ಅಂಕಣ

ಕಗ್ಗಕೊಂದು ಹಗ್ಗ ಹೊಸೆದು

ಜೀವ ಜಡರೂಪ ಪ್ರಪಂಚವನದಾವುದೋ |

ಆವರಿಸಿಕೊಂಡುಮೊಳನೆರೆದುಮಿಹುದಂತೆ ||

ಭಾವಕೊಳಪಡದಂತೆ ಅಳತೆಗಳವಡದಂತೆ |

ಆ ವಿಶೇಷಕೆ ಮಣಿಯೊ – ಮಂಕುತಿಮ್ಮ || || ೦೨ ||

ಈ ಪ್ರಪಂಚವೆಂಬುದು ಜೀವವಿರುವ ಮತ್ತು ಜೀವವಿಲ್ಲದ ಸಜೀವ – ನಿರ್ಜೀವಗಳ ಸಮಷ್ಟಿತ ರೂಪ. ಇಲ್ಲಿ ಜೀವವಿರುವ ಕೋಟ್ಯಾನುಕೋಟಿ ಅಸ್ತಿತ್ವಗಳಿರುವಷ್ಟೆ ಸಹಜವಾಗಿ ಜೀವವಿರದ ಜಡರೂಪಿ ಅಸ್ತಿತ್ವಗಳು ಸಹಬಾಳ್ವೆ ನಡೆಸುತ್ತಿವೆ. ಇಂತಹ ಪ್ರಪಂಚವನ್ನು ಸೃಜಿಸಿದ ಅದಾವುದೊ ಮತ್ತೊಂದು ಅಸ್ತಿತ್ವವು, ಅದೇ ಪ್ರಪಂಚವನ್ನು ಆವರಿಸಿಕೊಂಡಿದೆ – ಹೊರಗಿನಿಂದ ಮತ್ತು ಒಳಗಿನಿಂದಲೂ ಸಹ. ಅದೆಂತಹ ಮಹಾನ್ ನಿರ್ಲಿಪ್ತ ಅಸ್ತಿತ್ವವೆಂದರೆ – ಜೀವಿಗಳಂತೆ ಯಾವುದೆ ಭಾವ ವಿಕಾರಗಳಿಗೊಳಗಾಗದ ನಿರ್ಭಾವುಕತೆಯುಳ್ಳದ್ದು; ಮತ್ತೊಂದೆಡೆ ಅಳತೆಗೆ ಸಿಗದ ಅನಂತ ವ್ಯಾಪ್ತಿಯುಳ್ಳದ್ದು. ಅಷ್ಟೊಂದು ಮಹಾನ್ ಶಕ್ತಿಯ ಆ ವಿಶೇಷಕ್ಕೆ ಶಂಕಿಸದೆ ಮಣಿದು ನಮಸ್ಕರಿಸೊ ಎನ್ನುತ್ತಾನೆ ಮಂಕುತಿಮ್ಮ.

