ಅಂಕಣ

ಶ್ರೀರಾಮನೆಂಬ ಜನಪದ ನಾಯಕನನ್ನು ಅವಮಾನಿಸುವ ಪ್ರಯತ್ನದ ಹಿಂದಿನ ಹುನ್ನಾರಗಳು

ಭಾರತವೆಂದರೆ ರಾಮಾಯಣ-ಮಹಾಭಾರತ ಎನ್ನುವಷ್ಟು ಈ ಎರಡು ಮಹಾಕಾವ್ಯಗಳು ಭಾರತೀಯರ ಜೀವನದಲ್ಲಿ ಬೆರೆತುಹೋಗಿವೆ. ನೀವು ಯಾವುದೇ ಊರಿಗೆ ಹೋಗಿ, ಸೀತೆಯನ್ನು ಹುಡುಕುತ್ತಾ ಬಂದ ರಾಮ ಇಲ್ಲಿ ಕುಳಿತಿದ್ದನಂತೆ ಎಂದು ಒಂದು ಬಂಡೆಯನ್ನೋ, ನೀರು ಕುಡಿದಿದ್ದನಂತೆ ಎಂದು ಒಂದು ಸರಸ್ಸನ್ನೋ ತೋರಿಸುತ್ತಾರೆ. ಜನಪದ ಕಾವ್ಯದಲ್ಲಿ, ಹಾಡುಗಳಲ್ಲಿ ಈ ಎರಡು ಜನಪದ ಮಹಾಕಾವ್ಯಗಳು ಮತ್ತೆ ಮತ್ತೆ ಜೀವ ಪಡೆದಿವೆ. ಮೂಲ ಸಂಸ್ಕೃತದಲ್ಲಿದ್ದ ಈ ಎರಡು ಗ್ರಂಥಗಳನ್ನು ದೇಶಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ಮಹಾಕವಿಗಳು ಮತ್ತೆ ಮತ್ತೆ ಬರೆದಿದ್ದಾರೆ. ರಾಮಾಯಣವನ್ನೇ ಎಷ್ಟೊಂದು ಬಾರಿ ಬರೆಯಲಾಗಿದೆ ಎಂದರೆ, ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ರಾಶಿ ರಾಶಿಯಾದ ರಘುವರನ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎನ್ನುತ್ತಾನೆ ಕುಮಾರವ್ಯಾಸ.

ಹೀಗಿದ್ದರೂ, ಈ ಕಾವ್ಯಗಳು ಮರಳಿ ರಚನೆಯಾಗುತ್ತಲೇ ಇವೆ. ಆಧುನಿಕ ಕವಿಋಷಿ ಕುವೆಂಪು ಕೂಡಾ ಈ ಕಾವ್ಯದ ಸತ್ವವನ್ನು ಮನಗಂಡು ‘ರಾಮಾಯಣ ದರ್ಶನಂ’ ಬರೆದಿದ್ದಾರೆ. ಹೀಗೆ ಭಾರತದ ಜನಪದ ಜೀವವಾದ ರಾಮಾಯಣದ ನಾಯಕ ಶ್ರೀರಾಮನನ್ನು ಪದೇಪದೇ ಹೀಗಳೆಯುವ ಪ್ರಯತ್ನದ ಹಿಂದಿರುವ ಹುನ್ನಾರಗಳು ಸರಳವಾಗಿಲ್ಲ.

