ಅಂಕಣ

ಛೋಟಾ ಭೀಮ್.. ಛೋಟಾ ಭೀಮ್..

ಛೋಟಾ ಭೀಮ್.. ಛೋಟಾ ಭೀಮ್.. ಛೋಟಾ ಭೀಮ್……. ಅರೆರೆ ನನ್ನ 5 ವರ್ಷ ಮಗನ೦ತೆ ಎಲ್ಲ ಮುದ್ದು ಪುಟಾಣಿಗಳ ಕಿವಿ ನಿಮಿರಿ ಕಣ್ಣು ದೂರದರ್ಶನದ ಪೋಗೋ ವಾಹಿನಿಯತ್ತ ಸಾಗಿದೆಯೇ.. ಹೌದು, ಭಾರತದ ಶೇ. 90 ದೂರದರ್ಶನ ವೀಕ್ಷಿಸುವ ಪುಟಾಣಿಗಳ ಅಚ್ಚುಮೆಚ್ಚಿನ ಹೀರೋ, ಕಾಲ್ಪನಿಕ ಕಾರ್ಟೂನಿನ ಹುಡುಗನೇ ಈ ಸಣ್ಣ ಭೀಮ!! ಶಕ್ತಿ ಶಾಲಿಯಾಗಿ ಎಲ್ಲರನ್ನೂ ಮಣಿಸುವ ಪುಟಾಣಿ ನಾಯಕನಾದ ಇವನ ಹುಟ್ಟಿಗೆ ಹಿಂದಿನ ಮಹಾಭಾರತ ಪುರಾಣದ ಭೀಮನೇ ಪ್ರೇರಣೆಯಿರಬಹುದೇನೊ?

ಚರಿತ್ರೆ

ರಾಜೀವ್ ಚಿಲಕ ಎಂಬವರು 2001ನೇ ಜನವರಿಯಲ್ಲಿ ಹೈದರಾಬಾದ್ ನಲ್ಲಿ ಗ್ರೀನ್ ಗೋಲ್ಡ್ ಅನಿಮೇಶನ್ ಎಂಬ ಮಕ್ಕಳ ಚಿತ್ರ ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಮೊದಲಿಗೆ (2003-2004) “ಬೋಂಗೋ” ಮತ್ತು “ವಿಕ್ರಮ್ ಬೇತಾಳ್ “(80ನಿಮಿಷದ 2D ಅನಿಮೇಶನ್ ಚಿತ್ರ) ನಿರ್ಮಿಸಿ ಮಕ್ಕಳ ನೆಚ್ಚಿನ ವಾಹಿನಿಯಾದ ಕಾರ್ಟೂನ್ ನೆಟ್ ವರ್ಕ್ ಗೆ ನೀಡಿತ್ತು. ನಂತರ ‘ಕೃಷ್ಣ’ ಎಂಬ ಹೆಸರಿನ 4 ಟೆಲಿ ಚಿತ್ರಗಳನ್ನು ತಯಾರಿಸಿ ಅದೇ ವಾಹಿನಿಗೆ ನೀಡಿತ್ತು. ಅದಾದ ಮೇಲೆ ತಯಾರಿಸಿದ “ಛೋಟಾ ಭೀಮ್” ಕಂತುಗಳನ್ನು ಸಹೋದರ ವಾಹಿನಿಯಾದ ಪೋಗೋದೊಂದಿಗೆ 2008ರಲ್ಲಿ ಒಪ್ಪಂದ ಮಾಡಿಕೊಂಡಿತು. ಪ್ರಥಮ ಕಂತು ಅದೆ ವರ್ಷ ಎಪ್ರಿಲ್ 6ರಂದು ತೆರೆ ಕಂಡಿತು.

ಈಗಾಗಲೆ 150ಕ್ಕೂ ಅಧಿಕ ಕಂತುಗಳನ್ನು ತಯಾರಿಸಿ ಕೊಟ್ಟಿರುವ ಈ ಸಂಸ್ಧೆಯು ಭಾರತದಲ್ಲೆ ಜನಪ್ರಿಯತೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಗೊಂಡಿದೆ. ಛೋಟಾ ಭೀಮ್ ಗೋಲ್ಡನ್ ಕರ್ಸರ್ ಅವಾರ್ಡ್ -2009ನ ಬೆಸ್ಟ್ ಅನಿಮೇಟೆಡ್ ಟಿವಿ ಸಿರೀಸ್ ಬಹುಮಾನ ಪಡೆದ ಟಿವಿ ಶೋವಾಗಿದೆ. 10ಕ್ಕೂ ಅಧಿಕ ಛೋಟಾ ಭೀಮ್ ಚಲನಚಿತ್ರಗಳು ನಿರ್ಮಾಣಗೊಂಡಿದ್ದು ಚಿತ್ರಮಂದಿರಗಳಲ್ಲೂ ಬಿಡುಗಡೆಗೊಂಡು ಒರ್ಮಕ್ಸ್ ಮಾಧ್ಯಮದ ಪ್ರಶಂಸೆಗೆ ಪಾತ್ರವಾದ ಹೆಗ್ಗಳಿಕೆಯೂ ಈಗ ಇದಕ್ಕಿದೆ. 2012ರ ಹೊತ್ತಿಗೆ ಛೋಟಾ ಭೀಮ್ ಎಷ್ಟು ಪ್ರಸಿದ್ಧನಾದನೆಂದರೆ ಇದರ ಬ್ರಾಂಡಿನ 500ವಿವಿಧ ನಿತ್ಯೋಪಯೋಗೀ ಮಕ್ಕಳ ವಸ್ತುಗಳು(ಡಿವಿಡಿ, ಟೀ ಶರ್ಟ್, ಹೊದಿಕೆ, ಆಟಿಕೆ, ಫ್ಯಾನ್ ಇತ್ಯಾದಿ ) 20 ಗ್ರೀನ್ ಗೋಲ್ಡ್ ತಯಾರಿಕಾ ಘಟಕಗಳಿಂದ ನೀರಿನಂತೆ ಮಾರಾಟವಾಗಿ ಹೋಯಿತು. ಈಗಂತೂ ಆನ್ ಲೈನ್ ಗೇಮ್ಸ್, ಕಾಮಿಕ್ಸ್, ಸಂಭ್ರಮಾಚರಣೆಗಳು ತುಂಬಾ ಸಕ್ರಿಯವಾಗಿವೆ. ಇಂಗ್ಲೀಷ್, ಹಿಂದಿ ಹಾಗೂತಮಿಳು ಭಾಷೆಗಳಲ್ಲಿ ಪ್ರಸಾರಗೊಳ್ಳುತ್ತಿರುವ ಇದನ್ನು ಬೇರೆ ಭಾಷೆಗೂ ವಿಸ್ತರಿಸುವ ಯೋಜನೆ ಇದೆಯಂತೆ. ದಿ ಹಿಂದೂ ಪತ್ರಿಕೆ ಪ್ರಕಾರ ಗ್ರೀನ್ ಗೋಲ್ಡ್ ಅನಿಮೇಶನ್ ಸಂಸ್ಥೆ ಮಕ್ಕಳ ಚಿತ್ರ ತಯಾರಿಕೆಯಲ್ಲಿ ಭಾರತದಲ್ಲೆ ನಂ.1ಸ್ಥಾನದಲ್ಲಿದೆ.ರಾಜೀವ್ ಚಿಲಕ ನಿರ್ದೇಶಿಸಿ ನಿರ್ಮಿಸಿರುವ ಈ ಚಿತ್ರಕ್ಕೆ ಸಮೀರ್ ಜೈನ್ ಸಹನಿರ್ದೇಶಕರಾಗಿದ್ದಾರೆ.

