ಬಲಿತು ಮಾಗಿದ ದೇಹ ಬಾಗಿದೆ
ಕರೆ-ಕರೆದು ಕೂಗಿದೆ ಅಂತ್ಯಕೆ
ನಿಡಿಸುಯ್ದ ಮನಸನ್ನು ಒದ್ದೆ ಮಾಡಿದ
ಪರಿ – ಸರಿ ಸಮದ ಸಮಯದ
ಕೊನೆ ಕಾಣುವ ತವಕದಲ್ಲಿ…
ಸುಕ್ಕುಗಟ್ಟಿದ ಮೈಯ ಚರ್ಮ ಜೋಲಿದೆ
ಹೊಳೆವ ಕನ್ನಡಿ ಮಾರು ದೂರಕೆ
ಜೊತೆ ನೆರಳು ನಕ್ಕು ನಕ್ಕು ಅಣಕಿಸಿದ
ಪರಿಹಾಸ್ಯದ ಅಪರಿಮಿತ ಸತ್ಯದ
ಪ್ರತಿ ದಿನದ ಸೋಲುವಿಕೆಯಲ್ಲಿ..
ಬಾಳ ಹಾದಿಗೆ ಅನುಭವ ದೀಪ ತೋರಿದೆ
ದೇವರು ಬರಿ ಮನಸಿನ ಭಾವಕೆ
ಸೋತು ಗೆದ್ದಿಹ ಹಳೆಯ ಬಾಳ್ವೆಯ
ಬರೀ ನೆನಹು, ಕಡೆವ ದುಃಖ ಸಾಗರದ
ತುದಿಯಂಚಿನ ಕಾಯುವಿಕೆಯಲ್ಲಿ…
ವಿದುರ ಪ್ರೇಮಕೆ ಭಾವವೇ ಅತ್ತಿದೆ
ನೆನಪು ಕರೆದಿದೆ ಸಂಗಾತಿ ಲೋಕಕೆ
ಪ್ರೀತಿ ಅಡಗಿ ಹೃದಯ ಉಲಿದ
ಒಂಟಿ ಹಾಡಿನ, ಸೋತ ಭಾರ ಹೆಜ್ಜೆಯ
ಇಳಿಸಂಜೆಯ ಖಾಲಿ ಬೀದಿಗಳಲ್ಲಿ…
ಕಿರಿದು ಕಣ್ಣಿಗೆ ಹೊಸ ಲೋಕ ಕಂಡಿದೆ
ಈ ಜೀವನ ಕಹಿ ಅನಿಸಿದೆ ಅಧರಕೆ
ಎಣಿಸಿ ಸರಿಸುವ ದಿನದ ಬಾಗಿಲುಗಳ
ಕಿರು ಸಂದಿಗಳಲ್ಲಿ ಒಳ ನುಗ್ಗುವ
ಸಾವೆಂಬ ಅತಿಥಿಯ ನಿರೀಕ್ಷೆಯಲ್ಲಿ…