ಅಂಕಣ

ನಯನಕ್ಕೆ ತಂಪು ಹೊನೆಗೊನೆ ಸೊಪ್ಪು

ಸೆಖೆಗಾಲದ ಬಿರು ಬಿಸಿಲಿನ ತಾಪಕ್ಕೆ ದೇಹ ಆಯಾಸಗೊಳ್ಳುವುದು ಸಹಜ. ಈ ವರ್ಷ ಅದೂ ದಾಖಲೆ. ಇ೦ತಹ ಸ೦ದರ್ಭದಲ್ಲಿ ತ೦ಪಾಗಿಸಲು ಮುಖ್ಯವಾಗಿ ಕಣ್ಣಿನ ಆಯಾಸ ಪರಿಹಾರಕ್ಕೆ ನಮ್ಮ ಹಿತ್ತಲ ಗಿಡವೊ೦ದು ನೆರವಾಗಬಲ್ಲುದು.

ನೀರಿನ ತೇವಾಂಶವಿರುವ ಪ್ರದೇಶದಲ್ಲಿ ಹುಲುಸಾಗಿ ನೆಲವಿಡೀ ಹರಡಿ ಬೆಳೆಯುವ ಒಂದು ಔಷಧೀಯ ಸಸ್ಯ ಹೊನೆಗೊನೆ ಸೊಪ್ಪು. ಇದರ ಮೂಲ ಬ್ರೆಜಿಲ್ ಆಗಿದ್ದರೂ ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಕಳೆಯಾಗಿ ಕಾಣ ಸಿಗುತ್ತದೆ. ಮತ್ಸಗಂಧ, ಮತ್ಸಾದನಿ, ಗರ್ತಕಲಂಬುಕ, ನಾಡಿಲಾಯಕ, ಗಂಡಾಲಿ ಎಂದೆಲ್ಲ ಹೆಸರಿರುವ ಇದು ಕೋಲಾರದ ಕಡೆ ಮೀನು ಸೊಪ್ಪು ಎಂದು ಗುರುತಿಸಲ್ಪಟ್ಟರೆ ತಮಿಳರು ಇದನ್ನು ಪೊನ್ನಗೊನ್ನಿ (ಚರ್ಮಕ್ಕೆ ಬಂಗಾರ ಹೊಳಪು ನೀಡುವ ಗುಣ) ಎಂದು ಕರೆಯುವರು. ಅಲಂಕಾರಿಕ ಸಸ್ಯವಾಗಿಯೂ ಬೆಳೆಸುವ ಇದರ ವೈಜ್ಞಾನಿಕ ಹೆಸರು ಅಲ್ಟೆರ್ನಂತೆರಾ ಸೆಸ್ಸಿಲಿಸ್ (Alternanthera sessilis). ಆಂಗ್ಲದಲ್ಲಿ ಹೊನೆಗೊನೆಗೆ ಸೆಸೈಲ್ ಜೋಯ್ವೀಡ್ (Sessile joyweed) ಇಲ್ಲವೇ ಡ್ವಾರ್ಫ್ ಕೋಪರ್ ಲೀಫ್(Dwarf copper leaf) ಎಂದು ಹೆಸರು. ಸತ್ವಯುತ, ಪೌಷ್ಠಿಕ, ಬಹುಪಯೋಗಿ, ಎಲ್ಲೆಡೆ ದೊರೆಯುವ, ವಿಶೇಷವಾಗಿ ಕಣ್ಣಿನ ರೋಗಗಳಿಗೆ ಹೊನಗೊನ್ನೆಸೊಪ್ಪು ಸೇವನೆ ಬಹಳ ಉತ್ತಮವಾಗಿದೆ.

