ಅಂಕಣ

ಮಲೆನಾಡ ತಪಸ್ವಿ

ದೊಗಲೆ ಪ್ಯಾಂಟು , ದೊಗಲೆ ಶರ್ಟ್ , ಹೆಗಲಿಗೊಂದು ಕ್ಯಾಮೆರಾ ಹಾಕಿಕೊಂಡು ಸ್ಕೂಟರ್ ಹತ್ತಿ ಹೊರಟರೆಂದರೆ ಇಡೀ ಕರ್ನಾಟಕವೇ ಕಿಂದರಿ ಜೋಗಿಯ ಹಿಂದೆ ಹೋಗುವ ಇಲಿಗಳಂತೆ ಹೊರಡುತ್ತಿತ್ತು . ತೇಜಸ್ವಿಯ ಬಗ್ಗೆ ಬರೆಯುವ ಜರೂರತ್ತೆ ಇಲ್ಲ ಬಿಡಿ. ಯಾರಿಗೆ ಅವರು ಗೊತ್ತಿಲ್ಲ? ಆದರೆ ಅವರ ವ್ಯಕ್ತಿತ್ವವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಲೇಖನಗಳನ್ನು ಓದಿದೆ, ಅದಕ್ಕೇ ಈ ಲೇಖನ ಬರೆಯಬೇಕೆಂದು ಮನಸ್ಸಾಯಿತು.

” ಏನಪ್ಪಾ ಅವರು ಮೀನು ಹಿಡೀತಿದ್ರು , ಫೋಟೋನೂ ತೆಗಿತಿದ್ರು ” ಎಂದು ಎಷ್ಟೋ ಜನ ಅವರನ್ನು ಸರಳ, ಸೀಮಿತಗೊಳಿಸಿ ಬಿಡುತ್ತಾರೆ . ಅವರ ವ್ಯಕ್ತಿತ್ವವೇ ಅಂಥದ್ದು , ಅದು ಅರ್ಥ ಮಾಡಿಕೊಳ್ಳಲು ಕಷ್ಟ . ಅವರ ಮೌನವೇ ಒಂದು ಮಾತು ಎಂಬುದನ್ನು ನಾವು ಅರಿತುಕೊಳ್ಳದಾದೆವು . ಕನ್ನಡಕ್ಕೆ ಕುವೆಂಪು ಕೊಟ್ಟ ಶ್ರೇಷ್ಠ ಕೃತಿ ಎಂದರೆ ಅದು ‘ಪೂರ್ಣಚಂದ್ರ ತೇಜಸ್ವಿ’. ಅಪ್ಪನ ನೆರಳಿನಿಂದ ಸಂಪೂರ್ಣ ಆಚೆ ಬಂದು ತಮ್ಮದೇ  ಛಾಪು ಮೂಡಿಸುವುದು ಸುಲಭವಲ್ಲ.

ಒಂದೆಡೆ ಕುವೆಂಪು ವಿಶ್ವಮಾನವರಾಗಿ ಎಂದು ಕರೆ ಕೊಟ್ಟರೆ, ತೇಜಸ್ವಿ ಕಾಡಿನಲ್ಲಿ ಒಂಟಿಯಾಗಿ ಅಲೆದಾಡಿದರು. ಕುವೆಂಪು ಎತ್ತರಕ್ಕೆ ಏರಿದಂತೆಲ್ಲಾ, ತೇಜಸ್ವಿ ಆಳಕ್ಕೆ ಇಳಿಯುತ್ತಾ ಹೋದರು. ಕುವೆಂಪು ತಾವು ಬಾಲ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಕಂಡ ಮಲೆನಾಡನ್ನು ಧ್ಯಾನಿಸಿ ಬರೆದರು, ಆದರೆ ತೇಜಸ್ವಿ ಸ್ವತಃ ಅದೇ ವಾತಾವರಣದಲ್ಲಿದ್ದುಕೊಂಡು ಬರೆದರು. ಆದ್ದರಿಂದಲೇ ಅವರಿಗೆ ಮಂದಣ್ಣನಂತಹ ವ್ಯಕ್ತಿ ಅರ್ಥವಾಗಿದ್ದು.

