ರಸ್ತೆ ಬದಿಯಲ್ಲಿ ಹಾಡಿ
ಅನ್ನ ಉಣ್ಣುವ
ಟೋನಿ
ಪ್ರತೀ ದಿನ ತನ್ನ ಕರುಳು
ಹಿಂಡುವಷ್ಟು ಬಾರಿ
ಗಿಟಾರಿನ
ತಂತಿ ಮೀಟುವನು
*
ರಸ್ತೆ ಬದಿಯಲ್ಲಿ
ತರಕಾರಿ ಮಾರಲು
ಬಂದವನು
ತನ್ನಸಿವ
ತಕ್ಕಡಿಯಲ್ಲಿ ತೂಗಿದ
*
ತುಂಬಾ ಹೊತ್ತಿದ್ದರೆ
ವಾಸನೆ ಬರುವುದೆಂದು
ಅತ್ತರನ್ನ ಬಳಿದರು
ಬದುಕಿಡೀ
ಮೋರಿ ಬಳಿದೆ ಬದುಕಿದವನು
ಶವವಾಗಿ ಮಲಗಿದ್ದ
*
ಬಣ್ಣ ಮಾಸಿದ
ಗೋಡೆಯ ತುಂಬಾ
ಬಡತನದ ಚಿತ್ರ
*
ಅಕ್ಷರದಿಂದ ದೇಶವನ್ನು
ಬದಲಿಸಬಹುದು!
ನಿಜಾ,
ಆದರೆ ಹಸಿವಿಗೆ
ಅನ್ನವೇ ಬೇಕು.
*
ರೈತ
ದೇಶದ ಬೆನ್ನೆಲುಬು
ಬಡತನ
ರೈತನ ನೆರಳು
*
ನಮ್ಮ ಮನೆಗೆ
ಬಾಗಿಲಿಡುತ್ತೇವೆ
ಹಕ್ಕಿಗಳ ಮನೆ ಕಿತ್ತು
*
ಊರ ತುಂಬಾ
ಬೆದೆಗೆ ಬಂದ ನಾಯಿಗಳೆ,
ಉಚ್ಚೋ… ಎಂದೋಡಿಸಲು
ಎಳೆಯ ಹೆಣ್ಣು ಕೂಸಿನ್ನು
ಮಾತು ಕಲಿತಿಲ್ಲ
*
ಬಳೆಗಳ ಸದಿಲ್ಲದೇ
ಇಲ್ಲಿ
ಏನೂ ಆಗುವುದಿಲ್ಲ
ಎರಡು ರೀತಿಯ ಹಸಿವಿನಲ್ಲೂ,
ಅವುಗಳ ಮಹತ್ವ ದೊಡ್ಡದು.
*
ಈ ಮೇಲಿನ ಹನಿಗವಿತೆಗಳನ್ನು ಹತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಬಿಟ್ಟ ಯುವಕನೊಬ್ಬ ಬರೆದಿದ್ದಾನೆಂದರೆ ನಂಬಲೇಬೇಕು. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ವೀರಾಪುರ ಗ್ರಾಮದ ರಘುನಂದನ್ ವಿ.ಆರ್. ಎಂಬ ಯುವಕ ‘ನವೀನ್ ಮಧುಗಿರಿ’ ಎಂಬ ಕಾವ್ಯನಾಮದಲ್ಲಿ ತಮ್ಮ ಮೊದಲ ಕೃತಿ ‘ನವಿಗವನ’ ಎಂಬ ಹನಿ – ಹನಿಗವನ ಸಂಕಲನದಲ್ಲಿ ಈ ಮೇಲಿನ ಹನಿಗವಿತೆಗಳ ಜೊತೆಗೆ ಮತ್ತಷ್ಟು ಪ್ರಬುದ್ಧ ಹನಿಗವಿತೆಗಳನ್ನು ಪ್ರಕಟಿಸಿರುವುದನ್ನು ಓದಿದರೆ ಈ ಯುವ ಕವಿಯ ಬಗ್ಗೆ ಅತೀವ ಹೆಮ್ಮೆಯಾಗುತ್ತದೆ. ಈಗಾಗಲೇ ತಮ್ಮ ಕಥೆ, ಕವಿತೆ, ಕಿರುಕಥೆ (ನ್ಯಾನೋ ಕಥೆ), ಶಿಶುಗೀತೆ ಮತ್ತು ಹಲವು ಲೇಖನಗಳನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಸಾಹಿತಿ ನವೀನ್ ಮಧುಗಿರಿ. ಇವರ ಈ ಮೊದಲ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ 2013ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಯ ಪ್ರೋತ್ಸಾಹಧನದಿಂದ ಪ್ರಕಟನೆಗೊಂಡಿದೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನದಿಂದ ಪ್ರಕಟಿಸಲು ತಮ್ಮದೇ ‘ನವಿ ಪುಸ್ತಕ’ ಎಂಬ ಪ್ರಕಾಶನವನ್ನೂ ನವೀನ್ ಆರಂಭಿಸಿದ್ದಾರೆ. ಈ ಸಂಕಲನಕ್ಕೆ ಕವಿಯೂ, ಚಿತ್ರ ಸಾಹಿತಿಯೂ ಆಗಿರುವ ಗುರುನಾಥ್ ಬೋರಗಿಯವರ ಸುಂದರ ಮುಖಪುಟವೂ ಇದ್ದು, ಜೊತೆಗೆ ಅಲ್ಲಲ್ಲಿ ಕವಿತೆಗಳಿಗೆ ಪೂರಕವಾಗಿರುವ ರೇಖಾ ಚಿತ್ರಗಳಿವೆ. ಮಧುಗಿರಿ ತಾಲ್ಲೂಕಿನವರೇ ಆದ ಹಿರಿಯ ಸಾಹಿತಿ ಮ.ಲ.ನ. ಮೂರ್ತಿಯವರ ಮುನ್ನುಡಿ ಈ ಸಂಕಲನಕ್ಕಿದೆ. ‘ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ, ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ’ ಎಂದು ಮ.ಲ.ನ. ಮೂರ್ತಿಯವರು ಗುರುತಿಸಿದ್ದಾರೆ. ತಮ್ಮನಿಗೇ ಪ್ರೀತಿಯಿಂದ ಸಂಕಲನದ ಅರ್ಪಣೆಯಾಗಿದೆ.
ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ನನಗೆ ದಿನಕರ ದೇಸಾಯಿ, ಜರಗನಹಳ್ಳಿ ಶಿವಶಂಕರ್, ವೈಎನ್ಕೆ, ಸಿ.ಪಿ.ಕೆ, ಡುಂಡಿರಾಜ್, ಡಾ|| ಕೆ.ಬಿ.ರಂಗಸ್ವಾಮಿ, ಇನ್ನೂ ಮುಂತಾದವರೂ ಬಹಳ ಪ್ರಮುಖವಾಗಿ ಕಾಣುತ್ತಾರೆ. ಇವರ ಸಾಲಿಗೆ ನವೀನ್ ಮಧುಗಿರಿಯೂ ಸೇರಬಲ್ಲರು ಎಂಬ ಭರವಸೆ ಮೂಡಿಸುವ ಅನೇಕ ಹನಿಗವಿತೆಗಳು ಸಂಕಲನದಲ್ಲಿವೆ. ಈತ ತನ್ನ ಮೊದಲ ಸಂಕಲನದಲ್ಲಿಯೇ ಪ್ರೌಢಿಮೆ ಮೆರೆದಿದ್ದಾನೆ. ಈ ಕಾರಣಕ್ಕಾಗಿಯೇ ಇತ್ತೀಚಿಗೆ ಪ್ರಕಟವಾಗಿರುವ ಹಲವು ಹನಿಗವಿತೆ ಸಂಕಲನಗಳಲ್ಲಿ ಈ ಕೃತಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.
ವಯೋ ಸಹಜ ಪ್ರೀತಿ, ಪ್ರೇಮ, ಕಾಮ ವಸ್ತುಗಳಾಗಿರುವ ಹನಿಗವಿತೆಗಳೂ ಇಲ್ಲಿವೆ. ಆದರೆ, ಅವು ಬೆರಳೆಣಿಕೆಯಷ್ಟೇ ಎನ್ನಬಹುದು. ಉದಾಹರಣೆಗೆ :
ಹುಡುಗಿಯರು ಒಮ್ಮೆ
ಹೆಜ್ಜೆಯಿರಿಸಿದರೆ
ಜನುಮ ಪೂರ್ತಿ ಅಳಿಸುವುದಿಲ್ಲ!
ಅದರಲ್ಲೂ,
ಹೃದಯದ ಮೇಲೆ!
*
ಬೇಲಿಯಿರದ
ಬದುಕ ಬಯಸಿ
ಹೊರಟವನನ್ನು
ಪ್ರೇಯಸಿಯ ಬಾಹುಗಳು
ಬಂಧಿಸಿದವು!
