ಅಂಕಣ

ನಾವೇನು ಬರಬರುತ್ತ ಯಂತ್ರಗಳಾಗುತ್ತಿದ್ದೇವಾ?……..

ಹೀಗಂತ ಎಷ್ಟೋ ಬಾರಿ ನನ್ನನ್ನು ನಾನು ಪ್ರಶ್ನಿಸಿಕೊಂಡಿದ್ದೇನೆ. ಹೌದೆನಿಸಿದೆ ನನಗೆ. ನಿಮ್ಮನ್ನೂ ನೀವು ಪ್ರಶ್ನಿಸಿಕೊಂಡರೆ ನಿಮ್ಮ ಅಂತರಾತ್ಮವೂ ಹೌದು ಎಂದೇ ಉತ್ತರ ಕೊಡುತ್ತದೆ. ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಎಷ್ಟೋ ಆಘಾತಕಾರಿ ಸಂಗತಿಗಳನ್ನು ಅವಲೋಕಿಸಿದಾಗ ಮನುಷ್ಯರೂ ಯಂತ್ರಗಳಂತೆಯೇ ಕಾಣುತ್ತಾರೆ. ಆಧುನಿಕತೆಯತ್ತ ನಾವು ದಾಪುಗಾಲಿಡುತ್ತಿದ್ದೇವೆ. ಹಾಗೆಯೇ ನಮ್ಮ ಜೀವನವೂ ಯಾಂತ್ರಿಕವಾಗುತ್ತಿದೆ. ನಮ್ಮ ಪ್ರೀತಿ, ವಿಶ್ವಾಸ, ನಂಬಿಕೆ, ಸಂತೋಷ, ಮಾನವೀಯತೆ, ಆದರ ಮುಂತಾದ ಭಾವನೆಗಳನ್ನ, ಎಲ್ಲ ಸಂಬಂಧಗಳಲ್ಲಿನ ಬಾಂಧವ್ಯವನ್ನ, ನೆಮ್ಮದಿಯ ಬದುಕನ್ನ ತುಳಿಯುತ್ತ ಮುಂದೆ ಸಾಗುತ್ತಿದೆ ನಮ್ಮ ಯಾಂತ್ರಿಕ ಬದುಕು. ಒಂದು ಬಾರಿಯೂ ನಾವು ಹಿಂತಿರುಗಿ ಅವುಗಳತ್ತ ನೋಡುತ್ತಿಲ್ಲ

