ಅಂಕಣ

ವಂದೇ ಗೋ ಮಾತರಂ

ನಮ್ಮ, ಕರಾವಳಿಗರ ತಾಯಿಯಂತಿರುವ ‘ಮಲೆನಾಡ ಗಿಡ್ಡ’ ತಳಿ ನಮ್ಮ ಒಂದು ಹೆಮ್ಮೆಯೆಂದೇ ಹೇಳಬಹುದು. ಹೆಸರೇ ಹೇಳುವಂತೆ ಇದೊಂದು ಮಲೆನಾಡು ಹಾಗೂ ಕರಾವಳಿ ಕರ್ನಾಟಕ ಮೂಲದ ಗಿಡ್ಡ ಜಾತಿಯ ಹಸು. ಗುಡ್ಡಗಾಡುಗಳಲ್ಲಿ ಮೇಯುವ ಈ ತಳಿಯ ಹಾಲಿನಲ್ಲಿ ಎ-2ಕೆಸಿನ್ ಅಧಿಕವಾಗಿದ್ದು ವಿಶ್ವದಲ್ಲೇ ಕಡಿಮೆ ಕೊಲಿಸ್ಟ್ರಾಲ್ ಅಂಶವನ್ನು ಹೊಂದಿದ ಹಾಲಾಗಿದೆ. ಸಾಮಾನ್ಯವಾಗಿ ಕಪ್ಪು, ಕಂದುಗೆಂಪು, ಕಪ್ಪು-ಬಿಳಿ ಮಿಶ್ರಿತ ಬಣ್ಣಗಳಲ್ಲಿ ಕಾಣ ಸಿಗುವ ಈ ತಳಿಯ ಹಸು ಅನೇಕ ಆಧುನಿಕ ಗೋತಳಿಗಳ ಮೂಲ. ಸುಮಾರು 2000 ವರ್ಷಗಳಿಂದ ಪಶ್ಚಿಮ ಘಟ್ಟಗಳ ರೈತನ ಒಡನಾಡಿಯಾಗಿರುವ ಈ ಹಸು ಅತ್ಯಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಕೇವಲ 100-120kg ತೂಗುವ ಶುದ್ಧ ಮಲೆನಾಡು ಗಿಡ್ಡ ತಳಿಯ ದನಗಳ ವಾರ್ಷಿಕ ಹಾಲು ಉತ್ಪತ್ತಿ 2.5kg. ಸರಾಸರಿ 5.95kg ಹಾಲು ನೀಡುವ 500kg ತೂಗುವ ಮಿಶ್ರ ತಳಿಗಳಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚು.

ಔಷಧೀಯ ಗುಣಗಳುಳ್ಳ ಮಲೆನಾಡ ಗಿಡ್ಡದ ಹಾಲು, ಗೋಮೂತ್ರ, ಗೋಮಯ ಮುಂತಾದ ಗವ್ಯೋತ್ಪನ್ನಗಳ ಬಳಕೆಯೂ ನಮ್ಮ ಬುದ್ದಿ ಶಕ್ತಿ ಬೆಳವಣಿಗೆಯ ಕಾರಣಗಳಲ್ಲೊಂದು. ಆದರೆ ಅತ್ಯುತ್ಕೃಷ್ಟವಾದ, ಹವ್ಯಕರ ಜೀವನಾಡಿಯಂತಿದ್ದ ಕೇವಲ ಪಶ್ಚಿಮಘಟ್ಟಕ್ಕೆ ಸೀಮಿತವಾದ ಈ ಮಲೆನಾಡು ಗಿಡ್ಡದ ಶುದ್ಧ ದೇಸೀಯ ತಳಿ ಅಳಿವಿನ ಅಂಚಿನಲ್ಲಿದೆ ಎನ್ನುವುದು ಕಟುವಾದರೂ ವಾಸ್ತವ. ಅರಣ್ಯಭೂಮಿಗಳಲ್ಲಿ ದನದ ಮೇವಿಗೆ ಅವಕಾಶವಿಲ್ಲದಿರುವುದು, ಬೇರೆ ಬೇರೆ ಉದ್ದೇಶಗಳಿಗೆ ಗೋಮಾಳಗಳ ಬಳಕೆ, ಕಸಾಯಿಖಾನೆಗಳ ಹಾವಳಿ, ಕೃಷಿಯಲ್ಲಿ ಯಂತ್ರಗಳ ಬಳಕೆ, ಉತ್ತಮ ಬೀಜಗಳ ಹೋರಿ ಸಿಗದಿರುವುದು, ಜೆರ್ಸಿ ಮುಂತಾದ ಅಧಿಕ ಹಾಲು ನೀಡುವ ಮಿಶ್ರತಳಿಗಳ ಮೇಲಿನ ಒಲವು, ಹೊಸ ಪೀಳಿಗೆಯವರಲ್ಲಿರುವ ನಿರ್ಲಕ್ಷ್ಯ ಭಾವನೆ ಇವೇ ಮೊದಲಾದ ಕಾರಣಗಳಿಂದಾಗಿ ಮಲೆನಾಡು ಗಿಡ್ಡದ ಸಂತತಿ ಕ್ಷೀಣಿಸಿದೆ.