ಮೇಲ್ನೋಟಕ್ಕೆ ಇದು ದೇವರೆನ್ನುವ ಅಸ್ತಿತ್ವದ ಆಳ, ಅಗಲ, ವಿಸ್ತಾರ, ವ್ಯಾಪ್ತಿಗಳನ್ನು ಹಿಡಿಯಷ್ಟು ಪದಗಳಲ್ಲಿ ಹಿಡಿದಿಡುವ ಯತ್ನವೆಂದು ಸುಲಭವಾಗಿ ಗೊತ್ತಾದರು, ಸೂಕ್ಷ್ಮಾವಲೋಕನದಲ್ಲಿ ಮೇಲ್ನೋಟಕ್ಕೆ ಕಾಣದ ಅನೇಕ ಸಂಗತಿಗಳು ಅನಾವರಣಗೊಳ್ಳುತ್ತವೆ. ಮೊದಲಿಗೆ ಜೀವ-ಜಡರೂಪಗಳ ಪ್ರಸ್ತಾಪವೆ ಮೂಲತಃ ವಿಶ್ವಸೃಷ್ಟಿಯ ಪ್ರಸ್ತಾವನೆ. ಹಾಗೆ ತಾನೇ ಸೃಜಿಸಿದ ಆ ಪ್ರಪಂಚವನ್ನು ತಾನೇ ಸುತ್ತುವರಿದು ಆವರಿಸಿಕೊಂಡಿದೆ – ಬರಿ ಹೊರಗಿಂದ ಆವರಿಸಿದ್ದು ಮಾತ್ರವಲ್ಲ, ‘ಒಳಗೂ ನೆರೆದಿದೆಯಂತೆ’ (ಒಳನೆರೆದುಮಿಹುದಂತೆ). ಅರ್ಥಾತ್ ಈ ವಿಶ್ವಸೃಷ್ಟಿಯ ಒಳ-ಹೊರಗೆಲ್ಲ (ಅಂತೆಯೇ ನಮ್ಮ ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ) ಆ ಅವ್ಯಕ್ತ ಸ್ವರೂಪವೆ ಅಸ್ತಿತ್ವದಲ್ಲಿರುವುದು. ಆ ಶಕ್ತಿ ಸ್ವರೂಪ ಎಲ್ಲೆಡೆಯು ಅಸ್ತಿತ್ವದಲ್ಲಿ ಇದೆಯೆನ್ನುವುದನ್ನು ಇಷ್ಟು ಸಂಕ್ಷಿಪ್ತವಾಗಿ, ಸೊಗಸಾಗಿ ಬೆರಳೆಣಿಕೆ ಪದಗಳ ಲಾಲಿತ್ಯದಲ್ಲಿ ಸೆರೆ ಹಿಡಿಯಲು ಬಹುಶಃ ಮಂಕುತಿಮ್ಮನಿಗಷ್ಟೆ ಸಾಧ್ಯವೇನೊ..?

ಆ ಒಳಹೊರಗೆಲ್ಲಾ ಆವರಿಸಿಕೊಂಡ ಅಸ್ತಿತ್ವವನ್ನು ಪ್ರಪಂಚದ ಯಾವುದೊ ಮತ್ತೊಂದು ಸಾಮಾನ್ಯ ಅಸ್ತಿತ್ವ ಎಂದು ಪರಿಗಣಿಸಿ ಕಡೆಗಣಿಸಲು ಸಾಧ್ಯವೆ? ಈ ವಿಶೇಷ ಒಂದೆಡೆ ಜೀವವಿರುವ ಗುಣಧರ್ಮಗಳನ್ನು ಪ್ರಕಟಪಡಿಸಿಕೊಂಡು ತನ್ನ ಅಸ್ತಿತ್ವವನ್ನು ಸಾರಿಕೊಳ್ಳುವ ಅದೇ ಹೊತ್ತಿನಲ್ಲಿ, ಮತ್ತೊಂದೆಡೆ ನಿರ್ಜೀವ ಜಡರೂಪದ ನಿರ್ಭಾವುಕತೆಯನ್ನು ತೋರಿಸಿಕೊಳ್ಳುತ್ತ, ಎರಡೂ ತಾನೆ ಆಗಿರುವ ಅಥವಾ ತನ್ನಿಂದಲೆ ಎರಡರ ಹುಟ್ಟು ಆಗಿರುವ ಸೂಕ್ಷ್ಮವನ್ನು ಪ್ರತಿಬಿಂಬಿಸುತ್ತದೆ. ಹಾಗೆಂದು ಅದನ್ನು ಜೀವ-ಜಡರೂಪಗಳ ಸಂಯುಕ್ತ ರೂಪ ಎಂದು ಕರೆಯಲೂ ಬಿಡುವುದಿಲ್ಲ. ಜೀವ-ಜಡಗಳೆರಡರಲ್ಲು ಇರದ ‘ಅಳತೆಗೆ ಸಿಗದ’ ಅನಂತತೆಯನ್ನು ಆರೋಪಿಸಿಕೊಂಡು, ಆ ಸಂಯುಕ್ತತೆಗೂ ಮಿಗಿಲಾದ ಅಲೌಕಿಕವಾಗಿಬಿಡುತ್ತದೆ. ಒಟ್ಟಾರೆ ಯಾವುದಾದರೊಂದು ಚೌಕಟ್ಟಿಗೆ ನಿರ್ಬಂಧಿಸಹೊರಟರೆ ಅಳತೆಗೆ ಸಿಗದ ವ್ಯಾಪ್ತಿಯಾಗಿಬಿಡುತ್ತದೆ.

