“ಅರ್ಚನಳ ಅಮ್ಮ ಡಾಕ್ಟರ್ ಅಗಿದ್ದು ಅವಳ ತಪ್ಪಾ? ಕ್ಲಿನಿಕ್ಕಿಗೆ ನೀವು ಹೋಗದಿದ್ರೆ ನಿಮ್ಮ ಬದ್ಲು ಬೇರೆ ಡಾಕ್ಟ್ರು ಹೋಗಬಹುದು.. ಆದ್ರೆ, ಅರ್ಚನಂಗೆ ಬೇರೆ ಅಮ್ಮ ಸಿಗ್ತಾರ?”-ಹಾಗಂತಾ ಹದಿನೈದರಬೆಳೆದ ಮಗ ಬಿಡು ಬೀಸಾಗಿ ಮುಖದ ಮೇಲೇ ಹೇಳಿ ಬಿಟ್ಟಾಗ ತಾಯಿಯಾದವಳಿಗೆ ಹೇಗನ್ನಿಸಬೇಕು?
ಬೆಂಗಳೂರಿನಲ್ಲಿ ಟೇಬಲ್ ಟೆನಿಸ್ ಕಾಂಪಿಟೇಶನ್ನಿಗೆ ಪುಟ್ಟ ತಂಗಿಯನ್ನು ಕೈ ಹಿಡಿದು ಕರೆದುಕೊಂಡು ಹೋಗಿ, ಆ ಪಂದ್ಯದಲ್ಲಿ ಅವಳು ಸುಸೂತ್ರವಾಗಿ ಗೆದ್ದದ್ದನ್ನೂ ನೋಡಿ ಬಂದ ಹುಡುಗಹೆಮ್ಮೆಯಿಂದ ಬೀಗುವ ಬದಲು ಹೀಗೆ ಮಾತಾಡಬಹುದಾ? “ಅಲ್ಲಿ ಬಂದಿದ್ ಎಲ್ಲಾ ಮಕ್ಕಳನ್ನೂ ಅವರವರ ಅಮ್ಮಂದ್ರು ಕರ್ಕೊಂಡು ಬಂದಿದ್ರು. ಆದ್ರೆ ಅರ್ಚನನ್ನ?!” ನಿಜ, ಮಗನ ಮಾತುನೇರವಾಗಿ ನಾಟಿದ್ದೇ ಆಗ!
ತಾಯಿ ಅನುರಾಧ ಕಾಮತ್ ಕೂಡಾ ಪತಿ ಗಿರೀಶ್ ಕಾಮತ್ರಂತೆಯೇ ಕಣ್ಣಿನ ಸ್ಪೆಷಲಿಸ್ಟು. ಪುಟ್ಟ ಕೂಸು ಅರ್ಚನ ಹುಟ್ಟಿದಾಗ ಇಡೀ ಕುಟುಂಬ ಇಂಗ್ಲೆಂಡಿನಲ್ಲೇ ವಾಸವಿತ್ತು. ಮಗಳಿಗೆ ಒಂದೂವರೆವರ್ಷಗಳಾದಾಗ ಭಾರತಕ್ಕೆ ವಾಪಸಾದ ಕುಟುಂಬಕ್ಕೆ ಮುಂದೆ ಅರ್ಚನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೇಬಲ್ ಟೆನಿಸ್ನಲ್ಲಿ ಹೆಸರು ಮಾಡುತ್ತಾಳೆಂದಾಗಲೀ, ಓದಿನಲ್ಲೂ ಅಪ್ರತಿಮವಾಗಿಮುಂಚೂಣಿಯಲ್ಲಿರುತ್ತಾಳೆಂಬುದಾಗಲೀ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದು ಒಂದೇ.. ನನ್ನ ಮಕ್ಕಳು ಸ್ವಾವಲಂಬಿಗಳಾಗಿ ಬದುಕುತ್ತಾರೆ, ಹೆಮ್ಮೆಯಿಂದ ಹೆತ್ತವರು ತಲೆಯೆತ್ತಿ ನಡೆಯುವ ಹಾಗೆಮಾಡುತ್ತಾರೆ!