ಬಾಲ್ಯದಲ್ಲಿ ಈ ಹಿಂದೆ ಇದ್ದಂತೆ ಮಕ್ಕಳು ಆಟವಾಡುತ್ತ ಬೆಳೆಯುತ್ತಿಲ್ಲ. ಎಷ್ಟೋ ಜನ ಅಪ್ಪ ಅಮ್ಮಂದಿರಿಗೆ ಮಗುವಿಗೆ ಕೂಸುಮರಿ ಆಡಿಸಲು ಸಮಯ ಇಲ್ಲ. ಒಂದೆರಡು ವರ್ಷ ಬೇಬಿ ಸಿಟ್ಟಿಂಗ್, ಆಮೇಲೆ ಎಲ್ ಕೆ ಜಿ , ಯು ಕೆ ಜಿ ಗಳು…… ಮುಗಿದ ತಕ್ಷಣ ಫಸ್ಟ್ ಸ್ಟ್ಯಾಂಡರ್ಡ್ ಎನ್ನುವ ದೊಡ್ಡ ಹೊರೆ, ಆಗಿನಿಂದಲೇ ಬೆಳಗ್ಗೆ ಟ್ಯೂಷನ್,ಆಮೇಲೆ ಸ್ಕೂಲ್, ಮತ್ತೆ ಸಂಜೆ ಟ್ಯೂಷನ್, ಮನೆಗೆ ಬಂದ ಮೇಲೆ ಹೋಂ ವರ್ಕ್, ಊಟ, ನಿದ್ದೆ………ಮರುದಿನ ಅದೇ ಸಂತೆ. ಹಾಗಾದರೆ ಮಗು ಟೈಮ್ ಟು ಟೈಮ್ ಈ ರೀತಿ ಅಪ್ಡೇಟ್ ಆಗಲು ಅದೇನು ಯಂತ್ರವೇ? ನಾವು ಮಗುವಿನ ಬಾಲ್ಯದ ತುಂಟಾಟಗಳನ್ನ ಅದರ ಭಾವನೆಗಳನ್ನ ಸಾಯಿಸಿ ಮಗುವನ್ನ ಹೇಳಿದಂತೆ ಕೇಳುವ, ಉತ್ತಮ ಶ್ರೇಣಿ ತರುವ ಯಂತ್ರದಂತೆ ನೋಡುತ್ತಿದ್ದೇವಾ? ಅನಂತರವಾದರೂ ಏನಿದೆ? ಕಾಲೇಜ್, ಅಲ್ಲೊಂದೆರೆಡು ಶ್ರೇಣಿಗಳು, ನಂತರ ಬದುಕಿಗೆ ಒಂದು ಕೆಲಸ, ತದನಂತರ ಯಂತ್ರಗಳಂತೆ ದುಡಿಯುವ ಗಂಡ ಹೆಂಡತಿ, ಜೊತೆಗೆ ಮಾರ್ನಿಂಗ್, ಆಫ್ಟರ್ ನೂನ್, ನೈಟ್ ಎನ್ನುವ ಕೆಲಸದ ಶಿಪ್ಟ್’ಗಳು ………..ಗಂಡನ ಮೊಗ ನೋಡಿ ಮುಗುಳ್ನಗಲು ಹೆಂಡತಿಗೆ ಪುರುಸೊತ್ತಿಲ್ಲ, ಹೆಂಡತಿಗೆ ಮೊಳ ಮಲ್ಲಿಗೆ ತರಲು ಗಂಡನಿಗೆ ನೆನಪಾಗುತ್ತಿಲ್ಲ. ಸಿನಿಮಾಗಳಿಗೆ ಮಾತ್ರ ಸೀಮಿತವೇನೋ ಇಂತಹ ಭಾವನೆಗಳು ಅನಿಸುತ್ತದೆ. ಏನೂ ಮಾಡಲಾಗುತ್ತಿಲ್ಲ ನಮಗೆ, ಬದುಕಿನ ಅನಿವಾರ್ಯತೆಗೆ ನಾವು ಭಾವನೆಗಳನ್ನು ಕಳೆದುಕೊಂಡು ಯಂತ್ರಗಳಾಗಿ ಬದುಕುತ್ತಿದ್ದೇವೆ. ಮಕ್ಕಳ ಮುಂದಿನ ಅನಿವಾರ್ಯತೆಗೆ ನಮ್ಮ ಯಾಂತ್ರಿಕ ಜೀವನವನ್ನ ವರ್ಗಾಯಿಸುತ್ತಿದ್ದೇವೆ.