ಈ ನಾಡಿನ ಹಳ್ಳಿಗಾಡಿನ ಜನರು, ಬಡವರು ಮತ್ತು ರೈತರು ಅತೀವ ಶ್ರಮದಿಂದ ತಮ್ಮ ನಿತ್ಯದ ಬದುಕನ್ನು ಬದುಕುತ್ತಿದ್ದರೂ ಅವರ ಹೃದಯ ಶ್ರೀಮಂತಿಕೆ, ಅವರ ಸಾಂಸ್ಕೃತಿಕ ಘನತೆಗೇನೂ ಕೊರತೆಯಿಲ್ಲ. ಜೀವನದಲ್ಲಿ ಪ್ರತೀ ಸವಾಲು ಎದುರಾದಾಗಲೂ ‘ರಾಮನಿಗೂ ವನವಾಸ ತಪ್ಪಲಿಲ್ಲ’ ಎಂದುಕೊಳ್ಳುತ್ತ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಈ ನಾಡಿನ ಪ್ರತೀ ಸ್ತ್ರೀ, ಕಷ್ಟವನ್ನು ಎದುರಿಸಿದಾಗಲೆಲ್ಲಾ, ‘ಸೀತೆ, ದ್ರೌಪದಿಯಂತವರಿಗೇ ಕಷ್ಟ ತಪ್ಪಲಿಲ್ಲ ತಂಗೀ’ ಅಂದು ಸಮಾಧಾನ ಪಡಿಸುತ್ತಾರೆ ಹಿರಿಯರು. ನಾವುಗಳು ನಿರಂತರವಾಗಿ ಭೀಷ್ಮನನ್ನು, ಕರ್ಣನನ್ನು ಮತ್ತು ಲಕ್ಷ್ಮಣರಂತಹ ಪುರಾಣದ ಪಾತ್ರಗಳನ್ನು ನೆನಪಿಸಿಕೊಳ್ಳುತ್ತ, ನಮ್ಮ ಸ್ವಭಾವಗಳನ್ನು ಒರೆಹಚ್ಚಿ ತಿದ್ದಿಕೊಳ್ಳುತ್ತ ಬದುಕುತ್ತಿದ್ದೇವೆ.

ಇನ್ನು, ಪ್ರತೀ ಊರಿನಲ್ಲಿ ನಾವು ಹಳ್ಳಿಗಾಡಿನ, ಗುಡ್ಡಗಾಡಿನ ಜನರು ಮರಗಳನ್ನು, ಬಂಡೆಗಳನ್ನು, ಕೆರೆ-ಬಾವಿಗಳನ್ನು, ಸೂರ್ಯ-ಚಂದ್ರರನ್ನು ಪೂಜಿಸುತ್ತೇವೆ, ಆ ಮೂಲಕ ನಾವು ಪ್ರಕೃತಿಯೊಂದಿಗೆ, ಮಣ್ಣಿನೊಂದಿಗೆ, ನೀರಿನೊಂದಿಗೆ ಗಾಢವಾದ ಆತ್ಮಸಂಬಂಧವನ್ನು ಹೊಂದಿದ್ದೇವೆ. ಈ ಸಂಬಂಧವನ್ನು ಗಟ್ಟಿಯಾಗಿರಿಸುವಲ್ಲಿ ಈ ಜನಪದ ಮಹಾಕಾವ್ಯಗಳ ಕೊಡುಗೆ ಅತ್ಯಧಿಕ. ಈ ಹಿನ್ನೆಲೆಯೊಂದಿಗೆ ರಾಮನನ್ನು ಒಂದು ಜಾತಿಗೆ, ಧರ್ಮಕ್ಕೆ ಆರೋಪಿಸಿ ದೂಷಿಸುವ ಹಿಂದಿರುವ ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ರಾಮನನ್ನು ದೂಷಿಸುವ ಮೂಲಕ, ನಾಡಿನ ಜನಪದರು, ಹಳ್ಳಿಗಾಡಿನ ಮೂಲನಿವಾಸಿಗಳು, ರೈತರು ಮತ್ತು ಶ್ರಮಿಕರು ರಾಮಾಯಣದೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಸಡಲಿಸುವುದು ಮೊದಲ ಉದ್ದೇಶ. ಇದೇ ಪ್ರಯತ್ನ ಭಗವದ್ಗೀತೆಯನ್ನು ದೂಷಿಸುವ, ಗೀತಾಚಾರ್ಯನಾದ ಕೃಷ್ಣನನ್ನು ಹೀಗಳೆಯುವುದರ ಹಿಂದೆಯೂ ಇದೆ.

ಹಳ್ಳಿಗಾಡಿನ ಜನರ ಹೃದಯಕ್ಕೆ ನಿರಂತರವಾಗಿ ಶಕ್ತಿ ತುಂಬುತ್ತಿರುವ ಈ ಎರಡು ಕಾವ್ಯಗಳನ್ನು ಅಲ್ಲಗಳೆಯುವ ಮೂಲಕ ಜನಪದರ ಸಂಸ್ಕೃತಿಯನ್ನು, ಅವರು ನೆಲ-ಮಣ್ಣಿನೊಂದಿಗೆ ಹೊಂದಿರುವ ಆಳವಾದ ಬಂಧವನ್ನು ಅಲುಗಾಡಿಸುವುದು ಇವರ ಗುರಿ. ಇದರಿಂದ ಏನು ಪ್ರಯೋಜನ?

