ಆಗಬೇಕು ಅಂದರೆ ಸತತ ಹತ್ತು ಸಾವಿರ ತಾಸುಗಳ ಪರಿಶ್ರಮ ಬೇಕಂತೆ- 10,000 hours.

ಇದನ್ನು ಓದಿದ ಮೇಲೆ ನನ್ನದೇ ಆದ ಕೆಲ ವಿಶ್ಲೇಷಣೆಗಳನ್ನು ಮಾಡಿಕೊಂಡೆ. ನಮಗೆ ಕಾಣುವ ಕೆಲವು ಶ್ರೇಷ್ಠ ವ್ಯಕ್ತಿಗಳ ಭೂತ ಹಾಗೂ ಭವಿಷ್ಯವನ್ನು ಕನೆಕ್ಟ್ ಮಾಡಿ ನೋಡಿದೆ. ನರೇಂದ್ರ ಮೋದಿ,ಸಚಿನ್ ತೆಂಡೂಲ್ಕರ್, ನಾರಾಯಣಮೂರ್ತಿ, ಸ್ಟೀವ್ ಜಾಬ್ಸ, ಫುಟಬಾಲ್ ಆಟಗಾರ ಮೆಸ್ಸಿ, ಮೈಕಲ್ ಫೇರಡೆ, ಆಟೋಮೊಬೈಲ್ ಕಂಪನಿಯ ಮೊದಲ ಮಹಿಳಾ CEO ಮೇರಿ ಬಾರಾ. ಅವರ ಬದುಕನ್ನು ವಿಶ್ಲೇಷಿಸಿ ನೋಡಿದಾಗ ಏನಿದು ಆ ಹತ್ತು ಸಾವಿರ ತಾಸುಗಳು? (ಒಂಬತ್ತು ಸಾವಿರ ಅಥವಾ ಹನ್ನೊಂದು ಸಾವಿರ ತಾಸುಗಳ ಯಾಕಾಗಬಾರದು ಎಂಬ ವಾದಕ್ಕೆ ಇಳಿಯದೆ ನೋಡಿದಾಗ) ಹೌದು, ಆ ಹತ್ತು ಸಾವಿರ ತಾಸುಗಳಲ್ಲಿ ಪ್ರಬಲವಾದ ಶಕ್ತಿಯಿದೆ ಹಾಗೂ ಒಂದು ವೈಶಿಷ್ಟಕರವಾದ ಸಮಯದ, ಪರಿಶ್ರಮದ ಅರಕದ ಪ್ರಾಮುಖ್ಯತೆಯಿದೆ. ಹಾಲನ್ನು ಕಾಯಿಸಿ ಹೇಗೆ ಗಿಣ್ಣ ಮಾಡುತ್ತಾರೊ ಹಾಗೆ ಈ ಹತ್ತು ಸಾವಿರ ತಾಸುಗಳು ಒಬ್ಬ ವ್ಯಕ್ತಿ ಪರಿಶ್ರಮವನ್ನು ಒಂದೇ ನಿಟ್ಟಿನಲ್ಲಿ ಕುದಿಸಬೇಕು. ಮೈಕಲ್ ಫ್ಯಾರಡೆ ಹತ್ತು ವರ್ಷಗಳ ಕಾಲ ಹೇಗೆ ಆಯಸ್ಕಾಂತದಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಪ್ರಯೋಗ ನಡೆಸಿದ್ದರಂತೆ. ಅಮೇಲೆ ಒಂದು ಗಳಿಗೆಯಲ್ಲಿ ಆಕಸ್ಮಿಕವಾಗಿ ಇವತ್ತು ಜಗತ್ತಿನ ಮುಖವನ್ನೇ ಬದಲಾಯಿಸಿದ ಪರ್ಯಾಯ ವಿದ್ಯುತ್ (ಅಲ್ಟರನೇಟ್ ಕರೆಂಟ್) ಸಂಶೋಧಿಸಿದ್ದು. ಮೇರಿ ಬಾರ ಮೂವತ್ತು ವರ್ಷಗಳಿಂದ ಜನರಲ್ ಮೋಟರ್ಸ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಶಾಪ್ ಫ್ಲೋರ್,  ಮಾನವ ಸಂಪನ್ಮೂಲ ಇಲಾಖೆ, ಜಾಗತಿಕ ಉತ್ಪನ್ನ ಅಭಿವೃದ್ಧಿ, ಸಪ್ಲೈ ಚೇನ್ ಮ್ಯಾನೇಜಮೆಂಟ ಹೀಗೆ ಎಲ್ಲಿ ಅವಕಾಶಗಳು ಬಂದವೋ ಅಲ್ಲಲಿ ಮೇಲೇರುತ್ತಾ ಹೋದರು. ಅವರ ಪ್ರತಿ ಹೆಜ್ಜೆಯಲ್ಲೂ ಹತ್ತು ಸಾವಿರ ತಾಸುಗಳಿವೆ.