● ರಚನೆ

ಹೊನೆಗೊನೆಯು ನೆಲದಲ್ಲಿ ಹರಡಿ ಬೆಳೆಯುವ ಸಸ್ಯವಾಗಿದ್ದು ದುರ್ಬಲ ಕಾಂಡದ ಪ್ರತಿ ಗಿಣ್ಣಿನ ತಳ ಭಾಗದಲ್ಲಿ ಬೇರು ಬಿಡುತ್ತಾ ಅನೇಕ ಕವಲೊಡೆದು ಹಬ್ಬವುದು. ಇದರ ಎಲೆಯ ಆಕಾರ ಮೀನಿನ ಕಣ್ಣಿನಂತಿರುವುದರಿಂದ ಆಯುರ್ವೇದ ಶಾಸ್ತ್ರದಲ್ಲಿ ಇದನ್ನು ಮತ್ಸಾಕ್ಷಿ ಎನ್ನುವರು. ಶೀತ ಗುಣ ಹೊಂದಿದ ಹೊನೆಗೊನೆ ಸೊಪ್ಪು ರಕ್ತ ವಿಕಾರ ಮತ್ತು ಕುಷ್ಠರೋಗ ನಿವಾರಣಾ ಸಾಮರ್ಥ್ಯವನ್ನು ಹೊಂದಿದ್ದು ವಾತವರ್ಧಕ ಮತ್ತು ಕಫ ಪಿತ್ತ ರೋಗಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಸಾಮಾನ್ಯವಾಗಿ ಡಿಸೆಂಬರಿನಿಂದ ಮಾರ್ಚ್ ತನಕ ಕಾಂಡದಿಂದಲೆ ಹೂ ಬಿಡುವ ಈ ಸಸ್ಯದ ಹೂವುಗಳು ನೋಡಲು ಸಣ್ಣದಾಗಿ ಬಿಳಿಯ ಬಣ್ಣ ಹೊಂದಿವೆ. ಹೊನೆಗೊನೆಯು ಗುಣದಲ್ಲಿ ತಂಪಾಗಿದ್ದು ಕಣ್ಣು, ಚರ್ಮ ಹಾಗೂ ತಲೆಗೂದಲ ಅನೇಕ ಸಮಸ್ಯೆಗಳಿಗೆ ಮುಖ್ಯವಾಗಿ ಕಾಂಡ, ಎಲೆ ಹಾಗೂ ಹೂವುಗಳನ್ನು ಹಾಗೂ ಬೇರುಗಳನ್ನು ಉದರ ಸಂಬಂಧೀ ಕಾಯಿಲೆಗಳಿಗೆ ಮನೆಮದ್ದಾಗಿ ಬಳಸುತ್ತಾರೆ.

● ಮನೆ ಮದ್ದಾಗಿ ಉಪಯೋಗ

➔ ಎಲೆಗಳ ರಸದಿಂದ ಕಾಡಿಗೆ ತಯಾರಿಸಿ ಕಣ್ಣಿಗೆ ಹಚ್ಚುವುದರಿಂದ ರೆಪ್ಪೆಗಳು ನೀಳವಾಗಿ ಕಾಂತಿಯುತವಾಗಿ ಆಕರ್ಷಕವಾಗುವುವು.

➔ ಕಣ್ಣಿನ ರೋಗಗಳಿಗೆ ಮುಖ್ಯವಾಗಿ ಕಣ್ಣು ಕೆಂಪಾದಾಗ ಮನೆಮದ್ದಾಗಿ ಹೊನಗೊನೆ ಸೊಪ್ಪುಗಳನ್ನು ತುಪ್ಪದಲ್ಲಿ ಹುರಿದು ಕಟ್ಟುವರು.

➔ ನಾರಿನಂಶ ಹೆಚ್ಚಿರುವ ಇದು ಮಲಬದ್ಧತೆ ಹಾಗೂ ಮೂಲವ್ಯಾಧಿಗಳಿಗೆ ರಾಮಬಾಣವಾಗಿದೆ.

ರೋಗಿಯು ಎರಡು ಚಮಚ ತಾಜಾ ಪತ್ರದ ರಸದೊಂದಿಗೆ ಮೂಲಂಗಿ ಪತ್ರದ ರಸದೊಂದಿಗೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಲದೊಂದಿಗೆ ರಕ್ತ ಬೀಳುವುದು ನಿಲ್ಲುವುದು.

➔ ಹೊನೆಗೊನೆ ಸೊಪ್ಪು ಎದೆ ಹಾಲು ಹೆಚ್ಚಿಸಲು ಸಹಕಾರಿ.

➔ ನಾಟಿ ವೈದ್ಯರು ಹೊನೆಗೊನೆಯನ್ನು ದೇಹದ ಉಷ್ಣಾಂಶ, ಕಾಲುರಿ ಹಾಗೂ ಕಣ್ಣುರಿಗಳ ಮದ್ದಿನ ತಯಾರಿಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.

