Featured ಅಂಕಣ

ತಾಯಿ ಭಾರತಿಗೆ ತನ್ನನ್ನು ತಾನು ಅರ್ಪಿಸಿಕೊಂಡ  ಶ್ರೇಷ್ಠ ಪುಷ್ಪ ವಿದ್ಯಾನಂದ ಶೆಣೈ

ಕನ್ನಡದ ವರನಟ ಡಾ.ರಾಜ್ ಕುಮಾರರನ್ನು ವೀರಪ್ಪನ್ ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ಕೇಳಿತರಿಸಿಕೊ೦ಡರು. ಅದರಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ  “ಭಾರತ ದರ್ಶನ” ಕ್ಯಾಸೆಟ್ಟೂ ಸಹ ಇತ್ತು. ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ. ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ ಸ೦ಘಪರಿವಾರದ ತ೦ಡ ಅವರ ಮನೆಗೆ ಭೇಟಿಕೊಟ್ಟಿತ್ತು. ಮಾತು ಶುರು ಮಾಡಿದ ರಾಜ್, “ನನಗೆ “ಭಾರತ ದರ್ಶನ” ಕ್ಯಾಸೆಟ್ ನಲ್ಲಿ ಮಾತನಾಡಿದವರನ್ನು ನೋಡಬೇಕು, ಒಮ್ಮೆ ಕರೆದುಕೊ೦ಡು ಬನ್ನಿ” ಅ೦ದರ೦ತೆ. ಅಲ್ಲೇ ಸರಳವಾಗಿ ಬಿಳಿಯ ಪೈಜಾಮ-ಜುಬ್ಬಾ ಧರಿಸಿದ್ದ ವ್ಯಕ್ತಿ ಸರಳ ನಗೆ ಬೀರುತ್ತಾ ರಾಜ್ ಅವರಿಗೆ ಕೈಮುಗಿದರು. ತಕ್ಷಣ ರಾಜಣ್ಣ ಎದ್ದು ಹೋಗಿ ಅವರಿಗೆ ನಮಸ್ಕಾರ ಹಾಕಿದರ೦ತೆ! “ನೀವು ಬಹಳ ದೊಡ್ಡವರು, ಎ೦ಥಾ ಕ೦ಠವಪ್ಪಾ, ಎಷ್ಟು ತಿಳಿದುಕೊ೦ಡಿದ್ದೀರಿ, ನೀವು ನಮ್ಮ ಮನೆಗೆ ಬ೦ದಿರುವುದು ನಮ್ಮ ಭಾಗ್ಯ, ನಿಮ್ಮನ್ನು ನೋಡಿ ಜನ್ಮ ಸಾರ್ಥಕ” ಅ೦ದರ೦ತೆ. ಹೀಗೆ ರಾಜ್ ಅವರಿಂದ ಪ್ರಶಂಸೆ ಪಡೆದವರು ಭಾರತ ದರ್ಶನ ಖ್ಯಾತಿಯಶ್ರೀ ವಿದ್ಯಾನಂದ ಶೆಣೈ.

ಭಾರತ ದರ್ಶನ ಕೇಳಿದ ಪ್ರತಿಯೊಬ್ಬರಿಗೂ ವಿದ್ಯಾನಂದ ಶೆಣೈ ಚಿರಪರಿಚಿತ. ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ‘ಭಾರತ ದರ್ಶನ’ ಎಂಬ ಚೇತೋಹಾರಿ ಉಪನ್ಯಾಸ ಮಾಲಿಕೆ ಅಸಂಖ್ಯ ಮಂದಿಗೆ ಸ್ಪೂರ್ತಿಯ ಚಿಲುಮೆಯಾಗಿ ದೇಶಭಕ್ತಿಯನ್ನು ಜಾಗೃತಗೊಳಿಸಿದೆ. ಅಂತಹ ಮಹಾನ್ ವಾಗ್ಮಿ, ಅಸಾಮಾನ್ಯ ರಾಷ್ಟ್ರ ಭಕ್ತ, ತಾಯಿ ಭಾರತಿಯ ಅರ್ಚಕ ವಿದ್ಯಾನಂದ ಶೆಣೈ ಅವರ ಬದುಕಿನ ಕುರಿತು ಬೆಳಕು ಚೆಲ್ಲುವ ಸಣ್ಣ ಪ್ರಯತ್ನವಿದು.