ವಿಜ್ಞಾನ ಬದುಕಿಗೆ ಅನಿವಾರ್ಯ, ಸಾಹಿತ್ಯ ಬದುಕಿಗೆ ಅನಿವಾರ್ಯ. ಅವೆರೆಡರ ಹದವಾದ ಮಿಶ್ರಣವೇ ತೇಜಸ್ವಿ ಅವರ ಬರಹಗಳು. ಧರ್ಮಕ್ಕೆ ಸಮನಾಗಿ ಏನಾದರು ಇದ್ದರೆ ಅದು ವಿಜ್ಞಾನ ಮಾತ್ರ. ಆದರೆ ಎಲ್ಲರಿಂದ ದೂರವಾಗಿ ದೂರದ ಮೂಡಿಗೆರೆಯಲ್ಲಿ ತೋಟ ಮಾಡುವ ಅವರ ನಿರ್ಧಾರ ಪ್ರಶ್ನೆಯಾಗೇ ಉಳಿಯಿತು. ಸಮಾಜದಿಂದ ವಿಮುಖಗೊಳ್ಳುವ ನಿರ್ಧಾರವಾಗಿರಲಿಲ್ಲ ಅದು. ಅವರೇ ಕೆಲವು ಕಡೆ ಹೇಳಿಕೊಂಡಿದ್ದಾರೆ ” ನಾನು ಪೇಟೆ ಬೇಜಾರಾಗಿ ಹಳ್ಳಿಗೆ ಬಂದವನಲ್ಲ, ಕೃಷಿ ಮೇಲೆ ಆಸಕ್ತಿ ಇದ್ದು ಬಂದವನಲ್ಲ. ಸುಮ್ನೆ ಕಾಡಿನಲ್ಲಿ ಅಲೆದಾಡಿಕೊಂಡು ಇರಲು ಬಂದವನು” ಎಂದು.

ಅವರ ನಡವಳಿಕೆಗಳೂ ಅದೇ ರೀತಿ ಇತ್ತು. ಮನೆಗೆ ಬಂದ ಮೇಸ್ತ್ರಿಯ ಜೊತೆ ಗಂಟೆಗಟ್ಟಲೆ ಮಾತಾಡುತ್ತಾ ಕುಳಿತುಬಿಡುತ್ತಿದ್ದರಂತೆ. ಮೂಡಿಗೆರೆಯಿಂದಲೇ ಹಲವು ಚಳವಳಿಗಳಲ್ಲಿ ಅವರು ಭಾಗವಹಿಸಿದರು. ನಿಮಗೆ   ಆಶ್ಚರ್ಯವೆನಿಸಬಹುದು ಕಾಫಿ ಬೋರ್ಡ್’ನ ನಿಯಮಗಳು ಆಂಗ್ಲರ ವಸಾಹತುಶಾಹಿಯ ನೀತಿಯಂತೆಯೇ ಇತ್ತು. ಅವರು ಹೇಳಿದ್ದೇ ರೇಟಿಗೆ ಮಾರಬೇಕಿತ್ತು. ಆಗ ತೇಜಸ್ವಿ ” ನಾನು ನನ್ನ ಬೆಳೆಯನ್ನು ಸಂತೆ ಪೇಟೆಯಲ್ಲಿ ಇಟ್ಟು ಮಾರುತ್ತೇನೆ ” ಎಂದು ಗುಡುಗಿದ್ದರಂತೆ.

ಪ್ರಶಸ್ತಿಗಳ ವಿಷಯದಲ್ಲಿ ಎಂದಿಗೂ ತೇಜಸ್ವಿಯವರದ್ದು ತಟಸ್ಥ ಭಾವನೆ. ಪಂಪ ಪ್ರಶಸ್ತಿ ಬಂದಾಗ “ನನಗ್ಯಾಕೆ ಕೊಡ್ತೀರ, ಬೇರೆ ಅವ್ರಿಗೆ ಕೊಡಿ” ಎಂದಿದ್ದರಂತೆ. ಅದನ್ನು ತೆಗೆದುಕೊಳ್ಳಲೂ ಅವರು ಹೋಗಲಿಲ್ಲ. ಕೊನೆಗೆ ಪ್ರಶಸ್ತಿಯನ್ನು ಮನೆಗೆ ತಂದು ಇಡಬೇಕಾಯಿತು.

ಟೀಕಾಕಾರರೇನು ಕಡಿಮೆಯೇ? ಅವರು  ತೆಜಸ್ವಿಯನ್ನೂ ಬಿಟ್ಟಿಲ್ಲ. ” ಅದೇನ್ ಕ್ರಿಯೇಟಿವ್ ರೈಟಿಂಗ್ ಅಲ್ರಿ” ಎಂದು ಬಿಡೋರು. “ಎಲ್ಲವೂ ಹಾಸ್ಯದಲ್ಲೇ ಕಳೆದು ಹೋಗುತ್ತದೆ” ಎನ್ನುತ್ತಿದರು. ಆದರೆ ತೇಜಸ್ವಿ ತಮ್ಮ ಶೈಲಿ ಬದಲಿಸಿಕೊಳ್ಳಲಿಲ್ಲ. ” ನಾವು ಬರಿ ರನ್ನ, ಪಂಪ ಅಷ್ಟನ್ನೇ ಓದಿಕೊಂಡಿದ್ರೆ ಗೂಬೆಗಳಾಗ್ತೀವಿ” ಎಂದು ಬೈಯುತ್ತಿದ್ದರಂತೆ.