ಮನೆಯ ಬೇಸ್ಮೆಂಟಿನಲ್ಲಿ ಹೊತ್ತು ಕಳೆಯಲು ಮಕ್ಕಳಿಗೆ ಟೇಬಲ್ ಟೆನಿಸ್ ಆಡಲು ವ್ಯವಸ್ಥೆ ಮಾಡಿದ ತಾಯಿಗೆ, ಕೋಚ್ ಇದ್ದರೆ ಮಕ್ಕಳು ಇನ್ನೂ ಚೆನ್ನಾಗಿ ಕಲಿಯಬಹುದು ಅನ್ನಿಸಿದ್ದೇ ತಡ..ಗುರುವಿನ ವ್ಯವಸ್ಥೆಯೂ ಆಗಿ ಬಿಟ್ಟಿತ್ತು. ಆಗಿನ್ನೂ ಅರ್ಚನಾಗೆ ಎಂಟೂವರೆ ವರ್ಷ. ‘ನಿಮ್ಮ ಮಗುವಿಗೆ ಫ್ಯೂಚರ್ ಇದೆ, ತುಂಬಾ ರೀಚ್ ಆಗ್ತಾಳೆ’ ಅಂತ ಮೊದಲ ತರಗತಿಯಲ್ಲೇ ಕೋಚ್ ಹೇಳಿದಾಗತಾಯಿಗೆ ಎಲ್ಲಿಲ್ಲದ ಸೋಜಿಗ. ‘ಮನೆಯಲ್ಲಿ ಅಣ್ಣನೊಂದಿಗೆ ಆಡುವಾಗ ಸರಿ, ಹೊರಗೆ ಬೇರೆ ಮಕ್ಕಳೊಂದಿಗೆ ಪಂದ್ಯ ಅಂತಲೇ ಆಡುವಾಗ ಸೋಲು, ಗೆಲುವು ಸಹಜ.. ಆಗೆಲ್ಲಾ ನನ್ನ ಮಗಳುಯಾವ ರೀತಿ ಸೋಲನ್ನು ತೊಗೋತಾಳಪ್ಪಾ’ ಅನ್ನೋ ಸಂದೇಹದಿಂದಲೇ.. ‘ಸ್ಪೋಟ್ರ್ಸ್’ಗೆ ಬಂದ್ಮೇಲೆ ನಾವೇ ಗೆಲ್ಬೇಕು ಅಂದ್ರೆ ಆಗಲ್ಲ, ಎಫರ್ಟು ಮಾತ್ರ ನಂ ಕೈಲಿದೆ, ರಿಸಲ್ಟಲ್ಲ..’ ಎಂದ ಅಮ್ಮನಮಾತು ಪುಟ್ಟ ಹುಡುಗಿಗೆ ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ.. ಆದರೆ ಆ ಮಾತಿನ ಸಾಕ್ಷಾತ್ಕಾರ ಮಾತ್ರ ಮಗಳಿಗೆ ಅಂದಿನಿಂದಲೇ ಆಗುತ್ತ ಹೋಯಿತು. ಕಲಿಕೆ-ತರಬೇತಿ, ಪ್ರಯತ್ನ-ಪಂದ್ಯ,ಸೋಲು-ಗೆಲುವುಗಳು ಅವಳ ನಿರಂತರ ಸಹಚಾರಿಗಳಾಗಿ ಬಿಟ್ಟವು.
ಇವಿಷ್ಟೂ ತಿಳಿದದ್ದು, ಮೊನ್ನೆಯಷ್ಟೇ ಹತ್ತನೇ ತರಗತಿಯ ರಿಸಲ್ಟು ಬಂದಾಗ ‘ಸದಾಶಿವನಗರದ ಪೂರ್ಣಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ಆಟಗಾರ್ತಿ ಅರ್ಚನಾ ಕಾಮತ್.. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕಗಳನ್ನು ಪಡೆದು ಶಾಲೆಗೇ ಮುಂಚೂಣಿಯಲ್ಲಿದ್ದ ಸುದ್ದಿ ತಿಳಿದು ಅವರ ಮನೆಗೆ ಶುಭಾಶಯ ಹೇಳಲು ಕಾಲ್ಮಾಡಿದಾಗ!
