ಅಂಕಣ

ಪ್ರಾಮಾಣಿಕತೆ ಎಂಬುದು ಸತ್ತೇ ಹೋಗಿರುವಾಗ, ಸರ್ಕಾರವೊಂದೇ ಸರಿಯಿದ್ದರೆ ಸಾಕಾಗುವುದಿಲ್ಲ…!

ಮೊನ್ನೆ ಮ್ಯೆಕ್ಯಾನಿಕಲ್ ಸರ್ ಬಂದಿರಲಿಲ್ಲ. ಅಪರೂಪಕ್ಕೊಮ್ಮೆ ಅಂತ ನಮ್ಮ ಕ್ಲಾಸಿನವರಿಗೆಲ್ಲ ಕೊನೆಯ ಅವಧಿ ಬಿಡುವು ಸಿಕ್ಕಿತ್ತು. ಗೆಳೆಯರೆಲ್ಲ ಕೊನೆಯ ಬೆಂಚುಗಳಲ್ಲಿ ಹಾಯಾಗಿ ಕುಳಿತು ಹರಟುತ್ತಿದ್ದೆವು. ಅಲ್ಲಿ ಕುಳಿತವರಲ್ಲಿ ಅದ್ಯಾವ ಪುಣ್ಯಾತ್ಮ ಯಾವಾಗ ಏನು ಪುಣ್ಯ ಮಾಡಿದ್ದನೋ ಗೊತ್ತಿಲ್ಲ, ತೀರಾ ಅಪರೂಪಕ್ಕೆಂಬಂತೆ leisure ಪೀರಿಯಡ್ ಪಟ್ಟಂಗ “ಫ್ಯೂಚರ್” ಬಗ್ಗೆ ತಿರುಗಿಬಿಟ್ಟಿತು. ಏನೋ ಅದು ಇದು ಅನ್ನುತ್ತಿರುವಾಗ ಗೆಳೆಯನೊಬ್ಬ ಪುಟುಕ್ಕನೆ ಹೀರೋನಂತೆ “ಇಂಜಿನಿಯರಿಂಗ್ ಓದಿ ಎಲ್ಲರೂ ಇಂಜಿನಿಯರೇ ಆಗಬೇಕಾ?” ಅಂದ. ಇವ ಇಂಟರೆಸ್ಟಿಂಗ್ ಅನ್ನಿಸಿತು. Small Aim is a Crime ಅಂದ ಕಲಾಮ್’ರ ದೊಡ್ಡ ಫ್ಯಾನ್ ಇರಬೇಕು ಅನ್ನಿಸಿತು. “ಇಂಜಿನಿಯರ್ರೇ ಆಗಬೇಕು ಅಂತಿಲ್ಲ. ಏನು ನಿನ್ನ ಗುರಿ?” ಅಂತ ಕೇಳಿದೆ. “ಈ ಪಂಚಾಯ್ತಿಗಳಲ್ಲಿ ಇಂಜಿನಿಯರ್ರು ಅಂತ ಇರ್ತಾರೆ ಗೊತ್ತಾ, ಇಂಜಿನಿಯರ್ರು ಅಂತಾರೆ, ಆದ್ರೆ ಅಲ್ಲ, ಗೊತ್ತಾ?” ಅಂತ ಕೇಳಿದ. ಇಲ್ಲ ಅಂದೆ. ” ಅದ್ಕೆ ಮಾರ್ಕ್ಸು ಮೆರಿಟ್ಟು ಏನೂ ಬೇಡ. ಎಸ್ಸಿ ಎಸ್ಟಿ ಯಾವ್ದಾದ್ರೂ ರಿಸರ್ವೇಷನ್ ಇದ್ರೆ ಸಾಕು. ಹಂಗೇ ತಗಂಬಿಡ್ತಾರೆ. ನಮ್ಮಣ್ಣ ಒಬ್ಬ ಇದಾನೆ. ಅವ ಟೆಂತ್ ಪಾಸ್ ಅಷ್ಟೆ. ಅವಂಗೆ ಹಂಗೆ ಕೆಲ್ಸ ಸಿಕ್ಕಿದೆ. ಸಂಬ್ಳ ಇಪ್ಪತ್-ಇಪ್ಪತ್ತೈದ್ ಕೊಡ್ಬೋದು, ಆದ್ರೆ ಸಖತ್ ಗಿಂಬ್ಳ ಬರ್ತದೆ. ದಿನಾ ಸಾವಿರಗಟ್ಟಲೆ ಗಿಂಬ್ಳ ಬರ್ತದೆ. ನಾನು ಹಂಗೇ ಅದೇ ಕೆಲ್ಸ ಹಿಡ್ದು, ಹಾಯಾಗ್ ಇದ್ಬಿಡ್ತೀನಿ” ಅಂದ. ಕಪಾಳಕ್ಕೆ ಎರಡು ಬಿಟ್ಟುಬಿಡುವ ಸಿಟ್ಟು ಬಂದರೂ, ಮನಸ್ಸನ್ನು ಆ ಕ್ಷಣಕ್ಕೆ ಆವರಿಸಿದ ಸೋತ ಹತಾಶೆ, ಸ್ವಲ್ಪ ಬುದ್ಧಿ ಹೇಳಿ ಬೈದು ಬರುವ ಇಂಗಿತವನ್ನೂ ಇಂಗಿಸಿಬಿಟ್ಟಿತು. ಅಲ್ಲಿಂದ ಎದ್ದು ಬಂದುಬಿಟ್ಟೆ.

