ಅಂಕಣ

ಇನ್ನೂ ಹಿರಿ ಜೀವಕೆ ಎಲ್ಲಿದೆ ನೆಮ್ಮದಿ…?

ಅವಿಭಕ್ತ ಕುಟುಂಬದಲ್ಲಿರುವ ರಾಜೇಶನ ಮುಖದಲ್ಲಿ ಯಾವಾಗಲು ನಗೆ ಹರಿದಾಡುತ್ತದೆ. ಅವನಿಗೆ ಎರಡು ಮಕ್ಕಳು ಒಂದು ಗಂಡು ಇನ್ನೊಂದು ಮುದ್ದಾದ ಹೆಣ್ಣು. ಸಂಸಾರದ ತಾಪತ್ರಯಗಳು ಅವನ ಮುಖದಲ್ಲಿ ಎಲ್ಲೂ ಕಾಣುತ್ತಿರಲಿಲ್ಲ.ಅವನ ಸಂತೋಷಕ್ಕೆ ಕಾರಣ, ತುಂಬು ಸಂಸಾರವಿರಬಹುದು (ಅವಿಭಕ್ತ) ಅಥವಾ ಯಾವುದಕ್ಕೂ ಚಿಂತಿಸದ ಮನುಷ್ಯ ತಾನಾಗಿರಬಹುದು. ಸಂಸಾರವೆಂದಮೇಲೆ ಸಣ್ಣಪುಟ್ಟ ಜಗಳ,ವೈಮನಸ್ಸು,ಭಿನ್ನಾಭಿಪ್ರಾಯ ಸಹಜ ಮತ್ತು ಚಂದ. ಹೆಂಡತಿಯೊಂದಿಗೆ ಜಗಳವಾದಾಗ ಸ್ವಲ್ಪ ಹೊತ್ತಿನ ನಂತರ ಅವಳನ್ನ ರಮಿಸುವುದು ಅಥವಾ ಅವನೇ ಸಿಟ್ಟಾದಾಗ ಅವಳು ಕಾಡಿಸುವ ಮನವೂಲಿಸುವ ಮಾತು ದೊಡ್ಡ ದೊಡ್ಡ ತಪ್ಪುಗಳನ್ನ ಇನ್ನಿಲ್ಲದಂತೆ ಗಾಳಿಗೆ ತೂರಿಬಿಡುತ್ತವೆ.ಇಂತಹ ಸಾಮಾನ್ಯ ಜ್ಞಾನ ರಾಜೇಶನಿಗೆ ಗೊತ್ತಿತ್ತು. ಹಾಗಾಗಿ ಅವಿಭಕ್ತ ಕುಟುಂಬದ ರುಚಿಯನ್ನ ಸವಿಯುತ್ತಿದ್ದ. ಸಾಮಾನ್ಯವಾಗಿ ಜಗಳ ಬರುವುದು ಅತ್ತೆ ಸೊಸೆಯರ ಮಧ್ಯೆ ಆದರೆ ಇಲ್ಲಿ ಅಂಥಹದೇನೂ ನೆಡೆಯುತ್ತಿರಲ್ಲಿಲ್ಲ, ನಡೆದಿದ್ದರೂ ಅದು ಚಿಕ್ಕ ಮಟ್ಟದಲ್ಲಿ ಮಾತ್ರ.