ಮೇಷ್ಟ್ರ ಕೆಲಸ ಚೆನ್ನಾಗಿ ಪಾಠ ಮಾಡುವುದು, ಬಸ್ ಡ್ರೈವರಿನ ಕೆಲಸ ಅಪಘಾತವಿಲ್ಲದಂತೆ ಬಸ್ಸನ್ನು ಚಾಲಿಸುವುದು, ಮಕ್ಕಳ ಕೆಲಸ ಶ್ರದ್ಧೆಯಿಂದ ಪಾಠ ಕಲಿತು ಪರೀಕ್ಷೆಯಲ್ಲಿ ನಂಬರುತೆಗೆಯುವುದು ಎಂದೇ ಸರಿ ಸುಮಾರು 90 ಪ್ರತಿಶತ ನಂಬಿದ್ದ ನಾನು, ಅರ್ಚನಾ ಬಗ್ಗೆ ತಿಳಿಯಲು ಉತ್ಸುಕಳಾಗಿದ್ದು ಅವಳ ಕ್ರೀಡೆಯಲ್ಲಿನ ಅಪ್ರತಿಮ ಸಾಧನೆಗೆ! ಅಂತಾರಾಷ್ಟ್ರೀಯ ಟೇಬಲ್ಟೆನಿಸ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ, ಹತ್ತನೆಯ ತರಗತಿಯಲ್ಲಿ ಕೇವಲ 45 ದಿನ ಮಾತ್ರ ಶಾಲೆಗೆ ಹೋಗಿ.. ಪರೀಕ್ಷೆಯಲ್ಲಿ ಈ ಪರಿ ಅಂಕ ತೆಗೆಯುವುದಿದೆಯಲ್ಲಾ.. ಅದೊಂದು ವಿಸ್ಮಯವೇ ಸರಿ.ಹಾಗೆಂದೇ ಅವರ ತಾಯಿಯನ್ನು ಮಾತನಾಡಿಸಿದ್ದೆ. ಮಗಳು ಪರದೇಶವೆಂದು ಓಡಾಡುವಾಗೆಲ್ಲಾ ಅವಳ ಸಹಕಾರಕ್ಕೆ ನಿಲ್ಲುವುದರಿಂದ ಹಿಡಿದು.. ಹತ್ತನೇ ತರಗತಿಯ ಪಠ್ಯಪುಸ್ತಕಗಳನ್ನುಓದುವಾಗಲೂ.. ಥೇಟ್ ಮಗಳ ಸಹಪಾಠಿಯಂತೆಯೇ ಅವಳ ಜೊತೆಗೂ ಕೂತು, ಅವಳೊಂದಿಗೆ ತಾವೂ ಓದಿ.. ಮಗಳ ಇದಿಷ್ಟೂ ಸಾಧನೆಗೆ ಬೆನ್ನೆಲುಬಾದ ತಾಯಿಗೆ ಮಗಳ ಬಗ್ಗೆ ಮಾತನಾಡಿದಅಷ್ಟೂ ಮಾತುಗಳಲ್ಲಿ ಅಪರಿಮಿತ ತೃಪ್ತಿಯಿತ್ತು, ಮಗಳ ಭವಿಷ್ಯದ ಬಗ್ಗೆ ಭರವಸೆಯಿತ್ತು.