NDRIನಲ್ಲಿ ಡಾ||ಸತೀಶ ಕುಲಕರ್ಣಿ ಅವರ ನೇತೃತ್ವದಲ್ಲಿ ಮಲೆನಾಡು ಗಿಡ್ಡ ಹಸುಗಳು 8-9ಲೀ. ಹಾಲು ನೀಡುವ ಜ್ಞಾನ, ದನ ಸಾಕಣೆ ಮಾಡುವವರಿಗೆ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ಧ ಮಲೆನಾಡು ಗಿಡ್ಡದ ಹಾಲಿಗೆ 70ರೂ. ಹಾಗೂ ಪ್ರತಿ kg. ತುಪ್ಪಕ್ಕೆ1000ರೂ.ಗಳಷ್ಟು ಮೌಲ್ಯವಿದೆ. ಪಶ್ಚಿಮ ಘಟ್ಟ ಕಾರ್ಯಪಡೆ ನೀಡಿದ ಸಲಹೆಯನ್ನು ಪರಿಗಣಿಸಿ ಮಲೆನಾಡು ಗಿಡ್ಡ ತಳಿ ಸಂಶೋಧನೆಗೆ ರಾಜ್ಯ ಸರ್ಕಾರ ಗಮನಹರಿಸಿದೆ. ಅನ್ಯ ದೇಶಗಳಿಂದ ಈ ಅತ್ಯುತ್ಕೃಷ್ಟ ತಳಿಯ ಜೈವಿಕ ಕಳವಾಗದಂತೆ ಕಾಪಾಡುವ ಹೊಣೆ ಸರಕಾರ,ಸಂಶೋಧಕರು ಹಾಗೂ ರೈತರ ಮೇಲಿದೆ ಎನ್ನುವುದು ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೇಸರ ರವರ ಅಭಿಮತ.

ಮಲೆನಾಡು ಗಿಡ್ಡದ ರಕ್ಷಣೆಯು ಕರಾವಳಿಗರ ಕೈಯಿಂದಲೇ ಸಾಧ್ಯ. ನಮ್ಮ ಮೇಲೊಂದು ಆಶಾಕಿರಣವನ್ನು ಹೊಂದಿ ಈ ತಳಿ ಕಾಯುತಲಿದೆ ರಕ್ಷಣೆಗಾಗಯ ಓಗೊಡುತ್ತಾ…

ಅಳಿವಿನಂಚಿನಲ್ಲಿರುವ ಇನ್ನೊಂದು ಶುದ್ಧ ಭಾರತೀಯ ತಳಿಯ ಮೂಲ ಕೇರಳದ ಕೊಟ್ಟಾಯಮ್ ಜಿಲ್ಲೆಯ ವೈಕಂ ಎಂಬ ಪುಟ್ಟಹಳ್ಳಿ. ಭಾರತ ಉಪಖಂಡದ ಈ ಕೊನೆಯ ಊರು ಅತಿಯಾದ ಮಳೆಗೆ, ಅಷ್ಟೇ ಸೆಖೆಗೆ ಪ್ರಸಿದ್ಧ. ಇಲ್ಲಿನ ಮುಖ್ಯ ಸಾರಿಗೆ ದೋಣಿ. ಮೇಯಲು ದನಗಳು ದೋಣಿಯಲ್ಲಿ ಹೊಗಬೇಕಾದ ಪರಿಸ್ಥಿತಿ! ಹೀಗಾಗಿ ಒಂದು ಪುಟ್ಟ ತಳಿಯ ಅನ್ವೇಷಣೆ ಪ್ರಾರಂಭವಾಗಿ ಅಂತಿಮವಾಗಿ ಸಿಕ್ಕಿದ್ದು ವೇಚೂರ್.