 ಇನ್ನೊಂದು ವಿಷಯ ತಿಳಿಸುತ್ತೇನೆ ಕೇಳಿ. ಇವತ್ತು ತಮ್ಮ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಲೀಕಾಯ್ತು ಅಂತ ಲೀಕ್ ಮಾಡಿದವರಿಗೆ ಹಿಗ್ಗಾ ಮುಗ್ಗಾ ಶಾಪ ಹಾಕುತ್ತಿರುವ ಬಹುತೇಕ ದ್ವಿತೀಯ ಪಿಯು ವಿದ್ಯಾರ್ಥಿಗಳು(ಎಲ್ಲರೂ  ಅಲ್ಲ), ತಮ್ಮ ಗೆಳೆಯ ಅಥವಾ ಗೆಳತಿಗೆ ಮೊದಲೇ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು ಅಂತ ಗೊತ್ತಾದರೆ, “ಥೂ ಪಾಪಿ… ಫ಼್ರೆಂಡಾ ನೀನು…. ವಾಟ್ಸಾಪ್ ಅಲ್ಲಿ ಒಂದು ಪಿಕ್ ನಂಗೂ ಕಳಿಸ್ಬಾರ್ದಿತ್ತೇ…?” ಅಂತ ಕೇಳುತ್ತಾರೆ. ಒಬ್ಬ ವಿದ್ಯಾರ್ಥಿಯಾಗಿ, ಇಂದಿನ ವಿದ್ಯಾರ್ಥಿ ಜಗತ್ತಿಗೆ ಪ್ರತೀದಿನ ಮುಖವೊಡ್ಡೇ ನಿಂತಿರುವ ನನಗೆ ನಮ್ಮವರ ಸೈಕಾಲಜಿ ಚೆನ್ನಾಗಿ ಗೊತ್ತಿದೆ. ನೀವು ಇದನ್ನೋದುತ್ತಿರುವವರು ಈಗ ವಿದ್ಯಾರ್ಥಿಯಾಗಿದ್ದರೆ, ನೀವು ಇದನ್ನ ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತಿದ್ದಿರಿ. ವಯಸ್ಕರಾಗಿದ್ದರೆ, ನಿಮ್ಮ ಕಾಲದ ವಿದ್ಯಾರ್ಥಿ ಸಮೂಹ ಹೇಗಿತ್ತೆಂಬುದರ ಬಗ್ಗೆ ನಾನು ಕಮೆಂಟ್ ಮಾಡಲಾರೆ. ಊಹಿಸಿ ಬರೆಯುವುದರಲ್ಲಿ ನನಗೆ ನಂಬಿಕೆಯಿಲ್ಲ. ಈ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಲ್ಲ? ಅದಕ್ಕೂ ಮೊದಲು ನಾಲ್ಕು ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮಾಡುವುದು ನಮ್ಮ ರಾಜ್ಯದಲ್ಲಿ ವಾಡಿಕೆ. ತಾಲೂಕು, ಜಿಲ್ಲೆ, ರಾಜ್ಯ, ನಂತರ ಶಾಲಾಮಟ್ಟ ಇಷ್ಟು. ಈ “ಮಟ್ಟಗಳಲ್ಲಿ” ಅದ್ಯಾವ “ಮಟ್ಟದಲ್ಲಿ” ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತವೆಯೆಂದರೆ, ವಿಕೀಲೀಕ್ಸ್’ನ ಜೂಲಿಯನ್ ಅಸ್ಸಾಂಜ್ ಕೂಡ ಇವರ ’ಕಲೆಯ’ ಮುಂದೆ ನಾಚಿ ತಲೆತಗ್ಗಿಸಬೇಕು! ಸಂಸ್ಕೃತವನ್ನು ಉಳಿಸಿ ಬೆಳೆಸುವ ಉದ್ದೇಶದಲ್ಲಿ ಸಂಸ್ಕೃತ ಪ್ರಥಮ, ದ್ವಿತೀಯ ಮುಂತಾದ ಪರೀಕ್ಷೆಗಳನ್ನು ಮಾಡುತ್ತಾರೆ. ಸಂಸ್ಕೃತ ಪ್ರಾಧಿಕಾರ ಇವುಗಳನ್ನ ಮಾಡುತ್ತಿರಬೇಕು. ಇವರಲ್ಲಿ ಅದ್ಯಾರಿಗೆ ಮಕ್ಕಳನ್ನು ಪಾಸ್ ಮಾಡಲೇಬೇಕೆಂಬ ಹಠವೋ ಏನೋ, ಕುಖ್ಯಾತ ಪ್ರದೇಶಗಳ ಪರೀಕ್ಷಾಕೇಂದ್ರಗಳಿರಲಿ, ಸುಸಂಸ್ಕೃತ ಪ್ರದೇಶದ ಕೇಂದ್ರಗಳಲ್ಲೇ( ಎಲ್ಲಿ ಇತರ ಪರೀಕ್ಷೆಗಳಲ್ಲಿ ನಡೆಯುವ mal-practiceನ ಪ್ರಮಾಣ ಕಡಿಮೆಯೋ ಅಲ್ಲೇ) ಶಿಕ್ಷಕರ ಸಂಪೂರ್ಣ ಸಹಕಾರದೊಂದಿಗೆ ಮಾಸ್ ಕಾಪಿಗಳು ನಡೆದುಹೋಗುತ್ತೆ! ಸುಖಾಸುಮ್ಮನೆ ನಮ್ಮ ಮಕ್ಕಳಿಗೆ ಸಂಸ್ಕೃತ ಬರುತ್ತೆ ಅಂತ, ಅದ್ಯಾರ ಮುಂದೆ ನಾಚಿಕೆಯಿಲ್ಲದೆ ರುಜುಮಾಡಲು ಹೊರಿಟಿರುವರೋ ನಾನರಿಯೆ.