ನಾವು ಚಿಕ್ಕವರಿದ್ದಾಗ ಕಂಡಂತಹ ಸಂತೋಷದ ಕ್ಷಣಗಳನ್ನ ಎಲ್ಲಿ ಕಳೆದುಕೊಂಡಿದ್ದೇವೋ ನೆನಪಿಲ್ಲ. ಕುಟುಂಬದ ಜೊತೆಗೆ ದೀಪಾವಳಿ, ಯುಗಾದಿ, ನಾಗರ ಪಂಚಮಿ, ಗಣೇಶ ಚತುರ್ಥಿ, ಕ್ರಿಸ್ ಮಸ್, ರಮ್ಜಾನ್ ಮುಂತಾದ ಹಬ್ಬಗಳನ್ನ ಒಟ್ಟಿಗೆ ಆಚರಿಸಲು ಒಬ್ಬರಿಗೆ ಬಿಡಿವಿದ್ದರೆ ಇನ್ನೊಬ್ಬರಿಗೆ ಬಿಡುವಿಲ್ಲ. ದೂರದೂರಿನಲ್ಲಿರುವ ತಮ್ಮನಿಗೆ ವೀಕೆಂಡ್’ ನಲ್ಲಿ ಹಬ್ಬ ಬರಲಿಲ್ಲವಲ್ಲ ಎನ್ನುವ ಕೊರಗು, ಅಮ್ಮನಿಗೆ ಆಫೀಸಿಗೆ ರಜವಿಲ್ಲ ಎನ್ನುವ ಕೊರಗು, ಅಕ್ಕನಿಗೆ ಪ್ರಾಜೆಕ್ಟ್’ಗಳನ್ನ ಮುಗಿಸುವ ಹೊತ್ತಿಗೆ ಹಬ್ಬ ಮುಗಿದಿರುತ್ತದೆ ಎನ್ನುವ ಕೊರಗು, ಅಪ್ಪನಿಗೆ ಇದು ಬಿಸಿನೆಸ್‌ ಟೂರ್ ಹಬ್ಬ ಇದ್ದರೂ ಬಿಡುವ ಹಾಗಿಲ್ಲ ಎನ್ನುವ ಕೊರಗು, ಹೆಂಡತಿಗೆ , ವಿದೇಶದಲ್ಲಿರುವ ಗಂಡ ಹಬ್ಬಕ್ಕೆ ಬರುತ್ತಿಲ ಎನ್ನುವ ಕೊರಗು , ಹೀಗೆ ಕೆಲಸದ ಅನಿವಾರ್ಯತೆಯಲ್ಲಿ ಒಟ್ಟುಗೂಡಿ ಹಬ್ಬ ಆಚರಿಸುವ ಸಂತೋಷವನ್ನ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಹ್ಯಾಪಿ ದೀಪಾವಳಿ, ಹ್ಯಾಪಿ ಕ್ರಿಸ್’ಮಸ್, ಹ್ಯಾಪಿ ರಮ್ಜಾನ್ ಎನ್ನುವ ಮೊಬೈಲ್’ನ ಸಂದೇಶಗಳಿಗೆ ಸೇಮ್ ಟು ಯು ಪ್ರತಿಕ್ರಿಯಿಸಿದರೆ ಆ ಹಬ್ಬದ ಸಂತೋಷ ಮುಗಿಯಿತು. ಬಹುಶಃ ನಮ್ಮ ಅನಿವಾರ್ಯತೆಯೇ ನಮ್ಮ ಭಾವನೆಗಳನ್ನು ಕೊಲ್ಲುತ್ತಿದೆ ಹಾಗಾದರೆ ಅನಿವಾರ್ಯತೆಗೆ ನಮ್ಮ ಭಾವನೆಗಳನ್ನು ಬಲಿ ಕೊಟ್ಟು ದುಡಿಯುವ ಯಂತ್ರಗಳಂತೆ ಬದುಕುತ್ತಿದ್ದೇವೆ ಅಲ್ಲವೇ?

ಈ ಮೇಲೆ ನಾನು ವ್ಯಕ್ತಪಡಿಸಿರುವ ವಿಚಾರಗಳಲ್ಲಿ ಅನಿವಾರ್ಯತೆಯಿದೆ ಒಪ್ಪಿಕೊಳ್ಳೋಣ. ಆದರೆ ಅನಿವಾರ್ಯತೆ ಇಲ್ಲದಿದ್ದರೂ ಮನುಷ್ಯ ಯಂತ್ರದಂತೆ ವರ್ತಿಸುತ್ತಿದ್ದಾನೆ.