*
ಎಲ್ಲಕ್ಕಿಂತಲೂ
ಮೊದಲು
ಹುಟ್ಟಿದ್ದು ಕಾಮ
ಆನಂತರ ನಾವೆಲ್ಲರೂ
ಹುಟ್ಟಿದ್ದು
*
ಇಬ್ಬರೂ ಕೂಡಿದಾಗ
ಕಳೆದದ್ದು
ದೇಹದ ಹಸಿವು
*
ಸಂಕಲನದ ಅಲ್ಲಲ್ಲಿ ಕರುಳ ಸಂಬಂಧಗಳನ್ನು ನೆನೆಯುವ ಹನಿಗವತೆಗಳಿವೆ.
ಅಪ್ಪನ ಕೈಗಳನ್ನೇ
ಗಮನಿಸಿದ ನಮಗೆ
ಅವನ
ಹಗುರಾದ ಜೇಬು
ಅರ್ಥವಾಗಲಿಲ್ಲ
*
ಅವ್ವ
ತನ್ನ ಕಷ್ಟ, ಕಣ್ಣೀರುಗಳನ್ನೆಲ್ಲ
ಬಚ್ಚಿಟ್ಟು
ಬರಿ ನಗುವನ್ನಷ್ಟೇ
ನಮಗೆ ಉಣ ಬಡಿಸಿದಳು
*
ಅಟ್ಟ ಸೇರಿದ
ಒನಕೆಯ ಮೇಲೆ
ಮಾಸದ
ಅಜ್ಜಿಯ ಕೈಬೆರಳ
ಗುರುತು
*
ಸಂಕಲನದ ಕೆಲವು ಹನಿಗವಿತೆಗಳು ಇತಿಹಾಸ, ಬ್ರೇಕಿಂಗ್ ನ್ಯೂಸ್‍ಗಳ ಮೇಲೂ ಬೆಳಕು ಚೆಲ್ಲಿವೆ:
ಇತಿಹಾಸದ ತುಂಬಾ
ಸಾವಿನ ಶವಗಳ
ವಾಸನೆ
*
ಚುಟುಕು ಸುದ್ದಿ
ಆಕ್ರಮಿಸಿದೇ
ಎಷ್ಟೊಂದು ಕಿವಿ!?
*
ನವೀನ್ ತಮ್ಮ ಸಂಕಲನವನ್ನು ಸ್ನೇಹ ಹಾಗೂ ಗೌರವದೊಂದಿಗೆ ನನಗೆ ಕಳುಹಿಸಿದ ಸಮಯದಲ್ಲಿಯೇ ಒಂದು ಶನಿವಾರದ ಸಂಜೆ ಓದಿದಾಗಲೇ, ಈ ಸಂಕಲನವನ್ನು ಸಹೃದಯ ಓದುಗರಿಗೆ ಪರಿಚಯಿಸಬೇಕೆಂದು ಮನದಲ್ಲಿ ಆಸೆ ಮೂಡಿತಾದರೂ ಕಾಲ ಕೂಡಿಬಂದಿರಲಿಲ್ಲ. ಕಾಲ ಕೂಡಿ ಬರುವ ಸಮಯಕ್ಕೆ ನವೀನ್ ಅದಾಗಲೇ ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಅವರದೇ ಒಂದು ಹನಿಗವನದ ಆಶಯದಂತೆ ಅವರೂ ಮತ್ತೆ ಅಪ್ಪನಾಗಿ ಜನಿಸಿದ್ದಾರೆ.
ಪುಟ್ಟ ಮಗುವಿನ
ಮೊದಲ ಅಳುವಿನ
ಜೊತೆಗೆ
ಕಾರಿಡಾರಿನಲ್ಲೊಬ್ಬ
ಅಪ್ಪನ ಜನನ
ಈ ಸಂದರ್ಭದಲ್ಲಿ ನವೀನ್‍ರವರಿಗೆ ಶುಭಕೋರುತ್ತಾ, ಖ್ಯಾತ ಹನಿಗವಿ, ಹನಿಗವಿತೆಗಳ ಖಜಾನೆಯ ಒಡೆಯ ‘ಡುಂಡಿರಾಜ್’ರೇ ಹಿಂದಿನ ಮತ್ತು ಇಂದಿನ ಕವಿಗಳನ್ನು ಕುರಿತು ಬರೆದಿರುವ
ಅವರು ಆಯುವ ಕವಿ
ಇವರು ಈಯುವ ಕವಿ
ಎಂಬ ಹನಿಗವಿತೆಯನ್ನು ನೆನೆಯುತ್ತಾ, ನವೀನ್ ಮಧುಗಿರಿ ಆಯುವ ಕವಿ ಎಂದು ಶ್ಲಾಘಿಸಬಹುದಾಗಿದೆ.