 ಯಾವುದೋ ಒಬ್ಬ ರಾಜಕಾರಣಿ ಅಂದಿಟ್ಟುಕೊಳ್ಳಿ. ಅವನೋ/ಅವಳೋ ತನ್ನ ಅಧಿಕಾರಾವಧಿಯಲ್ಲಿ ಮಾಡಬಾರದ್ದನ್ನೆಲ್ಲಾ ಒಂದೂ ಬಿಡದೆ ಅಷ್ಟೂ ಮಾಡಿದ್ದಾಗಿದೆ. ರಾಜ್ಯದ್ದೋ ಅಥವಾ ದೇಶದ್ದೋ ಅಭಿವೃದ್ಧಿಯ ನೆಪದಲ್ಲಿ ನೂರಾರು ಕೋಟಿ ನುಂಗಿಹಾಕಿದ್ದಾನೆ. ತನ್ನ ಕುಟುಂಬ ಸದಸ್ಯರನ್ನೆಲ್ಲ ರಾಜಕೀಯಕ್ಕೆ ಬಿಟ್ಟುಕೊಂಡಿದ್ದಾನೆ. ತನ್ನ ಅಳಿಯನಿಗೆ, ಭಾವಮೈದನಿಗೆಲ್ಲ ಉದ್ಯಮದಲ್ಲಿ ಬೇಕಾಬಿಟ್ಟಿ ಅನುವು ಮಾಡಿಕೊಟ್ಟಿದ್ದಾನೆ. ಇದು ಯಾರೋ ಒಬ್ಬರ ಬಗ್ಗೆ ಬರೆದಿದ್ದಲ್ಲ. ಇಂಥವರು ನಮ್ಮ ದೇಶದಲ್ಲಿ ಅನೇಕರು ಸಿಗುತ್ತಾರೆ. ಇಂಥವರೇ ಹೆಚ್ಚು. ಆದರೂ ಅವನಿಗೆ ವೋಟು ಹಾಕಲು, ವೋಟು ಕೇಳಲು ಜನ ದಂಡಿಯಾಗಿ ಸಿಗುತ್ತಾರೆ. ಆತ ಮತ್ತೆ ಮತ್ತೆ ಗೆಲ್ಲುತ್ತಾನೆ. ಮತ್ತೆ ಅದನ್ನೇ ಮುಂದುವರೆಸುತ್ತಾನೆ. ಯಾಕೆ ಗೊತ್ತೇನು? “ಇವ ನಮ್ಮ ಜಾತಿಯವ, ಇವನಿಗೇ ನಾವು ವೋಟಾಕ್ಬೇಕು”, “ಇವ ನಮ್ಮ ಪಕ್ಷದವ, ನಮ್ಮ ವೋಟು ಇವಂಗೇ” ಅನ್ನುವ ವಿಕೃತ ಮನೋಭಾವದಿಂದ. Caste is the biggest factor. ಜಾತಿ ಅಥವಾ ಪಕ್ಷ ಎಂಬ ಸಮೂಹ ಸನ್ನಿಗಳು ಇಲ್ಲಿ ಯಾರನ್ನಾದರೂ ಎಮ್ ಎಲ್ ಎ, ಎಂಪಿಗಳನ್ನಾಗಿ ಮಾಡುತ್ತೆ. ಅನೇಕ ಕಡೆ ಭ್ರಷ್ಟನೊಬ್ಬನಿಂದ ಹಣ, ಸಾರಾಯಿ ಮುಂತಾದ “ಉಡುಗೊರೆ”ಗಳನ್ನು ತೆಗೆದುಕೊಂಡು ಮತದಾರಪ್ರಭುವೇ ಸ್ವತಃ ಭ್ರಷ್ಟನಾಗಿ ಸಂವಿಧಾನ ಕೊಟ್ಟ ಅತ್ಯುತ್ಕೃಷ್ಟ ಹಕ್ಕನ್ನೇ ಮಾರಿಕೊಂಡುಬಿಡುತ್ತಾನೆ. ಕ್ಷಣಿಕ ಸುಖಕ್ಕಾಗಿ, ಸ್ವಾರ್ಥಕ್ಕಾಗಿ, ಅಲಸಂತೃಪ್ತಿಗಾಗಿ ತಾನೇ ಹಳ್ಳ ತೋಡಿಕೊಂಡು ತಾನೇ ಬಿದ್ದುಬಿಡುತ್ತಾನೆ. This is finally, a democracy u know. “By The People, For The  people, of the people”!!

