“ಮಧುವನ್ ಮೇ ಜೋ ಕನ್ಹಯ್ಯಾ ಕಿಸೀ ಕೋ ಪೀಸೆ ಮಿಲೇ
ಕಭಿ ಮುಸುಕಾಯೇ ಕಭೀ ಛೇಡೇ ಕಭೀ ಬಾತ್ ಕರೇ
ರಾಧಾ ಕೈಸೇ ನ ಜಲೇ? ರಾಧಾ ಕೈಸೇ ನ ಜಲೇ?”
ಕಿವಿಗೆ ಇಯರ್ ಫೋನ್ಸ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಯಮನಾ ತೀರದಲ್ಲಿ ಕುಳಿತು ಹುಣ್ಣಿಮೆ ಚಂದ್ರನನ್ನು ನೋಡುತ್ತಾ ನಿಟ್ಟುಸಿರಿಟ್ಟಳು ರಾಧೆ. ಮನೆಯಲ್ಲಿ ಈವನಿಂಗ್ ನ್ಯೂಸ್ ಅಪ್ಡೇಟ್ಸ್ ನೋಡುತ್ತಾ ಕುಳಿತಿದ್ದವಳಿಗೆ ಬೃಂದಾವನದಲ್ಲೆಲ್ಲೋ ಕೊಳಲಿನ ದನಿ ಕೇಳಿದಂತಾಗಿ ಯಮುನೆಯ ಸಮೀಪ ಬಂದವಳಿಗೆ ಯಾರೂ ಕಾಣದಾದಾಗ ಬೇಸರವಾಗಿತ್ತು.
ರಾಧಾ ಚಿಕ್ಕವಳಿದ್ದಾಗ ಗೋಕುಲದ ಡೈರಿ ಪ್ರಾಡಕ್ಟ್ಸ್ ಅಸೋಸಿಯೇಷನ್ನಿನ ಇನ್-ಚಾರ್ಜ್ ನಂದ-ಯಶೋಧೆಯರಿಗೆ ಕೃಷ್ಣನೆಂಬ ಮಗುವಾದಾಗಲಿಂದಲೂ ಕೃಷ್ಣ-ರಾಧಾ ಕ್ಲೋಸ್ ಫ್ರೆಂಡ್ಸ್. ಫ್ರೆಂಡ್’ಶಿಪ್ ಪ್ರೀತಿಗೆ ತಿರುಗಿ ಡೇಟಿಂಗ್, ಕೊನೆಗೆ ಎಷ್ಟೋ ವರ್ಷಗಳ ಲಿವಿಂಗ್ ಟುಗೆದರ್ ರಿಲೇಷನ್ಷಿಪ್. ಕೃಷ್ಣ ಯಾವಾಗಲೂ ಜೊತೆಯಲ್ಲಿಯೇ ಇರುವಾಗ ಮದುವೆ-ಬಂಧ-ಸಂಬಂಧಗಳೇಕೆ ಎಂದು ಅವಳೂ ತಲೆಕೆಡಿಸಿಕೊಂಡಿರಲಿಲ್ಲ.
“ಹೇ ರಾಧಾ? ವ್ಹಾಟ್ ಆರ್ ಯೂ ಡುಯಿಂಗ್ ಹಿಯರ್?” ಗೆಳತಿಯ ಮಾತು ಕೇಳಿ ಕಣ್ಣಂಚಿನ ನೀರು ಅವಳಿಗೆ ಕಾಣದಂತೆ ಒರೆಸಿಕೊಂಡು “ಸಿಂಪ್ಲೀ ಸಿಟ್ಟಿಂಗ್ ಡಿಯರ್…” ಎಂದಳು ಎಲ್ಲೋ ನೋಡುತ್ತಾ. ‘ಕೃಷ್ಣನ ನೆನಪಾಯ್ತೇನೇ? ಆರ್ ಯೂ ಮಿಸ್ಸಿಂಗ್ ಹಿಮ್?!’ ಎಂದು ತಲೆ ನೇವರಿಸುತ್ತಾ ಕೇಳಿದ ಗೆಳತಿಯ ಎದುರು ಭಾವನೆಗಳ ಬಚ್ಚಿಡಲಾರದೆ “ಕೊಬ್ಬು ಕಣೇ ಅವನಿಗೆ. ಅವನು ಮಥುರಾಗೆ ಹೋದ ಮೇಲೆ ಎಷ್ಟು ಸಾರಿ ಫೋನ್ ಮಾಡಿಲ್ಲ ನಾ ಅವನಿಗೆ? ರಿಜೆಕ್ಟ್ ಲಿಸ್ಟ್’ಗೆ ಹಾಕಿರಬೇಕು-ನನ್ನ ನಂಬರ್ ಜೊತೆ ನನ್ನನ್ನೂ! ವಾಟ್ಸ್’ಆಪ್ ಅಲ್ಲಿ ಕಳಿಸಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ಆನ್ಲೈನ್’ಲಿದ್ದರೂ ರಿಪ್ಲೈ ಮಾಡಲ್ಲ. ಸ್ಟೇಟಸ್ ನೋಡಿದ್ದೀಯಾ ಅವನದ್ದು? ‘ಬ್ಯುಸಿ ಅಪ್ ವರ್ಕ್’ ಅಂತೆ. ಒಂದ್ಹತ್ತು ನಿಮಿಷ ಚಾಟ್ ಮಾಡಿದ್ರೆ ಅವನ ಗಂಟೇನು ಹೋಗುತ್ತಂತೆ?!”