ವೇಚೂರು ಎಂಬುದು ಜಗತ್ತಿನ ಅತ್ಯಂತ ಗಿಡ್ದ ಹಸುತಳಿ. ಆಕಾರದಲ್ಲಿ ವೆಚೂರ್ ಚಿಕ್ಕದಾದರೂ ಶಕ್ತಿಯಲ್ಲಿ ಮಾತ್ರ ಇದು ಇನ್ನಾವುದೇ ಕೆಲಸಗಾರ ತಳಿಯೊಂದಿಗೂ ಸಮ ಗೌರವ ಪಡೆಯಬಲ್ಲಂತಹದ್ದು. ಅತ್ಯಂತ ಪುಟ್ಟ ತಳಿ, ಕಡಿಮೆ ಆಹಾರದ ಅವಶ್ಯಕತೆ, ಯಾವುದೇ ಹವಾಗುಣಕ್ಕೂ ಹೊಂದಿಕೊಳ್ಳಬಲ್ಲ ಸಹಿಷ್ಣುತೆ, ಅಪರೂಪದ ರೋಗ ನಿರೋಧಕ ಶಕ್ತಿ, ಚರ್ಮದಲ್ಲಿನ ಕೀಟನಿರೋಧಕತೆ ಇತ್ಯಾದಿಗಳು ವೇಚೂರು ತಳಿಯ ಉತ್ಪ್ರೇಕ್ಷೆಯಲ್ಲದ ಗುಣಾವಳಿಗಳು.

ಉದ್ದ ಬಾಲ, ನಮ್ಮ ಮಲೆನಾಡು ಗಿಡ್ಡ ತಳಿಗಿಂತ ಚಿಕ್ಕದಾದ ಬಲಿಷ್ಟ ಕೋಡು, ಕೆಂಬಣ್ಣ, ೮೦ರಿಂದ ನೂರು ಅಂಗುಲದಷ್ಟುಎತ್ತರ ಇತ್ಯಾದಿ ಇತ್ಯಾದಿ ವೇಚೂರಿನ ದೈಹಿಕ ಲಕ್ಷಣಗಳು. ವೇಚೂರ್ ತಳಿಯ ಹಾಲಿನಲ್ಲಿರುವ ಔಷಧೀಯ ಗುಣಗಳು ವಿಶೇಷವಾಗಿವೆ. ಅನೇಕ ಖಾಯಿಲೆಗಳಿಗೆ ವೇಚೂರಿನ ಹಾಲನ್ನು ಕೇರಳದ ಪರಂಪರಾಗತ ಆಯುರ್ವೇದ ವೈದ್ಯರು ಸಲಹೆ ಮಾಡುತ್ತಾರೆ. ಇದರ ಪ್ರಸಿದ್ಧಿ ಎಷ್ಟೆಂದರೆ, ತಿರುವಾಂಕೂರಿನ ಶ್ರೀಮನ್ಮಾಹಾರಾಜ ಬಲರಾಮ ವರ್ಮನಿಗೆ ಆಸ್ಥಾನವೈದ್ಯರು ಕಪ್ಪು ವೇಚೂರಿನ ಹಾಲು ಕುಡಿಯಲು ಸೂಚಿಸಿದರೆಂದೂ, ಅದಕ್ಕಾಗಿ ಭಟರು ವೇಚೂರ್ ತಳಿಗಳನ್ನು ಕೊಂಡೊಯ್ಯಲು ತಿರುವಾಂಕೂರಿನಿಂದ ಹುಡುಕುತ್ತಾ ಬಂದರೆಂದು The state Manual of Travancoreನಲ್ಲಿ ಉಲ್ಲೇಖಿಸಿಲಾಗಿದೆ.