  ನೀವು ಬೆಂಗಳೂರಿಗರಾಗಿದ್ದರೆ, ನಿಮಗೆ ಇನ್ನೊಂದು ಅನುಭವವಾಗಿರುತ್ತೆ. ನೀವು ಒಂದು ಬಿಎಮ್ಟಿಸಿ ಬಸ್ಸು ಹತ್ತಿ ಒಂದು ಅಲ್ಲೇ ಹತ್ತಿರದ ಸ್ಟಾಪ್’ನಲ್ಲಿ ಇಳಿಯುವವರಿದ್ದೀರಿ. ಐದು ರುಪಾಯ್ ಟಿಕೆಟ್. ಕಂಡಕ್ಟರ್ ಒಮ್ಮೊಮ್ಮೆ ನಾಲ್ಕು ರೂಪಾಯಿಯನ್ನೋ, ಕೆಲವೊಮ್ಮೆ ಪೂರ್ತಿ ಐದು ರುಪಾಯಿಯನ್ನೋ ಇಸಿದುಕೊಳ್ಳುತ್ತಾನೆ. ಆದರೆ ಟಿಕೆಟ್ ಕೊಡುವುದಿಲ್ಲ. ನಾವು ಕೇಳುವುದಿಲ್ಲ. ಜೇಬಿಗೆ ಪೋಯಾ! ಈ ದೇಶ ಮೊದಲಿಂದಲೂ ಎಂಥ ಕರುಣಾಜನಕ ಸ್ಥಿತಿಯಲ್ಲಿದೆ ಅಂದರೆ, ಡೆತ್ ಸರ್ಟಿಫಿಕೇಟ್ ಮಾಡುವ ಪ್ರೊಸೀಜರ್’ಗಳಲ್ಲೂ ತಹಶೀಲ್ದಾರನಿಗೆ ಗಿಂಬಳ ಕೊಡಬೇಕು. ಇನ್ನು ಟ್ರಾಫಿಕ್ ಪೋಲಿಸ್, ಸಾದಾ ಪೋಲಿಸ್’ಗಳ ಬಗ್ಗೆ ಮಾತನಾಡುವುದು ಬೇಡ ಬಿಡಿ, ಎಲ್ಲರಿಗೂ ಗೊತ್ತೇ ಇದೆ. ಡಿಸಿಗಳ ಬಗ್ಗೆ ಏನಾದ್ರೂ ಹೇಳ್ಬೇಕಾ? ಅವೆಲ್ಲಾ ಬಿಡ್ರಿ, ಇವತ್ತು ಎಷ್ಟು ಅಂಗಡಿ ಮಾಲೀಕರು, ಎಷ್ಟು ಬ್ಯುಸಿನೆಸ್ ಮ್ಯಾನ್’ಗಳು ಸರಿಯಾಗಿ ತೆರಿಗೆ ಪಾವತಿಸುತ್ತಾರೆ?