ಹರೀಶ್ ಅವರ ಪ್ರಕರಣ ತೆಗೆದುಕೊಳ್ಳೋಣ. ದಾರಿ ಮಧ್ಯದಲ್ಲಿ ದೇಹ ಎರಡು ತುಂಡಾಗಿ ಸಹಾಯಕ್ಕಾಗಿ ಯಾಚಿಸುತ್ತಿದ್ದ ದೃಶ್ಯ ಮನಕಲುಕುವಂತಿದ್ದರೂ ಎಷ್ಟೋ ಹೊತ್ತು ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಅವರು ಅಂಗಲಾಚುತ್ತಿದ್ದರೂ ಜನ ವೀಡಿಯೊ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಆಮೇಲೆ ಅಂಬುಲೆನ್ಸ್ ಕರೆಸಿದರಾದರೂ ಮಾರ್ಗ ಮಧ್ಯದಲ್ಲಿ ಅವರು ಕೊನೆಯುಸಿರೆಳೆದರು. ಅದಾದ ನಂತರ ನಮ್ಮ ಸರಕಾರ ಅಪಘಾತದಲ್ಲಿ ಸಿಲುಕಿಕೊಂಡವರಿಗೆ ಸಹಾಯ ಮಾಡಲು “ಹರೀಶ್ ಸಾಂತ್ವನ ಯೋಜನೆ “ಯನ್ನು ಜಾರಿಗೆ ತಂದಿದ್ದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿಯೇ. ಅದೂ ಸರಕಾರದ ಯೋಜನೆಯಾಗಿಯೇ ಉಳಿದಿದೆ ಹೊರತು ಜನರ ಮನಕ್ಕೆ ತಟ್ಟಿಲ್ಲ ಎನ್ನುವುದನದನ್ನ ಹರೀಶ್ ಪ್ರಕರಣ ನಡೆದು ಸ್ವಲ್ಪ ದಿನಗಳ ನಂತರ ನಡೆದ ಘಟನೆಯೊಂದು ಸಾಬೀತು ಪಡಿಸಿದೆ. ಜೋಗನಹಳ್ಳಿಯಿಂದ ಹೆಚ್. ಡಿ ಕೋಟೆಗೆ ತೆರಳುತ್ತಿದ್ದ ಮೂವರಿಗೆ ಮೈಸೂರಿನ ಕೊಳ್ಳೆಗಾಲದಲ್ಲಿ ಅಪಘಾತವಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ದಾರಿಯಲ್ಲಿ ಹೋಗುತ್ತಿದ್ದವರನ್ನ ಸಹಾಯಕ್ಕಾಗಿ ಬೇಡುತ್ತಿದ್ದರೂ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಅದರ ಬದಲು ಕೆಲವರು , ಅವರ ಪೂರ್ವಾಪರ ವಿಚಾರಿಸುತ್ತ ನಿಂತಿದ್ದರೆ, ಇನ್ನು ಕೆಲವರು ಈ ದೃಶ್ಯವನ್ನ ವೀಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು.ಇವು ಉದಾಹರಣೆಗಾಗಿ ಎರಡು ಘಟನೆಗಳು ಮಾತ್ರ. ಇಂತಹ ಪ್ರಕರಣಗಳು ಸಾಕಷ್ಟಿವೆ. ಹಾಗಾದರೆ ಈ ಮೇಲಿನ ಎರಡೂ ಘಟನೆಗಳಲ್ಲಿ ವೀಡಿಯೊ ಮಾಡುತ್ತಿದ್ದವರು, ಮೂಕ ಪ್ರೇಕ್ಷಕರಂತೆ ನಿಂತಿದ್ದವರು ಮನುಷ್ಯರಾ ಇಲ್ಲಾ ಯಂತ್ರಗಳಾ? ಆ ಕ್ಷಣದಲ್ಲಿ ಅವರನ್ನು ರಕ್ಷಿಸಬೇಕು ಎನ್ನುವ ಮಾನವೀಯ ಭಾವನೆ ಬರದಿದ್ದ ಮೇಲೆ ಮನುಷ್ಯರೂ ಕೂಡಾ ವೀಡಿಯೊ ಹಿಡಿದಿಟ್ಟುಕೊಳ್ಳುತ್ತಿದ್ದ ಮೊಬೈಲ್’ಗಳಂತೆ ನಿರ್ಜೀವ ಯಂತ್ರಗಳೇ ತಾನೇ?