ಇಂದು ಇನ್ಫೋಸಿಸ್ ಬಹುದೊಡ್ಡ ಕಂಪನಿ. ಶುರುವಾದ ಎರಡು ವರ್ಷದಲ್ಲಿ ಅವರ ಹತ್ತಿರ ಒಂದೂ ಪ್ರಾಜೆಕ್ಟ್ ಇರಲಿಲ್ಲವಂತೆ. ನಾರಾಯಣಮೂರ್ತಿಯವರು ತಾನು ಇನ್ಫೊಸಿಸ್ ಮಾಡುತ್ತೇನೆ ಎಂದು ಹೇಳಿ ಪಟ್ನಿ ಕಂಪ್ಯೂಟರ್ಸನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ಆಮೇಲೆ ಇನ್ಫೊಸಿಸ್ ಶುರು ಮಾಡಿ ಅದಾದ ಎರಡು ವರ್ಷಗಳ ನಂತರ ಅವರಿಗೆ ಮೊದಲ ಪ್ರೊಜೆಕ್ಟ ಸಿಕ್ಕಿದ್ದು. ಸಚಿನ್ ತೆಂಡೂಲ್ಕರ್ ಜಗತ್ತು ಕಂಡ ಒಬ್ಬ ಅದ್ಭುತ ಕ್ರಿಕೆಟ್ ಆಟಗಾರ. ಅತೀ ಚಿಕ್ಕ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲು ಅವಕಾಶ ಸಿಕ್ಕುತ್ತು. ಹೇಗೆ? ಸಾಮಾನ್ಯವಾಗಿ ಒಬ್ಬ ಆಟಗಾರ ದಿನವೂ ಒಂದು ಪಂದ್ಯ ಆಡುಬಹುದು ಆದರೆ ತೆಂಡುಲ್ಕರ್ ದಿನವೂ ಕನಿಷ್ಠ ಮೂರು ಪಂದ್ಯ ಆಡಿ ಮನೆಗೆ ಬಂದು ಮತ್ತೆ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಮತ್ತೊಂದು ಉದಾಹರಣೆ, ಮೋದಿಯವರ ಭಾಷಣಕ್ಕೆ ಮನಸೋಲದವರಾರು? ಅದಕ್ಕೂ ಹತ್ತು ಸಾವಿರ ತಾಸುಗಳಿಗೂ ಏನು ಸಂಬಂಧ? ನರೇಂದ್ರ ಮೋದಿಯವರು ಒಂದು ಇಂಟರ್‌ವ್ಯೂನಲ್ಲಿ ಹೇಳುತ್ತಾರೆ, ” ತಾನು ದಿನವೂ ಕನಿಷ್ಠ ಒಂದೋ ಎರಡೋ ತಾಸು ಜನರ ಮುಂದೆ ಮಾತನಾಡುತ್ತೇನೆ. ಹೀಗೆ ನಲವತ್ತೈದು ವರ್ಷಗಳ ಸತತ ಪ್ರಯತ್ನ ತನ್ನನ್ನು ಒಳ್ಳೆಯ ಭಾಷಣಕಾರನನ್ನಾಗಿ ಮಾಡಿದೆ”. ಇಷ್ಟೆಲ್ಲಾ ಉದಾಹರಣೆ ಯಾಕೆ ನೀಡಿದೆ ಅಂದರೆ ಮೇಲೆ ಉಲ್ಲೇಖಿಸಿದ ವ್ಯಕ್ತಿಗಳು ತಮ್ಮ ಗುರಿಯನ್ನು ಮುಟ್ಟಲು ಪ್ರತೀ ಬಾರಿಯೂ  ಹತ್ತು ಸಾವಿರ ತಾಸುಗಳನ್ನು ಕೊಟ್ಟಿದ್ದಾರೆ. ನಿಶ್ಚಿತವಾಗಿ ಹೇಳಬೇಕು ಅಂದರೆ ನನ್ನ ಅನಿಸಿಕೆಯಲ್ಲಿ ಪ್ರತಿಯೊಂದು