ಕಾಡುಗಳನ್ನು, ನದಿ-ಬಾವಿಗಳನ್ನು ಪವಿತ್ರವೆಂದು ಭಕ್ತಿ-ಗೌರವದಿಂದ ನೋಡಲು, ಆ ಮೂಲಕ ಅವುಗಳನ್ನು ಕಾಪಾಡುವ ವ್ಯವಸ್ಥೆಯನ್ನು ನಮ್ಮ ನೆಲದ ಧರ್ಮ ಮಾಡಿಕೊಟ್ಟಿದೆ. ಒಮ್ಮೆ ಹಳ್ಳಿಗಾಡಿನ ಜನರು, ರೈತರು ತಮ್ಮ ಹೊಲ-ಜಮೀನುಗಳು, ಕಾಡುಗಳು ಮತ್ತು ನದಿ-ನದಗಳೊಂದಿಗಿನ ಭಕ್ತಿಯ ಮತ್ತು ಆತ್ಮೀಯ ಬಂಧವನ್ನು ಕಳೆದುಕೊಳ್ಳುವಂತೆ ಮಾಡಿಬಿಟ್ಟರೆ, ಆಗ ಅವರ ಜಮೀನುಗಳು ಕೇವಲ ಸಾವಿರ-ಲಕ್ಷ ಬೆಲೆಯ ಸರಕುಗಳಾಗುತ್ತವೆ. ಆಗ ಆ ಜಮೀನುಗಳನ್ನು ಹಣದಾಸೆ ತೋರಿಸಿ ಮಾರಿಸುವುದು ಸರಳ. ಕೆರೆಗಳನ್ನು ಅತಿಕ್ರಮಿಸುವುದು, ನದಿ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದು ಸುಲಭ.

ಇಷ್ಟೇ ಅಲ್ಲ, ಒಂದು ಮಹಾಪರಂಪರೆಯ ಆಸರೆಯನ್ನು, ಅದರ ಮಾರ್ಗದರ್ಶನವನ್ನು ಹೃದಯದಲ್ಲಿಟ್ಟುಕೊಂಡು ಜೀವಿಸುತ್ತಿರುವ ಈ ಜನರ ಮನಸ್ಸಿನಲ್ಲಿ ಒಮ್ಮೆ ಶಂಕೆಯನ್ನು ತುಂಬಿ ತನ್ನ ಭೂಮಿ, ತನ್ನ ಪರಂಪರೆ ಮತ್ತು ಭಾರತೀಯತೆಯನ್ನು ಕಳೆದುಕೊಳ್ಳುವಂತೆ ಮಾಡಿಬಿಟ್ಟರೆ, ಇನ್ಯಾರನ್ನೋ ಶತ್ರುಗಳನ್ನಾಗಿ ತೋರಿಸಿಬಿಟ್ಟರೆ ಆಗ ಅವರನ್ನು ಒಗ್ಗೂಡಿಸುವುದು, ಓಟ್ ಬ್ಯಾಂಕ್ ಆಗಿ ಪರಿವರ್ತಿಸುವುದು ಸುಲಭ. ಅಲ್ಲವೇ?

ನೋಡಿ, ಎಷ್ಟು ಸೂಕ್ಷ್ಮವಾಗಿ ಈ ಹುನ್ನಾರಗಳು ತೆರೆದುಕೊಳ್ಳುತ್ತಿವೆ. ರಾಮನನ್ನು ಬೈಯ್ಯಲಾಯಿತು, ನಂತರ ಭಗವದ್ಗೀತೆಯನ್ನು ದೂಷಿಸಲಾಯಿತು. ಅಷ್ಟರಲ್ಲೇ ಜನಪದರ ಜನನಿಯಾದ ದುರ್ಗೆಯನ್ನು ಅವಮಾನಿಸುವ ಕೆಲಸವೂ ನಡೆಯಿತು. ಅದರ ನಂತರ ಪ್ರಜಾಪೀಡಕ ರಾಜನಾಗಿದ್ದ ಮಹಿಷಾಸುರನನ್ನು ಮೂಲಪುರುಷನೆಂದು ಹೇಳಿ ಪೂಜಿಸುವ ಕೆಲಸವನ್ನೂ ಮಾಡಿದರು.