ಆದರೆ ರವಿಯ ಸಂಸಾರದ ಕತೆ ಬೇರೆಯದೇ ಆಗಿದೆ. ಇವನದು ನ್ಯೂಕ್ಲಿಯರ್ ಕುಟುಂಬ. ಇವನಾಗಲಿ ಇವನ ಹೆಂಡತಿಯಾಗಲಿ ಅವಿಭಕ್ತ ಕುಟುಂಬದ ಬಗ್ಗೆ ಹೇಳುವುದು ಸಹ ಬೇರೆಯದೇ. ಅಲ್ಲಿ ತಮಗೊಂದು ಸ್ಪೇಸ್/ಪ್ರೈವಸಿ ಇರುವುದಿಲ್ಲ, ಅದೂ ಸಿಕ್ಕರೂ ರಾತ್ರಿಯ ಸಮಯಕ್ಕೆ ಮಾತ್ರ ಮೀಸಲು,ಈಗೀಗಲಂತೂ ಚಿಕ್ಕದೊಂದು ಸ್ಪೇಸ್/ ಪ್ರೈವಸಿ ಬಹಳ ಅವಶ್ಯಕವಾಗಿದೆ, ಆದ್ದರಿಂದ ತಮ್ಮ ತಂದೆತಾಯಿಯವರ ಜೊತೆಯಾಗಲಿ ಅಥವಾ ಅತ್ತೆಮಾವಂದಿರ ಜೊತೆಯಾಗಲಿ ಬಾಳುವುದು ಕಷ್ಟ ಸಾಧ್ಯ ಹಾಗಾಗಿ ಚಿಕ್ಕ ಸಂಸಾರ ಚೊಕ್ಕ ಸಂಸಾರ ಎನ್ನುವುದು ಅವರ ಅಂಬೋಣ. ಅಂದರೆ ರಾಜೇಶನ ಕುಟುಂಬ ಎಂದೂ ಆ ಸ್ಪೇಸ್ ಅಥವಾ ಪ್ರೈವಸಿ ಬಯಸಲಿಲ್ಲವೇ..? ಬಯಸಿತ್ತು..! ಆದರೆ ಅವಿಭಕ್ತ ಸಂಸಾರದಲ್ಲಿದ್ದ ಸುಖ ನ್ಯೂಕ್ಲಿಯರ್ ಕುಟುಂಬದಲ್ಲಿ ಇಲ್ಲ ಎನ್ನುವುದನ್ನು ಅವ ಅರಿತ್ತಿದ್ದ. ಎಲ್ಲರಂತೆ ರಾಜೇಶ್ ತುಂಬುಕುಟುಂಬ ಸಮೇತ ಶಾಪಿಂಗ್ ಹೋಗುವುದು,ಸಿನಿಮಾಗೆ,ಹೋಟೆಲ್ಗೆ,ಮನ ಇಷ್ಟ ಬಂದಲ್ಲಿ ತಿರುಗಾಡುವುದು ಇದ್ದೇ ಇದೆ. ಕೆಲವೊಮ್ಮೆ ಈತನ ಪೇರೆಂಟ್ಸ್ ಜೊತೆಗಿರುತ್ತಿದ್ದರು ಮತ್ತೊಮ್ಮೆ ಅವರೇ ಅರಿತು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರು.

ರವಿಯ ಸಂಸಾರಕ್ಕೆ ಏನಾಗಿದೆಯೋ ಗೊತ್ತಿಲ್ಲಾ. ತನ್ನ ಹೆಂಡತಿ ಒಂದೆಡೆ ಯೋಚಿಸಿದರೆ,ಇವನ ಯೋಚನೆ ಅವಳಿಗೆ ಸರಿಹೊಂದುತ್ತಿಲ್ಲ.ಮದುವೆಯಂತೂ ಇಬ್ಬರೂ ಪ್ರೀತಿಸಿಯೇ ಆಗಿದ್ದು. ನಿನ್ನೆಲ್ಲಾ ಕಷ್ಟ ಸುಖಗಳಲ್ಲಿ ನಾ ಭಾಗಿಯಾಗುವೆ,ನಿನ್ನ ಕಣ್ಣಲ್ಲಿ ಒಂದು ಹನಿ ನೀರೂ ಬರದಹಾಗೆ ನೋಡಿಕೊಳ್ಳುವೆ, ನೀನಿಲ್ಲದೆ ಜೀವನವನ್ನು ನೆನೆಸಿಕೊಳ್ಳಲೂ ಅಸಾಧ್ಯ ಎಂಬೆಲ್ಲಾ ಮಾತು. ಈಗ ಇಬ್ಬರ ಮಧ್ಯೆದಲ್ಲಿ ಕಾಣುತ್ತಿಲ್ಲಾ. ಯಾಕೆ ಹೀಗೆ?. ಮಾತು ಮಾತಿಗೆ ರವಿಯ ಹೆಂಡತಿ ಜಗಳವಾಡುತ್ತಿದ್ದಾಳೆ.ಇದು ಇವಳಲ್ಲಿ ಈಗೀಗ ಆದ ಬದಲಾವಣೆ. ಇವರ ಜೊತೆಯಲ್ಲಿ ಹಿರಿಯರಾರೂ ಇಲ್ಲ. ಆದರೂ ಹೀಗೇಕೆ..?