➔ ಇದರ ಎಲೆಗಳನ್ನು ತುಪ್ಪದಲ್ಲಿ ಕಾಯಿತುರಿಯೊಂದಿಗೆ ಹುರಿದು ತಿಂದರೆ ಲೈಂಗಿಕಾಸಕ್ತಿ ಹೆಚ್ಚಾಗುತ್ತದೆ.

➔ ಇದರ ಎಣ್ಣೆ ಹಾಕಿದರೆ ತಲೆ ತಂಪಾಗುವುದಲ್ಲದೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

➔ ದಕ್ಷಿಣ ಏಷ್ಯಾದ ಹೆಚ್ಚಿನ ಕಡೆ ನೇತ್ರಕ್ಕೆ ತಂಪೆರೆವ ಹೊನೆಗೊನೆ ಸೊಪ್ಪಿನ ಸಾರು ಹಾಗೂ ಪಲ್ಯಗಳನ್ನು ತಯಾರಿಸಿ ನಿತ್ಯದ ಅಡುಗೆಗೆ ಬಳಸುತ್ತಾರೆ.

➔ ಇದರ ಬೇರುಗಳ ಕಷಾಯ ಉಷ್ಣದ ಹೊಟ್ಟೆನೋವು ಹಾಗೂ ಹೊಟ್ಟೆಹುಣ್ಣಿಗೆ ಅತ್ಯುತ್ತಮ ಔಷಧಿ. ಉದರವಿಕಾರಗಳಾದ ಹುಳಿತೇಗು, ರಕ್ತಪರಚಲನೆಗೆ ಉತ್ತಮವಾಗಿದೆ.

ಕಷಾಯ ಸ್ನಾನದಿ೦ದ ಚರ್ಮದ ತುರಿಕೆ ನಿವಾರಣೆಯಾಗಿ ಕಾಂತಿ ಹೆಚ್ಚುತ್ತದೆ.

➔ ಆಯುರ್ವೇದ ಶಾಸ್ತ್ರಜ್ಞರು ಹರ್ನಿಯಾ, ಪೈಲ್ಸ್ ಮತ್ತು ಪಿತ್ತಕೋಶದ ರೋಗಗಳ ಸಿದ್ಧೌಷಧಿ ತಯಾರಿಕೆಯಲ್ಲಿ ಇದನ್ನು ಬಳಸುವರಂತೆ.

➔ ನೈಜಿರಿಯಾದಲ್ಲಿ ಹೊನೆಗೊನೆಯು ಉಷ್ಣದ ತಲೆನೋವು ಮತ್ತು ತಲೆತಿರುಗುವಿಕೆಗೆ ಮದ್ದಾಗಿ ಬಳಸಲ್ಪಡುತ್ತದೆಯಂತೆ.

➔ ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಒಣಗಿಸಿ ಪುಡಿ ಮಾಡಿ ಹಾವು ಕಚ್ಚಿದ ಗಾಯದಿಂದ ರಕ್ತ ಸೋರುವಿಕೆ ನಿಲ್ಲಲು ಬಳಸುವರಂತೆ.

➔ ಕಣ್ಣಿನ ರೋಗಗಳಾದ ಕೆಟರಾಕ್ಟ್, ಕಣ್ಣಿನ ಉರಿ, ಕಣ್ಣಿನಲ್ಲಿ ನೀರು ಸೋರುವಿಕೆ, ದೃಷ್ಟಿದೋಷಕ್ಕೆ ಪರಮೌಷಧವಾಗಿದೆ.

➔ ಎರಡು ಚಮಚ ಬೇಯಿಸಿದ ಸೊಪ್ಪಿನ ರಸವನ್ನು 45 ದಿನಗಳು ಬಳಸುವುದರಿಂದ ದೃಷ್ಟಿದೋಷ ನಿವಾರಣೆಯಾಗುತ್ತದೆ.

ಇದರ ಹೂವುಗಳಿ೦ದ ತಯಾರಿಸಿದ ಮದ್ದು ಕತ್ತಲೆ ಕುರುಡುತನ ನಿವಾರಣೆಗೆ ಬಳಸುತ್ತಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!