ಇನ್ನು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು, ಕೊಲೆ ಸುಲಿಗೆ, ದರೋಡೆಗಳು…… ಅತ್ಯಾಚಾರಿಯ ಮನದಲ್ಲೇಕೆ ತಾಯಿ, ತಂಗಿ, ಅಕ್ಕ, ಎನ್ನುವ ಭಾವನೆಗಳು ಸುಳಿಯುತ್ತಿಲ್ಲ? ಕೊಲೆ ಮಾಡುವವನಿಗೇಕೆ ಆತ್ಮೀಯರನ್ನು ಕಳೆದುಕೊಂಡವರ ಮನಸ್ಥಿತಿ ಅರ್ಥವಾಗುತ್ತಿಲ್ಲ? ಆ ಭಾವನೆಗಳು ಇಲ್ಲವೆಂದರೆ ಮನುಷ್ಯನನ್ನ ಮನುಷ್ಯ ಅಂದುಕೊಳ್ಳಲು ಸಾಧ್ಯವಿಲ್ಲ ಅಲ್ಲವೇ? ಮನುಷ್ಯನು ಮನುಷ್ಯನನ್ನ ಕೊಲೆ ಮಾಡುವ ಗಿಲೋಟಿನ್ ಯಂತ್ರವಾಗುತ್ತಿದ್ದಾನೆ. …………

ತನು ಮನ ಧನ ಹಂಚಿಕೊಂಡ ಗಂಡ , ಹೆಂಡತಿ ಒಂದೊಂದು ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಹಾಗಾದರೆ ಈ ಹಿಂದೆ ಇದ್ದಂತಹ ಎಪ್ಪತ್ತು ಎಂಭತ್ತು ವರ್ಷಗಳ ಸುದೀರ್ಘ ಸಾಂಸಾರಿಕ ಜೀವನವು ನಮ್ಮ ಅಜ್ಜಿ ತಾತನ ಕಾಲಕ್ಕೇ ಮುಗಿದು ಹೋಯಿತೇ? ……….

ವೃದ್ಧಾಶ್ರಮಗಳಲ್ಲಿ ಬದುಕಿನ ಕೊನೆಯ ಘಟ್ಟದಲ್ಲಿ ಒಂದು ಚಿಕ್ಕ ಆಸರೆಗಾಗಿ, ಒಂದು ಹಿಡಿದು ಅನ್ನಕ್ಕಾಗಿ ಹಿರಿಜೀವಗಳು ನರಳುತ್ತಿವೆ. ವೃದ್ಧಾಶ್ರಮಕ್ಕೆ ಹಿರಿಜೀವಗಳನ್ನ ತಳ್ಳುವ ಮನುಷ್ಯ, ಅವನ ನಾಳೆಗಳೂ ಹಾಗೆಯೇ ಬರಬಹುದೆಂಬ ಕಲ್ಪನೆ ಮಾಡಿಕೊಳ್ಳುತ್ತಿಲ್ಲ? ಪುಟ್ಟ ಪುಟ್ಟ ಹೆಜ್ಜೆ ಇಡುವಾಗ ಅವರ ಕೈಹಿಡಿದು ನಡೆದದ್ದು ಯಾಕೆ ನೆನಪಾಗುತ್ತಿಲ್ಲ.?

ಇನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಹೆಣ್ಣುಮಕ್ಕಳನ್ನ ಗಂಡಸರು ಭೋಗದ ವಸ್ತುವಾಗಿ ನೋಡುತ್ತಿದ್ದಾರಾ? ಅಥವಾ ಹೆಣ್ಣು ಮಕ್ಕಳೇ ತಮ್ಮ ದೇಹವನ್ನ ದುಡ್ಡನ್ನು ಪ್ರಿಂಟ್ ಮಾಡುವ ಯಂತ್ರ ಅಂದುಕೊಳ್ಳುತ್ತಿದ್ದಾರಾ? ಕೆಲವು ಅನಿವಾರ್ಯ ಪ್ರಸಂಗಗಳು ಅವರನ್ನ ಇಂತಹ ಚಟುವಟಿಗೆ ನೂಕಿರಬಹುದು. ಆದರೂ ಇದರಿಂದ ಹೆಣ್ಣು ಮಕ್ಕಳು ಹೊರಬರಲು ಹಿಂಜರಿಯುತ್ತಿದ್ದಾರೆ. ಏಕೆ? ಅದರಿಂದ ಹೊರ ಬಂದವರನ್ನ ಈ ಸಮಾಜವೇಕೆ ಕೀಳಾಗಿ ಕಾಣುತ್ತಿದೆ?