 ಮೊನ್ನೆ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಎರಡೆರಡು ಬಾರಿ ಲೀಕ್ ಆದಾಗ, ನಮ್ಮ ಪ್ರಾಮಾಣಿಕತೆಯ ಮಟ್ಟದ ಬಗ್ಗೆ ಚಿಂತೆ ತಲೆಯನ್ನೆಲ್ಲ ಕೊರೆದುಹಾಕಿಬಿಟ್ಟಿತು. “ಸರ್ಕಾರವೊಂದೇ ಸರಿಯಿದ್ದರೆ ಸಾಕಾಗುವುದಿಲ್ಲ” ಎಂಬುದು ಶೀರ್ಷಿಕೆ, “ಸರ್ಕಾರ ಸರಿಯಿದೆ” ಅಂತ ಅಲ್ಲ! ಇದು ಸರ್ಕಾರವನ್ನು ಸಮರ್ಥಿಸುವ ಬರಹವಲ್ಲ, ನಮ್ಮನ್ನು ವಿಮರ್ಶಿಸಿಕೊಳ್ಳುವ ಬರಹ. ಲೀಕ್ ಮಾಡಿದ ಆ ಜನರ ಮುಂದೆ, ಅದನ್ನು ತಡೆಯಲಾಗದ ಸರ್ಕಾರದ ಮುಂದೆ ಲಕ್ಷಾಂತರ ವಿದ್ಯಾರ್ಥಿಗಳ, ಅವರ ಪೋಷಕರ ಕನಸುಗಳನ್ನು ಸುರಿದಿಟ್ಟು ಸಾವಿರ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತಿದೆ. ತಮ್ಮ ಸ್ವಾರ್ಥಕ್ಕೋಸ್ಕರ ಯಾರದೋ ಬದುಕಿನ ಜೊತೆ ಆಟವಾಡುವುದು ಯಾವ ಪುರುಷಾರ್ಥದ ಸಾಧನೆಗೆ ಅಂತ ತಿಳಿಯಬೇಕೆನಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿಯ ಬಗ್ಗೆ, ಕೆಲವು ಅಧಿಕಾರಿಗಳ ಅಲಕ್ಷ್ಯ, ಅಪ್ರಾಮಾಣಿಕತೆಯ ಬಗ್ಗೆ ಅಸಹನೆಯ ಕಟ್ಟೆಯೊಡೆಯುತ್ತಿದೆ. ಅಪ್ರಾಮಾಣಿಕತೆಯನ್ನೇ ಊರುತುಂಬಾ ಇಟ್ಟುಕೊಂಡು ದೇಶ ಕಟ್ಟುವುದು ಹೇಗೆ? ನಾನಿಲ್ಲಿ ಬಹುಕೋಟಿ ಹಗರಣಗಳನ್ನು, ಅಂತರ್ದೇಶೀಯ ದ್ರೋಹಗಳನ್ನು ಉದಾಹರಿಸಿ ಬರೆದಿಲ್ಲ. ನಮ್ಮ ಮಧ್ಯದಲ್ಲೇ ನಡೆದುಹೋಗುತ್ತಿರುವ, ಕೆಲವೊಮ್ಮೆ ನಮ್ಮನ್ನೇ ಇಷ್ಟವಿದ್ದೋ, ಇಲ್ಲದೆಯೋ ಭಾಗಿಯಾಗಿಸಿಕೊಂಡುಬಿಡುವ ಭ್ರಷ್ಟಾಚಾರಗಳ ಬಗ್ಗೆ ನಿವೇದಿಸಿದ್ದೇನೆ. ಭ್ರಷ್ಟಾಚಾರವನ್ನು ಸಹಿಸುವುದು ಮತ್ತು ಸಹಕರಿಸುವುದು ಎರಡೂ ಅದರಷ್ಟೇ ದೊಡ್ಡ ತಪ್ಪು ಕಣ್ರೀ. “ಒಟ್ಟು ಕೆಲ್ಸ ಆದ್ರೆ ಆಯ್ತು, ನಂಗೇನಾಗ್ಬೇಕು” ಎಂಬ ಮನಸ್ಥಿತಿ ದೇಶಕ್ಕೆ ಮಾರಕ. ಅಂಥ ಮನಸ್ಥಿತಿಯ ಪ್ರಜೆಗಳನ್ನಿಟ್ಟುಕೊಂಡು ದೇಶವೊಂದು ಹೇಗೆ ತಾನೇ ಉದ್ಧಾರವಾದೀತು? ಯೋಚಿಸಿ.