ಸಹಜವಾಗಿ ಶಾಲೆಗೆ ಹೋಗುವ ಮಕ್ಕಳು ತಮ್ಮ ಹುಟ್ಟಿದ ದಿನದಂದು ಸಿಹಿ ಹಂಚುವುದು ವಾಡಿಕೆ, ಆದರೆ ಅರ್ಚನಾಳ ವರಸೆಯೇ ಬೇರೆ. ಅವಳ ಪಾಲಿಗೆ ಜನವರಿ 12 ಹಬ್ಬದ ದಿನ. ಹೌದು, ಅದುಹಬ್ಬವೇ.. ಸ್ವಾಮಿ ವಿವೇಕಾನಂದರ ಹುಟ್ಟಿದ ದಿನ ಅರ್ಚನಾಳ ಪಾಲಿಗೆ ಹಬ್ಬ. ಅವಳು ಸಿಹಿ ಹಂಚುವುದೂ ಅಂದೇ! ಇದನ್ನೆಲ್ಲಾ ಇನ್ಯಾರೋ ಹೇಳಿ ಕಲಿಸಿದ್ದಲ್ಲ.. ಸ್ವತಃ ಅರ್ಚನಾಳಿಗೆ,ವಿವೇಕಾನಂದರ ಅದ್ಭುತ ಸಂದೇಶಗಳ ಪರಿಚಯವಾದಾಗ ಶುರು ಮಾಡಿಕೊಂಡ ವಾಡಿಕೆ! ಚಿಕ್ಕವಳಿದ್ದಾಗ ಸಿಹಿ ಹಂಚುತ್ತಿದ್ದ ಕೂಸು.. ಬೆಳೆದಂತೆ ಸ್ವಾಮೀಜಿಯವರ ಸಂದೇಶಗಳ ಪುಟ್ಟ ಪುಟ್ಟಪುಸ್ತಕಗಳನ್ನು ಸ್ನೇಹಿತರಿಗೆ, ಶಿಕ್ಷಕರಿಗೆ ಕೊಡಲಾರಂಭಿಸಿದಾಗ ತಾಯಿಗೆ ಎಲ್ಲಿಲ್ಲದ ಖುಷಿ!
ಇಷ್ಟೆಲ್ಲಾ ಕೇಳಿದ ಮೇಲೆ ಅರ್ಚನಾಳನ್ನೊಮ್ಮೆ ಮಾತನಾಡಿಸಬೇಕೆನಿಸಿತು. ಕೇಳಿದಾಗ ಅವಳು ಜರ್ಮನಿಯಲ್ಲಿರುವುದು ತಿಳಿಯಿತು. ಟೆನಿಸ್ ತರಬೇತಿಗಾಗಿ ಅಲ್ಲಿರುವ ಅರ್ಚನಾ ವಾಪಸ್ಸುಬರುವುದು ಜುಲೈನಲ್ಲಂತೆ! ಸರಿ, ನಂಬರು ಪಡೆದು ಕಂಟ್ಯಾಕ್ಟ್ ಮಾಡಿದಾಗ ಅತ್ತಲಿಂದ ಹಕ್ಕಿ ಉಲಿದ ಸ್ವರ. ಅವಳ ಆಸೆ, ಕನಸು, ಸಾಧನೆ, ಕ್ರೀಡೆಯ ಪರಿಚಯ.. ಎಸ್ಸೆಸ್ಸೆಲ್ಸಿಯ ಬಹು ದೊಡ್ಡನಂಬರಿನ ಮೊತ್ತ ಎಲ್ಲವನ್ನೂ ಈಗಾಗಲೇ ತಿಳಿದಿದ್ದ ನಾನು.. ‘ಸೋತಾಗ ಏನನ್ನಿಸತ್ತೆ ನಿನಗೆ?’ ಅಂತ ನೇರವಾಗೇ ಕೇಳಿದ್ದೆ.. ಕ್ಷಣ ಮೌನವಾದ ಹುಡುಗಿ ತಬ್ಬಿಬ್ಬಾಯಿತೇನೋ ಅಂದುಕೊಳ್ಳುವಹೊತ್ತಿಗೆ ‘ರೆಸ್ಪೆಕ್ಟ್ ದ ಅಪೋನೆಂಟ್.. ಇದನ್ನ ಮೊದಲಿಂದ್ಲೂ ಪಾಲಿಸ್ತಿದೀನಿ. ಯಾಕೇಂದ್ರೆ ಅವರೂ ನನ್ನ ಹಾಗೇ ಪರಿಶ್ರಮ ಪಟ್ಟಿರ್ತಾರಲ್ವಾ? ಆದ್ರೆ, ಎರಡನೇ ಮೂರನೇ ಸ್ಥಾನ ಬಂದಾಗ ನನ್ನದೇಶದ ಬಾವುಟ ಮೊದಲ ಶ್ರೇಯಾಂಕದ ಬಾವುಟಕ್ಕಿಂತ ಸ್ವಲ್ಪ ಕೆಳಗೆ ಬರತ್ತಲ್ಲಾ.. ಆಗೆಲ್ಲಾ ತುಂಬಾ ನೋವಾಗತ್ತೆ’ ಅಂದು ಬಿಟ್ಟಳು! ದೇಶಪ್ರೇಮವನ್ನು ಅವಳ ಬುದ್ಧಿ ಗ್ರಹಿಸಿತ್ತು, ಮನಸ್ಸುಆವರಿಸಿತ್ತು!