ವಿದ್ಯಾನಂದ ಶೆಣೈ ಅವರು ಜನಿಸಿದ್ದು 1951ರಲ್ಲಿ. ಅವರ ಹುಟ್ಟೂರು ಶಾರದಾ ಮಾತೆಯ ಸನ್ನಿಧಿಯಾದ ಶೃಂಗೇರಿ. ತಂದೆ ವೈಕುಂಠ ಶೆಣೈ ಮತ್ತು ತಾಯಿ ಶ್ರೀಮತಿ ಜಯಮ್ಮನವರು. ವೈಕುಂಠ ಶೆಣೈ ಮತ್ತು ಜಯಮ್ಮ ದಂಪತಿಗಳಿಗೆ 13 ಮಕ್ಕಳು. ವಿದ್ಯಾನಂದ ಶೆಣೈ 7ನೇ ಮಗ. ವಿದ್ಯಾನಂದರದ್ದು ಬಡ ಕುಟುಂಬ. ಅವರ ತಂದೆ ವೈಕುಂಠ ಶೆಣೈ ಬಾಳೆಹಣ್ಣಿನ ವ್ಯಾಪಾರಿಯಾಗಿದ್ದರು. ಇದರಿಂದ ಬಂದ ಆದಾಯದಿಂದಲೇ ಜೀವನ ಸಾಗಿಸಬೇಕಿತ್ತು. 13 ಮಕ್ಕಳ ಪೈಕಿ ಉಪೇಂದ್ರ ಶೆಣೈ ಹಿರಿಯರು. ಶ್ರಮಪಟ್ಟು ಅಭ್ಯಾಸ ಮಾಡಿದ ಉಪೇಂದ್ರ ಶೆಣೈ ವೈದ್ಯರಾಗಿ ಕುಟುಂಬಕ್ಕೆ ಆಸರೆಯಾಗಿದ್ದರು.ತಮ್ಮ ಕಾಲೇಜು ಶಿಕ್ಷಣವನ್ನು ಮುಗಿಸಿ ವಿದ್ಯಾನಂದರು ಬಿಕಾಂ ಪದವಿಧರರಾದರು. ವಿದ್ಯಾನಂದರು ವಿಧ್ಯಾರ್ಥಿಯಾಗಿದ್ದ ಸಮಯದಲ್ಲೇ ನಾಟಕ ಮಾಡುತ್ತಿದ್ದರು, ಶಾಲಾ-ಕಾಲೇಜಿನಲ್ಲಿ ಆಶುಭಾಷಣ ಮತ್ತು ಚರ್ಚೆಯಲ್ಲಿ ಮುಂದಿದ್ದರು. ವಿದ್ಯಾನಂದರ ಅಣ್ಣ ಉಪೇಂದ್ರ ಶೆಣೈ ಅವರಿಗೆ ಸಂಘದ ಸಂಪರ್ಕವಿತ್ತು. ಅವರು ನಿತ್ಯ ಶಾಖೆಗೆ ತೆರಳುತ್ತಿದ್ದರು. ಅಣ್ಣನನ್ನು ಆದರ್ಶವಾಗಿ ಸ್ವೀಕರಿಸಿದ್ದ ವಿದ್ಯಾನಂದರು ಸಹ ಅಣ್ಣನಂತೆಯೇ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಉಪೇಂದ್ರ ಶೆಣೈ ಅವರು ಶೃಂಗೇರಿಯಲ್ಲಿ ಪ್ರಸಿದ್ದ ವೈದ್ಯರಾಗಿದ್ದರು. ಅಪಾರ ಜನಮನ್ನಣೆ ಮತ್ತು ಹೆಸರನನ್ನೂ ಸಹ ಅವರು ಗಳಿಸಿದ್ದರು. ಆದರೂ ಉಪೇಂದ್ರ ಅವರಿಗೆ ರಾಷ್ಟ್ರ ಕಾರ್ಯಕ್ಕೆ ಅರ್ಪಿತವಾಗಬೇಕೆಂಬ ಬಯಕೆಯಿತ್ತು. ಧೃಢ ನಿರ್ಧಾರ ತೆಗೆದುಕೊಂಡ ಉಪೇಂದ್ರ ಶೆಣೈ ವೈದ್ಯಕೀಯ ವೃತ್ತಿ ತೊರೆದು ಸಂಘದ ಪ್ರಚಾರಕರಾದರು. ಕುಟುಂಬಕ್ಕೆ ಆಧಾರವಾಗಿದ್ದ ಉಪೇಂದ್ರ ಶೆಣೈ ಪ್ರಚಾರಕರಾಗಿ ತೆರಳಿದ್ದು ವಿದ್ಯಾನಂದರ ಕುಟುಂಬಕ್ಕೆ ಆಘಾತ ಉಂಟುಮಾಡಿತು. ಕುಟಂಬದ ಜವಾಬ್ದಾರಿ ವಿದ್ಯಾನಂದರ ಹೆಗಲಿಗೆ ಬಿತ್ತು. ಕುಟುಂಬಕ್ಕೆ ನೆರವಾಗಲು ವಿದ್ಯಾನಂದರು ಸ್ನೇಹಿತರ ಜೊತೆಗೂಡಿ ಟ್ಯೂಶನ್ ಆರಂಭಿಸಿದರು. ಎಲ್ಲವೂ ಸರಿಯಾಗುತ್ತಿದ್ದ ಸಂದರ್ಭದಲ್ಲಿ ವಿದ್ಯಾನಂದರಿಗೆ ಮತ್ತೊಂದು ಆಘಾತ ಕಾದಿತ್ತು. ಇಂದಿರಾಗಾಂಧಿ ಭಾರತದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದರು. ಸಂಘದ ನಾಯಕರನ್ನು ಇಂದಿರಾಗಾಂಧಿ ಜೈಲಿಗೆ ಕಳುಹಿಸಿದರು. ವಿದ್ಯಾನಂದರ ಅಣ್ಣ ಉಪೇಂದ್ರ ಶೆಣೈ ಜೈಲು ಪಾಲಾದರು. ತುರ್ತುಪರಿಸ್ಥಿತಿ ವಿದ್ಯಾನಂದರ ಜೀವನದಲ್ಲಿ ಬಹುಮುಖ್ಯ ತಿರುವು ಎಂದು ಹೇಳಬಹುದು. ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ವಿದ್ಯಾನಂದರು ಶೃಂಗೇರಿಯಲ್ಲಿ ವ್ಯಾಪಕ ಜನಾಂದೋಲನವನ್ನು ರೂಪಿಸಿ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು.ಇದೇ ಸಂದರ್ಭದಲ್ಲಿ ಜನಜಾಗೃತಿ ಮೂಡಿಸಲು ಅನೇಕ ಲೇಖನಗಳನ್ನು ಬರೆದರು. ವಿದ್ಯಾನಂದರು ಸ್ನೇಹಿತರ ಜೊತೆಗೂಡಿ ಬೀದಿಗಿಳಿದು ಸರ್ಕಾರದ ವಿರುದ್ದ ಪ್ರತಿಭಟಿಸಿ ಮೆರವಣಿಗೆ ಮಾಡಿ 18 ತಿಂಗಳು ಜೈಲು ವಾಸ ಅನುಭವಿಸಿದರು.ತುರ್ತುಪರಿಸ್ಥಿತಿಯ ನಂತರ ವಿದ್ಯಾನಂದರ ಒಲುವು ರಾಷ್ಟ್ರದ ಕಾರ್ಯದ ಕಡೆ ಹೆಚ್ಚಾಯಿತು. ವಿದ್ಯಾನಂದರನ್ನು ಸಿ.ಎ. ಅಧ್ಯಯನಕ್ಕಾಗಿ ತರಗತಿಗೆ ಸೇರಿಸಲಾಗಿತ್ತು. ಆದರೆ ವಿದ್ಯಾನಂದರಿಗೆ ಅಣ್ಣ ಉಪೇಂದ್ರರ ಹಾದಿ ಹಿಡಿಯುವ ಮನಸ್ಸಾಯಿತು. ಮನೆಯಿಂದ ಹೊರಟ ವಿದ್ಯಾನಂದರು ಪೂರ್ಣವಾಗಿ ಸಂಘ ಕಾರ್ಯಕ್ಕೆ ತನ್ನನ್ನು ಜೋಡಿಸಿಕೊಂಡರು.