ಮೂಲನಿವಾಸಿಗಳ ಮೂಲ ಪುರುಷ

ಒಮ್ಮೆ ಯೋಚಿಸಿ, ನಿಜಕ್ಕೂ ಈ ನಾಡಿನ ಮೂಲನಿವಾಸಿಗಳ ಮೂಲ ಪುರುಷ ಯಾರು? ನಮ್ಮ ನಾಗರೀಕತೆಯ ಮೂಲದಿಂದಲೇ ನಾವು ಪೂಜಿಸಿಕೊಂಡು ಬಂದ ಪಶುಪತಿನಾಥನೇ ಅಲ್ಲವೇ? ನಮ್ಮ ಜೀವನಾಧಾರವಾಗಿದ್ದ ಪಶುಗಳನ್ನು ಕಾಯ್ದ ಶಿವನೇ ಅಲ್ಲವೇ? ಈ ನಾಮರೂಪಗಳಿಗೆ ಅತೀತನಾದ ಪಶುಪತಿನಾಥನನ್ನೇ ಅಖಂಡ ಭಾರತದ ಉದ್ದಗಲಕ್ಕೂ ಜಾತಿ, ಮತಗಳ ಬೇಧವಿಲ್ಲದೇ ಲಿಂಗರೂಪದಲ್ಲಿ ಪೂಜಿಸಲಾಗುತ್ತಿದೆ. ಈ ಪಶುಪತಿನಾಥನನ್ನೇ ಬಸವಾದಿ ಶರಣರು ಆತ್ಮಲಿಂಗ ರೂಪದಲ್ಲಿ, ತಮ್ಮದೇ ಆದ ಆರಾಧ್ಯದೈವದ ಹೆಸರಿಟ್ಟುಕೊಂಡು ಪೂಜಿಸಿದರು – ಬಸವಣ್ಣನವರು ಕೂಡಲಸಂಗಮದೇವ ಎಂದರೆ, ಸಂಕವ್ವೆ ನಿರ್ಲಜ್ಜೇಶ್ವರ, ಶರೀಫರು ಶಿಶುನಾಳದೀಶ ಎಂದು ಕರೆದರು.

ಬಸವಣ್ಣನವರು ಬೇರೆಬೇರೆ ಜಾತಿ-ಮತಗಳ ಹೆಸರಿನಲ್ಲಿ ಛಿದ್ರವಾಗಿದ್ದ ಜನರನ್ನು ಶಿವನ ಹೆಸರಿನಲ್ಲಿ ಒಂದುಗೂಡಿಸಿದರು. ಮಾತುಮಾತಿಗೆ ಬುದ್ಧ-ಬಸವರನ್ನು ಮುಂಚೂಣಿಗೆ ತರುವ ಈ ಜನರು ಯಾವತ್ತಾದರೂ ಶಿವನ ಹೆಸರು ಹೇಳಿದ್ದು ನೀವು ಕೇಳಿದ್ದೀರಾ? ರಾಮನನ್ನು, ಕೃಷ್ಣನನ್ನ ಮತ್ತು ದುರ್ಗೆಯನ್ನು ನಿಂದಿಸಿದ ಈ ಜನರು ನಿಧಾನವಾಗಿ ಬಸವಣ್ಣನವರು ಪೂಜಿಸಿದ ಶಿವನನ್ನೂ ನಾಳೆ ನಿಂದಿಸಿದರೆ ಅಚ್ಚರಿಯಲ್ಲ.