ಮೈಲಿಗಲ್ಲು ಮುಟ್ಟಲು ಹತ್ತು ಸಾವಿರ ತಾಸುಗಳು ಬೇಕು. ಅಂದರೆ  ಉತ್ತಮ ಗುಣ ಪಡೆದು ಪದವೀಧರನಾಗಲು ಹತ್ತು ಸಾವಿರ ತಾಸುಗಳು, ಐಐಎಮ್’ನಲ್ಲಿ ಎಂಬಿಎ ಸೀಟು ಗಿಟ್ಟಿಸಿಕೊಳ್ಳಬೇಕು ಅದಕ್ಕೆ ಹತ್ತು ಸಾವಿರ ತಾಸುಗಳು, ಒಳ್ಳೆಯ ಕೆಲಸ ಸಿಕ್ಕಿ ಕಾರ್ಪೊರೆಟ್ ಜಗತ್ತಿನಲ್ಲಿ ಒಂದೊಂದು ಮೆಟ್ಟಿಲು ಹತ್ತಲು ಹತ್ತು ಸಾವಿರ ತಾಸುಗಳು. ಹೀಗೆ ಪ್ರತಿ ರಂಗದಲ್ಲಿ,  ನಟನಾಗಬೇಕೋ,ಪತ್ರಕರ್ತರಾಗಬೇಕೋ, ಸರ್ಜನ್, ರಾಜಕಾರಣಿ ಏನೇ ಆಗಬಹುದು ಆದರೆ ಪ್ರತಿಯೊಂದು ಮೈಲಿಗಲ್ಲು ದಾಟಲೂ ಹತ್ತು ಸಾವಿರ ತಾಸುಗಳ ಸತತ ಪ್ರಯತ್ನ ಬೇಕು.

ಈ ಹತ್ತು ಸಾವಿರ ತಾಸುಗಳ ವಿಷಯ ಬಹಳ ವಿಚಿತ್ರವಾದದ್ದು. ನೋಡಲು ಬಹಳ ಸುಲಭ, ಆದರೆ ಅದರನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದು ತುಂಬಾ ಕಷ್ಟ. ಈ ಹತ್ತು ಸಾವಿರ ತಾಸುಗಳ ಕನ್ಸೆಪ್ಟನ್ನು ಹೇಗೆ ಅರ್ಥ ಮಾಡಿಕೊಂಡು ಬದುಕಿನಲ್ಲಿ ರೂಢಿಗೆ ತರುವುದು ಹೇಗೆ? ಒಬ್ಬ ವಿದ್ಯಾರ್ಥಿ ನನ್ನ ಹತ್ತಿರ ಬಂದು “ನಾನು ಐ.ಐ.ಎಮ್.ನಲ್ಲಿ ಎಂಬಿಎ ಮಾಡಬೇಕು ಸರ್, ಏನು ಮಾಡಬೇಕು?”ಎಂದು ಕೇಳಿದ. ನಾನು ಹೇಳಿದೆ “ಹತ್ತು ಸಾವಿರ ತಾಸುಗಳ ಪರಿಶ್ರಮ ಬೇಕು”. “ಹೌದಾ …ಸರ್?..ಅದರಲ್ಲೇನಿದೆ ಮಹಾ?” ಎಂದ. ಅವನಿಗೆ ವಿವರಿಸಿ ಹೇಳಿದ್ದು ಹೀಗೆ ” ದಿನಕ್ಕೆ ಇಪ್ಪತ್ನಾಲ್ಕು ತಾಸುಗಳು. ಹಾಗಿದ್ದರೆ ಇಪ್ಪತ್ನಾಲ್ಕು ತಾಸುಗಳೂ ಸತತವಾಗಿ ಒಂದು ಗುರಿಯನ್ನಿಟ್ಟುಕೊಂಡು ಕೆಲಸ ಮಾಡಿದರೆ ಹತ್ತು ಸಾವಿರ ತಾಸುಗಳನ್ನು ಮುಗಿಸಲು ಕನಿಷ್ಠ ಒಂದು ವರ್ಷದ ಒಂದು ತಿಂಗಳು ಬೇಕು. ಆದರೆ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುವುದು ಸಾಧ್ಯವೇ?  