ಪಾಶ್ಚಾತ್ಯ ದೇಶಗಳು ಇತರ ದೇಶಗಳಿಗೆ ಕೇಡು ಬಗೆದಿರಬಹುದು, ಆದರೆ ಅಲ್ಲಿಯ ಜನ ತಮ್ಮ ತಮ್ಮ ದೇಶಗಳಿಗೆ ಅದ್ಭುತ ಪ್ರಾಮಾಣಿಕರು. ಅವು ಅಷ್ಟು ಬಲಾಢ್ಯವಾಗಿರಲು ಅದು ಕಾರಣ. ಸಮಾಜದ ಚೈತನ್ಯ ವೃದ್ಧಿಯಾಗಬೇಕಾದರೆ, ಅದರಲ್ಲಿ ಪ್ರಾಮಾಣಿಕತೆಯ ಮಟ್ಟ ಏರಬೇಕು. ಇವತ್ತು ನಾವು ಅಪ್ರಾಮಾಣಿಕತೆ-ಭ್ರಷ್ಟಾಚಾರಗಳಿಗೆ ಸಹಕರಿಸಲಾರೆವು ಮತ್ತು ಸ್ವತಃ ನಾವೇ ಎಂದೂ ಅಪ್ರಾಮಾಣಿಕವಾಗಿ ಬದುಕಲಾರೆವು ಎಂದು ಶಪಥಗೈಯ್ಯೋಣ. ಬರೆದ ಅಕ್ಷರಗಳು ಸಾರ್ಥಕ್ಯ ಕಂಡಾವು. ನಮ್ಮ ಕಣ್ಣುಗಳು ಅತೀ ಶೀಘ್ರದಲ್ಲೇ ವಿಶ್ವಗುರು ಭಾರತವನ್ನು ಕಂಡಾವು!

Facebook ಕಾಮೆಂಟ್ಸ್

ಲೇಖಕರ ಕುರಿತು

Sanketh D Hegde

ವೃತ್ತಿ ವಿಜ್ಞಾನ. ಬರವಣಿಗೆ ನನ್ನ ಹವ್ಯಾಸ ಅಂತ ಹೇಳಲಾರೆ. ಅದು ನನಗೊಂದು ಆಪ್ತಮಿತ್ರ. ಪ್ರಚಲಿತ ವಿದ್ಯಮಾನಗಳು ಮತ್ತು ವಿಜ್ನಾನದ ಬಗ್ಗೆ ಬರೆಯುತ್ತೇನೆ. ಹುದ್ದೆ-ಗಿದ್ದೆ ಏನಿಲ್ಲ, ಇಂಜಿನಿಯರಿಂಗ್ (ECE) ಓದುತ್ತಿದ್ದೇನೆ. ಪ್ರಶಸ್ತಿಗಳ ಗರಿಗಳೆಲ್ಲ ಇಲ್ಲ. ಕೆಲವು ರಾಜ್ಯ, ರಾಷ್ಟ್ರಮಟ್ಟಗಳ ಸ್ಪರ್ಧೆ, ಚರ್ಚೆ, ಪ್ರಬಂಧಗಳನ್ನ ಗೆದ್ದಿದ್ದೇನಷ್ಟೆ. ಇನ್ನೇನಿಲ್ಲ, ನೀವುಂಟು, ನನ್ನ ತೊದಲು ಬರಹಗಳುಂಟು. ಕನ್ನಡದ ಮೇಲಿನ ಪ್ರೀತಿ, ನನ್ನನ್ನ ಬರೆಸುತ್ತೆ!

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!