ರಿಕ್ಷಾ ಖರೀದಿಸಲು ಮಗಳನ್ನು ಮಾರಿದ ಇವನೆಂತಹ ಅಪ್ಪ?, ಪ್ರೇಮಿಯ ಹೃದಯ ಬಗೆದು ಹತ್ಯೆ ಮಾಡಿದ್ದಾಕೆಗೆ ಗಲ್ಲು, ಭಾರತ ಆಸ್ಟ್ರೇಲಿಯ ಮ್ಯಾಚ್ ನೋಡುವ ವೇಳೆ ನಾಯಿ ಬೊಗಳಿದ್ದಕ್ಕಾಗಿ ಯುವಕನ ಕೊಲೆ, ಮದುವೆಗೆ ಒಪ್ಪದ ತಂದೆ ತಾಯಿಯನ್ನು ಕೊಲ್ಲಿಸಿದ ಮಗ, ಬ್ರಸೆಲ್ಸ್’ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ, ಲಾಹೋರ್ ಪಾರ್ಕ್’ನಲ್ಲಿ ಆತ್ಮಾಹುತಿ ದಾಳಿಗೆ ಐವತ್ತಾರು ಜನರ ಬಲಿ……

ಇವೇನು ತುಂಬಾ ಹಿಂದೆ ನಡೆದ ಘಟನೆಗಳಲ್ಲ. ಇತ್ತೀಚೆಗೆ ನಾವು ನೀವೆಲ್ಲಾ ಪತ್ರಿಕೆಗಳಲ್ಲಿ ಓದಿ , ದೂರದರ್ಶನದಲ್ಲಿ ನೋಡಿರುವಂತಹ ಘಟನೆಗಳು. ದಿನವೊಂದಕ್ಕೆ ಎಷ್ಟೋ ಇಂತಹ ಘಟನೆಗಳು ನಡೆಯುತ್ತಿವೆ. ಹಾಗಾದರೆ ಮನುಷ್ಯ , ಮನುಷ್ಯರ ನಡುವಿನ ಬಾಂಧವ್ಯಗಳಿಗೆ ಬೆಲೆ ಎಲ್ಲಿದೆ?

ಮೇಲಿನ ಎಲ್ಲ ಪ್ರಶ್ನೆ ಗಳಿಗೆ ಉತ್ತರ ಮನುಷ್ಯನ ಭಾವನೆಗಳು ಸಾಯುತ್ತಿವೆ. ಮನುಷ್ಯನ ಜೀವನ ಯಾಂತ್ರಿಕವಾಗಿತ್ತಿದೆ.ಮನುಷ್ಯ ಎಲ್ಲ ರೀತಿಯಿಂದಲೂ ಯಂತ್ರವಾಗುತ್ತಿದ್ದಾನೆ.

ಜೀವನದ ಬ್ಯುಸಿ ಶಡ್ಯೂಲ್’ನಲ್ಲಿ ಮನುಷ್ಯರಿಗೆ ಭಾವನೆಗಳನ್ನು ಹಂಚಿಕೊಳ್ಳಲು ಯಾರಿಗೆ ಯಾರೂ ಸಿಗುತ್ತಿಲ್ಲವೇ? ಅಥವಾ ಭಾವನಗಳೇ ಮನುಷ್ಯನಲ್ಲಿ ಉತ್ಪತ್ತಿಯಾಗುತ್ತಿಲ್ಲವೇ? ಅನಿವಾರ್ಯತೆಯಿಂದಲೂ, ಅನಿವಾರ್ಯತೆ ಇಲ್ಲದೆಯೂ ಮನುಷ್ಯ ಬರಬರುತ್ತ ಯಂತ್ರವಾಗುತ್ತಿದ್ದಾನೆ. ಹಾಗಾದರೆ ಮನುಷ್ಯ ಮನುಷ್ಯನಂತಾಗುವುದು ಯಾವಾಗ? ಉತ್ತರವಂತೂ ನನಗೆ ಸಿಕ್ಕಿಲ್ಲ. ನಿಮಗೆ? ……….

-ಮಮತಾ ಚನ್ನಪ್ಪ ಮ್ಯಾಗೇರಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!