ವಿಷಯವಿಷ್ಟೇ ರವಿಯ ತಂದೆತಾಯಿ ಹಳ್ಳಿಯಿಂದ ತಮ್ಮಲ್ಲಿಗೇ ಪರಮ್ನೆಂಟ್ ಆಗಿ ವಾಸಮಾಡಲು ಬರುತ್ತಿದ್ದಾರೆ. ಈಗಂತೂ ಹಳ್ಳಿಯ ಮನೆಯಲ್ಲಿ ಇದ್ದಾರೆ, ಆರಾಮದಿಂದಿದ್ದಾರೆಯೆ? ಅದು ಬೇರೆ ಮಾತು. ಆದರೂ ಎಷ್ಟು ದಿನ ಆ ಹಿರಿತಲೆಗಳು ಮಕ್ಕಳನ್ನು ಬಿಟ್ಟು ಇರಬಲ್ಲರು. ಒಂಟಿಯಾಗಿ ಹೇಗೆ ಬದುಕಬಲ್ಲರು? ಕೊನೆಗಳಿಗೆಯಲ್ಲಿ ಆಸರೆ ಬೇಡುವುದು ತಮ್ಮ ಮಕ್ಕಳ ಗೂಡಿನಲ್ಲವೇ.? ಇದಕ್ಕೆ ಪರ್ಯಾಯ ಇದೆಯೆ? ವೃದ್ಧಾಶ್ರಮ..ಆದರೆ ಅಲ್ಲಿ ಸೇರುವುದಕ್ಕಿಂತ ಊರ ಹೊರಗಿನ ಕಾಡೇ ಎಷ್ಟೋ ಮೇಲು ಎನ್ನುವುದು ಹಿರಿ ಜೀವದ ಮಾತು.ಇದಕ್ಕೆ ಪೂರಕವಾಗಿ ರವಿ ಅವರಿಗೆ ಒಬ್ಬನೇ ಮಗ.

ಇನ್ನೇನು ಅತ್ತೆ ಮಾವನವರು ನಮ್ಮಲ್ಲಿ ಬಂದು ಬಿಟ್ಟರೆ..ನಮ್ಮ ಸ್ಪೇಸ್/ಪ್ರೈವಸಿಗೆ ಅಡಚಣೆಯಾಗಬಹುದು..ಇಲ್ಲಿಯವರೆಗೆ ನನಗಿದ್ದ  ಫ್ರೀಡಂ ನನ್ನ ಸ್ನೇಹಿತರ ಮಧ್ಯೆ ನಗೆಪಾಟಲಾಗಬಹುದು. ಏನೇ ಆದರೂ ಅವರು ಬರುವುದನ್ನ ತಡೆಯಲೇಬೇಕು. ಆದರೆ ಹೇಗೆ? ಅದಕ್ಕೆ ಒಂದೇ ಮಾರ್ಗ ಗಂಡಮಾಡುವ ಪ್ರತೀಯೊಂದು ಕೆಲಸದಲ್ಲಿ ತಪ್ಪು ಹುಡುಕುವುದು. ದಿನಂಪ್ರತೀ ಜಗಳವಾಡಿ ಮನೆಗೆ ಬಂದು ಜೊತೆಗಿರಬೇಕೆನ್ನುವ ಹಿರಿಯ ಜೀವಿಗಳ ತಲೆಯಲ್ಲಿ ಟೆನ್ಷನ್ನಿನ ವಾತಾವರಣವನ್ನು ಸೃಷ್ಟಿ ಮಾಡುವುದು.ಆಗ ತಾವಾಗಿಯೇ ’’ನೀವಾದರೂ ಚೆನ್ನಾಗಿ ಬಾಳಿರಿ”, ನಮ್ಮದಂತೂ ಕೊನೆದಿನಗಳೂ ಹೇಗೋ ಕಾಲ ಕಳೆಯುತ್ತೇವೆ ಎನ್ನುವ ಮಾತು ಅವರ ಬಾಯಿಂದಲೇ ಬರಲಿ ಎನ್ನುವ ವಿಚಾರ..