ಅವರನ್ನು ಅನುಸರಿಸಿಕೊಂಡು ಹೋಗುವ ಶಿಷ್ಯವರ್ಗ ಅವರಿಗೆ ಸಿಗದೇ ಹೋಯ್ತು. ಯಾರಾದರೂ ಅವರ ಬಳಿ ನಿಮಗೆ ಆ ಪ್ರಶಸ್ತಿ ಸಿಗಬೇಕಿತ್ತು, ಇದು ಸಿಗಬೇಕಿತ್ತು ಎಂದರೆ, ಕಾರಂತರ ಒಂದು ಪತ್ರ ತೆಗೆದು ತೋರಿಸುತ್ತಿದ್ದರಂತೆ. ಕಾರಂತರು ಹಾಗೂ ತೇಜಸ್ವಿ ಇಬ್ಬರೂ ಅಲೆಮಾರಿಗಳು, ಸತತವಾಗಿ ಹೊಸದನ್ನು ಹುಡುಕುತ್ತಾ ಹೋಗುವವರು. ಮರಳಿ ಮಣ್ಣಿಗೆ ಕೃತಿ ಕೇವಲ ಮೂವತ್ತು ದಿನಗಳಲ್ಲಿ ಬರೆದದ್ದು, ಸರಸಮ್ಮನ ಸಮಾಧಿ ಕಥೆಯನ್ನು ಕೇವಲ ಐದೇ ದಿನದಲ್ಲಿ ಮುಗಿಸಿದ್ದರು. ಕಾರಂತರು ಆಗಿನ ಕಾಲಕ್ಕೇ ಎನ್ಸೈಕ್ಲೋಪೀಡಿಯಾ ಮಾಡಿದವರು.  ಕೈಯಲ್ಲೇ ಹಕ್ಕಿಗಳ ಚಿತ್ರಗಳನ್ನು ಬಿಡಿಸಿ ಮುದ್ರಣ ಮಾಡಿದವರು. ಅದನ್ನು ತೇಜಸ್ವಿಯವರು ಮುಂದುವರೆಸಿದರು. ಕಾರಂತರು “YOU ARE REALLY A GREAT WRITER THAN I AM”  ಎಂದು ಹೇಳಿದ್ದರು . ಅವರಿಬ್ಬರೂ ಮೊದಲೇ ಪರಿಚಯ ಬೆಳೆಸಿಕೊಳ್ಳಬೇಕಿತ್ತು. ಕಾರಂತರು ಸಾಯುವ ಒಂದು ತಿಂಗಳ ಮೊದಲಷ್ಟೇ ನಿರುತ್ತರಗೆ ಭೇಟಿ ನೀಡಿದ್ದರು.

ಸಾಮಾನ್ಯವಾಗಿ ಪರಿಸರವಾದಿಗಳು ಅಭಿವೃದ್ದಿಯನ್ನು ವಿರೋಧಿಸುತ್ತಾರೆ, ಆದರೆ ತೇಜಸ್ವಿ ಅದಕ್ಕೆ ಅಪವಾದ. ಕುವೆಂಪು ತಂತ್ರಾಂಶ ಎಂಬ ಕನ್ನಡ ಸಾಫ್ಟ್’ವೇರ್ ರಚನೆಗೆ ಕೈ ಜೋಡಿಸಿದರು . ಕರ್ನಾಟಕದ ಯಾವ ಸಾಹಿತಿಗೂ ಕಂಪ್ಯೂಟರ್ ಗೊತ್ತಿಲ್ಲದ ಕಾಲದಲ್ಲಿಯೇ ಅವರು ಕಂಪ್ಯೂಟರ್ ಬಳಸುತ್ತಿದ್ದರು. ಆದರೆ ಕುವೆಂಪು ಕೈ ಬರಹದ ರಾಮಾಯಣ ದರ್ಶನಂ ಮುದ್ರಿಸಿದ್ದು ಅವರ ಹಾಗೂ ಲಂಕೇಶ್ ಅವರ ಮಧ್ಯೆ ಮನಸ್ತಾಪಕ್ಕೆ ಕಾರಣವಾಯಿತು .