ಇಲ್ಲ.  ಕಡಿಮೆ ಅಂದರೆ ಆರು ತಾಸಾದರೂ ನಿದ್ದೆ ಬೇಕೆ ಬೇಕು. ನಂತರ ಊಟ, ತಿಂಡಿ, ಸ್ನಾನ ಹೀಗೆ ಎರಡು ಗಂಟೆ ಕಳೆಯಬೇಕು. ಉಳಿದ ಸಮಯವೆಷ್ಟು? 24-6-2= 16ತಾಸುಗಳು. ದಿನಕ್ಕೆ ಹದಿನಾರು ತಾಸುಗಳು ನೀವು ಕೆಲಸದ ಮೇಲೆ ಕೇಂದ್ರೀಕೃತಗೊಂಡರೆ ಯಶಸ್ಸನ್ನು ಪಡೆಯಲು ಒಂದು ವರ್ಷದ ಏಳು ತಿಂಗಳು ಬೇಕು. ಕೆಲವು ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗೆ ಸತತ ಎರಡು ವರ್ಷಗಳ ಕಾಲ ಕೆಲವರು ಓದಿ ಯಶಸ್ವಿಯಾಗುತ್ತಾರೆ ಯಾಕೆ? ಅದಕ್ಕೆ ಇದೇ ಉತ್ತರ.  ಆದರೆ ಎಲ್ಲರೂ ಹದಿನಾರು ತಾಸು ಕೇಂದ್ರೀಕೃತಗೊಂಡು ಕೆಲಸ ಮಾಡಲಾರರು ಎಂದುಕೊಂಡು ಬರೀ ಎಂಟೇ ತಾಸು ಕೊಡಬಲ್ಲೆ ಎಂದು ಕೊಂಡರೆ ಹತ್ತುಸಾವಿರ ತಾಸುಗಳನ್ನು ಮುಗಿಸಲು ಮೂರುವರೆ ವರ್ಷ ಬೇಕು. ಇಲ್ಲ ನನ್ನ ಹತ್ತಿರ ಸಮಯವಿಲ್ಲ ( ಸಿನೇಮಾ ನೋಡಬೇಕು, ಕ್ರಿಕೆಟ್ ನೋಡಬೇಕು, ಅಡ್ಡಾಡಬೇಕು ಇತ್ಯಾದಿ) ಬರೀ ಎರಡೇ ತಾಸು ಕೊಡಬಲ್ಲೆ ಎಂದರೆ ಹತ್ತು ಸಾವಿರ ತಾಸನ್ನು ಮುಗಿಸಲು ಹದಿನಾಲ್ಕು ವರ್ಷ ಬೇಕು!”. ಅವನಿಗೆ ಬಿಡಿಸಿ ಹೇಳಿದ ಹತ್ತು ಸಾವಿರ ತಾಸುಗಳ ಸಾರಾಂಶ ಇಷ್ಟೇ …ಯಾವುದಾದರೂ ಒಂದು ಗುರಿ ಇಟ್ಟುಕೊಳ್ಳಿ,ಅದರ ಮೆಟ್ಟಿಲುಗಳನ್ನು ಅರಿಯಿರಿ, ನಿಮ್ಮ ಶಕ್ತಿಯನ್ನು ಕೇಂದ್ರೀಕರಿಸಿ ದಿನಕ್ಕೆ ಎಂಟು ಕನಿಷ್ಠ ಎಂಟು ತಾಸಾದರೂ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನೆನಪಿರಲಿ, ನಿಮ್ಮ ಗೆಲುವಿಗೆ ಬೇಕಾಗಿರುವುದು ಹಣವಲ್ಲ, ಹಿನ್ನಲೆಯಲ್ಲ, ಅದೃಷ್ಟವಲ್ಲ ಬದಲಾಗಿ ಹತ್ತು ಸಾವಿರ ತಾಸುಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!