ಹಾಗಾದರೆ ರಾಜೇಶನ ಖುಷಿ ರವಿಯಲ್ಲಿ ಏಕಿಲ್ಲ? ಮತ್ತು ಈ ಇಬ್ಬರ ಹೆಂಡಂದಿರ ಮಧ್ಯೆ ಇಷ್ಟೊಂದು ಭಿನ್ನವೇಕೆ? ಬಹುಶಃ ರಾಜೇಶ ಮದುವೆಗೆ ಮುಂಚೆಯೇ ಅಂದರೆ ತನಗೆ ಕೆಲಸ ಸಿಕ್ಕ ಹೊತ್ತಿನಿಂದ ತನ್ನ ತಂದೆತಾಯಿಯವರು ಅವನ ಜೊತೆಯಲ್ಲಿಯೇ ಉಳಿದರು. ತಾನು ಆಫೀಸ್’ಗೆ ಹೋಗಿಬರುತ್ತಿದ್ದರೆ ತಾಯಿ ಮನೆಗೆಲಸ, ತಂದೆ ಮನೆಗೆ ಬೇಕಾದ ಸಾಮಾನು ಮತ್ತು ಇನ್ನೂ ಅನೇಕ ಕೆಲಸ ಮಾಡಿಡುತ್ತಿದ್ದರು.ಇನ್ನೇನು ಮದುವೆ ಮಾಡಬೇಕು ಮಗನಿಗೆ ಎಂದು ಯೋಚಿಸಿ ಒಂದು ಹೆಣ್ಣೂ ಗುರುತುಮಾಡಿ ಮದುವೆಯನ್ನೂ ಮಾಡಿದರು. ಇಲ್ಲಿ ಆ ಮನೆಗೆ ಬರುವ ಹೆಣ್ಣು ತನ್ನ ಮನದಲ್ಲಿ ಮತ್ತು ಮತಿಯಲ್ಲಿ ತಾನು ಅತ್ತೆಮಾವಂದಿರಿರುವ ಮನೆಗೆ ಸೊಸೆಯಾಗುತ್ತಿದ್ದೇನೆ. ನನ್ನ ಕುಟುಂಬವೆಂದರೆ ನನ್ನ ಗಂಡನ ಜೊತೆ ಇವರೆಲ್ಲರೂ ಎಂಬ ಭಾವನೇ ಮೊದಲೇ ಮೂಡಿಬಿಡುತ್ತದೆ. ಮತ್ತು ತನ್ನನ್ನು ತಾನು ಬದಲಿಸಿಕೊಳ್ಳುತ್ತಾಳೆ.

ರವಿಯ ಹೆಂಡತಿಯ ಯೋಚನೆಯೇ ಬೇರೆಯಾಗಿದ್ದವು ಕಾರಣ ತಾನು ಮದುವೆಯಾಗುತ್ತಿರುವ ಹುಡುಗ ಸಿಟಿಯಲ್ಲಿದ್ದಾನೆ ತನ್ನ ಪೇರೆಂಟ್ಸ್ ಹಳ್ಳಿಯಲ್ಲಿದ್ದಾರೆ. ಅತ್ತೆಮಾವನವರ ಕಾಟ ಅನ್ನುವುದು ನನಗೆ ಇರುವುದಿಲ್ಲ. ನಮ್ಮಿಬ್ಬರ ಮಧ್ಯೆ ಸ್ಪೇಸ್’ಗೆ ತೊಂದರೆ ಇಲ್ಲ, ಹೀಗೆ ಮದುವೆಗೆ ಮುಂಚೆಯೇ ಏನೆಲ್ಲಾ ಕಲ್ಪನೆಗಳನ್ನು ಕಟ್ಟುತ್ತಾಳೆ. ಎಂದು ಅವುಗಳಿಗೆ ಸ್ಪೇಸ್/ಪ್ರೈವಸಿಗೆ ಧಕ್ಕೆ ಬರಲಾಂಭಿಸುತ್ತದೆಯೋ ಅಲ್ಲಿಗೆ ಯುದ್ದ ಪ್ರಾರಂಭ..

ಈ ಯುದ್ದದಲ್ಲಿ ಹಿರಿಯರು ಗೆದ್ದರೂ ನೆಮ್ಮದಿಯ ಜೀವನ ಮಕ್ಕಳಜೊತೆ ಬಾಳಲು ಸಾದ್ಯವಿಲ್ಲ, ಸೋತರಂತೂ ಕತೆ ಮುಗಿದಹಾಗೆಯೇ..ಹಾಗಾದರೆ ಇನ್ನು ಹಿರಿಜೀವಕೆ ನೆಮ್ಮದಿ…?

Nagaraj mukari

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!