ಕಥಾಪಾತ್ರಗಳು

ಛೋಟಾ ಭೀಮ್

ಭೀಮ ಎಂಬ ಹೆಸರಿನ ವಿಶೇಷ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವ 9 ವರ್ಷದ ಬಾಲಕನು ಮುಖ್ಯ ಪಾತ್ರಧಾರಿಯಾಗಿದ್ದು ಸಕಲ ಸದ್ಗುಣ ಸಂಪನ್ನನಾಗಿ ಎಲ್ಲರನ್ನು ಆಪತ್ತಿನಿಂದ ರಕ್ಷಿಸುತ್ತಾನೆ. ಧೋಲಕಪುರವೆಂಬ ಭಾರತದ ಮೂಲೆಯೊಂದರ ಹಳ್ಳಿಯಲ್ಲಿ ತನ್ನ ಒಡನಾಡಿಗಳೊಂದಿಗೆ ಬದುಕುತ್ತಿರುವ ಇವನ ಧೈರ್ಯ,ಸಾಹಸ, ನ್ಯಾಯ ಹಾಗೂ ಸ್ನೇಹಪರತೆ ಮಕ್ಕಳನ್ನು ಅವನೆಡೆಗೆ ಸಳೆಯುವಲ್ಲಿ ಯಶಸ್ವಿಯಾಗಿವೆ. ಎಲ್ಲರ ನೆರವಿಗೆ ಧಾವಿಸುವ ಭೀಮನಿಗೆ ಅನ್ಯಾಯದ ವಿರುದ್ಧ ಹೋರಾಡಲು ಶಕ್ತಿ ಸಿಗುವುದು ವಿಶೇಷವಾಗಿ ಧೋಲಕಪುರ ನಿವಾಸಿಗಳು ತಯಾರಿಸಿದ ಲಡ್ಡುಗಳಿಂದಲಂತೆ!!! ತಿಂಡಿಪೋತನೂ ಆಗಿರುವ ಇವನಿಗೆ ಲಾಡೆಂದರೆ ಪಂಚಪ್ರಾಣ. ಇದರ ಭಕ್ಷಣೆಯಿಂದ ತಕ್ಷಣವೆ ಭಾರೀ ಶಕ್ತಿ ಗಳಿಸುವ ಇವನು ಕ್ಷಣಾರ್ಧದಲ್ಲಿ ಕೆಡುಕಿಗಳನ್ನು ಸದೆಬಡಿದು ಎಲ್ಲರ ಪ್ರಶಂಸೆಗೆ ಮನ್ನಣೆಗೆ ಪಾತ್ರನಾಗುತ್ತಾನೆ. ಭೀಮನ 3 ಆತ್ಮೀಯ ಮಿತ್ರರೆಂದರೆ ಚುಟ್ಕಿ,ಜಗ್ಗು ಮತ್ತು ರಾಜು.

ಪ್ಯಾರಿ ಚುಟ್ಕಿ

ಇವಳು 7 ವರ್ಷದ ಲಂಗ ದಾವಣಿಯ ಪುಟ್ಟ ಬಾಲಕಿಯಾಗಿದ್ದು, ಭೀಮನ ಅತಿ ಹತ್ತಿರದ ಪರಮಾಪ್ತ ಗೆಳತಿ. ತುಂಬಾ ಸಲ ಭೀಮನ ರಕ್ಷಣಾಕಾರ್ಯಗಳಿಗೆ ಸುಲಭ ಪರಿಹಾರ ನೀಡಿದ ಹೆಗ್ಗಳಿಕೆಯೂ ಇವಳಿಗಿದೆ. ಮೃದುಮನಸ್ಸಿನ ಈ ಮುಗ್ಧ ಬಾಲಕಿ ಒಂದು ದೃಷ್ಟಿಯಲ್ಲಿ ಚಿತ್ರದ ನಾಯಕಿಯೂ ಹೌದು.