” ರಾಧಾ, ಒಮ್ಮೆ ಹೋದ ಅವನು ಹಿಂದಿರುಗಿ ಬರುವುದಿಲ್ಲ. ನೀನವನ ಬಗ್ಗೆ ಯೋಚಿಸಿ ಯೂಸ್ ಇಲ್ಲ ಕಣೇ. ಹೀ ಈಸ್ ಅ ಗ್ರೇಟ್ ಪರ್ಸನ್. ಯಾರೂ ಯೋಚಿಸದ ಮಟ್ಟಕ್ಕೆ ಬೆಳೀತಿದ್ದಾನೆ ಅವ್ನು. ಯೂ ನೋ? ಮಥುರಾಗೆ ಕಾಂಪಿಟಿಷನ್ನಿಗೆ ಹೋದ ಅವನು ಕಂಸನನ್ನು ಕೊಂದಿದ್ದಾನಂತೆ. ಕಂಸ ಅವನ ಸೋದರಮಾವನಂತೆ. ನಿನ್ನೆ ತಾನೇ YouTubeನಲ್ಲಿ ಅವ ಕಂಸನನ್ನು ಕೊಂದ ವೀಡಿಯೋ ನೋಡಿದೆ ಕಣೇ. Ultimate fighting! “
ಗೆಳತಿಯ ಮಾತನ್ನು ಕೇಳಿಸಿಕೊಳ್ಳುತ್ತಲೇ ಫೇಸ್ಬುಕ್’ಗೆ ಲಾಗಿನ್ ಆಗಿದ್ದಳು ರಾಧೆ. ನ್ಯೂಸ್ ಫೀಡ್ನಲ್ಲಿ ಕೃಷ್ಣ-ರುಕ್ಮಿಣಿ-ಸತ್ಯಭಾಮಾರ ಫೋಟೋ, “ಮಿ ವಿದ್ ಮೈ ಸ್ವೀಟ್’ಹಾರ್ಟ್ಸ್” ಟ್ಯಾಗ್ಲೈನ್ ನೋಡಿ ‘ಈ ರಾಧೆಗಿಂತಾ ಸುಂದರಿಯರೇನೇ ಆ ಬಿನ್ನಾಣಗಿತ್ತಿಯರು?’ ಎಂದು ಕೇಳುತ್ತಾ ಮೂತಿ ತಿರುವಿದಳು. ನಿರುತ್ತರಳಾದಳು ಅವಳ ಸ್ನೇಹಿತೆ.
‘ನನ್ನ ಕೃಷ್ಣ ಎಷ್ಟೇ ದೊಡ್ಡ ವ್ಯಕ್ತಿ ಆಗಿರಲಿ, ಆಗಲಿ, ನನಗವನು ಯಾವಾಗಲೂ ಪುಟ್ಟ ಮಗು ಕಣೇ. ಅವನನ್ನು ನನ್ನ ಮಗುವಿನಂತೆ ಪ್ರೀತಿಸಿದೆ; ಗಂಡನಂತೆ ಮುದ್ದಿಸಿದೆ. ಆ ಹದಿನಾರು ಸಾವಿರದೆಂಟು ಹೆಂಡತಿಯರ ಜೊತೆ ನನ್ನನ್ನೂ ಪತ್ನಿಯಾಗಿಸಿಕೊಳ್ಳಬಹುದಿತ್ತಲ್ಲ?! ನಾನೊಬ್ಬಳು ಹೆಚ್ಚೇ ಅವನಿಗೆ? ಲಿವಿಂಗ್ ಟುಗೆದರ್ ರಿಲೇಷನ್’ಶಿಪ್ ಸೇಫ್ ಅಲ್ಲ. ಜೀವನದುದ್ದಕ್ಕೂ ಸಂಗಾತಿ ಜೊತೆಗಿರಬೇಕು ಎಂದರೆ ಮದುವೆ ಎನ್ನುವ ಲೈಸೆನ್ಸ್ ಬೇಕೇ ಬೇಕು ಎಂದು ಈಗ ಅರ್ಥವಾಗಿದೆ ನನಗೆ. ಸರಿ, ನಡಿ, ಮನೆಗೆ ಹೋಗೋಣ. ಆಲ್ರೆಡಿ ತುಂಬಾ ಲೇಟಾಗಿದೆ’ ಎನ್ನುತ್ತಾ ಮನೆ ಕಡೆ ಮುಖ ಹಾಕಿದಳು ರಾಧೆ. ಮನದಲ್ಲಿ ಗೆಳತಿ ಹೇಳಿದ ಮಾತು ಪ್ರತಿಧ್ವನಿಸುತ್ತಿದ್ದ ಸಮಯದಲ್ಲೇ ವಾಟ್ಸ್’ಆಪ್’ಗೆ ಬಂದು ಕುಳಿತಿದ್ದ ‘ನೈಸ್ ಡಿಪಿ ಡಿಯರ್’ ಎಂಬ ಸೋದರಮಾವನ ಮೆಸೇಜು ಕಂಡು ಏಕೋ ನಾಚಿದಳು!!!