ವಿದ್ಯಾನಂದರಿಗೆ ಭಾರತ ದರ್ಶನ ಮಾಡಲು ಸ್ಪೂರ್ತಿಯಾಗಿದ್ದು ಅವರ ಗುರುಸ್ವರೂಪಿಯಾದ  ದಿ. ಮಾನ್ಯ ಶ್ರೀ ನ. ಕೃಷ್ಣಪ್ಪನವರು. ವಿದ್ಯಾನಂದರು ಸಂಘಶಿಕ್ಷಾವರ್ಗದಲ್ಲಿ ಶಿಕ್ಷಾರ್ಥಿಯಾಗಿದ್ದಾಗ  ಕೃಷ್ಣಪ್ಪನವರು ದೇಶದ ವಿಶೇಷತೆ, ಸಂಸ್ಕೃತಿಯ ಮಹತ್ವ ಮತ್ತು ದೇಶದ ಶ್ರೇಷ್ಟತೆಯ ಕುರಿತು ಬೌದ್ದಿಕ್ ಮಾಡುತ್ತಿದ್ದರಂತೆ.ಇದರಿಂದ ಸ್ಪೂರ್ತಿಗೊಂಡ ವಿದ್ಯಾನಂದರು ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಮಕ್ಕಳಿಗೆ ಪಾಠ ಹೇಳುವಾಗ ಭಾರತ ದೇಶ ಪರಿಚಯ ಎಂಬ ಭಾಷಣ ಮಾಡುತ್ತಿದ್ದರು. ಇದೇ ಭಾಷಣ ಮುಂದೆ ಭಾರತ ದರ್ಶನ ವೆಂಬ ಚೇತೋಹಾರಿ ಉಪನ್ಯಾಸವಾಯಿತು. ಮುಂದೆ  ವಿದ್ಯಾನಂದರು ರಾಷ್ಟ್ರೋತ್ಥಾನ ಬಳಗದ  ಸಂಚಾಲಕರಾದ ಮೇಲೆ ಭಾರತ ದರ್ಶನ ನಾಡಿನ ಪ್ರತಿ ಮೂಲೆ ಮೂಲೆಗೂ ತಲುಪಿತು. ವಿದ್ಯಾನಂದರು ಭಾರತದ  ಭೂಪಟವನ್ನು ತೋರಿಸುತ್ತ ಭಾರತ ದರ್ಶನ ಮಾಡುತ್ತಿದ್ದರೆ ಜನ ಅವರ ಮಾತಿನ ಮೋಡಿಗೆ ಒಳಗಾಗಿ ಭಾಷಣ ಮುಗಿಯುವವರೆಗೂ ಅಲ್ಲಿಂದ ಹೋಗುತ್ತಿರಲಿಲ್ಲ. ವಿದ್ಯಾನಂದರ ಭಾರತ ದರ್ಶನ ಒಣ ಶಬ್ದಗಳ ಭಾಷಣವಾಗಿರಲಿಲ್ಲ. ಪ್ರತಿ ಶಬ್ದಕ್ಕೂ ಅವರು ಭಾವ ತುಂಬುತ್ತಿದ್ದರು. ಅವರ ಒಂದೊಂದು ಮಾತು ಹೃದಯದಿಂದ ಹೊರಹೊಮ್ಮುತ್ತಿತ್ತು. ಒಂದೇ ವಿಚಾರದ ಮೇಲೆ ಸಾವಿರಕ್ಕೂ ಹೆಚ್ಚು ಉಪನ್ಯಾಸ ಮಾಡಿದವರಲ್ಲಿ  ವಿದ್ಯಾನಂದ ಶೆಣೈ ಮೊದಲಿಗರು. ಕನ್ನಡ ಮಾತ್ರವಲ್ಲದೇ ಹಿಂದಿ ಮತ್ತು ಕೊಂಕಣಿಯಲ್ಲೂ ವಿದ್ಯಾನಂದರು ಭಾರತ ದರ್ಶನ ಉಪನ್ಯಾಸವನ್ನು ನೀಡಿದರು.