ನಾವು ಹಳ್ಳಿಗಾಡಿನ, ಗುಡ್ಡಗಾಡಿನ ಜನರು ಮುಂಜಾನೆ ಏಳುತ್ತಿದ್ದಂತೆ ’ಶಿವಾಯ ನಮಃ’ ಅನ್ನುತ್ತಲೇ ಏಳುತ್ತೇವೆ, ರಾತ್ರಿ ಮಲಗುವಾಗಲೂ ನಮ್ಮ ಕೊನೆಯ ಉಚ್ಚಾರ ಅದೇ ಆಗಿರುತ್ತದೆ. ಆದರೆ ಬಸವಣ್ಣನವರ ಹೆಸರು ಹೇಳಿಕೊಂಡೇ ಜನರನ್ನು ಜಾತಿ-ಮತಗಳ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸುತ್ತಿರುವ ಈ ಜನರು ಯಾವತ್ತಾದರೂ ಶಿವಪೂಜೆಯೊಂದಿಗೆ ತಮ್ಮ ಕಾರ್ಯಕ್ರಮವನ್ನು, ಹೋರಾಟವನ್ನು ಮಾಡಿದ್ದನ್ನು ನೀವು ನೋಡಿದ್ದೀರಾ? ಯಾವುದೇ ಕ್ರಾಂತಿಯಿರಲಿ, ಕೂಡಲ ಸಂಗಮದೇವನೇ ಇಲ್ಲದಿದ್ದಲ್ಲಿ ಬಸವಣ್ಣನವರು ಯಾಕೆ ಇರುತ್ತಾರೆ? ಶಿವನನ್ನು ಹೊರಗಿಡುವುದು ಇಡೀ ಶರಣ ಸಂಸ್ಕೃತಿಯನ್ನು ಹೊರಗಿಡುವ ಪ್ರಯತ್ನವೇ ಅಲ್ಲವೇ?

ಶಿವಪುರಾಣಗಳು, ಭಕ್ತಿ ಕಥೆಗಳ ಹೊರತಾಗಿ ಶಿವ ಪ್ರಣೀತವಾದ ವಿಭಿನ್ನ ಆಧ್ಯಾತ್ಮಿಕ ಪರಂಪರೆಗಳಿವೆ. ಮತ್ಸೇಂದ್ರನಾಥನೆಂಬ ಯೋಗಿ ಶಿವನಿಂದಲೇ ನೇರವಾಗಿ ಜ್ಞಾನ ಪಡೆದು ನಾಥಪಂಥಕ್ಕೆ ನಾಂದಿ ಹಾಡಿದ. ನಿಮಗೆ ಗೊತ್ತೇ, ಶಿವ ನೀಡಿದ ತಾಂತ್ರಿಕ ಮಾರ್ಗವೊಂದನ್ನು ಪ್ರಯೋಗಿಸಿಯೇ ಗೌತಮ ಸಿದ್ದಾರ್ಥ ಬುದ್ಧತ್ವವನ್ನು ಕಂಡುಕೊಂಡಿದ್ದು. ಹೀಗೆ ಶಿವ ನಮ್ಮ ಮೂಲ ದೈವ. ಬಸವಣ್ಣನವರು ತೋರಿಸಿದ ಮಾರ್ಗದಲ್ಲಿ ನಡೆಯುತ್ತಿರುವ ನಾಡಿನ ಜನರಾದ ನಾವೆಲ್ಲ ಶಿವನ ಹೆಸರಿನಲ್ಲಿ ಒಂದಾಗಿದ್ದೇವೆ. ಆದರೆ ಬಸವಣ್ಣನವರ ಹೆಸರು ಹೇಳಿಕೊಂಡೇ ಅವರ ಆಶಯವನ್ನು ಹಾಳುಗೆಡಹುತ್ತ, ನಾಡಿನ ಜನರನ್ನು ಹೀಗೆ ಅನಾಥರನ್ನಾಗಿ ಮಾಡುವ, ಅವರ ಮೂಲಸಂಸ್ಕೃತಿಯನ್ನು, ಮಣ್ಣಿನೊಂದಿಗೆ ಹೊಂದಿರುವ ಸಂಬಂಧವನ್ನು ಮುರಿದುಹಾಕುವ ಇಂತಹ ಪ್ರಯತ್ನಗಳನ್ನು ನಾಡಿನ ಜನಪರ ನಾಯಕರು, ಜನಪದ ವಿದ್ವಾಂಸರು ಮತ್ತು ರೈತ ಮುಖಂಡರು ಖಂಡಿಸದೇ ಇರುವುದು ದುರಂತ.

ಬಸವ ಪ್ರಣೀತವಾದ ಶರಣ ಸಂಸ್ಕೃತಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಇದನ್ನು ಹಾಳುಗೆಡಹುವ ಹುನ್ನಾರಗಳ ಕುರಿತು ನಾವೆಲ್ಲ ಎಚ್ಚರದಿಂದ ಹಾಗೂ ಒಗ್ಗಟ್ಟಿನಿಂದ ಇರಬೇಕಾದುದು ಇಂದಿನ ಅನಿವಾರ್ಯತೆ.

– ರಾಘವ ಮೈತ್ರೇಯ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!