ನೆರೆಯ ಪಾಕಿಸ್ತಾನ, ಚೈನಾ ಮೊದಲು ಮಾಡಿ.. ಜರ್ಮನಿ, ವೆಸ್ಟ್ ಇಂಡೀಸ್, ಇಟಲಿ, ಬೆಲ್ಜಿಯಂ, ಕ್ರೊಯೇಷಿಯಾ, ಥೈಲ್ಯಾಂಡ್, ಮಲೇಶಿಯಾ, ಸ್ಪೇನ್ ದೇಶಗಳಲ್ಲೆಲ್ಲಾ ಟೆನಿಸ್ ಪಂದ್ಯವಾಡಿ..ಲೆಕ್ಕವಿಲ್ಲದಷ್ಟು ಪದಕಗಳನ್ನು ಪಡೆದಿರುವ ಪ್ರತಿಭಾವಂತ ಮಗುವಿಗೆ ರಾಷ್ಟ್ರೀಯ ಮಟ್ಟದಲ್ಲಿ ‘ನ್ಯಾಷನಲ್ ಚೈಲ್ಡ್ ಅವಾರ್ಡೂ’, ನಮ್ಮ ರಾಜ್ಯದಿಂದ ‘ಏಕಲವ್ಯ’ ಪ್ರಶಸ್ತಿಯೂ ಬಂದಿದೆ ಎಂದು ಅವಳುಮೆಲುದನಿಯಲ್ಲೇ ಹೇಳಿದಾಗ, ಎಲ್ಲರೂ ಕೇಳುವ ಹಾಗೆ.. ‘ಮುಂದೆ ಏನಾಗ್ಬೇಕು ಅಂತಿದ್ಯಾ?’ ಎಂದಾಗ,“ನಾನು ಸಿವಿಲ್ ಸರ್ವೀಸ್ ಎಕ್ಸಾಮ್ ಬರೀಬೇಕು, ಇಂಡಿಯನ್ ಹಿಸ್ಟರಿ ತಿಳ್ಕೋಬೇಕು,ಪೊಲಿಟಿಕಲ್ ಸೈನ್ಸ್ ಅಂದ್ರೆ ತುಂಬಾ ಇಷ್ಟ.. ಹಾಗಾಗಿ ಆಟ್ರ್ಸ್ ತೊಗೊಳ್ತಿದೀನಿ! ನನ್ನಿಂದ ದೇಶಕ್ಕೆ ಸೇವೆಯಾಗ್ಬೇಕು” ಅಂದಳು.. ಅತ್ಯಂತ ಸಹಜವಾಗಿ! ಓಹ್.. ಅವಳ ಸ್ಪಷ್ಟತೆಗೆ ಪರಿಪೂರ್ಣಅಂಕಗಳನ್ನು ಸಲ್ಲಿಸಿಬಿಟ್ಟೆ.