ಇಷ್ಟೆಲ್ಲಾ ವಿಶೇಷಗಳಿರುವ ಆ ಶಕ್ತಿಗೆ ನಮಿಸುವುದರಲ್ಲೇನು ಅತಿಶಯ ? ಎಂಬುದು ಇಲ್ಲಿ ಮಂಕುತಿಮ್ಮನ ಉದ್ಗಾರದ ಇಂಗಿತ. ಅಂದಹಾಗೆ ತನ್ನ ಸೃಷ್ಟಿಯ ಒಳಹೊರಗೆಲ್ಲ ತಾನೇ ಆವರಿಸಿಕೊಂಡಿದೆ ಎನ್ನುವುದು, ತನ್ನದೇ ಸೃಷ್ಟಿಯ ಮೇಲಿನ ಅದರ ಮೋಹವನ್ನು (ಮಾಯೆಯ ಪ್ರಭಾವವನ್ನು) ಸೂಚಿಸುತ್ತದೆ. ಪರಬ್ರಹ್ಮದ ಎರಡು ರೂಪಗಳಾದ ಚೇತನಾರೂಪ (ನಿರ್ಲಿಪ್ತ ಸೃಷ್ಟಿಕ್ರಿಯೆ) ಮತ್ತು ಚಂಚಲರೂಪಗಳ (ಮಾಯೆ) ಸೂಚ್ಯ ಅಭಿವ್ಯಕ್ತಿ ಇದಿರಬೇಕೆಂಬುದು ನನ್ನ ಗ್ರಹಿಕೆ. ಅಂತೆಯೆ ಈ ಸಾಲುಗಳ ಒಳಗೆ ಅಂತರ್ಗತವಾಗಿರುವ ಆ ಅವ್ಯಕ್ತತೆಯ ವಿವರಣೆ ಪರಬ್ರಹ್ಮದ ಹೋಲಿಕೆಗೆ ತುಲನೆಯಾಗುವುದು ಕಾಕತಾಳೀಯವಾಗಿರದೆ, ಕವಿಯ ಅಂತರ್ಗತ ಅಧ್ಯಾತ್ಮ ಜ್ಞಾನ, ಜೀವನಾನುಭವದ ಮೂಸೆಯಿಂದ ಪರಿಪಕ್ವವಾಗಿ ಸರಳವಾಗಿ ಹೊಮ್ಮಿದ ರೀತಿ ಎಂದು ಹೇಳಬಹುದು.

ಆ ಆಧ್ಯಾತ್ಮದ ಆಳ-ಅಗಲಕ್ಕಿಳಿಯದ, ವೇದಶಾಸ್ತ್ರಧ್ಯಯನದಂತಹ ತತ್ವ ಪಾಂಡಿತ್ಯದ ಮೊರೆ ಹೋಗದ ಸಾಮಾನ್ಯರಿಗು ಅವರಿಗೆಟುಕುವ ಭಾಷೆ, ಸ್ತರ ಮತ್ತು ಅವರ ನಂಬಿಕೆಯ ನೆಲೆಗಟ್ಟಿನ ಚೌಕಟ್ಟಿನಲ್ಲೆ ಇಡೀ ತತ್ವದ ಸಾರವನ್ನು ಉಣಬಡಿಸಿರುವ ಅದ್ಭುತವನ್ನು ಈ ಸಾಲುಗಳಲ್ಲಿ ಕಾಣಬಹುದು.

– ನಾಗೇಶ ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!