ತೇಜಸ್ವಿಯವರ ವ್ಯಕ್ತಿತ್ವ ಮೊಗೆದಷ್ಟೂ ನಮ್ಮೆದುರು ಅನಾವರಣಗೊಳ್ಳುತ್ತಲೇ ಹೋಗುತ್ತದೆ.’ ಕರ್ವಾಲೋ ‘ ಸೀಮೆ ಎಣ್ಣೆಯ ಬುಡ್ಡಿ ದೀಪದಲ್ಲಿ ತಯಾರಾದ ಕಾದಂಬರಿ, ಅದು ಜಪಾನೀಸ್ ಭಾಷೆಗೂ ಅನುವಾದಗೊಂಡಿದೆ. ತಬರನ ಕಥೆ, ಕುಬಿ ಮತ್ತು ಇಯಾಲ, ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಪೀಸು, ಕಿರಗೂರಿನ ಗಯ್ಯಾಳಿಗಳು ತೆರೆಯ ಮೇಲೆ ಮೂಡಿ ಬಂದಿವೆ . ಒಮ್ಮೆ ಗಿರೀಶ್ ಕಾಸರವಳ್ಳಿಯವರ ಅಸೋಸಿಯೇಟ್ ತೇಜಸ್ವಿಯವರ ಬಳಿ ಸಂಭಾಷಣೆ ಬರೆದು ಕೊಡಲು ಕೇಳಿದರಂತೆ “ಹೋಗಯ್ಯ ನಂಗೆ ಮೀನ್ ಹಿಡೀಬೇಕು ” ಎಂದು ತೇಜಸ್ವಿ ಹೊರಟು ಹೋದರಂತೆ.

ಇನ್ನೂ ಹೇಳದ ಹಲವು ವಿಷಯಗಳಿವೆ. ತೇಜಸ್ವಿಯವರು ಮುದ್ರಣಾಲಯ ಮಾಡಿದ್ದರು, ಹೈಡೇನ್ ಬರ್ಗ್’ನಿಂದ ಯಂತ್ರಗಳನ್ನು ತರಿಸಿದ್ದರು . ಕನ್ನಡದಲ್ಲಿ ಮೊದಲ ಬಾರಿಗೆ ಲೇಸರ್ ಮುದ್ರಣ ಮಾಡಿದ ಲೇಖಕರು ತೇಜಸ್ವಿ. ಅವರ ಕನಸಿನ ಕೂಸೇ ‘ಪುಸ್ತಕ ಪ್ರಕಾಶನ’. ಕೆಂಜಿಗೆ ಪ್ರದೀಪ ಅವರಿಗೆ “ಪ್ಯಾಪಿಲಾನ್ ಕಥೆನ ತರ್ಜುಮೆ ಮಾಡಯ್ಯ” ಎಂದಿದ್ದರಂತೆ . ಆದರೆ ಪ್ರದೀಪ ಅವರ ಹೆಸರು ಒಂದೆ ಇದ್ದರೆ ಪುಸ್ತಕ ಮಾರಾಟ ಕಡಿಮೆಯಾದೀತು ಎಂದು ಪ್ರದೀಪ ನಿಮ್ಮ ಹೆಸರನ್ನೂ ಹಾಕ್ತೀನಿ ಸರ್ ಎಂದರಂತೆ.” ನಾನು ತರ್ಜುಮೆ ಮಾಡದೆ ಹೆಂಗೆ ಹಾಕ್ತೀಯ , ಇರು ನಾನು ಸ್ವಲ್ಪ ತರ್ಜುಮೆ ಮಾಡ್ತೀನಿ” ಎಂದು ಸ್ವಲ್ಪ ಭಾಗ ಅವರು ತರ್ಜುಮೆ ಮಾಡಿದರು.

ಇಂದು ನಮ್ಮ ಜೊತೆ ಅಣ್ಣ ಇರಬೇಕಿತ್ತು. ನನ್ನ ಸಾಹಿತ್ಯದ ಗುರುಗಳು ತೇಜಸ್ವಿಯವರು. ನಾನು ಅವರನ್ನು ನೋಡಲು ಸಾಧ್ಯವಾಗಲೇ ಇಲ್ಲ . ಈಗ ನಿರುತ್ತರಕ್ಕೆ ಒಮ್ಮೆ ಭೇಟಿ ನೀಡಬೇಕು. ಕೈಯಲ್ಲಿ ಕಾರಿನ ಕೀ ಇದೆ, ಆದರೆ ತೇಜಸ್ವಿಯಿಲ್ಲ. ತೇಜಸ್ವಿ ಇಲ್ಲದ ಮೌನ ಸಹಿಸಲಸಾಧ್ಯ. ಕೊನೆಯ ಪಕ್ಷ ಅವರು ಓಡಾಡಿದ ಜಾಗವನ್ನಾದರೂ ನೋಡಿ ಬರಬೇಕು. ಮತ್ತೆ ತೇಜಸ್ವಿಯಂತ ಬರಹಗಾರರು ಸಿಗುವುದು ಸಾಧ್ಯವಿಲ್ಲ. ನೂರು ದೇವರನ್ನು ನೋಡುವ ಮೊದಲು ಒಮ್ಮೆ ಕುಪ್ಪಳ್ಳಿಯನ್ನು ನೋಡಿ ಬರಬೇಕು.

Gurukiran

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!