ಶಾಲೆ ಪರೀಕ್ಷೇಲಿ ಪಾಸಾಗೋದಲ್ಲ.. ಜೀವನ ಪರೀಕ್ಷೇಲಿ ಪಾಸಾಗಬೇಕು ಅಂತ ಹತ್ತಾರು ಮಂದಿ ನೂರಾರು ಸಂದರ್ಭಗಳಲ್ಲಿ ಹೇಳಿರೋದು ಕೇಳಿದೀನಿ. ಹಾಗೆ ಪಾಸಾಗುವ ಬಗ್ಗೆ ಒಬ್ಬೊಬ್ಬರದುಒಂದೊಂದು ಡೆಫಿನಿಷನ್ನಿದೆ. ಹಿರಿಯರು ‘ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಅಂದು ಬಿಟ್ರೆ.. ಚಿಕ್ಕ-ಪುಟ್ಟೋರು.. ‘ಬಯಸಿದ್ದೆಲ್ಲಾ ಸಿಗದು ಬಾಳಲಿ..’ ಅಂತ ಥೇಟು ಸಿನೆಮಾಶೈಲಿಯಲ್ಲಿ ಕಾಣದ ವಿಧಿಯ ಬಗ್ಗೆ.. ಪೂರ್ಣವಾಗದ ಕನಸನ್ನು ಕೊಡವಿ ಮೇಲೇಳುವ ಬಗ್ಗೆ ಹೇಳುತ್ತಾರೆ. ಆದರೆ ಅರ್ಚನಾಳಿಗೆ ಸ್ವಾಮೀಜಿಯ ಸಂದೇಶ, ಗುರಿಯ ಕಡೆಗಿನ ನಡಿಗೆ, ಸ್ವದೇಶದಬಗೆಗಿನ ಅಖಂಡ ಪ್ರೀತಿ.. ಇವೇ ಬದುಕಿನ ಡೆಫಿನಿಷನ್ನು!
ಅರ್ಚನಾಳನ್ನು ನಾನು ನೇರವಾಗಿ ನೋಡಿಲ್ಲ.. ಯೂ ಟ್ಯೂಬಿನಲ್ಲಿ ಅವಳ ವೀಡಿಯೋವನ್ನು ನೋಡಿಯೂ.. ಅವಳೊಂದಿಗೆ ಮಾತನಾಡಿ ಫೋನ್ ಇಟ್ಟಾಗ, ಅವಳ ತಾಯಿ ಸ್ವಲ್ಪ ಹೊತ್ತಿನ ಮುಂಚೆಅವಳ ಫ್ಯಾನ್ಸಿ ಡ್ರೆಸ್ಸಿನ ಕುರಿತು ಹೇಳಿದ್ದ ರೂಪವೇ ಕಣ್ಮುಂದೆ ಬಂದಿತ್ತು. ಅದೇ ಪುಟ್ಟ ಹುಡುಗಿ, ಅಪ್ಪಟ ಕೇಸರಿಯ ವಸ್ತ್ರ, ಸ್ವಾಮೀಜಿಯ ದಿವಿನಾದ ಪೇಟ.. ಕೈಯಲ್ಲೊಂದು ಭಗವದ್ಗೀತೆ!
“ಬೀ ಸ್ಟ್ರಾಂಗ್, ಬೀ ಬ್ರೇವ್, ಸ್ಟ್ರೆಂಥ್ ಈಸ್ ಲೈಫ್.. ವೀಕ್ನೆಸ್ ಈಸ್ ಡೆತ್!” ಮೊದಲ ತರಗತಿಯಲ್ಲಿ ಅಮ್ಮ ಹೇಳಿಕೊಟ್ಟ ಸ್ವಾಮೀಜಿಯ ಜನಪ್ರಿಯ ಕೋಟ್ ಒಂದನ್ನು, ಸ್ವಾಮೀಜಿಯಬಾಲಾವತಾರದಲ್ಲಿ ಆ ಪುಟಾಣಿ ಅದೆಷ್ಟು ಮಧುರವಾಗಿ ಹೇಳಿರಬಹುದೆಂದು ಅಂದಾಜು ಮಾಡುತ್ತಲೇ.. ಆ ಸಂದೇಶವನ್ನು ಸಂಭ್ರಮದಿಂದ ಪಾಲಿಸಿದ ಅವಳ ಬಗ್ಗೆ ಹೆಮ್ಮೆಯೆನಿಸಿತ್ತು..
ನಿಜ, ಅರ್ಚನ ಹಲವರಿಗೆ ಪ್ರೇರಣೆಯಾಗಬಲ್ಲಳು.. ಎಳೆಯರಿಗೆ ನಿಶ್ಚಿತ ಗುರಿ ಹೊಂದುವುದರಲ್ಲೂ, ಬೆಳೆದವರಿಗೆ ದೇಶಕ್ಕಾಗಿ ಸವೆಯಬೇಕೆಂಬುದರಲ್ಲೂ!!
ಆಲ್ ದಿ ಬೆಸ್ಟ್ ಅರ್ಚನಾ..