ರಾಜು

ಇವನು 4ವರ್ಷದ ತುಂಟ ಪೋರನಾಗಿದ್ದು ತುಂಬ ಶಕ್ತಿಶಾಲಿಯಾಗಬೇಕೆನ್ನುವ ಗುರಿ ಹೊಂದಿರುತ್ತಾನೆ. ಭೀಮನನ್ನೇ ತನ್ನ ಮಾರ್ಗದರ್ಶಕನಾಗಿ ಇಟ್ಟಿಕೊಂಡು ಹಲವಾರು ಸಲ ಅವನಂತೆ ಮಾಡಲು ಹೋಗಿ ಇಕ್ಕಟ್ಟಲ್ಲಿ ಸಿಕ್ಕಿಹಾಕಿಕೊಳ್ಳುವ ದೃಶ್ಯಗಳು ನಗೆಯುಕ್ಕಿಸುತ್ತವೆ. ಒಂದು ಕಥೆಯಲ್ಲಿ(chutki’s wish) ಇವನನ್ನು ರಾಜನ ಸೇನಾಧಿಪತಿಯ ಮಗನೆಂದು ಹೇಳಿ, ಅಪ್ಪನಂತೆಯೆ ಸಾಹಸಿಯಾಗಬೇಕೆಂದು ಹಂಬಲಿಸುವುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಬಿಲ್ಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ ರಾಜು “ಅರ್ಜುನ ಕಪ್” ಪಡೆದಿರುತ್ತಾನೆ.

ಜಗ್ಗು

ಇವನು ಮಾತನಾಡಬಲ್ಲ ಕೋತಿಮರಿಯಾಗಿದ್ದು ಚೇಷ್ಟೆಯಲ್ಲಿ ಎತ್ತಿದ ಕೈ. ಮರದಲ್ಲಿ ನೇತಾಡಲು, ನೆಗೆಯಲು ಭೀಮನಿಗೆ ಕಲಿಸುವ ಇವನು ಎಲ್ಲರನ್ನೂ ನಗಿಸುತ್ತಾ ಮನರಂಜಿಸುತ್ತಾನೆ. ಇವನೂ ತಿಂಡಿಪೋತನಾಗಿದ್ದು ಲಡ್ಡುಗಳನ್ನು ಮೆಲ್ಲನೆ ಕದ್ದು ಕಬಳಿಸುತ್ತಿರುತ್ತಾನೆ. ಕಾಡಿನ ಸಂರಕ್ಷಣಾ ಅಧಿಕಾರಿಯಾಗಬೇಕೆಂಬ ಬಯಕೆಯಲ್ಲಿ ಇವನು ಭೀಮ ಕಾಡಿನ ಸಹಚರರನ್ನು ರಕ್ಷಿಸುವಾಗ ಬೆಂಬಲಿಸುತ್ತಾನೆ. ಇವನಿಗೆ ವಿರೋಧ ಪಕ್ಷದ ಧೋಲು, ಭೋಲು ಮತ್ತು ಕಾಲಿಯಾರಿಗೆ ಕೀಟಲೆ ಮಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆಂಬಂತೆ ಅವರನ್ನು ಯಾವಾಗಲೂ ಕೆಣಕಿ ಆಟವಾಡಿಸುತ್ತಿರುತ್ತಾನೆ.