೧೯೫೦ರಲ್ಲಿ ಕೇರಳ ಸರ್ಕಾರ ದೂರದರ್ಶಿತ್ವವಿಲ್ಲದ ತಳಿ ಅಭಿವೃದ್ಧಿ ನೀತಿಯೊಂದನ್ನು ಜಾರಿಗೆ ತಂದಾಗಿನಿಂದ ಈ ತಳಿಗಳಿಗೆ ತೊಂದರೆ ಆರಂಭವಾಯಿತು. ಅನಂತರದ ಕೇರಳ ಹೈನುಗಾರಿಕಾ ಕಾಯಿದೆ ೧೯೬೧ರ ಪ್ರಕಾರ ಯಾರೊಬ್ಬರೂ ಬೀಜದ ಹೋರಿಯನ್ನು ಪರವಾನಿಗೆ ಇಲ್ಲದೇಸಾಕುವಂತಿಲ್ಲ. ಈ ಖಾಯಿದೆ ವೇಚೂರ್ ಸೇರಿದಂತೆ ಅಪರೂಪದ ಎಲ್ಲ ದೇಶಿಯ ತಳಿಗಳಿಗೆ ಮಾರಕವಾಯಿತು. ಅದೃಷ್ಟವಶಾತ್ ಆ ಕಾಯಿದೆಯಿಂದ ದೇವಸ್ಥಾನದ ಹೋರಿಗಳನ್ನು ಹೊರಗಿಡಲಾಗಿತ್ತು. ಹಾಗೆ ಉಳಿದುಕೊಂಡ ವೈಕಂನ ಶಿವ ದೇವಾಲಯದ ಹೋರಿಗಳೇ ಇಂದುವೇಚೂರ್ ತಳಿ ಸಂಪೂರ್ಣ ನಾಶವಾಗದಂತೆ ಉಳಿಸುವಲ್ಲಿ ಮಹತ್ತರ ಪಾತ್ರವಹಿಸುವಂತಾಯಿತು. ಕೇರಳ ಕೃಷಿ ವಿಶ್ವವಿದ್ಯಾನಿಲಯದ ಹೈನುಗಾರಿಗೆ ವಿಭಾಗದ ಡಾ|| ಸೋಸಮ್ಮ ಲೈಪೆ ವೇಚೂರ್ ತಳಿ ಸಂರಕ್ಷಿಸುವಲ್ಲಿ ಒಂದು ಅಭಿಯಾನವನ್ನೇ ಕೈಗೊಂಡಿದ್ದಾರೆ. Vechur conservation trustನ ಮೂಲಕ ಜಗತ್ತಿನ ಗಮನವನ್ನು ವೆಚೂರಿನತ್ತ ಸೆಳೆಯಲು ಯಶಸ್ವಿಯಾಗಿದ್ದಾರೆ ಕೂಡ.

ಅಪರೂಪದ ಔಷಧೀಯ ಗುಣಗಳನ್ನು ಹೊಂದಿದ ವೇಚೂರ್, ಇಂದು ತನ್ನ ವಿನಾಶಗೀತೆಯ ಕೊನೆಯ ಚರಣಗಳನ್ನು ಹಾಡುತ್ತಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದ ವೇಚೂರ್ ತಳಿಗಳ ಇಂದಿನ ಸಂಖ್ಯೆ ಕೇವಲ ೯೦-೧೦೦ ಅಷ್ಟೆ! ಇದರೊಂದಿಗೆ ವೇಚೂರ್ ತಳಿಗಳ ಹಾಲಿನಅಪೂರ್ವವಾದ ಔಷಧೀಯ ಗುಣಗಳು ಹಾಗು ಅವುಗಳ ಬಳಕೆಯ ಕುರಿತಾದ ಮಾಹಿತಿಗಳೂ ಸಹ ಮರೆವಿನ ಪರದೆಯ ಹಿಂದೆ ಸರಿದಿವೆ. ತೆರೆಯ ಮರೆಗೆ ಸರಿಯುತ್ತಿರುವ ಈ ತಳಿಗಳು ಮುಂದೊಂದು ದಿನ ಕೇಳುವಂತಾಗದಿರಲಿ ನೀನಾರಿಗಾದೆಯೋ ಎಲೆ ಮಾನವಾ..

-Vighnesh bhat

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!