ವಿದ್ಯಾನಂದರು ಭಾರತ ದರ್ಶನವನ್ನು  ಹಿಂದಿಯಲ್ಲಿ ಆರಂಭಿಸಿದ ಮೇಲೆ ಅವರು ದೇಶಾದ್ಯಂತ ಪ್ರವಾಸ ಮಾಡಬೇಕಾಗಿ ಬಂತು. ಬಿಡುವಿಲ್ಲದ ಪ್ರವಾಸದಿಂದ ಅವರ ಅರೋಗ್ಯ ಹದಗೆಟ್ಟಿತು. ವಿದ್ಯಾನಂದರಿಗೆ  ಅಸಾಧ್ಯ ತಲೆನೋವು ಶುರುವಾಯಿತು. ಅಣ್ಣ ಉಪೇಂದ್ರ ಶೆಣೈ ವಿದ್ಯಾನಂದರನ್ನು ನಿಮ್ಹಾನ್ಸ್ ಗೆ ಕರೆದುಕೊಂಡು ಹೋದರು. ಎಲ್ಲ ಪರೀಕ್ಷೆಗಳು ಮುಗಿದ ಮೇಲೆ ಬಂದ ವರದಿ  ಆಘಾತಕಾರಿಯಾಗಿತ್ತು. ಬ್ರೈನ್ ಟ್ಯೂಮರ್! ವಿದ್ಯಾನಂದರ ತಲೆಯಲ್ಲಿ ಪಾಪಿ ಕ್ಯಾನ್ಸರ್ ಗಡ್ಡೆ ಅವರಿಗೆ ಗೊತ್ತಿಲ್ಲದೆಯೇ ಬೆಳೆದುಬಿಟ್ಟಿತ್ತು .ಚಿಕಿತ್ಸೆ ಆರಂಭವಾಯಿತು. ಕ್ಯಾನ್ಸರ್ ಗಡ್ಡೆಯನ್ನು ಕತ್ತರಿಸಿ ತೆಗೆದರೂ ಮತ್ತೇ ಬೆಳೆಯುತ್ತಿತ್ತು. ಎರಡು ಬಾರಿ ವಿದ್ಯಾನಂದರಿಗೆ ಆಪರೇಷನ್ ಮಾಡಿದರು. ಆದರೂ ಫಲಕಾರಿಯಾಗಲಿಲ್ಲ. ವಿದ್ಯಾನಂದರು 26 ಏಪ್ರಿಲ್ 2007 ರ ಬೆಳಿಗ್ಗೆ ಅಸುನೀಗಿದರು. ಸಾವರ್ಕರ್ ತಾಯಿ ಭಾರತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಪುಷ್ಪ ಎಂದು ವಿದ್ಯಾನಂದರು ಅವರ ಸಾವರ್ಕರ್ ಕುರಿತಾದ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಅವರ ಮಾತಿನಂತಯೇ ವಿದ್ಯಾನಂದ ಶೆಣೈ ತಾಯಿ ಭಾರತಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಶ್ರೇಷ್ಠ ಪುಷ್ಪ. ತಾಯಿ ಭಾರತಿಯ ಸಾರ್ಥಕ ಪೂಜಾರಿ ವಿದ್ಯಾನಂದ ಶೆಣೈ . ವಿದ್ಯಾನಂದರು ನಮ್ಮಿಂದ ದೂರವಾಗಿ ಇಂದಿಗೆ 9 ವರ್ಷಗಳು ಕಳೆದವು. ವಿದ್ಯಾನಂದರಿಗೆ ನನ್ನ ನಮನಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!