ಉಸ್ತಾದ್ ಕಾಲಿಯಾ

ಕಾಲಿಯಾ ಪೈಲ್ವಾನ್ 10 ವರ್ಷದ ದಢೂತಿ ದೇಹದ ತಂಟೆಕೋರ ಹಠಮಾರಿ ಹುಡುಗನಾಗಿದ್ದು ಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸುತ್ತಾನೆ.ಅತ್ಯಾಸೆಯುಳ್ಳ ಮೋಸಗಾರನಾದ ಇವನು ಆಗಾಗ ಇತರರನ್ನು ಪೀಡಿಸುತ್ತಿರುತ್ತಾನೆ. ತನ್ನ ಕೆಲಸ ಸಾಧಿಸುವ ಭರದಲ್ಲಿ ಅಸಹಾಯಕರನ್ನು ತುಳಿಯುವ ಇವನ ಬಾಲಂಗೋಟಿ ಸ್ನೇಹಿತರು ಧೋಲು ಮತ್ತು ಭೋಲು. ಸದಾ ಕೆಟ್ಟ ಕೆಲಸಗಳಲ್ಲಿ ಇವನನ್ನು ಹುರಿದುಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುತ್ತಾರೆ. ಹೀಗೆ ಒಳಗೊಳಗೇ ಕಿತ್ತಾಡುವ ಭೀಮ ಮತ್ತು ಕಾಲಿಯಾ ಪರದೇಶದವರ ಆಕ್ರಮಣದಿಂದ ಇಡೀ ಧೋಲಕ ಪುರದ ರಕ್ಷಣೆಗೆ ಒಂದಾಗಿ ದುಡಿದ್ದೂ ಕೆಲವು ಕಂತುಗಳಾಗಿ ತೆರೆಗೆ ಬಂದಿವೆ.

ಧೋಲು ಮತ್ತು ಭೋಲು

ಇವರು ಅವಳಿ ಜವಳಿಗಳಾಗಿದ್ದು ನೋಡಲೂ ಒಂದೇ ತೆರನಾಗಿದ್ದಾರೆ. ಕಾಲಿಯಾನ ಕೆಟ್ಟಕೆಲಸಗಳಿಗೆ ಪ್ರೋತ್ಸಾಹ ಮಾಡುತ್ತಿರುತ್ತಾರೆ. ಭೀಮ ಮತ್ತವನ ಸಹಚರರ ಆಮಿಷಕ್ಕೆ ಬಲಿಯಾಗಿ ಕಾಲಿಯಾನನ್ನು ಕೆಲವು ಸಲ ವಿರೋಧಿಸುವ ಇವರು ಒಳ್ಳೆಯವರಾಗಿ ನಡೆದುಕೊಂಡದ್ದೂ ಕೆಲವು ಕಂತುಗಳಾಗಿ ಪ್ರಸಾರ ಕಂಡಿವೆ.

ಇವರಲ್ಲದೆ ಸಹಪಾತ್ರಗಳಾದ ಪೈಲ್ವಾನ್ ಕೀಚಕ,ಛೋಟ ಮನ್ನು, ರಾಜಕುಮಾರಿ ಇಂದುಮತಿ, ರಾಜಾ ಇಂದ್ರವರ್ಮ, ಡಕಾಯಿತ ಮಂಗಲ್ ಸಿಂಗ್, ಧೂನಿ ಬಾಬಾ, ಟನ್ ಟನ್ ಮೌಸಿ, ಬೆಹನ್ ಶಿವಾನಿ,ಶಾಸ್ತ್ರೀ, ಅವಿಬಾಬಾ, ಡಗ್ಗೂ,ಅಪ್ಪು ಮೊದಲಾದವರು ರಂಜಿಸಲು ಬರುತ್ತಾರೆ.

  • ತೆರೆಕ೦ಡ ಚಲನಚಿತ್ರಗಳು

Chhota Bheem and the Curse of Damyaan (May 18, 2012)

Chhota Bheem and the Throne of Bali (May 3, 2013)

Chhota Bheem Himalayan Adventure (Jan 8, 2016)

  • ಫೇಸ್ಬುಕ್ ನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಲೈಕುಗಳನ್ನು ಹೊ೦ದಿರುವ “Chhota bheem” ಪುಟವಿದೆ.!!!

  • ವಿವಿಧ ಹಾಡು ಹಾಗು ಚಟುವಟಿಕೆಗಳಿಗೆ http://www.chhotabheem.com ಜಾಲತಾಣಕ್ಕೆ ಭೇಟಿ ನೀಡಬಹುದು !!!

-Shylaja kekanaje

shylasbhaqt@gmail.com

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!